ಅಮೇರಿಕಾದ ಐಷಾರಾಮೀ ಘನತೆಗೆ ಹೋಲಿಸಿದರೆ ಆ ಬಸ್ಸು ಬಹಳ ಸಾಧಾರಣವಾಗಿತ್ತು. ಪ್ರವಾಸದ ನಿರ್ದೇಶಕಿ ಕಮ್ ಬಸ್ ಚಾಲಕಿ ಒಬ್ಬ ಮಹಿಳೆಯೇ. ಇಲ್ಲಿ ಈ ಅಲಾಸ್ಕಾ ಅನುಭವದ ಕುರಿತು ಡಾ. ಗಿರಿಜಾ ಶಾಸ್ತ್ರಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ದೆನಾಲಿಯ ತಂಡ್ರಾ ವೈಲ್ಡರ್ನೆಸ್ ನ್ಯಾಷನಲ್ ಪಾರ್ಕ್:
ಅಲಾಸ್ಕಾ ನೆಲದ ಮೇಲೆ ಪ್ರಯಾಣ ಮಾಡುತ್ತಿದ್ದರೆ ನನಗೆ ಹಿಮಾಲಯದ್ದೇ ನೆನಪಾಗುತ್ತಿತ್ತು. ಸುತ್ತಲೂ ಬೆಟ್ಟಗಳಿಂದ ಅಲಾಸ್ಕಾ ಸುತ್ತುವರಿದಿದ್ದರೆ ಹಿಮಾಲಯದಲ್ಲಿ ಒಂದು ಬದಿಯಲ್ಲಿ ಶಿಖರ ಬೆಟ್ಟಗಳು ಇನ್ನೊಂದೆಡೆ ಆಳವಾದ ಪ್ರಪಾತಗಳು. ಗ್ಲೇಷಿಯರ್ ಗಳು ಕಂಡದ್ದು ಹಿಮಾಲಯಕ್ಕಿಂತ ಅಲಾಸ್ಕದಲ್ಲೇ ಹೆಚ್ಚು ಅದೂ ಆಗಸ್ಟ್ ತಿಂಗಳಲ್ಲಿ! ಹಿಮಾಲಯವನ್ನು ನಾನು ಕಂಡದ್ದು ಮೇ ತಿಂಗಳ ಕೊನೆಯಲ್ಲಿ. ಬದರಿಯಲ್ಲಿ ಹತ್ತಿರದಲ್ಲೇ ಕಂಡಿತ್ತು ಮಂಜುಪರ್ವತ. ಆದರೆ ಯಮುನೋತ್ರಿ ಮತ್ತು ಗಂಗೋತ್ರಿಗಳಲ್ಲಿ ಅದನ್ನು ಕಂಡದ್ದು ದೂರದಿಂದ ಮಾತ್ರ. (ಕೇದಾರಕ್ಕೆ ಹೋಗಿಲ್ಲ).
ಅಲಾಸ್ಕಾದ ಪರ್ವತಗಳಿಗಿಂತ ( ೨೭೦೦೦) ಹಿಮಾಲಯದ ಪರ್ವತಗಳೇ ( ೫೪೦೦೦) ಹೆಚ್ಚು ಗ್ಲೇಷಿಯರ್ ಗಳನ್ನು ಹೊಂದಿವೆ ಎಂದು ಗೂಗಲ್ ಹೇಳುತ್ತದೆ. ಅಲಾಸ್ಕಾದಲ್ಲಿ ‘ಚುಕಚಿ’ ಎನ್ನುವ ನದಿಯಿಂದ ಹೊರಟು ಕೆನಡಾ ಗಡಿಯವರೆಗೆ ಹಬ್ಬಿರುವ ಮಲೆಗಳ ಉದ್ದ ಸುಮಾರು ೬೦೦ ಮೈಲಿಗಳು. ಇವುಗಳಲ್ಲಿ ಒಟ್ಟು ೩೯ ಬೆಟ್ಟಸಾಲುಗಳು ( ranges) ಇವೆ ಎಂಬ ಮಾಹಿತಿ ಇದೆ.

ಅಲಾಸ್ಕದಲ್ಲಿ ಸುಸಜ್ಜಿತ ಅಗಲವಾದ ರಸ್ತೆಗಳು ಯಾವುದೇ ಭಯವಿಲ್ಲದೇ, ಕುಡಿದ ನೀರೂ ಅಳ್ಳಾಡದಂತೆ ಸುಖವಾಗಿ ಪ್ರಯಾಣಮಾಡಬಹುದು. ಇಲ್ಲಿ ಬಂಡೆಗಳಿಗೆ ತಂತಿಯ ಮೆಷ್ ಗಳನ್ನು ಹಾಕಿದ್ದನ್ನು ಕಂಡದ್ದು ಬಹಳ ಕಡಿಮೆ.
ಸಾವೇಜ್ ನದಿಯಿಂದ ಹೊರಟ ನಾವು ದೆನಾಲಿ ಪಾರ್ಕ್ ಹೊಟೆಲ್ ತಲಪಿದಾಗ ರಾತ್ರಿಯಾಗಿತ್ತು. ಬೆಳಿಗ್ಗೆ ಎದ್ದು ಹನ್ನೊಂದುವರೆಯ ಹೊತ್ತಿಗೆ Tundra wilderness national park ಪ್ರವಾಸಕ್ಕೆ ನಿಗದಿಯಾದ ಸ್ಥಳವನ್ನು ತಲಪಿದೆವು. ಈ ಪ್ರವಾಸದ ಅವಧಿ ಸು. ಐದೂವರೆ ಗಂಟೆಗಳು. ನ್ಯಾಷನಲ್ ಪಾರ್ಕ್ ಪ್ರವಾಸಕ್ಕೆ ಅವರದ್ದೇ ಆದ ಬಸ್ ವ್ಯವಸ್ಥೆ ಇದೆ. ಮುಂಚಿತವಾಗಿ ಕಾದಿರಿಸಿದ ಆ ಬಸ್ಸಿನಲ್ಲೇ ಪ್ರಯಾಣಮಾಡಬೇಕು. ಖಾಸಗಿ ವಾಹನಗಳನ್ನು ಬಳಸುವ ಹಾಗಿಲ್ಲ.

ಅಮೇರಿಕಾದ ಐಷಾರಾಮೀ ಘನತೆಗೆ ಹೋಲಿಸಿದರೆ ಆ ಬಸ್ಸು ಬಹಳ ಸಾಧಾರಣವಾಗಿತ್ತು. ನಮ್ಮೂರಿನ ಕೆಂಪು ಬಸ್ಸುಗಳ ಹಾಗೆ. ಬಸ್ಸು ಹೊರಟಿತು. ಇಲ್ಲಿ ಕೂಡ ಪ್ರವಾಸದ ನಿರ್ದೇಶಕಿ ಕಮ್ ಬಸ್ ಚಾಲಕಿ ಒಬ್ಬ ಮಹಿಳೆಯೇ. ಪ್ರವಾಸದ ವಿವರಗಳನ್ನು ಕೊಡುತ್ತಾ ಹೋದಳು. ಆಗಾಗ ಜನರನ್ನು ನಗಿಸುತ್ತಿದ್ದಳು. ಅವರ ನಾಲಗೆಗೆ ( accent) ನಾವು ಪರಿಚಿತರಾಗಿಲ್ಲದ ಕಾರಣ ಎಲ್ಲ ನಗುವಾಗ ಅರ್ಥವಾಗದ ನಾವಿಬ್ಬರೂ ಬೆಪ್ಪರಂತೆ ಸುಮ್ಮನಿದ್ದೆವು.
ಈ ಬಸ್ಸಿನಲ್ಲಿ ‘ಈಸ್ಟ್ ಫೋರ್ಕ್’ ಎನ್ನುವ ನದಿಯವರೆಗೆ ಸು. ೪೩ ಮೈಲುಗಳು ನಮ್ಮ ಪ್ರಯಾಣ. ಮತ್ತೆ ಅಲ್ಲಿಂದಲೇ ತಿರುಗಿ ಹೊರಟದಾರಿಯಲ್ಲೇ ವಾಪಸ್ಸು ಬರಬೇಕು. ಈ ದಾರಿಯಲ್ಲಿ ಭಯಾನಕ ಕರಡಿಗಳು ( grizzly bears). ತೋಳಗಳು, ಸಾರಂಗಗಳು(moose, caribou), ಟಗರುಗಳು ( dall sheep) ಇವೆಯಂತೆ. ಆದರೆ ದೂರದಲ್ಲಿ ನಾವು ಕಂಡಿದ್ದು ಎರಡು ಕರಡಿಗಳನ್ನು. ಹಾಗೂ ಹತ್ತಿರದಿಂದ ಸಾರಂಗವನ್ನು ನೋಡಿದೆವು. ಒಂದು ಕುದುರೆಯ ಎತ್ತರ ಗಾತ್ರವಿದ್ದ ಅದರ ಕವಲು ಕವಲಾದ ಕೊಂಬುಗಳಂತೂ ಅಗಾಧವಾಗಿದ್ದವು. ಅವುಗಳ ಉದ್ದ ಸು.ಇಪ್ಪತ್ತು ಇಂಚುಗಳು ಇರುತ್ತವೆ ಎಂದು ಚಾಲಕಿ ಹೇಳಿದಳು. Moose ಎನ್ನಲಾಗುವ ಇನ್ನೊಂದು ಜಾತಿಯ ಕಡವೆಯ ಕೊಂಬುಗಳಂತೂ ಕನಿಷ್ಠ ಆರು ಅಡಿಗಳು ಇರುತ್ತವಂತೆ. ಗಂಡುಗಳಿಗೆ ಮಾತ್ರ ಬೆಳೆಯುವ ಈ ಕೊಂಬುಗಳು ಪ್ರತಿ ಚಳಿಗಾಲದಲ್ಲಿ ಉದುರಿ ಪ್ರತಿ ವಸಂತಕಾಲದಲ್ಲಿ ಹಳೆಯದ್ದಕ್ಕಿಂತ ಅಧಿಕ ಗಾತ್ರದಲ್ಲಿ ಮತ್ತೆ ಬೆಳೆಯುತ್ತವಂತೆ. ಕಾಡೆಮ್ಮೆಯ ಗಾತ್ರದ ದೇಹ ಇದರದು. ಇದರ ಇನ್ನೊಂದು ವಿಶೇಷವೆಂದರೆ ತನ್ನ ಮುಂಗಾಲುಗಳಲ್ಲಿ ಒದೆಯುವುದು. ಜಿಂಕೆಗಳೆಂದರೆ ನಾಜೂಕು, ಚಂಗನೆ ಓಡುವ ಚುರುಕು ಪ್ರಾಣಿಗಳು ಎಂದುಕೊಂಡಿದ್ದ ನಮಗೆ ಇಲ್ಲಿನ ಜಿಂಕೆಯ ಜಾತಿಗೆ ಸೇರಿದ ಪ್ರಾಣಿಗಳನ್ನು ನೋಡಿ ನಿಬ್ಬೆರಗಾಯಿತು.

ಈ ಪ್ರದೇಶದ ಪ್ರಾಣಿಗಳ ಗಾತ್ರವೆಲ್ಲ ಹೀಗೆಯೇ ಇರಬಹುದು. ಇಲ್ಲಿ ಕಂಡ ಕಾಗೆಗಳೂ ಬಾತುಕೋಳಿಗಳಂತೆ ಕೊಬ್ಬಿದ್ದವು. ನಮಗೆ ಹೆಚ್ಚಿನ ಪ್ರಾಣಿಗಳು ಕಾಣಿಸಲಿಲ್ಲ ಎನ್ನುವುದಕ್ಕಿಂತ ಇಲ್ಲಿನ ಪ್ರಯಾಣವೇ ಒಂದು ಪ್ರವಾಸದಂತಿತ್ತು. ಎಲ್ಲ ಕಡೆಯಿಂದ ಸುತ್ತುವರಿದ ಮಂಜಿನ ಪರ್ವತಗಳು, ಹಸಿರು ಮುಕ್ಕಳಿಸುವ ಗುಡ್ಡಗಳನ್ನು ಭೇದಿಸಿಕೊಂಡು ಹೋಗುವ ರಸ್ತೆಗಳು, ಗಟ್ಟಿಮೊಸರನ್ನು ಸುರಿದಂತೆ ಕಾಣುವ ಗ್ಲೇಷಿಯರ್ ಪಟ್ಟೆಗಳ ಬೆಟ್ಟಗಳು, ತೀರ ಎತ್ತರದಲ್ಲಿ ಹಸಿರು ಕಾಣದಿದ್ದರೂ ಹೋಗುವ ದಾರಿಯಲ್ಲಿ ಬಿಸಿಲು ನೆರಳಿನ ನಡುವೆ ಚೆಲ್ಲಾಟವಾಡುವ ಬೆಟ್ಟಸಾಲುಗಳು, ಅಲ್ಲಲ್ಲಿ ಹರಿಯುವ ಝರಿ ಜಲಪಾತಗಳು, ಕಾಲುವೆಗಳು, ಆಹ್ಲಾದಕರ ಹವೆ ಆನಂದವನ್ನುಂಟುಮಾಡಿದವು.
ದೂರದಲ್ಲಿ ದೆನಾಲಿಯ ಅಗ್ರ ಶಿಖರ ಕಾಣಿಸುತ್ತಿತ್ತು. 20,310 ಅಡಿಗಳ (6190 ಮೀಟರ್) ಈ ಶಿಖರ ಉತ್ತರ ಅಮೇರಿಕಾದಲ್ಲೇ ಅತಿ ಎತ್ತರದ ಶಿಖರವೆಂದು ಹೆಸರುವಾಸಿಯಾಗಿದೆ. ಇದರ ವಿಶೇಷವೆಂದರೆ ಮಂಜು ಮತ್ತು ಗ್ಲೇಷಿಯರ್ ಎರಡನ್ನೂ ಇದು ಹೊದ್ದುಕೊಂಡಿರುವುದು. ತಣ್ಣಗಿನ ಹವೆಯ ಪರಾಕಾಷ್ಠೆಯಿಂದಾಗಿ ಪರ್ವತದ ಮೇಲ್ಭಾಗವು ವರ್ಷದ ಎಲ್ಲ ಕಾಲದಲ್ಲಿಯೂ ದಟ್ಟವಾದ ಮಂಜಿನ ಹೊದಿಕೆಯನ್ನು ಹೊದ್ದುಕೊಂಡು,ಅದರ ಭಾರಕ್ಕೆ ಕೆಳಕ್ಕೆ ಕುಸಿದು ಕಣಿವೆಗಳಲ್ಲಿ ಗ್ಲೇಷಿಯರ್ ಉಂಟಾಗಲು ಕಾರಣವಾಗುತ್ತದಂತೆ. ಪ್ರಸಿದ್ಧವಾದ ೪೪ ಮೈಲು ಉದ್ದದ ಗ್ಲೇಷಿಯರ್ ಗೆ ಖಹಿತ್ನಾ (Kahiltna) ಎಂದು ಹೆಸರು.

ಇದರ ಮಾಹಿತಿಯಷ್ಟೇ ನಮಗೆ ದೊರೆತದ್ದು. ಅದರ ಶಿಖರವನ್ನು ಕಂಡದ್ದು ದೂರದಿಂದ ಮಾತ್ರ. (ಹವಾಮಾನ ಸ್ವಚ್ಛವಾಗಿದ್ದರೆ, ಕುಲು ಮನಾಲಿಯ ಒಂದು ಪಾರ್ಶ್ವದಿಂದ ಎವೆರೆಸ್ಟ್ ಕಾಣುವ ಹಾಗೆ). ಅಷ್ಟಾದರೂ ಲಭ್ಯವಾಯಿತಲ್ಲ ಎನ್ನುವುದೇ ಖುಷಿ. ಇಲ್ಲದೇ, ಹತ್ತಿರ ಹೋಗಲು ಸಾಧ್ಯವೇ? ಈ ಚಳಿಯನ್ನೇ ತಡೆದುಕೊಳ್ಳಲು ಸಾಧ್ಯವಾಗದ ನಮಗೆ ಇನ್ನು ಅಲ್ಲಿ ಹೋದರೆ ನಾವು ಹಿಮಗೆಡ್ಡೆಗಳಾಗಿ ಯಾವುದೋ ಕಣಿವೆಯೊಳಗೆ ಲೀನವಾಗಿಬಿಡಬಹುದು. ಪ್ರಕೃತಿಯ ಅಗಾಧತೆಯೇ ವಿಸ್ಮಯ. ಅದು ಭಯಾನಕವಾದುದೂ ಕೂಡ. ಸೌಂದರ್ಯವನ್ನು ದೂರದಿಂದ ಮಾತ್ರ ಸವಿಯಬೇಕು.
ಹಿಂದಿನ ಸಂಚಿಕೆಗಳು :
- ಡಾ. ಗಿರಿಜಾ ಶಾಸ್ತ್ರಿ – ಲೇಖಕರು, ಬೆಂಗಳೂರು.
