ಜ್ಯೋತಿ ಎಸ್ ಅವರ ‘ಜರ್ನಿ ಆಫ್ ಜ್ಯೋತಿ’ ಕೃತಿಯಲ್ಲಿನ ಕಥೆಗಳನ್ನು ಓದುತ್ತಿದ್ದರೆ ನಮಗೆ ಅಪರಿಚಿತವಾದ ನಮ್ಮ ಸುತ್ತಮುತ್ತಲ ಅನೇಕ ಸಾಹಸಿಗರ ಬದುಕಿನ ಕಥೆಯ ಲೋಕವೇ ತೆರೆದುಕೊಳ್ಳುತ್ತದೆ. ಮನೆ, ಮಕ್ಕಳು ಮತ್ತು ದಿನನಿತ್ಯದ ಎಲ್ಲ ಜಂಜಡಗಳ ನಡುವೆಯೂ ಜ್ಯೋತಿ ನಾಡಿನಾದ್ಯಂತ ಹಗಲಿರುಳು ಓಡಾಡಿ ಬರೆದ ಲೇಖನಗಳಿವು. ಖ್ಯಾತ ಲೇಖಕ ಡಾ.ಎಚ್.ಎಸ್. ಸತ್ಯನಾರಾಯಣ ಅವರು ಈ ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ..
ಪುಸ್ತಕ : ಜರ್ನಿ ಆಫ್ ಜ್ಯೋತಿ
ಲೇಖಕರು : ಜ್ಯೋತಿ ಎಸ್
ಪ್ರಕಾಶನ : ಅಮೃತ ಪ್ರಕಾಶನ
ಬೆಲೆ : ೨೦೦.೦೦
ಖರೀದಿಗಾಗಿ : 76249 49942
ಶ್ರೀಮತಿ ಜ್ಯೋತಿ ಶಾಂತರಾಜ್ ಪತ್ರಕರ್ತೆ, ಅಂಕಣಕಾರ್ತಿ, ಕುಂಭಕಲೆಯ ಕಲಾವಿದೆ, ಛಾಯಾಗ್ರಾಹಕಿ, ಕಂಠದಾನ ಕಲಾವಿದೆ ಮುಂತಾಗಿ ಬಹುಶ್ರುತ ಆಸಕ್ತಿಯನ್ನು ಮೈಗೂಡಿಸಿಕೊಂಡವರು. ಈಗ ‘ಜರ್ನಿ ಆಫ್ ಜ್ಯೋತಿ’ ಕೃತಿಯ ಮೂಲಕ ಲೇಖಕಿಯಾಗಿಯೂ ಪ್ರಕಾಶಮಾನಕ್ಕೆ ಬರುತ್ತಿರುವುದು ಅಭಿನಂದನೀಯವಾದ ವಿಚಾರವಾಗಿದೆ. ತಾವು ಭೇಟಿ ಮಾಡಿದ ಜೀವಗಳ ಬದುಕಿನ ಚಿತ್ರವನ್ನು ಕಾಣಿಸುವ ಪ್ರಯತ್ನವಾಗಿ ರಚಿಸಿದ ಅಂಕಣಗಳ ಕಟ್ಟು ಈ ಕೃತಿಯಲ್ಲಿದೆ.
ಇಲ್ಲಿ ಬಣ್ಣಬಣ್ಣದ ಚಿತ್ರಗಳನ್ನು ರಚಿಸಿಯೂ ಬದುಕಿನ ಬಣ್ಣ ಕಳೆದುಕೊಂಡು ಹೆಣಗಾಡುತ್ತಿರುವ, ಆದರೆ ಜೀವನೋತ್ಸಾಹವನ್ನು ಕುಂದಿಸಿಕೊಳ್ಳದ ಚಿತ್ರ ಕಲಾವಿದರಿದ್ದಾರೆ, ಛಾಯಾಗ್ರಾಹಕರಿದ್ದಾರೆ, ಬೀದಿ ಬದಿಯ ವ್ಯಾಪಾರಿಗಳಿದ್ದಾರೆ, ರಂಗಭೂಮಿ-ತೊಗಲುಬೊಂಬೆಯಾಟದ ಕಲಾವಿದರಿದ್ದಾರೆ, ಸಮಾಜಸೇವೆಯಲ್ಲಿ ಬದುಕಿನ ಸಾರ್ಥಕತೆಯನ್ನು ಅನುಭವಿಸುತ್ತಿರುವ ಹೆಣ್ಣುಮಕ್ಕಳಿದ್ದಾರೆ, ಅನಾಥ ಹೆಣಗಳನ್ನು ಹುಡುಕಿತಂದು ಅವಕ್ಕೆ ಗೌರವದಿಂದ ಶವಸಂಸ್ಕಾರ ಮಾಡುವವರಿದ್ದಾರೆ, ಸಾಹಸಿ ಕೃಷಿಕರಿದ್ದಾರೆ, ಮಣ್ಣಿನ ಆಭರಣಗಳನ್ನು ತಯಾರಿಸುವವರಿದ್ದಾರೆ, ಭಿಕ್ಷೆಬೇಡುವ ಸಮುದಾಯದವರಿದ್ದಾರೆ, ತೃತೀಯ ಲಿಂಗಿಗಳಿದ್ದಾರೆ, ದೈಹಿಕ ನ್ಯೂನತೆಯ ನಡುವೆಯೂ ಬದುಕುವ ಹಕ್ಕನ್ನು ಸಾರ್ಥಕಗೊಳಿಸಿಕೊಂಡವರಿದ್ದಾರೆ, ಕೊಳಲುಗಳನ್ನು ತಯಾರಿಸಿ, ಅದನ್ನು ನುಡಿಸುತ್ತಾ ಮಾರುವ ಸಹೋದರರಿದ್ದಾರೆ, ಮಸಣದಲ್ಲಿ ಬದುಕು ನಡೆಸುವ ವೀರಬಾಹುಗಳಿದ್ದಾರೆ, ಸಾವನ್ನು ಗೆದ್ದವರಿದ್ದಾರೆ, ಅವಮಾನಗೊಂಡಲ್ಲೇ ಎತ್ತರಕ್ಕೆ ಬೆಳೆದು ನಿಲ್ಲಬೇಕೆಂಬ ಕನಸುಗಣ್ಣಿನವರಿದ್ದಾರೆ, ಕೌದಿ ಹೊಲಿದು ಮಾರುವವರಿದ್ದಾರೆ, ಇತ್ತೀಚೆಗೆ ಅಸುನೀಗಿದ ಅರ್ಜುನನೆಂಬ ಆನೆಯ ಮಾವುತರಿದ್ದಾರೆ, ಸೂಪರ್ ಕಾಪ್, ಲೇಖಕರು, ಕ್ರೀಡಾಪಟುಗಳು ಎಲ್ಲರೂ ಇದ್ದಾರೆ. ಪುಸ್ತಕವನ್ನು ಅವಲೋಕಿಸಿದವರಿಗೆ ಇಂತಹ ಹತ್ತು ಹಲವಾರು ಚೇತನಗಳು ಎದುರಾಗುತ್ತವೆ. ಇವೆಲ್ಲವೂ ಲೇಖಕಿಯ ಆಸಕ್ತಿಯ ಫಲವಾಗಿ ಪುಸ್ತಕದಲ್ಲಿ ಕಾಣಬರುವ ಸಾಹಸಮಯ ವ್ಯಕ್ತಿಚಿತ್ರಗಳು. ಬದುಕಿನಲ್ಲಿ ಬದುಕು ಗೆದ್ದ ‘ರಿಯಲ್ ಹೀರೋ’ಗಳು!

ಇಲ್ಲಿನ ಬರಹಗಳನ್ನು, ಕಥೆಗಳನ್ನು ಓದುತ್ತಿದ್ದರೆ ನಮಗೆ ಅಪರಿಚಿತವಾದ ನಮ್ಮ ಸುತ್ತಮುತ್ತಲ ಅನೇಕ ಸಾಹಸಿಗರ ಬದುಕಿನ ಕಥೆಯ ಲೋಕವೇ ತೆರೆದುಕೊಳ್ಳುತ್ತದೆ. ತಮ್ಮದಲ್ಲದ ತಪ್ಪಿಗೆ ಪರಿತಪಿಸುತ್ತ ಕುಳಿತುಕೊಳ್ಳದೆ ತಮಗೆ ಸರಿಕಂಡ ದಾರಿಯಲ್ಲಿ ಬದುಕಿನ ರಥವನ್ನು ಎಳೆದುಕೊಳ್ಳಬಯಸುವ ಅದಮ್ಯ ಚೇತನಗಳ ಜಗತ್ತೇ ಇಲ್ಲಿದೆ. ಅನಾರೋಗ್ಯ, ಅಂಗವೈಕಲ್ಯ, ಬಡತನ, ಶೋಷಣೆ, ಅಸಹಾಯಕತೆಗಳಿಗೆ, ಸೋಲು ವಿಫಲತೆಗಳಿಗೆ ಜಗ್ಗದೆ ಬದುಕನ್ನು ಸಹನೀಯವಾಗಿಸಿಕೊಂಡ ಅನೇಕ ಜೀವಗಳ ಕಥನ ಇಲ್ಲಿದೆ. ತಮ್ಮೊಳಗಣ ಪ್ರತಿಭೆಯ ಅನಾವರಣಕ್ಕೆ ದೊರೆತ ಚಿಕ್ಕಪುಟ್ಟ ಅವಕಾಶಗಳ ಮೆಟ್ಟಿಲೇರಿ ನಾಡಿನ ಗಮನ ಸೆಳೆದವರೂ ಇಲ್ಲಿದ್ದಾರೆ. ಭಿಕ್ಷೆ ಬೇಡುವುದಕ್ಕಿಂತ ಬೀದಿಯಲ್ಲಿ ಹಣ್ಣುಮಾರಿ ಜೀವಿಸುವುದು ಮೇಲೆಂಬ ಬಡ ಮುದುಕಿ, ತಾತನ ಕಾಲದಿಂದಲೂ ಆನೆಯ ಮೇಲ್ವಿಚಾರಣೆಯಲ್ಲೇ ಬದುಕಿನ ದಾರಿ ಕಂಡುಕೊAಡ ಮಾವುತರ ಬದುಕು ಆದರ್ಶಪ್ರಾಯವೆನಿಸುತ್ತದೆ. ಇತ್ತೀಚೆಗೆ ಅರ್ಜುನ ಎಂಬ ಆನೆ ಅನಿರೀಕ್ಷಿತ ಅಕಾಲಿಕ ಮರಣವನ್ನಪ್ಪಿದಾಗ ಮಾವುತನ ಗೋಳಾಟವನ್ನು ಟಿವಿಗಳಲ್ಲಿ ನೋಡಿ ಮರುಕಪಟ್ಟವರಿಗೆ ಮಾವುತನ ನೋವು ಪರಿಣಾಮಕಾರಿಯಾಗಿ ತಾಗಬೇಕಾದರೆ ಜ್ಯೋತಿಯವರು ಬರೆದಿರುವ ಲೇಖನ ಹೆಚ್ಚು ನೆರವಿಗೆ ಬರುತ್ತದೆ. ಇಂತಹ ಅನೇಕ ಉದಾಹರಣೆಗಳು ಈ ಪುಸ್ತಕದ ಉದ್ದಕ್ಕೂ ಎದುರಾಗುತ್ತವೆ.
ಇದೊಂದು ಬಗೆಯ ಅಪತ್ರಿಕಾ ವಾರ್ತೆಯಂತಹ ಕಥನ. ಸಾಮಾನ್ಯರು ಅಸಾಮಾನ್ಯರು ಸೇರಿಯೇ ಒಂದು ಕಾಲದ ಚರಿತ್ರೆಯನ್ನು ಕಟ್ಟುತ್ತಿರುತ್ತಾರೆ. ಅಂತಹ ಸಂಗತಿಗಳ ಬೆನ್ನುಹತ್ತಿ ಹೋಗಿ, ಅವರೊಂದಿಗೆ ಮಾತಾಡಿ, ಅವರ ಪರಿಸ್ಥಿತಿಯನ್ನು ಸ್ವತಃ ಕಂಡು ಅವರ ಯಶೋಗಾಥೆಯನ್ನು ಕನ್ನಡದ ಓದುಗರಿಗೆ ಪರಿಚಯಿಸುವುದು ಜ್ಯೋತಿಯವರ ಸದಾಶಯ. ಸಾಧ್ಯವಾದಷ್ಟೂ ಅವರವರ ಕಥೆಯನ್ನು ಅವರವರ ಬಾಯಿಯಲ್ಲೇ ಕೇಳಿಸುವ ಪ್ರಯತ್ನ ಮಾಡಿದ್ದಾರೆ. ಇದರಿಂದಾಗಿ ಓದುವಾಗ ಆಯಾ ಪಾತ್ರಗಳೇ ನಮ್ಮ ಕಣ್ಣೆದೆರು ನಿಂತು ತಮ್ಮ ಬದುಕನ್ನು ಬಿಚ್ಚಿಟ್ಟಂತೆ ಭಾಸವಾಗುವುದರಿಂದ ಜ್ಯೋತಿಯವರ ಈ ಪ್ರಯಾಣದಲ್ಲಿ ಓದುಗರೂ ಸಹಪಯಣಿಗರಾದ ಭಾವನೆಯನ್ನು ಅನುಭವಿಸಬಹುದು. ಬರವಣಿಗೆಯ ಈ ಶಕ್ತಿ ಅಪರೂಪದ್ದೆಂದೇ ನಾನು ಭಾವಿಸಿದ್ದೇನೆ.

ಮನೆ, ಮಕ್ಕಳು ಮತ್ತು ದಿನನಿತ್ಯದ ಎಲ್ಲ ಜಂಜಡಗಳ ನಡುವೆಯೂ ಜ್ಯೋತಿ ನಾಡಿನಾದ್ಯಂತ ಹಗಲಿರುಳು ಓಡಾಡಿ ಬರೆದ ಲೇಖನಗಳಿವು. ಇಲ್ಲಿರುವ ವ್ಯಕ್ತಿಗಳ ಬಗೆಗೆ ತಿಳಿದು, ಅವರಿರುವ ಊರಿಗೆ ಬಸ್ಸೋ, ಲಾರಿಯೋ, ರೈಲನ್ನೋ ಏರಿ ಓಡುವುದು. ಅಲ್ಲಿ ಸ್ಥಳೀಯರ ನೆರವಿನಿಂದ ಆಟೋ, ಬೈಕ್, ಕೆಲವೊಮ್ಮೆ ನಡಿಗೆಯ ಮೂಲಕ ತಮ್ಮ ಗಮ್ಯವನ್ನು ತಲುಪುವುದು. ತಾವು ಹುಡುಕಿಕೊಂಡು ಹೋದವರ ಸಮಯ, ಮಾತನಾಡುವ ಮನಸ್ಥಿತಿಗಾಗಿ ಕಾದುಕೊಂಡಿರುವುದು. ಸಿಕ್ಕಿದ್ದನ್ನು ತಿಂದು, ಕುಡಿದು ಕಾಲಹಾಕುವುದು. ಫೋಟೋ ತೆಗೆದುಕೊಳ್ಳುವುದು. ಮಾತಾಡಿದ್ದನ್ನು ನೆನಪಿಟ್ಟುಕೊಂಡು ಟಿಪ್ಪಣಿ ಮಾಡುವುದು. ಬರೆದದ್ದನ್ನು ಅಂಕಣ ರೂಪದಲ್ಲಿ ಪ್ರಕಟಿಸುವುದು ಇದಕ್ಕೆಲ್ಲ ಜ್ಯೋತಿ ವ್ಯಯಿಸಿರುವ ಹಣ ಮತ್ತು ಸಮಯಕ್ಕೆ ಬೆಲೆಕಟ್ಟಲಾಗದು. ನಯಾ ಪೈಸೆಯಷ್ಟೂ ಲಾಭದ ಉದ್ದೇಶವಿರದ ಈ ಜರ್ನಿಯಿಂದ ಜ್ಯೋತಿಗೆ ಯಾವ ಪ್ರಯೋಜನವೂ ಇಲ್ಲ. ಇದನ್ನೆಲ್ಲ ನೋಡಿದಾಗ ಈ ಬರಹದಲ್ಲಿ ವ್ಯಕ್ತವಾಗಿರುವ ಪಾತ್ರಗಳಂತೆಯೇ ಜ್ಯೋತಿಯವರ ವ್ಯಕ್ತಿತ್ವವೂ ಸಾಹಸದ್ದಾಗಿಯೇ ನಮಗೆ ಕಾಣುತ್ತದೆ. ಅವರ ಓಡಾಟ ನಿರಪೇಕ್ಷವಾದುದು. ನಿಸ್ಪೃಹ ವ್ಯಕ್ತಿಗಳ ಸಾಂಗತ್ಯದಿಂದಾಗಿ ಸ್ವತಃ ಲೇಖಕಿಯಲ್ಲೂ ಆ ಗುಣ ಪ್ರತಿಫಲಿಸುವುದು ಆಕಸ್ಮಿಕವೇನಲ್ಲ. ಆದ್ದರಿಂದಲೇ ಆ ಭಾವವನ್ನು ಕನ್ನಡದ ಓದುಗರೆದೆಗೂ ಹಾಯಿಸುವ ಪ್ರಯತ್ನವನ್ನು ಈ ಬರಹಗಳ ಮುಖೇನ ಸಾಧ್ಯ ಮಾಡಿರುವುದು ಅಭಿನಂದನೀಯವಾದ ವಿಚಾರವಾಗಿದೆ.

ಈ ಬಗೆಯ ಬರವಣಿಗೆಯನ್ನು ಮಾಡಿ ಸಫಲರಾದವರು ಹೆಚ್ಚು ಜನರಿಲ್ಲ. ರಹಮತ್ ತರೀಕೆರೆಯವರಿಗೆ ಈ ರೀತಿಯ ಸದಭಿರುಚಿಯಿರುವುದು ಅವರ ಓಡಾಟದ ಬರವಣಿಗೆಗಳು ರುಜುವಾತು ಮಾಡಿವೆಯಾದರೂ ಅವರ ಆಸಕ್ತಿ ಮತ್ತು ಕಾರ್ಯಕ್ಷೇತ್ರದ ವಿಸ್ತಾರ ದೊಡ್ಡದು. ಜ್ಯೋತಿಯವರ ಈ ಪ್ರಯತ್ನದಿಂದ ಅಸಹಾಯಕತೆಯ ನಡುವೆಯೂ ಭರವಸೆಯನ್ನು ಕಳೆದುಕೊಳ್ಳದೆ ಚೆನ್ನಾಗಿ ಬದುಕಬೇಕೆಂಬ ಛಲವನ್ನು ಒಡಲೊಳಗಿಟ್ಟುಕೊಂಡವರ ಕಥೆ ಯಿಂದ ಓದುಗರಲ್ಲೂ ಆ ಬಗೆಯ ಭರವಸೆ ಪ್ರತಿಫಲಿಸುವುದು ಮಾತ್ರವಲ್ಲ, ಸಾಧ್ಯವಾದರೆ ನಮ್ಮ ಸುತ್ತಮುತ್ತಲ ಇಂತಹ ಜೀವಿಗಳೊಂದಿಗೆ ಒಡನಾಡುವ, ನೆರವಾಗುವ ಹುಮ್ಮಸ್ಸನ್ನೂ ಈ ಕೃತಿ ಹುಟ್ಟುಹಾಕುತ್ತದೆ. ಈ ಎಲ್ಲ ಅರ್ಥದಲ್ಲಿಯೂ ಇದೊಂದು ಸಫಲವಾದ ಓಡಾಟ ಮತ್ತು ಬರವಣಿಗೆಯಾಗಿದೆ.
‘ಕಾಲ್ನಡಿಗೆಯ ಸಾಹಿತ್ಯ’ವೆಂದು ಗುರುತಿಸಬಹುದಾದ ಈ ಬರವಣಿಗೆಯು ಈ ಬಗೆಯ ಉತ್ಸಾಹಿಗಳನ್ನು ಪ್ರೇರೇಪಿಸಲಿದೆ. ಹಲವು ಲೇಖಕರ ಆಪ್ತವಲಯದ ಗೆಳೆತನ ಸಾಧಿಸಿರುವ ಜ್ಯೋತಿಯವರು ತಮ್ಮ ಮುಂದಿನ ಬರಹಕ್ಕೆ ಮತ್ತಷ್ಟು ಮಾಗಿದ, ಬಿಗಿಯಾದ ಶೈಲಿಯನ್ನು ರೂಢಿಸಿಕೊಳ್ಳುವಂತಾಗಲೆAದು ಹಾರೈಸುತ್ತೇನೆ. ಸಾಮಾಜಿಕ ಶ್ರೇಣೀಕರಣದ ರೂಢಿಗತವಾದ ತಾರತಮ್ಯ ಧೋರಣೆಗೆ ವಿಮುಖರಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಪ್ರಸಿದ್ಧ ಲೇಖಕರ, ಕಲಾವಿದರಿಗೆ ಸರಿಸಾಟಿಯಾಗಿ ನಿಲ್ಲಿಸುವ ಜ್ಯೋತಿಯವರ ಈ ಪ್ರಯತ್ನದಲ್ಲಿ ಅಡಕಗೊಂಡಿರುವ ಸಮಾನತೆಯ ಸಾಮಾಜಿಕ ಕಳಕಳಿಯನ್ನು ನಾವು ಮುಖ್ಯವಾಗಿ ಗಮನಿಸಿದಾಗ ಈ ಬರಹದ ಪ್ರಾಮುಖ್ಯತೆಯ ಅರಿವಾಗುತ್ತದೆ. ಅದನ್ನು ಮತ್ತಷ್ಟು ಕಲಾತ್ಮಕಗೊಳಿಸಿ ದಾಖಲಿಸುವ ಪ್ರಯತ್ನವನ್ನು ಜ್ಯೋತಿಯವರು ಮಾಡಿಯಾರು ಎಂಬ ಆಶಯ ನನ್ನದು. ಕನ್ನಡದ ಓದುಗರು ‘ಜರ್ನಿ ಆಫ್ ಜ್ಯೋತಿ’ಯನ್ನು ಆದರದಿಂದ ಬರಮಾಡಿಕೊಳ್ಳಲಿ ಎಂಬ ಹಾರೈಕೆಯೊಂದಿಗೆ ಸಾಹಿತ್ಯಲೋಕದಲ್ಲಿ ಜ್ಯೋತಿಯವರು ಧೃಡವಾದ ಹೆಜ್ಜೆಗಳನ್ನಿಡಲಿ, ಅವರ ಓಡಾಟ ಮತ್ತು ಬರವಣಿಗೆಗೆ ದಣಿವೆಂಬುದು ಎದುರಾಗದಿರಲಿ ಎಂದು ಶುಭಕೋರುತ್ತಾ ನನ್ನ ಎರಡು ಮಾತುಗಳನ್ನು ಮುಗಿಸುತ್ತೇನೆ. ನನ್ನ ಮೇಲೆ ವಿಶ್ವಾಸವಿಟ್ಟು ಒಂದೆರಡು ಪ್ರೋತ್ಸಾಹದ ಮಾತುಗಳನ್ನಾಡಲು ಅವಕಾಶವಿತ್ತ ಅವರ ಸೌಜನ್ಯವನ್ನೂ ಹೃದಯವಂತಿಕೆಯನ್ನೂ ಕೃತಜ್ಞತೆಯಿಂದ ನೆನೆಯುವೆ.
- ಡಾ.ಎಚ್.ಎಸ್. ಸತ್ಯನಾರಾಯಣ
