ಏನಂತ್ಹೇಳಲಿ? ಅವಳನ್ನು ಹೇಗೆ ಪರಿಚಯಿಸಲಿ!…ಮನದ ತುಂಬಾ ಅವಳೇ ತುಂಬಿಕೊಂಡಿದ್ದಾಳೆ… ನಿಂತವರ ಸಲಿಗೆಯಲಿ ಮಾತನಾಡಿಸಿ ಮೆರೆಯುತ್ತಾಳೆ…ಕವಿ ಪೀರಸಾಬ ನದಾಫ ಅವರ ಸುಂದರ ಕವಿತೆಯನ್ನು ತಪ್ಪದೆ ಮುಂದೆ ಓದಿ…
ಮನದ ತುಂಬಾ
ಅವಳೇ ತುಂಬಿಕೊಂಡಿದ್ದಾಳೆ
ಅವಳ ಚಹರೆಯ
ಜಗಕೆ ಪರಿಚಯಿಸುವ ಕಾತುರ
ರಾತ್ರಿ ರಾಣಿ ಅವಳು
ಅರಳುತ್ತಾಳೆ ಗಮ್ಮೆಂದು
ಸಾಲು ಸಾಲು ಕೆಂಪು ದೀಪಗಳ ಕೆಳಗೆ
ಶೋಕಿಲೆ ನಿಲ್ಲುತ್ತಾಳೆ
ಮತ್ತೆ ಮತ್ತೆ ತೆರೆತೆರೆದು ತೋರಿಸುತ್ತ
ತನ್ನಾಂಗಗಳ
ನಗುತ್ತಾಳೆ ಕಿಲಕಿಲನೆ
ತನ್ನೆಲ್ಲ ಭಾವನೆಗಳಿಗೆ ಕಫನ್ ಎಳೆದು
ಹಾದಿಯಲ್ಹೋಗುವವರು
ಬೀದಿಯಲ್ಲಿ ಸುತ್ತುವವರು
ಹಗುರ ಭಾವದಲಿ ಅವಳಡೆಗೆ
ದೃಷ್ಠಿ ಹಾಯಿಸುತ್ತಾರೆ
ಹರೆಯದ ಪೋರರಿಂದ್ಹಿಡಿದು
ಮುದುಕರವರೆಗೆ
ಮುಲಾಜಿಲ್ಲದೆ ಎಲ್ಲರತ್ತ
ಅದೇ ನಗೆ ಸೂಸುತ್ತಾಳೆ
ಅತ್ತರಿನ ಘಮಲುಗಳ ಗುರುತಿಸುತ್ತಾಳೆ
ನಿಂತಲ್ಲೆ ಗರಿಗೆದರುತ್ತಾಳೆ
ತುತ್ತಿನ ಚೀಲ ತುಂಬಿಸಲು
ನಿಂತವರ ಸಲಿಗೆಯಲಿ ಮಾತನಾಡಿಸಿ
ಮೆರೆಯುತ್ತಾಳೆ
ಒನಪು ವೈಯಾರದಲಿ
ಮೋಜಿನ ಕುದುರೆಯನೇರಿಸುತ್ತಾಳೆ
ಸಂಸಾರದಲ್ಲಿ ಎಗದವರು ಸೋಕಿಲಾಲರು
ಜೊಲ್ಲು ಸುರಿಸಿ
ಸರಾಗವಾಗಿ ರೇಟು ಕುದುರಿಸುತ್ತಾರೆ
ಅವಳ್ಗಲ್ಲ ಚಿವುಟಿ
ಬಾರಿನಂಗಡಿ ಹೊಕ್ಕು
ಹೀರುತ್ತಾಳೆ ಅವರೊಡನೆ ಬೀರು
ಮರೆಯುತ್ತಾಳೆ ಆ ಕ್ಷಣದಲ್ಲಿ
ಕಣ್ಮುಂದಿನ ಬದುಕು
ಏನಂತ್ಹೇಳಲಿ?
ಅವಳನ್ನು ಹೇಗೆ ಪರಿಚಯಿಸಲಿ!
ಮನದ ಭದ್ರ ಪೆಟ್ಟಿಗೆಯೊಳಗೆ
ಪಟ್ಟಭದ್ರವಾಗಿ ಕುಳಿತವಳ
ದಿಕ್ಸೂಚಿ ಇಲ್ಲದ ಬದುಕು ಕಂಡ
ದೇವರೂ ಇಲ್ಲಿ ದರಿದ್ರ
ಸಾಕ್ಮಾಡಬೇಕಿನ್ನು ಜಗದ್ಸಂತೆ
ಎಂದವಳ್ಕೊರಗುವ ಸಮಯ
ನನ್ನ ಚಿತ್ತಕ್ಕೆ ಮತ್ತದೇ ಯಾಮಾರಿಕೆ
ಆ ಜಾಗೆಯಲಿ
ಅವಳಂತ ಸಣ್ಣವಳೊಬ್ಬಳು
ಕಟ್ಟಿಕೊಳ್ಳುತ್ತಿದ್ದಾಳೆ ಮತ್ತೆ ತನ್ನ ಸುತ್ತ ಹುತ್ತ!!!
- ಪೀರಸಾಬ ನದಾಫ
