‘ಕೋತಿ ಮತ್ತು ಗೋಧಿ ಹುಗ್ಗಿ’ ಕವನ ಸಂಕಲನ ಪರಿಚಯ

ಹಾವೇರಿ ಜಿಲ್ಲೆ, ಸವಣೂರು ತಾಲೂಕಿನ ಕುರುಬರ ಮಲ್ಲೂರು ಗ್ರಾಮದ ರಾಜಾ ಎಂ.ಬಿ ಯವರು ವೃತ್ತಿಯಿಂದ ಸರಕಾರಿ ಪ್ರೌಢಶಾಲಾ ಶಿಕ್ಷಕರಾಗಿದ್ದಾರೆ. ಆದರೆ ಅವರು ಇಂಗ್ಲಿಷ್ ಭಾಷಾ ಶಿಕ್ಷಕರಾಗಿದ್ದು, ಕನ್ನಡದ ಮೇಲಿನ ಪ್ರೀತಿ ಅವರನ್ನು ಸಾಹಿತ್ಯದಲ್ಲಿ ತೊಡಗುವಂತೆ ಪ್ರೇರೇಪಿಸಿತು. ಹಾಗಾಗಿ ಸಾಕಷ್ಟು ಪ್ರಬಂಧಗಳು, ಕವಿತೆಗಳು ಅವರು ರಚಿಸಿದ್ದಾರೆ. ಅವರ ಮಕ್ಕಳ ‘ಕೋತಿ ಮತ್ತು ಗೋಧಿ ಹುಗ್ಗಿ’ ಕವನ ಸಂಕಲನದ ಕುರಿತು ಪಾರ್ವತಿ ಜಗದೀಶ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಓದಿ….

ಪುಸ್ತಕ :ಕೋತಿ ಮತ್ತು ಗೋಧಿ ಹುಗ್ಗಿ
ಕವಿಗಳು : ರಾಜಾ ಎಂ.ಬಿ ಸರ್
ಪ್ರಕಾರ : ಮಕ್ಕಳ ಕವನ ಸಂಕಲನ
ಪುಟ : ೧೩೨
ಬೆಲೆ : ೧೩೦ .೦೦
ಖರೀದಿಗಾಗಿ : 9686605563

ಮಕ್ಕಳ ಕವನ ಸಂಕಲನ ಕರ್ತರು ನಮ್ಮ ಹಾವೇರಿ ಜಿಲ್ಲೆಯವರೇ ವೃತ್ತಿಯಲ್ಲಿ ಶಿಕ್ಷಕರು ಆದಂತಹ ರಾಜಾ ಎಂ.ಬಿ ಸರ್. ಪುಸ್ತಕ ಕಳಿಸಿ ಸುಮಾರು ದಿನಗಳೇ ಕಳೆದಿದ್ದರೂ ಕಾರಣಾ0ತರಗಳಿಂದ ಪುಸ್ತಕ ಓದಿ ಬರೆಯಲು ವಿಳಂಬವಾಗಿದ್ದಕ್ಕೆ ಕ್ಷಮೆ ಇರಲಿ.

ಹಾವೇರಿ ಜಿಲ್ಲೆಯಲ್ಲಿ ಮಕ್ಕಳ ಸಾಹಿತಿಗಳು ಗಮನ, ವಿರೂಪಾಕ್ಷಪ್ಪ ಕೊರಗಲ್ ಸರ್ ನಂತರ ಇವರೇ ಅನಿಸುತ್ತೆ. ಮಕ್ಕಳ ಸಾಹಿತ್ಯ ಬರೆಯಲು ಎಲ್ಲರಿಂದಲೂ ಆಗುವುದಿಲ್ಲ ದೊಡ್ಡವರ ಸಾಹಿತ್ಯವನ್ನಾದರೆ ಹೇಗೋ ಏನೋ ಒಂದು ಬರೆದು ಬಿಡಬಹುದು ಆದ್ರೆ ಈ ಮಕ್ಕಳ ಸಾಹಿತ್ಯವನ್ನು ಬರೆಯಲು ಸ್ವಲ್ಪ ತಾಳ್ಮೆ ಬೇಕು. ಕಾರಣ ಅವರ ಮಟ್ಟಕ್ಕೆ ಇಳಿದು ಸಾಹಿತ್ಯ ರಚನೆ ಆಗಬೇಕಾತ್ತೆ ಅಲ್ಲಿ ಮಕ್ಕಳು ಯಾರೇ ಆಗಿರಲಿ ಅವರಷ್ಟಕ್ಕೆ ಅವರೇ ಪರಿಪೂರ್ಣ ವ್ಯಕ್ತಿಗಳು ಪ್ರೌಢರಂತೆ ಅರ್ಧ ಬೆಳೆದ ಮನುಷ್ಯರಲ್ಲ ಅವರು.

ಪ್ರಸಕ್ತ ಕೋತಿ ಮತ್ತು ಗೋಧಿಹುಗ್ಗಿ ಕರ್ತೃ ರಾಜಾ ಎಂ. ಬಿ ಅವರು ಕೃತಿಯಲ್ಲಿ ಮಕ್ಕಳ ಮನಸ್ಸನ್ನು ಅರಳಿಸಿ, ಅವರ ಕುತೂಹಲ ಕೆರಳಿಸಿ ಅವರದೇ ಬೌದ್ಧಿಕ ಮಟ್ಟದಲ್ಲಿ ಚಿಂತನಶೀಲರನ್ನಾಗಿಸಿ ತಮ್ಮ ಸುತ್ತ ಮುತ್ತಲಿನ ಪ್ರಪಂಚವನ್ನು ಮಕ್ಕಳಿಗೆ ಅರಿಕೆ ಮಾಡಿಕೊಡುವಲ್ಲಿ ಕವಿತೆಗಳು ಯಶಸ್ವಿಯಾಗಿವೆ ಅನಿಸುತ್ತೆ. ಆದರೂ ಇಂದಿನ ಅನಿಮೆಟೆಡ್ ರೈಮ್ಸ್ ವಿಡಿಯೋ, ಆಡಿಯೋ ಕಾಲದಲ್ಲಿ ಮಕ್ಕಳು ಇಂತಹ ಕವನ ಸಂಕಲನ ಓದುವ ಹವ್ಯಾಸ ದೂರವಾಗಿದೆ ಅನ್ನೋದು ವಿಪರ್ಯಾಸ ಅನಿಸದೇ ಇರಲಾರದು. ಆ ಕಾರಣದಿಂದ ಮಕ್ಕಳಿಗೆ ಇನ್ನೂ ಹೆಚ್ಚಿನ ಆಸಕ್ತಿ ಬರುವಂತೆ ವೈದ್ಯಕೀಯ ವಿದ್ಯಮಾನ, ಆಕಾಶ, ಗ್ರಹಣ ಕಂಪ್ಯೂಟರ್, ಮೊಬೈಲ್ ಇಂತಹ ವಿಷಯಗಳ ಕುರಿತೂ ಒಂದಷ್ಟು ಕವಿತೆಗಳು ಇದ್ದಿದ್ರೆ ಚನ್ನಾಗಿರ್ತಿತ್ತು ಅಂತ ನನ್ನ ಅನಿಸಿಕೆ.

ಮಕ್ಕಳ ಸಾಹಿತ್ಯ ಕೂಡ ಇತರೆ ಎಲ್ಲ ಸಾಹಿತ್ಯ ಪ್ರಕಾರಗಳಿಗಿರುವಷ್ಟೇ ಮೌಲ್ಯಯುತವಾದದ್ದು ಅಂತಹ ಒಂದು ಸಾಹಿತ್ಯ ರಚನೆ ಆಗಬೇಕಾದರೆ, ಮಕ್ಕಳ ವಿವೇಚನೆಗೆ ತಕ್ಕಂತೆ ಸರಳವಾದ ಪದ ಬಳಕೆ, ಪದಗಳ ಪುನರುಕ್ತಿ, ಪ್ರಾಸ ಪದಗಳು ಕಥಾನಕ ರೂಪದ ಸಂಭಾಷಣೆ ರೂಪದ ಪದಗಳ ಬಳಕೆ ಮಾಡಬೇಕಾಗುತ್ತದೆ ಅವೆಲ್ಲವನ್ನೂ ಇಲ್ಲಿ ಸಮರ್ಪಕವಾಗಿ ಬಳಕೆ ಮಾಡಿಕೊಂಡಿದ್ದಾರೆ ಲೇಖಕರು. ಅಂತೆಯೇ ಈ ಕೃತಿ ಮಕ್ಕಳಲ್ಲಿ ಜ್ಞಾನದಾಹ ಹೆಚ್ಚಿಸಿ, ಸೃಜನಶಕ್ತಿ ಹಾಗೂ ಕಲ್ಪನಾ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಂಶಯವಿಲ್ಲ.

ಕೃತಿಯಲ್ಲಿ ಸುಮಾರು 50 ಕವಿತೆಗಳಿದ್ದು ಅದರಲ್ಲಿ ಮಕ್ಕಳ ವಯೋಮಾನಕ್ಕನುಣವಾಗಿ ಶಿಶು ಪ್ರಾಸದ ರಚನೆ, ಕಥನ ರೂಪದ ರಚನೆ, ಮೌಲ್ಯಾಧಾರಿತ ಕವಿತೆಗಳನ್ನು ಒಳಗೊಂಡಿವೆ. ಶಿಶು ಪ್ರಾಸ ರಚನೆಯಲ್ಲಿ ಮಕ್ಕಳಿಗೆ ಪ್ರಾಣಿ, ಪಕ್ಷಿಗಳ ಕುರಿತು ಕೂತುಹಲ ಇರುತ್ತದೆ. ಇಲ್ಲಿ ಮಕ್ಕಳು ತಮ್ಮ ಪುಟ್ಟ ಕಂಗಳಲ್ಲಿ ಜಗತ್ತನ್ನು ಪರಿಚಯ ಮಾಡಿ ಕೊಳ್ಳಲು ಪ್ರಯತ್ನ ಮಾಡುತ್ತವೆ ಅಂತಹ ಕೆಲವು ಕವಿತೆಗಳು ಕೋತಿ ಮತ್ತು ಗೋಧಿ ಹುಗ್ಗಿ, ಕೆಂಬಣ್ಣದ ನಾಯಿ, ತುಂಟ ಮರಿ ನಾಯಿ ಮರಿ, ಒಂದಿನ ನಾನು ಕಾಡಿಗೆ ಹೋದೆನು, ತುಂಟ ಮಂಗನ ತಂಟೆ, ಇರುವೆ ಮತ್ತು ಹಕ್ಕಿ ಇರುವೆಗಳ ಒಗ್ಗಟ್ಟು, ಮುಗಿಲಿನಿಂದ ಹಾರಿ ಬಂತು ಬೆಕ್ಕು, ಪುಟ್ಟಿ ಹೊರಟಳು ಪೇಟೆಗೆ, ಪೊಟರಿಯಲ್ಲೊಂದು ಗಿಳಿ, ನಮ್ಮ ಮನೆಯ ಸುಬ್ಬಿ, ಹಕ್ಕಿ ಮತ್ತೆ ಶಾರದೇ, ಚಹಾ ಕೊಡೆ ಅಮ್ಮ, ನಮ್ಮ ಮಿಸ್, ನೆಲದ ಮೇಲೆ ಮೀನು, ಇರುವೆ, ಇರುವೆ ಕೆಂಪಿರುವೆ ಇಂತಹ ರಚನೆಗಳು ಮಕ್ಕಳು ಅಭಿನಯದ ಮೂಲಕ ಕಲಿಯಬಹುದಾದ ರಚನೆಗಳು ಚೈತನ್ಯದಾಯಕವಾಗಿವೆ.
ಇನ್ನು ಕಥನ ರೂಪದ ರಚನೆಗಳಿಗೆ ಸಂಬಂಧ ಪಟ್ಟಂತೆ ಮಕ್ಕಳು ಸಾಹಸ, ಚಮತ್ಕಾರಿಕ, ನೀತಿದಾಯಕ ಕಥನ ಗೀತೆಗಳಿಗೆ ಮಾರುಹೋಗುತ್ತಾರೆ ಹಿಂದೆ ನಾವು ಕೇಳಿದ ಕಥೆಗಳನ್ನೇ ಕವನ ರೂಪದಲ್ಲಿ ಹಲವಾರು ರಚನೆಗಳಿವೆ. ಮೂರನೇಯವನಿಗೆ ಲಾಭ ,ಕಾಗೆಯ ಜಾಣತನ, ಇಲಿ ಮತ್ತು ಸಿಂಹ, ಅತೀ ಆಸೆ ಗತಿಗೇಡು, ಕಪ್ಪೆ ಮದುವೆ, ಕಿಲಾಡಿ ಮಂಗ, ನರಿ ಮತ್ತು ಆನೆ, ಮೊಸಳೆ ಹೂಡಿದ ಸಂಚು ಬಂಗಾರದ ಮೊಟ್ಟೆ ಕಾಗೆಯ ಗೂಡು, ನಾಯಿಯ ದುರಾಸೆ ಪ್ರಮುಖ ರಚನೆಗಳು. ಇಂತಹ ರಚನೆಗಳು ಮಕ್ಕಳಿಗೆ ಕುತೂಹಲ ತಣಿಸಿ ರಂಜನೀಯ ಅನಿಸುವುದಲ್ಲದೆ ಹೊಸದೊಂದು ಲೋಕದಲ್ಲಿ ವಿಹರಿಸಿದಂತಾಗುತ್ತದೆ..


ಕೋತಿ ಮತ್ತು ಗೋಧಿ ಹುಗ್ಗಿ ಕವಿ ರಾಜಾ ಎಂ.ಬಿ ಸರ್

ಹಾಗೆಯೇ ಮೌಲ್ಯಾಧಾರಿತ ರಚನೆಗಳು ಬಾರೋ ನನ್ನ ಕಂದ, ನನ್ನ ಮುದ್ದು ತಂಗಿ, ಇವರೇ ನಮ್ಮ ಗಾಂಧಿ, ಅಪ್ಪ ನೀನು ಬಹಳ ಗಟ್ಟಿ, ನಮ್ಮ ಊರು, ಕೃಷ್ಣನೆಂಬ ಗೊಲ್ಲನು, ಅಣ್ಣಾ ನೀನು ಎಷ್ಟು ಚುರುಕು, ನೀನೇ ನಮಗೆ ದೀಪ, ಬರೀಬೇಕು ನಾನೊಂದು ಕವನ, ಹೇಳು ಶಿವ, ಹೇಳು ಶಿವ, ನಾನು ಕನ್ನಡದ ಕಂದ, ಯಾರೋ ನಿನ್ನ ತಾಯಿ, ನನ್ನ ತಮ್ಮ ಪೊಲೀಸ್, ನಿಂಗನ ಕನಸು, ಉಂಡರೆ ಮುದ್ದೆ ಕಣ್ಣಿಗೆ ನಿದ್ದೆ, ನಮ್ಮಜ್ಜಿಯ ಚೀಲ, ಹಬ್ಬದ ಸಂಭ್ರಮ, ನಮ್ಮ ಪ್ರೀತಿಯ ಹಾಜಬ್ಬ, ನಮ್ಮ ಮನೆಯ ಪುಟ್ಟ ರಾಜ, ಅಪ್ಪ ನಾನು ಹಾರಬಲ್ಲೆ ಮೊದಲಾದವು ಇವು ಸ್ವಲ್ಪ ತಿಳುವಳಿಕೆ ಇರುವ ಮಕ್ಕಳಿಗೆ ಸ್ನೇಹ ಸಹಕಾರ, ರಾಷ್ಟ್ರ ಪ್ರೇಮ, ಗೌರವ, ಪ್ರಾಮಾಣಿಕತೆ ಚಾರಿತ್ರಿಕ, ಪೌರಾಣಿಕ, ಮಹಾಪುರುಷರ ಕಥೆಗಳು, ಸಮಕಾಲಿನ ಬಾಂಧವ್ಯ ಮೊದಲಾದ ಸಂಗತಿಗಳನ್ನೊಳಗೊಂಡು ರಚನೆ ಮಾಡಿದ್ದಾರೆ..

ಒಟ್ಟಾರೆಯಾಗಿ ಆಯಾ ವಯೋಮಾನಕ್ಕೆ ತಕ್ಕಂತೆ ಮಕ್ಕಳ ಗ್ರಹಿಕೆಗೆ ಅನುಗುಣವಾಗಿ ಅವರುಗಳ ಸೂಕ್ಷ್ಮತೆ ಅರಿತು ಲೇಖಕರು ಕೃತಿ ರಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಕ್ಕಳ ಮನಸು ಮುಚ್ಚುಳ ತೆಗೆದ ಪಾತ್ರೆಯಿದ್ದಂತೆ ಅದರಲ್ಲಿ ಕಸ ತುಂಬದೆ ಸೊಗಸಾದ ಹುಗ್ಗಿಯ ರಸವನ್ನೇ ತುಂಬಿದ್ದಾರೆ..

ಅವರಿಂದ ಇನ್ನಷ್ಟು, ಮತ್ತಷ್ಟು ಕೃತಿ ಹೊರಬರಲಿ ಅನ್ನುವ ಶುಭ ಹಾರೈಕೆಗಳೊಂದಿಗೆ, ಧನ್ಯವಾದಗಳು ಪುಸ್ತಕ ಕಳಿಸಿ ಒಂದು ಓದಿನ ಅನುಭವ ಹಂಚಿಕೊಳ್ಳುವ ಅವಕಾಶಕ್ಕಾಗಿ. ನಿಮ್ಮಲ್ಲರೊಳಗೊಬ್ಬಳು.


  • ಪಾರ್ವತಿ ಜಗದೀಶ್

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW