ಕವಿಗಳು, ಲೇಖಕರು ಆದ ಡಾ ಎಚ್ ಎಸ್ ಸತ್ಯನಾರಾಯಣ ಅವರು ಈ ಕವಿತೆಯನ್ನು ಕವಿಯತ್ರಿ ಎಂ ಆರ್ ಕಮಲಾ ಮೇಡಂ ಅವರಿಗೆ ಅರ್ಪಿಸಿದ್ದಾರೆ..ತಪ್ಪದೆ ಮುಂದೆ ಓದಿ…
ಸದಾ ಮುತ್ತಿನ ನಗೆಯ
ಹೊಂಗಿರಣ ಸೂಸುತ್ತಾ
ಮೆಲ್ಲನೆ ಪುಳಕಗಳ ರಂಗೇರಿಪ
ದಳದಳ ಅರಳಿಸಿ ಕಂಗೊಳಿಪ ಕೆಂದಾವರೆ
ಈ ಕಮಲ
ತಂಪೆರೆವ ಚಂದಿರನೆಡೆಗೆ
ಜಗದ ಜನವೆಲ್ಲಾ ಹಾತೊರೆದವರೆ
ಇವಳೋ ಸುಡುಬಿಸಿಲ ಸೂರ್ಯಮೋಹಿ
ಪ್ರಖರ ಶಾಖದಲ್ಲೂ, ವೈಶಾಖದಲ್ಲೂ
ಮೊಗಬಾಡಬಿಡದೆ ನಗೆಬೀರುವ ಕಮಲಮುಖಿ
ಈ ಕಮಲಕ್ಕೆ
ಯಾರ ಆರೈಕೆಯ ಹಂಗಿಲ್ಲ
ನೀರು-ಗೊಬ್ಬರಗಳಿಗೆ ಎಂದೂ
ಪರಿತಪಿಸದ ಈ ನೀರೆ
ನೀರ ಕಸುವನ್ನೇ ಹೀರಿ
ಬಯಲನ್ನೆ ಕುಡಿವ ಬಯಕೆಯಲ್ಲಿ
ಆಕಾಶಕ್ಕೆ ಮೊಗವೆತ್ತಿ ನಿಂತ ಧೀರೆ
ಊರ್ಧ್ವಗಮನೆ, ನೆಲ ಮುಗಿಲ
ಪ್ರೀತಿಯಲಿ ಬಾಂಧವ್ಯ ಬೆಸೆವ ಅಂಬುಜಾಕ್ಷಿ
ಗುಲಾಬಿಯನ್ನೆ ಹೊತ್ತು ಮೆರೆಸುವವರ ಕಂಡು
ದುಃಖಿಸದೆ, ಸ್ವಮರುಕದಲಿ ಕೊರಗದೆ
ತನ್ನ ಗುಲಾಬಿ ಕೆನ್ನೆಗುಳಿಯಲ್ಲೇ ಜಗದೆಲ್ಲ
ನಿರ್ಲಕ್ಷ್ಯವನು ಹೂತು, ನಗುವಲ್ಲೆ ಮರುಹುಟ್ಟು ಪಡೆವ ಹೂಬಾಲೆ
ಯಾರ ಹಂಗಿಲ್ಲದೆ
ಅರಳುವ ಈ ಹೂವಿಗೆ
ಮುಂಜಾನೆಯಲ್ಲಿ ಅರಳುವ
ಮುಸ್ಸಂಜೆಗೆ ಮುದುಡುವ
ದಂದುಗವೇನೂ ಹೊಸತಲ್ಲ!
ಅರಳುವುದೂ ಒಂದು ಕಲೆಯೇ
ಎಂಬುದನರಿತೇ ಅರಳುವ ಈ ಕಮಲ
ನಗುವಿನಲೆಯಲ್ಲೇ ಅನುದಿನವೂ ತೇಲುತಿರಲಿ
ಕಾವ್ಯವನ್ನೇ ಉಸಿರಾಡುವ ಈ ಕಾವ್ಯಕನ್ನಿಕೆ
ಸಾರಸ್ವತ ಲೋಕ ಕರುಣಿಸಿದ ಸಣ್ಣ
ಪಾಲಿನಲ್ಲೇ
ನೊಂದವರ ನೋವ ತೊಡೆವ
ತನ್ನ ಹೂಬೆರಳ ಕಮಲ ದಳಗಳಿಂದ
ಈ ಜಗವ ಹೀಗೆ ನೇವರಿಸುತಿರಲಿ
ಮರಳಿ ಅರಳು ಕಮಲ
- ಡಾ ಎಚ್ ಎಸ್ ಸತ್ಯನಾರಾಯಣ