ನಾಮಕ್ಕಲ್ ಕೋಟೆಯ ಆಂಜನೇಯ 1500 ವರ್ಷಗಳಷ್ಟು ಹಳೆಯದಾಗಿದೆ. ಈ ದೇವಾಲಯಕ್ಕೆ ಸಂಬಂಧಿಸಿದಂತೆ ರೋಚಕವಾದ ಪ್ರಸಂಗವೊಂದು ಪುರಾಣಗಳಲ್ಲಿ ಕೇಳಿಬರುತ್ತದೆ. ಈ ದೇವಾಲಯದ ಕುರಿತು ಸೌಮ್ಯ ಸನತ್ ಅವರು ಬರೆದಿರುವ ಈ ಲೇಖನವನ್ನು ತಪ್ಪದೆ ಮುಂದೆ ಓದಿ….
ಧೈರ್ಯ, ಶಕ್ತಿ ಹಾಗೂ ಬಲವನ್ನು ಕರುಣಿಸುವ ಪ್ರಮುಖ ದೇವ. ಅದರಲ್ಲೂ ವಿಶೇಷವಾಗಿ ಯುವಕರಿಗೆ ಬಲು ಅಚ್ಚು ಮೆಚ್ಚಿನ ದೇವ ಆಂಜನೇಯ.
ಅಂತೆಯೆ ಭಾರತದಾದ್ಯಂತ ಸಾವಿರಗಟ್ಟಲೆ ಸಂಖ್ಯೆಯಲ್ಲಿ ಹನುಮನಿಗೆ ಮುಡಿಪಾದ ದೇವಾಲಯಗಳನ್ನು ಕಾಣಬಹುದು. ಅದರಂತೆ ದಕ್ಷಿಣ ಭಾರತದಲ್ಲಿಯೂ ಸಹ ಹನುಮನಿಗೆ ಮುಡಿಪಾದ ಲೆಕ್ಕವಿಲ್ಲದಷ್ಟು ಸಂಖ್ಯೆಯಲ್ಲಿ ದೇಗುಲಗಳಿವೆ. ಆದರೆ ಸ್ಥಳ ಪ್ರಭಾವ, ದಂತಕಥೆ, ಪೌರಾಣಿಕತೆಯ ಹಿನ್ನಿಲೆಗಳಿಗೆ ಅನುಗುಣವಾಗಿ ಕೆಲ ಕ್ಷೇತ್ರಗಳು ಸಾಕಷ್ಟು ಮಹತ್ವ ಪಡೆದ ಸ್ಥಳಗಳಾಗಿದ್ದು ಹನುಮನ ದೇಗುಲಗಳನ್ನು ಹೊಂದಿದೆ. ಆದರೆ ಸ್ಥಳ ಪ್ರಭಾವ, ದಂತಕಥೆ, ಪೌರಾಣಿಕತೆಯ ಹಿನ್ನಿಲೆಗಳಿಗೆ ಅನುಗುಣವಾಗಿ ಕೆಲ ಕ್ಷೇತ್ರಗಳು ಸಾಕಷ್ಟು ಮಹತ್ವ ಪಡೆದ ಸ್ಥಳಗಳಾಗಿದ್ದು ಹನುಮನ ದೇಗುಲಗಳನ್ನು ಹೊಂದಿದೆ.
ಯಾತ್ರಾರ್ಥಿಗಳೆ ಆಗಲಿ ಅಥವಾ ಪ್ರವಾಸಿಗರೆ ಆಗಲಿ ನಾಮಕ್ಕಲ್ಲಿನಲ್ಲಿ ನೋಡಲೇಬೇಕಾದ ಒಂದು ಪ್ರಮುಖ ಸ್ಥಳವೆಂದರೆ ಆಂಜನೇಯ ದೇವಸ್ಥಾನ. ಈ ದೇವಸ್ಥಾನವು 1500 ವರ್ಷಗಳಷ್ಟು ಹಳೆಯದಾಗಿದ್ದು, ನಾಮಕ್ಕಲ್ ಕೋಟೆಯ ಕೆಳಗಿರುವ ಒಂದು ಪುರಾತನ ದೇವಸ್ಥಾನವಾಗಿದೆ. ಇದು 100 ಮೀಟರ್ ದೂರವಿರುವ ಶ್ರೀ ನರಸಿಂಹದೇವರ ದೇವಸ್ಥಾನದ ಎದುರು ನೆಲೆಗೊಂಡಿದೆ.
ವಿಶೇಷತೆ :
ಈ ದೇವಾಲಯದ ಮುಖ್ಯ ಆಕರ್ಷಣೆಯೆಂದರೆ ಭಗವಾನ್ ಹನುಮಾನ್ ದೇವರ ಇನ್ನೊಂದು ಹೆಸರಿನ ಆಂಜನೇಯಮೂರ್ತಿಯ ವಿಗ್ರಹ.ಈ ವಿಗ್ರಹವನ್ನು ಯಾವರೀತಿ ಪ್ರತಿಷ್ಠಾಪಿಸಿದ್ದಾರೆಂದರೆ ಭಗವಾನ್ ಆಂಜನೇಯನ ಮುಖವು ಭಗವಾನ್ ನರಸಿಂಹದೇವರ ಕಡೆಗೆ ತಿರುಗಿ ನೋಡುತ್ತಿರುವ ಭಂಗಿಯಲ್ಲಿದೆ. ಇದರಿಂದ ಭಗವಾನ್ ಆಂಜನೇಯನು ಕೋಟೆಯ ಪಾಲಕನಾಗಿ ನಿಂತು ಪ್ರಜೆಗಳನ್ನು ಶತ್ರುಗಳಿಂದ ರಕ್ಷಣೆ ನೀಡುತ್ತಿದ್ದಾನೆ ಎಂಬ ನಂಬಿಕೆ ಉಂಟಾಗಿದೆ.ಅಂತೆಯೆ ಪ್ರತಿನಿತ್ಯ ಇಂತಹ ದೇವಾಲಯಗಳಿಗೆ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು, ಪ್ರವಾಸಿಗರು ಭೇಟಿ ನೀಡುತ್ತಲೆ ಇರುತ್ತಾರೆ. ಪ್ರಸ್ತುತ ಲೇಖನದಲ್ಲಿ ಹನುಮನು ವಿಶಾಲ ಗಾತ್ರದ ಪ್ರತಿಮೆಯಿರುವ ಹಾಗೂ ಆ ಪ್ರದೇಶದ ಅತ್ಯಂತ ಜನಪ್ರೀಯವಾಗಿರುವ ದೇವಾಲಯವೇ ನಾಮಕ್ಕಲ್ ಹನುಮಂತ ಅಥವಾ ನಾಮಕ್ಕಲ್ ಆಂಜನೇಯನ ದೇವಾಲಯ.
ಈ ದೇವಾಲಯದಲ್ಲಿ ಆಂಜನೇಯ ಹದಿನೆಂಟು ಅಡಿಗಳಷ್ಟು ಎತ್ತರವಾಗಿದ್ದು ವೀರಬಾಹುವಾಗಿ, ಅಪ್ರತಿಮ ವೀರನಾಗಿ ಹಾಗೂ ರಾಮನ ಅವತಾರ ನರಸಿಂಹನನ್ನು ಪೂಜಿಸುತ್ತಿರುವ ಭಂಗಿಯಲ್ಲಿದ್ದಾನೆ.ವಿಶೇಷವೆಂದರೆ ಇಲ್ಲಿ ಆಂಜನೇಯನು ಕೈಗಳಲ್ಲಿ ಜಪಮಾಲೆ ಹಿಡಿದು ನಮಸ್ಕರಿಸುತ್ತ ಟೊಂಕದಲ್ಲಿ ಕತ್ತಿಯನ್ನು ಹೊಂದಿರುವ ಭಂಗಿಯಲ್ಲಿ ನಿಂತಿರುವುದು. ಆತ್ಮವಿಶ್ವಾಸ ಮತ್ತು ಧೈರ್ಯಗಳ ಕೊರತೆಯಿರುವವರು ಹಾಗೂ ಶೈಕ್ಷಣಿಕವಾಗಿ ಉನ್ನತಿಯನ್ನು ಸಾಧಿಸಬಯಸುವವರು ವಿಶೇಷವಾಗಿ ನಾಮಕ್ಕಲ್ ಹನುಮಂತ ದರ್ಶನ ಪಡೆಯುತ್ತಾರೆ ಹಾಗೂ ಭಕ್ತಿಯಿಂದ ಬೇಡಿಕೊಳ್ಳುತ್ತಾರೆ. ಇದರಿಂದ ಅಪೇಕ್ಷಿತ ಫಲ ಪ್ರಾಪ್ತಿಯಾಗುತ್ತದೆಂಬ ನಂಬಿಕೆಯಿದೆ.
ಸ್ಥಳ, ಪುರಾಣ :
ಈ ದೇವಾಲಯಕ್ಕೆ ಸಂಬಂಧಿಸಿದಂತೆ ರೋಚಕವಾದ ಪ್ರಸಂಗವೊಂದು ಪುರಾಣಗಳಲ್ಲಿ ಕೇಳಿಬರುತ್ತದೆ. ಆ ಪ್ರಕಾರವಾಗಿ, ಒಂದೊಮ್ಮೆ ಆಂಜನೇಯನು ಇಂದಿನ ನೇಪಾಳದಲ್ಲಿರುವ ಗಂಡಕಿ ನದಿಯಲ್ಲಿ ಸ್ನಾನ ಮಾಡುವಾಗ ಅದ್ಭುತವಾದ ನಾರಾಯಣನ ರುಪವಿರುವ ಸಾಲಿಗ್ರಾಮವೊಂದು ದೊರಕುತ್ತದೆ. ಅದನ್ನು ತೆಗೆದುಕೊಂಡು ಹೊರಟ ಹನುಮನು ಈ ಸ್ಥಳದ ಮೂಲಕ ಹಾದು ಹೋಗುತ್ತಾನೆ.ನೋಡುತ್ತಿರುವಾಗ. ಜಗನ್ಮಾತೆ ಲಕ್ಷ್ಮಿ ದೇವಿಯು ತಪಸ್ಸು ಮಾಡುತ್ತಿರುವುದನ್ನು ಕಂದು ಅವಳ ಬಳಿ ತೆರಳಿ ವಿಚಾರಿಸುತ್ತಾನೆ. ಆಗ ಲಕ್ಷ್ಮಿಯು ನಾರಾಯಣನ ನರಸಿಂಹ ಅವತಾರವನ್ನು ನೋಡುವ ತವಕದಿಂದ ಧ್ಯಾನಿಸುತ್ತಿರುವ ವಿಷಯ ತಿಳಿಸುತ್ತಾಳೆ.
ಹನುಮನು ತನ್ನ ಸಾಲಿಗ್ರಾಮವನ್ನು ಅವಳ ಕೈಗೆ ಕೊಟ್ಟು ತಾನು ಬರುವವರೆಗೆ ಭೂಮಿಯ ಮೆಲಿಡದಿರಲು ಪ್ರಾರ್ಥಿಸುತ್ತಾನೆ ಹಾಗೂ ಇಂತಿಷ್ಟ ಸಮಯದಲ್ಲೆ ಬರುವೆನೆಂದು ಹೇಳಿ ಹೊರಡುತ್ತಾನೆ. ನಂತರ ಅವನು ತಾನು ಹೇಳಿದ ಸಮಯಕ್ಕೆ ಮರಳದಾದಾಗ ಲಕ್ಷ್ಮಿಯು ಧ್ಯಾನ ಮುಂದುವರೆಸುವ ಉದ್ದೇಶದಿಂದ ಆ ಸಾಲಿಗ್ರಾಮವನ್ನು ಅಲ್ಲಿಯೆ ಭೂಮಿಯ ಮೇಲಿಡುತ್ತಾಳೆ. ಹಾಗೆ ಇಟ್ಟ ತಕ್ಷಣ ಸಾಲಿಗ್ರಾಮ ಬೆಳೆಯಲಾರಂಭಿಸುತ್ತದೆ.
ಹೀಗೆ ಬೆಳೆದು ಬೆಟ್ಟದ ರೂಪ ತಾಳುತ್ತದೆ ಆ ಸಾಲಿಗ್ರಾಮ. ತದನಂತರ ಅದರ ಮುಂದೆ ನರಸಿಂಹನು ಪ್ರತ್ಯಕ್ಷನಾಗಿ ಲಕ್ಷ್ಮಿ ಹಾಗೂ ಹನುಮರಿಬ್ಬರಿಗೂ ದರ್ಶನ ನೀಡುತ್ತಾನೆ. ತದ ನಂತರ ಅಲ್ಲಿಯೆ ಲಕ್ಷ್ಮಿ-ನರಸಿಂಹನಾಗಿ ನೆಲೆಸುತ್ತಾನೆ. ತನ್ನ ಸ್ವಾಮಿಯ ಅಗಾಧ ರೂಪ ಕಂಡು ತನ್ಮಯನಾದ ಹನುಮನೂ ಸಹ ಅವನನ್ನು ಸ್ತುತಿಸುತ್ತ ಅಲ್ಲಿಯೆ ನೆಲೆಸುತ್ತಾನೆ. ಹಾಗಾಗಿ ಇಂದಿಗೂ ಆಂಜನೇಯನ ದೇವಾಲಯದ ಎದುರಿಗೆ ನರಸಿಂಹನ ದೇಗುಲವಿರುವುದನ್ನು ಇಲ್ಲಿ ಕಾಣಬಹುದಾಗಿದೆ.
- ಸೌಮ್ಯ ಸನತ್