ಇದೊಂದು ವಿಶೇಷ ಸ್ವಾದದ ಚಹಾ. ಸಕ್ಕರೆಗೆ ಬದಲಾಗಿ ಡ್ರೈ ಚಿಕ್ಕು. ಇದನ್ನು ಮದುಮೇಹಿಗಳು ಕೂಡಾ ಬಳಸಬಹುದು.ಅರುಣ್ ಪ್ರಸಾದ್ ಅವರು ಓದುಗರೊಂದಿಗೆ ಹಂಚಿಕೊಂಡಿರುವ ಒಂದು ವಿಭಿನ್ನ, ವಿಶೇಷ ಚಹಾ, ತಪ್ಪದೆ ಟ್ರೈ ಮಾಡಿ…
ನಮ್ಮ ಕುಟ್ಟೀಚನ್ ಯಾರದ್ದೊ ಸಪೋಟಾ ಹಣ್ಣಿನ ಮರಗಳನ್ನು ವಹಿಸಿಕೊಂಡಿರುವುದಾಗಿ ಅದರ ಹಣ್ಣುಗಳು ತುಂಬಾ ಸಿಹಿ ಇದೆ ತಗೊಳ್ಳಿ ಸಾರ್… ಅಂತ ಹೇಳಿದಾಗ ಯುಗಾದಿಗೆ ಒಂದು ವಾರ ಬಾಕಿ ಇತ್ತು.
ಪ್ರತಿ ಹಬ್ಬಕ್ಕೆ ಬೆಳೆ ಮತ್ತು ಕಾಯಿ ಹೋಳಿಗೆ ತಯಾರಿಸಿ ತುಪ್ಪದ ಜೊತೆ ನಮ್ಮೆಲ್ಲ ಸಂಸ್ಧೆಯ ಸಿಬ್ಬಂದಿ ಮತ್ತು ಸಹಯೋಗಿಗಳಿಗೆ ನೀಡುವ ಸಂಪ್ರದಾಯ ಇರುವುದರಿಂದ ಹೋಳಿಗೆ ಜೊತೆ ಚಿಕ್ಕು ಹಣ್ಣು ಕೊಡುವ ತೀರ್ಮಾನ ಮಾಡಿದೆ. ಕುಟ್ಟೀಚನ್ ಗೆ ತರಲು ಹೇಳಿದ್ದು 20 ರಿಂದ 30 ಕೇಜಿ ಆದರೆ ಅವರು ತಂದಿದ್ದು 60 ಕೇಜಿ ಅದು ಕೇಜಿಗೆ 20 ರೂಪಾಯಿ ಬೆಲೆಯ ತಾಜಾ ಹಣ್ಣುಗಳು ಆದ್ದರಿಂದ ಅಷ್ಟೂ ಹಣ್ಣು ಖರೀದಿಸಿದ್ದೆ.
ಈ ಸಂದರ್ಭದಲ್ಲಿ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನನ್ನ ಭಾವ ಅವರು ರಾಜಸ್ಥಾನದಲ್ಲಿ ಈ ಚಿಕ್ಕೂ ಹಣ್ಣು ಒಣಗಿಸಿ ಚಹಾ ಮಾಡಲು ಬಳಸುತ್ತಾರೆಂಬ ವಿಷಯ ಹೇಳಿದ್ದು ನನಗೂ ಅದನ್ನು ಪ್ರಯೋಗ ಮಾಡಲು ಪ್ರೇರಣೆ ಆಯಿತು.
ಚಿಕ್ಕು ಹಣ್ಣು ತುಂಡುಗಳಾಗಿಸಿ ಬಿರುಬಿಸಿಲಿನಲ್ಲಿ ಒಣಗಿಸಿ ಅದರ ಪುಡಿ ಮಾಡಿ ನನ್ನ ಮಗ ನನಗೆ ಸಹಾಯ ಮಾಡಿದ, ಇವತ್ತು ಬೆಳಿಗ್ಗೆ ಚಹಾ ಮಾಡಿ ಚಿಕ್ಕು ಹಣ್ಣಿನ ಪುಡಿ ಸೇರಿಸಿಕೊಂಡು ಕುಡಿದಾಗಲೇ ಗೊತ್ತಾಗಿದ್ದು ಈ ಸಕ್ಕರೆ ರಹಿತ ಚಹಾದ ಸ್ವಾದ ನಂಬರ್ ಒನ್ ಅಂತ !
ಸಂಜೆ ಆಫೀಸಿನಲ್ಲಿ ಸಕ್ಕರೆ ಬದಲು ಚಿಕ್ಕೂ ಪುಡಿ ಬಳಸಿದ್ದು ತಿಳಿಸದೇ ಈ ಚಹಾ ಸವಿದವರಿಗೆ ಅಭಿಪ್ರಾಯ ಕೇಳಿದಾಗ ಅವರು ಈ ಚಹಾ ತುಂಬಾ ಸ್ಪೆಷಲ್ ಆಗಿದೆ ಅಂದರು.
ಎಲ್ಲಾ ಲಭ್ಯ ಹಣ್ಣುಗಳನ್ನು ಒಣಗಿಸಿ ಪುಡಿ ಮಾಡಿ ಸಕ್ಕರೆ ಬದಲಾಗಿ ಉಪಯೋಗಿಸಬಹುದು, ಒಣ ಹಣ್ಣಗಳ ಸೇವನೆಯಿಂದ ಕೊಲೆಸ್ಟ್ರಾಲ್ ನಿಯಂತ್ರಣ, ರಕ್ತದ ಒತ್ತಡ ನಿಯಂತ್ರಣ, ಡಯಾಬಿಟೀಸ್ ನಿಯಂತ್ರಣ, ಕ್ಯಾನ್ಸರ್ – ಹೃದಯ ಸಂಬಂಧಿ ಕಾಯಿಲೆ – ಮೆದುಳು ಸಂಬಂಧಿ ಕಾಯಿಲೆಗಳು ದೂರವಾಗುತ್ತದೆಂಬ ವರದಿಗಳು ಇದೆ.
ಡಯಾಬಿಟೀಸ್ ಇದ್ದವರು ಸಕ್ಕರೆ ಬಳಸುವ೦ತಿಲ್ಲ ಆದರೆ ಡ್ರೈ ಪ್ರೂಟ್ ಗಳನ್ನು ಪುಡಿ ಮಾಡಿ ಸಕ್ಕರೆ ಬದಲಿಗೆ ಬಳಸಬಹುದು, ಇದರಲ್ಲಿ ಗ್ಲೂಕೋಸ್ ಮತ್ತು ಪ್ರಾಕ್ಟೋಸ್ ಇರುತ್ತದೆ ಇದು ನೈಸರ್ಗಿಕ ಹಣ್ಣಿನ ಸಾರ ಕೇಂದ್ರಿಕೃತವಾದ ಒಣಗಿದ ಹಣ್ಣು ಮತ್ತು ಸಸ್ಯಹಾರಿ ಶೈಲಿಯ ಸಕ್ಕರೆ ಇದು. 1901 ರಲ್ಲಿ ಭಾರತಕ್ಕೆ ಮದ್ಯ ಅಮೇರಿಕಾದಿಂದ ಬಂದ ಈ ಚಿಕ್ಕು ಅಥವ ಸಪೋಟದ ವೈಜ್ಞಾನಿಕ ಹೆಸರು Manilkara zapota, ನಮ್ಮ ದೇಶದಲ್ಲಿ ಗುಜರಾತ್, ಆಂದ್ರ, ಮಹಾರಾಷ್ಟ್, ಕರ್ನಾಟಕ, ಪಶ್ಚಿಮ ಬಂಗಾಳ, ತಮಿಳುನಾಡು, ತೆಲಾಂಗಣ , ಒರಿಸ್ಸಾ ಮತ್ತು ಮಧ್ಯ ಪ್ರದೇಶದಲ್ಲಿ ವಾರ್ಷಿಕ ಎರೆಡು ಪಸಲು ನೀಡುತ್ತದೆ.
ಪಶ್ಚಿಮ ಘಟ್ಟಗಳಲ್ಲಿ ಲಭ್ಯವಿರುವ ಎಲ್ಲಾ ಹಣ್ಣುಗಳನ್ನು ಒಣಗಿಸಿ ಪುಡಿ ಮಾಡಿ ಸಕ್ಕರೆ ಬದಲು ಬಳಸುವ ಮೂಲಕ ಹಣ್ಣುಗಳ ಮೌಲ್ಯವರ್ಧನೆ ಸಾಧ್ಯವಿದೆ ಆಸಕ್ತರು ಈ ನಿಟ್ಟಿನಲ್ಲಿ ಪ್ರಯೋಗ ಮಾಡಬಹುದಾಗಿದೆ. ಚಿಕ್ಕೂ ಹಣ್ಣಿನ ಸಿಪ್ಪೆ, ಬೀಜ ಮತ್ತು ಹಣ್ಣಿನ ಮಧ್ಯದಲ್ಲಿ ತಿರುಳಿನಂತೆ ಇರುವ ಬಿಳಿ ಮೇಣ ತೆಗೆದು ಸೂಯ೯ನ ಬಿಸಿಲಲ್ಲಿ ದೂಳು ಬರದಂತೆ ತೆಳು ಬಟ್ಟೆ ಮುಚ್ಚಿ ಎರೆಡು ದಿನ ಒಣಗಿಸಿ ನಂತರ ಮಿಕ್ಸಿಯಲ್ಲಿ ಪುಡಿ ಮಾಡಿದರೆ ತಯಾರಾಯಿತು ಚಿಕ್ಕೂ ಪೌಡರ್
- ಅರುಣ್ ಪ್ರಸಾದ್