‘ಚೌಚೌ ಬಾತ್’ ಅಂಕಣ (ಭಾಗ – ೪೫)

ಶಾಲೆಯಲ್ಲಿ ಸಹಪಾಠಿಯಾಗಿದ್ದ ಗೆಳತಿ ಸಾವಿತ್ರಿ, ಮುಂದೆ ಆಶ್ರಮ ಕಟ್ಟಿಕೊಂಡು ಸಾವಿತ್ರಿ ಮಾತೆದೇವಿಯಾದ ರೋಚಕ ಕತೆಯನ್ನು ಸರ್ವಮಂಗಳ ಜಯರಾಮ್ ಅವರ ‘ಚೌಚೌ ಬಾತ್’ ಅಂಕಣದಲ್ಲಿ ‘ಸಾವಿತ್ರಿ ಮಾತಾದೇವಿ’ ತಪ್ಪದೆ ಮುಂದೆ ಓದಿ…

ನಾನು ಇತ್ತೀಚೆಗೆ ನಮ್ಮ ಊರಿಗೆ ಹೋಗಿದ್ದಾಗ ಯಾವುದೋ ಹಬ್ಬದ ಸಲುವಾಗಿ ನೆಂಟರೆಲ್ಲರೂ ಸೇರಿದ್ದರು. ಎಲ್ಲರೂ ಸೇರಿಕೊಂಡು ಹಬ್ಬದ ಅಡುಗೆ ಮಾಡಿ ಊಟ ಮಾಡಿದೆವು. ಬಹಳ ದಿನಗಳ ನಂತರ ಎಲ್ಲರೂ ಸೇರಿದ್ದರಿಂದ ಹೀಗೆ ಮಾತನಾಡುತ್ತಾ ಕುಳಿತಿದ್ದೆವು. ಹಬ್ಬದ ಭರ್ಜರಿ ಊಟ ಹೊಟ್ಟೆ ಬಿರಿಯುವಂತೆ ತಿಂದಿದ್ದರಿಂದ ಕೆಲವರಿಗೆ ಕುಳಿತಲ್ಲಿಯೇ ನಿದ್ರಾದೇವಿ ಆವರಿಸಿ ಬಿಟ್ಟಿದ್ದಳು. ಇನ್ನು ಕೆಲವರು ತಿಂದದ್ದು ಜೀರ್ಣವಾಗಲು ಅತ್ತಿಂದಿತ್ತ ಓಡಾಡುತ್ತಿದ್ದರು. ಆಗ ಯಾರೋ ಇಲ್ಲೇ ಸಮೀಪದಲ್ಲಿ ಒಂದು ಆಶ್ರಮ ಇದೆ ಬನ್ನಿ ಹೋಗೋಣ ಎಂದರು. ಸರಿ ಎಲ್ಲರೂ ಹೊರಟೆವು.

ಬೆಂಗಳೂರಿನಿಂದ ಬಂದು ಇಲ್ಲಿ ಆಶ್ರಮ ತೆರೆದಿದ್ದಾರಂತೆ, ಬಡಬಗ್ಗರಿಗೆ ಸಹಾಯ ಮಾಡ್ತಾರಂತೆ, ಉಚಿತ ಸಾಮೂಹಿಕ ವಿವಾಹಗಳನ್ನು ಮಾಡುತ್ತಾರಂತೆ, ಗಂಡ ಹೆಂಡತಿ ಇಬ್ಬರೂ ಆಶ್ರಮದ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಪ್ರತಿನಿತ್ಯ ಬೆಂಗಳೂರಿನಿಂದಲ್ಲದೆ ಸುತ್ತಮುತ್ತಲ ಹಲವಾರು ಕಡೆಗಳಿಂದ ಭಕ್ತರು ಬರುತ್ತಾರಂತೆ. ಬಂದಂತಹ ಮುತ್ತೈದೆಯರಿಗೆ ಅರಿಶಿನ ಕುಂಕುಮ ಸಮೇತ ತಾಂಬೂಲ ಕೊಟ್ಟು ಕಳಿಸುತ್ತಾರಂತೆ. ತುಂಬಾ ಒಳ್ಳೆಯ ಜನ ನಮ್ಮ ಸುತ್ತಮುತ್ತಲ ಹಳ್ಳಿ ಜನರಿಗೆಲ್ಲ ಇದೊಂದು ಆಶ್ರಯ ತಾಣ ಎಂದು ಯಾರೋ ಕೊಂಡಾಡುತ್ತಿದ್ದರು.

ನಾವು ಆಶ್ರಮದ ಒಳಗೆ ಕಾಲಿಡುತ್ತಿದ್ದಂತೆಯೇ ಯಾರೋ ಅಲ್ಲಿನ ಸೇವಕರು ಒಬ್ಬರು ಬಂದರು. ಎಲ್ಲರೂ ಸಾಲಾಗಿ ಬಂದು ಗುರುಗಳ ಆಶೀರ್ವಾದ ಪಡೆದು ಕಾಣಿಕೆಯನ್ನು ಡಬ್ಬದಲ್ಲಿ ಹಾಕಿ ಹೋಗಿ ಎಂದು ಹೇಳುತ್ತಿದ್ದರು. ನಾವೆಲ್ಲ ನಮ್ಮ ನಮ್ಮ ಬಳಿ ಇದ್ದಷ್ಟು ಹಣ ಹಾಕಿ ಮುಂದೆ ಗುರುಗಳ ದರ್ಶನಕ್ಕೆ ಸರದಿ ಸಾಲಿನಲ್ಲಿ ನಿಂತೆವು. ಆಶ್ರಮದ ವಿಶಾಲವಾದ ಪ್ರಾಂಗಣದ ಮಧ್ಯೆ ಎತ್ತರದ ಭವ್ಯ ವೇದಿಕೆಯಲ್ಲಿ ಗುರುಮಾತೆ ಹಾಗೂ ಗುರುಗಳು ಆಸೀನರಾಗಿದ್ದರು. ನನಗೆ ಇಂತಹ ಬೂಟಾಟಿಕೆ ವ್ಯಕ್ತಿಗಳಲ್ಲಿ ಅಷ್ಟೊಂದು ನಂಬಿಕೆ ಇರಲಿಲ್ಲ. ನಂಬುವುದೇ ಆದರೆ ನಮ್ಮ ಶ್ರಮವನ್ನು ನಂಬಬೇಕು, ನಮ್ಮ ಪ್ರಯತ್ನವನ್ನು ನಂಬಬೇಕು, ನಮ್ಮ ಕರ್ತವ್ಯವನ್ನು ನಂಬಬೇಕು. ಮಹಾಪುರುಷರಂತೆ ತಮ್ಮನ್ನು ತಾವು ಬಿಂಬಿಸಿಕೊಳ್ಳುವುದು ಎಷ್ಟು ಸರಿ.

ಫೋಟೋ ಕೃಪೆ : google

 

ನಾನು ನಿರ್ವಾಹವಿಲ್ಲದೆ ಅವರೊಂದಿಗೆ ಹೋಗಿದ್ದೆ. ಅಲ್ಲಿನ ಹೊಗಳು ಭಟ್ಟರು ಜೈ ಸಾವಿತ್ರಿ ಮಾತ ದೇವಿ, ಜೈ ಗುರು ಮಹಾರಾಜ್ ಎಂದು ಹಿನ್ನೆಲೆಯಲ್ಲಿ ಜಯ ಘೋಷ ಕೂಗುತ್ತಿದ್ದರು. ಸರದಿ ಸಾಲಿನಲ್ಲಿ ಹಾಗೆ ಮುಂದಕ್ಕೆ ಸರಿದ ನನಗೆ ಒಂದು ಆಶ್ಚರ್ಯ ಕಾದಿತ್ತು. ಸಾವಿತ್ರಿ ಮಾತಾದೇವಿ ಪ್ರಸನ್ನ ಮುಖಭಾವದಿಂದ ಹರ್ಷ ಚಿತ್ತರಾಗಿ ಎಲ್ಲರನ್ನು ಹರಸಿ, ಅಭಯ ಹಸ್ತ ನೀಡುತ್ತಿದ್ದರು. ಮಾತೆಯನ್ನು ಹಾಗೆ ಸೂಕ್ಷ್ಮವಾಗಿ ಗಮನಿಸಿದೆ. ಅವಳು ನನ್ನ ಕ್ಲಾಸ್ಮೇಟ್ ಸಾವಿತ್ರಿ ಆಗಿದ್ದಳು. ನನಗಂತೂ ಆಶ್ಚರ್ಯವೋ ಆಶ್ಚರ್ಯ. ಇವಳು ನನ್ನ ಕ್ಲಾಸ್ಮೇಟ್ ಸಾವಿತ್ರಿ ಎಂದು ನಮ್ಮ ನೆಂಟರಿಗೆ ಹೇಳಿದೆ. ಹೌದು ಸಾವಿತ್ರಿನೆ ಈಗ ಹಾಗೆಲ್ಲ ಕರೆಯಬಾರದು. ಸಾವಿತ್ರಿ ಮಾತಾದೇವಿ ಅವರು ಈಗ ಎಂದು ನನ್ನ ಕಿವಿಯಲ್ಲಿ ಪಿಸುಗುಟ್ಟಿದರು. ಅರೆ ಏನಾಶ್ಚರ್ಯ ದಶಕಗಳ ಹಿಂದೆ ಸಾಮಾನ್ಯ ಮಹಿಳೆಯಾಗಿದ್ದ ಸಾವಿತ್ರಿಯನ್ನು ಅವರ ಸೋದರ ಮಾವನಿಗೆ ಕೊಟ್ಟು ಮದುವೆ ಮಾಡಿದ್ದರು. ಅಂದರೆ ಅವರ ಅಮ್ಮನ ತಮ್ಮನಿಗೆ ಕೊಟ್ಟು ವಿವಾಹ ಮಾಡಿದ್ದರು. ಅವರು ಬೆಂಗಳೂರಿನಲ್ಲಿ ಸಿನಿಮಾ ರಂಗದಲ್ಲಿ ಸಹ ನಿರ್ದೇಶಕರಾಗಿದ್ದರಂತೆ.

 

ಸಾವಿತ್ರಿಯ ಅಮ್ಮನೂ ಅವರ ಜೊತೆಯಲ್ಲಿ ಇದ್ದರಂತೆ. ಸಾವಿತ್ರಿ ಒಬ್ಬಳೇ ಮಗಳಾದ್ದರಿಂದ ರತ್ನಮ್ಮ ಮಗಳ ಮನೆಯಲ್ಲಿ ಬೆಂಗಳೂರಿನಲ್ಲಿ ನೆಲೆಸಿದ್ದಳು. ಸಾವಿತ್ರಿ ನೋಡಲು ಕೆಂಪಗೆ ಗುಂಡುಗುಂಡಗೆ ಸುಂದರವಾಗಿದ್ದಳು. ಅಷ್ಟೇ ಮುಗ್ದೆಯಾಗಿದ್ದಳು ಕೂಡ. ನಂತರ ಕಾಲಕ್ರಮೇಣ ನಗರ ಜೀವನಕ್ಕೆ ಹೊಂದಿಕೊಂಡು ಜಾಣೆ ಯಾಗಿದ್ದಳು. ಹಲವಾರು ಸಿನಿಮಾ ಚಿತ್ರೀಕರಣಗಳಲ್ಲಿ ಗಂಡನೊಂದಿಗೆ ಭಾಗವಹಿಸುತ್ತಿದ್ದಳು. ಗಂಡ ಕೈ ತುಂಬಾ ಸಂಪಾದಿಸುತ್ತಿದ್ದ. ನಗರದ ವೈಭವೋಪೇತ ಜೀವನದ ಪ್ರಭಾವದಿಂದ ಅವಳು ಮಾಡ್ರನ್ ಲೇಡಿಯಾಗಿದ್ದಳು. ಅವಳ ಗಂಡ ಹೃದಯಘಾತದಿಂದ ತೀರಿಕೊಂಡ ಎಂಬ ಸುದ್ದಿ ತಿಳಿಯಿತು. ಮತ್ತೆ ಅವಳು ಎಲ್ಲಿದ್ದಾಳೆ ಹೇಗಿದ್ದಾಳೆ ಅಂತ ಯಾವ ವಿಷಯವೂ ತಿಳಿದಿರಲಿಲ್ಲ. ನಾಲ್ಕಾರು ವರ್ಷ ನಾಪತ್ತೆಯಾಗಿದ್ದಳು. ಹೆಚ್ಚು ಕಮ್ಮಿ ಅವಳನ್ನು ಮರೆತೇ ಹೋಗಿದ್ದೆವು. ಈಗ ಇಲ್ಲಿ ಪ್ರತ್ಯಕ್ಷವಾಗಿ ಸಾವಿತ್ರಿ ಮಾತಾ ದೇವಿಯಾಗಿ ವಿರಾಜಮಾನಳಾಗಿದ್ದಾಳೆ. ಇದು ಹೇಗೆ ಸಾಧ್ಯ ಎಂದು ಮನದಲ್ಲೇ ಅಂದುಕೊಂಡೆ.

ಮನೆಗೆ ಬಂದು ವಿಚಾರಿಸಿದಾಗ ತಿಳಿದದ್ದು ಸಾವಿತ್ರಿಯ ಗಂಡನಿಗೆ ಹೃದಯಘಾತವಾಗಿರಲಿಲ್ಲ.ಬದಲಿಗೆ ಸಾವಿತ್ರಿಯ ತಾಯಿ ಹಾಗೂ ಸಾವಿತ್ರಿಯ ಪ್ರಿಯಕರ ಮತ್ತು ಸಾವಿತ್ರಿ ಮೂವರು ಸೇರಿ ನಡೆಸಿದ ಕೊಲೆಯಾಗಿತ್ತು. ದೆಹಲಿಯ ಪ್ರಮುಖ ಸಿನಿ ನಿರ್ದೇಶಕರೊಬ್ಬರನ್ನು ಸಾವಿತ್ರಿ ಪ್ರೀತಿಸುತ್ತಿದ್ದಳು. ಅವನ ಬೆಂಬಲದಿಂದ ಕೈ ಹಿಡಿದ ಗಂಡನನ್ನು ಪರಲೋಕಕ್ಕೆ ಕಳಿಸಿದ್ದಳು. ವ್ಯವಸ್ಥಿತವಾಗಿ ಕೊಲೆ ಮಾಡಿ ಹೃದಯಘಾತ ಎಂದು ಬಿಂಬಿಸಿದ್ದರು. ನಂತರ ಸಾವಿತ್ರಿ ನಾಲ್ಕಾರು ವರ್ಷ ತಲೆಮರೆಸಿಕೊಂಡಿದ್ದು ಇದೀಗ ತನ್ನ ಸ್ವಂತ ಊರಿಗೆ ಬಂದು ತಮ್ಮ ಜಮೀನಿನಲ್ಲಿಯೇ ವಿಶಾಲವಾದ ಆಶ್ರಮ ನಿರ್ಮಿಸಿ ಗುರುಮಾತೆಯ ಸೋಗುಹಾಕಿ ನೆಲೆಸಿದ್ದಾಳೆ ಎಂದು ತಿಳಿಯಿತು. ವಿಷಯ ಊರಿನವರಿಗೆಲ್ಲ ಗೊತ್ತಿದ್ದರೂ ಯಾರೂ ಏನನ್ನೂ ಕೇಳುತ್ತಿರಲಿಲ್ಲ. ಎಲ್ಲಿಯೂ ಬಾಯಿ ಬಿಡುತ್ತಿರಲಿಲ್ಲ. ಏಕೆಂದರೆ ಹಳ್ಳಿಯ ಮುಗ್ಧ ಜನರಿಗೆ ಬೇಕಾದ ಮೂಲ ಸೌಲಭ್ಯಗಳನ್ನು ಆಕೆ ಒದಗಿಸುತ್ತಿದ್ದಳು. ಹಾಗಾಗಿ ಯಾರೊಬ್ಬರೂ ಅವರ ಪೂರ್ವಾಪರ ವಿಚಾರಿಸಲು ಹೋಗುತ್ತಿರಲಿಲ್ಲ. ಬಡವ ನೀ ಮಡಗಿದಂಗೆ ಇರು ಎಂಬ ಗಾದೆ ಮಾತಿನಂತೆ ಅವರು ಸುಮ್ಮನೆ ಇದ್ದರು. ಇಷ್ಟೇ ನೋಡಿ ಜೀವನ, ಜನ ಎಷ್ಟೇ ಕೆಟ್ಟ ಕೆಲಸ ಮಾಡಿದರೂ ಹಣದ ಮುಂದೆ ಎಲ್ಲವೂ ಗೌಣ. ಹಣದ ಆಸೆಗಾಗಿ ಜನ ಹೆಣವನ್ನಾದರೂ ಉರುಳಿಸುತ್ತಾರೆ. ಹಣ ಹೆಣ್ಣಿನ ವ್ಯಾಮೋಹಕ್ಕೆ ಬಿದ್ದು ವಿವೇಚನಾ ಶೂನ್ಯರಾಗುತ್ತಾರೆ.

ಅಂಕಣದ ಹಿಂದಿನ ಸಂಚಿಕೆಗಳು :


  • ಸರ್ವ ಮಂಗಳ ಜಯರಾಂ – ಲೇಖಕಿ, ಗೌರಿಬಿದನೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading