“ಬದುಕಿನಲ್ಲಿ ಸಂಘರ್ಷಗಳು ನಮ್ಮನ್ನು ಕುಗ್ಗಿಸಲು ಅಲ್ಲ, ನಮ್ಮನ್ನು ಇನ್ನಷ್ಟು ಗಟ್ಟಿಯಾಗಿಸಲು ಬರುತ್ತವೆ” ಎಂದು ನಾವು ಭಾವಿಸಿದರೆ ಆ ಸಂಘರ್ಷದಲ್ಲಿ ಹೋರಾಡಲು ನಮಗೆ ಶಕ್ತಿ ತಾನಾಗೇ ಸಿಗುತ್ತದೆ. ಇಂತಹ ಮನಸ್ಸಿನ ವ್ಯಕ್ತಿ ರ್ಯಾಂಡಿ ಪಾಶ್. ಈ ಕೃತಿಯ ಕುರಿತು ಶಾರದಾ ಶ್ರಾವಣಸಿಂಗ್ ರಜಪೂತ ಅವರು ಸಂಚಿಕೆಯ ರೂಪದಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ದಿ ಲಾಸ್ಟ್ ಲೆಕ್ಚರ್
ಮೂಲ : ರ್‍ಯಾಂಡಿ ಪಾಶ್ ಹಾಗೂ ಜೆಫ಼್ರಿ ಜೆಸ್ಲೊ
ಕನ್ನಡಕ್ಕೆ : ಎಸ್.ಉಮೇಶ
ಬೆಲೆ : ೧೯೦/-
ಪ್ರಕಾಶನ : ಧಾತ್ರಿ ಪ್ರಕಾಶನ, ಮೈಸೂರು.
ಕಳೆದ ಭಾಗ-1 ರಲ್ಲಿ ಹೇಳಿರುವಂತೆ ಕ್ಯಾನ್ಸರ್ ಗೆ ತಾನು ಪೀಡಿತನಾಗಿದ್ದೇನೆ. ಸಾವಿನ ದಿನಗಳನ್ನು ಎಣಿಸುತ್ತಿದ್ದೇನೆ ಎಂದು ಗೊತ್ತಾದರೂ ತನ್ನ ಮನೋಬಲವನ್ನು ಕಳೆದುಕೊಳ್ಳದೆ ತನ್ನ ದೇಶ ಅಮೆರಿಕ ನೀಡಿದ ಉಪನ್ಯಾಸದ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಂಡ. ಹಾಗೆ ಅವನು ನೀಡಿದ ಉಪನ್ಯಾಸಗಳೇ ‘The last Lecture’ ಕೃತಿ ಆಗಿದೆ. 34 ಲಕ್ಷ ಪ್ರತಿಗಳು ಮಾರಾಟವಾಗಿದ್ದೇ ಗೊತ್ತಾಗದಂತೆ ಇನ್ನೂ ಅವುಗಳನ್ನು ಖರೀದಿಸಿ ಓದುವ ಓದುಗರು ಹೆಚ್ಚುತ್ತಲೇ ಇರುವುದು ಈ ಕೃತಿಯ ಹೆಚ್ಚುಗಾರಿಕೆಯಾಗಿದೆ. ಕನ್ನಡಕ್ಕೆ ಅದನ್ನು ಅನುವಾದಿಸಿದ ಎಸ್ ಉಮೇಶ್ ರವರು ಅಭಿನಂದನಾರ್ಹರು.
ರ್ಯಾಂಡಿ ಪಾಶ್ “ಗಾಯಗೊಂಡ ಸಿಂಹವೂ ಘರ್ಜಿಸ ಬಯಸುತ್ತದೆ” ಎಂಬ ಲೇಖನದ ಆತನ ವಿಚಾರಗಳನ್ನು ಇಲ್ಲಿ ಲೇಖನಿಗೊಳಿಸುತ್ತಿದ್ದೇನೆ.

ಈ ಅಂತಿಮ ಉಪನ್ಯಾಸಗಳನ್ನು ಪ್ರಾರಂಭ ಮಾಡುವ ಹೊತ್ತಿಗಾಗಲೇ ರ್ಯಾಂಡಿ ಪಾಶ್ ‘ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ‘ಎಂದು ವೈದ್ಯರು ದೃಢಪಡಿಸಿದ್ದರು. ಅಲ್ಲದೇ ತನಗೆ ದೊರೆಯುತ್ತಿರುವ ಕ್ಯಾನ್ಸರ್ ಚಿಕಿತ್ಸೆ ವಿಫಲವಾಗಿದೆ ಎಂಬ ಆತಂಕಕಾರಿ ವಿಷಯವೂ ಬಂದಾಗಿತ್ತು. ರ್ಯಾಂಡಿಯ ಎಲ್ಲಾ ಸಾಧನೆಗಳಲ್ಲಿ ಜೊತೆಗಿರುವ ಸಂಗಾತಿ ಆತನ ಪತ್ನಿ ‘ಜೈ’. ಆದರೆ ಜೈ ಅಂತಿಮ ಉಪನ್ಯಾಸದ ಕುರಿತು ಸ್ವಲ್ಪ ನಿರುತ್ಸಾಹದಿಂದಲೇ ಇದ್ದಳು. ಯಾಕೆಂದರೆ ಆ ಸಮಯವನ್ನು ತನ್ನ ಪತಿ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಕಳೆಯಬೇಕೆಂಬ ಆಸೆ ಅವಳದಾಗಿತ್ತು. ಮರಣಾನಂತರ ಜೈ ಮತ್ತು ಮಕ್ಕಳು ಅವಳ ಪೋಷಕರೊಂದಿಗೆ ಇರಲೆಂದು ಫಿಟ್ಸಬರ್ಗ ನಿಂದ ಪಶ್ಚಿಮ ವರ್ಜಿನಿಯಾಗೆ ತನ್ನ ಕುಟುಂಬವನ್ನು ಸ್ಥಳಾಂತರಿಸುತ್ತಾನೆ. ತಾನು ಮರಣ ಹೊಂದುವುದರೊಳಗೆ ಪತ್ನಿಯ ಆಸೆಗಳನ್ನೆಲ್ಲ ಪೂರೈಸುವ ಶಪಥ ಮಾಡುತ್ತಾನೆ. ತನ್ನ ಸಾವಿನಿಂದ ಪತ್ನಿಯ ಮೇಲೆ ಬೀಳುವ ಭಾರವನ್ನು ಹಗುರಗೊಳಿಸುವುದು ಆತನ ಉದ್ದೇಶವಾಗಿತ್ತು. ಹೀಗಾಗಿ ಪಿಟ್ಸಬರ್ಗ ನಿಂದ ಪಶ್ಚಿಮ ವರ್ಜಿನಿಯಾಗೆ ತನ್ನ ಬದುಕಿನ ಪಯಣ ಬದಲಾಯಿಸುತ್ತಾನೆ!!
ಒಬ್ಬ ಕಂಪ್ಯೂಟರ್ ವಿಜ್ಞಾನಿಯಾಗಿದ್ದವರು ಇಂದು ಪರಿಣಾಮಕಾರಿಯಾಗಿ ಉಪನ್ಯಾಸ ನೀಡುವುದು ಕಷ್ಟ ಸಾಧ್ಯ. ಆ ಸಮಯದಲ್ಲಿ ರ್ಯಾಂಡಿ ಪಾಶ್ ತನ್ನಲ್ಲಿರುವ ಪೂರ್ಣ ಪ್ರತಿಭೆಯನ್ನು ಪ್ರದರ್ಶಿಸುವ ಪ್ರಯತ್ನ ಮಾಡಲೇಬೇಕಾಗಿತ್ತು.
ಅದೇ ಸಮಯಕ್ಕೆ ಜೈ ಳ 41ನೇ ಹುಟ್ಟುಹಬ್ಬ ಬಂದಿತ್ತು. ಅದರ ಹಿಂದಿನ ದಿನವೇ ಫಿಟ್ಸ್ ಬರ್ಗ್ ಗೆ ಉಪನ್ಯಾಸ ನೀಡಲು ಪ್ರಯಾಣಿಸಬೇಕಾಗಿತ್ತು. ಆಗ ಜೈ ಪತಿಗೆ “ಇದು ನಾನು ನಿನ್ನೊಂದಿಗೆ ಕಳೆಯಬಹುದಾದ ಕೊನೆಯ ಹುಟ್ಟುಹಬ್ಬ. ಇಂತಹ ಸಮಯದಲ್ಲಿ ನನ್ನನ್ನು ಬಿಟ್ಟು ದೂರ ಹೋಗಲು ನಿನಗೆ ಮನಸ್ತಾದರೂ ಹೇಗೆ ಬಂದೀತು” ಎಂದು ದೂರುತ್ತಾಳೆ. ಪತ್ನಿಯ ಈ ಪ್ರೀತಿ ತುಂಬಿದ ದೂರು ರ್ಯಾಂಡಿ ಪಾಶ್ ನ ಮನಸ್ಸನ್ನು ಸಂಕಷ್ಟಕ್ಕೆ ದೂಡಿತ್ತು. ಕೊನೆಗೆ ದಂಪತಿಗಳು ಡಾ. ಮೈಕೆಲ್ ರೈಸ್ ಬಳಿ ಹೋಗಿ ತಮ್ಮ ಸಮಸ್ಯೆ ಇಡುತ್ತಾರೆ. ಡಾ. ರೈಸ್ ಕುಟುಂಬದ ವ್ಯಕ್ತಿ ಒಬ್ಬರು ಮಾರಣಾಂತಿಕ ಕಾಯಿಲೆಯಿಂದ ನರಳುತ್ತಿರುವಾಗ ಅಂತಹ ಕುಟುಂಬಕ್ಕೆ ಮಾನಸಿಕ ಧೈರ್ಯ ತುಂಬುವುದರಲ್ಲಿ ಸಿದ್ಧಹಸ್ತರು. ಡಾ. ರೈಸ್ ಇವರ ಸಮಸ್ಯೆಯನ್ನು ಸೂಕ್ಷ್ಮವಾಗಿ ಗಮನಿಸಿದರು. ಜೈ ಪ್ರೀತಿಯ ಹೆಂಡತಿಯಾಗಿ ಪತಿಯೊಂದಿಗೆ ಪರಿಪೂರ್ಣ ಜೀವನ ನಡೆಸುವ ಮತ್ತು ಮಕ್ಕಳನ್ನು ಪೋಷಿಸಿ ಬೆಳೆಸುವ ಅದಮ್ಯ ಆಸೆ ಇರುವ ಹೆಣ್ಣಾಗಿ ಕಂಡಳು ರ್ಯಾಂಡಿ ಪಾಶ್ ಕುಟುಂಬದ ಮಧುರ ಬಾಂಧವ್ಯದಿಂದ ಹೊರಗೆ ಬರಲಾರದ ಮತ್ತು ಸಾವಿನ ಮನೆಯ ಕದತಟ್ಟಲು ಸಿದ್ಧನಿರದ ಗಂಡನಾಗಿ ಕಂಡನು. ತನ್ನ ಮುಂದೆ ಕುಳಿತ ದಂಪತಿಗಳು ಒಬ್ಬರ ಕೈ ಇನ್ನೊಬ್ಬರು ಹಿಡಿದು ಕಣ್ಣೀರಿಡುವುದನ್ನು ಕಂಡ ಡಾ. ರೈಸ್ ಇವರಿಬ್ಬರ ನಡುವೆ ಮೂಗು ತೂರಿಸಲು ಒಪ್ಪಲಿಲ್ಲ. ಈ ಸಮಸ್ಯೆಯನ್ನು ನೀವಿಬ್ಬರೇ ಕುಳಿತು ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬನ್ನಿ ಎಂದು ಸಲಹೆ ನೀಡಿದರು.
ಮನೆಗೆ ಮರಳಿದ ರ್ಯಾಂಡಿ ಪಾಶ್ ನ ಮನದಲ್ಲಿ ಹಲವಾರು ಪ್ರಶ್ನೆಗಳು ಉದ್ಭವಿಸುತ್ತವೆ. “ಈ ಉಪನ್ಯಾಸ ನನಗೇಕೆ ಅಷ್ಟು ಮುಖ್ಯವಾಗಿದೆ? ಇದು ನಾನಿನ್ನು ಬದುಕಿದ್ದೇನೆಂದು ಜಗತ್ತಿಗೆ ತಿಳಿಸುವ ಪ್ರಯತ್ನವೇ? ನನ್ನಲ್ಲಿ ಇನ್ನು ಸಾಧಿಸುವ ಛಲ ಇದೆ ಎಂದು ಸಾರಿ ಹೇಳುವ ತವಕವೇ? ಎಂಬ ಪ್ರಶ್ನೆಗಳು ಕಾಡಿದವು. ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ‘ಹೌದು’ ಎಂದಾಗಿತ್ತು”. ಎಂದು ರ್ಯಾಂಡಿ ಹೇಳುತ್ತಾನೆ ಗಾಯಗೊಂಡ ಸಿಂಹ ತನಗೆ ಇನ್ನೂ ಗರ್ಜಿಸಲು ಸಾಧ್ಯವೇ ಎಂದು ಪರೀಕ್ಷಿಸಿಕೊಳ್ಳುತ್ತದೆ. ಅಂತೇ ಇದೂ ಸಹ ನನ್ನ ಗೌರವ ಮತ್ತು ಸ್ವಾಭಿಮಾನದ ಪ್ರಶ್ನೆಯಾಗಿತ್ತು ಆದರೆ ಈ ಸ್ವಾಭಿಮಾನ ಅಹಂಕಾರಕ್ಕಿಂತ ಭಿನ್ನವಾಗಿತ್ತು ಎನ್ನುವುದು ರಾಂಡಿಯ ಮಾತಾಗಿದೆ.

“ಕಾರ್ನಿಗಿ ವಿಶ್ವವಿದ್ಯಾನಿಲಯದ ಆಯೋಜಕರಿಗೆ ಹೇಳಿ ನನ್ನ ಈ ಉಪನ್ಯಾಸವನ್ನು ವಿಡಿಯೋ ಚಿತ್ರೀಕರಿಸುವ ವ್ಯವಸ್ಥೆ ಮಾಡುತ್ತೇನೆ ಮತ್ತು ಅದರ ಒಂದು ಡಿವಿಡಿಯನ್ನು ನಿನಗೆ ಕೊಡುತ್ತೇನೆ. ಮಕ್ಕಳು ದೊಡ್ಡವರಾದಾಗ ಬಹುಶಃ ಈ ಡಿವಿಡಿಯನ್ನು ತೋರಿಸಿದರೆ ನಾನು ಯಾರು? ಹೇಗಿದ್ದೆ? ನನ್ನ ಆಸೆ ಆಕಾಂಕ್ಷೆಗಳು ಏನಿದ್ದವು ?ಎಂಬ ಪ್ರಶ್ನೆಗಳಿಗೆ ಖಂಡಿತ ನನ್ನ ಮಕ್ಕಳಿಗೆ ಉತ್ತರಿಸಿ ಸಿಗುತ್ತದೆ.” ಎಂದು ಪತ್ನಿ ಜೈ ಗೆ ರ್ಯಾಂಡಿ ಹೇಳುತ್ತಾನೆ. ಅವನ ಈ ಮಾತಿನಲ್ಲಿ ಎಷ್ಟು ನೋವು, ಮಕ್ಕಳ ಜೊತೆ ಇರಬೇಕೆಂಬ ಹಂಬಲ, ಮುಂದೆ ತಾನೇ ಇರದ ಕಾಲದಲ್ಲಿ ಮಕ್ಕಳಿಗೆ ತನ್ನ ಕುರಿತು ತಿಳಿಯಲಿ ಎಂಬ ಬಯಕೆ ಎಷ್ಟು ಅದಮ್ಯವಾಗಿತ್ತು !!ಎನ್ನುವುದು ತಿಳಿದು ಬರುತ್ತದೆ. ಜೈ ಮನೆಯಲ್ಲಿಯೇ ವಿಡಿಯೋ ಚಿತ್ರೀಕರಣ ಮಾಡೋಣ ಎಂದಾಗ ರ್ಯಾಂಡಿ ವಿದ್ಯಾರ್ಥಿಗಳ ನಗು, ಚಪ್ಪಾಳೆ ಇದ್ದರೇ ಮಾತ್ರ ನನ್ನ ಉಪನ್ಯಾಸಕ್ಕೆ ಒಂದು ಅರ್ಥ ಬರುವುದು ಎಂದಾಗ ಜೈ ಮುಗುಳ್ನಗೆಯೊಂದಿಗೆ ಸಮ್ಮತಿಸುತ್ತಾಳೆ.
ಬದುಕಿನ ಯಾವ ಘಟನೆಗಳು ಇತರರಿಗಿಂತ ನನ್ನನ್ನು ಭಿನ್ನವಾಗಿಸುತ್ತದೆ ? ಬಹು ಮುಖ್ಯವಾದ ಈ ಪ್ರಶ್ನೆಗೆ ಕೇಳುಗರ ಮುಂದೆ ಸಮರ್ಪಕವಾಗಿ ರ್ಯಾಂಡಿ ಉಪನ್ಯಾಸಗಳಲ್ಲಿ ಉತ್ತರಿಸಬೇಕಾಗಿತ್ತು!! ಪ್ರತಿ ವರ್ಷ ಅಮೆರಿಕಾದಲ್ಲಿ 37 ಸಾವಿರಕ್ಕೂ ಹೆಚ್ಚು ಜನ ಜಠರದ ಕ್ಯಾನ್ಸರ್ ಇಂದ ಸಾಯುತ್ತಿದ್ದರು. ಹಾಗಾದರೆ ನನ್ನ ವ್ಯಕ್ತಿತ್ವವನ್ನು ಅನಾವರಣಗೊಳಿಸಿಕೊಳ್ಳುವುದು ಹೇಗೆ ಒಬ್ಬ ಶಿಕ್ಷಕನಾಗಿಯೋ? ಒಬ್ಬ ಕಂಪ್ಯೂಟರ್ ವಿಜ್ಞಾನಿಯಾಗಿಯೋ? ಗಂಡನಾಗಿಯೋ? ತಂದೆಯಾಗಿಯೋ? ಮಗನಾಗಿಯೋ? ಗೆಳೆಯನಾಗಿಯೋ? ಅಥವಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕನಾಗಿಯೋ, ಹೇಗೆ ? ಈ ಎಲ್ಲಾ ಪಾತ್ರಗಳನ್ನು ನಾನು ಬಹಳವಾಗಿ ಗೌರವಿಸುವೆ. ಇವುಗಳಲ್ಲಿ ಯಾವುದಾದರೂ ಒಂದು ನನ್ನನ್ನು ಇತರರಿಗಿಂತ ಭಿನ್ನವಾಗಿಸುತ್ತದೆ? ಎಂದು ಯೋಚಿಸುತ್ತಿದ್ದ ರ್ಯಾಂಡಿಗೆ ಮಿಂಚಿನಂತೆ ಉತ್ತರ ಹೊಳೆಯಿತು. ತಕ್ಷಣವೇ ಲ್ಯಾಪ್ ಟಾಪ್ ನೊಂದಿಗೆ ಕುಳಿತು ಸಂಘಟಕರಿಗೊಂದು ಇ-ಮೇಲ್ ಬರೆದ. ಉಪನ್ಯಾಸದ ಶಿರೋನಾಮೆಯನ್ನು ತಿಳಿಸಿದ. ಅದರ ಶೀರ್ಷಿಕೆ “ಬಾಲ್ಯದ ಕನಸನ್ನು ಸಾಕಾರಗೊಳಿಸುವುದು ಹೇಗೆ?” ಎಂಬುದಾಗಿತ್ತು.
ಮುಂದುವರೆಯುವುದು.
- ಶಾರದಾ ಶ್ರಾವಣಸಿಂಗ್ ರಜಪೂತ
