‘ಹಸ್ತಿನಾವತಿ’ ಪುಸ್ತಕ ಪರಿಚಯ

ಖ್ಯಾತ ಪತ್ರಕರ್ತ, ಕಾದಂಬರಿಕಾರ ಜೋಗಿ ಅವರ ‘ಹಸ್ತಿನಾವತಿ’ ಕಾದಂಬರಿ ಕುರಿತು ಮೋಹನ್ ಕುಮಾರ್ ಡಿ ಎನ್ ಅವರು ಬರೆದಿರುವ ಪುಸ್ತಕ ಪರಿಚಯವನ್ನು ತಪ್ಪದೆ ಓದಿ…

ಪುಸ್ತಕ : ‘ಹಸ್ತಿನಾವತಿ’
ಲೇಖಕ : ಜೋಗಿ
ಪ್ರಕಾಶನ : ಅಂಕಿತ ಪುಸ್ತಕ
ಪುಟಗಳು: 403
ಬೆಲೆ: 440/-

ಇಷ್ಟೊಂದು ತೀವ್ರವಾಗಿ ಸಾಗುವ ಕಾದಂಬರಿಯನ್ನು ಓದಿ ಬಹಳ ವರ್ಷಗಳಾಯ್ತು. ಆ ತೀವ್ರತೆಯಾದರೂ ಯಾವುದಿರಬದುದೆಂದು ಯೋಚಿಸಿದರೆ ನನ್ನಲ್ಲಿ ಉತ್ತರವಿಲ್ಲ. ಮನುಷ್ಯ ಕ್ರಿಯಾಶೀಲ ಮತ್ತು ಸಂಘಜೀವಿಯಾದರೂ ತನಗೆ ಬೇಕಾದ ಹಾಗೆ ವಲಯವೊಂದನ್ನು ನಿರ್ಮಿಸಿಕೊಳ್ಳಲು ಇಚ್ಛಿಸುತ್ತಾನೆ.

ಖಾಸಗಿಯಾಗಿರಲು ಬಯಸುತ್ತಾನೆ. ಹಾಗೆ ಅವನನ್ನು ಸ್ವಯಂಬಂಧಿ ಮಾಡಿಕೊಳ್ಳುವಂತೆ ಪ್ರೇರೇಪಿಸಿದ ಸಂಗತಿಯಾದರೂ ಯಾವುದೆನ್ನುವ ಪ್ರಶ್ನೆಗೆ ಹೇಗೆ ಉತ್ತರವಿಲ್ಲವೋ ಹಾಗೆ ಈ ಕಾದಂಬರಿ ನನ್ನನ್ನು ಓದಿಸಿಕೊಂಡು ಹೋದ ತೀವ್ರತೆಯ ಮೂಲವಾದರೂ ಯಾವುದೆನ್ನುವ ಜಿಜ್ಞಾಸೆಗೆ ಕಾರಣಗಳೂ ಇಲ್ಲ. ಅದು ಸೂಜಿಗಲ್ಲಿನಂತೆ ಸೆಳೆಯಿತು; ನಾನು ಒಳಗೊಂಡೆನಷ್ಟೇ.

ಜಿಜ್ಞಾಸೆ ಅಂದೆ. ಅದಕ್ಕೆ ಕಾರಣಗಳೂ ಇಲ್ಲದಿಲ್ಲ. ಉತ್ತರವೀಯಲಾಗದ, ತಾತ್ವಿಕ ನಿಲುಗಡೆಯನ್ನು ಕಾಣಲಾಗದ ಅನೇಕ ಸಂಗತಿಗಳು ಕಾದಂಬರಿಯ ಅನೇಕ ಪುಟಗಳಲ್ಲಿ, ನಡುವೆ ಬರುವ ಪಾತ್ರಗಳ ವರ್ತನೆಯಲ್ಲಿ, ಸಂಘರ್ಷಕ್ಕೆ ಒಳಗಾದ ಅನೇಕ ಸಂದಿಗ್ದ ಸಂದರ್ಭಗಳಲ್ಲಿ ನನ್ನನ್ನು ಒಂದೆರೆಡು ಬಾರಿಯಲ್ಲ; ಅನೇಕ ಬಾರಿ ಕಾಡಿದೆ. ಹೀಗಾಗಿ ಅರ್ಥವಾಗದ ಅನೇಕ ಸಂಗತಿಗಳ ಮೂಲಕ್ಕೆ ಕೈಹಾಕಿ ಕಾಲಹರಣ ಮಾಡುವ ಬದಲು ಅದು ಹೊರಳಿಸಿದ ದಿಕ್ಕಿನತ್ತ ಹೊರಳಿದೆ. ಹೀಗಾಗಿ ಕಾದಂಬರಿ ಸುಲಭಗ್ರಾಹ್ಯವಾಯ್ತು.

ಮಹಾಭಾರತ ನಮ್ಮ ನಿಮ್ಮೆಲ್ಲರ ಕಥೆ. ಅದು ರಾಮಾಯಣದ ಹಾಗಲ್ಲ. ರಾಮನ ರೀತಿ ಸೆಲ್ಫ್ ಸೆಂಟ್ರಿಕ್ ಆದದ್ದೂ ಅಲ್ಲ. ಸೀತೆಯ ತ್ಯಾಗ, ಪ್ರೇಮ, ಕಾಯುವಿಕೆ, ಲಂಕಾ ದಹನ, ಅಗ್ನಿಪ್ರವೇಶ ಇಷ್ಟೆಲ್ಲ ಡೈವರ್ಸಿಟಿ ಇದೆಯಾದರೂ, ಯಾಕೋ ಗೊತ್ತಿಲ್ಲ, ಭಾರತದಂತೆ ರಾಮನ ಕಥೆ ನನ್ನನ್ನು ಅಟ್ರ್ಯಾಕ್ಟ್ ಮಾಡಿಲ್ಲ. ಭಾರತ ಎಲ್ಲರನ್ನೂ ಒಳಗೊಳ್ಳುವ, ಒಂದಾಗಿ ಹಿಡಿದಿಟ್ಟುಕೊಳ್ಳಬಲ್ಲ ಪುರಾತನ ಆಲದ ಮರದ ಬೇರಿನಂತೆ; ಟೊಂಗೆಗಳಲ್ಲಿ ನಳನಳಿಸುವ ಗೊಂಚಲು ರಾಮಾಯಣ. ವೈವಿಧ್ಯತೆಯೇ ಅದರ ವೈಶಿಷ್ಟ್ಯತೆ. ಸಮಗ್ರತೆಯೇ ಅದರ ಸಾರ. ಅದು ಯಾರ ಕಥೆಯೂ ಅಲ್ಲ; ಎಲ್ಲರದೂ ಹೌದು. ಅದಕ್ಕೆ ಆದಿ ಅಂತ್ಯಗಳಿಲ್ಲ. ಬಲಿದಾನ. ತ್ಯಾಗ. ನೋವು. ನಲಿವು. ಆಕ್ರೋಶ. ಸಂತಾಪ. ಅಸಹನೆ. ವೇದನೆ. ಮೋಸ. ಕಪಟ. ಕುಟಿಲತೆ. ವಂಚನೆ. ಮಣ್ಣಿನ ದಾಹ. ಹೆಣ್ಣಿನ ದಾಹ. ಸುಖದ ದಾಹ. ಇವೆಲ್ಲವುಗಳ ಸಂಮ್ಮಿಶ್ರಣ ಭಾರತ. ಹಸ್ತಿನಾವತಿ ಮತ್ತು ಇಂದ್ರಪ್ರಸ್ಥ ಅದರ ಶಿಖರ ಸೂರ್ಯ.

ಇದು ಹಿಂದಿನ ಭಾರತದ ಕಥೆಯಲ್ಲ. ಇಂದಿನ ಭಾರತದ ಕಥೆ.

ಇಲ್ಲಿ ಯಾರಿಲ್ಲ? ಅಲ್ಲಿದ್ದ ಎಲ್ಲರೂ ಇಲ್ಲಿದ್ದಾರೆ. ದೇಶ ಕಾಲ ಮತ್ತು ಧರ್ಮಕ್ಕನುಗುಣವಾಗಿ ಬೇಧವಿರಬಹುದೇನೋ ಆದರೆ ಮನೋಧರ್ಮ ಒಂದೇ. ಎಲ್ಲರ ಗುರಿ ನಿರಂತರ ಚಲನೆ. ಅಗಮ್ಯದತ್ತ ಪಯಣ. ತರ್ಕಾತೀತರಾದ ವ್ಯಾಸರು, ಎಣಿಕೆಗೆ ದಕ್ಕದ ಸಂಸರು, ಅಳತೆಗೆ ಒಗ್ಗದ ಸಹದೇವ, ಮರೆಯಲಾರದ ಮಧುರ ಸ್ಮೃತಿಯ ದೇವಯಾನಿ, ಜ್ಞಾನಪೀಠಿ ಸುದರ್ಶನ ದೇಸಾಯಿ, ನಿರೀಕ್ಷೆಯಲ್ಲೇ ಬದುಕು ಸಮೆಸುವ ಸಂಯುಕ್ತ ಪರಾಂಜಪೆ, ಕ್ಷೀಣ ಬದುಕಿಗೆ ಆಸರೆಯಾದ ಜಾಬಾಲಿ, ಮರೆತೂ ಮರೆಯಲಾಗದ ಸನತ್, ಮೌನಕೋಟೆಯ ಯಕ್ಷಿಣಿ ಸೋನು, ಪ್ರೀತಿ ದೇವತೆ ಚಾರುಲತಾ, ಮಮತಾಮಯಿ ಯಶೋಧೆ, ಚದುರಿ ಹೋದ ಕನಸಾಗಿಯೇ ಉಳಿದ ಪ್ರದ್ಯುಮ್ನ, ಎಲ್ಲರನ್ನೂ ಪೊರೆಯುವ ತಾಣ ಜಿಪ್ಸಿ ಕೆಫೆ, ದೆಹಲಿ ಮತ್ತು ಕಲಕತ್ತಾದ ಅನೇಕ ರಸ್ತೆಗಳು..ಎಲ್ಲರೂ ನೀಗಿಕೊಳ್ಳುವ ಬಯಕೆ ಹೊಂದಿರುವ, ಆದರೆ ಅಷ್ಟು ಸುಲಭವಾಗಿ ತಾವೇ ನಿರ್ಮಿಸಿಕೊಂಡ ವರ್ತುಲದಿಂದ ಹೊರಬರಲಾಗದ ನಾಗರೀಕ ಭಾರತದಲ್ಲಿ ಬಂಧಿಯಾಗಿರುವವರೇ. ನೀಗಿಕೊಳ್ಳುವ ಬಯಕೆ ಕೂಡ ಬಂಧನವೇ.


‘ಹಸ್ತಿನಾವತಿ’ ಲೇಖಕರು ಜೋಗಿ

ಇಡೀ ಕಾದಂಬರಿಯ ಪೂರ್ವಾರ್ಧದ ಒಳತೋಟಿ ಒಂದು ತೂಕ, ಗಂವ್ವೆನ್ನುವ ಕಾಡಿನ ನೀರವತೆಯಲ್ಲಿ ನಡೆಯುವ ಉತ್ತರಾರ್ಧವೇ ಇನ್ನೊಂದು ತೂಕ. ಸುತ್ತಲೂ ದಟ್ಟವಾಗಿ ಆವರಿಸಿಕೊಂಡ ಮೌನ, ಏಕಾಂತ, ನಮ್ಮನ್ನೇ ಮರೆಯಬಲ್ಲಷ್ಟು ತನ್ಮಯತೆ, ಒಣಗಿದೆಲೆಗಳ ಚುರುಚುರು ಸದ್ದು, ಹಕ್ಕಿಯುಲಿತ..ನನಗೆ ಗೊತ್ತು, ಸಕಲ ನಾಗರೀಕ ಸವಲತ್ತುಗಳನ್ನು ಅನುಭವಿಸುತ್ತ ಕಂಡರಿಯದ ಕಾನನದ ಬಗ್ಗೆ ಹೇಳುವುದು ಅತಿಶಯವಾದೀತು ಅಂತ. ಆದರೆ ಹಸ್ತಿನಾವತಿಯಲ್ಲಿ ಪ್ರಯಾಣಿಸುವಷ್ಟು ಹೊತ್ತು ದಾಂಡೇಲಿ ನೀಡುವ ಅನುಭೂತಿ ಮರೆಯಲಾಗದು. ಅನನ್ಯವಾದುದು.

ಹಸ್ತಿನಾವತಿ ಎಂದರೆ ನಟ್ಟ ನಡು ಮಧ್ಯಾಹ್ನದ ಮಳೆಯಲ್ಲಿ ಮೂಡುವ ಇಂದ್ರಚಾಪದಂತೆ. ಕಾಣುವ ತನಕ ನೋಡಿ ಆಸ್ವಾದಿಸಬಹುದು. ತಲುಪಲಾರೆವು. ದಕ್ಕಿದವರಿಗೆ ದಕ್ಕಿದಷ್ಟೇ. ಒಳ್ಳೆಯದು ಮತ್ತು ಕೆಟ್ಟದರ ಸಂಕೇತವಾಗಿ ಎಲ್ಲೋ ನೋಡಬೇಕಿಲ್ಲ. ಪಾಂಡವರು ಮತ್ತು ಕೌರವರು ನಮ್ಮೊಳಗೇ ಇದ್ದಾರೆ. ಹೆಣ್ಣು ಹೊನ್ನು ಮಣ್ಣು ಆ ಕುರುಕ್ಷೇತ್ರವನ್ನು ನಿರ್ಧರಿಸಿದ ಸಂಗತಿಗಳಾಗಿದ್ದವು. ಮಹತ್ವಾಕಾಂಕ್ಷೆ, ನಿರಂಕುಶತೆ, ಸರ್ವಾಧಿಕಾರ, ಯುದ್ಧೋನ್ಮಾದ, ಒಬ್ಬನು ಇನ್ನೊಬ್ಬನನ್ನು ಬಲಿ ಹಾಕಿಯೇ ಜೀವಿಸಬೇಕಾದ ಕ್ರೌರ್ಯ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ನಮ್ಮನ್ನು ಮೀರಿ ನಾವೇ ಬದುಕಬೇಕಾದ ಅನಿವಾರ್ಯತೆ ಬಹುಶಃ ಈಗಿನ ಅಂತರ್ ಕುರುಕ್ಷೇತ್ರಕ್ಕೆ ಕಾರಣವಿರಬಹುದು.

ಒಮ್ಮೆ ಹಸ್ತಿನಾವತಿಯ ಒಳಹೊಕ್ಕು ಬನ್ನಿ. ನಮ್ಮ ಬಹಿರಂಗ ಕಳಚಿ ಅಂತರಂಗ ದರ್ಶನವನ್ನು ಆಗಾಗ್ಗೆ ಮಾಡುತ್ತಿರಬೇಕು. ಈ ಕಾದಂಬರಿ ಅದಕ್ಕೆ ವಾಹಕ.
ನಮಸ್ಕಾರ.


  • ಮೋಹನ್ ಕುಮಾರ್ ಡಿ ಎನ್

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW