ಯಾರದೋ ಮೇಲಿನ ಕೋಪಕ್ಕೆ ಇನ್ಯಾರದೋ ಮೇಲೆ ಸಿಟ್ಟಾಗುತ್ತೇವೆ…ನಾವು ನಾವಾಗಿಯೇ ಇರುವುದ ಬಿಟ್ಟು ಬೇರೆ ಏನೇನೋ ಆಗುತ್ತೇವೆ…ಕವಿ ನಾಗರಾಜ್ ಜಿ.ಎನ್.ಬಾಡ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…
ನಾವು ನಾವಾಗುವುದನ್ನು ಬಿಟ್ಟು
ಯಾರ್ಯಾರೋ ಆಗುತ್ತೇವೆ
ನಾವು ನಾವಾಗಿಯೇ ಇರುವುದ ಬಿಟ್ಟು
ಬೇರೆ ಏನೇನೋ ಆಗುತ್ತೇವೆ
ಯಾರೋ ನಮ್ಮನ್ನು ದ್ವೇಷಿಸುತ್ತಾರೆಂದು
ನಾವು ಪ್ರೀತಿಸುವುದನ್ನ ಮರೆಯುತ್ತೇವೆ
ನಗುನಗುತಾ ಇರುವುದನ್ನು ಬಿಟ್ಟು
ಸಿಟ್ಟು ಆಕ್ರೋಶಕ್ಕೆ ಬಲಿಯಾಗುತ್ತೇವೆ
ಯಾರದೋ ಮೇಲಿನ ಕೋಪಕ್ಕೆ
ಇನ್ಯಾರದೋ ಮೇಲೆ ಸಿಟ್ಟಾಗುತ್ತೇವೆ
ವಿವೇಚನಾ ಶೂನ್ಯರಾಗಿ ವರ್ತಿಸುತ್ತ
ತಾಳ್ಮೆ ಸಹನೆಯನ್ನ ಕಳೆದುಕೊಳ್ಳುತ್ತೇವೆ
ಪ್ರೀತಿ ಆತ್ಮೀಯರ ಜೊತೆಗೂ ವಿನಾಕಾರಣ
ಕೋಪ ತಾಪ ಮುನಿಸು ತೋರಿಸುತ್ತೇವೆ
ಗೌಜು ಗದ್ದಲ ಮಾಡುತ್ತ ಮನದ ತುಂಬ
ಅಶಾಂತಿ ಅಸಹನೆ ತುಂಬಿಕೊಳ್ಳುತ್ತೇವೆ
ನಾವು ನಾವಾಗಿದ್ದರಷ್ಟೇ ಶಾಂತಿ ನೆಮ್ಮದಿ
ನಾವಲ್ಲದ ನಮ್ಮೊಳಗೆ ಒಣ ಕಿರಿಕಿರಿ ಪಿರಿಪಿರಿ
ತೋರಿಕೆಯ ಹೇರಿಕೆ ಭಾರ ಆಗುವುದು
ಏನೇನೋ ಸಮಸ್ಯೆಗಳ ಸೃಷ್ಟಿಸುವುದು
ಇದ್ದಂತೆ ಇದ್ದರೆ ಬದುಕುವುದು ಸುಲಭ
ನಟನೆಯ ಜೀವನ ನೀಡದು ಸುಖ
ಬೇಡದ ಭಾರ ಹೊತ್ತ ಕತ್ತೆಯಂತಾದರೆ
ನೈಜ ನಗುವಿರದೆ ಅರಳದು ಮುಖ
- ನಾಗರಾಜ್ ಜಿ.ಎನ್.ಬಾಡ, ಕುಮಟ
