೨೦೦೦ ವರ್ಷಗಳಿಗೂ ಅಧಿಕ ಭವ್ಯ ಇತಿಹಾಸ, ಶ್ರೀಮಂತ ಸಂಸ್ಕೃತಿ ಮತ್ತು ಸಾಹಿತ್ಯ ಪರಂಪರೆಯನ್ನು ಹೊಂದಿರುವ ಸುಂದರ ನಾಡು. ರಾಜಾಜಿನಗರದ ಇಎಸ್ಐ ಆಸ್ಪತ್ರೆಯಲ್ಲಿ 71ನೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಇಎಸ್ಐ ವೈದ್ಯಕೀಯ ಕಾಲೇಜಿನ ಡೀನ್ ಡಾ. ಜಿತೇಂದ್ರ ಕುಮಾರ್, ವೈದ್ಯಕೀಯ ಅಧೀಕ್ಷಕರಾದ ಡಾ. ವಿ. ವಿಜಯ್ ಕುಮಾರಿ, ಇಎಸ್ಐ ಆಸ್ಪತ್ರೆಯ ಉಪನಿರ್ದೇಶಕರಾದ ರಾಮರಾಜ್ ಮೀನಾ ಹಾಗೂ ಡಾ. ವಾಣಿ ಸೇರಿದಂತೆ ಆಸ್ಪತ್ರೆಯ ವೈದ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ವೈದ್ಯಕೀಯ ಅಧೀಕ್ಷಕರಾದ ಡಾ. ವಿಜಯ್ ಕುಮಾರಿ ಅವರು ಮಾತೃಭಾಷೆಯ ಮಹತ್ವವನ್ನು ವಿವರಿಸಿ, ಪ್ರತಿಯೊಬ್ಬರೂ ತಮ್ಮ ಭಾಷೆಯ ಬಗ್ಗೆ ಅಭಿಮಾನ ಹಾಗೂ ನಾಡಿನ ಬಗ್ಗೆ ಪ್ರೀತಿ, ಗೌರವವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಆಸ್ಪತ್ರೆಯ ಉಪನಿರ್ದೇಶಕರಾದ ರಾಮರಾಜ್ ಮೀನಾ ಅವರು ಮಾತನಾಡಿ, ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ವರ್ಗದವರಿಗೆ 71ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ಕೋರಿದರು.
ವೈದ್ಯಕೀಯ ಕಾಲೇಜಿನ ಡೀನ್ ಡಾ. ಜಿತೇಂದ್ರ ಕುಮಾರ್ ಅವರು ಮಾತನಾಡಿ, ಕರ್ನಾಟಕ ಏಕೀಕರಣದ ಇತಿಹಾಸವನ್ನು ಸ್ಮರಿಸಿದರು. ನಾಡಿನ ಏಕೀಕರಣಕ್ಕಾಗಿ ಶ್ರಮಿಸಿದ ಹಿರಿಯ ಕವಿಗಳು, ಸಾಹಿತಿಗಳು ಹಾಗೂ ಮಹನೀಯರ ಕೊಡುಗೆಗಳನ್ನು ನೆನಪಿಸಿಕೊಂಡರು. ಮುಂದಿನ ಯುವ ಪೀಳಿಗೆಯೂ ಕನ್ನಡ ಭಾಷೆ, ನಾಡು ಮತ್ತು ಸಂಸ್ಕೃತಿಯ ಅಭಿಮಾನವನ್ನು ಉಳಿಸಿಕೊಂಡು, ಮುಂದಿನ ದಿನಗಳಲ್ಲಿಯೂ ಅದನ್ನು ಬೆಳೆಸಿಕೊಂಡು ಹೋಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಐಸಿಟಿಸಿ ಆಪ್ತ ಸಮಾಲೋಚಕರಾದ ಆರ್. ಲಕ್ಷ್ಮೀನಾರಾಯಣ ಅವರು ಕನ್ನಡ ನಾಡಿನ ಇತಿಹಾಸ, ಸಂಸ್ಕೃತಿ ಹಾಗೂ ಕನ್ನಡ ನಾಡಿನ ಶಾಸನಗಳಲ್ಲಿ ಉಲ್ಲೇಖಗೊಂಡಿರುವ ಕನ್ನಡಿಗರ ಶೌರ್ಯ, ಸಾಹಸ ಮತ್ತು ಔದಾರ್ಯದ ಪರಂಪರೆಯನ್ನು ಮೆಲುಕು ಹಾಕಿದರು.

ಕಾರ್ಯಕ್ರಮದ ಸ್ವಾಗತ ಮತ್ತು ನಿರೂಪಣೆಯನ್ನು ಮನರಂಜನಾ ಕೂಟದ ಸದಸ್ಯರಾದ ರಫೀಕ್ ಅವರು ನಿರ್ವಹಿಸಿದರು. ಮನರಂಜನಾ ಕೂಟದ ಜಂಟಿ ಕಾರ್ಯದರ್ಶಿಗಳಾದ ಶಿವಣ್ಣ ಎಸ್. ಅವರು ವಂದನಾರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳಾದ ಶಿಲ್ಪ, ಧನಂಜಯ್, ಶ್ರೀಶೈಲ, ಶೃಂಗೇರಿ, ಹರೀಶ್, ಸಂಪತ್ ಹಾಗೂ ಶರ್ಮಿಳಾ ಸೇರಿದಂತೆ ಇತರ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
ಕನ್ನಡ ನಾಡು, ನುಡಿ, ಭಾಷೆ, ಸಂಸ್ಕೃತಿ ಮತ್ತು ಪರಂಪರೆಯ ಮಹತ್ವವನ್ನು ಸಾರುವ ಮೂಲಕ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ಅರ್ಥಪೂರ್ಣವಾಗಿ ಹಾಗೂ ಸಂಭ್ರಮದಿಂದ ನೆರವೇರಿತು.
- ಆಕೃತಿಕನ್ನಡ ನ್ಯೂಸ್
