ಡಾ.ಎಚ್ ಎಸ್ ಅನುಪಮಾ ಅವರ ‘ಸಬರಮತಿ’ ಪುಸ್ತಕದ ಕುರಿತು ಅಮೃತ ಎಂ ಡಿ ಅವರು ಬರೆದಿರುವ ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕದ ಹೆಸರು : ಸಬರಮತಿ
ಲೇಖಕಿ : ಡಾ.ಎಚ್ ಎಸ್ ಅನುಪಮಾ
ಪ್ರಕಾಶನ : ಲಡಾಯಿ
ಪುಟಗಳು : ೮೮
ಬೆಲೆ : ೮೦

ಅಂತರಂಗದಲ್ಲಿ ಅಂತಃಕರಣ ಜ್ವಲಿಸಿದರೆ ಮಾತ್ರ ಅಂತಸ್ಥ ಭಾವನೆಗಳು ಪದವಾಗಿ, ಕಾವ್ಯವಾಗಿ ಓದುಗನ ಮೆದುಳು ದಾಟಿ ಹೃದಯದಲ್ಲಿ ನೆಲೆಸುತ್ತವೆ. ಕಬ್ಬ ಓದುಗನಿಗೆ ತೀರ ಹತ್ತಿರ ನಿಲ್ಲಬೇಕು, ಆತನನ್ನು ಸೆಳೆದುಕೊಳ್ಳಬೇಕು, ನೋವು ನಲಿವಿಗೆ ಕಾರಣವಾಗಿ ಕಣ್ಣಹನಿ ಮಡುಗಟ್ಟಿ ಹರಿಯಬೇಕು. ಗರ್ಭ ಕಟ್ಟಿದ ಭಾವ ನೋವ ಮೀರಿ ನಲಿವಾಗಿ ಎದೆಯ ಲಹರಿ ತುಂಬಬೇಕು. ಕಾವ್ಯ ಬರಹಗಾರನ ಬದುಕಾಗಿ ನಲಿಯುವುದಕ್ಕಿಂತ ಓದುಗನ ಮನಸ್ಸಿನಲ್ಲಿ ಬೆಳೆಯಬೇಕು, ಹಬ್ಬ ಬೇಕು. ಓದಿದ ತರುವಾಯ ಮೊಗದ ಮೇಲೆ ನೋವಿನ ಛಾಯೆಯೋ, ಸಂತೋಷದ ಅಲೆಯೋ ಮಿನುಗಬೇಕು ಇಂತಹ ಕಾವ್ಯ ಕಥನವನ್ನು ನಾವಿಲ್ಲಿ ಕಾಣಬಹುದು.
ನನ್ನ ಆವರಿಸಿದ ಒಂದೆರಡು ಸಾಲುಗಳ ಝಲಕ್ :
ಕ್ರೋದಾಗ್ನಿಗೆ ಅಡುಗೆಯೊಲೆ ಅಡುಗೆ ಬೇಯಿಸಿತೆ ,
ವಿರಸದ ಹಬೇ ಮೋಡವಾಗಿ ಮಳೆಯ ಸುರಿಸೀತೆ
ಮುಂಬೆಳಗು ಸಂಜೆಗಳ ಕೇಸರಿಯ ದಿಗುತಟಕೆ
ಹಾರುವೆನು ಹದ್ದು ಗಣ್ಣ ಕುಹಕ ಕಾಣದಂತೆ
ನದಿಯಾಗುವದು ಎಂದರೆ ಏನೆಂದುಕೊಂಡೆ ನೀನು
ತಡೆದಾಗ ನಿಲುವುದು, ಮೀರಲೆಂದು ಉಕ್ಕುವುದು,
ಜೊತೆಯಾಗುವುದು ಕೂಡಿ, ಎದುರಾಗಿ ಹಾಯ್ದು
ಪಾತ್ರ ಅಗಲಿಸಿ ಕೊಳುತ ದಂಡೆ ಕಳೆದು ಕೊಳ್ಳುವುದು
ಒಲೆ ಹತ್ತಿ ಉರಿದೊಡೆ ನಿಲ್ಲಬಹುದು ಧರೆ ಹೊತ್ತಿ ಉರಿದೊಡೆ ನಿಲ್ಲಬಹುದೆ..? ನಾಯಕನೇ ಭಕ್ಷಕನಾಗಿ ನಿಂತರೆ ಪ್ರಜೆಗಳ ಬದುಕು ನಡು ದಾರಿಯಲ್ಲಿ ಕೈ ಬಿಟ್ಟ ನಾವಿಕಂತೆ ಅಲ್ಲವೇ?.

ಬದುಕ ಸರಳೀಕರಿಸಿದಷ್ಟು ಎಲ್ಲರಿಗೂ ಸಮಾನತೆಯ ಸಮತ್ವತೆಯ ಜೀವನ ದಕ್ಕುತ್ತದೆ. ಗಾಂಧಿ ಹೇಳಿದ್ದು ಇದನ್ನೇ, ಅನುಸರಿಸುವ ಸದ್ಬುದ್ಧಿ ನಮಗೆ ಎಲ್ಲಿದೆ.. ಬಾಳು ಬಂಗಾರ ಆಗಬೇಕು ಎಂದರೆ ಬಂಗಾರದ ಗಣಿ ಬೇಕಿಲ್ಲ, ಎಲ್ಲರನ್ನೂ ಅಪ್ಪುವ ಒಪ್ಪುವ ಮನಸು ಬೇಕು . ಇದು ಎಲ್ಲರಿಂದ ಸಾಧ್ಯವುಂಟೆ..?
ಗಾಂಧಿ, ಕಸ್ತೂರ ಬಾ ಇಂತಹವರ ಬದುಕು ಸಾಕ್ಷೀಕರಿಸಿದ್ದು ಇದ್ದನ್ನೆ ಅಲ್ಲವೇ..?
- ಅಮೃತ ಎಂ ಡಿ
