ಧಾರಾಳವಾಗಿ ಸಿಗುತ್ತಿದ್ದ ನಳದ ನೀರು. ಇಂದು ಲೆಕ್ಕವಿಟ್ಟು ಖರ್ಚು ಮಾಡುವ ಹಂತಕ್ಕೆ ಬಂದು ಬಿಟ್ಟಿದ್ದೇವೆ. ಇಷ್ಟಕ್ಕೂ ಕಾರಣಗಳು ಏನು?..ರತ್ನಾಕರ ಗಡಿಗೇಶ್ವರ ಅವರ ಬರಗಾಲದ ಕುರಿತಾದ ಲೇಖನವನ್ನು ತಪ್ಪದೆ ಓದಿ…
ಎಲ್ಲೆಲ್ಲೂ ನೀರಿನದೆ ಮಾತು, ಆಗಸದತ್ತ ಕಣ್ಣು, ಬತ್ತಿದ ಕೆರೆಗಳು ಸೊರಗಿದ ಹಳ್ಳಗಳು.ಇಂಗಿ ಹೋದ ಕೊಳವೆಬಾವಿಗಳು.ಒಣಗಿ ನಿಂತ ತೋಟಗಳು.ಕಣ್ಣೆದುರಿಗೆ ಸುಟ್ಟು ಹೋಗುತ್ತಿರುವ ನೆಟ್ಟ ಗಿಡಗಳು. ದಿನಕ್ಕೆ ಮೂರು ಬಾರಿ ವೆದರ್ ರಿಪೋರ್ಟ್ ಚೆಕ್ ಮಾಡುವ ಮನಸ್ಸುಗಳು. ಧಾರಾಳವಾಗಿ ಸಿಗುತ್ತಿದ್ದ ನಳದ ನೀರು. ಇಂದು ಲೆಕ್ಕವಿಟ್ಟು ಖರ್ಚು ಮಾಡುವ ಹಂತಕ್ಕೆ ಬಂದು ಬಿಟ್ಟಿದೆ.
ಇಷ್ಟಕ್ಕೂ ಕಾರಣಗಳು ಏನು, ಪರಿಸರ ಚಕ್ರದಲ್ಲಿ ಸಹಜವಾಗಿ ಮೂರು ನಾಲ್ಕು ವರ್ಷಗಳಿಗೆ ಒಮ್ಮೆ ಈ ರೀತಿಯ ಬರದ ಛಾಯೆ ಎದ್ದು ನಿಂತೆ ನಿಲ್ಲುತ್ತದೆ. ಇದರತ್ತ ಬೊಟ್ಟು ಮಾಡಿ ನಿಂತು ಬಿಡುವ ಎಂದರೆ ಕಾರಣ ಇಷ್ಟೇ ಅಲ್ಲಾ, ಬದಲಾದ ಕೃಷಿ ಪದ್ಧತಿ, ನೀರನ್ನು ಉಳಿಸುವ ಇಂಗಿಸುವ ಪ್ರಯತ್ನ ಮಾಡದೆ ಇರುವುದು,ಜೊತೆಗೆ ಅಗತ್ಯಕ್ಕಿಂತ ಹೆಚ್ಚು ನೀರು ಬಳಕೆ ಮಾಡುವುದು. ನೀರು ಮುಗಿಯದ ಸಂಪನ್ಮೂಲ ಎಂದುಕೊಂಡು ಬಿಟ್ಟಿದ್ದೇವು.ಸಹಜವಾಗಿ ನಂಬಿಕೊಂಡು ಬಂದಿದ್ದೆವು. ನೆಲಕ್ಕೆ ಬಿದ್ದ ನೀರು ಇಂಗಲೆ ಬೇಕಲ್ಲ. ಹಾಗಾದರೆ ಇಂಗಿದ ನೀರು ಅಂತರ್ಜಲದಲ್ಲಿ ಉಳಿಯಲೆ ಬೇಕಲ್ಲ. ಹಾಗಾದರೆ ನೀರಿಗೆ ಯಾಕೆ ಇಷ್ಟು ಆಹಾಕಾರ. ಬಹುಶಃ ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡಿದ ಎಂಬ ಗಾದೆ ಮಾತು ಅಕ್ಷರಶಃ ಇಲ್ಲಿಗೆ ಅನ್ವರ್ಥ ಆಗುತ್ತದೆ.
ಒಮ್ಮೆ ಹಿಂದಿನ ದಶಕಗಳತ್ತ ಕಣ್ಣು ಹಾಯಿಸಿ ಬಿಟ್ಟರೆ. ನಮ್ಮ ಸಂಸ್ಕೃತಿಯಲ್ಲಿ ನೀರನ್ನು ಗಂಗೆ ಎಂದೇ ದೇವತಾ ಸ್ವರೂಪದಲ್ಲಿ ಪೂಜಿಸುತ್ತಾ ಬಂದೆವು , ಪವಿತ್ರವಾದ ಸ್ಥಾನ ಕೂಡ ಕೊಟ್ಟೆವು. ನಮ್ಮ ಪೂರ್ವಜರು ಯಾರಾದ್ರೂ ನೀರನ್ನು ಅಪವಿತ್ರ ಮಾಡಿದ್ರೆ ಬೈತಾ ಇದ್ರು. ರಾಜರ ಕಾಲದಲ್ಲಿ ಯಾವ ರಾಜ ಎಷ್ಟು ಕೆರೆ ಕಟ್ಟಿಸಿದ ಎನ್ನುವುದರ ಮೇಲೆ ಅವನ ಶ್ರೇಷ್ಟತೆಯ ಅಳೆಯಲಾಗುತಿತ್ತು. ಸವಿ ನೆನಪಿಗೆ ಕೆರೆ ಕಟ್ಟಿಸಲಾಗುತಿತ್ತು. ಅ ಕೆರೆ ಸಾರ್ವಜನಿಕ ಉಪಯೋಗಕ್ಕೆ ಬರುವಂತೆ ವ್ಯವಸ್ಥೆ ಮಾಡಿ ಆಯಕಟ್ಟಿನ ಜಾಗದಲ್ಲಿ ಕಟ್ಟಲಾಗುತಿತ್ತು. ಹಿಂದಿನ ಕೆರೆಯ ಹೆಸರುಗಳೇ ಅದಕ್ಕೆ ನಿದರ್ಶನ. ಆದರೆ ನಾವು ಆಧುನಿಕತೆಗೆ ತೆರೆದುಕೊಳ್ಳುತ್ತಲೇ,,ಊರಿಗೆ ಬದಲು ಮನೆಗೆ ಎನ್ನುವ ನಿರ್ಧಾರಕ್ಕೆ ಬಂದೆವು ಅದರ ಫಲಶ್ರುತಿ ಉಣ್ಣುತ್ತ ಇದ್ದೇವೆ.

ಫೋಟೋ ಕೃಪೆ : google
ಯಾವ ನೆಲದಲ್ಲಿ ನೀರನ್ನು ಪೂಜಿಸುತ್ತಾ ಇದ್ದೇವೋ ಅದೇ ನೆಲದಲ್ಲಿ ನೀರನ್ನು ಟಿ ಎಂಸಿ ಅಲ್ಲಿ ಅಳೆಯಲು ಶುರು ಮಾಡಿದೆವು. ನಮ್ಮ ಮನೆಯ ಕೊಳವೆ ಬಾವಿ ಸ್ವಚ್ಛವಾಗಿದ್ದರೆ ಸಾಕು. ಊರ ಕೆರೆಗೆ ಕಸ ಕಡ್ಡಿ ಪ್ಲಾಸ್ಟಿಕ್, ಬಾಟಲಿ ಎಸೆದು ಬರುವ ಪರಿಪಾಠ ಬೆಳೆಸಿಕೊಂಡೆವು. ಕೆರೆಯ ಹೂಳು ಎತ್ತುವ ಪ್ರಯತ್ನ ಸಂಪೂರ್ಣ ಬಿಟ್ಟೆ ಬಿಟ್ಟೆವು. ಇನ್ನೂ ಗದ್ದೆಗಳ ಉಸಾಬರಿ ಬೇಡ ಎಂದು ಅಡಿಕೆ ತೋಟಕ್ಕೆ ಮಾರು ಹೋದೆವು. ಮಳೆಗಾಲದಲ್ಲಿ ಅಡಿಕೆ ತೋಟ ಕೊಳೆಯುತ್ತದೆ ಎಂದು ಕಾಲುವೆ ತೋಡಿ ಹೊರಗೆ ಬಿಟ್ಟೆವು. ಸರಿ ಸುಮಾರು ನವೆಂಬರ್ ಕೊನೆಯ ತನಕ ಗದ್ದೆಗೆ ಸಾಕಷ್ಟು ನೀರು ಕಟ್ಟುತಿದ್ದೇವು .ಸಾಕಷ್ಟು ನೀರು ಭೂಮಿಯ ಅಂತರಾಳ ಕೆ ಇಳಿಯುತಿತ್ತು.ಗದ್ದೆಗಳ ನಾಶದ ಜೊತೆಗೆ ಅಂತರ್ಜಲದ ನಾಶವೂ ಆಗುತ್ತಾ ಸಾಗಿತು. ವಿಪರೀತ ಏರಿದ ತೋಟಗಳ ಪ್ರಯುಕ್ತ ಮಾರು ದೂರಕ್ಕೆ ಐದು ಹತ್ತು ಹದಿನೈದು, ಐವತ್ತು ಹಾರ್ಸ್ ಪವರ್ ಮೋಟಾರ್ ಗಳು ಲಗ್ಗೆ ಇಟ್ಟೆವು. ಮನೆಗೆ ಒಂದಲ್ಲ ಎರಡಲ್ಲ ಮೂರು ನಾಲ್ಕು ಮೋಟಾರ್ ಬಂದಿದ್ದೇವೆ. ತೋಟ ಉಳಿಸಿಕೊಳ್ಳಲು ಅದು ಅನಿವಾರ್ಯ ಕೂಡ .ಅದರ ಪರಿಣಾಮ ಹೀಗೆ ಆಗಿದೆ.
ಆಗಿದ್ದು ಆಗಿ ಹೋಗಿದೆ. ಮುಂದೇನು ಎನ್ನುವ ಯೋಚನೆ ಮಾಡಲೇ ಬೇಕಿದೆ. ಒಂದು ನಮ್ಮ ಪೂರ್ವಜರು ಉಳಿಸಿದ ನಂಬಿಕೆಗಳ ಪುನರ್ ಪ್ರತಿಷ್ಠಾಪಿಸಬೇಕಿದೆ. ನೀರಿನ ಪಾವಿತ್ರ್ಯ ತೆಗೆ ಮನ್ನಣೆ ಕೊಡಬೇಕಿದೆ. ಪುನಃ ಗದ್ದೆಗಳತ್ತ ಹೊರಳುವ ಪರಿಸ್ಥಿತಿ ಸುಲಭವಿಲ್ಲ. ಆದರೆ ಕೆರೆಗಳ ಹುಳು ಎತ್ತಬೇಕು. ಮಳೆಗಾಲದಲ್ಲಿ ಭೂಮಿಗೆ ಬೀಳುವ ನೀರನ್ನು ಹಿಡಿದುಕೊಳ್ಳುವ ಪ್ರಯತ್ನ ಮಾಡಬೇಕು . ಮಳೆಕೊಯ್ಲು ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ಇದರಲ್ಲಿ ಜನರ ಪಾತ್ರವೇ ದೊಡ್ಡದು. ಸರ್ಕಾರವನ್ನು ಒತ್ತಾಯಿಸುವ ,ಜನಪ್ರತಿನಿಧಿಗಳ ಒಪ್ಪಿಸುವ ಕಾರ್ಯ ತುರ್ತು ಆಗಬೇಕಿದೆ. ಮಲೆನಾಡಿನ ಜೀವ ವೈವಿಧ್ಯ ಉಳಿಸುವ ಪ್ರಾಮಾಣಿಕ ಪ್ರಯತ್ನ ಆಗಬೇಕಿದೆ. ನಮ್ಮ ಪ್ರಯತ್ನಗಳು ಪ್ಲಾಸ್ಟಿಕ್ ಬಾಟಲಿ ನೀರು ಕುಡಿಯುವ ಪರಿಸರವಾದಿಯ ಭಾಷಣ ಆಗಬಾರದು.
ಗ್ರಾಮಸ್ಥರೇ ಸೇರಿ ಕೆರೆಯ ಹೂಳು ಎತ್ತಿ ಅದರಿಂದ ಬರುವ ಮಣ್ಣನ್ನು ತಮ್ಮ ತಮ್ಮ ತೋಟಗಳಿಗೆ ಬಳಸಿಕೊಳ್ಳಲು ಸಾದ್ಯವಿದೆ. ಹಿತವಾದ ಮಿತವಾದ ನೀರಿನ ಬಳಕೆ ಆಗಬೇಕಿದೆ. ಇದನ್ನೆಲ್ಲ ಯೋಚಿಸಲು ಅನುಷ್ಠಾನ ಮಾಡಲು ಬಹುಶಃ ಇದು ಸಕಾಲ. ಅರಣ್ಯ ಇಲಾಖೆ ಕರೆಂಟ್ ಲೈನ್ ಕೆಳಗೆ ಗಿಡ ನೆಡುವ ಬದಲು ಅವಕಾಶ ಇದ್ದ ಕಡೆ, ಸಣ್ಣ ಸಣ್ಣ ಕೆರೆಗಳ ರಚಿಸಲಿ,ಸಾಕಷ್ಟು ಹಣ್ಣಿನ, ಬಿದಿರಿನ, ಹುಲ್ಲಿನ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಿಸಲಿ.ಆಗ ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷವು ತಪ್ಪುತ್ತದೆ. ಜೀವ ವೈವಿದ್ಯ ಕೂಡ ಉಳಿಯುತ್ತದೆ.
ಇನ್ನಾದರೂ ಉಳಿಸುವ ಬಗ್ಗೆ ಯೋಚಿಸೋಣ. ನಮ್ಮ ಸಂಸ್ಕೃತಿಯನ್ನು ಅರಿತರೆ ಖಂಡಿತಾ ಇದಕ್ಕೆಲ್ಲಾ ಉತ್ತರ ಖಂಡಿತಾ ಇದೆ. ಮಲೆನಾಡು ಮಳೆಯ ನಾಡಾಗಿ,ಹಸಿರ ಬೀಡಾಗಿ,ಜೀವ ವೈವಿಧ್ಯದ ತೊಟ್ಟಿಲಾಗಿ ಉಳಿಯಲಿ.
- ರತ್ನಾಕರ ಗಡಿಗೇಶ್ವರ
