‘ಚೆನ್ನಭೈರಾದೇವಿ’ ಕೃತಿ ಪರಿಚಯ

ಕಾದಂಬರಿಕಾರರಾದ ಡಾ.ಗಜಾನನ ಶರ್ಮ ಅವರ ‘ಚೆನ್ನಭೈರಾದೇವಿ’ ಕಾದಂಬರಿಯು ಕರ್ನಾಟಕದ ರಾಣಿಯರಲ್ಲಿ ವಿಶಿಷ್ಟ ಸ್ಥಾನ ಪಡೆದವರಲ್ಲಿ ಒಬ್ಬರು. ಈ ಕೃತಿಯ ಕುರಿತು ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಪುಸ್ತಕ : ಚೆನ್ನಭೈರಾದೇವಿ
ಲೇಖಕರು: ಡಾ.ಗಜಾನನ ಶರ್ಮ
ಪ್ರಕಾಶನ : ಅಂಕಿತ ಪ್ರಕಾಶನ
ಬೆಲೆ : 395/-
ಪುಟ : 432

ಅದಕ್ಕೆ ಕಾರಣ ಅವಳು ಇತರರಂತೆ ಯುದ್ಧಾಕಾಂಕ್ಷಿಯಾಗಲಿ, ರಾಜ್ಯ ವಿಸ್ತರಣೆಗಾಗಿ ಪ್ರಯತ್ನ ಮಾಡದೆ, ಇರುವುದನ್ನು ಉಳಿಸಿಕೊಂಡು ಪ್ರಜೆಗಳ ಹಿತರಕ್ಷಣೆಗೆ ಹಲವಾರು ಯೋಜನೆಗಳನ್ನು ರೂಪಿಸಿ ಅವನ್ನು ಜಾರಿಗೊಳಿಸಿ, ಐದು ದಶಕಗಳಿಗೂ ಮಿಕ್ಕಿ ರಾಜ್ಯವಾಳಿ ,ಬಹುಶಃ ನಭೂತೋ ನಭವಿಷ್ಯತಿ ಎನ್ನುವಂತೆ ಸರ್ವಪ್ರಜೆಗಳ ಪ್ರೀತಿಗೆ ಪಾತ್ರಳಾಗಿದ್ದಳು. ಅದಕ್ಕೆ ಅವರ ಸರ್ವಾಂಗೀಣ ಅಭಿವೃದ್ಧಿಗೆ ಅವಳು ವಹಿಸಿದ ಶ್ರಮ ಮತ್ತು ದೂರದೃಷ್ಟಿಯೇ ಕಾರಣ‌ ಎಂದರೆ ಉತ್ಪ್ರೇಕ್ಷೆಯಲ್ಲ. ಇಂತಹ ರಾಣಿಯ ಕುರಿತು ಇಲ್ಲಿಯವರೆಗೆ ಕರ್ನಾಟಕ ಇತಿಹಾಸ ಮತ್ತು ಸಂಸ್ಕೃತಿಗೆ ತಕ್ಕ ಪ್ರಾತಿನಿಧ್ಯ ದೊರೆಯದೆ ಇರುವುದನ್ನು ಮನಗಂಡು, ಮೂಲತಃ ಇಂಜಿನಿಯರ್ ಆದ ಲೇಖಕರು ಅಪೂರ್ವವಾದ ಪರಿಶ್ರಮ ಮತ್ತು ಅಧ್ಯಯನ ಶೀಲತೆಯಿಂದ, ತಮ್ಮ ಬಾಲ್ಯಕಾಲದ ಭಾವಕೋಶದ ಭಾಗವಾಗಿದ್ದ ಚೆನ್ನಭೈರಾದೇವಿಯ ಕುರಿತು ಅಪೂರ್ವ ಎನ್ನುವಂತೆ ಒಂದು ಐತಿಹಾಸಿಕ ಕಾದಂಬರಿಯನ್ನು ರಚಿಸಿದ್ದಾರೆ. ಆದು ಏಕಕಾಲಕ್ಕೆ ಅವಳ ವೈಯಕ್ತಿಕ ವ್ಯಕ್ತಿತ್ವದ ವಿಕಸನದ ಚಿತ್ರವಾಗಿರುವಂತೆ, ಉತ್ತರ ಕನ್ನಡದ ಮಧ್ಯಕಾಲೀನ ಯುಗದ ಕೈಗನ್ನಡಿಯಾಗಿದೆ.

ಈ ಕಾದಂಬರಿಯ ವೈಶಿಷ್ಟ್ಯವೆಂದರೆ ಮುಗ್ಧ ಬಾಲಕಿಯೊಬ್ಬಳು ವಿದಗ್ಧಳಾಗಿ‌ ಬೆಳೆದು ನಿಂತ ಪರಿಯನ್ನು ಅಂದಿನ ಐತಿಹಾಸಿಕ ಹಿನ್ನೆಲೆಯಲ್ಲಿ ಅನನ್ಯವಾದ ರೀತಿಯಲ್ಲಿ ಕಟ್ಟಿಕೊಟ್ಟಿರುವುದು. ಅವಳ ವೈಯಕ್ತಿಕ ವ್ಯಕ್ತಿತ್ವದ ವಿಕಾಸಕ್ಕೆ ನಾಲ್ವರು ಪ್ರಧಾನ ಕಾರಣಕರ್ತರು. ಅವಳ ಅಧ್ಯಯನದಲ್ಲಿ ಅವನ ಸಹಪಾಠಿಯಾಗಿದ್ದ ಜಿನೇಂದ್ರ, ಪ್ರಧಾನಿ ಸಭಾ ಪುರೋಹಿತರು, ಮಾತೃವಾತ್ಸಲ್ಯ ಉಣಿಸಿದ ಜಿನೇಂದ್ರನ ತಾಯಿ ನಾಗಬ್ಬೆ, ಅವಳಿಗೆ ಕಲಿಸಿದ ವರ್ಧಮಾನ ಸಿದ್ಧಾಂತಿ ಗುರುಗಳು. ಜಿನೇಂದ್ರ ಕೇವಲ ಅವಳ ಸಹಪಾಠಿ ಮಾತ್ರವಲ್ಲದೆ, ಅವಳ ಒಡನಾಡಿಯಾಗಿ ತನ್ನ ಸ್ನೇಹ ಮತ್ತು ತಾತ್ವಿಕ ಚಿಂತನೆಗಳ ಮೂಲಕ ಅವಳ ಮೇಲೆ ಅಪಾರ ಪ್ರಭಾವ ಬೀರುತ್ತಾನೆ. ಅವರಿಬ್ಬರ ನಡುವಿನ ಸಾಮರಸ್ಯವನ್ನು ತಪ್ಪಾಗಿ ಗ್ರಹಿಸಿ,ಅವನ ಮೇಲೆ ಅವಳ ಮಾವ ಕೃಷ್ಣರಸ ದೌರ್ಜನ್ಯ ಎಸಗಿ, ಅವರು ಭೌತಿಕವಾಗಿ ದೂರವಾಗುವಂತೆ ಮಾಡಿದರೂ,ಇದ್ದ ಕಡೆಯಿಂದಲೇ ಅವನು ಅವಳ ಮತ್ತು ರಾಜ್ಯದ ಹಿತಾಕಾಂಕ್ಷೆಯನ್ನು ಬಯಸುವುದು, ಅವರ ಅಪೂರ್ವ ಸಂಬಂಧಕ್ಕೆ ಸಾಕ್ಷಿಯಾಗಿದೆ. ಅವಳ ಬಾಲ್ಯದ ಗೆಳತಿಯಂತೆ ಬಂದು ಅವಳ ತೆಕ್ಕೆಗೆ ಬಿದ್ದ ಗೌರಿ ,ಮುಂದೆ ಶಬಲೆಯಾಗಿ ಹಲವಾರು ಹೊಣೆಗಾರಿಕೆಗಳನ್ನು ಸಮರ್ಥವಾಗಿ ನಿಭಾಯಿಸುವುದರ ಮೂಲಕ, ಅವಳ ಮೆಚ್ಚುಗೆಗೆ ಪಾತ್ರವಾಗಿ ಕೊನೆಯವರೆಗೂ ಜೀವದ ಗೆಳತಿಯರಾಗಿಯೇ ಉಳಿಯುವುದು, ಅವರ ಅಪೂರ್ವ ಗೆಳೆತನಕ್ಕೆ ನಿದರ್ಶನ.

ಅವಳನ್ನು ಬಾಲ್ಯದಿಂದಲೇ ಬಲ್ಲ ಪ್ರಧಾನಿ ಸಭಾ ಪುರೋಹಿತರು ಅವಳಿಗೆ ರಾಜ್ಯದ ಹಿತಾಕಾಂಕ್ಷೆಯನ್ನು ಕಾಯ್ದುಕೊಳ್ಳಲು, ಅಭಿವೃದ್ಧಿಯನ್ನು ಸಾಧಿಸಲು ನೆರವಾಗುತ್ತಾರೆ. ಇದರಿಂದ ಅವರ ಸಂಬಂಧ ಕೇವಲ ರಾಜಕೀಯ ಮಾತ್ರವಾಗಿ ಉಳಿಯದೆ ತಂದೆ ಮಗಳ ಸಂಬಂಧದಂತೆ ಗಟ್ಟಿಯಾಗಿ ,ಅವಳು ತಪ್ಪಿದಾಗ ಅವರು ಬೈದು ಬುದ್ಧಿ ಹೇಳುವುದು,ಅವರ ನಿಸ್ಪೃಹತಗೆ ನಿದರ್ಶನ. ಇದರಿಂದಾಗಿ ಅವರು ಐದು ದಶಕಗಳ ಕಾಲ ನಿರಂತರವಾಗಿ ಅವಳ ಜೊತೆ ನಿಂತು ಮಾರ್ಗದರ್ಶನ ಮಾಡಲು ಸಾಧ್ಯವಾಗುತ್ತದೆ.

ಅವಳು ಕಲಿಯುವಾಗ ಅವಳಿಗೆ ಮಾತೃ ಪ್ರೇಮದ ಸುಧೆಯನ್ನು ಉಣಿಸಿದ ನಾಗಬ್ಬೆಯ ಕೊನೆಯ ಬಯಕೆಯಾಗಿದ್ದ ಅವರ ಒಬ್ಬನೇ ಮಗ ಜಿತೇಂದ್ರ ನಾಪತ್ತೆಯಾದಾಗ, ಅವರಿಗೆ ಪತ್ತೆ ಹಚ್ಚಿ ತರುವೆನೆಂದು ಮಾತು ಕೊಟ್ಟು ಈಡೇರಿಸಲು ಸಾಧ್ಯವಾಗದ್ದು ಅವಳ ಕೊರಗಿಗೆ ಕಾರಣ.ಆದರೆ ಅವಳ ಆಧ್ಯಾತ್ಮಿಕ ವಿಕಾಸಕ್ಕೆ ಅವಳ ವರ್ಧಮಾನ ಸಿದ್ಧಾಂತಿಗಳೇ ಕಾರಣ. ಅದು ಪ್ರಕಟಗೊಳ್ಳುವುದು ಕೊನೆಯಲ್ಲಿ ಜೈನ ಧರ್ಮಕ್ಕೆ ಸೇರಿದ ಅವಳು ಪಂಚಾಣುವ್ರತ ಮತ್ತು ಸಲ್ಲೇಖನದ ಮೂಲಕ ದೇಹ ತ್ಯಾಗ ಮಾಡಿದಾಗ ಅವಳು ನಾಗಬ್ಬೆಯನ್ನು ಅನುಸರಿಸುತ್ತಾಳೆ. ಇದಕ್ಕೂ ಮೊದಲು ಅವಳು ಬಾಲ್ಯದ ಒಡನಾಡಿ ಮಾರ್ಗದರ್ಶಿ ಜಿನೇಂದ್ರ ದೂರದ ಪೋರ್ಚುಗಲ್ ನಲ್ಲಿ ,ಇದೆ ಸಲ್ಲೇಖನದಿಂದ ಇಲ್ಲವಾಗುವುದು ಸಮಾನಾಂತರವಾಗಿದೆ.

ಆದರೆ ಅವಳು ಈ ಆಧ್ಯಾತ್ಮಿಕ ವಿಕಾಸ ಅವಳ ಲೌಕಿಕ ಸಾಧನೆಗೆ ಅಡ್ಡಿ ಬರುವುದಿಲ್ಲ. ಏಕೆಂದರೆ ಅಲ್ಲಿ ಅವಳಿಗೆ ಅವಳ ‌ವೈಯಕ್ತಿಕ ವ್ಯಕ್ತಿತ್ವದ ವಿಕಾಸಕ್ಕಿಂತ, ಇಡೀ ರಾಜ್ಯದ ಜನತೆಯ ವಿಕಾಸದಲ್ಲಿ ಅವಳಿಗೆ ಆಸಕ್ತಿ. ಅದರ ಪರಿಣಾಮವಾಗಿ ಅವಳು ಕೈಗೊಂಡ ಉಪಕ್ರಮಗಳು ಅಲ್ಲಿನ ಸರ್ವಜನಾಂಗದ ಶಾಂತಿಯ ತೋಟದ ನಿರ್ಮಾಣಕ್ಕೆ ಅನುವು ಮಾಡಿಕೊಡುತ್ತದೆ. ಇದಕ್ಕೆ ಅಲ್ಲಿ ಬಂದು ನೆಲೆಸಿದ ಸಾರಸ್ವತ ಜನಾಂಗವಾಗಲಿ, ಅಲ್ಲಿಯವರೆ ಆದ ಅಡಿಕೆ ಬೆಳೆಗಾರರಾದ ಹವ್ಯಕರು, ಕರಿಮೆಣಸಿನ ಬೆಳೆ ಮತ್ತು ಅದರ ಮಾರಾಟಕ್ಕೆ ಅವಳು ಕೊಟ್ಟ ಪ್ರೋತ್ಸಾಹ, ಆ ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಭದ್ರಬುನಾದಿಯನ್ನು ಹಾಕಿ ಸಮೃದ್ಧಿಯ ಸ್ಥಿತಿಗೆ ತರಲು ಕಾರಣವಾಯಿತು.ಅಲ್ಲದೆ ಅವಳನ್ನು ಹೊರಗಿನವರು ‘ಕರಿಮೆಣಸಿನ ರಾಣಿ’ ಎಂದು ಗುರುತಿಸಿ ಗೌರವಿಸುವುದು ಸಾಧ್ಯವಾಗುತ್ತದೆ.ಆದರೆ ಆ ರಾಜ್ಯದ ಈ ಸಮೃದ್ಧಿಯೆ ಉಳಿದ ರಾಜ್ಯಗಳಲ್ಲಿ ಕಣ್ಣು ಕಸರಿಗೆ ಕಾರಣವಾಗಿ ಅವಳ ರಾಜ್ಯದ ಮೇಲಿನ ದಾಳಿಗೆ ಕೂಡಾ ಕಾರಣವಾಗಿ, ಅವಳಿಗೆ ಇಷ್ಟವಿಲ್ಲದಿದ್ದರೂ ಸ್ವರಕ್ಷಣೆಗಾಗಿ ಯುದ್ಧದಲ್ಲಿ ತೊಡಗುವುದು ಅವಳಿಗೆ ಅನಿವಾರ್ಯವಾಗುತ್ತದೆ. ಕೆಳದಿ ಅರಸರು,ಬಿಜಾಪುರದ ಸುಲ್ತಾನರು ಪೋರ್ಚುಗೀಸರು ಅವಳ ರಾಜ್ಯದ ಮೇಲೆ ಮಾಡಿದ ದಾಳಿಗಳಿಗೆ ನಿದರ್ಶನಗಳು. ಪೋರ್ಚುಗೀಸರು ಗೋವಾದಲ್ಲಿ ನಡೆಸಿದ ಮತಾಂತರದ ಅತಿರೇಕಗಳ ಫಲವಾಗಿ ಅವರ ಕಿರುಕುಳ ತಾಳಲಾರದೇ ಇವಳ ರಾಜ್ಯಕ್ಕೆ ಬಂದ ಅನೇಕರಿಗೆ ಅವಳು ಆಶ್ರಯಕೊಡುತ್ತಾಳೆ.

ಅಲ್ಲದೆ , ತನ್ನ ರಾಜಕೀಯ ಮುತ್ಸದ್ದಿತನದಿಂದ ಅವರನ್ನು ಸೋಲಿಸಿ ಬುದ್ಧಿ ಕಲಿಸಲು ಸಾಧ್ಯವಾಗುತ್ತದೆ.ಇವರು ಹೊರಗಿನ ಶತ್ರುಗಳಾದರೆ, ತನಗೆ ರಾಜ್ಯದ ಪಟ್ಟ ಸಿಗಲಿಲ್ಲ ಎಂದು, ಅವಳ ವಿರುದ್ಧ ಅವಳ ಮಾವನಾದ ಕೃಷ್ಣರಸ ,ಅವಳ ಮೇಲೆ ವಿಷಕಾರಿ ಇತರರನ್ನು ಅವಳ ವಿರುದ್ಧ ಎತ್ತಿ ಕಟ್ಟುವುದು ಅವಳು ಎದುರಿಸಿ ಬೇಕಾಗಿ ಬಂದ ಒಳಗಿನ ಶತ್ರುಗಳಿಗೆ ನಿದರ್ಶನ. ಹೀಗಾಗಿ ಅವಳು ಏಕಕಾಲಕ್ಕೆ ಒಳ ಮತ್ತು ಹೊರ ಶತ್ರುಗಳ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ. ಇಷ್ಟಾದರೂ ಅವಳು ಎದೆಗುಂದದೆ, ಐವತ್ತು ನಾಲ್ಕು ವರ್ಷಗಳ ಕಾಲ ರಾಜ್ಯಭಾರವನ್ನು ಯಶಸ್ವಿಯಾಗಿ ನಡೆಸುವುದು, ಅವಳ ಅಂತ: ಶಕ್ತಿಗೆ ನಿದರ್ಶನವಾಗಿದೆ. ಕಡೆಗೂ ಕೆಳದಿಯ ವೆಂಕಟಪ್ಪ ನಾಯಕ ಅವಳನ್ನು ಮೋಸದಿಂದ ಸೆರೆಹಿಡಿದು ತನ್ನ ರಾಜ್ಯಕ್ಕೆ ಕರೆತಂದು, ಶಿವಾಚಾರ್ಯರ ಸಲಹೆಯ ಮೇರೆಗೆ, ಅವಳನ್ನು ಗೌರವದಿಂದ ನೋಡಿಕೊಂಡು, ಅವಳ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ,ಅವಳ ಗಳಿಸಿದ ಜನರ ಪ್ರೀತಿಯನ್ನು ಕಂಡು ಮಾರುಹೋದುದು , ಶತ್ರುವನ್ನು ತನ್ನ ಅಪೂರ್ವ ವ್ಯಕ್ತಿತ್ವದಿಂದ ಗೆದ್ದುದಕ್ಕೆ ಸಾಕ್ಷಿ.

ಇಂತಹ ಅನನ್ಯ ರಾಣಿಯ ವ್ಯಕ್ತಿತ್ವದ ಅನಾವರಣವನ್ನು ತಕ್ಕ ಶೈಲಿಯಲ್ಲಿ ಕಡೆದಿರಿಸಿದ್ದಾರೆ. ಅದಕ್ಕೆ ಬೇಕಾದ ವೈವಿಧ್ಯಮಯ ಕಾವ್ಯಮಯ ಭಾಷೆ ಲೇಖಕರಿಗೆ ಸಿದ್ಧಿಸಿದೆ.ಅದಕ್ಕೆ ಬೇಕಾದ ನಿದರ್ಶನಗಳು ಇಡೀ ಕಾದಂಬರಿಯಲ್ಲಿ ಎಲ್ಲೆಂದರಲ್ಲಿ ದೊರೆಯುತ್ತದೆ. ‘ಸಮುದ್ರ ರಾಕ್ಷಸನಂತೆ ಘರ್ಜಿಸುವುದು ‘ ಇತ್ಯಾದಿ. ಅವರ ಜೈನ ಮತ್ತು ಶೈವ ಧರ್ಮಗಳ ಗಾಢವಾದ ತಿಳಿವಳಿಕೆಗೆ ಅವರು ಬಳಸಿರುವ ಅವುಗಳ ಪಾರಿಭಾಷಿಕ ಪದಗಳು ಪಂಚಾಣುವ್ರತ, ಅನೇಕಾಂತವಾದ, ಸಲ್ಲೇಖನ ವ್ರತ, ಇತ್ಯಾದಿ, ಅವರ ವೈದಿಕ ಧರ್ಮದ ಗ್ರಹಿಕೆಗೆ ಅವರ ಉಲ್ಲೇಖ ಮಾಡಿದ ಭಗವದ್ಗೀತೆಯ ನಿಷ್ಕಾಮ ಕರ್ಮದ ಫಲವನ್ನು ಕುರಿತ ಶ್ಲೋಕದ ಉಲ್ಲೇಖ ಮಾಡಿದ ವ್ಯಾಖ್ಯಾನಗಳು ನಿದರ್ಶನಗಳು . ಇದರ ಜೊತೆಗೆ ಉಲ್ಲೇಖ ಮಾಡಬೇಕಾದ ವಿವಾಹ ಪೂರ್ವ ಗಂಡು ಹೆಣ್ಣಿನ ಸರಸ ಸಂವಾದವನ್ನು ಅವರ ಬರಹ ಸೆರೆಹಿಡಿಯ ಬಲ್ಲದು ಎನ್ನುವುದಕ್ಕೆ, ಶಬಲೆ ಮತ್ತು ಸತ್ರಾಜಿತ ಶಣೈ ನಡುವಿನ ಸಂವಾದ ನಿದರ್ಶನ.ಐತಿಹಾಸಿಕ ಕಾದಂಬರಿಗೆ ಬೇಕಾದ ಭಾಷೆಯನ್ನು, ಅವರು ಲೀಲಾಜಾಲವಾಗಿ ಬಳಸಬಲ್ಲರು ಎಂಬುದಕ್ಕೆ,ಅವಳ ಪಟ್ಟಾಭಿಷೇಕದ ಸಂದರ್ಭದಲ್ಲಿ ಬಳಸುವ ಪರಿಭಾಷೆ ಸಾಕ್ಷಿ. ಶಿವಾಜಿಯ ಪಟ್ಟಾಭಿಷೇಕದ ವರ್ಣನೆಯನ್ನು ದಟ್ಟವಾಗಿ ಅದು ನೆನಪಿಗೆ ತರುತ್ತದೆ. ಇಂತಹ ಒಂದು ಅಪೂರ್ವ ಕಾದಂಬರಿಯನ್ನು ಬರೆದ ಲೇಖಕರಿಗೆ ಅಭಿನಂದನೆ.ಅವರು ಕೊನೆಯಲ್ಲಿ ಕೊಟ್ಟಿರುವ ಅನುಬಂಧದಲ್ಲಿನ ಆಕರಗಳು ಅವರ ಆಳವಾದ ಮತ್ತು ವಿಸ್ತೃತ ಅಧ್ಯಯನಕ್ಕೆ ಸಾಕ್ಷಿ .

ಇದನ್ನು ಪ್ರಕಟಿಸಿದ ಅಂಕಿತದ ಗೆಳೆಯರಾದ ಪ್ರಕಾಶ್ ಮತ್ತು ಪ್ರಭಾರಿಗೆ, ಕೂಡಾ ಅಭಿನಂದನೆ. ಅವರಿಂದ ಕೊಂಡು ತಂದು ನನಗೆ ಓದಿ ಬರೆಯಲು ಅವಕಾಶ ಮಾಡಿಕೊಟ್ಟ ಶಿಷ್ಯೆ ಸುಮಾಧ್ವಾರಕಾನಾಥ್ ಗೆ ವಂದನೆ. ಪ್ರಕಟಿಸಿದ ನಾಲ್ಕು ವರ್ಷಗಳಲ್ಲಿ ಏಳು ಮುದ್ರಣಗಳನ್ನು ಕಂಡಿರುವುದು ಈ ಕೃತಿಯ ಜನಪ್ರಿಯತೆ ಮತ್ತು ಅಂತ:ಸತ್ವಗಳಿಗೆ ಸಾಕ್ಷಿ. ಇತಿಹಾಸ ಮತ್ತು ಸೃಜನಶೀಲತೆ ಎರಡೂ ಇದರಲ್ಲಿ ಅವಿನಾಭಾವದಿಂದ ಸಂಭವಿಸಿರುವುದನ್ನು ಇದಕ್ಕೆ ಬೆನ್ನುಡಿ ಬರೆದ ಜೋಗಿ ಗುರುತಿಸಿರುವುದು ಸರಿಯಾಗಿಯೇ ಇದೆ.


  • ರಘುನಾಥ್ ಕೃಷ್ಣಮಾಚಾರ್ – ಲೇಖಕರು, ಚಿಂತಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading