“ಅಡುಗೆಮನೆಯ ಸಾಹಿತ್ಯವಲ್ಲ ಎಂದ ಸಾವಿತ್ರಮ್ಮ”

ಎಚ್ ವಿ ಸಾವಿತ್ರಮ್ಮನವರು ಲೇಖಕಿಯರ ಸಂಘ ಕೊಡಮಾಡುವ ‘ಅನುಪಮಾ ಪ್ರಶಸ್ತಿ’ಯನ್ನು ಪಡೆದ ಮೊದಲಿಗರೂ ಹೌದು.ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ ಪಡೆದ ಲೇಖಕಿಯರಲ್ಲಿ ಮೊದಲಿಗರು ಕೂಡ. ಸಾವಿತ್ರಮ್ಮಅವರ ಸಮಸ್ತ ಕಥೆಗಳು ಪುಸ್ತಕದ ಕುರಿತು ಡಾ. ಎಚ್.ಎಸ್. ಸತ್ಯನಾರಾಯಣ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಓದಿ …

ಪುಸ್ತಕ : ಸಮಸ್ತ ಕಥೆಗಳು 
ಲೇಖಕರು : ಎಚ್ ವಿ ಸಾವಿತ್ರಮ್ಮ
ಸಂಪಾದಕರು : ನ. ರವಿಕುಮಾರ್ , ಎಲ್ ಜಿ ಮೀರಾ
ಖರೀದಿಗಾಗಿ : ಅಭಿನವ ಪ್ರಕಾಶನ, ಬೆಂಗಳೂರು / ಮೊ:9448804905

ವೈದೇಹಿ ಮೇಡಂ ನಾನು ಮೊನ್ನೆ ಎಂ ಕೆ ಇಂದಿರಾ ಅವರ ಬಗ್ಗೆ ಬರೆದಿದ್ದನ್ನು ಓದಿ ಫೋನ್ ಮಾಡಿದ್ದರು. ನಮ್ಮ ಹಿರಿಯ ಲೇಖಕಿಯರ ಬಗ್ಗೆ ಮಾತಾಡುವಾಗ ಎಚ್ ವಿ ಸಾವಿತ್ರಮ್ಮನವರ ಪ್ರಸ್ತಾಪ ಬಂತು. “ಮೇಡಂ ನೀವು ಅನುಪಮಾ ಪ್ರಶಸ್ತಿ ಪಡೆದ ಸಮಾರಂಭಕ್ಕೆ ಸಾವಿತ್ರಮ್ಮನವರೂ ಬಂದಿದ್ದರು, ನೆನಪಾಯ್ತ?” ಎಂದು ಕೇಳಿದೆ. ಅವತ್ತಿನ ಸಮಾರಂಭದ ಕೇಂದ್ರ ಆಕರ್ಷಣೆಯಾಗಿದ್ದ ವೈದೇಹಿಯವರಿಗೆ ಆ ದಿನ ಯಾರು ಯಾರೆಲ್ಲ ಇದ್ದರೆಂಬ ನೆನಪು ಮಸುಕುಮಸುಕಾಗಿತ್ತು. ‘ಅಯ್ಯೋ ಮಾರಾಯ, ಆ ದಿನ ನಾನು ಸಂಕೋಚದ ಮುದ್ದೆಯಾಗಿ ಹೋಗಿದ್ದೆ. ಆಗಿನ್ನೂ ಕಣ್ಣುಬಿಡುತ್ತಿದ್ದವಳು ನಾನು’ ಎಂದರು. ಎಚ್. ವಿ. ಸಾವಿತ್ರಮ್ಮ, ಟಿ.ಸುನಂದಮ್ಮ, ನಿರುಪಮಾ, ಮುಂತಾದ ಅನೇಕ ಹಿರಿಯ ಲೇಖಕಿಯರು ತಮ್ಮ ಮುಂದಿನ ತಲೆಮಾರಿನ ಲೇಖಕಿಯರು ಪ್ರಶಸ್ತಿ ಪಡೆಯುವುದನ್ನು ನೋಡಿ ಸಂತೋಷಪಡುತ್ತಿದ್ದ ದಿನಗಳವು. ಸಾವಿತ್ರಮ್ಮನವರು ಲೇಖಕಿಯರ ಸಂಘ ಕೊಡಮಾಡುವ ‘ಅನುಪಮಾ ಪ್ರಶಸ್ತಿ’ಯನ್ನು ಪಡೆದ ಮೊದಲಿಗರೂ ಹೌದು. ಅನುಪಮಾ ನಿರಂಜನ ಅವರಿಗಿಂತಲೂ ಹಿರಿಯ ತಲೆಮಾರಿನವರಾದ ಎಚ್ ವಿ ಸಾವಿತ್ರಮ್ಮನವರು ಈ ಗೌರವವನ್ನು ಸ್ವೀಕರಿಸಿದ್ದೇ ಒಂದು ದೊಡ್ಡ ಸಂಗತಿ ಮತ್ತು ಅವರ ಹೃದಯ ವೈಶಾಲ್ಯತೆಯ ಸಂಕೇತವಾಗಿ ಕಾಣುತ್ತದೆ. ಸೋವಿಯತ್ ಲ್ಯಾಂಡ್ ನೆಹರೂ ಪ್ರಶಸ್ತಿ ಪಡೆದ ಲೇಖಕಿಯರಲ್ಲಿ ಮೊದಲಿಗರು ಕೂಡ.

ಈ ಹಿರಿಯ ಲೇಖಕಿಯನ್ನು ನಾನು ಕಂಡ ದಿನ ಆಕೆ ನಯವಾದ ರೇಶಿಮೆ ಸೀರೆಯುಟ್ಟು ಗಂಧರ್ವ ಲೋಕದ ತಾರೆಯಂತೆ ಕಂಗೊಳಿಸುತ್ತಿದ್ದರು. ವೃದ್ಧಾಪ್ಯದಲ್ಲೂ ಹಿಂದೆ ನೆಲೆಸಿದ್ದ ಅವರ ಚೆಲುವು, ನೋಡಿದೊಡನೆ ಗೌರವಭಾವ ಮೂಡುವ ನಿಲುವು ಈಗಲೂ ಕಣ್ಣಮುಂದಿದೆ. ಆ ಜನಜಂಗುಳಿಯಲ್ಲಿ ನಮಸ್ಕರಿಸುವುದರ ಹೊರತು ಬೇರೇನೂ ಮಾತಾಡಲಾಗಿರಲಿಲ್ಲ. ವಿಜಯಾದಬ್ಬೆಯವರ ಕೆನ್ನೆ ಸವರಿ ‘ಚೆನ್ನಾಗಿ ಮಾತಾಡಿದೆಯಮ್ಮ’ ಎಂದು ಬೆನ್ನುತಟ್ಟಿ ಅಲ್ಲಿಂದ ಹೊರಟು ಹೋಗಿದ್ದರು. ಮತ್ತೆ ಅವರನ್ನು ಕಾಣುವ ಸಂದರ್ಭ ಬರಲೇ ಇಲ್ಲ. ಒಂದೆರಡು ವರ್ಷಗಳ ಅಂತರದಲ್ಲಿಯೇ ಅವರು ತಮ್ಮ ಎಂಬತ್ತಮೂರನೇ ವಯಸ್ಸಿನಲ್ಲಿ ಇಹಲೋಕವನ್ನೇ ತ್ಯಜಿಸಿ ಹೊರಟುಬಿಟ್ಟರು (ನಿಧನ:ಡಿಸೆಂಬರ್ ೧೯೯೬).
ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರೂ, ಮೈಸೂರು ವಿ.ವಿ.ಯ ಪ್ರಥಮ ಕುಲಪತಿಗಳೂ, ಮೊದಲ ಮೂರು ಕನ್ನಡ ಸಾಹಿತ್ಯ ಸಮ್ಮೇಳನಗಳ ಸರ್ವಾಧ್ಯಕ್ಷರೂ ಆಗಿದ್ದ ಎಚ್ ವಿ ನಂಜುಂಡಯ್ಯನವರು ಇವರ ತಾತ. ಹಾಗಾಗಿಯೇ ಸಾವಿತ್ರಮ್ಮನವರ ಆದ್ಯಕ್ಷರಗಳು ಎಚ್ ವಿ ಆಗಿರುವುದು. ೧೯೧೩ರಲ್ಲಿ ರಾಮರಾವ್-ಎಂ ಆರ್ ಮೀನಾಕ್ಷಮ್ಮ ದಂಪತಿಯ ಸುಪುತ್ರಿಯಾಗಿ ಜನಿಸಿದ ಸಾವಿತ್ರಮ್ಮನವರು ಕಣ್ಣು ಬಿಡುವಾಗಲೇ ಮನೆಯಲ್ಲಿ ಸಾಹಿತ್ಯಕ, ಶೈಕ್ಷಣಿಕ, ಸಿರಿವಂತಿಕೆಯ ವಾತಾವರಣಗಳನ್ನು ಪಡೆದ ಅದೃಷ್ಟವಂತೆ. ಓದಿನಲ್ಲಿ ಚುರುಕಾಗಿದ್ದ ಸಾವಿತ್ರಮ್ಮನವರು ೧೯೩೧ರಲ್ಲಿ ಮೂರು ಚಿನ್ನದ ಪದಕಗಳೊಂದಿಗೆ ಬಿ.ಎ. ಪದವಿ ಪಡೆದ ಪ್ರತಿಭಾವಂತೆ. ತಾತ ಎಚ್ ವಿ ನಂಜುಂಡಯ್ಯನವರ ಜೀವನಚರಿತ್ರೆಯನ್ನು ರಚಿಸಿಕೊಟ್ಟಿದ್ದಾರೆ.

ಎಚ್ ವಿ ಸಾವಿತ್ರಮ್ಮ

ಮಾಸ್ತಿಯವರ ಕಾಲದ ಕತೆಗಾರ್ತಿಯೆಂದು ಗುರುತಿಸಲ್ಪಡುವ ಸಾವಿತ್ರಮ್ಮನವರು ನವೋದಯ-ಪ್ರಗತಿಶೀಲ ಸಾಹಿತ್ಯ ಸಂದರ್ಭದಲ್ಲಿ ಬರವಣಿಗೆಯನ್ನು ಆರಂಭಿಸಿದವರು. ಇಂಗ್ಲಿಷ್, ಹಿಂದಿಯನ್ನು ಚೆನ್ನಾಗಿಬಲ್ಲವರಾಗಿದ್ದ ಸಾವಿತ್ರಮ್ಮನವರು ಇಂಗ್ಲಿಷ್ ಅಭಿಜಾತ ಸಾಹಿತ್ಯವನ್ನು ಚೆನ್ನಾಗಿ ಓದಿಕೊಂಡಿದ್ದರು. ಪ್ರೊ. ತೀನಂಶ್ರೀ ಯವರ ಒತ್ತಾಸೆಯಿಂದಾಗಿ ಕನ್ನಡದಲ್ಲಿ ಬರೆಯುವ ಬಯಕೆ ಕುಡಿಯೊಡೆಯಿತು. ಲೇಖಕಿಯಾಗಬೇಕೆಂಬ ಆಸೆಯಿರದಿದ್ದರೂ ‘ಬಿಡುವಿನ ವೇಳೆಯ ಬೇಸರ ಕಳೆಯುವುದಕ್ಕಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾಗಿ’ ಅವರೇ ಒಂದೆಡೆ ಹೇಳಿಕೊಂಡಿದ್ದಾರೆ. ಕಥೆಗಾರ, ಕಥಾಂಜಲಿ ಮೊದಲಾದ ಪತ್ರಿಕೆಗಳಿಗೆ ಬರೆದ ಸಣ್ಣಕಥೆಗಳಿಗೆ ಬಹುಮಾನ ದೊರೆತದ್ದು ‘ನಾನೂ ಚೆನ್ನಾಗಿ ಬರೆಯಬಲ್ಲೆ’ ಎಂಬ ಆತ್ಮವಿಶ್ವಾಸವನ್ನು ತಂದಿತು. ಹಾಗಾಗಿಯೇ ಕನ್ನಡಕ್ಕೆ ಸಾವಿತ್ರಮ್ಮನವರಿಂದ ಸಣ್ಣಕತೆ, ಕಾದಂಬರಿ, ಅನುವಾದ, ಮಕ್ಕಳ ಸಾಹಿತ್ಯ, ಜೀವನಚರಿತ್ರೆ ಮುಂತಾದ ಪ್ರಕಾರಗಳಿಗೆ ಮಹತ್ವದ ಕೊಡುಗೆ ದೊರೆಯಿತು.

ಅಭಿನವ ಪ್ರಕಾಶನವು ಸಾವಿತ್ರಮ್ಮನವರ ಸಮಗ್ರ ಕಥೆಗಳ ಹೊತ್ತಿಗೆಯನ್ನು ಪ್ರಕಟಿಸಿದೆ. ಆಸಕ್ತ ಅಭ್ಯಾಸಿಗಳಿಗೆ ಇದೊಂದು ಉತ್ತಮ ಆಕರ. ನಾವೆಲ್ಲ ಆರಂಭದ ದಿನಗಳಲ್ಲಿ ಸಾವಿತ್ರಮ್ಮನವರ ‘ಸೀತೆ-ರಾಮ-ರಾವಣ’ ಮತ್ತು ‘ವಿಮುಕ್ತೆ’ ಕಾದಂಬರಿಗಳನ್ನು ಓದಿ ಖುಷಿಪಟ್ಟಿದ್ದು ನೆನಪಾಗುತ್ತಿದೆ. ಕನ್ನಡದಲ್ಲಿ ‘ಸ್ತ್ರೀವಾದ’ ಸೈದ್ಧಾಂತಿಕ ನೆಲೆ ಕಾಣುವ ಮೊದಲೇ ಸಾವಿತ್ರಮ್ಮನವರು ಈ ಕಾದಂಬರಿಗಳಲ್ಲಿ ಸ್ತ್ರೀವಾದಿ ನೆಲೆಯಿಂದ ಹೊಸ ಅರ್ಥಕಲ್ಪನೆಗಳನ್ನು ಮೂಡಿಸುವ ಪ್ರಯತ್ನ ಮಾಡಿರುವುದು ಮುಖ್ಯ.

ರಾಮಾಯಣವನ್ನು ಕಾದಂಬರಿಯ ಮುಖೇನ ಸ್ತ್ರೀ ಪರಿಪ್ರೇಕ್ಷ್ಯದಲ್ಲಿ ಕಾಣುವ ಮೊದಲ ಪ್ರಯತ್ನವಾಗಿ ಸಾವಿತ್ರಮ್ಮನವರ ‘ಸೀತೆ-ರಾಮ-ರಾವಣ’ ಕಾದಂಬರಿ ಓದುಗರ ಗಮನ ಸೆಳೆಯಿತು. ಸಂಚಲನವುಂಟುಮಾಡಿದ ಪೋಲಂಕಿಯವರ ‘ಸೀತಾಯಣ’ ಬಂದಿದ್ದು ಆನಂತರವಷ್ಟೇ. ಸಾವಿತ್ರಮ್ಮನವರು ರಾಮಾಯಣವನ್ನು ನೆಪವಾಗಿಟ್ಟುಕೊಂಡು ಹೆಣ್ಣಿನ ಮಾನಸಿಕ ವೇದನೆಗಳ ವಿಶ್ಲೇಷಣೆ ಮತ್ತು ಪ್ರತಿಭಟನೆಗಳನ್ನು ದಾಖಲಿಸಿದ್ದರು. ಸ್ತ್ರೀ ವಿಮೋಚನೆಯನ್ನು ಆಶಯವಾಗುಳ್ಳ ಈ ಬಗೆಯ ಕಾದಂಬರಿ ರಚಿಸಿದ ಸಾವಿತ್ರಮ್ಮನವರ ಪ್ರಯತ್ನ ಶ್ಲಾಘನೀಯವೆನಿಸಿತು.

ಆಧುನಿಕ ಕನ್ನಡ ಸಾಹಿತ್ಯದ ಮೊದಮೊದಲಲ್ಲಿ ನಂಜನಗೂಡು ತಿರುಮಲಾಂಬ, ಆರ್. ಕಲ್ಯಾಣಮ್ಮನವರಂಥ ಲೇಖಕಿಯರಲ್ಲಿ ಚಿಕ್ಕಪುಟ್ಟದ್ದಾಗಿ ಕಂಡುಬರುವ ಹಕ್ಕೊತ್ತಾಯದ ಪ್ರಶ್ನೆಗಳು ಸಾವಿತ್ರಮ್ಮನವರ ಬರಹಗಳಲ್ಲಿ ಮತ್ತಷ್ಟು ವ್ಯಾಪಕತೆಯನ್ನು ಪಡೆದಿರುವುದನ್ನು ಸಾವಿತ್ರಮ್ಮನವರ ಸಣ್ಣಕತೆಗಳ ಓದಿನಿಂದ ಅರ್ಥಮಾಡಿಕೊಳ್ಳಬಹುದು. ವಿವಾಹದ ಚೌಕಟ್ಟಿನಲ್ಲಿ ಉಸಿರುಗಟ್ಟಿಕೊಂಡು ಬದುಕನ್ನೆದುರಿಸಲು ಹೆಣಗುವ, ಸೋಲುವ ಪಾತ್ರಗಳು, ವಿವಾಹೇತರ ಪ್ರೇಮದ ಸೆಲೆಯನ್ನು ದೀಕ್ಷೆಯಾಗಿಸಿಕೊಂಡಿರುವ ಜೀವಗಳು, ವೃದ್ಧಾಪ್ಯದಲ್ಲಿ ಆವರಿಸುವ ಸಹಾಯಕತೆಯಲ್ಲಿ ತೊಳಲಾಡುವ ಮುದಿಜೀವಗಳು, ಚಿಕ್ಕಂದಿನಲ್ಲೆ ವಿಧವೆಯರೆನ್ನಿಸಿಕೊಂಡು ಲೋಕದ ತಾತ್ಸಾರಕ್ಕೆ ಈಡಾಗುವ ಜೀವಗಳು-ಇವೆಲ್ಲವನ್ನೂ ಸಾವಿತ್ರಮ್ಮನವರ ಕಥಾಲೋಕ ನಮಗೆ ಕಾಣಿಸಿದೆ. ಸ್ವಾತಂತ್ರ್ಯಪೂರ್ವ ಮತ್ತು ಸ್ವತಂತ್ರತ್ತೋತರ ಭಾರತದ ಸ್ಥಿತಿಗತಿ, ಅಕ್ಷರದ ಸಂಪರ್ಕ ತರುವ ಬೆಳಕಿನ ಕಿರಣ ಮುಂತಾದ ಸಂಗತಿಗಳಿಗೂ ಇವರ ಕಥೆಗಳಲ್ಲಿ ಎಡೆಯಿದೆ.

ಇವರ ‘ಹಳೆಯ ಜೋಡು’ ಎಂಬೊದು ಕಥೆ ಈಗಲೂ ಮನದಲ್ಲಿ ಉಳಿದುಬಿಟ್ಟಿದೆ. ದಾಂಪತ್ಯದಲ್ಲಿ ಹೊಂದಾಣಿಕೆಯಿರದಿದ್ದರೂ ಅಭ್ಯಾಸ ಬಲದಿಂದಾಗಿ ಸಹಬಾಳ್ವೆ ಮಾಡುತ್ತಿರುತ್ತೇವಲ್ಲ, ತಾಳ-ಲಯ ತಪ್ಪಿದ್ದರೂ ಗಂಡನನ್ನು ಹೆಂಡತಿಯೂ, ಹೆಂಡತಿಯನ್ನು ಗಂಡನೂ ಸಹಿಸಿಕೊಂಡು ಬದುಕುವ ಗುಣವೊಂದು ಅದು ಹೇಗೋ ಒಂದು ಸೂತ್ರದಲ್ಲಿ ಇಬ್ಬರನ್ನೂ ದೀರ್ಘಕಾಲ ಬಂಧಿಸಿರುತ್ತದೆ. ಈ ಸಂಗತಿಯನ್ನು ನಿರೂಪಿಸುತ್ತ ಸಾವಿತ್ರಮ್ಮನವರು ಬದುಕಿನ ಈ ಕ್ರಮವನ್ನು ನಮ್ಮ ಹಳೆಯ ಚಪ್ಪಲಿಗೆ ಸಮೀಕರಿಸಿದ್ದಾರೆ. ‘ಅಭ್ಯಾಸವಾದ ಹಳೆಯ ಜೋಡಿನೊಂದಿಗೆ ನಾವು ಮುಂದೆ ನಡೆಯುವಂತೆ’ ಎಂಬ ಹೋಲಿಕೆಯೇ ಎಷ್ಟು ಅರ್ಥಪೂರ್ಣವಾಗಿದೆ. ಮತ್ತೊಂದು ಕಥೆಯಲ್ಲಿ ಅಕ್ಕತಂಗಿಯರಿಬ್ಬರು ಒಬ್ಬನನ್ನೇ ಪ್ರೀತಿಸಿರುತ್ತಾರೆ. ಜವಾಬ್ದಾರಿ ಹೊತ್ತ ಅಕ್ಕ ತನ್ನ ಪ್ರೀತಿಯನ್ನು ಮುಚ್ಚಿಟ್ಟುಕೊಂಡು ತಂಗಿಗೆ ಅವನೊಂದಿಗೆ ಮದುವೆ ಮಾಡಿಸಿ, ತಾನು ವಿದೇಶದಲ್ಲಿ ಕೆಲಸ ಅರಸಿ ಹೊರಟುಬಿಡುತ್ತಾಳೆ. ಕಾರ್ಯನಿಮಿತ್ತ ಅಲ್ಲಿಗೆ ಬಂದ ತಂಗಿಯ ಗಂಡನ ಜೊತೆ ಎರಡು ತಿಂಗಳಿರಬೇಕಾದ ಅನಿವಾರ್ಯತೆಯಲ್ಲಿ ಮೊದಲೇ ಪ್ರೇಮಿಗಳಾಗಿದ್ದವರ ಸಮಾಗಮ ನಡೆದು, ಅಕ್ಕ ಮಗುವಿನ ತಾಯಾಗುತ್ತಾಳೆ. ಮಗುವಿನೊಂದಿಗೆ ಬಂದ ಅಕ್ಕನನ್ನು ತಂಗಿ ಏನನ್ನೂ ಕೆದಕದೆ, ಪಕ್ಕದ ಮನೆಯವರಿಗೆ ಮಗುವನ್ನು ತೋರುತ್ತ ‘ಯಾರೋ ಕಾಮುಕನ ಕ್ಷಣಿಕ ಎಡವಟ್ಟಿನ ಫಲ’ ಎಂಬ ಅಕ್ಕ ಹೇಳಿದ ಮಾತನ್ನೇ ಹೇಳುತ್ತಾಳೆ. ಪ್ರಶ್ನಾವಳಿಗಳ ಸಂಶಯದ ಕಣ್ಣಿನಲ್ಲಿ ಅಕ್ಕನನ್ನು ಹಿಂಸಿಸದ ತಂಗಿಯ ಪ್ರಬುದ್ಧ ಮನೋಭಾವದ ಹಿಂದೆ ಸಾವಿತ್ರಮ್ಮನವರ ಆರೋಗ್ಯಕರ ಹಾಗೂ ಪ್ರಗತಿಪರ ಧೋರಣೆಗಳು ಎದ್ದು ಕಾಣುತ್ತವೆ. ಈ ಲೇಖಕಿಯ ಧೋರಣೆಯನ್ನು ಉದಾಹರಿಸಲು ನಾನು ಇವುಗಳನ್ನು ನೆನಪುಮಾಡಿಕೊಂಡೆನಷ್ಟೇ. ಇಂತಹ ಕಥೆಗಳನ್ನು ಓದಲು ನೀವು ಈಗ ಲಭ್ಯವಿರುವ, ‘ಅಭಿನವ’ ಪ್ರಕಟಿಸಿರುವ ಎಚ್ ವಿ ಸಾವಿತ್ರಮ್ಮನವರ ಸಮಗ್ರ ಕಥೆಗಳನ್ನು ನಿಮ್ಮದಾಗಿಸಿಕೊಳ್ಳಲೇ ಬೇಕು. ಪಾರಂಪರಿಕವಾದ ಹುಸಿ ಮೌಲ್ಯಗಳನ್ನು ಬಯಲು ಮಾಡುವ ಧೋರಣೆಯ ಲೇಖಕಿಯಾದ ಸಾವಿತ್ರಮ್ಮನವರು ತಮ್ಮ ಸಮಕಾಲೀನರಿಗಿಂತ ತುಂಬ ಮುಂದುವರೆದ ಆಲೋಚನೆಯವರಾಗಿದ್ದರೆಂಬುದನ್ನು ಅವರ ಬರಹಗಳು ನಮಗೆ ಕಾಣಿಸುತ್ತವೆ.

ಸೃಜನಶೀಲ ಬರಹದೊಂದಿಗೆ ಅನುವಾದದಲ್ಲೂ ಸಾವಿತ್ರಮ್ಮನವರು ಛಾಪು ಮೂಡಿಸಿದ್ದಾರೆ. ರಷ್ಯಾದ ಮಹಾ ಲೇಖಕ ಚೆಕಾವ್ ಇವರ ಅಚ್ಚುಮೆಚ್ಚಿನ ಬರಹಗಾರ. ಆತನ ಹದಿಮೂರು ಸಣ್ಣಕಥೆಗಳನ್ನು ‘ಮದುವಣಗಿತ್ತಿ’ ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ. ಮೂರು ಕಿರು ಕಾದಂಬರಿಗಳಲ್ಲದೆ ಠಾಕೂರ್ ಹಾಗೂ ಭವಾನಿಭಟ್ಟಾಚಾರ್ಯರ ಕೆಲವು ಬರಹಗಳನ್ನೂ ಅನುವಾದಿಸಿದ್ದಾರೆ. ನಾನು ಇವರು ಅನುವಾದಿಸಿರುವ ಕೃತಿಗಳನ್ನು ಓದಿಲ್ಲವಾದ್ದರಿಂದ ಆ ಕುರಿತು ಮಾತನಾಡಲಾರೆ. ಆದರೆ ಇವರು ಅನುವಾದಿಸಿರುವ ‘ಮಧ್ಯಯುಗೀನ ಭಾರತದ ಚರಿತ್ರೆ’ ಎಂಬ ಕೃತಿ ಕುರಿತು ಪ್ರೊ. ಹಾಲಪ್ಪನವರು ಮೆಚ್ಚಿ ಮಾತಾಡಿದ್ದನ್ನು ಕೇಳಿದ ನೆನಪಿದೆ.

‘ಇವರ ಬರಹಗಳು ಹೆಣ್ಣಿನ ಸಮಸ್ಯೆಗಳನ್ನು ಪಟ್ಟಿ ಮಾಡುವಲ್ಲಿ ಆಸಕ್ತಿ ತೋರುತ್ತವೆಯೇ ಹೊರತು, ಪರಿಹಾರಗಳ ಬಗ್ಗೆ ಯೋಚಿಸುವುದಿಲ್ಲ’ ಮತ್ತು ‘ಶ್ರೀಮಂತಿಕೆಯ ದಂತಗೋಪುರದಲ್ಲಿ ಕುಳಿತು, ಸಮಾಜದ ಬಡವರನ್ನು ಅವಗಣಿಸಿದರು’ ಎಂಬೆಲ್ಲ ದೂರುಗಳ ನಡುವೆಯು ‘ಸಮಯ ಕಳೆಯಲು’ ಬರಹವನ್ನಾರಂಭಿಸಿದ ಎಚ್ ವಿ ಸಾವಿತ್ರಮ್ಮನವರ ಲೇಖನಿ ತನ್ನದೇ ಆದ ವೈಚಾರಿತಕತೆಯ ಮೆರಗಿನಿಂದ ನಮ್ಮದು ಅಡುಗೆಮನೆಯ ಸಾಹಿತ್ಯವೇನಲ್ಲ ಎಂದು ತಿರುಗೇಟು ನೀಡಿದೆ. ಇದೇ ಕಾರಣದಿಂದಾಗಿ ಆಧುನಿಕ ಸಾಹಿತ್ಯ ಚರಿತ್ರೆಯಲ್ಲಿ ಪಾಲು ಪಡೆದಿದೆ.
ಶ್ರೀಮಂತರ ಮಗಳು ,ಶ್ರೀಮಂತರ ಸೊಸೆಯಾಗಿದ್ದೂ ಸಾವಿತ್ರಮ್ಮನವರು ತಮ್ಮ ಹೆಣ್ಣು ಮಕ್ಕಳಿಗೆ ಕೋರಾ ಕೈಮಗ್ಗದ ಒರಟು ಬಟ್ಟೆಯಲ್ಲಿ ತಾವೇ ಲಂಗ ಜಾಕೀಟು ಹೊಲಿಯುತ್ತಿದ್ದರಂತೆ. ಇಂತದೇ ಅನೇಕ ಕ್ರಮಗಳು ಮನೆಯಲ್ಲಿದ್ದು ಮಕ್ಕಳು ಶ್ರೀಮಂತಿಕೆಯ ಲಕ್ಷಣವಿಲ್ಲದೆ ಬೆಳೆದವು ಎಂದು ಅದರ ಬಗ್ಗೆ ಅರೆಹೆಮ್ಮೆ ಅರೆ ಬೇಸರದಿಂದ ಸಾವಿತ್ರಮ್ಮನವರ ಮಗಳು ಬರೆದಿದ್ದಾರೆ. ಇದಕ್ಕೆ ‌ ಕಾರಣ ಸಾವಿತ್ರಮ್ಮನವರು ನಂಬಿದ್ದ ಸರಳತೆ ಮತ್ತು ಗಾಂಧಿವಾದ.

ದೇವರಿಗೆ ದೀಪ ಹಚ್ಚಬೇಕು ಅಂದರೆ ಸೂರ್ಯ ಚಂದ್ರ‌ ಎರಡು ದೀಪ ಸದಾ ಉರೀತಾವೆ, ನೀನು ಹಚ್ಚುವ ದೀಪ ಕಟ್ಟಿಕೊಂಡು ಭಗವಂತ ಏನ್ಮಾಡ್ತಾನೆ ಅಂತಿದ್ದರಂತೆ. ತಾತನ ಬಗ್ಗೆ ಬರೆದ ಪುಸ್ತಕದಲ್ಲಿ ಪುಣ್ಯಾತಗಿತ್ತಿ ಅದೆಷ್ಟು ನಿರ್ಲಿಪ್ತ ದೂರ ಸಾಧಿಸಿದ್ದಾರೆಂದರೆ ಇವರೇನು ಯಾರೋ ಅಪರಿಚಿತರ ಬಗ್ಗೆ ಬರೆದಂತಿದೆ ಅನಿಸುತ್ತದೆ. ಅದೂ ಅವರ ಸತ್ಯ ನಿಷ್ಠೆ.


  • ಡಾ. ಎಚ್.ಎಸ್. ಸತ್ಯನಾರಾಯಣ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading