ವೈಜ್ಞಾನಿಕ ಸಾಹಿತ್ಯಿಕ ಸಮೃದ್ಧ ಪೀರನ ಬಲ ಛಲ ಕನ್ನಡ ಕರುನಾಡಲಿ ಹುಟ್ಟಿದ ಸರ್ವರೂ ಧನ್ಯ ಇರಲಿ ನಾನು ಕನ್ನಡಿಗ…ತಪ್ಪದೆ ಮುಂದೆ ಓದಿ…
ನನ್ನ ನಾಡು ನನ್ನ ನುಡಿ ನನ್ನೊಳಗಿರುವುದು ಕನ್ನಡ
ನಾನ್ಯಾರಿಗೂ ಸಬೂಬು ಕೊಡಬೇಕಿಲ್ಲ ನಾನು ಕನ್ನಡಿಗ
ನಾನು ಉಸುರುವ ಗಾಳಿ ನನ್ನ ಎದೆಯಾಳ ಕನ್ನಡ
ಯಾರಿಗೂ ಎದೆ ಬಗೆದು ತೋರಿಸಬೇಕಿಲ್ಲ ನಾನು ಕನ್ನಡಿಗ
ಕಲ್ಲೂ ಕಥೆ ಹೇಳುವ ಮಲ್ಲಿಗೆ ಕಂಪಿನ ಕನ್ನಡ
ಸೊಲ್ಲು ಸೊಲ್ಲಿನಲಿ ಮಧುರ ಭಾವ ಮಿಡಿಯುವ ಕನ್ನಡ
ಜೀವನ ಬದುಕು ಒಲವು ಪ್ರೀತಿ ಇರುವು ತಿರುಳು ಕನ್ನಡ
ನಾನು ಯಾರಿಗೂ ಸೋಲಬೇಕಿಲ್ಲ ನಾನು ಕನ್ನಡಿಗ
ಹರವಾದ ಎದೆಯ ಪ್ರೇಮಮಯ ವಿಶಾಲ ವಟವೃಕ್ಷ ಕನ್ನಡ
ಎಲ್ಲಿಂದಲೋ ಬರುವ ಹಕ್ಕಿಪಿಕ್ಕಿಗಳಿಗೆ ಆಶ್ರಯತಾಣ ಕನ್ನಡ
ಮತಿಯ ಮೀರಿ ಮೇರು ಭಾವ ಮಿಡಿಯುವ ಕನ್ನಡ
ಅತ್ತಿಯ ಹೂವು ಯಾರಿಗೂ ತೋರುವುದಿಲ್ಲ ನಾನು ಕನ್ನಡಿಗ
ಕರಿಮಣ್ಣಿನ ಘಮಲಲಿ ಶಾಸನ ಪದ್ಯಗಳ ಸಂಪದ್ಭರಿತ ಕನ್ನಡ
ಆದರ್ಶದಿ ಅರಿವಿನ ದೀಪ ಹಚ್ಚಿ ದೇಶಕ್ಕೆ ಬೆಳಕನಿತ್ತ ಕನ್ನಡ
ಸರ್ವಧರ್ಮ ಸಮನ್ವಯದಿ ಎಲ್ಲರನಪ್ಪಿ ನಡೆವ ಕನ್ನಡ
ನಾನ್ಯಾರಿಗೂ ಅಂಜಬೇಕಿಲ್ಲ ನಾನು ಕನ್ನಡಿಗ
ಭಾಷೆಯ ಔನತ್ಯ ವಿಶ್ವ ಲಿಪಿಗಳ ರಾಣಿ ಕನ್ನಡ
ಭಾಷೆಯ ಸಂಪೂರ್ಣ ಬಗೆ ವಸರುವ ಕರುಣರಸ ಕನ್ನಡ
ಶರಣರ ದಾಸರ ಸೂಪಿ ಸಂತರ ಧಾರೆಯರೆದ ಧರಿತ್ರಿ ಕನ್ನಡ
ಧಮನಿ ಧಮನಿಯ ರಕುತದ ಮಿಡಿತದಲ್ಲಿ ನಾನು ಕನ್ನಡಿಗ
ಚಲುವು ಮೈವೆತ್ತು ನಿತ್ಯ ಹರಿವ ತುಂಗೆ ಕೃಷ್ಣೆ ಕಾವೇರಿ
ಶರಾವತಿ ಕಾಳಿ ಗುಪ್ತಗಾಮಿನಿ ಶಾಲ್ಮಲೆಯ ತವರು ಕನ್ನಡ
ಮೇರು ಕಾವ್ಯ ಬಿಡಿಸದ ಬಂಧ ಅನುಬಂಧ ಕನ್ನಡ
ಹಿಂದೂ ಮುಂದು ಹೇಗೆ ವಿಚಾರಿಸಿದರೂ
ಘನವೆತ್ತ ನಾಡಲ್ಲಿ ನಾನು ಕನ್ನಡಿಗ
ಕಲೆಯ ತವರು ಮಲೆಯ ಬೀಡು ಶ್ರೀಗಂಧದ ಕಂಪು ಕನ್ನಡ
ನೆಲದ ಗರ್ಭದಲಿ ಚಿನ್ನವನಿಟ್ಟುಕೊಂಡ ಚಿನ್ನದ ನಾಡು ಕನ್ನಡ
- ಪೀರಸಾಬ ನದಾಫ