ಇಡ್ಲಿ ಆರೋಗ್ಯಕರ ತಿಂಡಿ ಎಂದು ಹೆಸರುವಾಸಿಯಾಗಿದ್ದು, ಈಗ ಪ್ರಪಂಚದಲ್ಲೆಡೆ ಮಾರ್ಚ್ ೩೦ರಂದು ‘ವಿಶ್ವ ಇಡ್ಲಿ ದಿನ’ವೆಂದು ಆಚರಿಸಲಾಗುತ್ತಿದೆ. ವಿಂಗ್ ಕಮಾಂಡರ್ ಸುದರ್ಶನ ಅವರು ಬರೆದ ವಿಶ್ವ ಇಡ್ಲಿ ದಿನದ ವಿಶೇಷ ಲೇಖನವನ್ನು ತಪ್ಪದೆ ಮುಂದೆ ಓದಿ…
ಪೂರಿಗೆ ಇಡ್ಡಲಿಗೆ ಸೋದಿಗೆ ಲಾವಣಿಗೆ ಘೃತಪೂರಂ ಲಡ್ಡುಗೆ ಮಂಡಗೆ ಮೊದಲಾಗೊಡೆಯ ಪದಿನೆಂಟುಂ ತರದ ಭಕ್ಷ ರೂಪಂಗಳು…..
ಪ್ರಪ್ರಥಮ ಬಾರಿಗೆ ಇಡ್ಲಿಯ ಉಲ್ಲೇಖವಾಗಿದ್ದು ಹೀಗೆ….ಈಗ್ಗೆ ಬರೋಬ್ಬರಿ ಒಂದು ಸಾವಿರದ ಒಂದು ನೂರು ವರ್ಷಗಳ ಹಿಂದೆ… ಕ್ರಿಶ ೯೨೦ ರಲ್ಲಿ. ಶಿವಕೋಟಿ ಆಚಾರ್ಯರು ತಮ್ಮ ಅದ್ಭುತ ಕೃತಿ “ವಡ್ಡಾರಾಧನೆ” ಯಲ್ಲಿ ಇಡ್ಡಲಿಕೆಯ ಬಗ್ಗೆ ವರ್ಣನೆ ನೀಡುತ್ತಾರೆ. ಕಲ್ಯಾಣ ಚಾಲುಕ್ಯ ವಂಶದ ಮುಮ್ಮಡಿ ಸೋಮೇಶ್ವರ ಹನ್ನೆರಡನೆಯ ಶತಮಾನದಲ್ಲಿ ” ಮಾನಸೋಲ್ಲಾಸ” ಎನ್ನುವ ನೂರು ಅಧ್ಯಾಯಗಳ ವಿಶ್ವಕೋಶವನ್ನೇ ರಚಿಸುತ್ತಾರೆ. ಪಾಕಶಾಸ್ತ್ರದ ಒಂದು ಅಧ್ಯಾಯವೂ ಇದೆ. ಅದರಿಲ್ಲಿ ‘ಇಡ್ಡರಿಕಾ’ ದೋಸಕ’ ….ಅಂದರೆ ಇಡ್ಲಿ, ದೋಸೆಯನ್ನು ತಯಾರಿಸುವ ವಿಧಾನವಿದೆ.

ಇಡ್ಲಿಯ ಈ ಸುದೀರ್ಘ ಪ್ರಯಾಣದಲ್ಲಿ ಗಾತ್ರ, ರೂಪಗಳು ಬದಲಾಗಿದ್ದರೂ ಗುಣ ಮಾತ್ರ ಬದಲಾಗಿಲ್ಲ…ಸದಾ ರುಚಿಕರ ಮತ್ತು ಆರೋಗ್ಯಕರ. ಕರ್ನಾಟಕ ಇಡ್ಲಿಯ ತವರು ಮನೆ, ಹಾಗೇಯೇ ಕರ್ನಾಟಕದ ಇಡ್ಲಿಗಳಷ್ಟು ವೈವಿಧ್ಯಮಯ ರೂಪ ಇನ್ನೆಲ್ಲೂ ಕಾಣಸಿಗದು. ತಟ್ಟೆ ಇಡ್ಲಿ, ಮಲ್ಲಿಗೆ ಇಡ್ಲಿ, ಮುಡೆ ಇಡ್ಲಿ, ರಾಗಿ ಇಡ್ಲಿ, ರವಾ ಇಡ್ಲಿ, ಬಟನ್ ಇಡ್ಲಿ, ಸಬ್ಬಕ್ಕಿ ಇಡ್ಲಿ, ಓಟ್ಸ್ ಇಡ್ಲಿ..ಹೀಗಾಗಿ ಇಡ್ಲಿಯ ರೂಪಾಂತರವೂ ಕರ್ನಾಟಕದಲ್ಲೇ ಆಗಿದೆ.
ಎರಡನೇ ವಿಶ್ವ ಯುದ್ಧದ ಸಮಯದಲ್ಲಿ ಭಾರತದಿಂದ ಬರ್ಮಾಕ್ಕೆ ಅಲ್ಲಿನ ಸೈನಿಕರಿಗೆ ಅಕ್ಕಿ ಮತ್ತು ಇತರೆ ಆಹಾರ ಸಾಮಗ್ರಿಗಳನ್ನು ರವಾನಿಸಲಾಯಿತು, ಹೀಗಾಗಿ ಭಾರತದಲ್ಲಿ ಅಕ್ಕಿಯ ಕೊರತೆ ಉಂಟಾಗಿ ಅಕ್ಕಿಯ ಮಾರಾಟವನ್ನು ನಿಯಂತ್ರಿಸಲಾಗಿತ್ತು. ಆಗ MTR ಸ್ಥಾಪಕರೊಲ್ಲೊಬ್ಬರಾದ ಯಜ್ಞನಾರಾಯಣ ಮಯ್ಯರವರು ಗೋಧಿರವೆಗೆ ಹುಳಿಮೊಸರು ಸೇರಿಸಿ ರವೆ ಇಡ್ಲಿಯನ್ನು ಯಶಸ್ವಿಯಾಗಿ ಪ್ರಯೋಗಿಸಿ ಇಡ್ಲಿಗೆ ಬೇಕಾಗಿದ್ದ ಅಕ್ಕಿಯ ಕೊರತೆಯನ್ನು ನೀಗಿಸಿ ರವೆ ಇಡ್ಲಿಯನ್ನು ಜನಪ್ರಿಯಗೊಳಿಸಿದರು.
- ವಿಂಗ್ ಕಮಾಂಡರ್ ಸುದರ್ಶನ (ಇಪ್ಪತ್ತೈದು ವರ್ಷಗಳ ವಾಯುಸೇನೆಯ ಸೇವೆಯಿಂದ ನಿವೃತ್ತಿ ಪಡೆದ ನಂತರ ಇಂಡಿಗೋ ಏರ್ಲೈನ್ ನಿನಲ್ಲಿ ಏರ್ ಬಸ್ ವಿಮಾನಗಳ ವೈಮಾನಿಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿಡುವಿನ ಸಮಯದಲ್ಲಿ ಪುಸ್ತಕಗಳನ್ನು ಓದುವ ಹಾಗು ಬರೆಯುವ ಹವ್ಯಾಸವನ್ನು ಇಟ್ಟುಕೊಂಡಿರುವ ಲೇಖಕರು, ‘ಹಸಿರು ಹಂಪೆ’ ಮತ್ತು ‘ಯೋಧ ನಮನ’ ಎನ್ನುವ ಎರಡು ಪುಸ್ತಕವನ್ನು ಬರೆದಿದ್ದಾರೆ).
