ಮಲಯಾಳ0ದಲ್ಲಿ ಕಾನಮ್ ಇ.ಜೆ ಅವರು ಬರೆದ ಕಾದಂಬರಿ ‘ಹೆಂಡತಿʼ ಯನ್ನು ಕನ್ನಡಕ್ಕೆ ಅನುವಾದಿಸಿ ಕೊಟ್ಟಿದ್ದಾರೆ ಜೆಸ್ಸಿ ಎಲಿಜಬೆತ್ ಜೋಸೆಫ್ ಅವರು , ಈ ಕೃತಿಯ ಕುರಿತು ಸಾವಿತ್ರಿ ಶ್ಯಾನುಭಾಗ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಹೆಂಡತಿ
ಲೇಖಕರು: ಕಾನಮ್ ಇ.ಜೆ
ಅನುವಾದ : ಜೆಸ್ಸಿ ಎಲಿಜಬೆತ್ ಜೋಸೆಫ್
ಬೆಲೆ : ೧೪೦ ರೂಪಾಯಿ
ಪುಟ:೧೨೬+೧೦
ಪ್ರಕಾಶನ: ವಸಂತ ಪ್ರಕಾಶನ
“ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋಟಿ ರೂಪಾಯಿ” ಎಂದು ಹಾಡುವ ಕವಿಯ ನುಡಿ ಕೇಳಿದ್ದೇವೆ. ಹೆಂಡತಿ ಎಂಬುವವಳು ಮನೆಯನ್ನು ಅಚ್ಚುಕಟ್ಟಾಗಿಟ್ಟು ಮನೆಯವರ ಆರೈಕೆ ಮಾಡಿ, ಅವರ ಯೋಗಕ್ಷೇಮ ನೋಡಿಕೊಂಡು, ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಬದುಕಿದರೆ ಅವರಷ್ಟು ಸುಖಿ ಕುಟುಂಬ ಇನ್ನೊಂದಿದೆಯೇ? ಮನೆಯಲ್ಲಿ ಹೆಂಡತಿ ಲೀಲ, ಆರತಿಗೊಬ್ಬಳು ಷೆರ್ಲಿ, ಕೀರ್ತಿಗೊಬ್ಬ ಮಗ ಶಿಬು, ಚಿಕ್ಕಂದಿನಿಂದ ಸಾಕಿ ಸಲಹಿದ ಚಾಕ್ಕೋಚಣ್ಣ ಹೀಗೆ ಮನೆಯವರೆಲ್ಲ ಸುಖದಿಂದಿರಲು ಬಂದ ಸಣ್ಣ ಬಿರುಗಾಳಿಗೆ ಮನೆಯಲ್ಲಿ ಎಲ್ಲವೂ ಏರುಪೇರಾದರೆ?
‘ಹೆಂಡತಿʼ ಮಲಯಾಳದಲ್ಲಿ ಕಾನಮ್ ಇ.ಜೆ ಇವರು ಬರೆದ ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿ ಕೊಟ್ಟಿರುವ ಜೆಸ್ಸಿ ಎಲಿಜಬೆತ್ ಜೋಸೆಫ್ ಅವರ ಕಾರ್ಯದ ಮೂಲಕ ಮಲಯಾಳಿ ಕೃತಿಯೊಂದನ್ನು ಓದುವ ಭಾಗ್ಯ ನನ್ನದಾಯಿತು.

ಬೆನ್ನಿ ಎಂಬ ಉಪನ್ಯಾಸಕನ ಮನೆಯಲ್ಲಿ ಲಾಲಿಯೆಂಬ ಬಿರುಗಾಳಿ ಬರುವವರೆಗೂ ಎಲ್ಲವೂ ತಣ್ಣಗಿತ್ತು. ಮನೆಯೆಂದರೆ ಹೀಗಿರಬೇಕು ಎಂಬ ಆದರ್ಶ ಕುಟುಂಬವಾಗಿತ್ತು. ೧೦ ವರ್ಷ ಸಂಸಾರ ಮಾಡಿದ ಸುಖಿ ಸಂಸಾರದಲ್ಲಿ ಹುಳಿ ಹಿಂಡಲು ಬಂದ ಲಾಲಿಯ ನಡೆ ಸರಿಯಾದುದೇ? ಹಿಂದೆ ಮದುವೆಗೂ ಮುಂಚೆ ಮದುವೆ ನಿಶ್ಚಯವಾದೊಡನೆ ಲೀಲಾಳ ಬಳಿ “ನಿನ್ನ ಪಟವೊಂದಿದ್ದರೆ ಕೊಡು ನನಗೆ “ಎಂದು ಪ್ರೀತಿಯಿಂದ ಬೇಡಿ ಪಡೆದ ಜೀವ, ಇಂದು ಲಾಲಿಯ ಬಳಿ ಕೂಡ ಹಾಗೇ ಕೇಳೂವುದು ಸಮಂಜಸವೇ?.
ಪತಿಯ ಮೇಜಿನ ಬಳಿ ಪುಸ್ತಕಗಳ ಜೋಡಿಸುವಾಗ ಸಿಕ್ಕ ಪುಸ್ತಕದ ನಡುವೆ ಇರುವ ಪಟ ಯಾರದ್ದು? ಮುದ್ದಾಗಿ ಎರಡು ಜಡೆ ಹೆಣೆದು ಬೆಳದಿಂಗಳ ಬಾಲೆಯಂತಿರುವ ಈ ಹುಡುಗಿ ಯಾರು? ಪತಿಗೆ ಕೇಳುವುದು ಸರಿಯೇ? ಈ ನಡುವೆ ಮನೆಗೆ ತಡವಾಗಿ ಬರುತ್ತಿರುವ ಪತಿಯ ಕೆಲಸದೊತ್ತಡವೇನು? ಹೀಗೆ ಹಲವಾರು ಪ್ರಶ್ನೆಗಳಿಗೆ ಉತ್ತರ ಅವಳಿಗೆ ದೊರಕಿತೆ?
ಚಾಕ್ಕೋಚಣ್ಣ ಬೆನ್ನಿ ತಾಯಿಯನ್ನು ಕಳೆದುಕೊಂಡ ಕ್ಷಣದಿಂದ ಅವನ ತಾಯಿಯಾಗಿ, ಅವನ ಆಟಿಕೆಯಾಗಿ, ಮುದ್ದಾಗಿ ಬೆಳೆಸಿ, ವಿದ್ಯಾವಂತನ್ನಾಗಿಸಿ, ಮದುವೆಯ ನಂತರ ಬಂದ ಸೊಸೆ ಅವಳನ್ನು ಕೆಲಸದವನೆಂದು ಹೀನಾಯವಾಗಿ ಕಾಣುವಳೆ? ಎಂಬ ಪ್ರಶ್ನೆಗೆ ಉತ್ತರವಾಗಿ ಮಾವ ಎಂದು ಬಾಯಿತುಂಬಾ ಕರೆದು ಮನೆಯ ಸದಸ್ಯರಂತೆ ಅವನನ್ನು ಕಂಡಾಗ ಇನ್ನಷ್ಟು ಖುಶಿಯಾಗಿ ಕೊನೆಯವರೆಗೂ ಅವರ ಮನೆಯ ಸದಸ್ಯನಾಗಿ, ಕಥೆಯ ತುಂಬಾ ಆವರಿಸಿ ನಮ್ಮನ್ನು ಕಾಡುತ್ತಾ, ಸಾಗುತ್ತಾನೆ. ಮನಸಿಲ್ಲದಿದ್ದರೂ ಮಾವ ಬೇಜಾರುಪಟ್ಟುಕೊಳ್ಳುತ್ತಾರಲ್ಲ ಎಂದು ಅವರು ಕೊಟ್ಟ ಕಾಫಿಯನ್ನು ಕುಡಿಯುವ ಲೀಲಾ, ರಾತ್ರಿಯ ಸಮಯದಲ್ಲಿ ಸ್ನಾನಕ್ಕೆ ನೀರಿದೆಯೇ ಎಂದು ಬೆನ್ನಿ ಕೇಳಿದಾಗ ಹಾ ಸಿದ್ಧವಿದೆ ಎಂದು ಅವನ ಮೇಲೆ ಕಾಳಜಿ ತೋರುವ ಪ್ರೀತಿ.ಇವನ್ನೆಲ್ಲ ವರ್ಣಿಸಲು ಅಸಾಧ್ಯವೇನೋ.

ನಡುನಡುವೆ ಪ್ರಕೃತಿಯ ವರ್ಣನೆ ಕೂಡ ಮನಸೂರೆಗೊಳ್ಳುವಂತಿದ್ದು,ನಿಸರ್ಗದ ರಮಣೀಯತೆಯನ್ನು ಚಿತ್ರಿಸಿರುವುದು ರೋಮಾಂಚನವನ್ನುಂಟುಮಾಡುವಂತಿದೆ.”ಇಡೀ ಪ್ರಪಂಚವೇ ನಿದ್ರೆಯಲ್ಲಿ ಮುಳುಗಿದೆ.ದ್ರಾಕ್ಷಾರಸವನ್ನು ಕುಡಿದು,ಪ್ರಜ್ಞಾಹೀನಳಾಗಿ ನಿದ್ರಿಸುತ್ತಿರುವ ಸುಂದರಿಯಂತೆ ಪ್ರಕೃತಿ” ಹೀಗೆ ಪರಿಸರದ ಕುರಿತು ಹೀಗೂ ಬರೆಯಬಹುದೇ ಎಂದು ಆಶ್ಚರ್ಯಗೊಂಡೆ.

ಕಥೆಯ ಎಲ್ಲಾ ಪಾತ್ರಗಳು ನ್ಯಾಯ ಒದಗಿಸುತ್ತಾ, ಹೆಂಡತಿಯೆಂದರೆ ಯಾರು? ಹೇಗಿರಬೇಕು?ಎಂದು ಕೊನೆಯಲ್ಲಾದರೂ ನಾಯಕನಿಗೆ ಅರ್ಥವಾಯಿತೆ? ಅವನು ತನ್ನ ಉಪನಾಯಕಿಗೆ ಇಟ್ಟ ಸಣ್ಣ ಪರೀಕ್ಷೆಯಲ್ಲಿ ಯಾರು ಗೆದ್ದರು. ಸೋತವರು ಯಾರು? ಹೀಗೆ ಎಲ್ಲ ಪ್ರಶ್ನೆಗಳಿಗೆ ಉತ್ತರ ʼಹೆಂಡತಿʼ ಓದಿದಾಗ ನಿಮಗೆ ದಕ್ಕುವುದರಲ್ಲಿ ಸಂಶಯವಿಲ್ಲ.
- ಸಾವಿತ್ರಿ ಶ್ಯಾನುಭಾಗ
