‘ಆಕೆ ಜಗದ ಕಣ್ಣಂತೆ’ ಕವನ – ಅಮೃತ ಎಂ ಡಿ

‘ಶಕ್ತಿಯಾಗಿ ಹೊರಹೊಮ್ಮಬೇಕಾದವಳು…ಒಂದು ಸೀಮಿತ ಜಾಗಕ್ಕೆ ಸ್ಥಿರವಾದಳು’… ಕವಿಯತ್ರಿ ಅಮೃತ ಎಂ ಡಿ ಅವರು ಮಹಿಳಾ ದಿನಾಚರಣೆ ಪ್ರಯುಕ್ತವಾಗಿ ಬರೆದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…

ಜಗದ ಕಣ್ಣಂತೆ,
ಮಣ್ಣ ಕಾಯುವ ಬಿಂಬವಂತೆ
ಮರವ ಹಬ್ಬುವ ಬಳ್ಳಿಯಂತೆ
ಮನವ ತಬ್ಬುವ ನೀರೆಯಂತೆ
ಎಲ್ಲವನ್ನೂ ಸೈರಿಸುವ ಬುವಿಯಂತೆ

ಹೀಗೆ ನೂರು ಉಪಮೆಗಳುಂಟು
ಹೆಣ್ಣನ್ನು ವರ್ಣಿಸಲು, ವ್ಯಾಖ್ಯಾನಿಸಲು

ಅಲ್ಲಲ್ಲಿ ಹತ್ತಾರು ನಿದರ್ಶನ ಉಂಟು
ಎಲ್ಲ ಎಲ್ಲೆಗಳನ್ನು ದಾಟಿ ಬೆಳೆದ ಬೆಳೆಯುತ್ತಿರುವ
ಬೆಳೆದ ಹೆಣ್ಮನಗಳ ಯಶೋಗಾಥೆ ಉಂಟು

ಅದೇ ಬಿರುಸಿನಲ್ಲಿ ಸಾವಿರ ನಿದರ್ಶನಗಳು ಕಣ್ಣ ಮುಂದೆ ಉಂಟು
ಮುಗಿಯದ ದೌರ್ಜನ್ಯ
ತೀರದ ಕುಹಕತೆ, ತೀರದ ಕೀಳರಿಮೆ, ಉಸಿರು ಗಟ್ಟಿಸುವ ಪ್ರೀತಿ,

ಶಕ್ತಿಯಾಗಿ ಹೊರಹೊಮ್ಮಬೇಕಾದವಳು
ಒಂದು ಸೀಮಿತ ಜಾಗಕ್ಕೆ ಸ್ಥಿರವಾದಳು

ಸಾಹಸ ಗೀತೆ ಬರೆಯಬೇಕಾದವಳು ಇರುಳಗಣ್ಣಿಗೆ ಸೆರೆಯಾಗಿ
ಸ್ಥಿರವಾದಳು,

ಎಲ್ಲೆ ಮೀರಿ ನಡೆಯ ಬೇಕಾದವಳು
ಜವಾಬ್ದಾರಿ ಹೆಸರಲ್ಲಿ
ತನ್ನೂರ ಗಡಿ ದಾಟದೆ ಸ್ಥಿರವಾದಳು

ಮಮತೆಯ ಖಣಿಯಾದ
ಒಲವ ಊರ ದೇವತೆ
ಆ ಒಲವಿನಲ್ಲಿಯೇ ಬಂಧಿತವಾಗಿ
ನಾಲ್ಕು ಕಂಬಗಳ ನಡುವೆ ಸ್ಥಿರವಾದಳು,

ಜಗವ ಗೆಲ್ಲುವ ಯುಕ್ತಿ ಉಳ್ಳವಳು
ತನ್ನ ರೆಕ್ಕೆಗಳ ಚಾಚದೆ
ಸ್ಥಿರವಾದಳು

ಬಣ್ಣ ಬಣ್ಣದ ಬದುಕಲ್ಲಿ
ರಂಗವಲ್ಲಿ ಚೆಲ್ಲ ಬೇಕಾದವಳೂ
ರಂಗಿಲ್ಲದೆ ಮಾಸಿ ಹೋದಳು…

ಎಲ್ಲದಕ್ಕೂ ದಕ್ಕಿದ್ದು, ಹೆಸರಾಗಿದ್ದು
ತ್ಯಾಗ, ಮಮತೆ,ಕರುಣೆ, ಕರುಳ ಬಳ್ಳಿ ಎಂಬ ಅನ್ವರ್ಥಗಳೆ ಹೊರತು,

ಕಣ್ಣ ಮರೆಯಲ್ಲಿ
ಸೆರಗಿನ ಮರೆಯಲ್ಲಿ
ಮರೆಯಾದ ಕಣ್ಣೀರು ಕಾಣಲೇ ಇಲ್ಲ

ಮಾತಾಗದೇ ಗಂಟಲ ಪಸೆಯೊಳಗೆ ಸೊರಗಿ ಹೋದ ಕ್ಷಣಗಳೂ ಬೆಳಕು ಕಾಣಲೇ ಇಲ್ಲ,
ಎದೆಯೊಳಗೆ ಅವಿತು ಕುಳಿತ ಶಬ್ದ,
ಸೋಪಾನ ಕಟ್ಟಿ ಮೇಲೆ ಏಳಲೇ ಇಲ್ಲ..


  • ಅಮೃತ ಎಂ ಡಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW