“ಚಿತ್ತವೆಲ್ಲಾ ಯಶವಂತ ಚಿತ್ತಾಲ”- ಡಾ. ಎಚ್. ಎಸ್. ಸತ್ಯನಾರಾಯಣ

ನಮ್ಮ ಜಯಂತ ಕಾಯ್ಕಿಣಿಯವರು ಚಿತ್ತಾಲರನ್ನು ಮಾತಾಡಿಸುತ್ತ “ಎಪ್ಪತ್ತರ ಹುಟ್ಟುಹಬ್ಬವನ್ನು ಹೇಗೆ ಆಚರಿಸಿಕೊಳ್ಳುತ್ತೀರಿ?” ಎಂದಿದ್ದಕ್ಕೆ ಚಿತ್ತಾಲರು “ಹೊಸ ಕತೆ ಬರೆಯುವ ಮೂಲಕ” ಎಂದು ನಸುನಕ್ಕಿದ್ದರಂತೆ. ಚಿತ್ತಾಲರ ಕಾದಂಬರಿಗಳನ್ನು ಓದದಿದ್ದರೆ ಖಂಡಿತವಾಗಿಯೂ ಅದು ನಮ್ಮ ಪಾಲಿನ ದೊಡ್ಡ ನಷ್ಟ!”  ಖ್ಯಾತ ಕಾದಂಬರಿಕಾರ ಯಶವಂತ ಚಿತ್ತಾಲ ಅವರ ಕುರಿತು ಡಾ. ಎಚ್. ಎಸ್. ಸತ್ಯನಾರಾಯಣ ಅವರು ಬರೆದ ಒಂದು ಲೇಖನ ತಪ್ಪದೆ ಓದಿ…

ಮನುಷ್ಯನ ವರ್ತನೆಗಳನ್ನು ಮನೋವಿಜ್ಞಾನದ ನೆಲೆಗಳಲ್ಲಿ ಶೋಧಿಸುತ್ತಿದ್ದ ಅಪರೂಪದ ಕಥೆಗಾರ ನಮ್ಮ ಯಶವಂತ ಚಿತ್ತಾಲರನ್ನು ಕನ್ನಡ ಕಥನಾಭ್ಯಾಸಿಗಳೆಲ್ಲರೂ ನೆನೆಯಲೇ ಬೇಕು. ನಾವೆಲ್ಲ ಮೊದ ಮೊದಲು ಓದಿದ್ದು ಚಿತ್ತಾಲರ ಸಣ್ಣ ಕತೆಗಳನ್ನೇ. ದೂರದ ಮುಂಬಯಿ ನಗರದಲ್ಲಿ ಕುಳಿತು ಹನೇಹಳ್ಳಿಯ ಮೂಲಕ ತಮ್ಮ ತಾಯ್ನೆಲದ ಮೂಲ ಬೇರುಗಳೊಂದಿಗಿನ ಬಾಂಧವ್ಯವನ್ನು ಧ್ಯಾನಿಸುತ್ತಿದ್ದ ಚಿತ್ತಾಲರು ಮಾಸ್ತಿ ಕಥನ ಪರಂಪರೆಯನ್ನು ತುಂಬ ಸಮರ್ಥವಾಗಿ ಮುಂದುವರೆಸಿದ ಲೇಖಕ. ಮುದಿಹುಚ್ಚು, ಬೊಮ್ಮಿಯ ಹುಲ್ಲಹೊರೆ, ಆಟ, ಓಡಿಹೋದಾ ಮುಟ್ಟಿಬಂದಾ, ಅಪಘಾತ ಮುಂತಾದ ಕಥೆಗಳನ್ನು ಪಾಠ ಹೇಳುವ ಮೊದಲೇ ಓದಿದ್ದೆ.

ಕನ್ನಡ ಎಂ. ಎ. ತರಗತಿಗಳಲ್ಲಿ ಪ್ರತಿವಾರ ನಡೆಸುವ ವಿದ್ಯಾರ್ಥಿಗಳ ಪ್ರಬಂಧ ಮಂಡನೆಯ ನೆಪದಲ್ಲಿ ಹಲವು ಕೃತಿಗಳನ್ನು ಓದುವ, ಚರ್ಚಿಸುವ ಅವಕಾಶವರುತ್ತದೆ. ಮೊದಲ ವರ್ಷದಲ್ಲಿ ನಮಗೆ ಡಾ. ಕಾಳೇಗೌಡ ನಾಗವಾರ ಮೇಷ್ಟ್ರು ಮತ್ತು ಪೊ. ಜಿ.ಎಚ್. ನಾಯಕರು ನಮಗೆ ಮಾರ್ಗದರ್ಶನ ಮಾಡುತ್ತಿದ್ದರು. ಆಗ ನಮ್ಮ ಸಹಪಾಠಿ ಗೆಳತಿ ಡಾ. ಕೆ.ಪಿ. ಲಲಿತಾ ಚಿತ್ತಾಲರ ‘ಕಥೆಯಾದಳು ಹುಡುಗಿ’ ಸಂಕಲನವನ್ನು ಕುರಿತು ಪ್ರಬಂಧ ಮಂಡಿಸಿದ್ದೇ ನೆಪವಾಗಿ ಚಿತ್ತಾಲರ ಕಥಾಲೋಕ ಅಯಸ್ಕಾಂತದ ರೀತಿ ಹಿಡಿದಿಟ್ಟುಬಿಟ್ಟಿತ್ತು. ಆಗ ಸಾಹಿತ್ಯದ ವಿಚಾರ ಬಂದರೆ ಸಾಕು ಯಶವಂತ ಚಿತ್ತಾಲರ ಕಥೆ, ಗಂಗಾಧರ ಚಿತ್ತಾಲರ ಕಾವ್ಯ, ಅಡಿಗರ ಪದ್ಯ, ಅನಂತಮೂರ್ತಿ, ಲಂಕೇಶರ ಕಥನ, ಶಾಂತಿನಾಥ ದೇಸಾಯಿಯವರ ಕಾದಂಬರಿಗಳ ಕುರಿತು ಮಾತಾಡುವುದೇ ಒಂದು ಫ್ಯಾಷನ್ ನಮಗೆ. ಇವರುಗಳ ಬಗ್ಗೆ ಮಾತಾಡದವರು ಗಂಭೀರ ಸಾಹಿತ್ಯದ ವಿದ್ಯಾರ್ಥಿಗಳಲ್ಲ ಎಂಬ ಭ್ರಮೆ ಕೂಡ ಜೊತೆಗೂಡಿತ್ತು. ನಾನಂತೂ ಚಿತ್ತಾಲರ ಮಹಾ ಅಭಿಮಾನಿ. ಈಗಲೂ ಅವರ ಸಮಗ್ರ ಸಂಕಲನವನ್ನು ಹಿಡಿದು ಕೂತು ಆ ಲೋಕದೊಳಗೆ ಕಳೆದು ಹೋಗುವುದುಂಟು. ಅದೆಷ್ಟು ಸಲ ಗೆಳೆಯರಿಗೆ ಚಿತ್ತಾಲರ ಕಥೆಗಳನ್ನು ಓದಲುಕೊಟ್ಟು ಪುಸ್ತಕಗಳನ್ನು ಕಳೆದುಕೊಂಡು ಪರಿತಪಿಸಿದ್ದೇನೋ ಲೆಕ್ಕವಿಲ್ಲ. ಈಗ ನನ್ನ ಬಳಿ ಇರುವ ಅವರ ಸಮಗ್ರ ಸಂಪುಟಗಳು ಹತ್ತನೆಯ ಸಲವೋ ಹನ್ನೊಂದನೆಯ ಸಲವೋ ಕೊಂಡಿದ್ದಿರಬೇಕು.

೧೯೯೨ರಲ್ಲಿ ಇವರು ಬರೆದ ‘ಅಬೋಲಿನಾ’ ಟೆಲಿಫಿಲಂ ಆಗಿ ಚಂದನದಲ್ಲಿ ಪ್ರಸಾರವಾಯ್ತು. ಚಿತ್ತಾಲರು ಬರೆದಿರುವ ಸೊಗಸೇ ದೃಶ್ಯರೂಪದಲ್ಲಿಯೂ ಮೂಡಿತ್ತು. ಅದನ್ನು ನೋಡಿದ ಉಮೇದಿನಲ್ಲಿ ಚಿತ್ತಾಲರನ್ನು ಮಾತಾಡಿಸಲು ಫೋನ್ ಮಾಡಿದೆ. ಆದರೆ ಅವರಿಗೆ ಅದು ಅಷ್ಟು ಸಮಾಧಾನ ತಂದಂತೆ ಕಾಣಲಿಲ್ಲ. ಬೇರೆಯದೇ ಮಾತು ತೆಗೆದು ತುಂಬ ಹೊತ್ತು ಮಾತಾಡಿದರು. ಅದರಲ್ಲಿ ಗಂಗಾಧರ ಚಿತ್ತಾಲರ ಸುದೀರ್ಘ ಕಾಲದ ಅನಾರೋಗ್ಯದ ವಿಚಾರಗಳೂ ನುಸುಳಿದಾಗ ಚಿತ್ತಾಲರ ದನಿ ಹೆಚ್ಚು ಆರ್ದ್ರವಾಯ್ತು. ಅಷ್ಟೊತ್ತು ಸರಾಗವಾಗಿ ಮಾತಾಡಿದವರ ದನಿಯಲ್ಲೀಗ ನೋವಿನ ಎಳೆ ಮತ್ತು ನಿಟ್ಟುಸಿರಿನ ಬಿಸಿ ಕಾಣಿಸಿತು. ಇದು ನಡೆದು ಹತ್ತಿರ ಹತ್ತಿರ ಮೂರು ದಶಕಗಳೇ ಕಳೆದಿದ್ದರೂ ಈಗಲೂ ಆ ಭಾವ ಹಾಗೇಯೇ ಮರುಕಳಿಸುತ್ತದೆ. ಚಿತ್ತಾಲರ ಕಥೆಗಳಿಗೂ ಇದೇ ಗುಣವಲ್ಲವೇ ಇರುವುದು!

ಆಮೇಲೆ ಅವರು ಮಾಸ್ತಿ ಪುರಸ್ಕಾರ ಪಡೆಯಲು ಬೆಂಗಳೂರಿಗೆ ಬಂದಿದ್ದಾಗ ದೂರದಿಂದ ನೋಡಿದ್ದೆ. ಮಾತಾಡಿಸುವ ಅವಕಾಶವಾಗಲಿ, ಧೈರ್ಯವಾಗಲಿ ಅವತ್ತು ಬರಲಿಲ್ಲ. ಆದರೆ ಎಪ್ಪತ್ತು ತುಂಬಿದಾಗ ಮತ್ತೆ ಫೋನಿನಲ್ಲಿ ಅಭಿನಂದಿಸಿದ್ದೆ. ಮುಂಬಯಿಯಲ್ಲೇ ಇದ್ದ ನಮ್ಮ ಜಯಂತ ಕಾಯ್ಕಿಣಿಯವರು ಚಿತ್ತಾಲರನ್ನು ಮಾತಾಡಿಸುತ್ತ “ಎಪ್ಪತ್ತರ ಹುಟ್ಟುಹಬ್ಬವನ್ನು ಹೇಗೆ ಆಚರಿಸಿಕೊಳ್ಳುತ್ತೀರಿ?” ಎಂದಿದ್ದಕ್ಕೆ ಚಿತ್ತಾಲರು “ಹೊಸ ಕತೆ ಬರೆಯುವ ಮೂಲಕ” ಎಂದು ನಸುನಕ್ಕಿದ್ದರಂತೆ. ಕಥೆಯನ್ನೇ ಧ್ಯಾನಿಸುತ್ತಿದ್ದ ಚಿತ್ತಾಲರು ಎಷ್ಟು ಮಾರ್ಮಿಕವಾಗಿ ಉತ್ತರಿಸಿದ್ದಾರಲ್ಲ ಅನ್ನಿಸುತ್ತದೆ. ಅವರು ತೀರಿಕೊಳ್ಳುವ ಕೆಲವು ದಿನಗಳ ಮೊದಲೂ ಫೋನಿನಲ್ಲಿ ಮಾತಾಡಿಸಿದ್ದೆ. ಅವರ ಮಗಳೋ ಸೊಸೆಯೋ ಫೋನ್ ರಿಸೀವ್ ಮಾಡಿ, “ಅವರು ಬ್ಯುಸಿ ಇದ್ದಾರೆ, ಸ್ವಲ್ಪ ಸಮಯ ತಡೆದು ಕರೆ ಮಾಡುವಿರಾ?” ಎಂದಿದ್ದರು. ನಾನು ಕರೆ ಮಾಡಲು ಮರೆತವನು, ಸಂಜೆ ಮಾಡಿದಾಗ ಚಿತ್ತಾಲರು ಕಾಯುತ್ತಿದ್ದುದಾಗಿ ಹೇಳಿದರು. ಈ ಹಿರಿಯ ಚೇತನವನ್ನು ಕಾಯಿಸಿದ್ದಕ್ಕಾಗಿ ತುಂಬ ಕಸಿವಿಸಿಪಟ್ಟೆ.

ಚಿತ್ತಾಲರ ಎಲ್ಲ ಕಥೆಗಳಲ್ಲಿ ಬರುವ ಊರು ಹನೇಹಳ್ಳಿ. ಆರ್ ಕೆ ನಾರಾಯಣ ಅವರ ಮಾಲ್ಗುಡಿಯಂತೆ, ಕಂಬಾರರ ಶಿವಾಪುರದಂತೆ ಚಿತ್ತಾಲರ ಹನೇಹಳ್ಳಿಗೆ ಕನ್ನಡ ಕಥನ ಸಾಹಿತ್ಯದಲ್ಲಿ ಅಳಿಸಲಾಗದ ಚಿರಮುದ್ರೆ ಒತ್ತಿದಂತಿದೆ. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಸಮೀಪದ ಈ ಪುಟ್ಟ ಊರಿನಲ್ಲೇ ಚಿತ್ತಲಾರು ೧೯೨೮ರ ಆಗಸ್ಟ್‌ ೩ರಂದು ವಿಠೋಬಾ-ರುಕ್ಮಿಣಿ ದಂಪತಿಯ ಸುಪುತ್ರರಾಗಿ ಚಿತ್ತಾಲರು ಜನಿಸಿದರು. ಕನ್ನಡದ ಖ್ಯಾತ ನವ್ಯಕವಿ ಗಂಗಾಧರ ಚಿತ್ತಾಲರು ಇವರ ಒಡಹುಟ್ಟಿದ ಅಣ್ಣ. ಮನೆಯಲ್ಲಿ ಕೊಂಕಣಿ ಮಾತನಾಡುವ ಪರಿಪಾಠ. ಧಾರವಾಡ, ಮುಂಬಯಿ, ಅಮೆರಿಕದ ನ್ಯೂಜರ್ಸಿಗಳಲ್ಲಿ ಓದಿದ ನಂತರ ಉದ್ಯೋಗ ಪಡೆದು ನೆಲೆ ನಿಂತಿದ್ದು ಮುಂಬಯಿಯಲ್ಲಿ. ಆ ಮಹಾನಗರದ ಕಡಲತಡಿಯಲ್ಲಿದ್ದ ಚಿತ್ತಾಲರ ಅಪಾರ್ಟ್ಮೆಂಟ್ ಮನೆಗೆ ಹೋಗಿಬಂದ ಅನೇಕ ಕನ್ನಡದ ಲೇಖಕರ ಅನುಭವಗಳನ್ನು, ಅವರ ಶ್ರೀಮತಿಯವರ ಆತಿಥ್ಯವನ್ನು, ಸಾಹಿತ್ಯದ ಚರ್ಚೆಗಳನ್ನು ಓದಿ ಓದಿ ನನ್ನ ಕಲ್ಪನೆಯಲ್ಲೇ ಚಿತ್ತಾಲರ ಮನೆಗೆ ಹಲವುಸಲ ಹೋಗಿಬಂದಂತೆ ಅನ್ನಿಸಿಬಿಟ್ಟಿದೆ. ಜಯಂತ ಕಾಯ್ಕಿಣಿ, ಉಮಾರಾವ್, ಎಸ್ ಆರ್ ವಿಜಯಶಂಕರ, ಹಾ ಮಾ ನಾಯಕ, ವಸುಧೇಂದ್ರ, ಜೋಗಿ, ಮಾಧವ ಕುಲಕರ್ಣಿ ಮುಂತಾದವರು ಚಿತ್ತಾಲ ಮನೆಗೆ ಹೋಗಿಬಂದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ ಚಿತ್ತಾಲರ ವ್ಯಕ್ತಿತ್ವ ಕೂಡ ಅವರ ಕಥೆಗಳಂತೆಯೇ! ಎಷ್ಟು ಓದಿದರೂ, ಎಷ್ಟು ಹೇಳಿದರೂ ಇನ್ನೂ ಹೇಳುವುದು ಬಾಕಿಯಿದೆ ಎಂಬ ಕೊರತೆ ಹೇಳುಗರಲ್ಲಿ ಉಳಿಸಿಬಿಡುವ ಜಾಡಿನದು. ಬೇಂದ್ರೆಯವರ ಕವಿತೆಗಳಂತೆಯೇ ಚಿತ್ತಾಲರ ಸಾಹಿತ್ಯವೂ ಸಮೃದ್ಧತೆಯ ಸಂಕೇತ. ಮೊಗೆದಷ್ಟೂ ಬರಿದಾಗದ ನಿಧಿ.


ಶಿಕಾರಿ ನಾಟಕದ ಒಂದು ದೃಶ್ಯ

ಕನ್ನಡದ ಅನನ್ಯ ಕಥೆಗಾರರಾದ ಚಿತ್ತಾಲರಿಗೆ ತಮ್ಮ ಯೌವನದ ಏರುಕಾಲದಲ್ಲಿ ತಾವೊಬ್ಬ ಉತ್ತಮ ಚಿತ್ರಕಲಾವಿದನಾಗಬೇಕೆಂಬ ಕನಸಿತ್ತಂತೆ. ತಮ್ಮೊಳಗಿನ ಕಲಾವಿದನನ್ನು ಜಾಗೃತಿಗೊಳಿಸಲು, ಚಿತ್ರಕಲೆಯಲ್ಲಿ ವಿಶೇಷ ಪರಿಣತಿ ಪಡೆಯಲು ಮುಂಬಯಿಯ ಕಲಾನಿಕೇತನದ ಸಂಜೆ ಕಾಲೇಜಿಗೆ ಸೇರಿಕೊಂಡಿದ್ದರಂತೆ. ಆದರೆ ಅವರನ್ನು ಬಹುವಾಗಿ ಆಕರ್ಷಿಸಿದ್ದು ಅವರ ವ್ಯಕ್ತಿತ್ವದ ಬಹುಮುಖ್ಯ ಭಾಗವೇ ಆಗಿದ್ದ ಮಾನವತಾ ವಾದ. ನವ ಮಾನವತಾವಾದದ ಮಾರ್ಗವಾಗಿ ಅವರು ಕಥಾಲೋಕಕ್ಕೆ ಕಾಲಿರಿಸಿದವರು. ಚಿತ್ತಾಲರ ಚಿಂತನೆಗಳ ಹಿಂದೆ ಮಾರ್ಕ್ಸ್, ಎರಿಕ್ ಫ್ರಾಂ, ಹಕ್ಸ್ ಲೀ, ಎಡಿಂಗ್ಟನ್, ಸಿಗ್ಮಂಡ್ ಫ್ರಾಯ್ಡ್ ಮುಂತಾದ ಧೀಮಂತರ ವಿಚಾರಧಾರೆಗಳಿವೆ. ಅಲ್ಲದೆ ನಮ್ಮ ಗೌರೀಶ ಕಾಯ್ಕಿಣಿ, ಶಾಂತಿನಾಥ ದೇಸಾಯಿಯಂತಹ ಪ್ರತಿಭಾವಂತ ಬರಹಗಾರರ ಗಾಢ ಪ್ರಭಾವವಿದೆ. ಚಿತ್ತಾಲರು ತಮ್ಮ ‘ಕತೆಯಾದಳು ಹುಡುಗಿ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನ ಸ್ವೀಕರಿಸಿದ ಸಂದರ್ಭದಲ್ಲಿ ಆಡಿರುವ ಮಾತುಗಳನ್ನು ಓದಿದವರಿಗೆ ಚಿತ್ತಾಲ ಸಾಹಿತ್ಯ ವ್ಯಕ್ತಿತ್ವ ರೂಪುಗೊಂಡ ಬಗೆ ಚೆನ್ನಾಗಿ ಅರಿವಿಗೆ ಬರುತ್ತದೆ. ಆ ಪ್ರಶಸ್ತಿ ಸ್ವೀಕೃತ ಭಾಷಣವನ್ನೇ ಆ ಸಂಕಲನದ ಮರುಮುದ್ರಣಗಳಲ್ಲಿ ಮುನ್ನುಡಿಯಾಗಿ ಜೋಡಿಸಿ ಉಪಕರಿಸಿದ್ದಾರೆ. ಕತೆಗಳಿಗಾಗಿ ಕನ್ನಡದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ವಿರಳರಲ್ಲಿ ಚಿತ್ತಾಲರು ಎರಡನೆಯವರು, ಮಾಸ್ತಿ ಮೊದಲಿಗರು. ಆಮೇಲೆ ಲಂಕೇಶ್ ಮತ್ತು ವೈದೇಹಿ ಈ ಪಟ್ಟಿಗೆ ಸೇರಿದರು. ಬಹುಶಃ ಈ ನಾಲ್ಕೇ ಜನರಿರಬಹುದು‌. ಬೇಕಾದಷ್ಟು ಕಥೆಗಾರರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನ ಬಂದಿರುವುದು ನಿಜವಾದರೂ ಅದು ಅವರುಗಳು ಬರೆದ ಬೇರೆ ಬೇರೆ ಪ್ರಕಾರದ ಕೃತಿಗಳಿಗೆ ಎಂಬುದನ್ನು ನೆನಪಿಡಬೇಕು. ತಮ್ಮ ಅಭಿವ್ಯಕ್ತಿಯ ಮುಖ್ಯ ಮಾಧ್ಯಮಕ್ಕೆ ಪ್ರಶಸ್ತಿ ಪಡೆದ ಕಥೆಗಾರರು ಇದುವರೆಗೆ ಈ ನಾಲ್ವರು ಮಾತ್ರ. ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವಪ್ರಶಸ್ತಿ ಪಡೆದ ಶಾಂತಿ ಕೆ ಅಪ್ಪಣ್ಣ, ಪದ್ಮನಾಭ ಭಟ್ ಶೇವ್ಕಾರ್, ಸ್ವಾಮಿ ಪೊನ್ನಾಚಿ ಮುಂತಾದ ಕಥೆಗಾರರಿದ್ದಾರೆ.

ತಮ್ಮ ವಿಶೇಷ ತಜ್ಞತೆಯ ರಾಸಾಯನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಉನ್ನತ ಹುದ್ದೇಗೇರಿದ್ದ ಚಿತ್ತಾಲರು ತಮ್ಮ ಈ ವೃತ್ತಿಜೀವನದಲ್ಲಿ, ಮುಂಬಯಿಯಂತಹ ರಾಕ್ಷಸ ನಗರದಲ್ಲಿ ಪಡೆದ ಜೀನನಾನುಭವ ಅಪಾರ. ಆಧುನಿಕ ಜಗತ್ತಿನ ಸ್ವರೂಪವನ್ನು ನಯಂತ್ರಿಸುತ್ತಿರುವ ಬಂಡವಾಳಶಾಹಿಗಳ ಕರಾಳ ಮುಖದರ್ಶನ ಇವರಿಗಾದುದು ವೃತ್ತಿಜೀವನದಲ್ಲೇ. ಕೈಗಾರಿಕೆಗಳ ಜಗತ್ತಿನ ಒಳ-ಹೊರಗನ್ನು ಹೊಕ್ಕುನೋಡಿದ್ದು, ಉದ್ಯೋಗ ಜೀವನದಲ್ಲಿ ಕಂಡ ಏರುಪೇರುಗಳು ಎಲ್ಲವೂ ಚಿತ್ತಾಲರೊಳಗಣ ಕಥೆಗಾರನನ್ನು ಮಾಗಿಸಿದವು. ನಗರ ಜೀವನದ ಸಂಕೀರ್ಣ ಬದುಕು ಮನುಷ್ಯನ ಅಂತರಂಗ ಪರಿವೀಕ್ಷಣೆಗೆ ಪ್ರೇರೇಪಿಸಿತು. ಇವೆಲ್ಲವೂ ಹೊಸ ಬಗೆಯ ಪ್ರತಿಮಾ ನಿರ್ಮಾಣದ ಮೂಲಕ ಚಿತ್ತಾಲರ ಕಥೆಗಳಲ್ಲಿ ಮಿಳಿತಗೊಂಡಿರುವುದನ್ನು ನಾವು ಗಮನಿಸಬಹುದು. ಚಿತ್ತಾಲರೊಳಗಿನ ಕಥೆಗಾರನ ಆಂತರ್ಯವರಿಯಲು ಇವರೇ ಬರೆದಿರುವ “ಸಾಹಿತ್ಯ, ಸೃಜನಶೀಲತೆ ಮತ್ತು ನಾನು” ಎಂಬ ಪ್ರಬಂಧಗಳನ್ನು ಅವಶ್ಯವಾಗಿ ನಾವು ಓದಲೇಬೇಕು. ಈ ಪ್ರಬಂಧಗಳೇ ಕತೆಗಳ ರೀತಿಯಲ್ಲಿ ನಿರೂಪಿತವಾಗಿರುವದು ವಿಶೇಷ‌.


ಫೋಟೋ ಕೃಪೆ : google

ಚಿತ್ತಾಲರ ಕಾದಂಬರಿಗಳನ್ನು ಓದದಿದ್ದರೆ ಖಂಡಿತವಾಗಿಯೂ ಅದು ನಮ್ಮ ಪಾಲಿನ ದೊಡ್ಡ ನಷ್ಟ! ಮನುಷ್ಯನನ್ನು ಮನುಷ್ಯನೇ ಭೇಟೆಯಾಡುವ ಹಲವು ಬಗೆಯನ್ನು ತೆರೆದು ತೋರುವ ಇವರ ಶಿಕಾರಿ ಕಾದಂಬರಿಯನ್ನು ಹತ್ತುಸಲವಾದರೂ ನಾನು ಓದಿರುವೆ. ಮೊದಮೊದಲು ಈ ಕಾದಂಬರಿ ಸುಲಭವಾಗಿ ಒಳಗೆ ಬಿಟ್ಟುಕೊಳ್ಳುವುದಿಲ್ಲ. ಮತ್ತೆ ಮತ್ತೆ ಓದನ್ನು ಒತ್ತಾಯಿಸುವ ಕೃತಿಯಿದು. ಆಮೇಲೆ ಆ ಕಾದಂಬರಿಯ ನಾಗಪ್ಪನೊಂದಿಗೆ ನಾವು ಹೆಜ್ಜೆ ಹಾಕುತ್ತ ಅವನು ಬೈಯ್ದಂತೆ ‘ಒಂದು ಮಗ’ ‘ ಎರಡು ಮಗ’ ಅಂತ ಬೈಯ್ದುಕೊಳ್ಳಬಹದು. ಪರಸ್ಪರ ಪ್ರತಿಷ್ಠೆಯ ಮೇಲಾಟದಲ್ಲಿ, ಮೇಲಧಿಕಾರಿಗಳ ಕಚ್ಚಾಟಕ್ಕೆ ಹುಚ್ಚಾಟಕ್ಕೆ ಬಲಿಯಾಗುವ ಅಮಾಯಕ ನಾಗಪ್ಪನ ಮಾನಸಿಕ ತುಮುಲವನ್ನು ಸಮರ್ಥವಾಗಿ ಬಿಂಬಿಸುವ ‘ಶಿಕಾರಿ’ ಕಾದಂಬರಿಯು ಕನ್ನಡ ಸರ್ವಶ್ರೇಷ್ಠ ರಚನೆಗಳಲ್ಲೊಂದೆಂದು ಓದುಗರಿಂದ, ವಿಮರ್ಶಕರಿಂದ ಮನ್ನಣೆ ಗಳಿಸಿದೆ. ಅವರ ‘ಮೂರು ದಾರಿಗಳು’ ಕೂಡ ನನ್ನಿಷ್ಟದ ಕೃತಿ. ಮೂರು ದಾರಿಗಳೆದುರಲ್ಲಿ ನಿಂತವನ ಮನಸ್ಥಿತಿಯೊಳಗಣ ಚಂಚಲತೆ, ಅನಿರ್ದಿಷ್ಟತೆ, ಅತೃಪ್ತಿಗಳು ಯಾವೆಲ್ಲ ರೂಪದಲ್ಲಿರಬಹುದೆಂಬುದನ್ನು ಚಿತ್ತಾಲರು ಸೊಗಸಾಗಿ ಕಾಣಿಸಿದ್ದಾರೆ. ಪುರುಷೋತ್ತಮ, ಛೇದ, ಕೇಂದ್ರವೃತ್ತಾಂತಗಳದ್ದೇ ಒಂದೊಂದು ಲೋಕ.

ಚಿತ್ತಾಲರಂತೆ ಕಥೆ ಬರೆಯಬೇಕೆಂಬ ಆಸೆ ಹುಟ್ಟಿಸುವಂತೆ ಇವರ ಕಥೆಗಳಿವೆ. ಕನ್ನಡದಲ್ಲಿ ಹಲವು ಪ್ರಯೋಗಗಳಿಗೆ ಒಡ್ಡಿಕೊಂಡೂ ಮೂಲ ಜಾಡನ್ನು ಬಿಡದ ಚಿತ್ತಾಲರು ತಮ್ಮ ಸರೀಕ ಕಥೆಗಾರರಾದ ಅನಂತಮೂರ್ತಿ, ಲಂಕೇಶ್, ತೇಜಸ್ವಿ ಮುಂತಾದವರಂತೆ ಕತೆಗಾರರಾಗಿ ಬದಲಾಗದೆ ಹೋದದ್ದು ಚಿತ್ತಾಲರ ಮಿತಿಯೂ ಹೌದು.

ಚಿತ್ತಾಲರಿಗೆ ಜ್ಞಾನಪೀಠ ಪಡೆಯುವ ಎಲ್ಲ ಅರ್ಹತೆಗಳಿದ್ದವು. ‘ಜ್ಞಾನಪೀಠ ಪಡೆದವರಷ್ಟೇ ದೊಡ್ಡ ಲೇಖಕರಲ್ಲ’ ಎಂಬ ಗಿರೀಶ್ ಕಾರ್ನಾಡರ ಮಾತಿಗೆ ಚಿತ್ತಾಲರೂ ಉದಾಹರಣೆಯಾಗಿ ಹೋದರು. ಸಣ್ಣಕಥೆ ಪ್ರಕಾರದ ವ್ಯಾಪ್ತಿಯನ್ನು ವಿಸ್ತರಿಸಿದ ಚಿತ್ತಾಲರಿಗೆ ಆ ಗೌರವ ಸಂದಿದ್ದರೆ ಕನ್ನಡದ ಘನತೆ ಇನ್ನಷ್ಟು ಹೆಚ್ಚುತ್ತಿತ್ತು. ನಮ್ಮ ಅನೇಕ ಬಹುಮುಖ್ಯ ಲೇಖಕರ ವಿಚಾರದಲ್ಲಿ ಈ ಕೊರತೆ ಉಳಿದುಬಿಟ್ಟಿದೆ. ಎಲ್ಲರಿಗೂ ಕೊಡಲು ಅವಕಾಶವಿಲ್ಲದ ಸಂದರ್ಭದಲ್ಲಿ ಇದು ಅನಿವಾರ್ಯ ಕೂಡ. ಇದೇರೀತಿ ಚಿತ್ತಾಲರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಲಿಲ್ಲವೆಂಬ ಕೊರಗೂ ಸೇರಿದೆ. ಜ್ಞಾನಪೀಠ ಪಡೆಯದಿರುವ, ಸಮ್ಮೇಳನಾಧ್ಯಕ್ಷರಾಗದಿರುವ ಅನೇಕ ಹಿರಿಯರಿದ್ದಾರೆ. ಆದರೆ ಆ ದರ್ಜೆಯ ಎತ್ತರದ ಲೇಖಕರು ನಮ್ಮ ಕನ್ನಡದಲ್ಲಿ ಅನೇಕರಿದ್ದಾರಲ್ಲ ಎಂಬುದು ನಮ್ಮ ಹೆಮ್ಮೆ. ಹಾಗೆ ಓದಿದಾಗಲೆಲ್ಲ ಹೆಮ್ಮೆ ಮೂಡಿಸುವ ಲೇಖಕ ನಮ್ಮ ಯಶವಂತ ಚಿತ್ತಾಲರು. ಹೊಸತಲೆಮಾರಿನ ಓದುಗರು ಮತ್ತು ಬರಹಗಾರರು ಚಿತ್ತಾಲರನ್ನು ಓದಲೇಬೇಕು.


  • ಡಾ. ಎಚ್. ಎಸ್. ಸತ್ಯನಾರಾಯಣ

 

5 1 vote
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW