‘ವೈವಿಧ್ಯ’ ಪುಸ್ತಕ ಪರಿಚಯ – ರಘುನಾಥ್ ಕೃಷ್ಣಮಾಚಾರ್

ಸೆಮಿನಾರ್ ಎನ್ನುವ ಅಪರೂಪದ ಪತ್ರಿಕೆ ಯನ್ನು ಅದರ ಸಂಪಾದಕರಾಗಿದ್ದ ಥಾಪರ್ ಅವರ ಸಂವೇದನಾ ಶೀಲ ಸಂಪಾದಕೀಯ ಬರಹಗಳನ್ನು ಪರಿಚಯಿಸಿದ ಶ್ರೇಯಸ್ಸು ಮೊದಲ ಬಾರಿಗೆ ಕೆ.ಸತ್ಯನಾರಾಯಣ ಅವರಿಗೆ ಸಲ್ಲಬೇಕು. ಈಗ ಅವರ ‘ವೈವಿಧ್ಯ’ ಪುಸ್ತಕದ ಕುರಿತು ರಘುನಾಥ್ ಕೃಷ್ಣಮಾಚಾರ್ ಅವರು ಬರೆದಿರುವ ಪರಿಚಯವನ್ನು ತಪ್ಪದೆ ಮುಂದೆ ಓದಿ….

ಪುಸ್ತಕ – ವೈವಿಧ್ಯ
ಲೇಖಕರು – ಕೆ.ಸತ್ಯನಾರಾಯಣ
ಪ್ರಕಾಶನ – ವಸಂತ ಪ್ರಕಾಶನ
ಬೆಲೆ – ೨೫೦.೦೦

ಶೀರ್ಷಿಕೆಯ ಪ್ರಕಾರ ಈ ಕೃತಿ ವಿವಿಧ ಬಗೆಯ ಲೇಖನಗಳ ಸಮುಚ್ಚಯ. ಇವನ್ನು ವ್ಯಕ್ತಿಕೇಂದ್ರಿತ, ಪತ್ರಿಕಾ ಕೇಂದ್ರಿತ , ಸ್ಥಳ ಕೇಂದ್ರಿತ, ಸಂಸ್ಕೃತಿನಿಷ್ಠ ಬರಹಗಳು ,ಸೃಜನಶೀಲ ಪ್ರಕಾರ ಕೇಂದ್ರಿತ ಎಂದು ವಿಭಿನ್ನ ಭಾಗಗಳಲ್ಲಿ ಅಧ್ಯಯನ ಮಾಡಬಹುದು. ವ್ಯಕ್ತಿ ಕೇಂದ್ರಿತ ಬರಹಗಳಲ್ಲಿ ಜಿ.ಎನ್ ಆರ್. ಅವರ ವ್ಯಕ್ತಿ ತ್ವದ ಮೇಲೆ ಬೆಳಕು ಚೆಲ್ಲುತ್ತದೆ. ಪ್ರಜಾವಾಣಿ ಪತ್ರಿಕೆಯ ಸಾಪ್ತಾಹಿಕ ಪುರವಣಿ ಸಂಪಾದಕರಾಗಿ ಅವರು ಸಾಂಸ್ಕೃತಿಕ ಪ್ರಜ್ಞೆಯ ವಿಕಾಸಕ್ಕೆ ಕಾರಣವಾದ ಬಗೆಯನ್ನು ವಿವರಿಸಲಾಗಿದೆ. ಒಳ್ಳೆಯ ಲೇಖಕರನ್ನು ಗುರುತಿಸಿ, ಅವರಿಂದ ಒಳ್ಳೆಯ ಸಾಹಿತ್ಯ ಸೃಷ್ಟಿಗೆ ಪ್ರೋತ್ಸಾಹ ನೀಡುವ, ಒಳ್ಳೆಯ ವಿಮರ್ಶಕರನ್ನು ಗುರುತಿಸಿ ಅವರ ಕೈಯಲ್ಲಿ ಒಳ್ಳೆಯ ವಿಮರ್ಶೆಯನ್ನು ಪ್ರಕಟಿಸಿ ಓದುಗರಿಗೆ ಒಳ್ಳೆಯ ಸಾಹಿತ್ಯದ ಅಭಿರುಚಿಯ ನಿರ್ಮಾಣದ ಕೆಲಸ ಮಾಡಿದ ಅವರ ಕಾರ್ಯ ಸ್ವರೂಪವನ್ನು ಅದರ ಮಹತ್ವವನ್ನು ಗುರುತಿಸಿದ್ದಾರೆ. ಅಲ್ಲದೆ ಅವರ ಸ್ವತಂತ್ರ ಸಾಹಿತ್ಯ ವಿಮರ್ಶೆ ಕುರಿತು ಬೆಳಕು ಚೆಲ್ಲುತ್ತದೆ.
ಸೆಮಿನಾರ್ ಎನ್ನುವ ಅಪರೂಪದ ಪತ್ರಿಕೆ ಯನ್ನು ಅದರ ಸಂಪಾದಕರಾಗಿದ್ದ ಥಾಪರ್ ಅವರ ಸಂವೇದನಾ ಶೀಲ ಸಂಪಾದಕೀಯ ಬರಹಗಳನ್ನು ಪರಿಚಯಿಸಿದ ಶ್ರೇಯಸ್ಸು ಮೊದಲ ಬಾರಿಗೆ ಕೆ.ಸತ್ಯನಾರಾಯಣ ಅವರಿಗೆ ಸಲ್ಲಬೇಕು.

ಸ್ಥಳ ಕೇಂದ್ರಿತ ಬರಹಗಳಲ್ಲಿ ರಾಮಚಂದ್ರಾಪುರ( ಅಯೋಧ್ಯೆ) ಕುರಿತು ಬರೆದ ಲೇಖನ ಎರಡು ಕಾರಣಗಳಿಗೆ ಮುಖ್ಯ. ಈ ಮೊದಲು ‘ ನಾನೇಕೆ ಅಯೋಧ್ಯೆಗೆ ಹೋಗುವುದಿಲ್ಲ ” ಎಂದು ಬರೆದ ಲೇಖಕರೆ ಈ ಸಲ ಅದೆ ಅಯೋಧ್ಯೆಗೆ ಭೇಟಿ ನೀಡಿ ಹೆಸರನ್ನು ಮಾತ್ರ ರಾಮಚಂದ್ರಾಪುರ ಎಂದು ಬದಲಾಯಿಸಿರುವುದು. ಇದಕ್ಕಾಗಿ ಅವರು ತಮ್ಮ ಹೆಂಡತಿ ತಮ್ಮನ್ನು ‘ ನಿಮಗೆ ಬರೆಯಲು ಏನಾದರೂ ಒಂದು ವಸ್ತು ಬೇಕು’ ಎಂದು ಛೇಡಿಸಿದ ಪ್ರಸಂಗವನ್ನು ದಾಖಲಿಸಿರುವುದು. ಎರಡು :ವಿವಾದಿತ ಅಯೋಧ್ಯೆಯ ರಾಮಲಲ್ಲ ದೇವಾಲಯಕ್ಕಿಂತ ಸರಯು ನದಿ ತೀರದ ದೇವಾಲಯದ ಅವರಿಗೆ ಹೆಚ್ಚು ಚಂದದ ಮೂರ್ತಿಗಳಾಗಿ ಕಾಣಿಸುತ್ತದೆ. ಅಲ್ಲಿ ಕೋಮು ಗಲಭೆ ಕುರಿತು ಅಲ್ಲಿನ ಸ್ಥಳೀಯರನ್ನು ಪ್ರಶ್ನಿಸಿದಾಗ ಅವರು” ‌ನಾವು ಎಂದಿನಂತೆ ಸೌಹಾರ್ದತೆಯಿಂದಲೆ ಬದುಕಿದ್ದೇವೆ. ಅದೆಲ್ಲ ಹೊರಗಿನಿಂದ ಬಂದವರು ಉಂಟು ಮಾಡುವುದು” ಎನ್ನುವ ಉತ್ತರ ಗಲಭೆಗಳ ಹಿಂದಿನ ಕೈವಾಡವನ್ನು ಬಯಲು ಮಾಡುತ್ತದೆ. ಸಂಸ್ಕೃತಿ ಕೇಂದ್ರಿತ ಬರಹಗಳು . ಇದೆ ಸಂದರ್ಭದಲ್ಲಿ ‘ಬಾಬರ್ ನಾಮ’ ಎನ್ನುವ ಆತ್ಮ ಚರಿತ್ರಾತ್ಮಕ ಬರುವ ಆತ್ಮಾವಲೋಕನದ ಮೇಲೆ ಬೆಳಕು ಚೆಲ್ಲಿದ್ದಾರೆ. ಅದರಲ್ಲಿ ಬಾಬರ್ ನ ಆತಂಕ ಗಳ ಕಡೆಗೆ ಗಮನ ಸೆಳೆದಿದ್ದಾರೆ. ಒಂದು ರಾಮಾಯಣ ಕುರಿತದ್ದು. ಮೂಲ ವಾಲ್ಮೀಕಿ ರಾಮಾಯಣವನ್ನು ಸಂಸ್ಕೃತದಲ್ಲಿ ಅಧ್ಯಯನ ಮಾಡಿದ ಸ್ತ್ರೀ ವಾದಿ ಲೇಖಕಿ ಸತ್ತಾರ್ ಅವರು ರಾಮನ ದೃಷ್ಟಿಯಿಂದ ಅಭ್ಯಾಸ ಮಾಡಿ ಸೀತೆಗಾಗಿ, ಹೂ ಕೊಯ್ಯುವ ಮಾರ್ದವತೆಯ ರಾಮ ಕಳೆದುಹೋಗಿ, ಅವಳನ್ನು ಕಾಡಿಗಟ್ಟುವ, ಅಗ್ನಿ ಪ್ರವೇಶಕ್ಕೆ ಕಾರಣನಾಗುವ , ಪರಿತ್ಯಾಗ ಮಾಡಿದ ರಾಜಾರಾಮನಾಗಿ ಬಿಟ್ಟು ಅವರಿಬ್ಬರ ದಾಂಪತ್ಯದ ಸಾಹಚರ್ಯವನ್ನು ಕಳೆದುಕೊಂಡ ದುರಂತವನ್ನು ದಾಖಲಿಸಿದ್ದಾರೆ. ಸೀತೆ ತನ್ನ ಶೀಲವನ್ನು ಶಂಕಿಸುವ ರಾಮನನ್ನು ಅನಾರ್ಯ ಎಂದು ಕರೆದು ತನ್ನ ಪ್ರತಿಭಟನೆಯನ್ನು ದಾಖಲಿಸಿದ್ದನ್ನು ಮೂಲ ಲೇಖಕರಾಗಲಿ , ಅದನ್ನು ಕುರಿತು ಬರೆದ ಕೆ.ಸತ್ಯನಾರಾಯಣ ಆಗಲಿ ಗಮನಕ್ಕೆ ತಂದುಕೊಂಡಿಲ್ಲ.

ಮಹಾಭಾರತ ಕುರಿತು ಬರೆದ ಜಿ.ಎಸ್.ಆಮೂರರ ಕೃತಿ ಲೋಕಯಾತ್ರೆ ಮೊದಲ ಬಾರಿಗೆ ಬಾರಿಗೆ ಮಹಾಭಾರತವನ್ನು ಸಂವಾದಗಳ ಮೂಲಕ ಅದರ ಹಿಂದಿನ ತಾತ್ವಿಕತೆಯನ್ನು ಗ್ರಹಿಸುವ ಪ್ರಯತ್ನ ಮಾಡಿದ ಕೃತಿ ಎಂದು ಅದರ‌ ಮಹತ್ವವನ್ನು ಗುರುತಿಸಿದ್ದಾರೆ. ಅದರಲ್ಲಿ ಅಡಿಗರು ವಿದ್ಯುಕ್ತ ಕರ್ಮಗಳಿಗೆ ಅವುಗಳನ್ನು ಬಳಸಿಕೊಂಡರೆ ಅವುಗಳ ಹಿಂದಿನ ತಾತ್ವಿಕತೆಗೆ ಅಲ್ಲ ಎಂದು ಬರೆದಿದ್ದಾರೆ. ‘ಸಾಯಿಸಲಿಕಲ್ಲದೆ ಬರಲು ಕುಂತಿ’ಯ ಕುರಿತು, ರಾಮನ ಕುರಿತು ಬರೆದ ಶ್ರೀರಾಮನವಿಯ ದಿವಸ ದಂತಹ ( ಸಹಸ್ರಾರ) ಕವನಗಳಿಗೆ ಈ ಮಾತುಗಳನ್ನು ಅನ್ವಹಿಸಬಹುದೆ ?

ಮದ್ದೂರು ತಾಲ್ಲೂಕಿನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಭಾಷಣದಲ್ಲಿ ಎರಡು ಮುಖ್ಯ ವಾದ ಸಂಗತಿಗಳನ್ನು ಪ್ರಸ್ತಾಪಿಸಿದ್ದಾರೆ .ಅವು: ಒಂದು: ಆ ಊರಿನಲ್ಲಿ ನಾಲ್ಕು ದಶಕಗಳ ಕಾಲ ಏಕಾಂಗಿಯಾಗಿ ,ಆದರೆ ಅಲ್ಲಿನ ಸಮುದಾಯದ ಭಾಗವಾಗಿ ಬದುಕಿದ ತನ್ನ ಅಜ್ಜಿ ಜಾನಕಮ್ಮನವರನ್ನು ಕುರಿತು. ಆ ಊರಿನ ಕುಟುಂಬಗಳ ಮೂರು ತಲೆಮಾರಿನ ಕತೆಗಳನ್ನು ಅವರ ಬಾಯಿಂದ ಕೇಳಿ ತಾನು ಕತೆಗಾರನಾಗಲು ಪ್ರೇರಣೆ ಪಡೆದದ್ದು. ತಾನು ಬೇರೆ ಕಡೆಗೆ ವಲಸೆ ಹೋದರು ಅಲ್ಲಿನ ಜೀವನದ ಕುರಿತು ಕತೆ ಕಾದಂಬರಿಗಳನ್ನು ಬರೆದಿದ್ದರು ಅಲ್ಲಿ ಬರುವ ಪಾತ್ರಗಳು ಇಲ್ಲಿಯವೆ ಹೆಸರುಗಳು ಮಾತ್ರ ಬದಲಿಸಿದ್ದೇನೆ. ಇದರ ಮೂಲಕ ಸ್ಥಳೀಯ ಸಂಸ್ಕೃತಿಯಲ್ಲಿ ಬೇರು ಬಿಟ್ಟು ,ನಂತರ ಎಲ್ಲಿಗೆ ಹೋದರೂ ಅದು ರಕ್ತಗತವಾಗಿ ಜತೆಗೇ ಬರುತ್ತವೆ ವೇಷಾಂತರಗಳೊಡನೆ ಎಂದು ಸ್ಪಷ್ಟವಾಗಿ ನಮೂದಿಸಿದ್ದಾರೆ.ಎರಡು: ಸಾಮುದಾಯಿಕ ಮೌಲ್ಯಗಳಲ್ಲಿ ಬೇರುಬಿಟ್ಟಿದ್ದರಿಂದ ಖಂಡಾಂತರಗಳು ದಾಟಿದಾಗಲು ಆ ಮೌಲ್ಯಗಳು ಇನ್ನೂ ತನ್ನಲ್ಲಿ ಜೀವಂತವಾಗಿ ಇವೆ ಎಂದು ನೆನಪು ಮಾಡಿಕೊಳ್ಳುತ್ತಾರೆ.

ಅವರ ಸಾಹಿತ್ಯವನ್ನು ಮುಖ್ಯವಾಗಿ ಅವರ ಕಥಾಸಾಹಿತ್ಯವನ್ನು ಗ್ರಹಿಸಲು ಮೇಲಿನ ಅವರ ಮಾತುಗಳು ಮುಖ್ಯ. ಅವರ ಮತ್ತು ಕಾದಂಬರಿ ಗಳು ಈ ಸಾಮುದಾಯಿಕ ಮೌಲ್ಯಗಳನ್ನು ಹೇಗೆ ಒಳಗೊಂಡಿದೆ ಎಂದು ಪರಿಶೀಲನೆ ನಡೆಸಬಹುದು. ದಾಂಪತ್ಯ ಕಾವ್ಯಕ್ಕೆ ಸಂಬಂಧಿಸಿದ ಹಲವು ಬರಹಗಳು ಇಲ್ಲಿವೆ.ಕೆ.ಎಸ್.ನ ಅವರ‌ ಕಾವ್ಯದಲ್ಲಿ ಶೃಂಗಾರದಲ್ಲಿ, ಅನುರಾಗಕ್ಕೆ‌ ಸಂಬಂಧಿಸಿದ ಕವನಗಳು ಇರುವುದನ್ನು ಗುರುತಿಸಿ ಕುಟುಂಬದ ಕಟ್ಟೋಣದ ಕಡೆಗೆ ಹೆಚ್ಚು ಗಮನ ನೀಡಿವೆ. ಇದರ ಕಡೆಗೆ ವಿಮರ್ಶಕರ ಗಮನ ಸಂದಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಅದರಂತೆ ನಾಡಿಗರ ದಾಂಪತ್ಯಗೀತೆಗಳು ಹೇಗೆ ಬೇಂದ್ರೆ, ಕೆ.ಎಸ್.ನ ಅಡಿಗರಿಗಿಂತ ಭಿನ್ನವಾಗಿವೆ ಎಂದು ಗುರುತಿಸಿದ್ದಾರೆ.

ಎಚ್.ಎಸ್.ವಿ ಯವರ ಕಾವ್ಯದಲ್ಲಿ ರಾಮಕೃಷ್ಣರು ಮನೆಗೆ ಬಂದರು ಲೇಖನದಲ್ಲಿ ಅವರು ಆಗಿರುವ ಪಾತ್ರಗಳಲ್ಲ ಇನ್ನೂ ಆಗುತ್ತಿರುವ ಪಾತ್ರಗಳು ಎಂದು ಅವುಗಳ ಜೈವಿಕ ಬೆಳವಣಿಗೆಯನ್ನು ಗುರುತಿಸಿದ್ದಾರೆ.

ಸ್ವತಃ ಕತೆಗಾರರಾಗಿ ತಮ್ಮ ಸಮಕಾಲೀನ ಹಾಗು ಹಿರಿಯ ಕತೆಗಾರರ ಕತೆಗಳ ಕುರಿತು ಬರೆದ ಲೇಖನಗಳು ಗಮನಾರ್ಹ. ಅವುಗಳಲ್ಲಿ ಹಿರಿಯ ಕತೆಗಾರರಾದ ಮಾಸ್ತಿಯವರ ಕತೆಗಳ ಕುರಿತು ಬೇಂದ್ರೆಯವರ ಗ್ರಹಿಕೆಯ ಮೂಲಕವೆ ಆರಂಭಿಸಬಹುದು. ಈಗಾಗಲೇ ಇದು ಪುನರಾವರ್ತನೆ ಗೊಂಡಿದ್ದರು- ಮಾಸ್ತಿಯವರಿಗೆ ಜೀವನದಲ್ಲಿ‌ ಕೇಡಿನ ಸ್ವರೂಪ ಗೊತ್ತಿದ್ದರೂ, ಅವರು ನವ್ಯರಂತೆ ಅದನ್ನು ಸ್ಥಾಯಿ ಎಂದು ಪರಿಗಣಿಸದೆ ಕ್ಷಣಿಕ ಎಂದು ಪರಿಗಣಿಸಿದ್ದರು ಅದನ್ನು ಬೇಂದ್ರೆ ತಮ್ಮ ರೂಪಕ ಪರಿಭಾಷೆಯಲ್ಲಿ ಗುರುತಿಸಿದ್ದನ್ನು ‘ ರುದ್ರನನ್ನು ಶಿವನನ್ನಾಗಿಸುವ ಕಲೆ ಅವರಿಗೆ ಒಲಿದಿತ್ತು” ಎಂದು ಉಲ್ಲೇಖ ಮಾಡಿದ್ದಾರೆ. ನಂತರದ ಕತೆಗಾರರಲ್ಲಿ ರಾಮಚಂದ್ರ ಶರ್ಮರ ಕತೆಗಳಲ್ಲಿ ವಲಸೆ ಮತ್ತು ಪರಿಣಾಮವನ್ನು ಶೋಧನೆ ಮಾಡಿದ ಮೊದಲ ಕತೆಗಾರರು, ಎಂದು ಅವರ ಕತೆಗಳ ಮಹತ್ವವನ್ನು ಸರಿಯಾಗಿ ಗುರುತಿಸಿದ್ದಾರೆ. ಅಲ್ಲದೆ ಗಂಡು ಹೆಣ್ಣು ಸಂಬಂಧದ ಕುರಿತು ಬರೆದ ಸೆರಗಿನ‌ಕೆಂಡ ಕತೆ ಅದೆ ಹೆಸರಿನ ನಾಟಕವಾಗಿ ರೂಪಾಂತರ ಹೊಂದಿದ್ದನ್ನು ಉಲ್ಲೇಖ ಮಾಡಿದ್ದಾರೆ.

ಕೆ.ಸತ್ಯನಾರಾಯಣ

ನಿಜವಾದ ಅರ್ಥದಲ್ಲಿ ನವ್ಯ ಮತ್ತು ಆಧುನಿಕ ಎಂದು ಕರೆಯಲ್ಪಡುವ ಶಾಂತಿನಾಥ ದೇಸಾಯಿಯವರ ಕತೆಗಳ ವೈಶಿಷ್ಟ್ಯಗಳನ್ನು ಗುರುತಿಸಿ ಸ್ತ್ರೀವಾದ ಆರಂಭವಾಗುವ ಮುನ್ನವೇ ‘ ಕ್ಷಿತಿಜ’ ದಂತಹ ಕತೆಯನ್ನು ಬರೆದು ಸ್ತ್ರೀವಾದಕ್ಕೆ ನಾಂದಿ ಹಾಡಿದರು ಎಂದು ಅದರ ಮಹತ್ವವನ್ನು ಸರಿಯಾದ ರೀತಿಯಲ್ಲಿ ಗುರುತಿಸಿದ್ದಾರೆ. ಅಲ್ಲದೇ ಗಂಡು ಹೆಣ್ಣು ಸಂಬಂಧದ ನಾನಾ ಮುಖಗಳ ಅನಾವರಣ ಅವರ ಕತೆಗಳ ಮೂಲ ದ್ರವ್ಯ ಎಂದಿದ್ದಾರೆ.
‌‌‌‌
ಸಮಕಾಲೀನರಾದ ಬೆಸಗರಹಳ್ಳಿ ರಾಮಣ್ಣ ಅವರ ಕತೆಗಳಲ್ಲಿ ಮೂಡಿಬಂದ ಸಮುದಾಯ ಪ್ರಜ್ಞೆ ( ಕೌಟುಂಬಿಕ) ಮತ್ತು ವ್ಯವಸ್ಥೆಯ ವಿಡಂಬನೆ ಅಸದೃಶ್ಯ ಎಂದು ಗುರುತಿಸಿರುವುದಲ್ಲದೆ ಅವರ ಸಮುದಾಯ ಪ್ರಜ್ಞೆಯ ಮೂಲ ಸೆಲೆಯನ್ನು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಪ್ರಬಂಧಗಳು ಎಂದು ಗುರುತಿಸಿ ಸರಿಯಾದ ನಿಲುವಿಗೆ ಬಂದಿದ್ದಾರೆ.
ಹೀಗೆ ಈ ವೈವಿಧ್ಯ ಸಂಕಲನ ಶೀರ್ಷಿಕೆಗೆ ತಕ್ಕಂತೆ ವೈವಿಧ್ಯಮಯ ಬರಹಗಳನ್ನು ಒಳಗೊಂಡಿದೆ. ಸೃಜನಶೀಲ ಪ್ರಕಾರಗಳಾದ ಕತೆ, ಕಾದಂಬರಿ, ಕಾವ್ಯ ಇತ್ಯಾದಿ ಪ್ರಕಾರಗಳಲ್ಲಿ ಆಧುನಿಕ ಕನ್ನಡ ಸಾಹಿತ್ಯ ನಡೆದು ಬಂದ ಹೆಜ್ಜೆ ಗುರುತುಗಳನ್ನು ಸಮರ್ಥವಾಗಿ ವಿವಿಧ ಲೇಖಕರು ಮತ್ತು ಅವರ ಕೃತಿಗಳನ್ನು ಆಧರಿಸಿ ಮಂಡಿಸಿದ್ದಾರೆ. ಅಲ್ಲದೆ ಅನಿವಾರ್ಯವಾದಾಗ ಇಬ್ಬರು ಲೇಖಕರ ಕೃತಿಗಳನ್ನು ಒಟ್ಟಿಗೆ ತಂದು ಅವುಗಳ ತೌಲನಿಕ ಅಧ್ಯಯನಕ್ಕೆ ಒಳಪಡಿಸಿ ಅವುಗಳ ಕುರಿತು ವಸ್ತುನಿಷ್ಠ ಮೌಲ್ಯ ಮಾಪನ ಮಾಡಲು ಅವರು ಹಿಂಜರಿಯುವುದಿಲ್ಲ. ಉದಾಹರಣೆಗೆ ಭೈರಪ್ಪನವರ ಗೃಹ ಭಂಗ ಮತ್ತು ಕಾರಂತರ ಮರಳಿ ಮಣ್ಣಿಗೆ ಬಹುತೇಕ ಒಂದೇ ವಸ್ತುವನ್ನು ಹೊಂದಿದ್ದರು ಲೇಖಕರ‌ ಭಿನ್ನ ನಿರ್ವಹಣೆ ಮಾಡುವುದಿಂದ ವಿಭಿನ್ನ ಪರಿಣಾಮ ಬೀರುತ್ತದೆ ಎಂದು ಸ್ಪಷ್ಟವಾಗಿ ಗುರುತಿಸಿದ್ದಾರೆ. ಮರಳಿ ಮಣ್ಣಿಗೆಯ ಲೇಖಕರಿಗೆ ಇರುವ ವಿಶಾಲವಾದ ದೃಷ್ಟಿಕೋನ ಅಲ್ಲಿನ ಪಾತ್ರಗಳ ಬೆಳವಣಿಗೆಗೆ ಕಾರಣವಾದರೆ, ಗೃಹಭಂಗದ ಲೇಖಕರ ಸಂಕುಚಿತ ದೃಷ್ಟಿ ಪಾತ್ರಗಳು ಸ್ಥಗಿತಗೊಂಡಿವೆ . ಇದು ಲೇಖಕರ ವಸ್ತುನಿಷ್ಠ ದೃಷ್ಟಿಕೋನಕ್ಕೆ ನಿದರ್ಶನವಾಗಿದೆ.

ಸಾಧನೆ ೧: ಇಲ್ಲಿನ ಬರಹಗಳು ಅವರ ವಿಸ್ತಾರವಾದ ಅಧ್ಯಯನ ಶೀಲತೆಗೆ ಕನ್ನಡಿ ಹಿಡಿಯುತ್ತವೆ.
೨: ವಸ್ತುನಿಷ್ಠ ಮೌಲ್ಯಮಾಪನವನ್ನು ಪ್ರಕಟಿಸುತ್ತವೆ. ಮಿತಿಗಳು:೧ ಆಧುನಿಕ ಕನ್ನಡ ಸಾಹಿತ್ಯದಲ್ಲಿ ಒಂದನ್ನು ಹೊರತುಪಡಿಸಿ ಲೇಖಕರ ಬರಹಗಳಿಗೆ ಮೀಸಲಾಗಿವೆ. ೨:ಹೊಸ ಗನ್ನಡ ಸಾಹಿತ್ಯದ ಪ್ರಮುಖ ಪ್ರಕಾರವಾದ ನಾಟಕವನ್ನು ಗಮನಕ್ಕೆ ತೆಗೆದುಕೊಂಡಿಲ್ಲ.
ವೈವಿಧ್ಯ

ವಸಂತ ಪ್ರಕಾಶನ : ೨೦೧೫.


  • ರಘುನಾಥ್ ಕೃಷ್ಣಮಾಚಾರ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW