ನಾನು ಗರ್ಭದಲ್ಲಿದ್ದೆ…ನನ್ನ ಬರುವಿಕೆಗಾಗಿ ಅಮ್ಮ ಸಂತೋಷದಿಂದ ಕಾಯುತ್ತಿದ್ದಳು. ಅಮ್ಮನ ಹೊಟ್ಟೆ ಬಗೆದು ಒಂದು ದಿನ ಹೊರಗೆ ಬಂದೆ. ಹೊರಗೆ ಬರುವಾಗ ಅಮ್ಮ ಪಟ್ಟ ನೋವಿನ ಮುಂದೆ ನಾನು ಏನು ಹೇಳಲಿ…ಕೈ ಮುಗಿಯುವೆ ಅಮ್ಮ…ರೇಖಾ ವಿ ಕಂಪ್ಲಿ ಅವರು ಅಮ್ಮನಿಗಾಗಿ ಬರೆದ ಒಂದು ಭಾವನಾತ್ಮಕ ಬರಹವನ್ನು ತಪ್ಪದೆ ಮುಂದೆ ಓದಿ…
ಅದೊಂದು ಚೇತನ ನನ್ನ ಬಾಳಿನ ಅನಿಕೇತನ. ನಾನೇ ಹುಟ್ಟುತ್ತಾನೆ ಎಂದು ಅವಳಿಗೆ ಅರಿವಿರಲಿಲ್ಲ ಆದರೂ ನನಗಾಗಿ ಪೂರ್ವ ಸಿದ್ಧತೆ ಮಾಡಿಕೊಂಡಿತ್ತು, ನಾನು ಒಂದು ಹೆಣ್ಣು ನನಗೂ ಒಂದು ಹೆಣ್ಣಾದರೆ ಅದನ್ನು ಹೀಗೆ ಬೆಳೆಸಬೇಕು ಹೀಗೆ ಬೆಳೆಸಬಾರದು ಎಂಬ ಮುಂದಾಲೋಚನೆಯನ್ನು ಮಾಡಿ ನನ್ನ ಬರುವಿಕೆಗಾಗಿಯೇ ಕಾದಿತ್ತು ಎನ್ನಿಸುತ್ತದೆ.
ಅದೊಂದು ದಿನ ನಾನು ಈ ಭೂಮಿಗೆ ಬರುವ ಕಾಲ ಬಂದಿತು. ಅವಳಿಗೆ ಹೊಟ್ಟೆಯಲ್ಲಿ ಏನೋ ಒಂದು ತರ ತಳಮಳ, ಬಯಕೆ, ಸಂತೋಷ ಒಂದಷ್ಟು ಏನೋ ಎಂದೂ ಕಾಣದ ಹೊಸ ಅನುಭವ ಶುರುವಾಗಿತ್ತು. ಒಂದು ತಿಂಗಳಾಯಿತು… ಇನ್ನು ಮುಟ್ಟು ಬಂದಿಲ್ಲ ಎಂದು ಅವಳು ಅವಳ ತಾಯಿಯ ಬಳಿ ಹೇಳಿಕೊಂಡಾಗ ಅವಳ ತಾಯಿಗೆ ಖಚಿತವಾಗಿತ್ತು. ನನ್ನ ಮಗಳು ಬಸುರಿ ಆಗುವ ಲಕ್ಷಣಗಳು ಕಾಣಿಸುತ್ತಿವೆ ಎಂದು ತುಂಬಾ ಹಿರಿಹಿರಿ ಹಿಗ್ಗುತ್ತಾ ನೀನು ಅಮ್ಮ ಆಗುತ್ತೀಯಾ ಎಂದು ಹೇಳಿದಾಗ ನನ್ನ ಬರುವಿಕೆಯನ್ನು ಸಂತಸದಿಂದ ಸ್ವೀಕರಿಸಿ ಅವಳ ಸಂತೋಷವನ್ನು ಅವಳ ಇನಿಯನಲ್ಲೂ ಅವರ ಅತ್ತೆ, ಮಾವ, ಸಂಬಂಧಿಕರಿಗೆ ಹೇಳಿ ಹಿಗ್ಗಿ ನನ್ನ ಬಗ್ಗೆ ಕಾಳಜಿ ತೆಗೆದುಕೊಳ್ಳಲಾರಂಭಿಸಿದಳು.

ಫೋಟೋ ಕೃಪೆ : google
ಹಿರಿಯರಲ್ಲಿ ಕಿರಿಯರಲ್ಲಿ ಕೇಳಿ ಏನು ತಿನ್ನಬೇಕು ಏನು ತಿನ್ನಬಾರದು ಎಂದು ಮುಂಜಾಗ್ರತೆ ವಹಿಸಲು ಪ್ರಾರಂಭಿಸಿ, ತನಗೆ ಇಷ್ಟವಾದ ತಿಂಡಿಯನ್ನು ಬಿಟ್ಟಳು ಕಾರಣ ಒಳಗಡೆ ಇರುವ ನನಗೆ ಏನೂ ಆಗಬಾರದು ಎಂಬ ಆಶಯ ಅವಳಲ್ಲಿ ಇತ್ತು. ಆಗಾಗ ನನ್ನ ಒದ್ದಾಟದ ಪರಿ ಅರಿವನ್ನು ಅವಗಣನೆಗೆ ತೆಗೆದುಕೊಂಡು ತನ್ನ ಪತಿಗೂ ತೋರಿಸಿ ನೋಡಿ ಮಗು ಹೇಗೆ ಒದ್ದಾಡುತಿದೆ ಎಂದು ತನ್ನ ಎಲ್ಲಾ ನೋವನ್ನು ಮರೆತು ಖುಷಿಪಡುತ್ತಿದ್ದಳು.
ನೋಡು ನೋಡುತ್ತಿದ್ದಂತೆ ಗರ್ಭದಲ್ಲಿ ನಾನು ಪೂರ್ಣ ತಯಾರಿ ಆಗಿದ್ದೆ. ಅವಳ ಕರುಳನ್ನು ಬಗೆದು ಹೊಟ್ಟೆ, ಸೊಂಟ, ಕೈ, ಕಾಲುಗಳಿಗೆ ವಿಪರೀತವಾಗಿ ನೋವನ್ನು ಕೊಟ್ಟು ತಾಳಲಾರದ ಹಿಂಸೆಯನ್ನು ಕೊಟ್ಟು ಹೊರ ಬರಲು. ಆದರೂ ಆತ ನೋವನ್ನೆಲ್ಲ ನುಂಗಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ನನ್ನ ಆಗಮನಕ್ಕಾಗಿ ಕಾತುರತೆಯಿಂದ ಕಾಯುತ್ತಿದ್ದಳು. ಅಂತು ಸಾವು ನೋವುಗಳ ಹೋರಾಟ ನಡೆಸಿ ನನಗೆ ಜನ್ಮವಿತ್ತಳು. ನನ್ನ ಮುದ್ದಾದ ಮುಖ ನೋಡುತ್ತಲೇ ತನ್ನ ನೋವುಗಳನ್ನು ಮರೆತು ನಗೆ ಚೆಲ್ಲಿ ನನ್ನಪ್ಪನತ್ತ ನೋಡಿದಳು.
ನನ್ನ ಹಸಿವನ್ನು ತಣಿಸಲು ತನ್ನ ಎದೆ ರಕ್ತವನ್ನೇ ಹಾಲಾಗಿ ಉಣ್ಣಿಸಿದಳು. ಅಂತವಳನ್ನು ಯಾವ ಪದದಿಂದ ಬಣ್ಣಿಸಲಿ ಅವಳಿಗೆ ನಾನೇನು ಕೊಡಬಲ್ಲೆ ಅಮ್ಮ ಎಂಬ ಅಕ್ಕರೆಯನ್ನಲ್ಲದೇ.
- ರೇಖಾ ವಿ ಕಂಪ್ಲಿ
