‘ಬೆಳಗಿನೊಳಗು ಮಹಾದೇವಿಯಕ್ಕ’ ಪರಿಚಯ ಪುಸ್ತಕ

ಡಾ.ಎಚ್.ಎಸ್.ಅನುಪಮಾ ಲೇಖಕಿ ‘ಬೆಳಗಿನೊಳಗು ಮಹಾದೇವಿಯಕ್ಕ’ ಅವರ ಕಾದಂಬರಿ ಕುರಿತು ಅಮೃತ ಎಂ ಡಿ ಅವರು ಬರೆದಿರುವ ಪರಿಚಯವನ್ನು ತಪ್ಪದೆ ಮುಂದೆ ಓದಿ…

ಪುಸ್ತಕ : ಬೆಳಗಿನೊಳಗು ಮಹಾದೇವಿಯಕ್ಕ
ಲೇಖಕರು : ಡಾ.ಎಚ್.ಎಸ್.ಅನುಪಮಾ
ಪ್ರಕಾರ : ಕಾದಂಬರಿ
ಪ್ರಕಾಶನ: ಲಡಾಯಿ ಪ್ರಕಾಶನ

ಪುಟ : 762
ಬೆಲೆ : 585

ಬಹುಶಃ ನಾ ಓದಿದ ಎರಡನೇ ಬೃಹತ್ ಕಾದಂಬರಿ. 762 ಪುಟಗಳ ಸುದೀರ್ಘ ಬರಹ. ಕಾದಂಬರಿಯೋ, ಆಧ್ಯಾತ್ಮ ಕುರಿತ ಬರಹವೋ, ವಚನ ಸಾಹಿತ್ಯದ ಮರು ಹುಟ್ಟು ಪಡೆದ ವಿಶ್ಲೇಷಣೆಯೋ ತಿಳಿಯದು. ಒಂದಂತೂ ಸತ್ಯ , ಇಂದಿನ ಸ್ತ್ರೀ ವಾದಿಗಳು ಅಕ್ಕನ ಸುತ್ತಮುತ್ತ ಯಾತಕ್ಕಾಗಿ ಅಲೆಯುವರು ಎಂಬ ಪ್ರಶ್ನೆಗೆ ಉತ್ತರ ದಕ್ಕಿತು.

ಬೆಳಗಿನೊಳಗು ಮಹದೇವಿ ಅಕ್ಕ ಅನುಪಮಾ ಅವರ ಬೃಹತ್ ಕಾದಂಬರಿ ಇಲ್ಲಿ ಮಹಾದೇವಿಯಾಗಿ ಅಕ್ಕಳಾಗಿ ಎಲ್ಲರ ಮನದಲ್ಲಿ ನೆಲೆ ನಿಲ್ಲುವ ದೇವತೆಯಾಗಿ , ಕಾಯವಾಗಿ ನಿರಾಭರಣ ಒಡತಿ ಆಗಿ, ಬದುಕನ್ನು ತನ್ನಂತೆ ತನ್ನ ಇಷ್ಟದಂತೆ ಚೆನ್ನ ಮಲ್ಲಿಕಾರ್ಜುನನಲ್ಲಿ ಲೀನವಾಗುವುದೆ ಗಮ್ಯವೆಂದು ಭಾವಿಸಿ ಆ ಗಮ್ಯ ತಲುಪಲು ಎಲ್ಲವನ್ನೂ ತೊರೆದು, ಎಲ್ಲವನ್ನು ಬಿಟ್ಟು, ಎಲ್ಲಿಯೂ ಸಹ ಅಂಟಿನ ನಂಟನ್ನು ಗಂಟನ್ನು ತನ್ನಡೆಗೆ ಆವರಿಸಿಕೊಳ್ಳದ ಅಕ್ಕನ ಪಯಣ ನಮಗೆ ಇಂದಿನ ಬದುಕು ಕಟ್ಟುವ ಕೌಶಲದ ಬಗ್ಗೆ ತಿಳಿಸಿಕೊಡುತ್ತದೆ.

ಈ ಕಾದಂಬರಿ ಪ್ರಮುಖವಾಗಿ ಐದು ಅಧ್ಯಾಯಗಳನ್ನು ತನ್ನೊಳಗೆ ಹುದುಗಿಸಿಕೊಂಡು ಓದುಗರನ್ನು ತನ್ನಡೆಗೆ ಎಳೆದುಕೊಳ್ಳುತ್ತದೆ.

ಮೊದಲ ಅಧ್ಯಾಯದಲ್ಲಿ ಉಡುತಡಿಯ ವಾತಾವರಣ, ಮನೆಯ , ಪರಿಸ್ಥಿತಿ ಅಕ್ಕನ ಕುತೂಹಲ ಅವಳ ಪ್ರಶ್ನೆಗಳು, ಅವಳ ನಡವಳಿಕೆಗಳು 12ನೇ ಶತಮಾನದಲ್ಲಿ ಕಂಡುಂಡ ನೋವು ನಲಿವುಗಳ ಸಮ್ಮಿಶ್ರ ಫಲ. ಅಂದಿನ ಜಾತಿ ವ್ಯವಸ್ಥೆ ಕೀಳಿರಿಮೆ ಅಸೂಯೆ ಅರ್ಥವಿಲ್ಲದ ನೀತಿ ಪಾಲನೆ, ಜಾತಿ ವ್ಯವಸ್ಥೆ, ಹೆಣ್ಣು ಮಕ್ಕಳ ಕಡು ಕಷ್ಟ ಇವುಗಳ ಕುರಿತು ಮಹಾದೇವಿಯ ಸಹಜ ಕುತೂಹಲ ಆಕೆಯ ಪ್ರಶ್ನಾವಳಿಗಳು ಎಲ್ಲರನ್ನೂ ದಿಙ್ಮೂಡವಾಗಿಸುತ್ತಿದ್ದವು.

ಅಕ್ಕನ ಅಪರಿಮಿತ ಪ್ರಶ್ನಾವಳಿಗಳು, ಅವಳ ಉತ್ಸುಕತೆ , ಅವಳ ಸಹಾಯ ಮನೋಭಾವ ಕಷ್ಟವೆಂದರೆ ಕರಗುವ ಸಹಕಾರ ಮನೋಭಾವ ಇವುಗಳಿಂದ ಆರಂಭವಾದ ಅವಳ ಬದುಕು ಅವರ ತಂದೆ ತಾಯಿಗೆ ಎಲ್ಲಿಲ್ಲದ ಚಿಂತನೆಗೆ ದೂಡುತ್ತದೆ.

ಇದಕ್ಕೆಲ್ಲಕ್ಕೂ ಉತ್ತರ ಒಂದೇ ಎಂದು ಗುರು ಮಠಕ್ಕೆ ಅವಳನ್ನು ಸೇರಿಸುತ್ತಾರೆ. ಅಲ್ಲಿಂದ ಆಕೆಯ ನಡೆಯ ನುಡಿಯಲ್ಲಿ ಮಹತ್ತರ ಬದಲಾವಣೆಗಳು ಕಾಣತೊಡಗುತ್ತವೆ ದೀಕ್ಷೆ ಪಡೆದ ಮಹಾದೇವಿ ಹೊಸದರ ಕಡೆ ವಾಲುತ್ತಾ ಹೋಗುತ್ತಾಳೆ. ಗುರುಗಳು ಅಲ್ಲಲ್ಲಿ ಹೇಳುವಂತಹ ಕಥೆಗಳು, ಸಂಚರಿಸಿದ ಪ್ರದೇಶಗಳ ವಿವರಣೆ, ಅಲ್ಲಿಂದ ಬಂದು ಕುರುಬರ ಹುಡುಗಿ ಚಂದ್ರಿ ತನ್ನ ಲೋಕ ಅನುಭವವನ್ನು ವರ್ಣಿಸುವ ರೀತಿ, ಒಟ್ಟಾರೆ ಆಕೆಯನ್ನು ಲೋಕ ಸಂಚಾರಕ್ಕೆ ಉದ್ದೀಪಿಸುತ್ತದೆ ಎಂಬುವುದು ನನ್ನ ಗ್ರಹಿಕೆಗೆ ಸಿಕ್ಕ ಲೆಕ್ಕಾಚಾರ.

ಬದುಕಿನ ಸ್ತರವನ್ನು ಉತ್ತಮಗೊಳಿಸುವ ಪ್ರಯತ್ನದ ಹಾದಿಯಲ್ಲಿ ಮಹಾದೇವಿ ಸಾಗುತ್ತಾ ಹೋಗುತ್ತಾಳೆ. ಎಲ್ಲಿ ಹೆಣ್ಣುಗಳು ಜಾಗೃತರಾಗಿರುವರೊ, ಅಲ್ಲಿ ನೆಲ ,ಜಲ, ಹಕ್ಕಿ, ಕಾಡು-ಕಣಿವೆಗಳೆಲ್ಲ ಆನಂದಮಯವಾಗಿರುತ್ತದೆ ಎಂಬ ಜಿಜ್ಞಾಸೆ ಬೆಳೆಯುತ್ತದೆ. ಮುಂದುವರೆದ ಎರಡನೇ ಅಧ್ಯಾಯದಲ್ಲಿ ಅಕ್ಕನ ವೈವಾಹಿಕ ಜೀವನ ಅದರಿಂದ ಅವಳು ಎದ್ದು ನಡೆದಿದ್ದು, ಅನುಭವಿಸಿದ ಪಡಿ-ಪಾಟಲುಗಳು ಅವಳನ್ನು ಮಾನಸಿಕವಾಗಿ ಬಲಿಷ್ಠ ಗೊಳಿಸಲು ಸನ್ನದ್ದವಾಗಿದ್ದ ಆಯುಧಗಳು ಎಂದು ನನಗನಿಸುತ್ತದೆ.

ಹಕ್ಕಿಯಂತೆ ಹಾರಿಕೊಂಡು, ಅಂಗಸಾಧನೆ, ಲಿಂಗ ಪೂಜೆ ನಿರತಳಾಗಿ ಊರೆಲ್ಲರ ಜೊತೆ ಸ್ವತಂತ್ರಳಾಗಿದ್ದ. ಅಕ್ಕನಿಗೆ ಕಸಪ್ಪಯ್ಯ ರಾಯನ ಮಂಡಲ ಮನೆ ಚಿನ್ನದ ಪಂಜರದ ಹಾಗೆ ಕಾಣುತ್ತಾ ಹೋಗುತ್ತದೆ. ಅವರ ಅತ್ತೆಯ ಮಾತುಗಳು ಅವರು ಅವಳ ತವರಿನ ಎಡೆಗೆ ತೋರುವ ಅಸಡ್ಡೆ ಅವಮಾನ ಮಾಡುವಂತಹ ನಿದರ್ಶನಗಳು ಜೈನ ಮತ ಮತ್ತು
ಲಿಂಗವನ್ನು ಆರಾಧಿಸುವ ಈಕೆ, ಭಿನ್ನಮತಗಳು ಬಿರುಕನ್ನು ವೇಗವಾಗಿ ಹಬ್ಬಿಸಿಬಿಟ್ಟವು.

ರಾಯಣ್ಣನ ಮಾತು ತಪ್ಪುವಿಕೆ ಅವರ ತಲೆ ಶೂಲ, ತವರನ್ನು ದೂಷಿಸುವ ರೀತಿ ಆಹಾರ ಪದ್ಧತಿಗಳು ಇವೆಲ್ಲವೂ ಬಿರುಕುಗೆ ದಾರಿ ಮಾಡಿಕೊಟ್ಟವು ಇದರ ಜೊತೆಗೆ ಯಾರೊಂದಿಗೂ ಮಾತನಾಡಬಾರದು ಎಂಬ ಕಟ್ಟಪ್ಪಣೆ. ರಾಯನ ಮೃಗೀಯ ವರ್ತನೆ, ದೇಹಕ್ಕೆ ಆಸೆ ಪಟ್ಟಷ್ಟು, ಆತ್ಮ ಸಂಗಾತಕ್ಕೆ ಬೆಲೆ ಕೊಡದೆ ಹೋಗಿದ್ದು ಇವುಗಳಿಂದ ಬೇಸತ್ತು ಒಳಗೊಳಗೇ ಬೆಂದು ಹೋದಳು. ಮಂಡಲ ಮನೆ ರಾಣಿ ಬೇರೆಯವರಿಗೆ ಸುಲಭವಾಗಿ ಸಂಧಿಸಲು ಸಿಗಬಾರದೆಂಬ ನಡವಳಿಕೆ ಇವಳಿಗೆ ಒಳಗೊಳಗೆ ಉಸಿರು ಕಟ್ಟಿದಂತಹ ಅನುಭವ ಆಗಲು ಶುರುವಾಯಿತು.

ತವರು ಮನೆಯಾ ದೂಷಣೆ ,ಸ್ನೇಹಿತರನ್ನು ಮಠವನ್ನು ಭೇಟಿ ಮಾಡಬೇಡ ಎಂಬ ಅಧಿಕಾರಿಯುತ ಮಾತುಗಳು ಮಹಾದೇವಿಯೊಳಗೆ ಗುಪ್ತವಾಗಿ ಕುಳಿತ ಭಾವನೆಗಳು ಸ್ಫೋಟಗೊಳ್ಳಲು ಮೊದಲ ಕಾರಣವಾಯಿತು ಎಂಬುದು ನನ್ನ ಗ್ರಹಿಕೆ. ಎಲ್ಲರೂ ಬದುಕಿನ ಗಮ್ಯ ತಲುಪರು, ಎಣಿಸಿದ್ದು ಒಂದಾದರೆ ಜರುಗುವುದು ಮತ್ತೊಂದು ಕಂಡ ಕನಸುಗಳು, ಕಟ್ಟಿದ ಆಶಾ ಗೋಪುರ, ಚಿನ್ನದ ಪಂಜರದೊಳ ಸುತ್ತಲು ಉಸಿರುಗಟ್ಟಿಸುವ ವಾತಾವರಣ ಸೃಷ್ಟಿಯಾಯಿತು. ಮನಃಶಾಂತಿಗಾಗಿ ಗುರುಗಳ ಮಠಕ್ಕೆ ಹೊರಟವಳಿಗೆ ರಾಯನ ವರ್ತನೆ ಅತಿರೇಕವಾಯಿತು ಎನಿಸಿತು.

ಅವಮಾನ ಬದುಕಿನ ನೂಕು-ನುಗ್ಗಲಿನಲ್ಲಿ ಜರ್ಜರಿತವಾಗಿ, ಎಲ್ಲ ಕನಸುಗಳು, ಪೌಳಿ ಗೋಡೆಯಲ್ಲಿ ದಿಗ್ಬಂಧನವಾಗಿದೆ ಎನಿಸಿದ ಕ್ಷಣ ಮಠದ ದಾರಿಯ ಹಿಡಿದು ಮಂಡಲ ಮನೆ ದಾರಿ ಬಿಟ್ಟು ನಡೆದಳು.

ಚಂದ್ರಿ ಒಟ್ಟಿಗೆ ಮಾತನಾಡುತ್ತಾ ಬದುಕಿನ ಏಳು ಬೀಳು ,ಕಂಡ ಕನಸುಗಳು ನೆಲಸಮವಾದ ಬಗ್ಗೆ ಮಾತನಾಡುತ್ತಿರುವಾಗಲೇ, ರಾಯ ಹುಡುಕುತ್ತಾ ಮಠದ ಕಡೆ ಸಾಗುತ್ತಾನೆ ಅವಳು ಅಲ್ಲಿ ಇಲ್ಲದಿರುವುದರಿಂದ ಹುಡುಕಿಕೊಂಡು ಬಂದವ ಅಸಭ್ಯವಾಗಿ ನಡೆದುಕೊಳ್ಳುತ್ತಾನೆ. ಆತ್ಮ ಗೌರವಕ್ಕೆ ಚ್ಯುತಿ ತರುತ್ತಾನೆ. ಅದುವರೆಗೂ ಅದುಮಿಟ್ಟ ಎಲ್ಲಾ ಜ್ವಾಲಾ ಋತುಗಳು ಒಮ್ಮೆಲೆ ಸ್ಫೋಟಗೊಂಡು ಬಯಲಿನಲ್ಲಿ ಬಯಲಾಗಿ ಎಲ್ಲವನ್ನು ತೊರೆದು ಎಲ್ಲರನ್ನೂ ಬಿಟ್ಟು ಉತ್ತರ ದಿಕ್ಕಿಗೆ ನಡೆದೂ ಸಾಗುತ್ತಾಳೆ.

3 ನೆಯ ಅಧ್ಯಾಯ ಎಲ್ಲರಿಗೂ ಬೇಕಾಗಿ. ಸಾಗುವ ಪಯಣ ಎಲ್ಲೂ ನಿಲ್ಲದೆ ದಮ್ಮದೊಳಲು , ಲೊಕ್ಕಿಗುಂಡಿ, ಬೈಲಬ್ಬೆ, ಉಡುತಡಿ ಸಂಗಮ ವಾರಣಾಸಿ ದೊಂಬರ ಮನೆ, ದಿಂಡಿಯ ಭಕ್ತರು ಲಿಂಗಪಂಥ, ಹೀಗೆ ಹಲವಾರು ಕಡೆ ಸಾಗಿದರು ತನ್ನತನವನ್ನು ಹರವಿಕೊಳ್ಳುತ್ತಾ ತನ್ನ ಹಿಗ್ಗನ್ನು ಎಗ್ಗಿಲ್ಲದೆ ಹಿಗ್ಗಿಸಿಕೊಳ್ಳುತ್ತಾ ತನ್ನ ಜ್ಞಾನವನ್ನು ಸಾಣೆ ಹಿಡಿಯುತ್ತಾ ಸಾಗುತ್ತಿರುವಳು ಮಹಾದೇವಿ ಅಕ್ಕನಾಗಿ.

ಪಯಣ ಅಳಿಯುತ್ತಿರುವ,ಶೀತಲಗೊಳ್ಳುತ್ತಿರುವ ವಿಶ್ವಾಸ ಭಿನ್ನಗೊಳ್ಳುತ್ತಿರುವ ಮೂರ್ತಿ ,ಅಂತರ್ಮತಿಯ ವಿವಾಹ ಮುಂತಾದವುಗಳ ಬಗ್ಗೆ ಅರಿವನ್ನು ತುಂಬಿಕೊಟ್ಟಿತ್ತು . ಈಚಲ ಗುಂಪಿನ ವೈಶಿಷ್ಟ್ಯ ಆಕೆಯನ್ನು ಚಿಂತನೆಗೆ ಒಳಪಡಿಸಿತ್ತು. ತುಂಬಾ ಸಮಸ್ಯೆಗಳಿಗೆ ಎದುರು ನಿಂತು, ಧೈರ್ಯದಿಂದ ಹೆದರಿಸುವುದು ಒಂದೇ ಮುಲಾಮು. ಭಯದಿಂದ ಅಲ್ಪ ಸಮಸ್ಯೆಗಳಿಗೆ ನಮ್ಮನ್ನು ನಾವು ಬಲಿ ನೀಡಿಕೊಳ್ಳುತ್ತೇವೆ
ಎಂಬುದು ಇಲ್ಲಿ ತಿಳಿಯಿತು.

“ಫಲ ಒಳಗೆ ಪಕ್ವವಾಗಿ ಅಲ್ಲದೆ
ಹೊರಗಳ ಸಿಪ್ಪೆ ಒಪ್ಪಗೆಡದು
ಕಾಮನ ಮುದ್ರೆಯ ಗಂಡು ನಿಮಗೆ ನೋವಾದಿತೆಂದು
ಆ ಭಾವದಿಂದ ಮುಚ್ಚಿದೆ ಇದಕ್ಕೆ ನೋವೇಕೆ”

ದಿಗಂಬರೆಯಾದ ಅಕ್ಕನನ್ನು ಕುರಿತು ಎಸೆದ ಪ್ರಶ್ನೆಗೆ ಆಕೆ ನೀಡಿದ ಉತ್ತರ ಮೇಲಿನ ಸಾಲು. ಧೈರ್ಯ, ಸೈರಣೆ ಶಕ್ತಿ ಎಲ್ಲದರಲ್ಲೂ ಸಕರಾತ್ಮಕತೆಯನ್ನೇ ಹುಡುಕುವ ಗುಣ ನಮ್ಮೆಲ್ಲರಿಗೂ ಮಾದರಿಯಾಗಬೇಕು.

ಈ ಪಯಣದಲ್ಲಿ ನಾಥಪಂಥ, ಕೌಳಪಂಥ, ಹೀಗೆ ಪಂತಗಳು ಎದುರಾಗುತ್ತಾ ಹೋಗುತ್ತವೆ ಒಂದೊಂದು ಪಂತಕ್ಕೆ ಒಂದೊಂದು ನಿಯಮಾವಳಿಗಳು ಎಲ್ಲವನ್ನು ತಿಳಿದು ಏನು ಬೇಕು ಅದನ್ನು ಮಾತ್ರ ಪಡೆದು ಅಕ್ಕನ ಪ್ರಯಾಣ ಸಾಗುತ್ತದೆ.

ಎಲ್ಲರೊಂದಿಗೆ ಬೆರೆತು ಎಲ್ಲರ ನೋವನ್ನು ಆಲಿಸಿ, ಪದವಾಗಿ ಹಾಡಾಗಿ ಜನತೆಯನ್ನು ತಲುಪಲು ಅಕ್ಕನ ವಚನಗಳು ಸಿದ್ಧವಾಗುತ್ತವೆ. ಬಯಲಿನಲ್ಲಿ ಬಯಲಾಗುತ್ತಾ ಇಳೆಯನ್ನೆ ಹಾಸಿಗೆ ಆಗಿಸಿ, ಬಾನನ್ನೆ ಹೊದಿಕೆ ಆಗಿಸಿ, ಪ್ರಾಣಿ ಪಕ್ಷಿಗಳು ಪ್ರಾಣಿ-ಪಕ್ಷಿಗಳನ್ನೇ ವಾಚಕರನ್ನಾಗಿಸಿ, ಎಲ್ಲೂ ನಿಲ್ಲದೆ ಯಾರ ನಂಟನ್ನು ಅಂಟಿಸಿಕೊಳ್ಳದೆ ಸಾಗಿದಳು.

ಕಣ್ಣೀರು ಬಂದು ತಡೆದರೂ ಪನ್ನೀರ ಹುಡುಕಲಿಲ್ಲ, ಕಾಯ ದಣಿದರು ಸುಪ್ಪತ್ತಿಗೆ ಏರಲಿಲ್ಲ, ಹಣ ಬಳಿ ಸರಿದರು ಮೆರೆಯಲು ಒಪ್ಪಲಿಲ್ಲ , ಋತು ಬದಲಾಗಿ ದಂಡಿಸಿದರು ಬಗ್ಗಲಿಲ್ಲ.
ಅಂಬಿಗರ ಚೌಡಯ್ಯ, ಸೂಳೆ ಸಂಕವ್ವ, ಆಯ್ದಕ್ಕಿ ಮಾರವ್ವ ಮುಕ್ತಾಯಕ್ಕ, ಮಡಿವಾಳ ಮಾಚಯ್ಯ, ಅಲ್ಲಮ ಪ್ರಭು ಬಸವಣ್ಣ ಹೀಗೆ ಆ ಕಾಲದ ವಚನ ಸಾಹಿತ್ಯ ಪರಿಚಯ ಅಕ್ಕನ ಅರಿವಿನ ಜ್ಞಾನದ ಹಿಗ್ಗನ್ನು ಹೆಚ್ಚಿಸುತ್ತದೆ.

ಈ ಕಾದಂಬರಿಯಲ್ಲಿ ಯಾವ ವಿಷಯವೂ ತುಚ್ಚವಲ್ಲ, ಯಾವ ವಿಷಯಗಳು ಉತ್ಕೃಷ್ಟವಲ್ಲ . ಯಾವ ಕೆಲಸವು ಸಹ ನೀಚವಲ್ಲ ಎಂಬುದನ್ನು ಮತ್ತೊಮ್ಮೆ ಸಮಾಜಕ್ಕೆ ನೆನಪು ಮಾಡಿದೆ. ಎಲ್ಲರಿಗೂ ಅವರದೇ ಆದ ಜವಾಬ್ದಾರಿ ಕೆಲಸಕ್ಕೆ ತಕ್ಕಂತೆ ಗೌರವ , ಪ್ರತಿಯೊಂದು ಕೆಲಸವು ಸಹ ಉನ್ನತ ಎಂಬ ಭಾವವನ್ನು ಮರು ಹುಟ್ಟಿಸಿದೆ.

ನಾಲ್ಕನೇ ಅಧ್ಯಯನದಲ್ಲಿ ಶಿಖರಕ್ಕೆ ಬೆಳಕಾಗಿ ಇಲ್ಲಿ ಅಕ್ಕ ಕಲ್ಯಾಣ ಪ್ರವೇಶ ಮಾಡಿ ಅನುಭವ ಮಂಟಪದಲ್ಲಿ ನೆಲೆನಿಂತು, ಆ ಸುತ್ತಮುತ್ತ ಜಾಗದಲ್ಲಿ ಬಸವಣ್ಣನ ಉದಾರತೆ ಅಲ್ಲಮಪ್ರಭುವಿನ ಜ್ಞಾನದ ಆಳ ಮುಂತಾದವುಗಳ ಬಗ್ಗೆ ಅರಿಯುತ್ತಾಳೆ. ಒಳ್ಳೆಯವರ ಸಂಗಡ ಒಳ್ಳೆಯದನ್ನೇ ಹೊತ್ತು ತರುತ್ತದೆ.ಜಾತಿ ಕುಲ ಮತ ಮೀರಿ ಎಲ್ಲರು ಒಂದೇ ಎಂದು ಕಲ್ಯಾಣದಲ್ಲಿ ಬಸವಣ್ಣ ತಬ್ಬುತ್ತಿದ್ದಾನೆ.

ಸತ್ಯ ಶುದ್ಧವಾಗಿ ಮಾಡಿದ್ದೆಲ್ಲವೂ ಕಾಯಕ ಮೇಲು ಕೀಳು ಎಂಬ ಯಾವ ಭಾವವು ಉಳಿದಿಲ್ಲ.

ಇಲ್ಲಿ ದ್ರವ್ಯಕ್ಕೆ ದ್ರವವಾಗಿದೆ ,
ನಿಶ್ಚಲ ಸ್ಥಿತಿಯಲ್ಲಿ ಬದುಕ ದಡ ಕಟ್ಟಿದ ಆಯ್ದಕ್ಕಿ ಲಕ್ಕಮ್ಮ ,
ತಪ್ಪುಗಳ ಮನ್ನಿಸಿ, ತನ್ನನ್ನು ಸಮಾಜಕ್ಕೆ ಹುಟ್ಟಿಕೊಂಡ ಸೂಳೆ ಸಂಕವ್ವ,
ಸತ್ಯನಿಷ್ಠನ್ನಾಗಿ ಬದುಕು ಕಟ್ಟಿಕೊಂಡ ಮಡಿವಾಳ ಮಾಚಯ್ಯ,

ಮುಂತಾದವರ ಉದಾತ್ತತೆಯ ಕಾಣಬಹುದು.

ಇಷ್ಟೆಲ್ಲ ಇದ್ದರೂ ಹೆಣ್ಣು ಅಡುಗೆ ಮನೆಗೆ ಅಷ್ಟೆ ಸೀಮಿತ ಹೆಂಗಸು ಮಾಡುವುದು ಕಾಯಕವಲ್ಲ, ಪತಿ ಪ್ರತ್ಯಕ್ಷ ದೇವರು ಎಂದು ಬದುಕಬೇಕು ಎಂಬ ಅಪೇಕ್ಷೆ ಇಲ್ಲಿಯೂ ಕಾಣತೊಡಗುತ್ತದೆ. ಮಹಾತ್ಮ ಎನಿಸಿಕೊಳ್ಳಬೇಕಾದರೆ ಮನೆ ಮಠದ ಚಿಂತೆ, ಬದುಕಿನ ಏರಿಳಿತದ ಚಿಂತೆ ಬಿಟ್ಟು ನಡೆಯಬೇಕು ಲೋಕ ಕಲ್ಯಾಣದ ಚಿಂತೆಯನ್ನು ಹೊತ್ತು.

ಕಲ್ಯಾಣ ತೊರೆದು ಹೊರಟ ಅಕ್ಕನಿಗೆ ಕಲ್ಯಾಣದ ಇನ್ನೊಂದು ಮುಖ ಪರಿಚಯವಾಗುತ್ತದೆ. ಬಿದ್ದಾಗ ಮಾತ್ರ ಒಂದೊಂದು ಸಮುದಾಯದ ನೆನಪು ಮಾಡಿಕೊಳ್ಳುವುದು ಎಷ್ಟು ಸಮಂಜಸ.? ಈ ಪ್ರಶ್ನೆ ಇಂದಿಗೂ ಪ್ರಸ್ತುತ.

ಈ ಸಮಸ್ಯೆ 12ನೇ ಶತಮಾನದಲ್ಲ 21ನೇ ಶತಮಾನದಲ್ಲಿಯೂ ಚಾಲ್ತಿಯಲ್ಲಿದೆ.

ಐದನೇ ಅಧ್ಯಾಯ ಬಲ್ಲವರಿಂದ ಪೇಳಿ ರಾಯನ ಮರು ಭೇಟಿ, ಅವನ ಅತಿ ವಿನಯ ,ಆಕೆಯಲ್ಲಿ ಚಿತ್ತ ಚಂಚಲತೆಯನ್ನು ತಂದರು ದೃಢವಾದ ನಿರ್ಧಾರ ಕಠಿಣ ವ್ಯಕ್ತಿತ್ವ ಮುನ್ನಡೆಯನ್ನು ಪ್ರಚೋದಿಸುತ್ತದೆ. ಅತ್ಯುತ್ತಮವಾದ ಕೆಲಸಗಳನ್ನು ಹಿಡಿದ ಕೆಲಸ ಕಟ್ಟಿಕೊಂಡ ಗುರಿಯ ದಾರಿ ತಲುಪಬೇಕಾದರೆ, ಅಂಟು ನಂಟು ಗಂಟು ಭಾವನಾತ್ಮಕ ನೆಲೆಗಟ್ಟು ಎಲ್ಲವನ್ನು ತೊರೆದು ಎದ್ದು ನಡೆಯಬೇಕು ಎಂದು ಅಕ್ಕ ಬದುಕಿದ ರೀತಿ ನಾವು ಬದುಕಲು ಪ್ರೇರೇಪಿಸುತ್ತದೆ . ಏನೇ ಆದರೂ ಸಮ ಸ್ಥಿತಿಯಲ್ಲಿ ಸಾಗುವ ಅಕ್ಕನ ವ್ಯಕ್ತಿತ್ವ ಈ ದಿನ ಈ ಕ್ಷಣ ನಮ್ಮೆಲ್ಲರಿಗೂ ಅತ್ಯವಶ್ಯಕವಾಗಿ ಬೇಕಾಗಿದೆ.

“ಬಂಧು-ಬಳಗ ಮನೆ ಆಸ್ತಿ ಒಡವೆ ಎಲ್ಲವನ್ನು ಬಿಡುವುದು ಸುಲಭವಲ್ಲದಿದ್ದರೂ ಸಾಧ್ಯ ಆದರೆ ನಾನು ನನ್ನದು ಎಂಬ ಅಹಂನ್ನು ಕೀರ್ತಿ ಹೆಸರಿನ ಅಪಹಪಿಯನ್ನು ಬಿಡದಿದ್ದರೆ ಹೇಗೆ ತಾನು ತನ್ನದು ಹೆಚ್ಚೆಂದು ಬಡಿದಾಡುವರನ್ನು ಸಾಧಕರು ಸಂತರು ಎನ್ನಬಹುದೇ”

ಇನ್ನು ಮುಂದುವರೆದು ನಾನು ನನ್ನದೆಂಬ ಇರಾದೆಯನ್ನು ತೊರೆಯದೆ ನೆಮ್ಮದಿಯ ಹೊನಲು ಎಲ್ಲಿದೆ? ಎಂದು ಪ್ರಶ್ನಿಸಿಕೊಳ್ಳುವ ಅಕ್ಕನಗುಣ ಇಂದು ನಮ್ಮ ಪರಿಸ್ಥಿತಿಯನ್ನು, ನಾವಿರುವ ಸಂದರ್ಭವನ್ನು ಪ್ರಶ್ನಿಸುತ್ತಿದೆ.

ಧರ್ಮ, ಗುಂಪು, ಶಿವ, ರುದ್ರ, ಭಸ್ಮ ಮತ್ತು ವಿಭೂತಿ ಇವೆಲ್ಲವೂ ನಾವುಗಳೇ ರೂಪಿಸಿಕೊಂಡ ರೂಪಾಂತರಗಳು “ಯಾವ ಧರ್ಮದ ಕೈಯಲ್ಲಿ ಕುಸುಮ ಬಾಡದೆ ಬತ್ತದೆ ಇರುವುದು ಅದೇ ಗೆಲುವು ಜ್ಞಾನಿಗೆ ಉದ್ವೇಗ ಇರುವುದಿಲ್ಲ ನಿಶಜ್ಞಾನಕ್ಕೆ ಗೆಲ್ಲುವ ಆತುರ ವಿರುವುದಿಲ್ಲ” ಎಂಬ ಮಾತುಗಳು ನಮ್ಮಯ ಇಂದಿನ ಪರಿಸ್ಥಿತಿಯ ವಿಷಮ ಸ್ಥಿತಿಯನ್ನು ನೆನಪಿಸುತ್ತದೆ.

ಮುಂದುವರೆದು ಅಕ್ಕನ ಐಕ್ಯಳಾಗುವ ಸಂಗತಿ ,ಚೆನ್ನಮಲ್ಲಿಕಾರ್ಜುನನ್ನು ಸೇರುವ ಉತ್ಕಟತೆ ಆಕೆ ಇನ್ನೂ ಅಲ್ಲಿ ಜೀವಂತವಾಗಿದ್ದಾಳೆ ಎಂದು ನಂಬುವ ಜನರ ನಂಬಿಕೆ, ಇಂದೊಮ್ಮೆ ಶ್ರೀಶೈಲಕ್ಕೆ ಹೋಗಿ ಬಂದರೆ ಆ ಕದಳಿಯಲ್ಲಿ ನಿಂತು ಬಂದರೆ ಅಕ್ಕ ನಮಗೆ ರಾಚಿದರು ರಾಚಬಹುದು.

ವೈಯಕ್ತಿಕ ಅಭಿಪ್ರಾಯ ಒಂದು ಪುಸ್ತಕ ಮನುಷ್ಯನ ಮೇಲೆ ಎಂತಹ ಬದಲಾವಣೆ ಗಾಳಿಯನ್ನು ಬೇಕಾದರೂ ಬೀಸಬಹುದು. ಜಗತ್ತು ಬದಲಾಗುತ್ತಿದೆ ಕಾಲಕ್ಕೆ ತಕ್ಕಂತೆ ನಮ್ಮಲ್ಲಿ ಬದಲಾವಣೆಗಳು ಸಹಜವಾಗಿವೆ 12ನೇ ಶತಮಾನದಲ್ಲಿ ಅಕ್ಕ ಕಂಡ ಅನುಭವ , ಅಕ್ಕನ ವಚನದ ಅನುಸಾರ ಇಂದಿಗೂ ಪ್ರಸ್ತುತ ಎನಿಸಲು ಕಾರಣವೇನು ? ಇಂದು ಸ್ವ ಪ್ರತಿಷ್ಠೆಗೆ, ಸ್ವ ಇಚ್ಛೆ ಗೆ ಎಷ್ಟರಮಟ್ಟಿಗೆ ಸ್ವಾತಂತ್ರ್ಯ ಇದೆ? ಶಿವಮೊಗ್ಗದ ಉಡುತಡಿಯಿಂದ ರಾಜ್ಯದ ಗಡಿದಾಟಿ ಶ್ರೀಶೈಲ ತಲುಪುವವರೆಗೂ ಅಕ್ಕ ಅನುಭವಿಸಿದ ಯಾತನೆ ಸಂಕಷ್ಟಗಳನ್ನು ಹಿಂದಿನ ಹೆಣ್ಣು ಅನುಭವಿಸುತ್ತಿಲ್ಲವೇ? ಪ್ರಮಾಣ ಬೇರೆ ಇರಬಹುದು.

‘ಬೆಳಗಿನೊಳಗು ಮಹಾದೇವಿಯಕ್ಕ’ ಕಾದಂಬರಿಗಾರ್ತಿ ಡಾ.ಎಚ್.ಎಸ್.ನಿರುಪಮಾ

ಕೇಶವನ್ನೇ ವಸ್ತ್ರವಾಗಿಸಿ ಸಾಗುವಾಗ ಅವಳೊಳಗೆ ಎದ್ದ ಜ್ವಾಲಾಮುಖಿ ಇಂದು ನಮ್ಮಲ್ಲಿ ಏಳುತ್ತಿಲ್ಲ ಏಕೆ? ಸಮಸ್ಯೆಗಳು ಮುಂದೆ ರೂಪಗಳು ಬೇರೆ ಬೇರೆ ಹಮ್ಮು ಬಿಮ್ಮು ತೊರೆದು ಸಾಗಿದರೆ ಬಹುಶಃ ಅಕ್ಕನ ಧೈರ್ಯ ಎದೆಯ ತಪ್ಪಲತಟ ತಲುಪಲಿಲ್ಲವೆಂದರೂ, ಆಕೆ ನಡೆದ ದಾರಿಯಲ್ಲಿ ಸಾಗಲಿಲ್ಲ ಎಂದರು ಒಂದೆಜ್ಜೆ ಕಿತ್ತಿಡಲು ಧೈರ್ಯವಾದರು ಎದೆಗೂಡ ದಾಟಬಹುದು.

ಉಳಿಪೆಟ್ಟು ತಿಂದರು ಪೂರ್ಣ ಶಿಲೆಯಾಗದ ಏಕೈಕ ಚಲನ ವಸ್ತು ಮನುಷ್ಯ ಅದಕ್ಕೆ ಅಲ್ಲವೇ ಸ್ಥಾವರಕ್ಕೆ ಅಳಿವುಂಟೂ, ಜಂಗಮಕ್ಕೆ ಅಳಿವಿಲ್ಲ ಎಂದು ಹೇಳಿದ್ದು, ಈ ಪುಸ್ತಕ ಓದುವಾಗ ನನಗೆ 12ನೇ ಶತಮಾನದಲ್ಲಿ ಇದೀನಿ ಅನಿಸ ತೊಡಗಿದ್ದು ಸತ್ಯ ಯಾಕೆಂದರೆ ಇಂದಿಗೂ ಸಮಸ್ಯೆಗಳು ಬಗೆಹರಿದಿಲ್ಲ. ಮುಕ್ತ ಮನಸ್ಸಿನಿಂದ ಹೇಳಬೇಕು ಎಂದರೆ ಸಂಪ್ರದಾಯ, ಚೌಕಟ್ಟು, ಜಾತಿ ಧರ್ಮದ ಹಂಗನ್ನು ನಾವುಗಳೆ ತೊರೆಯುವುದಿಲ್ಲ. ಅಂದು ಭಿನ್ನಾಭಿಪ್ರಾಯ ತಂದಿದ್ದು ಶೈವ ವೈಷ್ಣವ ಜಿನಾ ,ಲಿಂಗಾಯಿತ ಧರ್ಮಗಳ ನಡುವೆ ಕಿಚ್ಚು ಹತ್ತಿತ್ತು.

ಇಂದಿನ ಸುದ್ದಿ ಸಮಾಚಾರ ನೋಡಿದರೆ ಜಾತಿ ,ಧರ್ಮದ ತಿಕಲಾಟ ಬೂದಿ ಮುಚ್ಚಿದ ಕೆಂಡದ ಆಗಿದೆ.

ನಿಮ್ಮದೇ ಬದುಕಿಗೆ ನೀವೇ ಹಕ್ಕುದಾರರು ಎಂದು ಬಡಬಡಿಸುವ ಜನತೆ ಒಂಟಿ ಹೆಣ್ಣಿನ ಜೀವನವನ್ನು ನೋಡುವ ದೃಷ್ಟಿ ಯಾವುದು ಎಂದು ಕೇಳಬೇಕು? ಅಕ್ಕನಿಗೂ ಎಲ್ಲರಿಂದ ರಕ್ಷಣೆ ಸಿಗಲಿಲ್ಲ ಅವಳ ಹಾದಿಯಲ್ಲಿ ಕಾಮುಕರಿದ್ದರು , ನೀಚರಿದ್ದರು, ದೂರುವರು ಇದ್ದರು ಕುಹಕ ನುಡಿಯುವವರು ಇದ್ದರು, ಎಲ್ಲರೂ ಇದ್ದರು ಇಲ್ಲದಂತೆ ಇರುವ ಹಾಗೆ ಬಗೆದು ನಡೆದಳು ನಡೆದಳು

ದಾರಿಯುವುದಕ್ಕೂ ವಿಸ್ಮಯಗಳನ್ನು ಜೋಳಿಗೆ ತುಂಬಿಸಿಕೊಳ್ಳುತ್ತಾ ಪದಕಟ್ಟುತ್ತಾ ಪದವಾಗುತ್ತಾ ಪಸರಿಸಿದಳು. ಹಬ್ಬಿದ ಮಲೆಯಂತೆ ಹಬ್ಬುತ್ತಾ ಸಾಗಿದಳು ಸಾಗುವ ದಾರಿಯಲ್ಲಿ ಘಮಲನ್ನು ಉಳಿಸಿ ನಡೆದಳು ಚೆನ್ನಮಲ್ಲಿಕಾರ್ಜುನ ಎಂಬ ಗಮ್ಯ ಸೇರಲು ಆತನನ್ನು ತಲುಪಿ ಆವರಿಸಿ ಆವರಣ ಆಗಲು

ಬೆಳಗಿನ ಒಳಗೂ,
ನಮ್ಮಯ ಒಳಗೂ
ಸವಿಸ್ತಾರವಾಗಿ ಇಳಿಯುತ್ತದೆ..
ಎಂದು ಮನುಕುಲ ನಾನು ನನ್ನದು ಬಿಟ್ಟು,
ಮನುಷ್ಯನ ಬಗ್ಗೆ, ಹೆಣ್ಣಿನ ಬಗ್ಗೆ ಮಾನವೀಯತೆ
ತೋರುತ್ತಾನೊ ಅಂದು
ಮನ್ವಂತರ ಆರಂಭ ಆಗುತ್ತದೆ.


  • ಅಮೃತ ಎಂ ಡಿ – ಕವಿಯತ್ರಿ, ಶಿಕ್ಷಕಿ, ಲೇಖಕಿ, ಶಿವಮೊಗ್ಗ. 

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW