‘ಭಾವಸರಿತೆ’ ಕಥಾಸಂಕಲನ ಕುರಿತು ನನ್ನ ಮಾತು

ಕವಿ, ಕತೆಗಾರರಾದ ಪದ್ಮನಾಭ.ಡಿ ಅವರ ಚೊಚ್ಚಲ ಕೃತಿ ‘ಭಾವ ಸರಿತೆ’ ಕಥಾ ಸಂಕಲನದ ಕುರಿತು ನನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದೇನೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಭಾವಸರಿತೆ
ಲೇಖಕರು : ಪದ್ಮನಾಭ.ಡಿ
ಪ್ರಕಾಶಕರು : ಹೆಚ್ ಎಸ್ ಆರ್ ಎ ಪ್ರಕಾಶನ
ಪ್ರಕಾರ : ಕಥಾ ಸಂಕಲನ
ಬೆಲೆ : ೧೨೦.೦೦
ಪುಟ : ೧೦೦
ಖರೀದಿಗಾಗಿ – 7892793054

ಎತ್ತಣ ಮಾಮರ, ಎತ್ತಣ ಕೋಗಿಲೆಯಂತೆ ಪದ್ಮನಾಭ. ಡಿ ಅವರು ವೃತ್ತಿಯಲ್ಲಿ ಅಂಚೆ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತರಾದವರು. ಅವರಿಗೆ ಸಾಹಿತ್ಯದ ಕಂಪು ಹೇಗೆ ತಗಲಿತೋ ಗೊತ್ತಿಲ್ಲ. ಆದರೆ ಅವರ ಕವನಗಳನ್ನು ಸಾಮಾಜಿಕ ಜಾಲತಾಣದಲ್ಲಿ ನಿರಂತರವಾಗಿ ನಾನು ಓದುತ್ತಿದ್ದೆ, ಮತ್ತು ಅದನ್ನು ನನ್ನ ಆಕೃತಿಕನ್ನಡ ಪತ್ರಿಕೆಯಲ್ಲಿ ಪ್ರಕಟಿಸುತ್ತಿದ್ದೆ. ಪದ್ಮನಾಭ ಅವರಲ್ಲಿ ಕವಿ ಮಾತ್ರ ನೆಲೆಸಿದ್ದಾನೆ ಎಂದು ಭಾವಿಸಿದ್ದೆ , ಆದರೆ ‘ಭಾವಸರಿತೆ’ ಕಥಾ ಸಂಕಲನ ಓದಿದ ಮೇಲೆ ಕವಿಯ ಜೊತೆಗೆ ಒಳ್ಳೆ ಕತೆಗಾರನ ಪರಿಚಯವಾಯಿತು.

‘ಭಾವಸರಿತೆ’ ಕಥಾಸಂಕಲನದಲ್ಲಿ ಒಟ್ಟು ೧೧ ಕತೆಗಳಿವೆ. ಒಂದೊಂದು ಕತೆಗಳು  ಸಮಾಜಕ್ಕೆ ಹಿಡಿದ ಕೈಗನ್ನಡಿಯಾಗಿದೆ.  ಓದುವಾಗ ಮುಖದಲ್ಲಿ ಮಂದಹಾಸದ ಮೂಲಕ ಶುರುವಾಗಿ, ಚಿಂತನೆಯತ್ತ ಸಾಗುತ್ತದೆ.

ಈ ಕಥಾ ಸಂಕಲನದಲ್ಲಿ ಬರುವ ಮೊದಲ ಕತೆ ‘ಕರ್ಫ್ಯೂನಲ್ಲಿ ಮದುವೆ’ –  ಕಾವೇರಿ ಚಳವಳಿ ಸಂದರ್ಭದಲ್ಲಿ ಗಲಾಟೆಯಾದಾಗ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು, ಆಗ ಮದುವೆ ಹೇಗಾಯಿತು?, ಅನ್ನೋದನ್ನ ಲೇಖಕರು ಕತೆಯರೂಪ ಕೊಟ್ಟು ಓದುಗರ ಮುಂದೆ ಇಟ್ಟಿದ್ದಾರೆ. ಮದುಮಗ ಕೇಂದ್ರ ಸರ್ಕಾರೀ ನೌಕರನಾಗಿದ್ದ, ಆದರೆ ಕರ್ಫ್ಯೂನಿಂದಾಗಿ ಕ್ಷೌರಿಕನಿಲ್ಲದೆ ಗಡ್ಡ ಬೆಳೆದಿತ್ತು , ಅದೇ ಸ್ಥಿತಿಯಲ್ಲಿ ಛತ್ರಕ್ಕೆ ಹೋದಾಗ ಛತ್ರದ ವಾಚ್ ಮನ್ ಭಿಕ್ಷುಕ ಎಂದು ಜೋರ್ ಮಾಡಿದ್ದು, ಒಂದೇ ಹಾರದಲ್ಲಿ ಮದುವೆಯ ಎಲ್ಲ ಕಾರ್ಯ ಮುಗಿಸಿದ್ದು, ಸೋದರ ಮಾವ ಹೂವು, ಹಣ್ಣು ತಗೆದುಕೊಂಡು ಬರ್ತೀನಿ ಅಂತ ಹೋದವನು ಕೆ ಆರ್ ಪೊಲೀಸ ಠಾಣೆಯ ಅತಿಥಿಯಾಗಿದ್ದು ಓದುಗರಿಗೆ ನಗು ಹುಟ್ಟಿಸದೆ ಇರದು.

ಮುದ್ದಿನ ಮಗಳು – ಈ ಕತೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕ ಗೆಳೆಯನಿಂದ ಒಂದು ಹೆಣ್ಣು ತನ್ನ ಭವಿಷ್ಯವನ್ನು ಹೇಗೆ ಹಾಳು ಮಾಡಿಕೊಳ್ಳುತ್ತಾಳೆ, ಮುದ್ದಿನ ಮಗಳ ಬದುಕಿಗೆ ಮರಗುವ ಅಪ್ಪ- ಅಮ್ಮನ ಪರಿಸ್ಥಿತಿ, ಮುಂದೆ ಧೃತಿಗೆಡದೆ ಎದ್ದು ನಿಲ್ಲುವ ಆ ಹೆಣ್ಣಿನ ಕುರಿತು ಲೇಖಕರು ಮನದಟ್ಟಾಗುವಂತೆ ವರ್ಣಿಸಿದ್ದಾರೆ. ಇಂದಿನ ವಾಸ್ತವ ಪರಿಸ್ಥಿತಿಯಲ್ಲಿ ಇಂತಹ ಕಣ್ಣು ತೆರೆಸುವ ಕತೆಗಳು ಅವಶ್ಯಕವಾಗಿವೆ.

ಸೈನಿಕನ ಮನದನ್ನೆ – ಪುಸ್ತಕದಲ್ಲಿ ಬರುವ ನಾಲ್ಕನೇ ಕತೆ ಇದು. ಬಿ ಕಾಂ ಓದಿದ ರಾಜು, ಸೇನೆಗೆ ಸೇರಿಕೊಳ್ಳುತ್ತಾನೆ. ಸೇನೆಗೆ ಸೇರುವಾಗ ಹೆತ್ತವರು ಮತ್ತು ಪ್ರೇಯಸಿ ಮನದಲ್ಲಿ ಮೂಡುವ ಆತಂಕ. ಮುಂದೆ ಮದುವೆಯಾಗಿ ಒಂದು ವರ್ಷದಲ್ಲಿ ಹುತಾತ್ಮನಾದಾಗ, ವಿಧುವೆ ಸೊಸೆಗೆ ಮತ್ತೊಂದು ಮದುವೆ ಯೋಚನೆ ಮಾಡುವ ಅತ್ತೆ ಮಾವನ ದೊಡ್ಡಗುಣ. ಈ ಕತೆಯ ಮೂಲಕ ಸಮಾಜದಲ್ಲಿನ ಕೆಟ್ಟ ಪಿಡುಗನ್ನು ತೊಲಗಿಸುವ ಸಣ್ಣ ಪ್ರಯತ್ನವನ್ನು ಕತೆಗಾರರು ಮಾಡಿದ್ದಾರೆ.

ಅಮ್ಮ – ತಾಯಿಗೆ ಮಕ್ಕಳಲ್ಲಿ ಬೇಧಭಾವ ಇರೋಲ್ಲ ಅಂತ ಧೃಡವಾಗಿ ಹೇಳಲಾಗುತ್ತದೆ, ಈ ಕತೆಯಲ್ಲಿ ತಾಯಿಯಲ್ಲಿ ಬೇಧ – ಭಾವ ಇರುತ್ತೆ ಅನ್ನುವುದಕ್ಕಿಂತ ಪ್ರೀತಿಯಲ್ಲಿ ಒಂದು ಮಗುವಿಗೆ ತುಸು ಜಾಸ್ತಿಯೇ ಹೋಗಿರುತ್ತದೆ ಎಂದರೆ ತಪ್ಪಾಗಲಾರದು. ಒಂದು ಕಡೆ ತಾಯಿಯ ಪ್ರೀತಿ, ಇನ್ನೊಂದು ಕಡೆ ತಾಯಿಯ ಪ್ರೀತಿ, ವಿಶ್ವಾಸವನ್ನು ಮಕ್ಕಳು ಹೇಗೆ ದುರ್ಬಳಿಕೆ ಮಾಡಿಕೊಳ್ಳುತ್ತಾರೆ ಎನ್ನುವುದನ್ನು ಸೂಕ್ಷ್ಮವಾಗಿ ಓದುಗರಿಗೆ ಮನದಟ್ಟು ಮಾಡಿದ್ದಾರೆ.

ಹೀಗೆ ಕತೆಗಳು ಒಂದೊಂದೇ ಸಂದೇಶವನ್ನು ಸಾರುತ್ತ  ಹೋಗುತ್ತದೆ. ಪದ್ಮನಾಭ ಅವರು ಕತೆಗಳನ್ನು ಕಲ್ಪನಾ ಲೋಕದಲ್ಲಿ ಬರೆಯದೆ, ವಾಸ್ತವದಲ್ಲಿ ತಮ್ಮ ಸುತ್ತಮುತ್ತ ನಡೆಯುವ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಕತೆಯನ್ನು ಸುಂದರವಾಗಿ ಹೆಣೆದಿದ್ದಾರೆ.

ಕತೆಗಳಲ್ಲಿ ಹಾಸ್ಯವಿದೆ, ನೋವಿದೆ, ಭಾವನೆಯಿದೆ, ಅಳು ಇದೆ, ನಗುವಿದೆ, ದೇಶ ಪ್ರೇಮವಿದೆ, ಮಾತೃ ಪ್ರೇಮವಿದೆ, ವಾತ್ಸಲ್ಯವಿದೆ ಹೀಗೆ ಎಲ್ಲವೂ ಸೇರಿ ‘ಭಾವ ಸರಿತೆ’ ಯಾಗಿದೆ. ಕತೆಗಾರನ ಮೊದಲ ಕಥಾ ಸಂಕಲವಾದರೂ ನಿರೂಪಣಾ ಶೈಲಿ ಚನ್ನಾಗಿದೆ, ಅವರು ಸಮಾಜಕ್ಕೆ ಕೊಡುವ ಸಂದೇಶವನ್ನು ಯಾವುದೇ ಗೊಂದಲವಿಲ್ಲದೆ ಓದುಗರಿಗೆ ನೇರವಾಗಿ ತಟ್ಟುವಂತೆ ಸ್ಪಷ್ಟವಾಗಿ ಕತೆಯಲ್ಲಿ ಕೊಟ್ಟಿದ್ದಾರೆ. ಇದನ್ನು ಕತೆಯಾಗಿ ಓದುವುದಕ್ಕಿಂತ ಪ್ರತಿಯೊಬ್ಬನ ಬದುಕಿನ ಚಿತ್ರಣ ಎಂದರೆ ತಪ್ಪಾಗಲಾರದು.

ನಾನು ಪುಸ್ತಕ ಓದುವುದು ತಡವಾದರೂ, ಇದರಲ್ಲಿನ ಕತೆಗಳು ಮನಸ್ಸಿಗೆ ಮುಟ್ಟುವಲ್ಲಿ ತಡವಾಗಿಲ್ಲ ಎಂದು ಹೇಳುತ್ತಾ… ಪದ್ಮನಾಭ ಸರ್ ಅವರಿಗೆ ಇನ್ನಷ್ಟು ಇಂತಹ ಸಮಾಜಮುಖಿ ಕತೆಗಳು ಅವರಿಂದ ಬರಲಿ ಎಂದು ಶುಭ ಕೋರುತ್ತೇನೆ.


  • ಶಾಲಿನಿ ಹೂಲಿ ಪ್ರದೀಪ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW