ವರ್ತಮಾನದ ತಲ್ಲಣ, ಸ್ತ್ರೀ ಸಂವೇದನೆಯ ಪ್ರತಿಧ್ವನಿ (ಭಾಗ ೭)

ಸಮಾಜದಲ್ಲಿ ಹೆಣ್ಣು ಮತ್ತು ಹೆಣ್ಣಿನ ಸುತ್ತ ಇರುವ ವ್ಯವಸ್ಥೆಯನ್ನು, ಅಲ್ಲಿರುವ ಕಟ್ಟುಪಡುಗಳು, ಟೀಕೆಗಳು ಹಾಗೂ ತಾವು ಅವುಗಳನ್ನು ಮೀರಿ ಬದುಕು ಕಟ್ಟಿಕೊಂಡ ಬಗೆಯನ್ನು ತಮ್ಮದೇ ಆದ ದನಿಯಲಿ ಮಹಿಳೆಯರು ಅವಲೋಕಿಸಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದನ್ನು ರೇಶ್ಮಾ ಗುಳೇದಗುಡ್ಡಕರ್ ಅವರು ತಮ್ಮ ಲೇಖನಿಯಲ್ಲಿ ಹೆಣ್ಣಿನ ಧ್ವನಿಯನ್ನು ಓದುಗರ ಮುಂದಿಟ್ಟಿದ್ದಾರೆ, ತಪ್ಪದೆ ಮುಂದೆ ಓದಿ…

  • ಸುಮಾ ಭಟ್,  ಭರವಸೆಯ ಯುವ ಬರಹಗಾರರು, ಮೈಸೂರು. 

ಯತ್ರ ನಾರ್ಯಸ್ತು ಪೂಜ್ಯನ್ತೇ
ರಮನ್ತೇ ತತ್ರ ದೇವತಾಃ ।
ಯತ್ರೈತಾಸ್ತು ನ ಪೂಜ್ಯನ್ತೇ
ಸರ್ವಾಸ್ತತ್ರಾಫಲಾಃ ಕ್ರಿಯಾಃ ।

ನಮ್ಮ ಮನುಸ್ಮೃತಿಯಲ್ಲಿ ಈ ಶ್ಲೋಕದ ಉಲ್ಲೇಖವಿದೆ, ಎಲ್ಲಿ ಮಹಿಳೆಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸುತ್ತಾರೆ, ಎಲ್ಲಿ ಅವರಿಗೆ ಬೆಲೆ ಸಿಗುವುದಿಲ್ಲವೋ ಅಲ್ಲಿ ನಡೆಸಿದ ಕಾರ್ಯಕ್ಕೆ ಸಿದ್ಧಿ ಸಿಗುವುದಿಲ್ಲಾ ಎಂದು ಹೇಳಲಾಗುತ್ತದೆ.ಇಂದಿನ ಸಮಾಜದಲ್ಲಿ ಆ ಜಾತಿ, ಈ ಜಾತಿ ಹಿಂದುಳಿದದ್ದು ಎಂಬ ಮಾತಿದೆ,ಆದರೆ ನಿಷ್ಟೂರವಾಗಿ ಹೇಳಬೇಕೆಂದರೆ ಇಂದಿಗೂ ಒಂದು ರೀತಿಯ ಶೋಷಿತ ವರ್ಗವೆಂದರೆ ಅದು ಹೆಣ್ಣು ಕುಲವೇ.

ಹೆಣ್ಣಿಗೇಕೆ ಓದು? ಹೆಣ್ಣಿಗೇಕೆ ಹೊರಗಿನ ಪ್ರಪಂಚ?, ಅವಳೇತಕ್ಕೆ ಸಾಧನೆ ಮಾಡಲು ಹೋಗಬೇಕು? ಎಂಬ ಪ್ರಶ್ನೆ ಇಂದಿಗೂ ಸಮಾಜದಲ್ಲಿ ನಾಯಿಕೊಡೆಯಂತೆ ಅಲ್ಲೊಂದು ಇಲ್ಲೊಂದು ಎದ್ದುನಿಂತಿವೆ .ಹೆಣ್ಣು ತನ್ನ ಅಸ್ತಿತ್ವದ ಹೋರಾಟಕ್ಕೆ ಶತ ಶತಮಾನಗಳಿಂದಲೂ ಹೋರಾಡುತ್ತಲೇ ಬಂದಿದ್ದಾಳೆ.ಅವಳಿಗೆ ಈ ಸಮಸ್ಯೆ ವರ್ತಮಾನದಲ್ಲಿ ಮಾತ್ರವಲ್ಲಾ ಯುಗ ಯುಗದಿಂದಲೂ ಇದೆ ಎಂದರೆ ತಪ್ಪಿಲ್ಲ.

ಹಲವಾರು ವರ್ಷದ ಹಿಂದೆ ಪೂರ್ವಜರು ಹೇಳಿದ ಈ ಶ್ಲೋಕದ ಮಹತ್ವ ಅರಿತು,ಈ ನಿಯಮವನ್ನು ಪಾಲಿಸುವುದು ಸೂಕ್ತವಲ್ಲವೇ? ಎಂಬುದು ನನ್ನ ಅಭಿಮತ.

ಮೊದಲಿಗೆ ಹೆಣ್ಣಿನ ಶೋಷಣೆ ಮಾಡುವುದು ಗಂಡಿಗಿಂತ ಹೆಣ್ಣೇ ಉದಾಹರಣೆಗೆ ಹೆಣ್ಣಿಗೇಕೆ ಆ ಮಟ್ಟದ ವಿದ್ಯಾಭ್ಯಾಸ ಎಂಬ ಪ್ರಶ್ನೆ ಮೊದಲು ಹೆತ್ತವಳೇ ಕೇಳುತ್ತಾಳೆ!, ಇನ್ನು ಮದುವೆಯಾದ ಮೇಲೆ ಅವಳು ತನ್ನ ಮಗನನ್ನು ನೋಡಿಕೊಂಡು ಮೊಮ್ಮಕ್ಕಳು ನೀಡಿದರೆ ಸಾಕೆಂಬ ಮನೋಭಾವದ ಅತ್ತೆಯರು.ಅವಳು ನಾಲ್ಕು ಗೋಡೆಯಲ್ಲಿ ಬಂಧಿತಳಾಗಿರುವುದರಿಂದಲೇ ಅವಳು ಆ ಮಟ್ಟದ ಸಾಧನೆ ಮಾಡಲಾಗದಿರುವುದು. ಸಾಧನೆ ಸುಮ್ಮನೆ ಆಗುವುದಿಲ್ಲಾ, ಸಮಸ್ಯೆ ಬಂದಾಗ ಎದುರಿಸಲು ಮೊದಲು ಮನೆಯವರ ಪ್ರೋತ್ಸಾಹ ಸಿಕ್ಕರೆ, ಹೊರಗಿನ ಸಮಾಜದ ಸವಾಲನ್ನು ದಿಟ್ಟವಾಗಿ ಎದುರಿಸಲು ಹೆಣ್ಣು ಸನ್ನದ್ಧಳಾಗುತ್ತಾಳೇನೋ.

ಹೆಣ್ಣಿನ ಅಭಿವೃದ್ಧಿಗೆ ಮೊದಲು ಹೆಣ್ಣಿನ ಅಸ್ತಿತ್ವವನ್ನು ಅವಳು ಸ್ಥಾಪಿಸಲು ನೆರವಾಗಬೇಕು. ಅವಳು ಸಮಾಜಕ್ಕೆ ಅವಳಿಂದಲೇ ಗುರುತಿಸಬೇಕಾದರೆ ಮೊದಲು ಅವಳು ವಿದ್ಯಾವಂತಹಳಾಗಬೇಕು, ಬರೀ ಪದವಿಗಳ ಮೂಲಕ ಅವಳು ವಿದ್ಯಾವಂತಳಾಗಬೇಕಿಲ್ಲಾ, ಸಮಾಜದ ಆಗುಹೋಗುಗಳ ತಿಳುವಳಿಕೆಯೊಂದಿಗೂ ಸಹ ವಿದ್ಯಾವಂತಳಾಗಬೇಕು. ಅವಳು ಸಮಾಜಕ್ಕೆ ಪ್ರಯೋಜಕಳಾಗಬಲ್ಲಳು ಎಂಬ ಸತ್ಯವನ್ನು ಮನೆಯಲ್ಲಿ ಅರಿತು ಅವಳಿಗೆ ಶಾಲೆಯ ಶಿಕ್ಷಣ, ಸಮಾಜದಲ್ಲಿ ಬದುಕುವ ಶಿಕ್ಷಣ ಪಡೆಯಲು ಹೊರಜಗತ್ತಿಗೆ ಕಳಿಸುವ ಗುರುತರ ಜವಾಬ್ದಾರಿ ಮೊದಲು ಹೆತ್ತವರಾದಾಗಿರುತ್ತದೆ. ಬೆಳೆದಂತೆ ಅವಳು ಹೋಗುವ ಗೃಹಸ್ಥ ಜೀವನದಲ್ಲಿ ಅದೇ ಅವಳ ಬೆಳವಣಿಗೆಗೆ ವೇದಿಕೆ ಕಲ್ಪಿಸುವ ಮನೆಯಿರಬೇಕು, ಇಲ್ಲವಾದರೆ ಹೆತ್ತವರು ಸಾವಿರ ಕನಸುಗಳನ್ನು ಹೊತ್ತು ಓದಿಸಿ ಅವಳ ಜೀವನದ ಮುಂದುವರಿಕೆಗೆ ಕಳಿಸಿದ ಮನೆ ಮನೆಯಾಗದೇ ಸಂಕೋಲೆಗಳ ಬಂಧೀಖಾನೆಯಾಗಬಹುದು….!?

ಅವಳಿಗೆ ತಂದೆಯ ಮನೆಯಲ್ಲಿ ನೀಡಿದ ಪ್ರೋತ್ಸಾಹದಂತೆ, ಗಂಡನ ಮನೆಯಲ್ಲಿ, ಗಂಡನಿಂದ ಮತ್ತವನ ಹೆತ್ತವರಿಂದಲೂ ಪ್ರೋತ್ಸಾಹ, ಸಹಕಾರ ದೊರಕಿದರೆ “ಇನ್ ಫೋಸಿಸ್” ಪ್ರತಿಷ್ಟಾನದ ಸುಧಾಮೂರ್ತಿಯವರಂತಹ ಉತ್ತಮ ಹೆಣ್ಣಿನ ಕೊಡುಗೆ ಸಮಾಜಕ್ಕೆ ಸಿಗುತ್ತದೆ.ಇತ್ತ ಔದ್ಯೋಗಿಕ ರಂಗದಲ್ಲಿ ಇನ್ಫೋಸಿಸ್ ಸಂಸ್ಥೆಯಿಂದ ಹಲವಾರು ಉದ್ಯೋಗ ಸೃಷ್ಟಿಸಿ ಉದ್ಯೋಗದಾತರಾಗಿದ್ದಾರೆ.

ಅಲ್ಲದೇ ಇನ್ಫೋಸಿಸ್ ಪ್ರತಿಷ್ಠಾನ ಸೃಷ್ಟಿಸಿ ಸಮಾಜದಲ್ಲಿ ನೊಂದವರ ಬಾಳಿಗೆ ದಾರಿದೀಪವಾಗಿದ್ದಾರೆ.ಇನ್ನು ಕಾದಂಬರಿಗಳ ರಚನೆಯಲ್ಲಿ, ತನ್ನದೇ ಸ್ವಂತಿಕೆಯ ಅಭಿವ್ಯಕ್ತಿಗಳಿಂದ ಸಮಾಜದ ಸುಧಾರಣೆಗೆ ಟೊಂಕ ಕಟ್ಟಿ ನಿಂತಿದ್ದಾರೆ.ಇದು ಒಬ್ಬ ಸುಧಾಮೂರ್ತಿಯವರ ಸಾಧನೆಯ ಹಾದಿಯ ಸಣ್ಣ ತುಣುಕಷ್ಟೇ.ಇಂತಹಾ ಅಸಂಖ್ಯಾತ ಸುಧಾಮೂರ್ತಿಯವರನ್ನು ಹುಟ್ಟು ಹಾಕಲು ಸಮಾಜದಲ್ಲಿ ನಾವು ಮಾಡಬೇಕಾದ ಕೆಲಸವಿಷ್ಟೇ ಮೊದಲು ಅವಳಿಗೆ ಶಿಕ್ಷಣದ ಅವಶ್ಯಕತೆ ಅರಿತು, ಅದನ್ನು ನೀಡಿ ನಂತರ ಉದ್ಯೋಗ ರಂಗಕ್ಕಿಳಿಸಿ ಅವಳನ್ನು ಸ್ವಾವಲಂಬಿಯಾಗಿ ಮಾಡಿ ನಂತರ ಅವಳಿಗೆ ಸಂಸಾರದ ನೊಗ ನೀಡಬೇಕು.ಆಗ ಹೆಣ್ಣು ಬೆಳೆಯುತ್ತಾಳೆ, ಅವಳು ಬೆಳೆಯುತ್ತಾ ಸಮಾಜವನ್ನು ಬೆಳೆಸುತ್ತಾಳೆ.
ಹೆಣ್ಣು ಎಂದರೆ ಶಕ್ತಿ,ಯುಕ್ತಿ, ಭಕ್ತಿ ಇವುಗಳ ಸಮಾಗಮ.

ಅವಳು ಈ ಮೂರರ ಸಮ್ಮಿಳಿತವಾದ ಕಾರಣದಿಂದಲೇ ಅವಳಲ್ಲಿ ಒಂದು ವಿಶಿಷ್ಟತೆ ಇದೆ.ಹೆಣ್ಣು ಅಡುಗೆ ಮನೆಗಷ್ಟೇ ಮೀಸಲು ಎಂಬ ಕಾಲವೊಂದಿತ್ತು, ಈಗ ಜಗತ್ತಿನ ಎಲ್ಲಾ ರಂಗದಲ್ಲೂ ಅವಳು ಕಾಲಿಟ್ಟಿದ್ದಾಳೆ, ಇನ್ನು ಕೆಲವು ರಂಗದಲ್ಲಿ ವ್ಯಾಪಿಸಲು ತಯಾರಿ ನಡೆಸುತ್ತಿದ್ದಾಳೆ.ಹೆಣ್ಣು ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಬಾಲ್ಯದಿಂದಲೇ ಬೆಳೆಸಿದರೆ ಅವಳು ಬೆಳೆದು ಸಮಾಜದ ಸರ್ವತೋಮುಖ ಬೆಳವಣಿಗೆಗಳಿಗೆ ಕಾರಣವಾಗುತ್ತಾಳೆ. ಇನ್ನು ಸಮಾಜದ ಬೇರೆ ಬೇರೆ ರಂಗ ಪ್ರವೇಶಿಸುವ ಹೆಣ್ಣು ಮಕ್ಕಳಿಗೆ, ಮೊದಲ ತೊಡರು ಮನೆಯಿಂದಲೇ!

ಅವಳು ಹೊರಗೆ ಎಷ್ಟೇ ಜವಾಬ್ದಾರಿಯುತ ಹುದ್ದೆಯಲ್ಲಿರಲಿ, ಮನೆಯ ಕೆಲಸ ಅವಳೇ ಮಾಡಬೇಕೆಂಬ ಕಟ್ಟುಪಾಡು, ಆದರೆ ಗಂಡಿಗೆ ಮಾತ್ರಾ ಆ ನಿಬಂಧನೆ ಇಲ್ಲಾ.
ಇದು ಒಂದೆರಡು ಮನೆಯ ಕಷ್ಟವಲ್ಲಾ ಹಲವು ವಿದ್ಯಾವಂತ ಮನೆಯಲ್ಲಿ ಸಹಾ ಈ ಸಮಸ್ಯೆ ಇದೆ. ನಿಜ ಹೆಣ್ಣು ಎರಡೂ ಕಡೆ ದುಡಿಯುವುದರಲ್ಲಿ ತಪ್ಪಿಲ್ಲಾ, ಆದರೆ ಗಂಡೇಕೆ ಮನೆಕೆಲಸ ಮಾಡಬಾರದು?ಗಂಡಿನ ಸಾಧನೆ ಔದ್ಯೋಗಿಕ ರಂಗಕ್ಕೆ ಮಾತ್ರ ಮೀಸಲೇ? ಅವನೂ ಮನೆಗೆಲಸ ಮಾಡಿದರೆ ತಪ್ಪೇನು?

ಇಲ್ಲಿ ಕೆಲಸಕ್ಕಿಂತ ಎಲ್ಲಾ ವಿಚಾರದಲ್ಲೂ ಗಂಡು ಶ್ರೇಷ್ಟತೆಯ ಸಂಕೀರ್ಣ ತನ್ನ ಪರಿಚಯವಾಗಿ ಮಾಡಿಕೊಂಡಿರುವುದರಿಂದ ಹೀಗಾಗುತ್ತಿರುವುದು ಎಂದರೆ ತಪ್ಪಿಲ್ಲಾ.ತಾಯಿಯ ಒಡಲಿನಿಂದಲೇ ಹುಟ್ಟುವ ಮನುಕುಲದ ಎರಡು ಪ್ರಭೇದ ಹೆಣ್ಣು ಮತ್ತು ಗಂಡಿನ ಸ್ಥಾನಮಾನಗಳಲ್ಲಿ ಭಿನ್ನತೆ ಏಕೆ?. ತೊಟ್ಟಿಲು ತೂಗೋ ಕೈ ದೇಶವಾಳುವ ಸಮರ್ಥತೆ ಬೆಳೆಸಿಕೊಂಡ ಮೇಲೆ, ಹೊರಗಿನ ಪ್ರಪಂಚದಲ್ಲಿ ಪ್ರಾಬಲ್ಯ ಸಾಧಿಸಿ ತನ್ನನ್ನು ಉನ್ನತ ಸ್ಥಾನದಲ್ಲಿರಿಸಿಕೊಂಡ ಪುರುಷ ತೊಟ್ಟಿಲು ತೂಗಿ, ಮನೆಕೆಲಸ ಮಾಡಿದರೆ ತಪ್ಪಿಲ್ಲಾ ಅಲ್ಲವೇ…
ಮಾನವ ಬದುಕಿನ ಒಂದು ನೂತನ ಆವಿಷ್ಕಾರವಾದ ಮಗುವಿನ ಹುಟ್ಟಿಗೇ ಇಬ್ಬರ ಸಹಯೋಗವೂ ಬೇಕಿದೆ, ಹೆಣ್ಣೊಬ್ಬಳಿದ್ದರೂ ಏನು ಮಾಡಲಾಗದು, ಪುರುಷನೊಬ್ಬನಿಂದಲೂ ಏನು ಮಾಡಲಾಗದೂ ಹಾಗಿದ್ದ ಮೇಲೆ ಭಗವಂತನ ಸೃಷ್ಟಿಯ ಹೆಣ್ಣು, ಗಂಡಿನಲ್ಲಿ ಬೇಧವೇಕೆ? ಭಗವಂತನ ಸೃಷ್ಟಿಯಲ್ಲಿ ಯಾರೂ ಮೇಲಲ್ಲಾ, ಯಾರೂ ಕೀಳಲ್ಲಾ ಆದರೆ ಮನುಷ್ಯನಿಂದ ಈ ತಾರತಮ್ಯನಿರ್ಮಾಣವಾಗಿದೆ ಎನ್ನಬಹುದು.ಹೆಣ್ಣಿನ ತಲ್ಲಣ, ಮಾನಸಿಕ ಕ್ಷೋಭೆಗಳ ನಿಯಂತ್ರಣಕ್ಕೆ ಮೊದಲು ಹೆಣ್ಣು ತಾನು ಮುಂದಾಗಿ, ಸಮಾಜದಲ್ಲಿ ಸ್ಪಷ್ಟವಾಗಿ ತನ್ನ ನಿಲುವು, ಧೋರಣೆಗಳನ್ನು ಪ್ರಚುರಪಡಿಸಿದರೆ, ಆಗ ಇಂದಿನ ದಿನಗಳಲ್ಲಿ ಅರೆ-ಬರೆಯಾಗಿರುವ ಸುಧಾರಣೆ ಸಂಪೂರ್ಣವಾಗಲು ವೇದಿಕೆ ನಿರ್ಮಾಣವಾಗುತ್ತದೆ, ಏನಂತೀರಾ?????
ನಲ್ಮೆಯಿಂದ.

****

  • ರಶ್ಮಿ ಉಳಿಯಾರು, ಭರವಸೆಯ ಯುವ ಬರಹಗಾರರು, ಬ್ಲಾಗರ್. 

ನಾವು ಸಮಾನತೆ ಬೇಕು ಅಂತ ಎಷ್ಟೇ ದೊಡ್ಡ ದನಿದಲ್ಲಿ‌ ಹೊರ ಜಗತ್ತಿನಲ್ಲಿ ಕೂಗಿ ಹೇಳಿದರೂ ಹೆಣ್ಣುಮಕ್ಕಳ ಸಮಾನತೆ ಪ್ರಾರಂಭವಾಗಬೇಕಾದುದು ಮನೆಗಳಿಂದಲೇ. ಪ್ರತಿ ಮನೆಗಳಲ್ಲಿ ಪುರುಷರು ಅವರ ಪತ್ನಿ, ಮಗಳು ಮತ್ತು ಇತರ ಹೆಣ್ಣುಮಕ್ಕಳನ್ನು ನಡೆಸಿಕೊಳ್ಳುವ ರೀತಿಯಿಂದಲೇ ಇದನ್ನು ಶುರು ಮಾಡಬಹುದು.

“ಹೆಂಡತಿ ಒಬ್ಬಳು ಮನೆಯೊಳಗಿದ್ದರೆ ನನಗದೇ ಕೋಟಿ ರೂಪಾಯಿ
ಹೆಂಡತಿಯೊಬ್ಬಳು ಹತ್ತಿರವಿದ್ದರೆ ನಾನು ಒಬ್ಬ ಸಿಪಾಯಿ”

“ಮನೆ ಮನೆಯಲಿ ದೀಪ‌ ಮುಡಿಸಿ
ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆ‌ ಮಗುವ ತಬ್ಬಿದಾಕೆ,
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಅಂದರೆ‌ ಅಷ್ಟೇ ಸಾಕೇ?”

ಎಷ್ಟು ಸುಂದರ ಸಾಲುಗಳು ಅಲ್ಲವೇ…! ನಮ್ಮ ಕವಿಗಳು ಮಹಿಳೆಯನ್ನು ಗೌರವದಿಂದ ಕಂಡವರು. ಆಕೆಯ ಮಹತ್ವ ಅರಿತವರು. ಆಕೆಯ ಬಗ್ಗೆ ಪದ‌ ಕಟ್ಟಿ ಹಾಡಿದವರು. ಆದರೆ ನಾವು ನಿಜವಾಗಿಯೂ ಆಕೆಯನ್ನು ಆಕೆಗೆ ಸಹಜವಾಗಿ ದೊರೆಯಬೇಕಾದ ಅಂತಃಕರಣದಿಂದ ಕಾಣುತ್ತಾ ಇದ್ದೆವೆಯೇ…? ಆಕೆ ತನ್ನವರ‌ ಬಗ್ಗೆ ತನ್ನ ಕುಟುಂಬದ ಬಗ್ಗೆ ಮಾಡುವ ನಿಸ್ವಾರ್ಥ ಸೇವೆ ಕಾಳಜಿಗೆ ಪ್ರತಿಯಾಗಿ ಆಕೆಗೆ ಸಮಾನವಾದ ಸಹಜೀವಿ ಎಂಬ ಅಭಿಮಾನವನ್ನು, ಗೌರವವನ್ನು ನೀಡುತ್ತಿಲ್ಲ.

ಎಷ್ಟೋ ಬಾರಿ ಪ್ರತಿಭಾವಂತ ಮಹಿಳೆಯರಿಗೆ, ಲೇಖಕಿಯರಿಗೆ, ಹಾಡುಗಾರ್ತಿಯರಿಗೆ, ನೃತ್ಯ ಪಟುಗಳಿಗೆ, ಚಿತ್ರ ಕಲಾವಿದೆಯರಿಗೆ ಹೊರ ಜಗತ್ತಿನಲ್ಲಿ ಸಿಗುವ ಗುರುತಿಸುವಿಕೆ, ಗೌರವ, ಪ್ರೋತ್ಸಾಹ ಮನೆಯಲ್ಲಿ ಚೂರೂ ಸಿಗುವುದಿಲ್ಲ. ‘ಅದೇನು ಮಹಾ! ನೀನು ಮೊದಲು ಮನೆ ಕೆಲಸ ನೋಡು, ಅದು ಮುಖ್ಯ. ನೋಡು ಸಾರು ಬರೀ ಸಪ್ಪೆಯಾಗಿದೆ’ ಅಂತ ಮೂದಲಿಸಿ ಅವಳನ್ನು ‌ಮನೆಗಷ್ಟೆ ಸೀಮಿತ ಮಾಡಲು ಪ್ರಯತ್ನಿಸುತ್ತಾರೆ. ‘ಏನು ಮಾಡಿದರೆ ಏನು ಬಂತು ಲಾಭ, ಮೊದಲು ಮುಸುರೆ ತಿಕ್ಕೋದು ನೋಡು!’ ಎಂಬೆಲ್ಲಾ ಅವಹೇಳನದ ಮಾತುಗಳು…

ಮನೆಯವರ ಈ ರೀತಿಯ ತಾತ್ಸಾರ ಹಲವರಲ್ಲಿ ಇನ್ನಷ್ಟು ಪ್ರತಿಭೆಯನ್ನು ಹೊರ ಸೂಸುವ ಛಲ ತಂದರೆ ಅನೇಕರು ನಿರುತ್ಸಾಹದಿಂದ‌ ಮೂಲೆ ಸೇರಿ ಎಲ್ಲವನ್ನೂ ಬಿಟ್ಟು ಬಿಡುತ್ತಾರೆ. ಯಾಕೆ ಹೀಗೆ? ಎಷ್ಟೇ ವಿದ್ಯಾವಂತರಾದರೂ ನಮ್ಮ ಮನಸ್ಸೇಕೆ ಜಡ್ಡುಗಟ್ಟಿದೆ. ಗುಣಕ್ಕೆ ಮತ್ಸರ ಇರಬಾರದು. ಯಾರೇ ಆದರೂ ಪ್ರತಿಭೆ ಮತ್ತು ಉತ್ತಮ‌ಗುಣ ಕಂಡರೆ‌
ಮೆಚ್ಚುಗೆ ವ್ಯಕ್ತಪಡಿಸುವುದು ಸಹೃದಯರ ಲಕ್ಷಣ ತಾನೇ…

ಪ್ರತೀ ಮನೆಗಳಲ್ಲಿ ಕುಟುಂಬ ಸದಸ್ಯರು ಅವರ ಕೆಲಸಗಳನ್ನು ಸಾಧ್ಯವಾದಷ್ಟು ಅವರೇ ಮಾಡಿಕೊಳ್ಳುವಂತಾದರೆ ಮಹಿಳೆಯ ಮೇಲಿನ ಹೊರೆ ಅಷ್ಟು ಕಡಿಮೆಯಾದಂತೆ ಅಲ್ಲವೇ. ತಾವು ತಿಂದ ತಟ್ಟೆಗಳನ್ನು ಸಿಂಕಿಗೆ ಹಾಕುವುದಷ್ಟೇ ಅಲ್ಲದೆ ತಾವೇ ತೊಳೆದಿಡುವುದು, ತಮ್ಮ‌ ಬಟ್ಟೆಗಳನ್ನು ‌ಮಡಚಿಡುವುದು, ತಮ್ಮ ಕೋಣೆಗಳಲ್ಲಿ ವಸ್ತುಗಳನ್ನು ಜೋಡಿಸಿ ಇಡುವುದು. ಹೀಗೆ ಸಣ್ಣ ಕೆಲಸಗಳನ್ನು ಮಕ್ಕಳೂ ಸೇರಿದಂತೆ ಎಲ್ಲರೂ ಮಾಡಬಹುದು. ಇದು ಆಕೆಯ ಕೆಲಸವನ್ನು ಎಷ್ಟೋ ಹಗುರ ಮಾಡುತ್ತದೆ. ಅಲ್ಲದೇ ಕುಟುಂಬದ ಬಾಂಧವ್ಯವನ್ನೂ ಪರಸ್ಪರ ವೃದ್ಧಿಸುತ್ತದೆ.

ನೀವು ಪತ್ರಿಕೆಗಳಲ್ಲಿ ಬರುವ ಕಾರ್ಟೂನ್ಗಳನ್ನು ಗಮನಿಸಿರಬಹುದು‌. ಒಂದೋ ಹೆಂಡತಿ ವಿಪರೀತ ದಪ್ಪವಾಗಿ ಇರುವ, ಗಂಡ ನರಪೇತಲನಾಗಿ ಇರುವ, ಗಂಡನ ತಲೆಗೆ ಲಟ್ಟಣಿಗೆಯಿಂದ‌ ಹೊಡೆಯುವ, ಹೆಂಡತಿಗೆ ಹೆದರುವ ಗಂಡನ, ಬಡಪಾಯಿ ಗಂಡನ ಚಿತ್ರಣ ಇರುತ್ತದೆ. ಇದು ತಮಾಷೆಗಾಗಿ ಅಂತ ಮಾಡಿದರೂ ಸಮಾನತೆ ಅಂತ ಮಾತನಾಡುವುದಾದರೆ ಇದು ಹೆಣ್ಣುಮಕ್ಕಳ ತಪ್ಪಾದ ಚಿತ್ರಣ. ಬದಲಾವಣೆ ಇಲ್ಲೂ ಆಗಬೇಕು.

ಹೆಣ್ಣುಮಕ್ಕಳು ಕಾಲೇಜಿನಲ್ಲಿ ಜಾಸ್ತಿ ಗೆಳೆಯ ಗೆಳತಿಯರನ್ನು ಹೊಂದಿದ್ದರೂ ಮದುವೆಯಾದ ಮೇಲೂ ಅಷ್ಟೇ ಬಾಂಧವ್ಯ ಉಳಿದು ಬೆಳೆದುಕೊಂಡು‌ ಹೋಗುವುದು ಕಮ್ಮಿ. ಅದಕ್ಕೆ ಪತಿಯ ಸಹಕಾರವೂ ಬೇಕು. ‘ನೀನು ಅವರೊಂದಿಗೆ ಮಾತಾಡಬಾರದು’ ಅಂತ ನಿಬಂಧನೆಗಳು ಇರುತ್ತವೆ. ಎಲ್ಲಿಗೆ ಹೋಗುವುದಾದರೂ ಹೇಳಿ ಹೋಗಬೇಕು ಎಂದು ಅಪ್ಪಣೆಯಾಗಿರುತ್ತದೆ. ತನ್ನದೇ ಬದುಕಿನ ಜಂಜಾಟದಲ್ಲಿ ಕಳೆದುಹೋದ ಹೆಣ್ಣು ಗೆಳೆತನವನ್ನೂ ಮರೆತು ಬಿಡುತ್ತಾಳೆ. ಆದರೆ ಗಂಡಸರಿಗೆ ಕಾಲೇಜಿನ ಗೆಳೆಯರೂ ದಶಕಗಳ ನಂತರವೂ ಅಷ್ಟೇ ಆತ್ಮೀಯವಾಗಿರುತ್ತಾರೆ. ಮದುವೆಗೆ ಮುಂಚೆ‌ ಬೇಕಾದಂತೆ ಬಟ್ಟೆ ತೊಡುವ ಸ್ವಾತಂತ್ರ್ಯ ಹೆತ್ತವರು ಕೊಡುವುದಿಲ್ಲ ನಂತರ ಪತಿಯ ಸರದಿ. ಅಲ್ಲದೇ ಸೋಶಿಯಲ್ ಆಗಿರುವವರಿಗೆ ‘ನೀನು ಹಾಗೆ ನಕ್ಕೊಂಡು ಜೋರಾಗಿ ಮಾತನಾಡಬೇಡ, ಈ ತರ ಪೋಟೋ ಎಲ್ಲಾ ಸೋಶಿಯಲ್ ನೆಟ್ವರ್ಕಿಂಗ್ ಸೈಟ್ ನಲ್ಲಿ ಶೇರ್ ಮಾಡಬೇಡ’ ಅಂತ ನಿಬಂಧನೆಗಳು. ಸರಿ ತಪ್ಪುಗಳನ್ನು ನಿರ್ಧರಿಸಲು ಆಕೆಗೂ ತಿಳಿಯುತ್ತದೆ. ಆಕೆಯ ಭಾವನೆಗಳಿಗೆ ನೋವಾಗುವ ಹಾಗೆ ಮಾತನಾಡುವುದು ಸರಿಯಲ್ಲ.

ಪತ್ನಿ ಎಂದ‌ ಮಾತ್ರಕ್ಕೆ ಆಕೆ ಸುಲಭಕ್ಕೆ ಒದಗುವವಳು ಅಲ್ಲ. ಪತಿಯ ಸೇವೆಗೆಂದೆ ಮೀಸಲೂ ಅಲ್ಲ‌‌. ಆಕೆ‌ ಮಾಡುವುದು ಕಾಳಜಿ ಮತ್ತು ಪ್ರೀತಿಯಿಂದ ಅಷ್ಟೇ. ಮಾತು ಮಾತಿಗೆ ಹೆಂಡತಿಯ ತಂದೆಯ ಹೆಸರು ಹೇಳಿ ‘ನಿನ್ನಪ್ಪ ಕೊಡ್ತಾರಾ, ಅಪ್ಪನ ಮನೆಯಿಂದ ತಂದೆಯಾ?’ ಈ ತರಹ ವ್ಯಂಗ್ಯ ಆಡುವುದು ಕೆಲ ಗಂಡಸರ ಕೆಟ್ಟ ಸ್ವಭಾವ. ಆಕೆಯ ತವರು ಮನೆಯವರನ್ನು ತಮಾಷೆಗೆಂದಾದರೂ ಹೀಯಾಳಿಸುವುದು ನೋವುಂಟು ಮಾಡುತ್ತದೆ. ಕೆಲವು ‌ಮನೆಗಳಲ್ಲಿ ಹೆಣ್ಣುಮಕ್ಕಳಿಗೆ ಪತಿಯಂದಿರು ತಮ್ಮ ಹಣಕಾಸಿನ ವ್ಯವಹಾರದ ಬಗ್ಗೆ ಯಾವ ಮಾಹಿತಿಯನ್ನೂ ನೀಡುವುದಿಲ್ಲ. ಕೇಳಿದರೆ ಹೆಂಡತಿಯಾದ ಮಾತ್ರಕ್ಕೆ ಎಲ್ಲವನ್ನೂ ಹೇಳಬೇಕೆ ಅನ್ನುವ ಧೋರಣೆ. ಆಕೆ ಸಹಧರ್ಮಿಣಿ ಅಂದ ಮೇಲೆ ಅವನ್ನೆಲ್ಲ ತಿಳಿಯುವ ಹಕ್ಕು ಆಕೆಗೆ ಇದೆ. ಎಷ್ಟೋ ಕಡೆ ಹೆಂಡತಿ ತನ್ನ ತಾಯಿಯೊಂದಿಗೆ ಜಾಸ್ತಿ ಹೊತ್ತು ದೂರವಾಣಿಯಲ್ಲಿ ಮಾತನಾಡಿದರೆ ಸಹಿಸದವರೂ ಇದ್ದಾರೆ. ಆಕೆ ಎಲ್ಲಿ ತನ್ನ ಬಗ್ಗೆ ದೂರುತ್ತಾಳೋ ಅಂತ ಅನುಮಾನಪಡುವವರೂ ಕಮ್ಮಿ ಇಲ್ಲ. ಜೀವನ ಪರ್ಯಂತ ಇರಬೇಕಾದುದು ಒಳ್ಳೆಯ ಗೆಳೆಯರಂತೆ. ಯಾವುದೇ ಗುಟ್ಟು ಇರದೇ, ಪ್ರತಿ ಕ್ಷಣವೂ ಜೊತೆಯಾಗಿ.

ಸಮಾನತೆ ಎನ್ನುವುದನ್ನು ಹೊರಗಿನಿಂದ ತರಲು ಸಾಧ್ಯವಿಲ್ಲ. ಮೊದಲು ನಾವು ಬದಲಾಗಬೇಕು. ಒಂದಿಷ್ಟು ಗೌರವದಿಂದ, ಆತ್ಮೀಯತೆಯಿಂದ ಹೆಣ್ಣನ್ನು ಕಾಣುವ ಅಗತ್ಯವಿದೆ. ಆಕೆ ಅದಕ್ಕೆ ಅರ್ಹಳು. ಆಕೆ ತನ್ನ ಸಮಾನತೆಯ ಹಕ್ಕಿಗಾಗಿ ದನಿ‌ ಎತ್ತಿದ ನಂತರವೇ ಅರಿವಾಗಬೇಕೆಂದು ಇಲ್ಲ. ನಮ್ಮ ಮನೆಯ ಹೆಣ್ಣುಮಕ್ಕಳನ್ನು ಆತ್ಮ ಸಮ್ಮಾನ ಹೊಂದುವಂತೆ, ತಮ್ಮನ್ನು ತಾವು ಗೌರವಿಸುವಂತೆ, ಸ್ಥೈರ್ಯ ಮತ್ತು ‌ಧೈರ್ಯ ತುಂಬಿ ಬೆಳೆಸಬೇಕು. ಗಂಡು ಮಕ್ಕಳನ್ನು ಸಹಜೀವಿಗಳಾದ ಹೆಣ್ಣುಮಕ್ಕಳನ್ನೂ ಸಮಾನವಾಗಿ ಕಾಣುವಂತೆ ಅಂತಃಕರಣ ತುಂಬಿ ಬೆಳೆಸಬೇಕು. ಗಂಡು ಹೆಣ್ಣು ಎನ್ನುವುದು ಜೈವಿಕ ಬೇಧವಷ್ಟೇ. ಅದಕ್ಕೂ ಶಕ್ತಿ ಸಾಮರ್ಥ್ಯಗಳಿಗೂ ಸಂಬಂಧವಿಲ್ಲ. ಸಾಧಿಸುವುದೇ ಆದರೆ ನಿನಗೆ ಮಿತಿಯಲ್ಲ ಅನ್ನುವುದನ್ನು ಮಕ್ಕಳಿಗೆ ಅರ್ಥ ಮಾಡಿಸಬೇಕು.

ತಾಯಿ‌ ಪೂಜ್ಯನೀಯಳು. ಆಕೆಯೊಂದು‌ ಭಾವ ತಂತು. ಹುಟ್ಟುತ್ತಲೇ ಕರುಳ ಬಳ್ಳಿ ಕಡಿದರೂ ಆಕೆ ಮಗುವನ್ನು ಹೃದಯದಲ್ಲಿ ಅವಿತಿಟ್ಟು ಬೆಳೆಸುತ್ತಾಳೆ. ಸದಾ ಅದರ ಏಳಿಗೆ ಬಯಸುತ್ತಾಳೆ. ಅದಕ್ಕೇ ತಾಯಿ ದೇವರು ಅಂತ ಹೇಳುತ್ತಾರೆ.

ಪ್ರತಿ ವ್ಯಕ್ತಿಗೂ ತನ್ನ ತಾಯಿ ಶ್ರೇಷ್ಠ. ಆಕೆಯಷ್ಟೇ ಅಲ್ಲದೆ ಜೀವನದಲ್ಲಿ ಬರುವ ಬೇರೆ ಬಾಂಧವ್ಯಗಳೂ ಹೆಣ್ಣು ಜೀವಗಳದೇ. ಆದರೆ ತಾಯಿಗೆ ಕೊಡುವಷ್ಟೇ ಗೌರವ ಮತ್ತು ವಿಶ್ವಾಸ ಬೇರೆಯವರಿಗೆ ಹೆಚ್ಚಿನವರು ಕೊಡುವುದಿಲ್ಲ. ಬಹುಶಃ ಮಗಳು ಅಂದರೆ ತುಂಬು ಪ್ರೀತಿ ಇರಬಹುದು. ಅದೇ ಪತ್ನಿಗೆ ಅಷ್ಟೇ ಗೌರವ ವಿಶ್ವಾಸ ಸಿಗುವುದಿಲ್ಲ. ಕುಟುಂಬದ ಹೆಣ್ಣುಮಕ್ಕಳನ್ನು ಗೌರವಿಸುವ ರೀತಿ ಹೊರಗಿನ ಮಹಿಳೆಯರಿಗೆ ಸಿಗುವುದಿಲ್ಲ.

ಹೆಣ್ಣನ್ನು ದೇವಿ ಎಂದೂ, ಲಕ್ಷ್ಮಿ ಎಂದೂ, ಗಂಗೆಯಂತೆ ಪವಿತ್ರ ಎಂದೂ, ಪ್ರಕೃತಿ ಮಾತೆಯಂತೆ ಸೃಷ್ಟಿ ದೇವತೆ ಎಂದೋ ಗೌರವಿಸುವ ಸಂಸ್ಕೃತಿ ನಮ್ಮದು. ಅದಕ್ಕೆ ತದ್ವಿರುದ್ಧವಾಗಿ ಆನೇಕ ಸಂಗತಿಗಳು ನಡಯುತ್ತಿರುವುದನ್ನೂ‌ ನೋಡುತ್ತೇವೆ. ಸಿನಿಮಾಗಳನ್ನು ನಟಿಯರನ್ನು ಬಿಂಬಿಸುವ ರೀತಿಯಲ್ಲಿ ಇದನ್ನು ಕಾಣಬಹುದು. ಅರೆ ನಗ್ನ ಉಡುಪುಗಳನ್ನು ತೊಟ್ಟು ಪ್ರೀತಿ ಪ್ರೇಮ ಎಂದು ಕುಣಿಯುವ ಪಾತ್ರಗಳಿಗೆ ಮಹಿಳೆಯರು ಸೀಮಿತವಾಗುವಂತಾಗಿದೆ. ಎಲ್ಲೋ ಒಬ್ಬಿಬ್ಬರು ನಟಿಯರು ಭಿನ್ನವಾಗಿ ಕಾಣುತ್ತಾರೆ. ದಿನ ಬೆಳಗ್ಗೆ ಆದರೆ ದಿನ‌ ಪತ್ರಿಕೆಗಳಲ್ಲಿ, ದೂರದರ್ಶನದಲ್ಲಿ ಪ್ರಸಾರ ಆಗುವ ಮಹಿಳೆಯರ ಮೇಲಿನ ಅತ್ಯಾಚಾರದ‌ ವರದಿಗಳು ನಮ್ಮನ್ನು ಭಯಭೀತಗೊಳಿಸುತ್ತವೆ. ಸಿನಿಮಾ ರಂಗದಲ್ಲೂ ಇದೇ ವಿಷಯದಲ್ಲಿ ಮೀ ಟೂ ಅಭಿಯಾನ ಬಹಳಷ್ಟು ಸದ್ದು ಮಾಡಿತು. ಹೆಣ್ಣನ್ನು ದೇವಿ ಎಂದು ಬಿಂಬಿಸುವುದಷ್ಟೇ ಸಾಲದು, ಗೌರವದ, ಘನತೆಯ, ಸಮಾನತೆಯ ಬದುಕು ನೀಡಿ ಅಂತ ಹೇಳುವಂತಾಗಿದೆ. ‘ಲಕ್ಷ್ಮೀಯಲ್ಲ ನಾನು. ನಿಮ್ಮಂತೆ ಸಹಜ, ಸಾಮಾನ್ಯ,‌ ಸಮಾನ ಮನುಷ್ಯಳು ನಾನು’ ಅಂತ ದೊಡ್ಡ ದನಿಯಲ್ಲಿ ಹೇಳಬೇಕಾಗಿದೆ.

ಕೆಲವರು ಅತ್ಯಾಚಾರ, ಲೈಂಗಿಕ ಕಿರುಕುಳದಂತಹ ವಿಚಾರಗಳನ್ನು ಮಾತಾನಾಡುವುದಕ್ಕೆ ಕೂಡ ಮುಜುಗರಪಡುತ್ತಾರೆ. ದೇಶದ ಕಾನೂನು ವ್ಯವಸ್ಥೆಯೇ ಹಾಗಿದೆ ಏನೋ. ಅಂತಹ‌ ಹೇಯ ಕೃತ್ಯ ಎಸಗಿ, ಯಾವುದೇ ಕರುಣೆ ಇಲ್ಲದೇ ಕ್ರೂರವಾಗಿ ಕೊಂದ ಪಾಪಿಗಳಿಗೂ ಗಲ್ಲು ಶಿಕ್ಷೆ ಆದರೂ ಬದುಕುವ ಕೊನೆಯ ಅವಕಾಶಗಳನ್ನು ಕಾನೂನು ಪ್ರಕಾರ ನಿರಾಕರಿಸಲಾಗುವುದಿಲ್ಲ. ಅನೇಕರು ಜಾಮೀನು ಕೂಡ ಪಡೆದು ರಾಜಾರೋಷವಾಗಿ ಹೊರಗಿರುತ್ತಾರೆ. ವರ್ಷಗಟ್ಟಲೆ ಕಳೆದರೂ ನ್ಯಾಯ ಎಂಬುದು ಮರೀಚಿಕೆ. ಅಂತಹುದಕ್ಕೆ ಒಳಗಾಗಿ ಇದ್ದು ಕೂಡ ಸತ್ತವರು ಹಲವಾರು ಹೆಣ್ಣುಮಕ್ಕಳು. ಸತ್ತೇ ಹೋದ ಹೆಣ್ಣುಮಕ್ಕಳ ಕುಟುಂಬದವರನ್ನು ನಿತ್ಯವೂ ಬೆಂಕಿಯಲ್ಲಿ ಬೇಯುವಂತೆ‌ ಮಾಡಿದವರು ಆ ಪಾಪಿಗಳು.

ದೇಶದಲ್ಲಿ ನಡೆಯುವ ಒಟ್ಟು ಅಪರಾಧ ಪ್ರಕರಣಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಅಪರಾಧಗಳು, ದೌರ್ಜನ್ಯ, ಕಿರುಕುಳಗಳ ಸಂಖ್ಯೆ ಹೆಚ್ಚಿದೆ. ದುರಂತ ಎಂದರೆ ಇತ್ತೀಚೆಗೆ ಚಿಕ್ಕ ಮಕ್ಕಳೂ ಇದಕ್ಕೆ ಗುರಿಯಾಗುತ್ತಿರುವುದು. ಅದು ಹಳ್ಳಿ ಇರಲಿ, ದೊಡ್ಡ ಪಟ್ಟಣ ಇರಲೀ ಚಿಕ್ಕ ಹೆಣ್ಣು ಮಗುವನ್ನು ಒಂಟಿಯಾಗಿ ಮನೆಯ ಹೊರಗೆ ಬಿಡಲಾಗದ ಪರಿಸ್ಥಿತಿ. ಒಂದು‌ ಕಣ್ಣು ಮಗುವಿನ‌ ಮೇಲೆನೇ ಇಟ್ಟಿರಬೇಕು‌. ಪರಿಚಿತ ದೊಡ್ಡ ಹುಡುಗರೊಂದಿಗೆ ಆಡಲು ಬಿಡಬೇಕಾದರೂ ಹತ್ತು ಬಾರಿ ಯೋಚಿಸಬೇಕು. ಮಗುವನ್ನು ಪರಿಚಿತರ ಮನೆಗೆ ಆಡಲು ಕಳುಹಿಸಲೂ ಅಂಜುವ ಕಾಲ. ಯಾವ ಹುತ್ತದಲ್ಲಿ ಯಾವ ಹಾವೋ ನಮ್ಮ ಎಚ್ಚರದಲ್ಲಿ‌ ನಾವಿರಬೇಕು ಅಂತಲೇ ಯೋಚಿಸಬೇಕಾಗಿದೆ. ಎರಡು ಮೂರು ವರ್ಷಗಳ ಚಿಕ್ಕ ಮಗುವಿಗೆ ‘ಗುಡ್ ಟಚ್ ಬ್ಯಾಡ್ ಟಚ್’ ಬಗ್ಗೆ ಹೇಳಿಕೊಡಬೇಕಾಗಿದೆ. ಕರಾಟೆಗಳಂತಹ ಆತ್ಮರಕ್ಷಣಾ ವಿದ್ಯೆ ಕಲಿಸಬೇಕಾಗಿದೆ. ಪಾಪ! ಅವಕ್ಕೆ ಅರ್ಥವಾಗುವ ಹಾಗೆ ಹೇಳಿಕೊಡುವ ಅನಿವಾರ್ಯತೆ ತಾಯಂದಿರಾದ ನಮ್ಮದು. ಅವರಿಗೆ ಈಗಷ್ಟೇ ಲೋಕವೆಲ್ಲಾ ಸುಂದರವಾಗಿ ಕುತೂಹಲವಾಗಿ ಕಾಣಿಸುವ ಸಮಯದಲ್ಲಿ ಅದೇ ಲೋಕದ ಕರಾಳ ಸ್ವರೂಪವನ್ನೂ ಅರ್ಥ ಮಾಡಿಸುವ ಹಾಗೆ ಆಗಿದೆ. ಇದಂತೂ ತುಂಬಾ ನೋವಿನ‌ ವಿಚಾರವೇ ಸರಿ. ನಿಧಾನವಾಗಿ ಅರಳಬೇಕಾದ ಮಕ್ಕಳನ್ನು ಅವಧಿಗೆ ಮುಂಚೆಯೇ ಪ್ರಬುದ್ಧರಾಗಿಸುತ್ತಿದ್ದೇವೆ.

ಮನೆಯಲ್ಲಿ ಇರುವ ಹೆಂಗಸರೂ ಸುರಕ್ಷಿತವಾಗಿ ಉಳಿದಿಲ್ಲ. ಮನೆ ಬಾಗಿಲು ಸದಾ ಹಾಕಿಕೊಂಡು ಇರಬೇಕಾದ ಪರಿಸ್ಥಿತಿ. ಯಾವ ರೂಪದಲ್ಲಿ ಅಪಾಯ ಬಂದು ಎರಗುವುದೋ ತಿಳಿಯದು. ಯಾರನ್ನೂ ನಂಬುವ ಪರಿಸ್ಥಿತಿ ಇಲ್ಲ‌. ಬಹುಶಃ ತನ್ನವರನ್ನೆ ಕೊಲ್ಲುವ, ಹಿಂಸೆ ಕೊಡುವ, ದೌರ್ಜನ್ಯ ಎಸಗುವ ಹೀನ ಬುದ್ಧಿ ಅತೀ ಬುದ್ಧಿವಂತ ಎನಿಸಿದ ಮಾನವ ಜಾತಿಯಲ್ಲೆ ಇರುವುದು ಹೊರತು ಪ್ರಾಣಿಗಳಲ್ಲಿ ಅಲ್ಲ‌.

ಮುಂದಿನ‌ ಪೀಳಿಗೆಯು ಒಳ್ಳೆಯ ದಿನಗಳನ್ನು, ಮಹಿಳೆಯರ ಮೇಲಿನ‌ ಅಪರಾಧ ಮುಕ್ತ ಜಗತ್ತನ್ನು ಕಾಣಬೇಕಾದರೆ ಮಕ್ಕಳನ್ನು ನಮ್ಮ ಸಂಸ್ಕಾರ, ಆಚಾರ ವಿಚಾರ, ಸಂಸ್ಕೃತಿಗಳಿಗೆ ಅನುಗುಣವಾಗಿ ಬೆಳೆಸುವುದು ಇಂದಿನ‌ ಅಗತ್ಯ. ಒಳ್ಳೆಯ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿ, ಅವರಲ್ಲಿ ಸದ್ಚಿಂತನೆಯನ್ನು, ಸಕಾರಾತ್ಮಕತೆಯನ್ನು ಬೆಳೆಸುತ್ತಾ ಜಗತ್ತಿನ ಒಳ್ಳೆಯ ಸಂಗತಿಗಳ ಬಗ್ಗೆ ಅವರನ್ನು ಸೆಳೆಯುತ್ತಾ, ಉತ್ತಮ ಗುರಿಯತ್ತ ನಿರ್ದೇಶಿಸುತ್ತಾ ಬೆಳೆಸಬೇಕು. ಗಂಡು ಮಕ್ಕಳಿಗೆ ತಾಯಿ, ಸೋದರಿ ಅಷ್ಟೇ ಅಲ್ಲದೇ ಇತರ ಹೆಣ್ಣುಮಕ್ಕಳನ್ನು ಸಹ ಜೀವಿಗಳಂತೆ ಕಾಣುವಂತೆ, ತನ್ನಂತೆ ಸಮಾನವಾಗಿ ಕಾಣುವಂತೆ ಹೆಣ್ಣಿನ‌ ಭಾವಲೋಕವನ್ನು ಬಾಲ್ಯದಿಂದಲೇ ಪರಿಚಯಿಸಬೇಕು. ಸಕಾರಾತ್ಮಕ ಯೋಚನೆಗಳಿಂದ ಎಂತಹ ಸಮಸ್ಯೆಗಳನ್ನಾದರೂ ಪರಿಹರಿಸಬಹುದು.‌ ಮೊದಲು ನಮ್ಮ ಆಲೋಚನೆಗಳನ್ನು ಬದಲಾಯಿಸೋಣ.@ರಶ್ಮಿ ಉಳಿಯಾರು.


  • ಬರಹ : ರೇಶ್ಮಾ ಗುಳೇದಗುಡ್ಡಾಕರ್
0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW