ಈ ಪುಸ್ತಕ ಬಿಡುಗಡೆ ಆಗುವುದಕ್ಕೆ ಎರಡು ದಿನ ಮುಂಚೆಯೇ ರವಿ ಬೆಳಗೆರೆ ಅಣ್ಣ, ಅವರ ಆಫೀಸ್ ನಲ್ಲಿ ಆಟೋಗ್ರಾಫ್ ಹಾಕಿ “ಮೊದಲನೆ ಪ್ರತಿ ನಿನಗೇ ಕೊಡುತ್ತಿದ್ದೇನೆ” ಅಂಥ ಕೊಟ್ಟಿದ್ದರು. -ನಟರಾಜು ಮೈದನಹಳ್ಳಿ, ತಪ್ಪದೆ ಮುಂದೆ ಓದಿ…
ಅಕ್ಷರ ಮಾಂತ್ರಿಕ ರವಿ ಬೆಳಗೆರೆ ಯವರ “ಇಡ್ಲಿ ವಡ ಡೆಡ್ಲಿ ಮರ್ಡರ್” ಕಥನ ಓದಲು ರೋಚಕವಾಗಿದೆ. ರವಿಯಣ್ಣನ ಆಕರ್ಷಕ ಬರವಣಿಗೆಯ ಶೈಲಿ ಕುತೂಹಲಕರವಾಗಿ ಓದಿಸಿಕೊಂಡು ಹೋಗುತ್ತದೆ.
ಹೆಣ್ಣು, ಹೊನ್ನು, ಮಣ್ಣಿಗಾಗಿ ಘನಘೋರ ಯುದ್ದಗಳೇ, ಭಯಾನಕ ಕೊಲೆಗಳೇ ನಡೆದು ಹೋಗಿವೆ. ರಾಮಾಯಣ ನಡೆದಿದ್ದು ಹೆಣ್ಣಿನಿಂದ. ಈ ನೈಜ ಕತೆಯಲ್ಲಿಯೂ ಸಹ ಜೀವಜ್ಯೋತಿ ಎಂಬ ವಿವಾಹಿತ ಸುಂದರ ಹೆಣ್ಣನ್ನು ತನ್ನವಳನ್ನಾಗಿಸಿಕೊಳ್ಳಬೇಕೆಂಬ ಮೋಹದಲ್ಲಿ ಆಕೆಯ ಗಂಡ ಪ್ರಿನ್ಸ್ ಶಾಂತಕುಮಾರನನ್ನು ನಿರ್ದಾಕ್ಷಿಣ್ಯವಾಗಿ ಕೊಲೆ ಮಾಡಿಸಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಲೋಲುಪ ರಾಜಗೋಪಾಲ್ ಎಂಬ ಯಶಸ್ವಿ ಉದ್ಯಮಿಯ ದುರಂತ ಕತೆ.
ಒಂದು ಸಣ್ಣ ಹೋಟೆಲ್ ನಲ್ಲಿ ಟೇಬಲ್ ಕ್ಲೀನ್ ಮಾಡುವ ಒಬ್ಬ ಯುವಕ ನಂತರ ತನ್ನದೇ ಒಂದು ಹೋಟೆಲ್ ಮಾಡಿ, ತನ್ನ ಬುದ್ಧಿವಂತಿಕೆಯಿಂದ ಗ್ರಾಹಕರ ಮನಸ್ಥಿತಿಯನ್ನು ಚೆನ್ನಾಗಿ ಅರಿತು , ಶುಚಿ ರುಚಿಯಾದ ತಿಂಡಿ ಊಟ ಕೊಡುತ್ತ, ತನ್ನ ಬ್ಯುಸಿನೆಸ್ ಸ್ಮಾರ್ಟ್ ನೆಸ್ ನಿಂದಾಗಿ ಕಾಲಾಂತರದಲ್ಲಿ ಭಾರತವೂ ಸೇರಿದಂತೆ ಅನೇಕ ದೇಶಗಳಲ್ಲಿ ನೂರಾರು ಹೋಟೆಲ್ ಗಳನ್ನು ಸ್ಥಾಪಿಸಿ ಕೀರ್ತಿ, ಹಣ , ಪ್ರತಿಷ್ಟೆ ಗಳಿಸಿದವನೇ ಶರವಣ ಭವನ ಗ್ರೂಪ್ ಆಫ್ ಹೋಟೆಲ್ ನ ಮಾಲಿಕ ರಾಜಗೋಪಾಲ್. ಇಷ್ಟೇ ಆಗಿದ್ದರೆ ಇಂದು ಸುಖವಾಗಿ ತನ್ನ ಇಳಿವಯಸ್ಸನ್ನು ಕಳೆಯುತ್ತಿದ್ದ. ಆದರೆ ಆತನ ನಸೀಬು ಕೊಟ್ಟಿ ಇತ್ತು. ತನ್ನದೇ ತಪ್ಪಿನಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಇಂದು ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ.
ರಾಜಗೋಪಾಲ್ ಗೆ ಹೆಂಗಸರ ಮೋಹ ಜಾಸ್ತಿ. ತನ್ನ ಹೋಟೆಲ್ ಗಳಲ್ಲಿ ಕೆಲಸ ಮಾಡುತ್ತಿದ್ದ ಹೆಂಗಸರನ್ನು ಹಾಗು ಸಿಬ್ಬಂದಿಯವರ ಹೆಂಡತಿಯರನ್ನು ತನ್ನ ಹಾಸಿಗೆಗೆ ಬಲವಂತವಾಗಿ ಸೆಳೆದು ಸುಖಿಸುವುದು ಈತನ ಕಾಮುಕತೆಗೆ, ನೀಚತನಕ್ಕೆ ಸಾಕ್ಷಿ.
ಅಲ್ಲದೆ ಈತನಿಗೆ ದೇವರು ಮತ್ತು ಭವಿಷ್ಯ ಹೇಳುವವರ ಮೇಲೆ ವಿಪರೀತ ನಂಬಿಕೆ. ತನಗೆ ಈಗಾಗಲೇ ಒಬ್ಬ ಹೆಂಡತಿ ಇದ್ದರೂ ಕುಳಂತೈ ಪಂಡಿಚ್ಚಿ ಎಂಬ ಪಕೀರ, ಕೃತಿಕಾ ಎಂಬ ವಿವಾಹಿತ ಸ್ತ್ರೀಯನ್ನು ನೀನು ಮದುವೆ ಆಗು, ನಿನ್ನ ಅದೃಷ್ಟ ಖುಲಾಯಿಸುತ್ತದೆ ಎಂದು ಹೇಳಿದಾಗ ಆಕೆಯ ಗಂಡನನ್ನು ಓಡಿಸಿ ಕೃತಿಕಾಳನ್ನು ಎರಡನೇ ಹೆಂಡತಿಯಾಗಿ ಮದುವೆಯಾಗುತ್ತಾನೆ.
ಕರುಂಡಿ ಎಂಬ ಮಾಂತ್ರಿಕ ಎಡಗೆನ್ನೆಯ ಮೇಲೆ ಮಚ್ಚೆ ಇರುವವಳನ್ನು ಮದುವೆಯಾಗು, ನಿನ್ನ ಕೀರ್ತಿ ದೇಶ ವಿದೇಶಗಳಲ್ಲಿ ಹರಡುತ್ತದೆ ಎಂದಾಗ ಎಡಗೆನ್ನೆಯ ಮೇಲೆ ಮಚ್ಚೆ ಇರುವ ಜೀವಜ್ಯೋತಿಯನ್ನು ಪತ್ತೆ ಮಾಡುತ್ತಾನೆ. ನೋಡಲು ಆಕರ್ಷಕವಾಗಿದ್ದ ಜೀವಜ್ಯೋತಿ ತಾನು ಪ್ರೀತಿಸಿ ಮದುವೆಯಾದ ಗಂಡ ಪ್ರಿನ್ಸ್ ಶಾಂತಕುಮಾರ್ ಎಂಬ ಗಂಡನೊಂದಿಗೆ ಸುಖವಾಗಿರುತ್ತಾಳೆ. ಏನೇ ಹರಸಾಹಸ ಪಟ್ಟರೂ, ಯಾವುದೇ ಆಮಿಷ ತೋರಿದರೂ ಗಂಡ ಹೆಂಡತಿಯನ್ನು ದೂರ ಮಾಡಲು ಸಾಧ್ಯವಾಗದಿದ್ದಾಗ ಕೆರಳಿ ರೊಚ್ಚಿಗೆದ್ದ ರಾಜಗೋಪಾಲ್ ಆಕೆಯ ಗಂಡನನ್ನು ತನ್ನ ಭಂಟರ ಮೂಲಕ ಸಾಯಿಸಿ ಜೀವಜ್ಯೋತಿಯನ್ನು ಪಡೆಯಲು ಹೋಗುತ್ತಾನೆ. ಕೊನೆಗೂ ಜೀವಜ್ಯೋತಿ ಸಿಗದೆ ತನ್ನ ಪಾಪ ಕೃತ್ಯಕ್ಕೆ ಜೀವಾವಧಿ ಶಿಕ್ಷೆಗೆ ಗುರಿಯಾಗುತ್ತಾನೆ.
62 ಪುಟಗಳ ಒಂದು ನೈಜ ಕೊಲೆ ಕೇಸಿನ ಈ ಪುಟ್ಟ ಕಾದಂಬರಿಯಲ್ಲಿ ದುಡ್ಡು, ಯಶಸ್ಸು, ಕಾಮ, ಕ್ರೌರ್ಯ ಎಲ್ಲವೂ ಇದೆ. ಜೊತೆಗೆ ಸಂಬಂಧಿಸಿದ ವ್ಯಕ್ತಿಗಳ ಫೋಟೋಗಳು ಇವೆ. ಪುಸ್ತಕ ಓದಲು ಪ್ರಾರಂಭಿಸಿದರೆ ಸುಮಾರು ಒಂದೂವರೆ ಗಂಟೆಯಲ್ಲಿ ಪೂರ್ತಿ ಓದಿ ಮುಗಿಸುವವರೆಗೂ ಪುಸ್ತಕ ಕೆಳಗಿಡಲಾರಿರಿ. ತಪ್ಪದೆ ಓದಿ. ಓದುವ ಸುಖ ನಿಮ್ಮದಾಗಲಿ.
- ನಟರಾಜು ಮೈದನಹಳ್ಳಿ