ತೆಲುಗಿನ ಪಿ. ಚಂದ್ ಅವರ ‘ಭೂದೇವಿ’ ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಧನಪಾಲ ನಾಗರಾಜಪ್ಪನವರು, ಕೃತಿಯ ಕುರಿತು ಉತ್ತಮ ಎ. ದೊಡ್ಮನಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಕೃತಿ : ಭೂದೇವಿ (ಕಾದಂಬರಿ)
ತೆಲುಗು ಮೂಲ : ಪಿ. ಚಂದ್
ಕನ್ನಡಾನುವಾದ : ಧನಪಾಲ ನಾಗರಾಜಪ್ಪ
ಪ್ರಕಾಶಕರು : ನವಕರ್ನಾಟಕ ಪಬ್ಲಿಕೇಷನ್ಸ್
ಭೂದೇವಿ- ಅಭಿವೃದ್ಧಿಯ ಹೆಸರಿನಲ್ಲಿ ಮಣ್ಣಾದ ಬದುಕು
ಈ ಕಾದಂಬರಿಯೂ ನೀರಿನ ಹರಿವಿನಂತೆ ಎಲ್ಲಿಯೂ ನಿಲ್ಲದೆ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಓದುಗರನ್ನು ಕಥೆಯ ಪಾತ್ರಗಳೊಂದಿಗೆ ಸುತ್ತಾಡಿಸುತ್ತಾ, ಕೆಲವೊಮ್ಮೆ ಮಂತ್ರಮುಗ್ಧರನ್ನಾಗಿಸುತ್ತದೆ.

ಲೇಖಕರಾದ ಧನಪಾಲ ನಾಗರಾಜಪ್ಪನವರು ನನಗೆ ಪರಿಚಯವಾಗಿ ಸುಮಾರು ಐದಾರು ವರ್ಷಗಳಾಗಿರಬಹುದು. ಮುಖಾಮುಖಿಯಾಗಿ ಭೇಟಿಯಾಗಿಲ್ಲ. ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ಅವರು, ಅಂದಿನಿಂದ ಇಂದಿನವರೆಗೂ ತಮ್ಮ ಬರಹಗಳ ಮೂಲಕವೇ ನನ್ನೊಂದಿಗೆ ಭೇಟಿಯಾಗುತ್ತ ಬಂದಿದ್ದಾರೆ.
ತೆಲುಗು ಭಾಷೆಯ ಆಧುನಿಕ ವಚನ ಪ್ರಕಾರವಾದ “ಅಬಾಬಿ” ಎಂಬ ಸಾಹಿತ್ಯ ಪ್ರಕಾರವನ್ನು ಕನ್ನಡಕ್ಕೆ ಪರಿಚಯಿಸಿದ ಧನಪಾಲ ನಾಗರಾಜಪ್ಪನವರು ಅನುವಾದಕರಾಗಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಅವರು ಅನುವಾದಿಸಿರುವ ‘ಭೂದೇವಿ’ ತೆಲುಗಿನ ಪಿ. ಚಂದ್ ಅವರ ಕಾದಂಬರಿ. ಇದು ಓಪನ್ ಕಾಸ್ಟ್ ಗಣಿಗಾರಿಕೆಯ ಹಿನ್ನೆಲೆಯಲ್ಲಿ ತಮ್ಮ ಭೂಮಿಯನ್ನು ಗಣಿ ಮಾಲೀಕರಿಗೆ ಮಾರಿ, ಅಂತಿಮವಾಗಿ ತಮ್ಮ ಬದುಕನ್ನೇ ಕಳೆದುಕೊಂಡವರ ಕಥೆ. ಕಾದಂಬರಿಯ ಹೆಸರೇ ಸೂಚಿಸುವಂತೆ ‘ಭೂದೇವಿ’ ಇಲ್ಲಿ ಕೇವಲ ಒಂದು ಪಾತ್ರವಲ್ಲ; ಭೂಮಿಯೇ ಒಂದು ಜೀವಂತ ಪಾತ್ರವಾಗಿ ಕಾಣಿಸಿಕೊಳ್ಳುತ್ತದೆ.
ಭೂಮಿಯ ಒಡಲನ್ನು ಸೀಳಿ, ಕಲ್ಲಿದ್ದಲನ್ನು ಹೊರತೆಗೆಯುವುದನ್ನು ಅಭಿವೃದ್ಧಿಯ ಹೆಸರಿನಲ್ಲಿ ಸಮರ್ಥಿಸುವ ವ್ಯವಸ್ಥೆ, ಅಲ್ಲಿನ ಜನರನ್ನು ಹೆದರಿಸಿ, ಬೆದರಿಸಿ, ಆಸೆ-ಆಮಿಷಗಳನ್ನು ತೋರಿಸಿ ಅವರ ಭೂಮಿಯನ್ನು ಕಸಿದುಕೊಳ್ಳುವ ಕಥೆಯನ್ನು ಕಾದಂಬರಿ ಕಟ್ಟಿಕೊಡುತ್ತದೆ. ತೆಲಂಗಾಣದ ಗಣಿಗಾರಿಕೆಯ ಪ್ರದೇಶಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ಜನರನ್ನು ತಮ್ಮ ನೆಲದಿಂದ ದೂರ ಸರಿಸಿ, ಮತ್ತೆ ದುಡಿಮೆಯ ಬದುಕಿಗೆ ತಳ್ಳುವ ವ್ಯವಸ್ಥೆಯ ಕರಾಳ ಮುಖವನ್ನು ಕಾದಂಬರಿ ತೆರೆದಿಡುತ್ತದೆ.
“ಈ ನೆಲದಲ್ಲಿ ಹುಟ್ಟಿದ ತಪ್ಪಿಗೆ ಪಾಪವೆಲ್ಲ ನಮ್ಮದೇ” ಎಂಬ ಸಾಯಣ್ಣನ ಮಾತುಗಳು ಕಾದಂಬರಿಯ ನೋವಿನ ಕೇಂದ್ರಬಿಂದುವಿನಂತೆ ಭಾಸವಾಗುತ್ತವೆ. ತಮ್ಮ ನೋವನ್ನು ಕೇಳುವವರಿಲ್ಲ; ತಾವು ಹುಟ್ಟಿ ಬೆಳೆದ ನೆಲದಿಂದಲೇ ತಮ್ಮನ್ನು ದೂರ ತಳ್ಳಲಾಗುತ್ತಿದೆ ಎಂಬ ಅಸಹಾಯಕತೆ ಆ ಮಾತುಗಳಲ್ಲಿ ವ್ಯಕ್ತವಾಗುತ್ತದೆ. ಕಾದಂಬರಿಯ ವೆಂಕಟೇಶ, ಮಲ್ಲೇಶ, ರಾಜರಿ, ಮುಖ್ಯವಾಗಿ ಭೂದೇವಿ ಮತ್ತು ಸಾಯಣ್ಣನಂತಹ ಪಾತ್ರಗಳು ಒಂದು ಬದಿಯಲ್ಲಿ ನಿಂತರೆ, ಊರಿನ ಸರಪಂಚ್, ಪೊಲೀಸರು, ಸರ್ಕಾರ ಹಾಗೂ ಕಂಪನಿಯವರು ಮತ್ತೊಂದು ಬದಿಯಲ್ಲಿ ನಿಲ್ಲುತ್ತಾರೆ. ಹೀಗೆ ಭೂಮಿಯ ಮಾಲೀಕರು ಮತ್ತು ಕೂಲಿ ಕಾರ್ಮಿಕರು, ಮತ್ತೊಂದೆಡೆ ಅಧಿಕಾರ ಮತ್ತು ಬಂಡವಾಳ—ಇವರ ನಡುವಿನ ಸಂಘರ್ಷವನ್ನು ಕಾದಂಬರಿ ಕಟ್ಟಿಕೊಡುತ್ತದೆ.

ದೊಡ್ಡ ದೊಡ್ಡ ಭೂ ಹಿಡುವಳಿದಾರರು ತಮ್ಮ ಭೂಮಿಯನ್ನು ಮಾರಿ ಬೇರೆಡೆ ನೆಲೆಸುವರು. ಕೈಗೆ ಹಣ ಬಂದ ನಂತರ ದುಡಿಮೆಯಿಂದ ದೂರವಾದ ಕೆಲವರು ಬದುಕಿನ ಅರ್ಥವನ್ನೇ ಕಳೆದುಕೊಳ್ಳುವರು. ಮತ್ತೊಂದೆಡೆ, ನೆಲ ಕಳೆದುಕೊಂಡ ಜನರು ನೀರು, ಹಸಿವು ಮತ್ತು ಬದುಕಿನ ಮೂಲಭೂತ ಅಗತ್ಯಗಳಿಗಾಗಿ ತಮ್ಮ ಬದುಕನ್ನೇ ಬಲಿಕೊಡಬೇಕಾದ ಪರಿಸ್ಥಿತಿಗೆ ತಳ್ಳಲ್ಪಡುವರು. ಜಾಗತೀಕರಣ ಮತ್ತು ನಗರೀಕರಣದ ಹೆಸರಿನಲ್ಲಿ ಹಳ್ಳಿಗಳನ್ನು ನಾಶಪಡಿಸಿ, ಅದನ್ನೇ ಅಭಿವೃದ್ಧಿ ಎಂದು ಬೀಗುವ ಆಡಳಿತ ವ್ಯವಸ್ಥೆಯ ವಿರುದ್ಧವೂ ಕಾದಂಬರಿ ಪ್ರಶ್ನೆಗಳನ್ನು ಎತ್ತುತ್ತದೆ. ಅಭಿವೃದ್ಧಿ ಯಾರಿಗಾಗಿ? ಅದರ ಬೆಲೆ ತೆರಬೇಕಾಗಿರುವವರು ಯಾರು? ತಮ್ಮ ನೆಲ ಕಳೆದುಕೊಂಡವರ ನೋವಿಗೆ ಹೊಣೆಗಾರರು ಯಾರು? ಎಂಬ ಪ್ರಶ್ನೆಗಳು ಓದುಗರ ಮನದಲ್ಲಿ ಉಳಿಯುತ್ತವೆ.
“ಗಾಯಗೊಂಡವರೇ ತಮ್ಮ ಗಾಯಗಳಿಗೆ ಮುಲಾಮು ಹಚ್ಚಬೇಕು” ಎಂಬ ಭಾವನೆ ಕಾದಂಬರಿಯ ಅನೇಕ ಸಂದರ್ಭಗಳಲ್ಲಿ ಪ್ರತಿಧ್ವನಿಸುತ್ತದೆ. ತಮ್ಮ ಪರವಾಗಿ ನಿಲ್ಲಬೇಕಾದವರು ಯಾರೂ ಇಲ್ಲದಾದಾಗ, ತಮ್ಮ ನೋವನ್ನು ತಾವೇ ಹೊತ್ತುಕೊಂಡು ಹೋರಾಡಬೇಕಾದ ಅನಿವಾರ್ಯತೆ ಪಾತ್ರಗಳ ಬದುಕಿನಲ್ಲಿ ಕಾಣಿಸುತ್ತದೆ.
ಕೊನೆಗೆ ಕಂಪನಿಯ ಮೋಸವನ್ನು ಅರಿಯುವ ಭೂದೇವಿ ತನ್ನ ಪ್ರಾಣವನ್ನೇ ಅರ್ಪಿಸುವ ಮೂಲಕ ಕಾದಂಬರಿ ಅಂತ್ಯಗೊಳ್ಳುತ್ತದೆ. ಆ ಅಂತ್ಯ ಓದುಗರ ಮನಸ್ಸಿನಲ್ಲಿ ಬಹುಕಾಲ ಉಳಿಯುವಂತಹದ್ದು. ಒಟ್ಟಿನಲ್ಲಿ, ‘ಭೂದೇವಿ’ ಕೇವಲ ಗಣಿಗಾರಿಕೆಯ ಕಥೆಯಲ್ಲ; ಅದು ಭೂಮಿ, ಮನುಷ್ಯ, ಬಂಡವಾಳ, ಅಭಿವೃದ್ಧಿ ಮತ್ತು ಬದುಕಿನ ನಡುವಿನ ಸಂಘರ್ಷದ ಕಥೆ. ಹಣದ ಆಸೆಗಾಗಿ ಭೂಮಿಯನ್ನು ಮಾರಿದವರು ಕಳೆದುಕೊಂಡದ್ದು ಕೇವಲ ತಮ್ಮ ಹೊಲವನ್ನಲ್ಲ; ತಮ್ಮ ಬದುಕಿನ ನೆಲೆಯನ್ನೇ ಎಂಬುದನ್ನು ಕಾದಂಬರಿ ಮನಮುಟ್ಟುವಂತೆ ಹೇಳುತ್ತದೆ.
- ಉತ್ತಮ ಎ. ದೊಡ್ಮನಿ
