‘ಪ್ರೀತಿಯ ಪ್ರಮಾಣ’ ಸಣ್ಣಕತೆ

ಪ್ರೀತಿಯನ್ನು ಪೋಷಿಸುವ, ಕಾಪಾಡಿಕೊಳ್ಳುವ ಜವಾಬ್ದಾರಿ ಗಂಡು ಮತ್ತು ಹೆಣ್ಣು ಇಬ್ಬರಿಗೂ ಸಮಾನ ಪ್ರಮಾಣದ್ದು. ಅದರಲ್ಲಿ ಒಬ್ಬರು ಪ್ರಮಾಣ ತಪ್ಪಿದರೂ ಆ ಪ್ರೀತಿ ಸೋಲಿನ ದಾರಿ ಹಿಡಿದು ಕೊನೆಗೆ ತಳ ಸೇರುತ್ತದೆ.ಕಾಲು ಹಿಡಿಯುವುದೊಂದನ್ನು ಬಿಟ್ಟು ಬೇರೆ ಎಲ್ಲಾ ರೀತಿಯಲ್ಲಿಯೂ ಅವಳ ಮುಂದೆ ಅಂಗಲಾಚಿದ್ದೆ. ಆದರೆ ಆಕೆಯ ನಿರ್ಧಾರ ದೃಢವಾಗಿತ್ತು. ಅನಾಮಿಕ 💯 ಅವರ ಭಾವನಾತ್ಮಕ ಕತೆಯನ್ನು ತಪ್ಪದೆ ಮುಂದೆ ಓದಿ…

ಕಣ್ಣಲ್ಲಿ ನೀರು ತುಂಬಿ ದೃಷ್ಟಿ ಮಂದವಾಗಿತ್ತು, ಎದುರಿಗಿದ್ದ ನಿರ್ವಿಕಾರಾಕೃತಿಯ ರೂಪವೊಂದು ನನ್ನತ್ತಲೇ ನೋಡಿ ಕೈಬೀಸಿದಂತೆ ಅಸ್ಪಷ್ಟವಾಗಿ ಗೋಚರಿಸುತ್ತಿತ್ತು. ಕಣ್ಣುಗಳನ್ನು ನನ್ನ ಎರಡೂ ಕೈಗಳ ಬೆರಳುಗಳಿಂದ ಆಲಂಗಿಸಿ ಉಕ್ಕುತ್ತಿದ್ದ ಸಾಗರದ ತೆರೆಯೋಪಾದಿಯ ಕಣ್ಣೀರನ್ನು ಅಳಿಸಿ ಹಾಕುತ್ತಾ ಅವಳತ್ತ ನೋಡುವಷ್ಟರಲ್ಲಿ ಬಸ್ಸು ತುಂಬಾ ದೂರ ಸಾಗಿತ್ತು. ಮನಭಾರ ಹೆಚ್ಚಾಗಿ ಬಸ್ಸು ನಿರ್ಗಮಿಸಿದ ದಿಕ್ಕಿನಲ್ಲೇ ತುಂಬಾ ಹೊತ್ತು ನಿಂತು ನೋಡುತ್ತಿದ್ದೆ. ಹಸಿವಿನಿಂದ ಬಳಲಿದ ಮಗುವೊಂದು ತಾಯ ಮೊಲೆಗೆರಗಿ ಹಾಲನ್ನು ಚಪ್ಪರಿಸಿ ಹಸಿವ ನೀವರಿಸಿಕೊಳ್ಳುವಷ್ಟರಲ್ಲಿ ಯಾರೋ ಅದನ್ನು ತಾಯಿಯಿಂದ ಕಸಿದು ಬೀದಿಯ ಮೂಲೆಯೊಂದರ ಕಸದ ಬುಟ್ಟಿಯಲ್ಲಿ ಇಟ್ಟು ಹೊರಟಂತೆ ಭಾಸವಾಗಿ ಒಮ್ಮೆಲೇ ದುಃಖ ಉಮ್ಮಳಿಸಿಬಂದು ತಡೆಯಲಾರದೆ ಗಳಗಳನೆ ಅತ್ತುಬಿಟ್ಟೆ.

ಜೀವನದ ಪಯಣದಲ್ಲಿ ಕೊನೆಯವರೆಗೂ ನನ್ನೊಟ್ಟಿಗೆ ಏಳು-ಬೀಳುಗಳಲ್ಲಿ, ಕಷ್ಟ-ಸುಖಗಳಲ್ಲಿ ಜೊತೆಗಿರುವೆನೆಂದು ತುಂಬಿ ಹರಿದ ಕಣ್ಣೀರನ್ನು ಸಾಕ್ಷಿಯಾಗಿಸಿ ಆಣೆ ಮಾಡಿದ್ದವಳು ಇಂದು ಮದುವೆಯಾಗದಿರುವುದಕ್ಕೆ ಸರಪಳಿಯಂತೆ ತಾನೇ ಕಲ್ಪಿಸಿ ಸೃಷ್ಟಿಸಿದ ನೆಪಗಳನ್ನು ತನ್ನ ಬತ್ತಳಿಕೆಯಿಂದ ಸುಸಜ್ಜಿತವಾಗಿ ಹದಗೊಳಿಸಿದ ಬಾಣಗಳಂತೆ ಒಂದೊಂದಾಗಿ ನನ್ನ ಎದೆಗೆ ನಾಟಿಸಿದಳು. ನನ್ನಲ್ಲಿ ವಾದಿಸುವ ಶಕ್ತಿ ಕುಂದಿಹೋಗಿತ್ತು, ದೂರಾಲೋಚಿಸುತ್ತಾ ದೂರದೆಡೆಗೆ ಅಸ್ಪಷ್ಟ ದೃಷ್ಟಿಹಾಯಿಸಿ ನಿಂತಿದ್ದೆ. ಅವಳ ಮಾತುಗಳು ಸಮುದ್ರದ ತೆರೆಯ ರೀತಿಯಲ್ಲಿ ಒಮ್ಮೆ ನಿಶ್ಯಬ್ದ, ಮತ್ತೊಮ್ಮೆ ದಿಡೀರನೆ ಬಂಡೆಗೆ ಅಪ್ಪಳಿಸುವ ಅಲೆಗಳಂತೆ ಆಗಾಗ ನನ್ನ ಕಿವಿಗಳಿಗೆ ರಾಚುತ್ತಿದ್ದವು. ಸೋಲಿನ ಕಾಲಡಿ ಸಿಲುಕಿದ ಕುಸ್ತಿಪಟುವಿಗೆ ಕೊನೆಯ ಕ್ಷಣದಲ್ಲಿ ಸೋಲಿನ ಭಯವಾಗಿ ಮೈಕೊಡವಿಕೊಂಡು ಮೇಲೆ ಎದ್ದಂತೆ ನನ್ನ ಮನಸ್ಸು ತಕ್ಷಣ ಜಾಗೃತವಾಯಿತು. ಈ ಕ್ಷಣ ಕೈತಪ್ಪಿದರೆ ಮತ್ತೆಂದಿಗೂ ಅವಳು ನನಗೆ ಸಿಗಲಾರಳೆಂಬ ಭಯದಿಂದ ಆಕೆಯತ್ತ ಭಾವುಕ ನೋಟಬೀರಿದೆ. ಆಕೆಯೋ ನಿರ್ಭಾವುಕ, ಯಾವುದೇ ಭಾವನೆಗಳ ಪರಿಚಯವೇ ಇಲ್ಲದಂತೆ ಮಾತು ಮುಂದುವರೆಸಿದ್ದಳು. ತಕ್ಷಣ ನಾನು ಆಕೆಯ ಕೆನ್ನೆಯನ್ನು ನನ್ನ ಎರಡೂ ಕೈಗಳಿಂದ ಆವರಿಸಿ “ನನ್ನನ್ನು ಅಗಲಿ ಬದುಕಬಲ್ಲೆಯಾ” ಎಂಬ ಪ್ರಶ್ನೆಯನ್ನು ಅವಳ ಮುಂದಿಟ್ಟೆ. ಇಷ್ಟು ಹೊತ್ತು ವಾದ ಮಂಡಿಸುವ ವಕೀಲನಂತೆ ತನ್ನ ಮನಸ್ಸಾಕ್ಷಿ ಎಂಬ ಅಪರಾಧಿಯ ಪರವಾಗಿ ಬಿಡುವುಕೊಡದೆ ವಕಾಲತ್ತು ವಹಿಸಿ ಮಾತನಾಡುತ್ತಿದ್ದವಳು ನಾ ಕೇಳಿದ ಪ್ರಶ್ನೆಗೆ ಉತ್ತರಿಸಲಾಗದೆ ತಲೆತಗ್ಗಿಸಿದಳು. ನನ್ನ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡಿ ಉತ್ತರಿಸು ಎಂದು ಅಂಗಲಾಚಿದವನಂತೆ ಭಾವುಕವಾಗಿ ನುಡಿದೆ. ಅವಳಿಗೆ ತಲೆಯೆತ್ತಲೂ ಆಗಲಿಲ್ಲ. ತನ್ನ ಮನಸ್ಸಾಕ್ಷಿಗೆ ಈಗ ತಾನು ನಿಜವಾಗಿಯೂ ಅಪರಾಧಿಯೆಂಬ ಅರಿವಾಗಿರಬೇಕು. ಸಂಪೂರ್ಣ ಮೌನವಾದಳು. ಓರೆಯಾದ ಮುಖ ಮತ್ತೆ ನನ್ನತ್ತ ತಿರುಗಲೇ ಇಲ್ಲ. ಕಾಲು ಹಿಡಿಯುವುದೊಂದನ್ನು ಬಿಟ್ಟು ಬೇರೆ ಎಲ್ಲಾ ರೀತಿಯಲ್ಲಿಯೂ ಅವಳ ಮುಂದೆ ಅಂಗಲಾಚಿದ್ದೆ. ಆದರೆ ಆಕೆಯ ನಿರ್ಧಾರ ದೃಢವಾಗಿತ್ತು.

ಪ್ರೀತಿಯನ್ನು ಪೋಷಿಸುವ, ಕಾಪಾಡಿಕೊಳ್ಳುವ ಜವಾಬ್ದಾರಿ ಗಂಡು ಮತ್ತು ಹೆಣ್ಣು ಇಬ್ಬರಿಗೂ ಸಮಾನ ಪ್ರಮಾಣದ್ದು. ಅದರಲ್ಲಿ ಒಬ್ಬರು ಪ್ರಮಾಣ ತಪ್ಪಿದರೂ ಆ ಪ್ರೀತಿ ಸೋಲಿನ ದಾರಿ ಹಿಡಿದು ಕೊನೆಗೆ ತಳ ಸೇರುತ್ತದೆ. ಪ್ರೀತಿಸಿದವರ ಮನಸ್ಥಿತಿ ಶುರುವಿನಲ್ಲಿ ಮಧ್ಯದ ನಶೆಯಲ್ಲಿ ತೇಲಾಡುವವರಂತೆ ಎಲ್ಲವೂ ಸುಖಕರವಾಗಿಯೂ, ಆಪ್ತವಾಗಿಯೂ, ಆತ್ಮೀಯವಾಗಿಯೂ, ಅರೆಕ್ಷಣವೂ ಬಿಟ್ಟಿರಲಾರದಷ್ಟು, ಮತ್ತು ವಿಶೇಷವಾಗಿ ಉತೃಷ್ಟವಾಗಿ ಹೇಳಬೇಕೆಂದರೆ ಈ ಬಂಧ ಒಂದು ಜನ್ಮಕ್ಕೆ ಸಾಲದೆ ಏಳೇಳು ಜನುಮಗಳಿಗೂ ಹೀಗೇ ಇರಬೇಕೆಂಬ ಆಸೆ ಅವರ ಮನಸ್ಸನ್ನು ಆವರಿಸಿರುತ್ತದೆ. ಕೊನೆಗೆ ಮನಸ್ಥಿತಿ-ಪರಿಸ್ಥಿತಿಗಳೆರಡೂ ಆಧಾರ ಕಳೆದುಕೊಂಡು ಪ್ರಸ್ತುತ ವಾಸ್ತವತೆಯ ಶಾಶ್ವತ ಕಳೆದುಕೊಳ್ಳುವುದರ ಅರಿವೇ ಬರದಷ್ಟು ಸಮಯ ಸಾಧಕರೋ, ಮೂರ್ಖರೋ, ಬಲಹೀನರೋ ಆಗಿಬಿಡುತ್ತಾರೆ.

ಹೀಗೇ ಮನೆಯೊಂದರ ಮುಂದೆ ಹಳಿಸಿದ ಅನ್ನವಾದರೂ ಸಿಕ್ಕರೆ ಸಾಕು, ಹಸಿವು ನೀಗಿಸಿಕೊಳ್ಳಬಹುದೆಂಬ ಆಕಾಂಕ್ಷೆಯುಳ್ಳವನಾಗಿ ಭಿಕ್ಷುಕನೊಬ್ಬನು ಮುರುಕು ಪಾತ್ರೆಯೊಂದನ್ನು ಕೈಯಲ್ಲಿ ಹಿಡಿದು ನಿಂತಂತೆ ಭಾವುಕತೆಯಿಂದ ಅವಳತ್ತಲೇ ನೋಡುತ್ತಾ ನಿಂತಿದ್ದೆ. ನಾನು ಅವಳನ್ನು ಎಷ್ಟು ಪ್ರೀತಿಸುತ್ತೇನೆ ಮತ್ತು ಅವಳೊಟ್ಟಿಗಿನ ಜೀವನಕ್ಕೆ ನಾನೆಷ್ಟು ಕಾತುರದಿಂದ ತವಕಿಸುತ್ತಿದ್ದೇನೆ ಎಂಬುದನ್ನು ನನ್ನ ಕಣ್ಣಿನಿಂದ ಹೊರಬರುತ್ತಿದ್ದ ಹನಿಗಳೇ ಸಾಬೀತು ಪಡಿಸುತ್ತಿದ್ದವು. ಆದರೆ ಆಕೆಗೋ ಅದಾವುದರ ಅರಿವೇ ಇರಲಿಲ್ಲ.

ಒಂದು ಕ್ಷಣ ಮೈಮರೆತು ಇವನ ಪ್ರೀತಿಯ ತೋಳ ತೆಕ್ಕೆಗೆ ಮತ್ತೆ ಜಾರಿದರೆ ಕಷ್ಟ ಎಂಬಂತೆ ಎಚ್ಚೆತ್ತುಕೊಳ್ಳುತ್ತಾ “ನನಗೆ ತಡವಾಗುತ್ತದೆ ನಾನು ಹೊರಡುತ್ತೇನೆ. ನಿನ್ನ ಒಳ್ಳೆಯತನಕ್ಕೆ ನಿನಗೆ ಒಳ್ಳೆಯದೇ ಆಗುತ್ತೆ. ಯೋಚಿಸಿ ಕೊರಗುತ್ತಾ ಜೀವನ ಹಾಳುಮಾಡಿಕೊಳ್ಳಬೇಡ. ಆದಷ್ಟು ಬೇಗ ಮದುವೆಯಾಗು” ಎಂದು ಪ್ರೀತಿಯಲ್ಲಿ ಅರ್ಧದಲ್ಲೇ ಕೈಕೊಟ್ಟು ಹೋಗುವವರ ಸಿನಿಮಾ ಡೈಲಾಗ್ ಒಂದನ್ನು ಕಂಠಪಾಠ ಮಾಡಿದಂತೆ ನನ್ನ ಮುಂದೆ ಸ್ವಲ್ಪವೂ ತಪ್ಪಿಲ್ಲದಂತೆ ಒಪ್ಪಿಸಿ ಬಸ್ ನತ್ತ ಹೊರಟಳು. ಬಸ್ ಸಮೀಸುವುದರೊಳಗೆ ಮನಸ್ಸು ಬದಲಿಸಿ ಹಿಂತಿರುಗಿ ಓಡಿ ಬಂದು ನನ್ನನ್ನು ಆಲಂಗಿಸಬಹುದೆಂದು ನೆನೆಸಿದೆ, ಅಯ್ಯೋ ಇದೆಲ್ಲಾ ನಾನು ಮಾಡಿದ ನಾಟಕ ಎಂದು ಜೋರಾಗಿ ನಗುತ್ತಾ ನನ್ನತ್ತ ಹಿಂತಿರುಗಿ ಬರಬಹುದೆಂದು ಮನದಲ್ಲೇ ಏನೇನೋ ಕಲ್ಪಿಸಿಕೊಳ್ಳುತ್ತಿದ್ದೆ. ಆದರೆ ಆಕೆ ನನ್ನ ಯಾವುದೇ ಊಹಾಪೋಹ ಆಲೋಚನೆಗಳಿಗೆ ಎಡೆಕೊಡದೆ ಒಮ್ಮೆಯೂ ಹಿಂತಿರುಗಿ ನೋಡದೆ ಬಸ್ ಹತ್ತಿಯೇಬಿಟ್ಟಳು.
ತನ್ನ ಮೇಲಿದ್ದ ಅಪರಾಧದ ಕೇಸೊಂದು ಖುಲಾಸೆಯಾಗಿ ಹರ್ಷದಿಂದ ಕೋರ್ಟಿನಿಂದ ಆರೋಪಿಯೊಬ್ಬ ಹೊರನಡೆದಂತೆ ಆಕೆ ಏನೂ ನಡೆದೇ ಇಲ್ಲ ಎಂಬಂತೆ ನನ್ನ ಬದುಕಿನಿಂದಲೇ ಹೊರನಡೆದು ಹೋದಳು.

ಬಸ್ ಹೊರಡುತ್ತಿದ್ದಂತೆ ಆಕೆ ನನ್ನತ್ತ ಕೈಬೀಸಿದ್ದು ನನ್ನ ತುಂಬಿದ ಕಣ್ಣುಗಳಿಗೆ ಅಸ್ಪಷ್ಟವಾಗಿ ಕಾಣಿಸುತ್ತಿತ್ತು. ಅತ್ತಲೇ ನೋಡುತ್ತಾ ಬಸ್ ಮರೆಯಾದ ಮೇಲೂ ಸುಮಾರು ಹೊತ್ತು ಅಲ್ಲೇ ನಿಂತಿದ್ದೆ. ಪ್ರಕೃತಿಗೂ ನನ್ನ ಪರಿಸ್ಥಿತಿಯ ಅರಿವಾಗಿರಬಹುದು. ತಕ್ಷಣ ಮಳೆ ಹನಿಯಲು ಶುರುವಾಯಿತು. ಅದೂ ಕೂಡ ನನ್ನೊಟ್ಟಿಗೆ ದುಃಖಿಸಿದಂತಿತ್ತು. ಅಂದು ನಾ ಸಂಜೆ ಮನೆ ತಲುಪುವವರೆಗೂ ಧಾರಾಕಾರ ಮಳೆ.

ನನ್ನ- ಅವಳ ಹೆಜ್ಜೆ ಗುರುತುಗಳ ಜೊತೆಗೆ ಅವಳ ಮನಸ್ಸಿನಲ್ಲಿನ ನನ್ನ ಮೇಲಿನ ಭಾವನೆಗಳೂ ಮಾಯವಾಗಿದ್ದವು.


  •  ಅನಾಮಿಕ 💯

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading