ಮಕ್ಕಳು ಅವರದೇ ಆದ ಆಗಸದಲ್ಲಿ ರೆಕ್ಕೆ ಬಡಿದಾಗ, ಉತ್ತುಂಗದಲ್ಲಿ ಅವರ ಹಾರುವಿಕೆ ಕಾಣುವುದರಲ್ಲೊಂದು ಸಂತೋಷವಿದೆ. ಅವರ ಕನಸುಗಳಿಗೆ ಪ್ರೋತ್ಸಾಹಿಸಿ. ಪ್ರೊ .ರೂಪೇಶ್ ಅವರಿಂದ ಪಾಲಕರಿಗೊಂದು ಕಿವಿ ಮಾತು …
ಕೆಲವೊಮ್ಮೆ ನಾವು ಹೇಳಿದ ತಮಾಷೆಯನ್ನು ವಿದ್ಯಾರ್ಥಿಗಳು, ಗಂಭೀರವಾಗಿ ಪರಿಗಣಿಸುತ್ತಾರೆ. ಖಾಸಗೀ ತರಬೇತಿ ಕೇಂದ್ರದ ಬೀಳ್ಕೊಡುಗೆ ಸಮಾರಂಭದಲ್ಲಿ ನಯನ ಎಂಬ ಒಬ್ಬಳು (2005 PU) ವಿದ್ಯಾರ್ಥಿನಿ –
” ಅಪ್ಪ (Infosys), ಡಾಕ್ಟರ್ ಆಗಬೇಕೆಂದೂ ಹಾಗೂ ಅಮ್ಮ (Wipro) ಇಂಜಿನಿಯರ್ ಆಗಬೇಕೆಂದು ಹೇಳುತ್ತಾರೆ. ನಾನು ಏನ್ಮಾಡಲಿ ಸಾರ್” ಎಂದಳು.
” ನಿನಗೇನಿಷ್ಪ ಅದಾಗೂ…”
“ನನಗೆ ಅವೆರಡೂ ಬೇಡ…. ಪತ್ರಿಕೋದ್ಯಮ ಹಾಗೂ ಸಾಹಿತ್ಯ ವಾಙ್ಮಯ( mass communication & literature) ಕಲಿಯಬೇಕು” ಎಂದಳು.
” ಸರಿ….ಅದೇ ಕಲಿ”
” ಅಪ್ಪಾ ಅಮ್ಮಾ ಬಿಡುತ್ತಿಲ್ಲವಲ್ಲಾ…ಏನ್ಮಾಡ್ಲಿ ಸಾರ್? ನೋಡಿ ಸಾ …ಸಿಇಟಿ ಕೋಚಿಂಗ್ ದುಡ್ಡು, ಓಡಾಡಕ್ಕೆ ದುಡ್ಡು….ದಿನಾ ದುಡ್ಡು ಕೊಡ್ತಾರೆ..ಕಲಿ …ಕಲಿ..ಕಲಿ ಅಂತಾರೆ.”
“ನಿನ್ನತ್ರ ಕೂಡಿಟ್ಟ ದುಡ್ಡಿನಿಂದ ಮೂರು ದಿನಕ್ಕೆ ಬೇಕಾದ ಆಹಾರ ತೆಗೋ, ಬಾಗಿಲು ಹಾಕಿ ಮನೆಯ ಕೋಣೆಯೊಳಗಿರು, ಆ ಕೋಣೆಯ ಬಾಗಿಲ ಹೊರಗೆ ಬರೆ ನನಗೆ ಬೇಕಾದ ಶಿಕ್ಷಣವೇ ನನಗೆ ಅನುಮತಿಯಾಗಿ ಕೊಡುವವರೆಗೂ ಉಪವಾಸ ಸತ್ಯಾಗ್ರಹ. ನಂತರ ಆ ಕೋಣೆಯೊಳಗೆ ಸಮಯಕ್ಕೆ ಸರಿಯಾಗಿ ಆಹಾರ ತೆಗೋ ” ಎಂದು ಲೇವಡಿ ಮಾಡಿ ಕಾರ್ಯಕ್ರಮದಿಂದ ಹೊರ ಬಂದೆ.
೨೦೧೧ ರಲ್ಲಿ ನಾನು ಕೆಲಸ ಮಾಡುವಲ್ಲಿ ಕಂಕುಳಲ್ಲಿ ಮಗುವನ್ನು ಹೊತ್ತು ಹುಡುಕಿ ಬಂದಳು. ಆ ಮಗು ನಯನ ” ಸಾರ್… ನಾನು ಹಿಂದುಸ್ತಾನ್ ಟೈಮ್ಸ್ ದೆಹಲಿಯಲ್ಲಿ ಕೆಲಸದಲ್ಲಿದ್ದೆ. ಈಗ ಗಂಡ ವಿದೇಶದಲ್ಲಿ ನನಗೆ Harper Collins ನಲ್ಲಿ ಕೆಲಸ ದೊರಕಿಸಿ ಕೊಟ್ಟಿದ್ದಾರೆ. ಅವರೊಂದಿಗಿರಲು ಮಗಳ ಜೊತೆ ಹೋಗುತ್ತಿದ್ದೇನೆ. ಹೋಗುವ ಮೊದಲು ನಿಮ್ಮನ್ನು ಹುಡುಕಿ ಬಂದೆ. ನನ್ನ ತಂದೆ ತಾಯಿ ಹೊರಗೆ ಕಾರಲ್ಲಿದ್ದಾರೆ. ಇದು ನನ್ನ ಮಗಳು, ನೀವು ಇವಳ ತಲೆಗೆ ಕೈ ಇಟ್ಟು ಆಶೀರ್ವಾದಿಸಿ” ಎಂದಳು.

ನಯನ, ತಂದೆ – ತಾಯಿ ಹೇಳಿದ ಪ್ರಕಾರ, ಅವಳು ಅಂದು ಎರಡು ದಿನ ಸತತ ಹಂಗರ್ ಸ್ಟ್ರೈಕ್ (ಉಪವಾಸ) ಮಾಡಿದಾಗ, ವಿಧಿಯಿಲ್ಲದೆ ಅವರು ಅನುಮತಿ ಕೊಟ್ಟು, ” ಬೆಂಗಳೂರಿನ ಜ್ಯೋತಿ ನಿವಾಸ್ ಕಾಲೇಜಿನಲ್ಲಿ ಇಷ್ಟವಾದುದು ಕಲಿತಳು. MA final year ಇರುವಾಗ ಮದುವೆ ಮಾಡಿಸಿದೆವು. ಅವಳ ಗಂಡನಲ್ಲಿ ನಿಮ್ಮ ಬಗ್ಗೆ ಹೇಳಿದಾಗ, ಅವನು ನಮಗೆ ಅದನ್ನು ಹೇಳಿದಾಗ ನಿಮ್ಮನ್ನು ಕಾಣಬೇಕು ಎಂದು ಬಂದೆವು” ಅಂದರು.
ನಾನು ಆ ತಂದೆ ತಾಯಿಯ ಮುಂದೆ ತಲೆ ತಗ್ಗಿಸಿ ನಿಂತೆ. ಆದರೆ ಅವರು ” ನನ್ನ ಮಗಳು ಅದ್ಭುತ ಬರಹಗಾರ್ತಿ, ಸಂಶೋಧಕಿ ಎಂದು ನಮಗೆ ಗೊತ್ತಿಲ್ಲವಾಗಿತ್ತು. ನಿಮಗೆ ಧನ್ಯವಾದಗಳು. ನಮ್ಮ ಮಗಳಿಗೆ ಸಂತೋಷ ಕೊಟ್ಟ ನಿಮಗೆ ಧನ್ಯವಾದಗಳು” ಎಂದು ಹೇಳಿದಾಗ, ನಾನು ಒಂದು ಕ್ಷಣ….( ನಿಮಗರ್ಥವಾಗಿರಬೇಕು). ರೈಲುಗಾಡಿಯ ಮೋಟಾರು ಯಂತ್ರ ಇರುವುದು ಮುಂದುಗಡೆ, ಅದಕ್ಕೆ ಪೋಣಿಸಿದ ಬೋಗಿಗಳು ಸುಸೂತ್ರವಾಗಿ ಅದನ್ನು ಹಿಂಬಾಲಿಸುತ್ತದೆ. ಆ ಯಂತ್ರ ಹಾದಿ(ಟ್ರಾಕ್) ತಪ್ಪಿದರೆ ಬೋಗಿಗಳೂ ಬೀಳುತ್ತವೆ.
ಮಕ್ಕಳಿಗೆ ಜಾಣ್ಮೆಯೊಂದಿಗೆ ತಾಳ್ಮೆಯೂ ಬೇಕು. ಪ್ರೀತಿ,ಆಸರೆ, ಶಿಸ್ತು, ಸಮಾಜದ ಅಂಕು-ಡೊಂಕು-ತೀಕ್ಷ್ಣ ಪ್ರತಿಕ್ರಿಯೆಗಳನ್ನು ಸಹಿಸುವ ತಾಳ್ಮೆಯನ್ನೂ ಮನೆಯಲ್ಲಿ ಹೇಳಿಕೊಡಬೇಕು.
ನನಗೂ ಹಲವು ಪೋಷಕರು ಸಂಪರ್ಕ/ ಕರೆ ಮಾಡುತ್ತಾರೆ. ಪುಸ್ತಕದೊಳಗಿನ ವಿಷಯಗಳಿಗೆ ಪ್ರಾಶಸ್ತ್ಯ ಕೊಟ್ಟು ಅದರಲ್ಲಿ ಪ್ರಾವಿಣ್ಯತೆ ಬಂದರೆ ಮಾತ್ರ ನನ್ನ ಮಗ/ಳು ಜಾಣ/ಣೆ-ವಿದ್ಯಾವಂತ/ತೆ -ಬುದ್ದಿವಂತ/ತೆ ಎನ್ನುವ ಪ್ರವಣತೆ ಪೋಷಕರ ನರ ನಾಡಿಯಲ್ಲಿ ಹುದುಗಿದೆ.
ಮಕ್ಕಳ ಮುಂದೆಯೇ ತಮ್ಮ ತಮ್ಮ ತಂದೆ-ತಾಯಿ (ಮಕ್ಕಳ ಅಜ್ಜ-ಅಜ್ಜಿ)ಯನ್ನ ಕಡೆಗಣಿಸುವ/ಬೀದಿಪಾಲು ಮಾಡುವ/ವೃದ್ಧಾಶೃಮಕ್ಕೆ ನೂಕುವವರಲ್ಲಿ ದುಡ್ಡಿನಲ್ಲಿ ಶ್ರೀಮಂತ(ರಾದ) ಮಾನಸಿಕವಾಗಿ ಪ್ರೀತಿ ಬತ್ತಿದ ಬಡವ ಪೋಷಕರೇ ಜಾಸ್ತಿ.
ನಾನು ಅವ (ಹಿಂದು/ಮುಸಲ್ಮಾನ/ಕ್ರೈಸ್ತ/….ಕನ್ನಡಿಗ,ತಮಿಳ,ತೆಲುಗ….ಪೋಷಕ) ರಿಗೆ ಪ್ರಪ್ರಥಮವಾಗಿ ಪ್ರಾರ್ಥಿಸುವುದು.
“ಇಂದು ವಿಜ್ಞಾನ, ಗಣಿತ,……ಸಮಾಜಕ್ಕೆ ಬೇಕಾದುದೆಲ್ಲಾ ಪುಸ್ತಕ ಹೇಳಿಕೊಡುತ್ತಿದೆ. ಸರ್ಕಾರ ಅದರ ಕರ್ತವ್ಯ ಮಾಡುತ್ತಿದೆ.ಆದರೆ ಮನೆಯೇ ಮೊದಲ ಪಾಠಶಾಲೆಯಾದ ನೀವೂ ನಿಮ್ಮ ಮಕ್ಕಳನ್ನು ಮುಂದಿನ ಪ್ರಭುದ್ದ-ಪ್ರಜ್ಞಾವಂತ ನಾಗರೀಕನನ್ನಾಗಿ ಮಾಡಿಸಲು-ಕೌಟುಂಬಿಕ ಸಂಸ್ಕೃತಿ-ಯನ್ನು ಮಕ್ಕಳ ಮನದಲ್ಲಿ ಅರಳಿಸಬೇಕು. ಮನೆಯಲ್ಲಾದರೂ ನಿಮ್ಮ ಮಕ್ಕಳೊಂದಿಗೆ ಮಾತೃಭಾಷೆಯಲ್ಲಿ ಮಾತನಾಡಲು ಶೃಮಿಸಬೇಕು. ಭಾಷೆಯಲ್ಲಿ ತುಂಬಾ ಸಂಸ್ಕೃತಿ ಹುದುಗಿದೆ….”
ಮಕ್ಕಳು ತಮ್ಮ ಹತೋಟಿ ತಪ್ಪಿದಾಗ ನನ್ನಲ್ಲಿ ಬಂದಾಗ, ನನ್ನಿಂದಾಗುವ ಮಾರ್ಗದರ್ಶನದ ಮಾತು ಪೋಷಕರಲ್ಲಿ ಕೈಗೊಳ್ಳಲು ಹೇಳುತ್ತೇನೆ. ನಂತರ ಅದನ್ನು ಅಳವಡಿಸಿ ನನ್ನ ಸಂಪರ್ಕಿಸಲೂ ಹೇಳುತ್ತೇನೆ. ಅವರ ಮಾತು ಆಲಿಸುತ್ತಾರೆಯೋ…. ಪಾಲಿಸುತ್ತಾರೋ… ಪಾಲಿಸುವುದರಿಂದ ಏನಾದರೂ ಸತ್ಪರಿಣಾಮ ಆಗಿದೆಯೋ…? ಆಗಿದ್ದರೆ ಅದು ಎಷ್ಟರ ಮಟ್ಟಿಗೆ? ಇದನ್ನು ಕೆಲವೇ ಕೆಲವು ಕನಿಷ್ಟ ಸಂಖ್ಯೆಯ ಪೋಷಕರು ನನ್ನಲ್ಲಿ ಹಂಚಿಕೊಂಡಿದ್ದಾರೆ.
ಹಲವು ಪೋಷಕರು ಸ್ವಲ್ಪ ಸಮಯ ಪಾಲಿಸಿ ನಂತರ ಅವರ ಹಳೇ ಚಾಳಿಯಲ್ಲಿ ನುಸುಳಿ ಬಸವಳಿದಿದ್ದಾರೆ. ಈ ಪೀಳಿಗೆಯ ಗರಿಷ್ಟ ಸಂಖ್ಯೆಯ ಪೋಷಕರಿಗೆ ತಾಳ್ಮೆ ಇಲ್ಲ. ಬೆಳಿಗ್ಗೆ ಹುಟ್ಟಿದ ಮಗು ರಾತ್ರಿಯಾಗುವುದರೊಳಗೆ ಇಂಜಿನಿಯರ್ ಇಲ್ಲಾ ಡಾಕ್ಟರ್ ಆಗಬೇಕು. ಇಲ್ಲದಿದ್ದಲ್ಲಿ ಮಾನವ ಜನ್ಮಕ್ಕೆ ಅರ್ಥವಿಲ್ಲ ಎಂಬಂತೆ. ಎಷ್ಟೋ ಮಕ್ಕಳು ಯಾವ ಯಾವುದರಲ್ಲೋ ಅನುಗೃಹಿತರಾಗಿ ಪ್ರಕೃತಿ ಜನ್ಮ ಕೊಟ್ಟಿರುತ್ತದೆ. ಈ ಪೋಷಕರು , ಸಾಲ ಕೊಟ್ಟ ಖಾಸಗೀ ಫೈನಾನ್ಸ್ ತರಹ, ಜನ್ಮಕೊಟ್ಟವರು ಎಂಬ ಅಧಿಕಾರದಲ್ಲಿ ಮಕ್ಕಳೊಳಗಿನ ಹಣತೆಯಲ್ಲಿ ಅವರಿಗೆ ಬೇಕಾದ ಬಣ್ಣದ ಬೆಳಕು ತರಲು ಪ್ರಯತ್ನಿಸುತ್ತಾರೆ.
೨೦೦೩ರಲ್ಲಿ ಸ್ಮಿತಾ ಎಂಬ {2PU}ಮಗು, ಮಧ್ಯಾಹ್ನದ ಊಟದ ಸಮಯದಲ್ಲಿ , ಕ್ಲಾಸಿನ ಬಾಗಿಲು ಹಾಕಿ, ತನ್ನ ಗೆಳತಿಯರ ಕೂದಲು, ಮುಖ ಶೃಂಗರಿಸುವುದಕ್ಕೆ ಪ್ರಾಂಶುಪಾಲರು,” ನಿಮ್ಮ ಮಕ್ಕಳಿಗೆ ತುಂಬಾ ಭಯ , ಅವಳನ್ನು ತಿದ್ದಿ” ಎಂದರು. ನಾನು ಕರೆದು ಕೇಳಿದಾಗ, ಅವಳಿಗೆ ಫ್ಯಾಷನ್ ವಿನ್ಯಾಸಕಿ ಆಗಬೇಕೆಂಬ ಆಸೆ ಎಂದಳು. ತಂದೆ ಮೆಡಿಕಲ್ ರೆಪ್ -ತಾಯಿಗೂ ಅದು ಇಷ್ಟವಿರಲಿಲ್ಲ. ನಾನು ಅವಳ ತಂದೆ ತಾಯಿಯನ್ನು ಕರೆದು ಅವರ ಮನದೊಳಗೆ ಅರೆಬರೆ ಬಟ್ಟೆ ಹಾಕುವ ಹವ್ಯಾಸಿ ಕೆಲಸ ಎಂಬ ಭಾವನೆ ತೆಗೆದೆ.

ಫೋಟೋ ಕೃಪೆ : yoursnews
ಅವಳು ಬೆಂಗಳೂರಿನ ಬನ್ನೇರುಘಟ್ಟದಿಂದ ಬರುತ್ತಿದ್ದವಳಾಗಿದ್ದಳು. ನಂತರ ಅವಳನ್ನು “ಮಿಸ್ ಬನ್ನೇರುಘಟ್ಟ ” ಎಂದು ಕ್ಲಾಸಿನ ಸಹಪಾಠಿಗಳು ಕರೆಯುತ್ತಿದ್ದರು. NIFT exam ಬರೆದು , ಫ್ಯಾಷನ್ ವಿನ್ಯಾಸಕಿ ಕಲಿತು, ಸ್ವಲ್ಪ ಕಾಲ ಬೆಂಗಳೂರಲ್ಲಿ ದುಡಿದು, ೨೦೦೯ ರಲ್ಲಿ ಪ್ಯಾರಿಸ್ ನಲ್ಲಿ ನೆಲೆಸಿದಳು. ಅಲ್ಲೇ ಒಬ್ಬ ಕನ್ನಡಿನನ್ನು ಮದುವೆಯಾದಳು. ಇನ್ನೊಬ್ಬ ಅಭಿನಂದನ್ ಎಂಬ ಬೆಂಗಳೂರಿನ ಬಿಟಿಎಂ ನಿವಾಸಿ- ವಿದ್ಯಾರ್ಥಿ- ಅವನ ತಂದೆ ಟೈಲರ್ ಆಗಿದ್ದು , ಕಲಿಯುತ್ತಾ ಅಪ್ಪನಿಗೆ ಸಹಾಯ ಮಾಡುತ್ತಾ ಇದ್ದ. ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಬರೆದು , ತಂದೆ – ತಾಯಿ ಸಾಲ ಸೋಲ ಮಾಡಿ ಕಂಪ್ಯೂಟರ್ ಇಂಜಿನಿಯರಿಂಗ್ ಮಾಡಿಸುತ್ತೇವೆ ಎಂದಾಗ, ನನ್ನಲ್ಲಿ ಬಂದು ತನಗೆ ಇಂಜಿನಿಯರಿಂಗ್ ಬಟ್ಟೆಗಳ ಬಗ್ಗೆ ಆದರೆ ಇಷ್ಟ ಅಂದ. ತಂದೆ ತಾಯಿಯು ನನ್ನ ಮಾತು ಒಪ್ಪಿದರು, Textile Engineering ಮಾಡಿದ. ಆ ವಿಭಾಗದಲ್ಲಿ ಅವನೇ ಬುದ್ದಿವಂತನಾಗಿದ್ರಿಂದ rank ಸಿಕ್ತು. ಮುಂಬೈಯ ಮಫತ್ ಲಾಲ್ ಕಂಪನಿಯಲ್ಲಿ ಕೆಲಸ ಲಭಿಸಿತು.
(ಹೀಗೆ ಕೆಲವೇ ಕೆಲವು ವಿದ್ಯಾರ್ಥಿಗಳು ಸ್ವಂತ ಕನಸಿನ ಅರಮನೆಯೊಳಗೆ ವಿಲಾಸವಾದವರಿದ್ದಾರೆ)
ನಿಮ್ಮವ ನಲ್ಲ
ರೂಪು
- ಪ್ರೊ .ರೂಪೇಶ್ (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು, ಬೆಂಗಳೂರು)
