ನವಮಾಸ

ಸಣ್ಣ ಕತೆ: ಕಾವ್ಯ ದೇವರಾಜ್ 
Screenshot (27)

“ನವಮಾಸ ನಮ್ಮನ್ನು ಗರ್ಭದಲ್ಲಿರಿಸಿ, ಅಗಾಧ ನೋವಿನಲ್ಲೂ ನಾವು ಹೊರ ಪ್ರಪಂಚಕ್ಕೆ ಬಂದಾಗ ನಕ್ಕು, ನಮ್ಮ ಪ್ರತಿ ಹೆಜ್ಜೆಯನ್ನು ಸುಗಮವಾಗಿಸಲು ನಮ್ಮ ಕಷ್ಟ ಸುಖಗಳಿಗೆ ಹೆಗಲು ನೀಡಿ ನಾವು ಕೊಡುವ ಉಪದ್ರವಗಳನ್ನು ಸಹಿಸಿಕೊಂಡು ನಮ್ಮೆಲ್ಲರ ಪ್ರತಿಕ್ಷಣದಲ್ಲೂ ನಮ್ಮ ಜೊತೆ ಇರುವ ಹಾಗೂ ತನ್ನ ಪೂರ್ಣ ಜೀವಮಾನವನ್ನು ತನ್ನ ಮಕ್ಕಳಿಗಾಗಿ ಸಮರ್ಪಿಸುವ ಎಲ್ಲ ತಾಯಿಯರಿಗೆ ತಾಯಂದಿರ ದಿನದ ಶುಭಾಶಯಗಳು”.

(ಒಂದು ಹೆಣ್ಣಿಗೆ ಗಂಡ ಎಷ್ಟೇ ಪ್ರೀತಿ ತೋರಿಸಿದರೂ, ಬಂಧು ಬಳಗ ಎಷ್ಟೇ ಕಾಳಜಿ- ಆರೈಕೆ ಮಾಡಿದರೂ, ಯಾವ ಸಂಬಂಧವೂ ಅಮ್ಮನ ಪ್ರೀತಿ, ಕಾಳಜಿ ಮತ್ತು ಆರೈಕೆಗೆ ಮಾತ್ರ ಸಮನಾಗುವುದಿಲ್ಲ. ಅಲ್ಲವೇ? ಕೆಲವೊಮ್ಮೆ ಎಷ್ಟೋ ಕ್ಲಿಷ್ಟಕರ ಸಂದರ್ಭಗಳಲ್ಲಿ ನಾನಾ ಕಾರಣಗಳಿಂದ ತಾಯಿಯನ್ನು ಕಳೆದುಕೊಂಡ ಮಕ್ಕಳು, ತಾಯಿಯ ಪ್ರೀತಿಯನ್ನು ತಮ್ಮ ಅಕ್ಕ-ತಂಗಿ ಅಥವಾ ಅವರ ಮಕ್ಕಳಲ್ಲಿ ಕಾಣುತ್ತಾರೆ. ಇಂತಹದೇ ಒಂದು ನೈಜ್ಯ ಘಟನೆಯನ್ನು ಒಳಗೊಂಡಿರುವ ಒಂದು ಪುಟ್ಟ ಕಥೆ)

ಶಿವಮೊಗ್ಗದಲ್ಲಿ ವಾಸವಿದ್ದ ಒಂದು ಸಣ್ಣ ಕುಟುಂಬ ಗಂಡ ಶೇಖರ್, ಹೆಂಡತಿ ಪಾರ್ವತಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ದಿವ್ಯಾ ಮತ್ತು ಸ್ಪಂದನ. ಶೇಖರ್ ಶಿವಮೊಗ್ಗದ ವಿದ್ಯುತ್ ಇಲಾಖೆಯಲ್ಲಿ ಸರ್ಕಾರಿ ನೌಕರಿಯಲ್ಲಿ ಇದ್ದನು. ದಿವ್ಯ ಗ್ರ್ಯಾಜುಯೇಷನ್ ಮುಗಿಸಿದ್ದಳು. ಸ್ಪಂದನ ಪ್ರಥಮ ಬಿಎಸ್ಸಿ ಓದುತ್ತಿದ್ದಳು. ದಿವ್ಯಾಳಿಗೆ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಕೆಲಸ ಮಾಡುತ್ತಿದ್ದ ಹುಡುಗನ ಜೊತೆ ಮದುವೆ ಮಾಡಲು ಹಿರಿಯರು ನಿಶ್ಚಯಿಸಿದ್ದರು. ಆದರೆ ದಿವ್ಯಾ ಹಾಗೂ ಸ್ಪಂದನ ಚಿಕ್ಕಂದಿನಿಂದಲೂ ಎಷ್ಟೇ ಜಗಳವಾಡುತ್ತಿದ್ದರೂ ಬಹಳ ಅನ್ಯೋನ್ಯದಿಂದ ಬೆಳೆದವರು. ಹಾಗಾಗಿ ದಿವ್ಯಾಳಿಗೆ ಅಷ್ಟು ದೂರದ ಬೆಂಗಳೂರಿಗೆ ನನಗೆ ಮದುವೆ ಮಾಡಿಕೊಂಡು ಹೋಗಲು ಇಷ್ಟವಿಲ್ಲ. ‘ನನಗೆ ಬೇಕಾದಾಗ ಬಂದು ಹೋಗಿ ಮಾಡಲು ಆಗುವುದಿಲ್ಲ. ಹಾಗಾಗಿ ಇಲ್ಲೇ ಎಲ್ಲಾದರೂ ಹುಡುಗನನ್ನು ನೋಡಿ ನಾನು ಮದುವೆಯಾಗುತ್ತೇನೆ’ ಎಂದು ಹಠ ಹಿಡಿದಿದ್ದಳು. ಸ್ಪಂದನಳು ಕೂಡ ಅಕ್ಕ ಹೇಳುತ್ತಿರುವುದು ಸರಿ ಎಂದು ಅವಳು ಹೇಳಿದಂತೆಯೇ ಹೇಳಿದಳು. ಅದಕ್ಕೆ ತಾಯಿ ಪಾರ್ವತಿ ‘ಸುಮ್ಮನಿರಿ… ನಿಮಗೆ ಗೊತ್ತಾಗುವುದಿಲ್ಲ. ಒಳ್ಳೆಯ ಹುಡುಗ ಸಿಗುವುದು ಎಂದರೆ ಸುಮ್ಮನೇನಾ?’ ಎಂದು ಹೇಳಿ ಸ್ಪಂದನಗೆ ನಿನಗೆ ಮದುವೆ ಮಾಡುವ ಸಮಯ ಬಂದಾಗ ನಿನ್ನನ್ನು ಬೆಂಗಳೂರಿಗೆ ಮದುವೆ ಮಾಡುತ್ತೇವೆ. ಆಗ ಅಕ್ಕ-ತಂಗಿ ನೀವಿಬ್ಬರೂ ಜೊತೆಯಲ್ಲೇ ಇರುವವರಂತೆ’ ಎಂದು ಅವರಿಬ್ಬರನ್ನು ರೇಗಿಸಿ ಇಬ್ಬರಿಗೂ ಸಮಾಧಾನ ಮಾಡಿದ್ದಳು. ನಿಶ್ಚಯದಂತೆ ದಿವ್ಯಾಳನ್ನು ಬೆಂಗಳೂರಿನ ಸಾಫ್ಟ್ ವೇರ್ ಉದ್ಯೋಗಿ ಕರ್ಣನಿಗೆ ಧಾರೆ ಎರೆದು ವೈಭವದಿಂದ ಮದುವೆ ಮಾಡಿಕೊಡಲಾಯಿತು. ದಿವ್ಯಾಳನ್ನು ಮದುವೆಯ ನಂತರ ಗಂಡನ ಮನೆಗೆ ಕಳುಹಿಸುವಾಗ ದಿವ್ಯ ಮತ್ತು ಸ್ಪಂದನ ತಬ್ಬಿಕೊಂಡು  ಕಡಿಮೆಯೇನು ಅಳಲಿಲ್ಲ. ಆಗ ಕರ್ಣ ಸ್ಪಂದನಗಳಿಗೆ ನಿನ್ನ ಅಕ್ಕನನ್ನು ಕರೆದುಕೊಂಡು ನಾನು ಬೇರೆ ಗ್ರಹಕ್ಕೆ ಹೋಗುತ್ತಿಲ್ಲ. ಬೆಂಗಳೂರಿಗೆ ಹೋಗುತ್ತಿರುವುದು ಅಳಬೇಡ,  “ನಿನಗೆ ಕಾಲೇಜಿನಲ್ಲಿ ರಜೆ ಬಂದಾಗ ನೀನು ಬೆಂಗಳೂರಿಗೆ ಬಾ. ನಿನಗೆ ಬರಲಾಗದಿದ್ದಲ್ಲಿ ನಿನ್ನ ಅಕ್ಕನನ್ನೇ ಶಿವಮೊಗ್ಗಕ್ಕೆ ಕಳುಹಿಸುತ್ತೇನೆ” ಎಂದು ಇಬ್ಬರಿಗೂ ಸಮಾಧಾನ ಮಾಡಿದನು.

ದಿವ್ಯಾಳಿಗೆ ಮದುವೆಯಾಗಿ ಕೇವಲ ಎರಡು ತಿಂಗಳು ಕಳೆದಿತ್ತು. ಇದ್ದಕ್ಕಿದ್ದ ಹಾಗೆ ಪಾರ್ವತಿ ತೀವ್ರ ಅನಾರೋಗ್ಯಕ್ಕೀಡಾಗಿ ಕೊನೆಯುಸಿರೆಳೆದಳು. ಯಾರು ಈ ರೀತಿ ಆಗಬಹುದೆಂದು ನಿರೀಕ್ಷಿಸಿರಲಿಲ್ಲ. ಇದರಿಂದ ಒಮ್ಮೆಲೇ ಕುಟುಂಬದವರೆಲ್ಲ ಆಘಾತಕ್ಕೆ ಒಳಗಾದರು. ನೆಂಟರಿಷ್ಟರು ಬಂದು ಈ ಹೆಣ್ಣುಮಕ್ಕಳ ನೋವನ್ನು ನೋಡಿ ಸಂಕಟಪಟ್ಟರು. ಹಿರಿಯರೊಬ್ಬರು ಇಬ್ಬರಿಗೂ ‘ನೀವಿಬ್ಬರೂ ಒಬ್ಬರಿಗೊಬ್ಬರು ಆಗಬೇಕು. ನಿಮ್ಮ ತಂದೆಯನ್ನು ಒಮ್ಮೆ ನೋಡಿ ನೀವಿಬ್ಬರೂ ಹೀಗೆ ಅಳುತ್ತಿದ್ದರೆ, ಅವನಿಗೂ ನಿಮ್ಮನ್ನು ನೋಡಿ ಇನ್ನೂ ಹೆಚ್ಚು ನೋವಾಗುತ್ತದೆ. ನೀವಿಬ್ಬರೂ ಚೆನ್ನಾಗಿದ್ದರೆ ಖುಷಿಯಾಗಿದ್ದರೆ, ನಿಮ್ಮ ತಂದೆಯೂ ಚೆನ್ನಾಗಿರುತ್ತಾರೆ’ ಯಾವುದೇ ಕಾರಣಕ್ಕೂ ನೀವಿಬ್ಬರೂ ಧೈರ್ಯ ಕಳೆದುಕೊಳ್ಳಬಾರದು, ಎಲ್ಲ ಸಂದರ್ಭಗಳಲ್ಲೂ ಗಟ್ಟಿಯಾಗಿ ನಿರ್ಧಾರ ತೆಗೆದುಕೊಂಡು ಮನೆಯನ್ನು ನಡೆಸಿಕೊಂಡು ನಿಮ್ಮ ತಂದೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಸಮಾಧಾನ ಮಾಡಿ, ಧೈರ್ಯ ತುಂಬಿದ್ದರು. ಹಾಗಾಗಿ ಇಬ್ಬರು ಹೆಣ್ಣುಮಕ್ಕಳು ಮನಸ್ಸಿನಲ್ಲಿ ಎಷ್ಟೇ ದುಃಖವಿದ್ದರೂ ಅಪ್ಪನ ಮುಂದೆ ನಗುತ್ತಲೇ ಇದ್ದರು. ದಿವ್ಯ ಅಮ್ಮನ ಎಲ್ಲ ಕಾರ್ಯಗಳನ್ನು ಮುಗಿಸಿ ಶಿವಮೊಗ್ಗದಲ್ಲಿ  ಸ್ವಲ್ಪ ದಿನಗಳು ಇದ್ದು ನೋವಿನಿಂದ ಮನಸ್ಸಿಲ್ಲದ ಮನಸ್ಸಿನಲ್ಲಿ ಗಂಡನ ಮನೆಗೆ ತೆರಳಿದ್ದಳು. ಹೋಗುವಾಗ ಸ್ಪಂದನಗಳಿಗೆ ಅಪ್ಪನನ್ನು ಚೆನ್ನಾಗಿ ನೋಡಿಕೋ ಎಂದು ಅಳುತ್ತಲೇ ಹೇಳಿ ಹೊರಟಳು.

ಶೇಖರ್ ಮತ್ತು ಸ್ಪಂದನ ಬೆಳಗ್ಗೆ ಇಬ್ಬರೂ ಸೇರಿ ಮನೆ ಕೆಲಸ ಮಾಡಿ, ತಿಂಡಿ ಮಾಡಿ ಡಬ್ಬಿಯನ್ನು ತೆಗೆದುಕೊಂಡು ಬೆಳಗ್ಗೆ ಹೋಗುತ್ತಿದ್ದವರು. ಮತ್ತೆ ಸಂಜೆ ಇಬ್ಬರೂ ಜೊತೆಯಲ್ಲಿಯೇ ಬಂದು ಕಾಫಿ ಮಾಡಿಕೊಂಡು ಕುಡಿಯುತ್ತಾ ಸ್ವಲ್ಪ ಸಮಯ ವಿಶ್ರಮಿಸುತ್ತಿದ್ದರು. ನಂತರ ಶೇಖರ್ ಸ್ಪಂದನ ಓದಲು ಕಳುಹಿಸಿ ಅವನೇ ಅಡುಗೆ ಮಾಡುತ್ತಿದ್ದ. ಶೇಖರನಿಗೆ ದಿವ್ಯಳಿಗೆ ಹೇಗೋ ಅಳಿಯ ಕರ್ಣ ಮನೆಯಲ್ಲಿ ಅವಳನ್ನು ಸಂತೋಷದಿಂದ ನೋಡಿಕೊಳ್ಳುತ್ತಾರೆ. ಆದರೆ ಸ್ಪಂದನಳನ್ನು ಇಲ್ಲಿ ಪ್ರೀತಿ, ಕಾಳಜಿಗೆ ಯಾವುದೇ ಕೊರತೆಯಾಗದಂತೆ ಅವಳನ್ನು ಬಹಳ ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಹಾಗೆಯೇ ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಯಾವಾಗಲೂ ಅದು ಇದು ಎಂದು ತಮಾಷೆ ಮಾಡುತ್ತಾ ಅವಳನ್ನು ನಗಿಸಲು ಪ್ರಯತ್ನಿಸುತ್ತಿದ್ದ. ಹಾಗೆಯೇ ಸ್ಪಂದನಳಿಗೆ ಅಪ್ಪ ಶೇಖರ್ ಅಮ್ಮನನ್ನು ಮರೆಯಲು ಎಷ್ಟು ಕಷ್ಟ ಪಡುತ್ತಿದ್ದ ಎನ್ನುವುದು ಅವಳಿಗೆ ತಿಳಿದಿತ್ತು. ಹಾಗಾಗಿ ಅವಳು ತಾನು ಸಂತೋಷವಾಗಿರುವಂತೆ ನಟಿಸುತ್ತಾ ಅಪ್ಪನ ಮುಂದೆ ಮನಸ್ಸಿನಲ್ಲಿ ಎಷ್ಟೇ ನೋವಿದ್ದರೂ ನಗುನಗುತ್ತಾ ಇದ್ದಳು. ಹೀಗೆ ಒಬ್ಬರಿಗೊಬ್ಬರು ನೋವಾಗ ಬಾರದೆಂಬ ಕಾರಣದಿಂದ ಮನಸ್ಸಿನಲ್ಲಿ ಎಷ್ಟೇ ನೋವಿದ್ದರೂ ಹೊರಗಡೆ ಇಬ್ಬರು ನಗುತ್ತಲೇ ಇದ್ದರು.

ammaಚಿತ್ರಕಲೆ : ಕಾವ್ಯ ದೇವರಾಜ್

ಪಾರ್ವತಿಯನ್ನು ಕಳೆದುಕೊಂಡು ಆಘಾತದಲ್ಲಿದ್ದ ಕುಟುಂಬಕ್ಕೆ ಆ ನೋವನ್ನು ಮರೆಸುವ ಒಂದು ಸಂತೋಷದ ವಿಷಯ ಬಂದಿತು. ಸ್ಪಂದನ ಸಂತೋಷದಿಂದ ಅಪ್ಪ ಅಪ್ಪ ಎಂದು ಕೂಗುತ್ತಾ ಅವಳ ರೂಮಿನಿಂದ ಹೊರ ಬಂದಳು. ಶೇಖರ್ ಅಂಗಳದಲ್ಲಿ ಕುಳಿತು ಓದಿದ್ದ ದಿನಪತ್ರಿಕೆಯನ್ನು ಮತ್ತೆ ಮತ್ತೆ ತಿರುವಿ ಹಾಕುತ್ತಿದ್ದನು. ಮಗಳು ಅಷ್ಟು ಸಂತೋಷದಿಂದ ಲವಲವಿಕೆಯಿಂದ ಅವನನ್ನು ಕೂಗುವುದನ್ನು ಕೇಳಿ ‘ಏನು… ಮಗಳೆ. ಇವತ್ತು ಇಷ್ಟು ಖುಷಿಯಾಗಿದ್ದೀಯಾ. ಏನು ಸಮಾಚಾರ ಹೇಳು?. ನಾನು ಖುಷಿ ಪಡುತ್ತೇನೆ’ ಎಂದು ಕೇಳಿದ ‘ಹೂಂ… ಅಪ್ಪ ವಿಷ್ಯ ಗೊತ್ತಾದ್ರೆ ನಿನಗೂ ತುಂಬಾ ಖುಷಿಯಾಗುತ್ತೆ’ ಅಂದಳು. ‘ಹೌದಾ… ಮತ್ತೇಕೆ ನನ್ನನ್ನು ಸತಾಯಿಸುತ್ತಿಯಾ?. ಏನು ವಿಷಯ ಬೇಗ ಹೇಳು ಮಗು’ ಎಂದ ಶೇಖರ್. ಸ್ಪಂದನ ‘ಅಪ್ಪ, ನಮ್ಮ ಮನೆಗೆ  ಹೊಸ ಅತಿಥಿ ಬರ್ತಿದ್ದಾರೆ’ ಅಂದಳು. ಶೇಖರ್ ಗೆ ಅರ್ಥವಾಗಲಿಲ್ಲ.’ ಏನು ಹೊಸ ಅತಿಥಿನಾ! ಯಾರದು?. ನನಗೆ ಗೊತ್ತಿಲ್ಲದೆ, ಯಾವಾಗ ಬರುತಿದ್ದಾರೆ?. ಸರಿಯಾಗಿ ಹೇಳು’ ಎಂದನು. ಸ್ಪಂದನಾ ‘ಅಪ್ಪಾ.. ಅಕ್ಕ ಫೋನ್ ಮಾಡಿದ್ದಳು’ ಅನ್ನುತ್ತಿದ್ದಂತೆ  ಮಧ್ಯದಲ್ಲಿ ಶೇಖರ್ ಬಾಯಿ ಹಾಕಿ ಮತ್ತೆ ನನ್ನ ಜೊತೆ ಮಾತನಾಡದೆ ಫೋನ್ ಇಟ್ಟಿದ್ದಾಳೆ ಎಂದ. ಅದಕ್ಕೆ ಸ್ಪಂದನ ‘ಅಯ್ಯೋ ಅಪ್ಪಾ…. ನಾನು ಹೇಳೋದನ್ನ ಪೂರ್ತಿ ಕೇಳು. ಅಕ್ಕ ನಮ್ಮನೆಗೆ ಒಂಬತ್ತು ತಿಂಗಳಲ್ಲಿ ಹೊಸ ಅತಿಥಿ ಕರ್ಕೊಂಡು ಬರ್ತಾಳೆ. ಇನ್ನು ಅರ್ಥವಾಗಲಿಲ್ಲವಾ?. ಅಂದ್ರೆ… ನೀನು ಅಜ್ಜ, ನಾನು ಚಿಕ್ಕಮ್ಮ ಆಗ್ತಿದೀವಿ ಅಪ್ಪಾ’ ಎಂದು ಖುಷಿಯಿಂದ ಹೇಳಿದಳು. ಶೇಖರನ ಕಣ್ಣಲ್ಲಿ ‘ಒಮ್ಮೆಲೇ ಆನಂದ ಭಾಷ್ಪ ಸುರಿಯಿತು. ದಿವ್ಯ ನಿನ್ನ ಮಾತು ಕೇಳಿ, ನಿಜವಾಗಲೂ ತುಂಬಾ ಸಂತೋಷವಾಯಿತು ಕಂದ. ಈಗೇನಾದರೂ ಪಾರ್ವತಿ ಇದ್ದಿದ್ದರೆ ಎಷ್ಟು ಖುಷಿ ಪಡುತ್ತಿದ್ದಳು’ ಅಂದ. ದಿವ್ಯ ‘ಅಪ್ಪ ನೋಡ್ತಿರೂ… ಅಕ್ಕನಿಗೆ ಹೆಣ್ಣು ಮಗುನೇ ಆಗುತ್ತೆ. ಅಮ್ಮ ಮನೆಗೆ ಅಕ್ಕನ ಮಗು ರೂಪದಲ್ಲಿ ಹುಟ್ಟಿ ಬರುತ್ತಾಳೆ. ಸುಮ್ಮನೆ ಇರು  ನನಗೆ ಪರೀಕ್ಷೆ ಮುಗಿದ ಬಳಿಕ ನಾನು- ನೀನು ಬೆಂಗಳೂರಿಗೆ ಹೋಗಿ ಬರೋಣ. ಆಮೇಲೆ ಅಪ್ಪ, ಇವತ್ತು ನಾನೇ ಅಡುಗೆ ಮಾಡುತ್ತೇನೆ . ಜೊತೆಗೆ ಏನಾದರೂ ಸಿಹಿ ಮಾಡುತ್ತೀನಿ’ ಅಂತ ಹೇಳಿ ಅಳುತ್ತಿದ್ದ ಅಪ್ಪನಿಗೆ ಒಂದು ಅಪ್ಪುಗೆ ನೀಡಿ ಅವನಿಗೆ ಸಮಾಧಾನ ಮಾಡುತ್ತ ಅವಳ ಕಣ್ಣಂಚಿನ ನೀರನ್ನು ಅಪ್ಪನಿಗೆ ಕಾಣಿಸದಂತೆ ಅಡಗಿಸಿಕೊಂಡು ಅಡುಗೆ ಮನೆಯತ್ತ ಓಡಿ ಹೋದಳು. ಮುಂಚೆ ಯಾವಾಗಲೂ ತುಂಟಾಟ ಮಾಡಿಕೊಂಡಿರುತ್ತಿದ್ದ ಹುಡುಗಿ ಎಷ್ಟು ಬದಲಾಗಿದ್ದಾಳೆ ಎಂದು ಅವಳು ಹೋದ ಕಡೆಗೇ ನೋಡುತ್ತಾ ಶೇಖರ ಕುಳಿತ. ಪರೀಕ್ಷೆ ಮುಗಿದ ನಂತರ ಶೇಖರ್ ಮತ್ತು ಸ್ಪಂದನ ಇಬ್ಬರೂ ದಿವ್ಯಾಳನ್ನು ನೋಡಲು ಬೆಂಗಳೂರಿಗೆ ಹೋದರು. ಸ್ಪಂದನಾಳಿಗೆ ಪರೀಕ್ಷೆ ಮುಗಿದು, ಕಾಲೇಜು ರಜೆ ಕೊಟ್ಟಿದ್ದರಿಂದ ಹದಿನೈದು ದಿನ ಅಕ್ಕನ ಜೊತೆ ಬೆಂಗಳೂರಲ್ಲಿ ಉಳಿದಳು ಶೇಖರ್. ಮಗಳನ್ನು ನೋಡಿಕೊಂಡು ಒಂದೆರಡು ದಿನ ಇದ್ದು ಕೆಲಸವಿದ್ದುದರಿಂದ ಶಿವಮೊಗ್ಗಗೆ ವಾಪಸ್ಸಾಗಿದ್ದ.

ದಿವ್ಯಾಳನ್ನು ಗಂಡ ತುಂಬಾ ಪ್ರೀತಿಸುತ್ತಿದ್ದ. ಅತ್ತೆ- ಮಾವ ಎಲ್ಲರೂ ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು.  ಆದರೂ ಅವಳಿಗೆ ಅಮ್ಮ ಈ ಸಮಯದಲ್ಲಿ ಇಲ್ಲವಲ್ಲವೆಂದು ಪ್ರತಿ ಕ್ಷಣವೂ ಮನಸ್ಸಿನಲ್ಲಿ ಕೊರಗುತ್ತಿದ್ದಳು. ಇದು ಸ್ಪಂದನಗಳಿಗೆ ಅರ್ಥವಾಗಿ ಅವಳೂ ಕೂಡ ಮನಸ್ಸಿನಲ್ಲಿ ಬಹಳ ಕೊರಗುತ್ತಿದ್ದಳು. ಒಬ್ಬಳೇ ಇದ್ದಾಗ ಅಮ್ಮನನ್ನು ನೆನೆದು ‘ಏಕೆ… ನನ್ನ ಬಿಟ್ಟು ಹೋದೆ?. ನೋಡು ಇಲ್ಲಿ ಎಲ್ಲರಿಗೂ ಎಷ್ಟು ಕಷ್ಟವಾಗುತ್ತಿದೆ. ಅಪ್ಪ ಮನಸ್ಸಿನಲ್ಲಿ ಎಷ್ಟು ಕೊರಗುತ್ತಿದ್ದಾರೆ. ಅಕ್ಕ ನಿನ್ನ ನೆನೆದು ಹೇಗೆ ಅಳುತ್ತಿದ್ದಾಳೆ.  ಏಕೆ? ಆ ದೇವರು ನಮ್ಮನ್ನು ಈ ಪರಿಸ್ಥಿತಿಗೆ ದೂಡಿದ. ನಿಜವಾಗಲೂ ದೇವರು ಇಲ್ಲ. ಅಮ್ಮ… ಇದ್ದಿದ್ರೆ ಹೀಗೇ ನಮ್ಮೆಲ್ಲರಿಗೂ ನೋವು ಕೊಡುತ್ತಿರಲಿಲ್ಲ ಅಮ್ಮ’ ಎಂದು ದೇವರನ್ನು ಶಪಿಸುತ್ತಾ, ಯಾರಿಗೂ ತಿಳಿಯದಂತೆ ಅವಳು ಕೊರಗುತ್ತಾ ಅಳುತ್ತಿದ್ದಳು. ಹದಿನೈದು ದಿನಗಳು ಕಳೆದವು ಸ್ಪಂದನ ಬೆಂಗಳೂರಿನಿಂದ ವಾಪಸ್ಸು ಶಿವಮೊಗ್ಗಕ್ಕೆ ಹೊರಡುವ ದಿನ ಅಕ್ಕನ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಲು ಅವಳಿಗೆ ಆಗುತ್ತಿರಲಿಲ್ಲ. ಅವಳ ಕಣ್ತಪ್ಪಿಸಿ ಮಾತನಾಡುತ್ತಿದ್ದಳು. ದಿವ್ಯಾ ಅದನ್ನು ಗಮನಿಸುತ್ತಿದ್ದಳು. ಸ್ಪಂದನ ಹೊರಡುವ ಸಮಯ ಬಂದಿತು. ಸ್ಪಂದನ ಅಕ್ಕನಿಗೆ ನಾನು ಹೋಗಿ ಬರ್ತೀನಿ ಹುಷಾರು ಎಂದು ಕಣ್ಣಲ್ಲಿ ನೀರು ತುಂಬಿಸಿಕೊಂಡು ತಲೆ ಬಗ್ಗಿಸಿ ಹೇಳಿ ಬ್ಯಾಗ್ ತೆಗೆದುಕೊಂಡು ಹೊರಡಲು ಸಿದ್ಧಳಾದಳು. ದಿವ್ಯ ಒಮ್ಮೆ ಅಳುವ ದನಿಯಲ್ಲಿ ಸ್ಪಂದನ ಎಂದು ಕೂಗಿದಳು. ಸ್ಪಂದನ ಒಮ್ಮೆಲೇ ಅಕ್ಕಳನ್ನು ತಬ್ಬಿ, ಜೋರಾಗಿ ಅಳಲು ಆರಂಭಿಸಿದಳು. ದಿವ್ಯ ಅಳು ಬರುತ್ತಿದ್ದರು ತನ್ನ ಕಣ್ಣಿನಲ್ಲೇ ತಡೆ ಹಿಡಿದಳು.  ಸ್ಪಂದನಳಿಗೆ ಧೈರ್ಯ ಹೇಳುವ ಸಲುವಾಗಿ ಮುಂದಿನ ತಿಂಗಳು ಐದನೇ ತಿಂಗಳ ಸ್ಕ್ಯಾನಿಂಗ್ ಇದೆ. ಡಾಕ್ಟರ್ ಗೆ ತೋರಿಸಿಕೊಂಡು ಸ್ವಲ್ಪ ದಿನ ಶಿವಮೊಗ್ಗಕ್ಕೆ ಬಂದು ನಿಮ್ಮ ಜೊತೆಯಲ್ಲಿ  ಇರ್ತೀನಿ. ಅಳಬೇಡ. ಅಪ್ಪನನ್ನು ಚೆನ್ನಾಗಿ ನೋಡಿಕೋ. ನೀನು ಚೆನ್ನಾಗಿ ಓದಿಕೋ ಎಂದು ಸಮಾಧಾನ ಮಾಡಿ, ಗಂಡನ ಜೊತೆ ತಾನು ಹೊರಟು ಬಸ್ ಸ್ಟ್ಯಾಂಡ್ ಗೆ ಹೋಗಿ ತಂಗಿಗೆ ಜೋಪಾನ ಎಂದು ಹೇಳಿ ಬಸ್ಸು ಹತ್ತಿಸಿ ಕಳುಹಿಸಿದಳು. ಸ್ಪಂದನಾ ಬಸ್ಸು ಮರೆಯಾಗುತ್ತಿದ್ದಂತೆ ಕಾರಿನಲ್ಲಿ ಕುಳಿತು ದಿವ್ಯ  ಅಳಲು ಶುರು ಮಾಡಿದಳು. ಕರ್ಣ, ದಿವ್ಯಾಳನ್ನು ಸಮಾಧಾನ ಮಾಡಿ ಮನೆಗೆ ಕರೆದುಕೊಂಡು ಹೋದ.

ಒಂದು ತಿಂಗಳ ಬಳಿಕ ದಿವ್ಯಾ ಆಸ್ಪತ್ರೆಗೆ ತೋರಿಸಿಕೊಂಡು ಗಂಡನ ಜೊತೆ ಶಿವಮೊಗ್ಗಕ್ಕೆ ಹೋದಳು. ಶೇಖರ್ ಮತ್ತು ಸ್ಪಂದನಗಳಿಗೆ ಬಹಳ ಸಂತೋಷವಾಯಿತು. ಅವಳ ಗಂಡ ಎರಡು ದಿನ ಇದ್ದು, ಸ್ವಲ್ಪ ದಿನ ತವರು ಮನೆಯಲ್ಲಿ ಇದ್ದು ಬರಲು ಹೇಳಿ ದಿವ್ಯಾಳನ್ನು ಬಿಟ್ಟು ಹೋದನು. ದಿವ್ಯಾ, ಸ್ಪಂದನ ಮತ್ತು ಶೇಖರ್ ಮೂವರು ಬಹಳ ಸಂತೋಷದಿಂದಿದ್ದರು. ದಿವ್ಯಾಳಿಗೆ ಇಷ್ಟವಾದ ತಿಂಡಿ- ತಿನಿಸುಗಳನ್ನು ಶೇಖರ್ ಮತ್ತು ಸ್ಪಂದನ ಸೇರಿ ಮಾಡಿಕೊಡುತ್ತಿದ್ದರು. ಕೆಲವು ದಿನಗಳ ನಂತರ ದಿವ್ಯಾಳ ಗಂಡ ಮತ್ತು ಅತ್ತೆ ಅವಳನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಲು ಬಂದರು. ದಿವ್ಯಾಳ ಅತ್ತೆ ಹೀಗೆ ಎಲ್ಲರೂ ಕೂತು ಮಾತನಾಡುವಾಗ ದಿವ್ಯಾಳ ತಂದೆ ಬಳಿ ‘ಈಗ ಹೇಗೂ ದಿವ್ಯಾಳಿಗೆ ಆರು ತಿಂಗಳು ತುಂಬಿದೆ. ಎಂಟು ತಿಂಗಳು ತುಂಬಿ ಒಂಬತ್ತು ತಿಂಗಳಿಗೆ ಬಿದ್ದಾಗ ಎಲ್ಲರೂ ಸೇರಿ ಸೀಮಂತ ಮಾಡೋಣ. ಅನಂತರ ಅವಳನ್ನು ನಮ್ಮ ಮನೆಯಲ್ಲೇ ಇಟ್ಟುಕೊಂಡು ನಾವೇ ಬಾಣಂತನ ಮಾಡ್ತೀವಿ. ನೀವೇನೂ ಯೋಚನೆ ಮಾಡಬೇಡಿ. ನಿಮ್ಮ ಮಗಳು, ನಮ್ಮ ಮಗಳು ಕೂಡ’ ಎಂದಳು. ಸ್ಪಂದನ ತಕ್ಷಣ ‘ಇಲ್ಲ… ಅತ್ತೆ ನೀವು ಹಾಗೆ ಹೇಳಬೇಡಿ. ನಾನು ಅಕ್ಕನನ್ನು  ನೋಡ್ಕೋತೀನಿ. ನೀವು ಕಳುಹಿಸಿ’ ಎಂದಳು. ಅದಕ್ಕೆ ದಿವ್ಯಾಳ ಅತ್ತೆ ‘ನಿಮ್ಮ ಮನೆಗೆ ಕಳಿಸಬಾರದು ಅಂತಲ್ಲ ಮಗು. ಬಾಣಂತನ ಅಂದರೆ ಅಷ್ಟು ಸುಲಭವಲ್ಲ. ಮಗು ಜೊತೆಗೆ ಮಗುವಿನ ತಾಯಿಗೆ ಬಹಳ ಆರೈಕೆ- ಕಾಳಜಿ ಅಗತ್ಯ. ಅದು ನಿನಗೆ ಮಾಡಲಾಗುವುದಿಲ್ಲ’ ಎಂದಳು. ಸ್ಪಂದನ ‘ಇಲ್ಲ… ಅತ್ತೆ, ಅದು ಕಷ್ಟವಿರಬಹುದು. ನಾನು ಹೇಗೆ ನೋಡಿಕೊಳ್ಳಬೇಕು? ಏನು ಮಾಡಬೇಕು. ಏನು ಮಾಡಬಾರದು ಎಂದು ನಿಮ್ಮನ್ನೆಲ್ಲ ಕೇಳಿ ಅಕ್ಕ ಮತ್ತು ಮಗುವನ್ನು ನೋಡಿಕೊಳ್ಳುತ್ತೇನೆ. ಪ್ಲೀಸ್… ಅಕ್ಕನಿಗೆ ಸೀಮಂತ ಮಾಡಿದ ಮೇಲೆ ಇಲ್ಲೇ ಶಿವಮೊಗ್ಗದಲ್ಲೇ ಇರಲಿ’ ಎಂದಳು. ದಿವ್ಯಾಳ ಅತ್ತೆ ‘ನೀನಿನ್ನು ಕಾಲೇಜಿಗೆ ಹೋಗುವ ಹುಡುಗಿ. ನೀನು ಕಾಲೇಜಿಗೆ ಹೋದಾಗ ಅಕ್ಕ ಮತ್ತು ಮಗುವನ್ನು ಯಾರು ನೋಡಿಕೊಳ್ಳುತ್ತಾರೆ. ನೀನೇ ಹೇಳು’ ಎಂದಳು. ಸ್ಪಂದನ ಒಂದು ನಿಮಿಷವೂ ಅತ್ತ- ಇತ್ತ ಯೋಚನೆ ಮಾಡದೆ ‘ಅಕ್ಕಳಿಗೆ, ಮಗು ಆಗುವ ಸಮಯಕ್ಕೆ ನಾನು ಕಾಲೇಜು ಬಿಡ್ತೀನಿ ಅತ್ತೆ. ‘ ಎಂದಳು. ದಿವ್ಯಾಳ ಕಣ್ಣಲ್ಲಿ ಒಮ್ಮೆಲೆ ನೀರು ಹರಿಯಲು ಆರಂಭಿಸಿತು. ‘ಏನು ಮಾತನಾಡುತ್ತಿದ್ದೀಯಾ?’ ಸ್ಪಂದನ. ‘ನೀನೇನು ಕಾಲೇಜು ಬಿಡುವುದು ಬೇಡ. ಸುಮ್ಮನಿರು. ನಾನು ಬೆಂಗಳೂರಿನಲ್ಲೇ ಇರುತ್ತೇನೆ. ಹಾಗೂ ಅಲ್ಲೇ ಬಾಣಂತನ ಮಾಡಿಸಿ ಕೊಳ್ಳುವೆ. ನಿನಗೆ ಕಾಲೇಜಿಗೆ ರಜೆ ಇದ್ದಾಗ ನೀನು ಬೆಂಗಳೂರಿಗೆ ಬಾ. ಅಲ್ಲಿ ಸ್ವಲ್ಪ ದಿನ ಇದ್ದು ನನ್ನನ್ನು ಮಗುವನ್ನು ನೋಡಿಕೊಂಡು ಬರುವಂತೆ’ ಎಂದಳು. ‘ಸ್ಪಂದನ ಇಲ್ಲ ಅಕ್ಕ… ನಾನು ಖಂಡಿತವಾಗಿಯೂ ಯಾರು ಹೇಳಿದ್ರು ಈ ವಿಷಯದಲ್ಲಿ ಯಾರ ಮಾತನ್ನು ನಾನು ಕೇಳುವುದಿಲ್ಲ. ನಿನ್ನ ಮಗುವನ್ನು ನೋಡ್ಕೊಳುವ ಜವಾಬ್ದಾರಿ ನನ್ನದು’ ಎಂದಳು.

ದಿವ್ಯ ‘ಸ್ಪಂದನಾಳಿಗೆ ನೀನು ಅದಕ್ಕಾಗಿ ನಿನ್ನ ವಿದ್ಯಾಭ್ಯಾಸವನ್ನು ನಿಲ್ಲಿಸಿ, ನನ್ನ ಮಗುವನ್ನು ನೀನು ನೋಡಿಕೊಂಡರೆ ನನಗೆ ನೆಮ್ಮದಿ ಇರುತ್ತೆ ಎಂದುಕೊಂಡಿದ್ದಿಯಾ’ ಎಂದು ಸ್ಪಂದನವನ್ನು ಪ್ರಶ್ನಿಸಿದಳು. ಅದಕ್ಕೆ ಸ್ಪಂದನ ‘ಇಲ್ಲ… ಅಕ್ಕ,  ನಾನು ಕಾಲೇಜಿನಲ್ಲಿ ಒಂದು ವರ್ಷ ಪರ್ಮಿಷನ್ ಕೇಳ್ತೀನಿ. ಅವರು ಆಗುವುದಿಲ್ಲ ಎಂದರೆ  ಕರೆಸ್ಪಾಂಡೆನ್ಸ್ನಲ್ಲಿ ವಿದ್ಯಾಭ್ಯಾಸವನ್ನು ಮುಂದುವರೆಸುತ್ತೇನೆ. ನೀನು ತಲೆ ಕೆಡಿಸಿಕೊಳ್ಳಬೇಡ’ ಎಂದಳು. ದಿವ್ಯಾಳಿಗೆ ಸ್ಪಂದನ ತಕ್ಷಣ ತಾಯಿಯಂತೆ ಕಂಡಳು.

ಅವಳನ್ನು ತಬ್ಬಿ ಅತ್ತಳು. ಸ್ಪಂದನ  ದಿವ್ಯಾಳನ್ನು ತಬ್ಬಿ ‘ಅಕ್ಕ ಪ್ಲೀಸ್ ಬರೋಲ್ಲ ಅನ್ನಬೇಡ. ಪ್ಲೀಸ್… ಅಕ್ಕ, ನಾನೇ ನಿನ್ನ ಬಾಣಂತನ ಮಾಡ್ತೀನಿ. ಪ್ಲೀಸ್ ಇಲ್ಲೇ ಬಾ. ಯಾರನ್ನಾದರೂ ನಮ್ಮ ಮನೆಕೆಲಸಕ್ಕೆ ಎಂದು ಇಟ್ಟುಕೊಳ್ಳೋಣ’ ಎಂದು ಅತ್ತಳು. ದಿವ್ಯಾ ಅವಳ ಅತ್ತೆ ಹಾಗೂ ಗಂಡನ ಮುಖ ನೋಡಿದಳು. ದಿವ್ಯಾಳ ಅತ್ತೆ ಅಕ್ಕ-ತಂಗಿಯರ ಅನ್ಯೋನ್ಯತೆ ಪ್ರೀತಿಯನ್ನು ನೋಡಿ ಅವರ ಕಣ್ಣಲ್ಲಿ ನೀರು ತುಂಬಿತ್ತು.

ಶೇಖರ್ ಅಮ್ಮ ‘ದಯವಿಟ್ಟು ಸ್ಪಂದನಾ ಮಾತಿಗೆ ಬೇಜಾರು ಮಾಡಿಕೊಳ್ಳಬೇಡಿ. ಅವಳಿಗೆ ಅವಳ ಅಕ್ಕ ಮತ್ತು ಅಕ್ಕನ ಮಗುವನ್ನು ತಾನೇ ನೋಡಿಕೊಳ್ಳುವ ಆಸೆ. ಹಾಗಾಗಿ ಇಷ್ಟು ಹಠ ಮಾಡುತ್ತಿದ್ದಾಳೆ’ ಎಂದನು. ಅದಕ್ಕೆ ದಿವ್ಯಳ ಅತ್ತೆ ಬೇಜಾರು ಮಾಡಿಕೊಳ್ಳಲು ಏನಿದೆ?. ಇವರಿಬ್ಬರ ಪ್ರೀತಿ ನೋಡಿ ಮನಸ್ಸಿಗೆ ಖುಷಿಯಾಯಿತು. ಅಕ್ಕನಿಗೆ ನೋವಾಗಬಾರದು. ತಾಯಿಯ ಸ್ಥಾನದಲ್ಲಿ ನಿಂತು ಅಕ್ಕನನ್ನು ನಾನು ನೋಡಿಕೊಳ್ಳಬೇಕು ಎನ್ನುವ ತಂಗಿ, ತಂಗಿಗೆ ನೋವು ತೊಂದರೆಯಾಗಬಾರದೆಂದು ತಂಗಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎನ್ನುವ ಅಕ್ಕ. ಇವರಿಬ್ಬರು ಯಾವಾಗಲೂ ಹೀಗೇ ಅನ್ಯೋನ್ಯವಾಗಿ ಸಂತೋಷವಾಗಿರಲಿ’ ಎಂದು ಹಾರೈಸಿದಳು. ಜೊತೆಗೆ ದಿವ್ಯಾಳಿಗೆ ನೀನು ಸೀಮಂತ ಮಾಡಿಸಿಕೊಂಡು ನಿನ್ನ ತಂದೆಯ ಮನೆಗೆ ಮತ್ತೆ ಬರುವಿಯಂತೆ. ನಿನಗೆ ಮಗುವಾದ ಮೇಲೆ ನಿನ್ನ ತಂಗಿ ನಿನ್ನ ಮಗುವನ್ನು ಚೆನ್ನಾಗಿ ನೋಡಿಕೊಳ್ಳುತ್ತಾಳೆ’ ಎಂದಳು.

ಕರ್ಣ ಕೂಡ ಅದಕ್ಕೆ ‘ಹೌದು, ನೀನು ಸೀಮಂತ ಮುಗಿಸಿಕೊಂಡು ಇಲ್ಲಿಗೆ ಬಾ. ನಿನ್ನ ತಂಗಿಗೂ ಅಪ್ಪನಿಗೂ ಬಹಳ ಸಂತೋಷವಾಗುತ್ತದೆ. ಜೊತೆಗೆ ನಿನಗೂ ಖುಷಿಯಾಗುತ್ತದೆ’ ಎಂದನು . ಎಲ್ಲವನ್ನೂ ನೋಡುತ್ತಿದ್ದ ಶೇಖರನಿಗೆ ತನ್ನ ಹೆಂಡತಿ ಪಾರ್ವತಿಯ ಬಹಳ ನೆನಪಾಯಿತು. ಅಯ್ಯೋ ದೇವರೆ, ಎಂತಹ ಪರಿಸ್ಥಿತಿ ನನ್ನ ಮಕ್ಕಳಿಗೆ ಕೊಟ್ಟೆ ಎಂದು ಮನಸ್ಸಿನಲ್ಲಿಯೇ ಸಂಕಟಪಟ್ಟನು. ಆದರು  ಅಕ್ಕ-ತಂಗಿಯರ ಅನ್ಯೋನ್ಯತೆ ಪ್ರೀತಿಯನ್ನು ನೋಡಿ ಆನಂದಪಟ್ಟನು.

ammaಚಿತ್ರಕಲೆ : ಕಾವ್ಯ ದೇವರಾಜ್

ಎಂಟು ತಿಂಗಳು ತುಂಬಿ ಒಂಬತ್ತನೇ ತಿಂಗಳಿಗೆ ಬೀಳುವ ಸಮಯದಲ್ಲಿ ದಿವ್ಯಾಳಿಗೆ ಸೀಮಂತ ಮಾಡಿ ಸುಖವಾಗಿ ಹೆರಿಗೆ ಆಗಲೆಂದು ಹಾರೈಸಿ ಗಂಡನ ಮನೆಯವರು ತವರು ಮನೆಗೆ ಕಳುಹಿಸಿದರು. ಅಷ್ಟರಲ್ಲಿ ಸ್ಪಂದನಾ ಕಾಲೇಜಿನ ಪ್ರಾಂಶುಪಾಲರಲ್ಲಿ ಮಾತನಾಡಿ ಒಂದು ವರ್ಷದ ಮಟ್ಟಿಗೆ ಕಾಲೇಜಿಗೆ ಬರಲಾಗುವುದಿಲ್ಲ ಮತ್ತೆ ಮುಂದಿನ ವರ್ಷ ಸೇರಿ ವಿದ್ಯಾಭ್ಯಾಸ ಮುಂದುವರಿಸುವುದಾಗಿ ಹೆೇಳಿ ಅವರ ಸಮ್ಮತಿಯನ್ನು ಪಡೆದಿದ್ದಳು. ಹಾಗಾಗಿ ಸ್ಪಂದನ ಕಾಲೇಜಿನ ಎಲ್ಲ ಯೋಚನೆ ಬಿಟ್ಟು ಅಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಳು. ಯಾವಾಗಲೂ ಅವಳ ಜೊತೆಯಲ್ಲಿಯೇ ಇದ್ದು ಅವಳ ಬೇಕು-ಬೇಡಗಳನ್ನು ನೋಡಿಕೊಳ್ಳುತ್ತಿದ್ದಳು. ಅಕ್ಕನ ಎಲ್ಲ ವಿಷಯದಲ್ಲೂ ಬಹಳ ಜಾಗ್ರತೆ ವಹಿಸುತ್ತಿದ್ದಳು.  ಶೇಖರ್ ಕೂಡ ಖುಷಿಯಿಂದ ಅವರಿಬ್ಬರ ಬೇಕು ಬೇಡಗಳನ್ನು ಗಮನಿಸಿ ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ.

ಸೀಮಂತ ಮುಗಿಸಿಕೊಂಡು ಬಂದ ಎರಡು ವಾರಗಳ ನಂತರ ದಿವ್ಯಾಳ ಹೆರಿಗೆಯ ನೋವು ಶುರುವಾಯಿತು. ತಕ್ಷಣ ಶೇಖರ್ ಮತ್ತು ಸ್ಪಂದನಾ ದಿವ್ಯಾಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಸಿದರು. ದಿವ್ಯಾ ಹೆರಿಗೆ ನೋವು ತಡೆಯಲಾಗದೆ  ಜೀವನದಲ್ಲಿ ಎಷ್ಟು ಬಾರಿ ಅಮ್ಮಾ… ಅಮ್ಮಾ… ಎಂದು ಕರೆದಿದ್ದಳೋ. ಆದರೆ ಇಂದು ಅಷ್ಟೆ ಸಾರಿ ಅವಳನ್ನು ನೆನೆದು ಕೂಗಿದಳು. ಆದರೆ ಅವಳ ಬಳಿ ಅಮ್ಮನ ಬದಲು ತಂಗಿ ಸ್ಪಂದನಾ ಬಂದು  ಸಮಾಧಾನ ಮಾಡುತ್ತಿದ್ದಳು. ಅಕ್ಕ ದಿವ್ಯ ನೋವು ತಡೆಯಲಾರದೆ ಅಳುವುದನ್ನು ನೋಡಿ ಸ್ಪಂದನ ಕೂಡ ಅಳುತ್ತಿದ್ದಳು . ಹೊರಗಡೆ ಅವಳ ಅಪ್ಪ ಶೇಖರ್ ಮಗಳಿಗೆ ಏನೂ ತೊಂದರೆಯಾಗದಂತೆ ಹೆರಿಗೆಯಾಗಲಿ ಎಂದು ದೇವರಿಗೆ ಮನಸ್ಸಿನಲ್ಲೇ ಪ್ರಾರ್ಥಿಸುತ್ತಿದ್ದ. ದಿವ್ಯ ಮತ್ತು ಸ್ಪಂದನ ಅಮ್ಮನನ್ನು ನೆನೆದು ಅಂದು ಬಹಳ ಅತ್ತರು.

ಅಂದು ಗುರುವಾರ ಮುಂಜಾನೆ ಸುಮಾರು ನಾಲ್ಕು ಇಪ್ಪತ್ತರ ಸಮಯ, ಶೇಖರ್ ಮತ್ತು ಸ್ಪಂದನ ಡಿಲಿವರಿ ರೂಮ್ ಹೊರಗಡೆ ನಿಂತು ಕಾಯುತ್ತಿದ್ದರು. ಸ್ಪಂದನ ಮತ್ತು ಶೇಖರ್ ಗೆ ಇದ್ದಕ್ಕಿದ್ದ ಹಾಗೆ ಮಗು ಜೋರಾಗಿ ಅಳುವ ಶಬ್ದ ಕೇಳಿಸಿತು. ಒಮ್ಮೆಲೇ ಸ್ಪಂದನ ‘ಅಪ್ಪ.. ನಿಮಗೂ ಪಾಪು ಅಳುವ ಶಬ್ದ  ಕೇಳಿಸ್ತಾ?’ ಎಂದು ಹೇಳಿ ಸಂಭ್ರಮಿಸಿದಳು. ಅಷ್ಟರಲ್ಲಿ ನರ್ಸ್ ಹೆರಿಗೆಯ ಕೊಠಡಿಯಿಂದ ಹೊರಬಂದು ಸ್ಪಂದನ ನಿಮ್ಮ ಅಕ್ಕನಿಗೆ ಹೆಣ್ಣು ಮಗುವಾಗಿದೆ. ನಿಮ್ಮ ಅಕ್ಕ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ. ಇನ್ನು ಮಿಕ್ಕಿದ್ದು ಡಾಕ್ಟರ್ ಬಂದು ಹೇಳುತ್ತಾರೆ’ ಎಂದು ಹೇಳಿ ಮತ್ತೆ ಬಾಗಿಲು ಹಾಕಿಕೊಂಡು ಹೆರಿಗೆ ಕೊಠಡಿಯ ಒಳಗೆ ಹೋದಳು. ಸ್ಪಂದನಾ ಮತ್ತು ಶೇಖರ್ ಗೆ ಎಲ್ಲಿಲ್ಲದ ಸಂತೋಷವಾಯ್ತು . ಸ್ಪಂದನ ‘ಅಪ್ಪ… ನಾನು ಭಾವನಿಗೆ ಕಾಲ್ ಮಾಡಿ ವಿಷಯ ಹೇಳುತ್ತೇನೆ’ ಎಂದು ಹೇಳಿ ಕಾಲ್ ಮಾಡಿ ವಿಷಯ ತಿಳಿಸಿದಳು. ಅವನು ನಾನು ಮತ್ತು ಎಲ್ಲರೂ ಇಂದೆ  ಹೊರಟು ಶಿವಮೊಗ್ಗಕ್ಕೆ ಬರುತ್ತೇವೆ’ ಎಂದು ಕರ್ಣ  ಖುಷಿಯಿಂದ ಹೇಳಿದ.

ಸ್ವಲ್ಪ ಸಮಯದ ಬಳಿಕ ದಿವ್ಯ ಮತ್ತು ಮಗುವನ್ನು ವಾರ್ಡಿಗೆ ಶಿಫ್ಟ್ ಮಾಡಿದರು. ಮಗು ಬಹಳ ಮುದ್ದಾಗಿತ್ತು. ದಿವ್ಯ, ಅಮ್ಮ ಪಾರ್ವತಿಯನ್ನು ನೆನೆಸಿಕೊಂಡು ಇನ್ನೂ ಅಳುತ್ತಿದ್ದಳು. ಸ್ಪಂದನ ಏಕೆ ಅಳುತ್ತಿದ್ದೀಯಾ ಎಂದು ಕೇಳಿದಳು. ‘ದಿವ್ಯಾ, ಅಮ್ಮ ತುಂಬಾ ನೆನಪಾಗುತ್ತಿದ್ದಾಳೆ. ಅಮ್ಮನನ್ನು ತುಂಬಾ ಮಿಸ್ ಮಾಡ್ಕೊತಿದ್ದೀನಿ’ ಎಂದು ಹೇಳಿದಳು. ದಿವ್ಯಾಳ ಮಾತು ಕೇಳಿ ಶೇಖರ್ ಕಣ್ಣಲ್ಲು ನೀರು ಹರಿಯಲು ಆರಂಭಿಸಿತು. ತಕ್ಷಣ ಸ್ಪಂದನ ತೊಟ್ಟಿಲಲ್ಲಿ ಮಲಗಿದ್ದ ಮಗುವನ್ನು ತೋರಿಸಿ ಇನ್ಯಾವತ್ತೂ ಅಮ್ಮನನ್ನು ಮಿಸ್ ಮಾಡ್ಕೊತಿದ್ದೀನಿ ಅಂತ ಹೇಳಬೇಡ. ಅಮ್ಮನೇ ನಿನ್ನ ಮಗಳ ರೂಪದಲ್ಲಿ ನಿನ್ನ ಹೊಟ್ಟೆಯಲ್ಲಿ ಹುಟ್ಟಿ ಬಂದಿದ್ದಾಳೆ. ಇನ್ನು ಎಂದು ನಾವ್ಯಾರೂ ಅಮ್ಮ ಜೊತೆಯಲ್ಲಿ ಇಲ್ಲ ಎಂದು ಯೋಚಿಸುವ ಅವಶ್ಯಕತೆ ಇಲ್ಲ’ ಎಂದು  ಅವಳ ಕಣ್ಣಲ್ಲಿ ನೀರು ತುಂಬಿಸಿಕೊಂಡು ಸಂತೋಷದಿಂದ ಹೇಳಿದಳು. ತಕ್ಷಣ ಶೇಖರ್ ಕೂಡ ದಿವ್ಯ ‘ಹೌದು. ಇನ್ನು ಮುಂದೆ  ಪಾರ್ವತಿಯನ್ನು ನೆನೆದು ನಾವ್ಯಾರೂ ಅಳುವುದು ಬೇಡ. ಕೊರಗುವುದು ಬೇಡ. ಸ್ಪಂದನ  ಹೇಳುತ್ತಿರುವುದು ಸತ್ಯ’ ಎಂದು ದಿವ್ಯಾಳಿಗೆ ಸಮಾಧಾನಿಸಿದ. ದಿವ್ಯ ‘ಹೌದು… ಅಪ್ಪ, ಜೊತೆಗೆ ನನ್ನ ಪುಟ್ಟ ತಂಗಿಯೂ ನನಗೆ ಅಮ್ಮನಂತೆಯೇ ಕಾಣಿಸುತ್ತಿದ್ದಾಳೆ. ಅಮ್ಮನಷ್ಟೇ ಪ್ರೀತಿ- ಕಾಳಜಿಯನ್ನು ತೋರಿಸುತ್ತಿದ್ದಾಳೆ. ಇನ್ಯಾಕೆ ನಾನು ಅಳಲಿ’ ಎಂದು ಸ್ಪಂದನಗಳನ್ನು ಹತ್ತಿರಕ್ಕೆ ಕರೆದು ಬಿಗಿದಪ್ಪಿದಳು.

ಸಂಜೆಯಾಗುವಷ್ಟರಲ್ಲಿ ದಿವ್ಯಾಳ ಗಂಡ ಕರ್ಣ ಮತ್ತು ಅವಳ ಕುಟುಂಬದವರು ಬಂದರು. ಎಲ್ಲರಿಗೂ ಮಗುವನ್ನು ನೋಡಿ ಸಂತೋಷವಾಯಿತು. ಮೂರು ದಿನಗಳ ಬಳಿಕ ದಿವ್ಯಾಳನ್ನು ಆಸ್ಪತ್ರೆಯಿಂದ ಮನೆಗೆ ಡಿಸ್ಚಾರ್ಜ್ ಮಾಡಿದರು.

ಸ್ಪಂದನ ಅಕ್ಕ ಮತ್ತು ಮಗುವನ್ನು ಬಹಳ ಅಕ್ಕರೆಯಿಂದ ನೋಡಿಕೊಂಡಳು. ಕಷ್ಟಪಟ್ಟು, ಅವಳ ಶಕ್ತಿ ಮೀರಿ ಅಕ್ಕನ ಮಗುವಿಗೆ ಒಳ್ಳೆಯ ಆರೈಕೆ ಮಾಡಿದಳು. ದಿವ್ಯಾಳಿಗೆ ಸ್ಪಂದನ ಅಂದು ಹೆಚ್ಚಾಗಿ ತಾಯಿಯಂತೆ ಕಂಡಳು. ಮಗುವಿಗೆ ಹಾಗೂ ಹೀಗೂ ಖುಷಿಯಿಂದ ನೋಡಿಕೊಂಡು ಎಂಟು ತಿಂಗಳು ತುಂಬಿ ಒಂಬತ್ತು ತಿಂಗಳಿಗೆ ಬಿದ್ದಿತು. ಕುಟುಂಬದವರು ಬಂಧುಮಿತ್ರರು ಎಲ್ಲರೂ ಸೇರಿ ವೈಭವದಿಂದ ಮಗು ಯಾವಾಗಲೂ. ಸಂತೋಷದಿಂದಿರಲಿ ಎಂದು ಖುಷಿ ಎಂದು ನಾಮಕರಣ ಮಾಡಿದರು. ಒಲ್ಲದ ಮನಸ್ಸಿನಲ್ಲಿಯೇ ಸ್ಪಂದನ ಅಕ್ಕ ದಿವ್ಯ ಮತ್ತು ಮಗುವನ್ನು ಗಂಡನ ಮನೆಗೆ ಕಳುಹಿಸಿದಳು. ನಂತರ ಅರ್ಧಕ್ಕೆ ನಿಲ್ಲಿಸಿದ ವಿದ್ಯಾಭ್ಯಾಸವನ್ನು ಪೂರ್ತಿ ಮಾಡಿದಳು. ಅಷ್ಟರಲ್ಲಿ ಶೇಖರ್ ನಿಗೂ ರಿಟೈರ್ಡ್ ಆಯಿತು. ನಂತರ ದಿವ್ಯಾ ಮತ್ತು ಕರ್ಣ ಸ್ಪಂದನಾಳಿಗೆ ಒಳ್ಳೆಯ ಹುಡುಗನನ್ನು ಬೆಂಗಳೂರಿನಲ್ಲೇ ನೋಡಿ ಮದುವೆಯನ್ನು ಮಾಡಿದರು. ಶೇಖರ್ ಸ್ವಲ್ಪ ದಿನ ದಿವ್ಯಾಳ ಮನೆಯಲ್ಲಿ, ಸ್ವಲ್ಪ ದಿನ ಸ್ಪಂದನಾ ಮನೆಯಲ್ಲಿ ಕಾಲ ಕಳೆಯುತ್ತಾ ಎಲ್ಲರೂ ಸಂತೋಷದಿಂದ ಅನ್ಯೋನ್ಯವಾಗಿದ್ದರು.

ಕಾವ್ಯ ದೇವರಾಜ ಅವರ ಇನ್ನಷ್ಟು ಕತೆಗಳು :

ಓದಿ ನಿಮ್ಮ ಅಭಿಪ್ರಾಯಗಳನ್ನು ಮೇಲಿನ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಅಥವಾ aakrutikannada@gmail.com

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW