ಕನ್ನಡದಲ್ಲಿ ಮತ್ತೊಂದು ‘ವೈಜಯಂತಿಪುರ’ ಬರಲಿಕ್ಕಿಲ್ಲ.

ಸಂತೋಷ್ ಕುಮಾರ್ ಮೆಹೆಂದಳೆ ಅವರ ‘ವೈಜಯಂತಿಪುರ’ ಕಾದಂಬರಿ ಕುರಿತು ಶಿಕ್ಷಕಿ ಹಾಗೂ ಲೇಖಕಿ ಅನುಸೂಯ ಯತೀಶ್ ಅವರು ಬರೆದಿರುವ ಕಾದಂಬರಿ ಪರಿಚಯವನ್ನು ತಪ್ಪದೆ ಮುಂದೆ ಓದಿ….

ಪುಸ್ತಕ : ವೈಜಯಂತಿಪುರ
ಲೇಖಕರು : ಸಂತೋಷ್ ಕುಮಾರ್ ಮೆಹೆಂದಳೆ
ಪ್ರಕಾಶಕರು : ಸಾಹಿತ್ಯಲೋಕ, ಬೆಂಗಳೂರು
ಬೆಲೆ : ೩೭೫.೦೦

ಓದಲು ಹಿಡಿದ ಕಾದಂಬರಿ, ನಮಗರಿವಿಲ್ಲದೆ ನಾಲ್ಕನೆಯ ಶತಮಾನಕ್ಕೆ ಕರೆದೊಯ್ದು ಹಿಂದಿರುಗಲಾಗದ ನಶೆಗೆ ಒಯ್ಯುವ ಕಥಾನಕ, ಮೆಹೆಂದಳೆಯವರು ಹರಿತ ಒಲವಿನ ಬರಹಗಾರ ಎಂದು ಮತ್ತೊಮ್ಮೆ ಸಾಬೀತು ಮಾಡಿದ ಕಾದಂಬರಿ. ಕನ್ನಡದ ಮಟ್ಟಿಗೆ ಮೊದಲ ಹಾಗು ಬಹುಶ: ಮಯೂರವರ್ಮನ ಬಗ್ಗೆ ಇದೇ ಅಂತಿಮ ಕಾದಂಬರಿಯೂ ಆಗಬಹುದು. ಅಷ್ಟು ನಿಖರ ಮತ್ತು ಸರ್ವ ಮಾನ್ಯ ದಾಖಲೆ ಸಮೇತ ಪ್ರತಿ ಪುಟಕ್ಕೂ ಅಡಿ ಟಿಪ್ಪಣಿ ಕೊಡುತ್ತಾ ಸಾಗುತ್ತಾರೆ. ಎಲ್ಲೂ ಇದು ಕಾದಂಬರಿ ಎನ್ನಿಸದೇ ನಾಲ್ಕನೆಯ ಶತಮಾನದಲ್ಲಿ ನಾವು ಹಳೆಯ ಕಾಲದಲ್ಲಿ ಪಯಣಿಸುವಷ್ಟು ನಮ್ಮನ್ನು ಕಾಲಾತೀತರಾಗಿಸುವ ಕಾದಂಬರಿಯ ನಿರೂಪಣೆಗೆ ಬಹುಶ: ಮೆಹೆಂದಳೆ ಮಾತ್ರ ಸಾಟಿ.

ಐತಿಹಾಸಕ ಕಾದಂಬರಿಗಳು ಕಾಲ ಮಾನ ಮೀರಿದ ಕಥಾನಕದಲ್ಲಿ, ನಮ್ಮನ್ನು ಅಂಥಾ ಐತಿಹಾಸಕ ಕಾಲಘಟ್ಟಕೆ ಕರೆದೊಯ್ಯುವರಾರು ಎನ್ನುವಂಥ ಘಟ್ಟದಲ್ಲಿ ಸಾಹಿತ್ಯ ಲೋಕ ನಿಂತಿದ್ದಾಗ ನಿಖರ ಮತ್ತು ಖಚಿತ ಉತ್ತರವಾಗಿ ಮೆಹೆಂದಳೆಯವರ ವೈಜಯಂತಿಪುರ ನಮ್ಮೆದುರಿಗಿದೆ. ಓದುಗರನ್ನು ಬಿಡದೆ ಕಾಡುವ, ನಮ್ಮ ಸುತ್ತಮುತ್ತಲೂ ರುಂಡ ಚೆಂಡಾಡುವ ಖಡ್ಗಗಳೂ ಭಲ್ಲೆಗಳು ಎಗರುತ್ತಿವೆ ಎನ್ನಿಸುವ, ಅಪರಿಮಿತ ಯುದ್ಧ ತಂತ್ರಜ್ಞಾನದ ಪರೋಕ್ಷ ದಾಳಿಯಲ್ಲಿ ನಾವೂ ಭಾಗಿದಾರರಾಗುತ್ತ ಹೋಗುವ ಪರಿ ಹುಬ್ಬೇರಿಸುವಂತಿವೆ. ರೋಚಕ ಸನ್ನಿವೇಶ ಇರಲಿ ಧಾರ್ಮಿಕ ಸನ್ನಿವೇಶಗಳಿರಲಿ ಅದಕ್ಕೆ ತಕ್ಕಂತೆ ನಾವೂ ಕಾದಂಬರಿಯ ಜತೆಗೆ ಪಯಣಿಸುವುದು ಲೇಖಕರ ಕತೆ ಹೇಳುವ ಶೈಲಿಯ ಆಕರ್ಷಕ ಹಿಡಿತಕ್ಕೆ ಉದಾಹರಣೆ.

ಇತಿಹಾಸದ ಸ್ನಾತಕೋತ್ತರ ಪದವೀಧರೆಯಾಗಿದ್ದರಿಂದ ಮೊದಲಿನಿಂದಲೂ ರಾಜಮನೆತನಗಳು, ರಾಜ ಮಹಾರಾಜರುಗಳು, ಅವರ ಹೋರಾಟಗಳು, ಸಾಧನೆಗಳು, ಚಕ್ರಾಧಿಪತ್ಯ ಸ್ಥಾಪನೆಯಂತಹ ಹತ್ತು ಹಲವು ರೋಚಕ ಸಂಗತಿಗಳನ್ನು ತಿಳಿಯುವುದು ತುಂಬಾ ವಿಸ್ಮಯದ ಸಂಗತಿ ಯಾಗಿತ್ತು ನನಗೆ. ಇವೆಲ್ಲ ಕನ್ನಡದ ರಾಜಮನೆತನದ ಬಗ್ಗೆ ಕನ್ನಡದ ವೀರೋಚಿತ ದೊರೆಯ ಬಗ್ಗೆ ತಿಳಿಯಲು ಅವಕಾಶ ಮಾತ್ರ ಏನೊಂದೂ ದಾಖಲೆ ಇಲ್ಲದಿದ್ದಾಗ ಅದನ್ನೆಲ್ಲ ಪೂರೈಸಿದ್ದು ವೈಜಯಂತಿಪುರ.

ಮಯೂರವರ್ಮನ ಸಾಹಸ ಗಾಥೆಯನ್ನು, ಬನವಾಸಿಯ ಕಥಾನಕದ ರೋಚಕ ಅಧ್ಯಾಯವನ್ನು ಕನ್ನಡಿಗರಿಗೆ ದಕ್ಕಿಸಿಕೊಟ್ಟ ಹೆಮ್ಮೆ ಸಂತೋಷ್ ಕುಮಾರ್ ಮೆಹಂದಳೆ ಅವರಿಗೆ ಸಲ್ಲುತ್ತದೆ. ಈ ಕದಂಬ ರಾಜ ಮನೆತನದ ಬಗ್ಗೆ ಮಯೂರವರ್ಮನ ಬಗ್ಗೆ ಸಾಕಷ್ಟು ಕೃತಿಗಳು ಬಂದಿಲ್ಲ. ಸಾಕಷ್ಟು ಮಾಹಿತಿಗಳು ಕೂಡ‌ ಇತಿಹಾಸದಲ್ಲಿ ಲಭ್ಯವಿಲ್ಲದಿದ್ದರೂ ಇಷ್ಟು ಬೃಹತ್ ಗ್ರಂಥ ರಚಿಸಲು ಸಾಧ್ಯವಾಗಿದೆ ಎಂದರೆ ಅದು ಲೇಖಕರ ಶ್ರಮ ಮತ್ತು ಅಧ್ಯನಕ್ಕೆ ಸಂದ ಸಮ್ಮಾನವಲ್ಲದೇ ಬೇರೇನಲ್ಲ.

ವ್ಯಾಪಕ ಅಧ್ಯಯನ, ಸಂಶೋಧನಾ ಗುಣ, ಹುಡುಕಾಟದಿಂದ ಜೀವತಾಳಿದ ಕೃತಿಯಾಗಿದೆ. ಈ ಕಾದಂಬರಿ ರಚನೆಗೆ ಮೆಹಂದಳೆಯವರು ವ್ಯಯಿಸಿದ ಸಮಯವೇ ಅಚ್ಚರಿ ಮೀಡುವಂತಿದೆ. ಬರೋಬ್ಬರಿ ಆರೂವರೆ ವರ್ಷಗಳು. ಇಷ್ಟು ದೀರ್ಘಾವಧಿಯ ಅಧ್ಯಯನದ ನಂತರ ಇಂತಹ ಒಂದು ಅದ್ಭುತ ಕಾದಂಬರಿ ಕನ್ನಡ ಸಾರಸ್ವತ ಲೋಕವನ್ನು ಪ್ರವೇಶಿಸಿದೆ. ಇದನ್ನ ಸಾಕ್ಷೀಕರಿಸುವಂತಹ ಪುರಾವೆಗಳು ಬಹುತೇಕ ಅಧ್ಯಾಯಗಳ ಅಡಿ ಟಿಪ್ಪಣಿಯಲ್ಲಿ ನಮೂದಿತವಾಗಿವೆ.
ಅದರಲ್ಲೂ ಪ್ರಸ್ತುತ ಕರ್ನಾಟಕದ ನಕಾಶೆಯಲ್ಲಿ ಇಲ್ಲದ, ಆಗಿನ ಕಾಲದ ಕರ್ಣಾಟವನ್ನು ಚಿತ್ರಿಸಿದ, ಆಗಿನ ನೆಟಿವಿಟಿಗೆ ತಕ್ಕಂತೆ ಅವರೇ ಹೇಳಿಕೊಂಡಂತೆ ಮೂರು ಮತ್ತೊಂದು ಪುಟ ವನ್ನು ಮುನ್ನೂರು ಪುಟಕ್ಕೆ ಹಿಗ್ಗಿಸಿದ ಹಿರಿಮೆಗೆ ದೊಡ್ಡ ನಮನ. ಕಾರಣ ಮಯೂರವಮನ ಬಗ್ಗೆ ಕ್ರಮೇಣ ಕನ್ನಡ ಸಾಹಿತ್ಯ ಸೇರಿದಂತೆ ಪ್ರತಿಯೊಬ್ಬರೂ ಮರೆಯಾಗುವ ಸಮಯದಲ್ಲಿ ಮೂಡಿ ಬಂದ ಕಲಾಕೃತಿ ಇವತ್ತು ಕದಂಬರ ಸಾಮ್ರಾಜ್ಯ ಸ್ಥಾಪಕನ ಬಗೆಗಿನ ಮೂಲ ಮಾಹಿತಿ ಮತ್ತು ಅವನ ಪರಾಕ್ರಮವನ್ನು ಮುಂದಿನ ಪೀಳಿಗೆಗೆ ದಾಟಿಸಲಿದೆ.

ಗತಿಸಿದ ಕಾಲಾವಧಿಯ ಚಿತ್ರಣವನ್ನು ತೆರೆದಿಡುವ ಕೃತಿ ವೈಜಯಂತಿಪುರದಲ್ಲಿ ಅಪರೂಪದ ಮಾಹಿತಿಯಾಗಿ ಆಯಾ ಕಾಲಾವಧಿಯ ಜನ ಜೀವನ, ಸಾಮಾಜಿಕ ಸ್ಥಿತಿಗತಿ, ಮೈ ನವಿರೇಳಿಸುವ ರಕ್ತ ಸಿಕ್ತ ಯುದ್ಧದ ರೋಚಕತೆಗಳು, ನಾಲ್ಕನೆಯ ಶತಮನಾದ ಕಾಲಗತಿಯ ವಿವಿಧ ಸ್ಥಳಗಳ ಪರಿಚಯ ಭಾಷೆಯ ವೈವಿಧ್ಯತೆ, ಬಯಲು ಸೀಮೆ, ಮಲೆನಾಡು ಮತ್ತು ಕರಾವಳಿಗಳಲ್ಲಿನ ವೈಪರಿತ್ಯದಲ್ಲಿನ ಬದುಕಿನ ಗತಿವಿಧಿಗಳು, ವಿಪರೀತ ಬಡತನ ಮತ್ತು ದೊಡ್ಡ ವಲಸೆಗಳ ಚಿತ್ರಣ, ಅತಂತ್ರ ಸಮಾಜದ ಸ್ಥಿತಿಗತಿ ಜೊತೆಗೆ ಪರಸ್ಪರ ಹೊಂಚುವ ದಳವಾಯಿಗಳ ಮಧ್ಯದ ಯುದ್ಧ ಪಿಪಾಸುತನ, ತಂತ್ರಗಾರಿಕೆ, ಸಾಲುಸಾಲು ಯುದ್ಧಗಳು ಮತ್ತು ಗೆದ್ದ ಮೇಲಿನ ಹಿಡಿತದ ರಾಜಕೀಯ, ಕಾಡಿನ ಒಳಭಾಗದಲ್ಲಿ ಬದುಕು ಕಟ್ಟಿಕೊಂಡಿದ್ದ ಕಡುಂಬಿಗಳನ್ನು ಎಬ್ಬಿಸಿ ತಂದು ದುರ್ಗದ ಶಿಲಾದುರ್ಗದ ಮಧ್ಯೆ ಕಾಯ್ದಿಟ್ಟು ಸೈನ್ಯ ಕಟ್ಟಿದ ವಿಭಿನ್ನ ಕಥಾನಕ, ಕ್ರಮೇಣ ಅವರ ಜ್ನಾಪಕಾರ್ಥ ಕದಂಬ ದೊರೆಯಾಗಿದ್ದಲ್ಲದೆ, ಅಶ್ವಮೇಧ ಯಾಗ, ವೇದಾಧ್ಯಯನ ಪಾರಾಂಗತನ ಪಾಂಡಿತ್ಯ, ನೇರಾ ನೇರ ಬಡಿದಾಟಕ್ಕೆ ಇಳಿಯುತ್ತಿದ್ದ ಮಯೂರವರ್ಮನ ಪರಾಕ್ರಮ, ಕೊನೆಯವರೆಗೊ ಸೋಲಿಲ್ಲದ ಸರದಾರನಾಗಿ ಎರಡೆರಡು ದಶಕಗಳ ಕಾಲ ಪೂರ್ವ ಕರಾವಳಿಯಿಂದ ಪಶ್ಚಿಮದ ದಂಡೆಯ ವರೆಗೆ ಹಿಡಿತ ಸಾಧಿಸಿದ್ದು, ಉತ್ತರದ ದೊರೆಗಳ ಸ್ನೇಹ, ಯಾವುದೇ ಪ್ರಬಲ ದೊರೆಗಳು ಮೇಲೇರಿ ಬರದಂತೆ ಮುತ್ಸದ್ದಿನದ ನಡತೆ, ಅಮಾತ್ಯರಾಗಿ ವಿಷ್ಣುಶರ್ಮರ ಸಲಹೆ ಮಾರ್ಗದರ್ಶನಗಳು, ಇತರರ ಸರಹದ್ದುಗಳನ್ನು ಹಿಡಿತಕ್ಕೆ ಪಡೆದದ್ದು ಹೀಗೆ ಪ್ರತಿ ಹಂತದಲ್ಲೂ ಕಾದಂಬರಿಯಲ್ಲಿ ಈಗಿನ ಬನವಾಸಿಯಾಗಿರುವ ವೈಜಯಂತಿಪುರವನ್ನು ನಿರಂತರವಾದ ಏರುಗತಿಯಲ್ಲೇ ಸಾಗಿಸಿದ ಪರಿಗೆ ಹ್ಯಾಟ್ಸ್ ಅಪ್. ತಾವು ಹೇಳಬೇಕಾದುದನ್ನೆಲ್ಲ ಪಾತ್ರಗಳ ಮೂಲಕ ಅಲ್ಲಲ್ಲಿ ಇಣುಕುವ ಲೇಖ್ಹಕರ ಜಾಣತನ ಓದುಗರಿಗೆ ಹೆಚ್ಚುವರಿ ಫೀಲು ಕೊಡುವ ಅಂಶ. ಕಾರಣ ಓದುಗ ಅಲ್ಲೆಲ್ಲ ತನ್ನನ್ನೇ ಕಂಡುಕೊಳ್ಳುವಂತೆ ಹೆಣೆದ ತಂತ್ರಗಾರಿಕೆ. ಹಾಗಾಗಿ ಓದುಗ ಆರಂಭಿಸಿದ ಕೆಲವೇ ಪುಟಕ್ಕೂ ಮೊದಲೇ ತನೂ ಆಕಾಲದ ಪಾತ್ರವಾಗಿ ಜತೆಗೆ ಹೊರಡುತ್ತಾನೆ.

ಇನ್ನು ಮೆಹಂದಳೆಯವರ ನಿರೂಪಣಾ ಶೈಲಿಯ ಬಗ್ಗೆ ಏನು ಹೇಳುವಂತೆಯೆ ಇಲ್ಲ. ಸಹಜವಾಗಿ ಒಂದೇ ಗುಕ್ಕಿಗೆ ಓದಿಸಿಕೊಂಡು ಹೋಗುವ ಚೇತೋಹಾರಿ ಗುಣವನ್ನು ಧರಿಸಿಕೊಂಡಿದೆ. ಅಂತೂ ನಿರಂತರ ಸತತ ಓದಿನ ನಂತರ ಮಯೂರವರ್ಮ ನನಗೆ ದಕ್ಕಿದ. ಬಹುಶ: ಸಧ್ಯದ ಕಾಲಾಮಾನದಲ್ಲಿ ಇನ್ಯಾರಾದರೂ ಲೇಖಕ ಇದಕ್ಕಿಂತ ಉತ್ತಮ ಎನ್ನಿಸುವ ಮತ್ತೊಂದು ವೈಜಯಂತಿಪುರ ನಮ್ಮ ಕಾಲಾವಧಿಯಲ್ಲಿ ಬರೆಯಲಿಕ್ಕಿಲ್ಲ ಎನ್ನುವಷ್ಟು ಬಿಗಿಯಾದ ಕಾದಂಬರಿಯನ್ನು, ಇಂಥಾ ಅಮೋಘ ಕೃತಿಯನ್ನು ಕನ್ನಡಕ್ಕೆ ನೀಡಿದ ಶ್ರೀ ಸಂತೋಷ್ ಕುಮಾರ್ ಮೆಹೆಂದಳೆ ಅವರಿಗೆ ಅಭಿನಂದನೆಗಳು ಹಾಗೂ ಶುಭಾಶಯಗಳು.


  • ಅನುಸೂಯ ಯತೀಶ್,  ನೆಲಮಂಗಲ

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW