ಸತ್ಯವೇ ನಮ್ಮ ತಾಯಿ ತಂದೆ

“ಸತ್ಯಮೇವ ಜಯತೆ ನಾನೃತಂ…” ಅಂದರೆ ಅರ್ಥ ಸತ್ಯವೇ ಗೆಲ್ಲುತ್ತದೆ. ಇಂದು ಸೋಶಿಯಲ್ ಮೀಡಿಯಾ ಯುಗ. ಸುಳ್ಳು ಸುದ್ದಿ, ನಕಲಿ ಪ್ರಚಾರಗಳು ಒಂದೇ ಸೆಕೆಂಡಲ್ಲಿ ಸುದ್ದಿ ಆಗುತ್ತೆ. ಲೇಖಕರಾದ ಓಂಕಾರ ಪಾಟೀಲ್ ಅವರ ಲೇಖನವನ್ನು ತಪ್ಪದೆ ಮುಂದೆ ಓದಿ…

ಸತ್ಯವೇ ನಮ್ಮ ತಾಯಿ ತಂದೆ ಸತ್ಯವೇ ನಮ್ಮ ಬಂಧು ಬಳಗ ಸತ್ಯವಾಕ್ಯಕೆ ತಪ್ಪಿ ನಡೆದರೆ ಮೆಚ್ಚನು ಪರಮಾತ್ಮನು… ಈ ಪುಣ್ಯಕೋಟಿ ಗೀತೆ ನಾವು ಪುಸ್ತಕಗಳಲ್ಲಿ ಓದಿದ್ದೇವೆ, ಭಜನೆಯಲ್ಲಿ ಹಾಡಿದ್ದೇವೆ. ಆದರೆ ಇಂದಿನ ಕಾಲದಲ್ಲಿ ಸತ್ಯದೊಂದಿಗೆ ಬದುಕುವುದು ಅತೀ ದೊಡ್ಡ ಸವಾಲು. ಸತ್ಯ ಹೇಳಲು ಧೈರ್ಯ ಬೇಕು. ಅದರಿಂದ ಆಗುವ ನಷ್ಟ, ನೋವನ್ನು ಎದುರಿಸುವ ಶಕ್ತಿ ಇರುವವನೇ ನಿಜವಾದ ಮನುಷ್ಯ.

“ಇದ್ದುದ ಇದ್ದಂಗ್ ಹೇಳಿದ್ರ ಎದ್ದ್ ಬಂದ್ ಎದೆಗೊದಿತಾರಂತೆ” ಸತ್ಯ ಯಾವಾಗಲೂ ಕಹಿ. ಸುಳ್ಳಿನ ಸಂತೆಯಲ್ಲಿ ಸತ್ಯದ ಅಂಗಡಿ ಯಾರಿಗೂ ಬೇಡ. ಆದರೆ ನೆನಪಿಡಿ ಸುಳ್ಳು ಮರಳಿನ ಕೋಟೆ ಗಾಳಿಗೆ ಬೀಳುತ್ತೆ. ಸತ್ಯ ಅನ್ನುವುದು ಕಲ್ಲಿನ ಬುನಾದಿಯಂತೆ ಚಂಡಮಾರುತಕ್ಕೂ ಅಲುಗಾಡಲ್ಲ. ಅದಕ್ಕೆ “ಸತ್ಯಕ್ಕೆ ಸಾವಿಲ್ಲ” ಎನ್ನುವುದು.

ಸಂಸ್ಕೃತದಲ್ಲಿ ಒಂದು ಶ್ಲೋಕವಿದೆ. “ಸತ್ಯಮೇವ ಜಯತೆ ನಾನೃತಂ…” ಅಂದರೆ ಅರ್ಥ ಸತ್ಯವೇ ಗೆಲ್ಲುತ್ತದೆ. ಆಸೆಗಳನ್ನು ಗೆದ್ದ ಋಷಿಗಳು ಸತ್ಯದ ದಾರಿಯಲ್ಲೇ ದೇವರ ಪರಮ ನಿಧಿಯನ್ನು ಕಾಣುತ್ತಾರೆ.

ಕುವೆಂಪುರವರ ಮಾತು “ಮನುಷ್ಯ ಹುಟ್ಟುವಾಗ ಮಹಾಮಾನವ. ಬೆಳೆಯುತ್ತಾ ಅಲ್ಪಮಾನವನಾಗುತ್ತಾನೆ “ ಬಾಲ್ಯದಲ್ಲಿ ಪುಣ್ಯಕೋಟಿ ಕತೆ ಕೇಳಿ ಬೆಳೆದ ನಾವು, ದೊಡ್ಡವರಾದಂತೆ ಸತ್ಯವನ್ನು ರಾಜಕೀಯ, ವ್ಯವಹಾರಕ್ಕೆ ಮಾರಿಕೊಂಡಿದ್ದೇವೆ.

ಸತ್ಯ ಹರಿಶ್ಚಂದ್ರ: ರಾಜ್ಯ, ಕುಟುಂಬ, ಆತ್ಮಾಭಿಮಾನ ಎಲ್ಲವನ್ನೂ ಕಳೆದುಕೊಂಡರೂ ಸತ್ಯ ಬಿಡಲಿಲ್ಲ. ಕೊನೆಗೆ ದೇವರೇ ಒಲಿದು ಬಂದ. ಮಹಾತ್ಮ ಗಾಂಧೀಜಿ: “ಸತ್ಯ ಮತ್ತು ಅಹಿಂಸೆ” ಎಂಬ ಎರಡೇ ಅಸ್ತ್ರದಿಂದ ಇಡೀ ಬ್ರಿಟಿಷ್ ಸಾಮ್ರಾಜ್ಯವನ್ನೇ ಅಲುಗಾಡಿಸಿದರು. ಅಬ್ದುಲ್ ಕಲಾಂ: “ನೀವು ಸತ್ಯವಂತರಾದರೆ ಪ್ರಪಂಚವೇ ನಿಮ್ಮೊಂದಿಗೆ ನಿಲ್ಲುತ್ತದೆ” ಎಂದು ಹೇಳುತ್ತಿದ್ದರು.

ಬಸವಣ್ಣ: ಅಸತ್ಯವ ನುಡಿದಡೆ ಅರಿವು ಕೆಡುವುದು, ಅಸತ್ಯವ ಮಾಡಿದಡೆ ಮಹಾ ಪಾತಕ.

ಮಡಿವಾಳ ಮಾಚಿ ದೇವ: ಸತ್ಯವೇ ಧರ್ಮ, ಸತ್ಯವೇ ದೊಡ್ಡ ತಪ, ಸತ್ಯವೇ ದೊಡ್ಡ ದಾನ, ಸತ್ಯವೇ ದೊಡ್ಡ ಯಜ್ಞ.

ದೇವರ ದಾಸಿಮಯ್ಯ: ಉಳ್ಳವರು ಶಿವಾಲಯ ಮಾಡುವರು… ನನಗೆ ಸತ್ಯವೇ ಪೂಜೆ.

ಅಲ್ಲಮಪ್ರಭು: ಸತ್ಯವಿಲ್ಲದ ಭಾಷೆ ವಿಷ, ಸತ್ಯವಿಲ್ಲದ ಕಾಯ ಕಸ, ಸತ್ಯವಿಲ್ಲದ ಮನ ಮೂರ್ಖ.

ಎಲ್ಲಾ ಶರಣರೂ ಒಂದೇ ಹೇಳಿದರು – ದೇವಸ್ಥಾನ ಕಟ್ಟೋದಕ್ಕಿಂತ ದೊಡ್ಡದು ಸತ್ಯದಿಂದ ಬದುಕೋದು ಎಂದು. ಇಂದು ಸೋಶಿಯಲ್ ಮೀಡಿಯಾ ಯುಗ. ಸುಳ್ಳು ಸುದ್ದಿ, ನಕಲಿ ಪ್ರಚಾರ ೧ ಸೆಕೆಂಡಲ್ಲಿ ವೈರಲ್ ಆಗುತ್ತೆ. ಆದರೆ ಸತ್ಯ ಹೇಳುವವನನ್ನು “ಮೂರ್ಖ” ಅಂತಾರೆ. ನೆನಪಿಡಿ ಸತ್ಯ ಒಬ್ಬನೇ ಇದ್ದರೂ ಅದು ಬಹುಮತಕ್ಕಿಂತ ದೊಡ್ಡದು.

ಮಕ್ಕಳಿಗೆ ನಾವು ಮೊಬೈಲ್ ಕೊಡುವ ಮೊದಲು “ಸತ್ಯದ ಪಾಠ” ಕೊಡಬೇಕು. ಯಾಕಂದ್ರೆ ಪುಣ್ಯಕೋಟಿ ಕತೆ ಕೇಳಿ ಬೆಳೆದ ಮಗು, ಮುಂದೆ ದೇಶವನ್ನೇ ಕಾಪಾಡುತ್ತೆ. ಸತ್ಯ ಎಂದರೆ ತಾಯಿ ಹಾಲುಣಿಸಿದ ಹಾಗೆ. ತಂದೆ ದಾರಿ ತೋರಿದ ಹಾಗೆ. ನಮ್ಮ ನಡೆ-ನುಡಿ-ಬರಹದಲ್ಲಿ ಒಂದಿಷ್ಟು ಸತ್ಯ ಬೆರೆಸಿದರೆ ಬದುಕು ಸತ್ಯಂ ಶಿವಂ ಸುಂದರಂ” ಆಗುತ್ತೆ.

“ಸತ್ಯವೇ ನಮ್ಮ ತಾಯಿ ತಂದೆ ಸತ್ಯವೇ ನಮ್ಮ ಬಂಧು ಬಳಗ ಸತ್ಯವಾಕ್ಯಕ್ಕೆ ತಪ್ಪಿ ನಡೆದರೆ ಮೆಚ್ಚನು ಪರಮಾತ್ಮನು” ಈ ಒಂದು ಸಾಲು ಸಾಕು, ನಮ್ಮ ಇಡೀ ಜೀವನಕ್ಕೆ ದಿಕ್ಸೂಚಿಯಾಗಲು.


  • ಓಂಕಾರ ಪಾಟೀಲ – ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್, ಕಾರ್ಯದರ್ಶಿಗಳು, ಬೀದರ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading