ಸರ್ಕಾರಿ ಕನ್ನಡ ಶಾಲೆಗಳು ಉಳೀತಿಲ್ಲ ಅಂತ ಯಾರಿಗೋ ಬೆರಳು ಮಾಡಿ ಬೈಯುವುದಕ್ಕಿಂತ ನಾವೇ ನಮ್ಮ ಶಾಲೆಯನ್ನು ಉಳಿಸೋಕೆ ಮೊದಲು ಕೈ ಜೋಡಿಸಿದ್ರೆ ಕನ್ನಡ ಶಾಲೆಗಳು ಉಳಿಬಹುದಲ್ವಾ? …ಪ್ರತಿವರ್ಷ ಕನ್ನಡ ಶಾಲೆಯಿಂದ ಎಷ್ಟೋ ಮಕ್ಕಳು ಓದಿ ಹೊರಗೆ ಬರುತ್ತಾರೆ. ಅವರೆಲ್ಲ ಒಳ್ಳೆ ಹುದ್ದೆಯಲ್ಲಿರುತ್ತಾರೆ. ಅವರ ಊರಿನ ಶಾಲೆಗಳನ್ನ ಉಳಿಸುವಲ್ಲಿ ಪ್ರತಿಯೊಬ್ಬರೂ ಮನಸ್ಸು ಮಾಡಿದ್ರೆ ಕನ್ನಡ ಶಾಲೆ ಉಳಿಯುತ್ತೆ ಅಲ್ವಾ?…ಇಂತಹ ಆಲೋಚನೆಯನ್ನು ಇಟ್ಟುಕೊಂಡು ಸರ್ಕಾರಿ ಕನ್ನಡ ಶಾಲೆಯನ್ನು ಉಳಿಸುತ್ತಿರುವ ಈ ಊರಿನ ಜನ.
ಸಮಾಜದಲ್ಲಿ ಒಳ್ಳೆಯ ಗುಣಗಳು ಇವೆ ಅದನ್ನು ಸ್ವಚ್ಚ ಕಣ್ಣುಗಳಿಂದ ನೋಡಬೇಕು ಅಷ್ಟೇ. ಖಾಸಗಿ ಶಾಲೆಗಳ ಪೈಪೋಟಿ, ಶಿಕ್ಷಣದ ಬಗ್ಗೆ ಬದಲಾದ ದೃಷ್ಟಿಕೋನ,ಆಂಗ್ಲ ಶಿಕ್ಷಣದ ಪ್ರಭಾವ ಓಡುತ್ತಿರುವ ಜಗತ್ತು. ಬದಲಾದ ವ್ಯವಹಾರಿಕ ದೃಷ್ಟಿಕೋನ ಇವಗಳ ನಡುವೆ,ವಿದ್ಯಾರ್ಥಿಗಳ ಕಲರವ ಇಲ್ಲದೆ ಅನೇಕ ಸರ್ಕಾರಿ ಶಾಲೆಗಳು ಮುಚ್ಚಿ ಹೋದವು, ಇನ್ನಷ್ಟು ಶಾಲೆಗಳು ಬೆರಳೆಣಿಕೆಯ ವಿದ್ಯಾರ್ಥಿಗಳ ಜೊತೆ ಸೆಣಸಾಟ ಮಾಡುತ್ತಾ ನಿಂತವು.
ಇದಕ್ಕೆ ಕಾರಣ ನೂರು ಇರಬಹುದು. ನನ್ನ ಬರಹದ ಉದ್ದೇಶ ಶಾಲೆ ಮುಚ್ಚಲು ಕಾರಣ ಏನು ಎಂಬುದು ಅಲ್ಲವೆ ಅಲ್ಲಾ. ಸರ್ಕಾರಿ ಶಾಲೆಗಳ ಉಳಿವು ಯಾಕೆ, ಅದಕ್ಕೆ ನಾವೇನು ಮಾಡಬಹುದು ಎಂಬುದಷ್ಟೇ.

ಈ ಪ್ರಯತ್ನದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗಣಪತಿ ಕಟ್ಟೆ (ಗಡಿಗೇಶ್ವರ) ಇಲ್ಲಿನ ಶಿಕ್ಷಕಿಯರ ಕನಸು ಶ್ರಮ ಇಂದು ನಿಧಾನಕ್ಕೆ, ಸಸಿಯೊಂದು ಹಸಿರ ಚಿಗುರು ಧರಿಸಿದ ಸಂಭ್ರಮದಲ್ಲಿ ಇದೆ.
ಕಳೆದ ಶೈಕ್ಷಣಿಕ ವರ್ಷದಲ್ಲಿ ಸ್ಥಳೀಯ ಪೋಷಕರು,ಶಾಲಾಭಿವೃದ್ಧಿ ಸಮಿತಿಯ ಸಹಕಾರದೊಂದಿಗೆ, “ಮನ್ವಂತರ” ಎಂಬ ಹಿರಿಯ ವಿದ್ಯಾರ್ಥಿ ಸಂಘ ರಚಿಸಿಕೊಂಡು ಸಮಾನ ಮನಸ್ಕ ವ್ಯಕ್ತಿಗಳ ಸಹಕಾರದೊಂದಿಗೆ ಶಾಲೆಯನ್ನು ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಬೆಳೆಸುವ ಬಗ್ಗೆ ಚರ್ಚೆ ನಡೆಸಿ. ಅ ನಿಟ್ಟಿನಲ್ಲಿ ಶಾಲೆಯ ತಡೆಗೋಡೆಗೆ ರಂಗ ಮಂದಿರಕ್ಕೆ ಸ್ಥಳೀಯ ಸಹೃದಯಿ ದಾನಿಗಳ ಸಹಕಾರದೊಂದಿಗೆ ಸುಣ್ಣ ಬಣ್ಣ ಮಾಡಿ,ಒಂದಿಷ್ಟು ಮೂಲಭೂತ ಅಗತ್ಯತೆಗಳನ್ನು ಒದಗಿಸಿ. ಈ ಶೈಕ್ಷಣಿಕ ವರುಷದಲ್ಲಿ ಪೂರ್ವ ಪ್ರಾಥಮಿಕ ಶಾಲೆ (ಎಲ್ಕೆಜಿ ಮತ್ತು ಯುಕೆಜಿ) ಆಂಗ್ಲ ಮಾಧ್ಯಮದಲ್ಲಿ ಪ್ರಾರಂಭ ಮಾಡಿದ್ದೇವೆ. ಮೊದಲ ಪ್ರಯತ್ನಕ್ಕೆ ದಾಖಲಾತಿ ಉತ್ತಮ ಮಟ್ಟದಲ್ಲಿ ಇದೆ. ಪೋಷಕರು ಹಿರಿಯ ವಿದ್ಯಾರ್ಥಿಗಳು ಸೇರಿ ಒಬ್ಬರು ಅಥಿತಿ ಶಿಕ್ಷಕಿಯನ್ನು ನೇಮಿಸಿಕೊಂಡಿದೆ. ಗ್ರಾಮದ ಸಣ್ಣ ಮಕ್ಕಳು ಅವರ ಗರಡಿಯಲ್ಲಿ ನಗುವ ಕುಸುಮಗಳಂತೆ ಕಾಣುತ್ತಿವೆ.

ಶಾಲೆ ಮುಚ್ಚಲು ಕಾರಣ ಹುಡುಕುವ ಬದಲು,ಶಾಲೆಯನ್ನು ಗಟ್ಟಿ ಗೊಳಿಸಲು ಹೊರಟ ನಮ್ಮ ಪ್ರಯತ್ನಕ್ಕೆ ಆರಂಭದ ಫಲ ಸಿಗುತ್ತಿದೆ. ಸರ್ಕಾರಿ ಶಾಲೆ ಯಾಕೆ? ಎನ್ನುವ ಸಮಾಜದಲ್ಲಿ ಶಾಲೆಯ ದಾಖಲಾತಿ ಸಂಖ್ಯೆ ಕೂಡ ಹೆಚ್ಚುತ್ತಾ ಇದೆ. ಗುಣ ಮಟ್ಟದ ಶಿಕ್ಷಣ ಕೊಟ್ಟರೆ. ಅದನ್ನು ಸ್ವೀಕಾರ ಮಾಡಲು ಸಮಾಜ ಸಿದ್ಧವಿದೆ. ಎನ್ನುವ ಗುರುತು ಕಾಣಿಸುತ್ತ ಇದೆ.
ನಮ್ಮ ಮುಂದೆ ಒಂದಿಷ್ಟು ಕನಸಿದೆ. ಗ್ರಾಮದ ನೆಲದ ಮಣ್ಣಿನ ಜೊತೆ ಜೊತೆಯೇ ಉನ್ನತ ಮಟ್ಟದ ನೈತಿಕ ಹಾಗೂ ಮೌಲಿಕ ಶಿಕ್ಷಣ ನೀಡುವ ಗುರಿ ನಮ್ಮ ಮುಂದಿದೆ. ಶಾಲೆ ಪ್ರತಿಷ್ಠಿತ ಖಾಸಗಿ ಶಾಲೆಗಳ ಜೊತೆ ಸ್ಪರ್ದೆ ಮಾಡಲು, ಒಂದಿಷ್ಟು ಅಗತ್ಯ ವಸ್ತುಗಳು ಸೌಕರ್ಯಗಳು ಬೇಕು. ಶಾಲೆಯಲ್ಲಿ ಒಂದು” ಸ್ಮಾರ್ಟ್ ಕ್ಲಾಸ್ ” ಸುಸಜ್ಜಿತ ಟಾಯ್ಲೆಟ್, ಆಟದ ಮೈದಾನ, ಹಾಗೂ ಸುಂದರ ಹೂದೋಟ,ನಿರ್ಮಿಸುವ ಜೊತೆಗೆ ಮಲೆನಾಡಲ್ಲಿ ಒಂದು ಮಾದರಿ ಸರ್ಕಾರಿ ಶಾಲೆ ನಿರ್ಮಾಣ ಮಾಡುವ ಕನಸು ನಮ್ಮದು. ಇದಕ್ಕೆ ನಿಮ್ಮೆಲ್ಲರ ಸಹಕಾರ ಕೂಡ ಅಗತ್ಯ .

ನಮ್ಮ ಈ ಹೊಸ ಹೆಜ್ಜೆಗೆ ಬೆನ್ನೆಲುಬು ಆಗಿ ನಿಂತ ಶಿಕ್ಷಕರಿಗೆ, ಕ್ಷೇತ್ರ ಶಿಕ್ಷಣಾಧಿಕಾರಿ ಮೇಡಂ ಅವರಿಗೆ, ಸ್ಥಳೀಯ ಜನಪ್ರತಿನಿಧಿಗಳಿಗೆ,ಗ್ರಾಮಸ್ಥರಿಗೆ ನಾವು ಚಿರ ಋಣಿಗಳು. ಸರ್ಕಾರಿ ಶಾಲೆ ಉಳಿದರೆ ಬೆಳೆದರೆ ಗ್ರಾಮವೇ ಬೆಳೆದಂತೆ. ನಮ್ಮ ಶಾಲೆಯನ್ನು ನಾವೇ ಉಳಿಸೋಣ.
- ರತ್ನಾಕರ್ ಗಡಿಗೇಶ್ವರ
