ಅರವಿಂದನಿಗೆ ರೈಲಿನಲ್ಲಿ ಸಿಕ್ಕ ಅವಳ ಹೆಸರು ತಬ್ಸುಮ್. ಕಣ್ಣುಗಳು ಅವಳನ್ನು ನೋಡಲು ಹಾತೊರೆಯುತ್ತಿತ್ತು, ಅದೇನು ಆಕರ್ಷಣೆ ಗೊತ್ತಿಲ್ಲ ಅವಳತ್ತ ಮನಸ್ಸು ಬಾಗುತ್ತಿರುವಾಗಲೇ ಅವಳಿಂದ ಬಂದ ಉತ್ತರ ‘ಮುಂದಿನ ತಿಂಗಳು ನನ್ನ ಮದುವೆ, ಖಂಡಿತಾ ಬನ್ನಿ… “ ಕತೆಗಾರ್ತಿ ರೇಶ್ಮಾ ಗುಳೇದಗುಡ್ಡಾಕರ್ ಅವರ ‘ಪ್ರಯಾಣ’ದ ಮುಂದಿನ ಭಾಗ ತಪ್ಪದೆ ಓದಿ….
ಟ್ಯಾಕ್ಸಿ ತೆರಳಿದರು ಅರವಿಂದನ ಮನದಲ್ಲಿ ತಬ್ಬಸುಮ್ ಭದ್ರವಾಗಿದ್ದಳು ..! ಹೃದಯ ಅವಳು ನಾನೇ …ನೀನೇ ಅವಳು… ಎಂದು ಎಡಬಿಡದೆ ಕೂಗುತಿತ್ತು. ಯಾವುದೂ ಒಂದು ಭಾವ ಸೆಳೆಯುತ್ತಿತ್ತು. ಮನೆಗೆ ನಗುಮುಖದಿಂದಲೇ ಆಗಮಿಸಿದ ಮಗನ ಕಂಡು ತಾಯಿ ಸಂಭ್ರಮಿಸಿದರು. ಬಂದವನೆ ತಾಯಿಯ ಅಪ್ಪಿ ಕಾಲುಗಳಿಗೆ ನಮಸ್ಕಾರ ಮಾಡಿದ.
ಅಮ್ಮನ ಮುದ್ದಿನಮಗ. ಒಂಟಿ ಬದುಕಿನ ತಾಯಿ ಬಾಳಿನ ಏಳು ಬಿಳುಗಳಿಗೆ ಅಮ್ಮನ ಪುಟ್ಟ ಕಂದ ಜೀವಂತ ಸಾಕ್ಷಿಯಾಗಿದ್ದ. ಅಂದು- ಇಂದು ಸುಗುಣ ಸ್ಫೂರದ್ರೂಪಿ ಅರವಿಂದ.
“ಯಪ್ಪಾ……ಊಟಕ್ಕ ಬಾ….. ಅಣಿ ಮಾಡೀನಿ’ ಎಂದು ತಾಯಿ ಮಗನನ್ನು ಕರೆದರು. ಅಮ್ಮಾ ” ದಾದಾಗೂ( ಅಣ್ಣ) ಹೇಳಿಯಾ ಬಾ.. ಅಂತ, ಬಹಳ ದಿನ ಆತು… ಅವನ ಜೊತೆ ಊಟ ಮಾಡಿ ಎಂದ. “ಫೋನ್ ಹಚ್ಚಿದ್ದೆ ಅವನೂ ಬರ್ತಾನ ಬಾ ತಮ್ಮಾ ನೀ, ಅವಂದು ಹೊಸ ವಿಚಾರ ಇಲ್ಲ. ಎಲ್ಲಾ ಗೊತ್ತಲ್ಲ ನಿನಗ.
ನೀ… ಬಾ… ಯಪಾsss… ದಣಿದು ಬಂದಿದ್ದಿ . ಲಗು ಊಟಮಾಡು’ ಎಂದು ತಾಯಿ ಒತ್ತಾಯ ಮಾಡಿ ಊಟಕ್ಕೆ ಸಿದ್ಧ ಮಾಡಿದಳು. ಅರವಿಂದನಿಗೆ ಇದು ತಿಳಿಯದ ವಿಷಯ ಅಲ್ಲ.
ಮದುವೆ ಮಾಡಿಕೊಂಡು ಮನೆಯಿಂದ ದೂರವಾದ ಅಣ್ಣ , ಒಂಟಿ ತಾಯಿ ಮನೆಗೆ ಅಥಿತಿಯಾಗಿ ಬರುತ್ತಿದ್ದ…ಹೋಗುತ್ತಿದ್ದ. ಅತ್ತಿಗೆ ಬಂದರೂ ಮಾತು ಕತೆ, ಇಲ್ಲ. ಎಲ್ಲಾ ಕೆಲಸ ಅರವಿಂದ್ ನ ತಾಯಿಯೇ ಮಾಡಿ ಮುಂದಕ್ಕೆ ಇಡಬೇಕಿತ್ತು. ಅಣ್ಣ ಮಾತು, ಗತ್ತು, ಎಲ್ಲಾ ತಾಯಿಯ ಬಳಿ ಮಾತ್ರ ಹೆಂಡತಿ ಮುಂದೆ ಅವನು ವಿಧೇಯ..! ಅವಳ ಮಾತೇ ಶಾಸನವಾಗಿತ್ತು. ಆಗಾಗ ಬಂದು ತಾಯಿಯ ಬಳಿ ಅತ್ತು ಕೆರೆದು ಹೋಗುತ್ತಿದ್ದ ದೂಡ್ಡ ಮಗ……!?. ತನ್ನ ದುರಿತ ಕಾಲದಲ್ಲಿಯು ಗಂಡನಿಲ್ಲದೆ ಇಬ್ಬರು ಮಕ್ಕಳ ಜವಾಬ್ದಾರಿ ಹೊತ್ತಾಗಲು ಹೀಗೆ ಇಲ್ಲ ಎಂಬುದು ತಾಯಿಗೆ ನೆನಪಾಗುವಂತೆ ಮಾಡುತ್ತಿದ್ದ…..
ಬಿಸಿ ಬಿಸಿ ಜೋಳದ ರೊಟ್ಟಿ, ಪುಂಡಿ ಪಲ್ಯ,ಮುಳ್ಳಗಾಯಿ ಪಲ್ಯ,ಶೇಂಗಾ ಸಾರು, ಕರದಂಟು. ಎಲ್ಲವನ್ನು ಸವಿದು ಗಟ್ಟಿ ಮಜ್ಜಿಗೆ ಕುಡಿದು ಕೋಣೆಗೆ ಹೊರಟ. ಹೃದಯ ರೈಲಿನ ತಾಜಾ ಸಮಾಚಾರವನ್ನು ಪದೇ ಪದೇ ಬಿತ್ತರಿಸುತ್ತಿತ್ತು. ಕಿಟಕಿಯಿಂದ ಬಂದ ತಣ್ಣನೆಯ ಗಾಳಿ ಅವಳ ನೆನಪುಗಳ ತಂದು ದೇಹವನ್ನು ಸೂಕುತ್ತಿತ್ತು . ಯಾವುದು ಒಂದು ಅವ್ಯಕ್ತ ಭಾವ ಸುಮಧುರವಾಗಿ ಅವನಲ್ಲಿ ತುಂಬಿ ನಿದ್ದೆ ಬಂದರೂ ಕಂಗಳು ಹಠಮಾಡಿ, ಹಾಸಿಗೆ ಮೇಲೆ ಹೊರಳಾಡುವಂತೆ ಮಾಡಿತು.
ಕೊಠಡಿಯಿಂದ ಎದ್ದು ಬಂದು ಟಿವಿ ಹಾಕಿ ಸೋಫಾದ ಮೇಲೆ ಕುಳಿತ. ಮನವು ಮತ್ತೆ ಮತ್ತೆ ಅವಳ ನೆನಪು ಮಾಡಿ ಆರ್ದವಾಗಿಸಿತ್ತು. ಟಿವಿ ಯಲ್ಲಿ ಬರುತ್ತಿರುವುದಕ್ಕೂ, ಅರವಿಂದನ ಮುಖ ಭಾವಕ್ಕೂ ಹೊಂದಿಕೆಯೇ ಇಲ್ಲವಾಗಿತ್ತು. ಇದನ್ನು ಕಂಡ ತಾಯಿ ಅಚ್ಚರಿ ಆದರೂ ತೋರ್ಪಡಿಸದೆ ” ಅವಿ… ಚಹಾ ಮಾಡ್ಲೇನು?’ ಎಂದರು. ಅರವಿಂದ ಈ ಲೋಕದಲ್ಲೇ ಇರಲಿಲ್ಲ. ಡೈನಿಂಗ್ ಟೇಬಲ್ ಮೇಲೆ ಫೋನ್ ರಿಂಗಣಿಸಿದಾಗಲೇ ಅರವಿಂದ ತನ್ನ ಕನಸಿನ ಲೋಕದಿಂದ ಎಚ್ಚೆತ್ತ. ಸುತ್ತಲೂ ನೋಡಿ, ಓಡಿ ಬಂದು ಫೋನ್ ನೋಡುತ್ತಾನೆ. ಗೆಳೆಯ ನವೀನ್ ನ ಸುಮಾರು ಮಿಸ್ ಕಾಲ್ ಗಳು..! ಸಮಯ ನೋಡಿದ ಸಂಜೆ ನಾಲ್ಕು ಆಗುತ್ತಾ ಬಂದಿತ್ತು, ಗಡಿಬಿಡಿಯಿಂದ ಬಟ್ಟೆ ಬದಲಿಸಿ ತಾಯಿಗೆ ಹೇಳಿ ತನ್ನ ಬೈಕ್ ತೆಗೆದುಕೊಂಡು ಹೊರಬಿದ್ದ.
ಅವಿ ತೇಜಸ್ವಿನಗರದಿಂದ ಸಂಗೊಳ್ಳಿ ರಾಯಣ್ಣ ನಗರ ಬಸ್ ಸ್ಟಾಪ್ ಬಳಿ ಬರುತ್ತಿರುವಾಗ ಮತ್ತೆ ಫೋನ್ ರಿಂಗಣಿಸಿತು. ಬೈಕ್ ನಿಲ್ಲಿಸಿ ಫೋನ್ ತೆಗೆಯಲು ಮುಂದಾದ ಆಗ ಅವನ್ ಬೈಕ್ ಗೆ ಮುಂದೆ ಒಂದು ಸ್ಕೋಟಿ ಬಂದು ಡಿಕ್ಕಿ ಹೊಡೆಯಿತು. ಅವಿ ಯಾರು? ಎಂದು ನೋಡಿದಾಗ ಲಡ್ಡು ಬಂದು ಬಾಯಿಗೆ ಬಿದ್ದಂತೆ ಆಯಿತು . ಎದುರುಗಡೆ ತಬಸುಮ್ ಇದ್ದಳು. ಅವಳು ಬಂದು ಡಿಕ್ಕಿ ಹೊಡೆದು ಗಾಡಿ ನಿಲ್ಲಿಸಿದಳು. ಗಲಿಬಿಲಿಯಾಗಿದ್ದಳು, ಅವಳು ಬಂದ ದಾರಿ ಸರಿ ಇತ್ತು. ಅರವಿಂದ ಫೋನ್ ತೆಗೆಯುವ ಅವಸರದಲ್ಲಿ ದಾರಿ ಮಧ್ಯ ಬೈಕ್ ನಿಲ್ಲಿಸಿದ್ದ. ಆದರೆ ಇದು ಯಾವುದು ಪರಿವೆಯೇಯಿಲ್ಲದೆ, ಹೆಲ್ಮೆಟ್ ತೆಗೇದು “ಹೋ …. ಫೋನ್ ನಂಬರ್ ಕೊಡಲು ಬಂದ್ರಾ ?… ನಾನು ಅದೇ ಯೋಚನೆ ಮಾಡ್ತಿದ್ದೆ, ಹೇಗೆ ಮದುವೆಗೆ ಬರುವುದು ಅಂತ?’ ಎಂದ. ತಬಸುಮ್ ಗೆ ಮೊದಲೇ ಗಲಿಬಿಲಿ ಆಗಿತ್ತು, ಅದರ ಜೊತೆ ಅರವಿಂದನ ನೋಡಿ ಅಚ್ಚರಿಯು ಆಗಿ ಅವಳ ಕದಪುಗಳು ಕೆಂಪೇರಿದ್ದವು.
ತಬಸುಮ್ ” ರೀ… ಸರ್, ನೀವು ಎಲ್ಲಿ ಗಾಡಿ ನಿಲ್ಲಿಸಿರಿ ಅಂತ ಗೊತ್ತದ ಏನು?, ವಾಪಾಸ್ ನನಗ ಪ್ರಶ್ನೆ ಮಾಡ್ತಿರಲ್ಲ?’. ಎಂದು ತರಾಟೆಗೆ ತೆಗೆದುಕೊಂಡಳು.
ಅಷ್ಟರಲ್ಲಿ ಅವನು ಫೋನ್ ತೆಗೆಯದ ಕಾರಣ ಗೆಳೆಯ ನವೀನ್ ಬಂದ, ಅರವಿಂದ್ ನ ಮುಖದಲ್ಲಿನ ತೇಜಸ್ಸನ್ನು ನೋಡಿ “ದೋಸ್ತ sorry… ಭಾರಿ ಬಿಜಿ ಅದಿಯಪ್ಪಾ, ನಡೆಸು ದೋಸ್ತ ನಡ್ಸು…’ ಎಂದು ಅವನ ಉತ್ತರಕ್ಕೂ ಕಾಯದೆ ಬಂದವ ಯು ಟರ್ನ್ ಮಾಡಿ ರೊಯ್ ಎಂದು ಹೋದ…!.
ತಬಸುಮ್ ಗೆ ಮತ್ತೂ ಸಿಟ್ಟು ಏರಿತ್ತು. ರಾಯಣ್ಣ ಬಸ್ಟ್ಯಾಂಡ್ ಬಳಿ ಇವರ ಚಕಮಕಿ ನಡೆದಿತ್ತು. ಸಂಜೆಗೆ ಶಾಲೆ, ಕಾಲೇಜು ಕನ್ಯಾಕುಮಾರಿಯರು ನೆರೆದಿದ್ದರು. ಇವರ ಗಲಾಟೆ ಎಲ್ಲಾ ನೋಡಿದ್ದ ಯುವತಿಯರ ಗುಂಪು ಹತ್ತಿರ ಬಂದು ” ರೀ ಮಿಸ್ಟರ್, ಏನು ನಿಮ್ಮ ಪಂಚಾಯಿತಿ?. ನಾವು ಅವಾಗಿಂದ ನೋಡಕ ಹತ್ತೈವಿ. ಗಾಡಿ ಎಲ್ಲಿ ನಿಲ್ಲಿಸಿರಿ ಖಬರ್ ಅದ ಏನು ನಿಮಗ?’ ಎಂದು ಅಬ್ಬರಿಸಿತು .
ಅರವಿಂದನು ಅನಿರೀಕ್ಷಿತ ದಾಳಿಗೆ ತತ್ತರಿಸಿ…..ಮೊದಲೇ ಮಾರ್ಚ್ 8 ಹತ್ತಿರ ಬರ್ತಾ ಇದೆ ಯಾಕ್ಬೇಕು ಎಂದು ಎಲ್ಲರನ್ನೂ ಕ್ಷಮೆ ಕೇಳಿ ‘ಮೇಡಂ, she is my friend please excuse me… ” ಎಂದು ಅವರನ್ನು ಸಮಾಧಾನ ಮಾಡಿದ. ತಬ್ಬುಸುಮ್ ಸಹ ಅವರನ್ನು ಸಮಾಧಾನ ಮಾಡಿದಳು. ಪರಿಸ್ಥಿತಿ ತಿಳಿಯಾಯಿತು. ಅರವಿಂದ್ ‘ಬನ್ನಿ, ಮುಂದೆ ಹೋಗೋಣ. ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುವೆ ಪ್ಲೀಸ್… ಬನ್ನಿ’ ಎಂದ. ತಬ್ಬಸುಮ್ ಇನ್ನು ಇವನು ಬಿಡಲಾರ ಸರಿ ನೋಡಿಯೇ ಬಿಡುವ ಎಂದು ಗಾಡಿ ರಿವೆಂರ್ಸ್ ತೆಗೆದುಕೊಂಡಳು ಇಬ್ಬರು ಅಲ್ಲಿಂದ ಜಾಗ ಖಾಲಿ ಮಾಡಿದರು.
ವಿಧಿ ಲಿಖಿತ ಅರಿತವರು ಯಾರು….. ಈ ರೋಚಕ ತಿರುವು ಅರವಿಂದನ ಬರಿದಾದ ಬಾಳು ತುಂಬುವುದೇ …..?!
ಮುಂದುವರೆಯುವದು…….
- ರೇಷ್ಮಾ ಗುಳೇದಗುಡ್ಡಾಕರ್