ಪ್ರಜೆಗಳ ಹಿತ ಯಾವುದು ?

ಬಿಡಿಸಿದಷ್ಟು ಕಗ್ಗಂಟಾಗಿ, ಓದಿದಷ್ಟು ವಿಮರ್ಶೆಗೆ ಒಳಪಡುತ್ತಿರುವ, ಗೋಜಲುಗಳಿಗೆ ಏನೆಂದು ಹೇಳಲಿ ಎಂದು ಕಾಣದ ಬದಲಾವಣೆಯ ನಾಗಲೋಟ ಕಣ್ಣ ಮುಂದೆ ನಿಂತಿದೆ. ಕೆಲಸಗಳ ಅರ್ಥೈಸಿಕೊಳ್ಳಲು ಆಗುತ್ತಿಲ್ಲ. ಇನ್ನೂ ಕೆಲವರ ಆಶಯಗಳ ಒಪ್ಪಲು ಆಗುತ್ತಿಲ್ಲ. ಮನವಿಲ್ಲಿ ಅಡಕತ್ತರಿಯ ಕೆಳಗೆ ಸಿಕ್ಕ ಅಡಕೆಯ ಪಾಡಾಗಿದೆ. -ಅಮೃತ ಎಂ ಡಿ, ತಪ್ಪದೆ ಮುಂದೆ ಓದಿ..

ನಡುಗೋಡೆಯ ಮೇಲಿಟ್ಟ ದೀಪದ ಕಥೆಯಂತೆ ಬದುಕಿನ ವ್ಯಥೆಯಾಗಿದೆ. ಈ ತೊಳಲಾಟಗಳ ಹೇಗೆ ಸಂತೈಸಬೇಕು.? ಜಾತಿ ಧರ್ಮಗಳ ನಡುವೆ ಆಗುತ್ತಿರುವ ಸ್ಥಿತ್ಯಂತರ – ಗತ್ಯಂತರಗಳ ಏನೆಂದು ಕರೆಯಬೇಕು? ಇತಿಹಾಸ ಕೆದುಕ ಹೊರಟರೆ ಏನು ತಿಳಿಯವಲ್ಲದು ಅಥವಾ ಅರ್ಥೈಸಿಕೊಳ್ಳುವಲ್ಲಿ ಸೋಲುತ್ತಿದ್ದೇವೆ.

ಸರಿ- ತಪ್ಪಿನ ಅರ್ಥಗಳು ಲಭಿಸುತ್ತಿಲ್ಲ ಅಥವಾ ಲಭಿಸದಂತೆ ಆಗುತ್ತಿದೆಯಾ..? ಸಂವಿಧಾನ ಬಂದು 75 ವರ್ಷಗಳು ಆಯಿತು, ಸ್ವಾತಂತ್ರ್ಯ ಬಂದು ಒಂದು ಅಮೃತ ಮಹೋತ್ಸವ ಜರಗಿತು. ಆದರೂ ಮೂಲಭೂತ ಅವಶ್ಯಕತೆಗಳನ್ನೆ ಪಡೆದುಕೊಳ್ಳುವಲ್ಲಿ ಸೋಲುತ್ತಿದ್ದೇವೆ. ಇನ್ನೂ ಒಂದು ಹೊತ್ತಿನ ಊಟಕ್ಕಾಗಿ, ಶುದ್ಧ ಕುಡಿಯುವ ನೀರಿಗಾಗಿ ಬಳಲುವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.

ಜನಸಂಖ್ಯೆ ಗಡಿ ದಾಟಿ ಅಥವಾ ಭೂಪ್ರದೇಶದ ಹಂಚಿಕೆ ಮೀರಿ ಬೆಳೆದಿದೆ ಇಷ್ಟೆಲ್ಲಾ ಆದರೂ ಮೂಲಭೂತ ಅವಶ್ಯಕತೆಗಳಿಗೆ ಕೊರಗುವಂತೆ ಮೂಲಭೂತ ಹಕ್ಕುಗಳಿಗೆ ದುಂಬಾಲು ಬೀಳುವ ಪರಿಸ್ಥಿತಿ ಕಣ್ಣ ಮುಂದೆ ನಿಂತಿದೆ. ಮೂಲಭೂತ ಕರ್ತವ್ಯಗಳ ಪಾಲಿಸಲು ಜವಾಬ್ದಾರಿಯುತ ಸ್ಥಾನದಲ್ಲಿರುವವರೆಗು ಒತ್ತಡ ಹೇರಬೇಕಾದ ವಿಷಮ ಪರಿಸ್ಥಿತಿಯಲ್ಲಿ ನಾವಿದ್ದೇವೆ.
ಚುನಾವಣೆ ಸಮೀಪದಲ್ಲಿದೆ.

ಎಲ್ಲರ ಮನೆಯ ಬಾಗಿಲಿಗೆ ಬರುವ ಮಹಾನುಭಾವರು ಮನದೊಳಗೆ ಕೊರೆಯುತ್ತಿರುವ ಖಿನ್ನತೆ ಅಭದ್ರತೆಗಳಿಗೆ ಕಿವಿಯಾಗುವರೆ.? ಏನು ಅರಿಯದ ಮಕ್ಕಳ ಬದುಕಲ್ಲಿ ಜಾತಿ-ಧರ್ಮದ ಅಮಲನ್ನು ತುಂಬಲು ಹೊರಟ ವರ್ಗ ಭವ್ಯ ಭಾರತದ ಪ್ರಜೆಗಳ ಪ್ರಭುತ್ವವನ್ನು ಉಳಿಸುವರೇ..? ಕೋಮುವಾದದ ಗಾಳಿ ಬೀಸದಂತೆ ಕಾಯಬೇಕಾದ ಸಮಾಜ ಕೋಮುವಾದವನ್ನೇ ಸಿಂಪಡಿಸಲು ಸಿದ್ಧವಾಗಿ ನಿಂತಿರುವಾಗ ಬಹುತ್ವ ಭಾರತದ ಕನಸೆಲ್ಲಿ?.

ನೆರೆಹೊರೆಯವರಿಗೆ ಪ್ರೀತಿಯ ಹೊಳೆ ಹರಿಸಬೇಕಾದ ಸಂದರ್ಭಗಳನ್ನು ಅಹಂಕಾರ, ಪ್ರತಿಷ್ಠೆ ಪರಿಚಯಿಸಲು ಹೊರಟ ವಾತಾವರಣಕ್ಕೆ ಏನೆಂದು ಹೆಸರಿಡಲಿ?. ಗಡಿದಾಟಿ ಪ್ರೀತಿಸುವುದನ್ನು ಕಲಿಯಿರಿ ಎಂದು ಹೇಳಬೇಕಾದ ಜನಾಂಗಕ್ಕೆ ದೇಶ-ಪ್ರೀತಿ, ದೇಶಭಕ್ತಿಯ ಅಮಲೇರಿಸಿ ಬಾವಿಯೊಳಗಣ ಕಪ್ಪೆಯಾಗಿಸಿ ಕಟ್ಟಿ ಹಾಕಿದ ಸಮುದಾಯಕ್ಕೆ ಏನೆಂದು ಹೇಳಲಿ.

ಗಲ್ಲಿ ಗಲ್ಲಿಗೂ ಪಾದಯಾತ್ರೆ ಮಾಡುವ ಜನರು ಆ ಗಲ್ಲಿಯಲ್ಲಿ ಹುದುಗಿರುವ ಸಮಸ್ಯೆಗಳಿಗೆ ಕಿವಿಯಾಗ ಬಲ್ಲರಾ..?

ಜವಾಬ್ದಾರಿಯುತ ಪ್ರಜೆಯಾಗಿ ತನ್ನ ಕೆಲಸ ಕಾರ್ಯಗಳ ನಿರ್ವಹಿಸಬೇಕಾದವರು ಸಾರಸಗಟಾಗಿ ತಾನು ತನ್ನ ಕುಟುಂಬ ಎಂದು ಸ್ವಾರ್ಥಿಯಾಗಿ ಹಣದ ಆಮಿಷಕ್ಕೆ ಒಳಗಾಗಿ ಬಡವರ ರಕ್ತ ಹೀರುತ್ತಿರುವ ರಕ್ತ ಬೀಜಾಸುರನ ವಂಶಸ್ಥರಿಗೆ ಯಾವ ಬಿರುದು ನೀಡಬೇಕು?

ಖಾಸಗಿ ಸಂಸ್ಥೆಗಳು ಹಣವೊಂದೇ ಅಂತಿಮವೆಂದು ಕಾರ್ಮಿಕರನ್ನು ಕೆಲಸದ ಹೆಸರಲ್ಲಿ ಹಂತ ಹಂತವಾಗಿ ಶೋಷಣೆಗೆ ಒಳಪಡಿಸುತ್ತಿರುವ ದಮನಕ್ಕೆ ಏನೆಂದು ಕರೆಯಲಿ?
ಹಣ ಒಂದೇ ಸಕಲವೂ ಎಂದು ಮಾನವೀಯ ಮೌಲ್ಯಗಳ ಗಾಳಿಗೆ ತೂರಿ ಬಿಟ್ಟಿರುವ ವರ್ಗಕ್ಕೆ ಹೊಸ ಹೆಸರ ಏನೆಂದು ಹೇಳಬಹುದು?

ಹೀಗೆ ಪಟ್ಟಿ ಮಾಡುತ್ತಾ ಹೊರಟರೆ ನೂರು ಸಾವಿರವಾಗಿ ಸಾವಿರಾ ಲಕ್ಷವಾಗಿ ಸಿಗುತ್ತವೆ. ಬದುಕಿನ ಸುಂದರ ಕ್ಷಣಗಳೆಲ್ಲವನ್ನು ವ್ಯವಸ್ಥೆಯ ವಿರುದ್ಧ ದನಿಯತ್ತಲು, ಅದರ ವಿರುದ್ಧ ದಿಕ್ಕಿನಲ್ಲಿಯೋ ಅಥವಾ ಜೊತೆಯಲ್ಲಿಯೋ ಈಜಲು ಇಡೀ ಜೀವಮಾನ ಸವೆಸಿ ಬಿಡುತ್ತೇವೆ.

ನಿರುದ್ಯೋಗ, ಬದುಕಿನ ಜೊತೆಗಿರುವ ಅಭದ್ರತೆ,  ಕೌಶಲ್ಯಗಳ ಕೊರತೆ, ಅಭಿವೃದ್ಧಿಯ ಅನಾವೃಷ್ಟಿ, ಜಾಗತಿಕ ಮಟ್ಟದಲ್ಲಿ ಸಿಗದ ಸಮನ್ವಯತೆ, ಕೀಳಿರಿಮೆ, ಬದುಕನ್ನು ಸರಿಗಟ್ಟಿಸಲು ಆಗದೆ ಇಂದಿನ ಪರಿಸ್ಥಿತಿಗೆ, ಸಂದರ್ಭಗಳಿಗೆ ತಲೆ ಕೊಡಲು ಆಗದೆ, ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದು, ನ್ಯಾಯ ಪಡೆಯಲು/ಕೇಳಲು ಆಗದೆ ದೇಶದ ನೈಜವಾದ ಸಂಪತ್ತು ಯುವ ಜನತೆಯ ಬದುಕು ನರಕ ಸದೃಶ್ಯವಾಗಿದೆ.

ಪ್ರಜೆಗಳ ಹಿತಕ್ಕಾಗಿ ದುಡಿದ, ದುಡಿಯುತ್ತಿರುವ ಗಾಂಧಿವಾದಿ ಯಾರು? ಪ್ರಜೆಗಳ ರಕ್ತ ಹೀರಿ ಬೆಳೆದ, ಬೆಳೆಯುತ್ತಿರುವ ಬೆಳೆಯಲು ಹೊರಟ ಮನುವಾದಿ ಯಾರು?? ಮುಗಿಯದ ಪ್ರಶ್ನೆಗೆ ಪ್ರಶ್ನೆಯೇ ಉತ್ತರ..


  • ಅಮೃತ ಎಂ ಡಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading