ಲೇಖಕರಾದ ಹರಿನರಸಿಂಹ ಉಪಾಧ್ಯಾಯ ಅವರ ‘ವಿದ್ಯಾ ದದಾತಿ’ ಕೃತಿಯಲ್ಲಿ ೭೦ ಚಿಂತನಾರ್ಹ ಬರಹಗಳಿದ್ದು, ಕೆ.ವಾಣಿಶ್ರೀ ಅಶೋಕ್ ಐತಾಳ್ ಅವರು ಈ ಕೃತಿಯ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ: ವಿದ್ಯಾ ದದಾತಿ
ಲೇಖಕರು: ಹರಿನರಸಿಂಹ ಉಪಾಧ್ಯಾಯ
ಪ್ರಕಾರ : ಚಿಂತನಾರ್ಹ ಬರಹಗಳು
ಶ್ರೀ ಹರಿನರಸಿಂಹ ಉಪಾಧ್ಯಾಯರು ಸಾರಸತಿಯ ಪದತಲಕೆ ಒಟ್ಟು 14 ಪ್ರಕಟಿತ ಕೃತಿಗಳನ್ನು ಅರ್ಪಿಸಿದ್ದಾರೆ ವಿದ್ಯಾದದಾತಿಯು ಲೇಖಕರ ಹದಿನೈದನೇ ಹೊತ್ತಗೆಯಾಗಿದ್ದು ಈ ಹೊತ್ತಗೆಯ ಹೂರಣವನ್ನು ಹಾಗೊಮ್ಮೆ ಅವಲೋಕಿಸಿದಾಗ ಈಗಾಗಲೇ ಪ್ರಕಟಿಸಿದ ಉಪಾಧ್ಯಾಯರ ಎಲ್ಲಾ ಕೃತಿಗಳಿಗಿಂತ ಇದು ಬಹು ಭಿನ್ನವಾದ ಹೊಸ ಪಡಿಯೆನ್ನುವುದರಲ್ಲಿ ಇಬ್ಬಗೆಯ ಮಾತಿಲ್ಲ
ಬದುಕಿನಲ್ಲಿ ವಿದ್ಯೆಯ ಮಹತ್ವ ಸಾರುವ ಸುಭಾಷಿತದ ಮೊದಲ ಪದವು ಪುಸ್ತಕದ ನೊಸಲ ತಿಲಕವಾಗಿರುವುದು ಬಹುವೇದ್ಯವಾಗಿದೆ. ಸಮಾಜದ ಜನಸಾಮಾನ್ಯರ ಪ್ರಸ್ತುತ ಸಮಸ್ಯೆಗಳು ಹಾಗೂ ಅಗತ್ಯತೆಗಳ ಮೇಲೆ ಬೆಳಕು ಚೆಲ್ಲುವುದು ಪ್ರತಿಯೋರ್ವ ಸಾಹಿತಿಯ ಬಾದ್ಯತೆಯಾಗಿದೆ. ಲೇಖಕರು ಈ ಗ್ರಂಥ ಬರೆಯುವುದರ ಮೂಲಕ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ ಎನ್ನಬಹುದು.

ಈ ಕೃತಿಯಲ್ಲಿ ಸಂಗ್ರಹವಾಗಿರುವ ೭೦ ಲೇಖನಗಳು ಜೀವನದ ವಿವಿಧ ಆಯಾಮಗಳನ್ನು ಸ್ಪರ್ಶಿಸುತ್ತವೆ. ಇದರಲ್ಲಿ ಮಾತು, ಬದುಕಿನ ಮಾಯೆ, ಸೌಂದರ್ಯ, ಕರ್ತವ್ಯ, ಭಾಷೆ, ಕೋಪ ತಾಪಗಳು, ಭಗವದ್ ಸಾಕ್ಷಾತ್ಕಾರ, ಪ್ರಯತ್ನ, ಶ್ರೀಮಂತಿಕೆ, ಹೀಗೆ ಅನೇಕ ವಿಷಯಗಳನ್ನು ಸರಳ, ಸುಲಭ ಮತ್ತು ಮನಮುಟ್ಟುವ ಶೈಲಿಯಲ್ಲಿ ಇಲ್ಲಿ ನಿರೂಪಿಸಲಾಗಿದೆ. ಪ್ರತಿಯೊಂದು ಲೇಖನವೂ ಓದುಗರನ್ನು ಆಲೋಚನೆಗೆ ಹಚ್ಚುವ ಜೊತೆಗೆ ಬದುಕಿನ ಸಕಾರಾತ್ಮಕ ದಿಕ್ಕಿನತ್ತ ಮುನ್ನಡೆಸುವ ಪ್ರಯತ್ನ ಮಾಡುತ್ತದೆ. ಈ ಪುಸ್ತಕದ ಹಲವು ಅಧ್ಯಾಯಗಳು ಕೆಲವು ಪ್ರತಿಷ್ಠತ ಪತ್ರಿಕೆಗಳಲ್ಲಿ ಪ್ರಕಟವಾಗಿರುವುದು ಲೇಖನಗಳ ವಿಚಾರ ಭೂಯಿಷ್ಟತೆಗೆ ಸಾಕ್ಷಿಯಾಗಿದೆ.
ಯಾವುದೇ ಒಂದು ವಿಚಾರದ ಕುರಿತಾಗಿ ಅಲ್ಪಸ್ವಲ್ಪ ಗೊತ್ತಿದ್ದರೂ ತಾನ್ ಸಂಪೂರ್ಣ ತಿಳಿದಂತೆ ಜಂಬಿಸುವುದು ನಿಜಕ್ಕೂ ವಿದ್ಯೆಗೆ ಅಪಚಾರವೆಸಗಿದಂತೆಯೇ ಸರಿ. ಎಂದು ಲೇಖಕರ ಮೊದಲ ಲೇಖನವಾದ ವಿದ್ಯಾದದಾತಿ ಯಲ್ಲಿ ಉದೃತವಾಗಿದೆ. ಎಂದೋ ಕಲಿತ ಜ್ಞಾನವನ್ನು ಇಂದು ಪ್ರಸ್ತುತವೆಂದು ಬೀಗುವುದು ಅಪಾಯಕಾರಿ ಸನ್ನಿವೇಶವನ್ನು ತಂದೊಡ್ಡಬಹುದು ಎನ್ನುತ್ತಾರೆ. ಸುಂದರ ಉಡುಪು ಮೇಲ್ನೋಟವನ್ನು, ಆದರೆ ಒಳ್ಳೆಯ ಗುಣ ಬದುಕನ್ನೇ ಅಂದಗೊಳಿಸುತ್ತದೆ ಎಂಬ ಲೇಖಕರ ಸಾಲುಗಳು , ಬೇಂದ್ರೆಯವರ ಕವಿತೆಯನ್ನು ನೆನಪಿಸುತ್ತದೆ.
“ಸೌಂದರ್ಯವೆಂಬುದು ಕಣ್ಣಿನ ತುತ್ತಲ್ಲ
ಕಣ್ಣಿಗೂ ಕಣ್ಣಾಗಿ ಒಳಗಿಹುದು,
ರೂಪ ಲಾವಣ್ಯಕ್ಕೆ ದೊರೆಯಲು ಬಾರದು
ಅವುಗಳೇ ಇದರೊಂದು ಕಣವಿಹವು”
ಉಡುಪು, ಲಾವಣ್ಯ, ಮಾತಿನ ವೈಖರಿ ಇಂತಹ ಮೇಲ್ನೋಟ ಸೌಂದರ್ಯವು ವ್ಯಕ್ತಿಯನ್ನು ವ್ಯಾವಹಾರಿಕವಾಗಿ ಎತ್ತರಕ್ಕೇರಿಸಬಹುದು. ಆದರೆ ಅಂತರಂಗದಲ್ಲಿರುವ ಸದ್ಗುಣಗಳು, ವ್ಯಕ್ತಿಯ ಸರಳ ವ್ಯಕ್ತಿತ್ವವು ಆತನನ್ನು ಮೇರು ವ್ಯಕ್ತಿತ್ವದ ಅಂದಣದಲ್ಲಿ ಕೂರಿಸುತ್ತದೆ ಎಂಬುದನ್ನು ಬಹಳ ಮಾರ್ಮಿಕವಾಗಿ ಮೇಲ್ನೋಟದ ಸೌಂದರ್ಯ ಎಂಬ ಲೇಖನದಲ್ಲಿ ವ್ಯಕ್ತಪಡಿಸಿದ್ದಾರೆ.

ತಾಳ್ಮೆ ಎಂದರೆ ಎಂಬ ಲೇಖನದಲ್ಲಿ ತಾಳ್ಮೆ ಹೇಗಿರಬೇಕು ಎಂಬುದನ್ನು ಬಹಳ ಸೂಚ್ಯವಾಗಿ ವಿವರಿಸಿದ್ದಾರೆ “ರಾತ್ರಿರ್ಗಮಿಷ್ಯತಿ ಭವಿಷ್ಯತಿ ಸುಪ್ರಭಾತ” ಎಂದು ರಾತ್ರಿ ಕಮಲದೊಳಗೆ ಸಿಕ್ಕಿಬಿದ್ದ ದುಂಬಿಯೊಂದು, ಹೊರಬರಲು ಪ್ರಯತ್ನಿಸದೇ ಬೆಳಗಾದರೂ ತಾಳ್ಮೆಯಿಂದ ಕಾಯುತ್ತದೆ. ಬೆಳಗಾದರೂ ಹಾರಿ ಹೋಗದ ದುಂಬಿಯು ಆನೆಯ ಕಾಲ್ತುಳಿತಕ್ಕೆ ಸಿಲುಕಿ ಸತ್ತಂತೆ, ತಾಳ್ಮೆ ವಹಿಸುವುದೇನೋ ಸರಿ ಆದರೆ ಯಾವುದೇ ಪ್ರಯತ್ನವಿಲ್ಲದೆ ಸುಮ್ಮನೆ ತಾಳಿಕೊಂಡರೆ ಯಶಸ್ಸು ಕಾಣಲು ಸಾಧ್ಯವೇ..? ತಾಳ್ಮೆ ವಹಿಸಬೇಕು. ಆದರೆ ಅದಕೂ ಮಿತಿಯಿರಬೇಕು ಎಂಬ ವಿಚಾರದ ಮೇಲೆ ಬೆಳಕು ಚೆಲ್ಲುತ್ತದೆ.
ಈ ಪುಸ್ತಕದ ಪ್ರತಿ ಅಧ್ಯಾಯವೂ ಅತಿ ಚಿಕ್ಕದಾಗಿ, ಚೊಕ್ಕಟವಾಗಿದ್ದು ಒಂದೇ ಉಸಿರಿಗೆ ಓದಿಸಿಕೊಂಡು ಹೋಗುತ್ತದೆ. ಲೇಖನದ ಶೀರ್ಷಿಕೆಗಳು ಆಕರ್ಷಣೀಯ. ಅತ್ಯಂತ ಸರಳವಾಗಿ ಹೇಳಬೇಕಾದ್ದನ್ನು ಹೇಳಲಾಗಿದೆ. ಹಿರಿಯರಿಗಷ್ಟೇ ಅಲ್ಲದೇ, ಕಿರಿಯರೂ ಸಹ ಕೈಗೆತ್ತಿಕೊಂಡು ಓದುವಷ್ಟು ಸೊಗಸಾಗಿದೆ. ಮೌಲ್ಯಗಳು ಮರೆಯಾಗುತ್ತಿರುವ ಈ ಕಾಲಘಟ್ಟದಲ್ಲಿ ಯುವ ಪೀಳಿಗೆಗೆಂದೇ ಬರೆದ ಮೌಲಿಕ ಗ್ರಂಥ ಇದಾಗಿದೆ.
ಸಂಸಾರ ವಿಷವೃಕ್ಷಸ್ಯ ದ್ವೇ ಫಲೇ ಹಿ ಅಮೃತೋಪಮೇ ಸುಭಾಷಿತ ರಸಸ್ವಾದಃ ಸಂಗತಿಸ್ಸಜನೈಸಹ. ಎನ್ನುವಂತೆ ಶ್ರೀಯುತ ಹರಿನರಸಿಂಹ ಉಪಾಧ್ಯಾಯರು ಅಮೃತ ಸದೃಶ ಸಜ್ಜನ ಬಂಧುವೂ ಹೌದು. ಜೊತೆಗೆ ವಿದ್ಯಾದದಾತಿ ಎಂಬ ಅಮೃತೋಪಮೆಯ ಪುಸ್ತಕವನ್ನು ಲೋಕಾರ್ಪಣೆಗೊಳಿಸುತ್ತ ಸಾರಸ್ವತ ಲೋಕದಲ್ಲಿ ಇನ್ನೊಂದು ಮೈಲಿಗಲ್ಲನ್ನು ನಿರ್ಮಿಸಲು ಹೊರಟಿದ್ದಾರೆ. ಹೀಗಿರಲು ಅವರ ಬರೆಹ ಯಾನ ಬಹು ದೂರ ಸಾಗಲಿ, ಇನ್ನಷ್ಟು ಸಮ್ಮಾನಗಳು ಅವರನ್ನರಸಿ ಬರಲಿ.
- ಕೆ. ವಾಣಿಶ್ರೀ ಅಶೋಕ್ ಐತಾಳ್ – ವಿಜ್ಞಾನ ಸಹಶಿಕ್ಷಕರು, ಕುಂದಾಪುರ.
