ಮಾನವನ ವಿಚಿತ್ರ ಹಸಿವಿನ ದಾಹಕ್ಕೆ ೧೮೫೦ ರಲ್ಲಿ ಪ್ರಾರಂಭವಾದ ಕಸಾಯಿಖಾನೆಗಳು ಇಂದು ನಾಯಿ ಕೊಡೆಯಂತೆ ಬೆಳೆದು ಇಂದು ಅಖಂಡ ಭಾರತದಲ್ಲಿ ಲಕ್ಷಾಂತರವಾಗಿವೆ. ಗೋ ಮಾತೆ ಅಳಿವಿನಂಚಿದ್ದು, ಅದರ ಸಂರಕ್ಷಣೆಗೆ ಎಲ್ಲರೂ ಕೈ ಸೇರಿಸಬೇಕಿದೆ, ಲೇಖಕರಾದ ಚನ್ನಕೇಶವ ಜಿ ಲಾಳನಕಟ್ಟೆ ಅವರು ಗೋಮಾತೆಯ ಮಹತ್ವವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ. ಮತ್ತು ಈ ಗೋವು ಸಂರಕ್ಷಣೆ ಕೆಲ್ಸಕ್ಕೆ ಎಲ್ಲರೂ ಕೈ ಸೇರಿಸೋಣ…
‘ನಡೆದಾಡುವ ದೇವರು’ ಎಂದೇ ಕರೆಯಲ್ಪಡುವ ‘#ಗೋ_ಮಾತೆ‘ ಅಳಿವಿನಂಚಿಗೆ ಹೋಗುತ್ತಿರುವುದು ನಿಜಕ್ಕೂ ವಿಷಾದನೀಯ. ಮಗು ಹುಟ್ಟಿ ಒಂದೆರಡು ವರ್ಷ ತನ್ನ ತಾಯಿಯ ಹಾಲು ಕುಡಿದರೆ ಮಡಿವವರೆಗೂ ಕುಡಿಯುವುದು ಗೋಮಾತೆಯ ಹಾಲು. ಮಾನವನ ವಿಚಿತ್ರ ಹಸಿವಿನ ದಾಹಕ್ಕೆ ೧೮೫೦ ರಲ್ಲಿ ಪ್ರಾರಂಭವಾದ ಕಸಾಯಿಖಾನೆಗಳು ಇಂದು ನಾಯಿ ಕೊಡೆಯಂತೆ ಬೆಳೆದು ಇಂದು ಅಖಂಡ ಭಾರತದಲ್ಲಿ ಲಕ್ಷಾಂತರವಾಗಿವೆ.
ಗೋವೆ ಗೋವೆ ಗೋವೆ
ಏನೀ ನಿನ್ನ ನೋವೆ
ಎಮಗಿಲ್ಲ ಕೇಳುವ ಪರಿವೆ
ನೀನಂತು ಕೇಳಿದ್ದು ಕೊಡುವ ಕಾಮಧೇನುವೆ.
ಉಂಡದ್ದು ಹಸಿರುಲ್ಲು
ಕುಡಿದದ್ದು ಕಲಗಚ್ಚು
ವರ್ಷಕೊಂದು ಕರುವು
ಕೊಟ್ಟದ್ದು ಅಮೃತವು.
ಹಸನು ಮಾಡಿದೆ ಹೊಲವ
ಹೊಸೆದು ಮೈಯ ದಣಿವ
ಹಸಿರು ಹೊದ್ದು ಬುವಿಯು
ಬಸಿರು ಭೂಮಿಯು ಸೊಬಗು.
ಹಾಲು ಮೊಸರಿನ ಸವಿಯು
ಬೆಣ್ಣೆ ತುಪ್ಪದ ಬಗೆಯು
ಬಳಲಿ ತೊಳಲಿದವರಿಗೆ
ಜೀವ ಮರುಕಳಿಸಿದವಳೆ.
ಸುರಿದು ಬಿಸಿ ನೀರು
ತೊಗಲು ಎಬ್ಬುವರು
ಕೊಯ್ದು ಅಂಗಾಂಗವನು
ತೆಗೆವರು ಅಂಗಗಳನು.
ಹಸಿವು ದಾಹವನ್ನ
ನೆನದು ಕೊಡುವರು ನಿನ್ನೆ
ಮಾನವೀಯತೆ ಮರೆತ
ಹೃದಯ ಹೀನರ ಮೆರೆತ.
ಉಳಿಸಿ ಗೋವಿನ ಕುಲವ
ಆಗುವುದು ಜಗದ ಲಯವ
ಉಳಿದರೆ ಗೋಕುಲ
ಉಳಿವುದು ಮನುಕುಲ.
ಮನುಜ ಕೃಷಿಯನ್ನು ಯಾಂತ್ರಿಕರಣಗೊಳಿಸುವ ಮೊದಲು ಸಂಪೂರ್ಣ ಭಾರತೀಯ ಕೃಷಿಪದ್ದತಿ ಗೋ ಆಧಾರಿತ ಕೃಷಿಯಾಗಿತ್ತು. ಭಾರತೀಯ ಕೃಷಿ ಇತ್ತೇಚಿಗೆ ಗೋ ಆಧಾರಿತವಾಗಿದಲ್ಲ ಇದು ದ್ವಾಪರಯುಗದ ಕಾಲದಿಂದಲೆ ಬಂದಿದ್ದು. ಒಬ್ಬ ರಾಜನ ಐಶ್ವರ್ಯವನ್ನು ಆ ರಾಜನ ಬಳಿಯಿರುವ ಗೋಸಂಪತ್ತಿನಿಂದಲೆ ಅಳೆಯುತ್ತಿದ್ದರು. ಗೋಕುಲದ ರಾಜ ನಂದನ ಬಳಿ ಅಸಂಖ್ಯಾತ ಪ್ರಾಮಾಣದಲ್ಲಿ ಗೋವುಗಳಿದ್ದವು. ಅವುಗಳ ಸಗಣಿಯನ್ನು ಒಂದೆ ಕಡೆ ಪ್ರತಿ ನಿತ್ಯ ಶೇಖರಿಸಿ ಅದು ಬೆಟ್ಟದ ರೂಪದಲ್ಲಿ ಬೆಳೆದು ಮಹಾ ಪರ್ವತವಾಗಿ ಗೋವರ್ಧನ ಗಿರಿ ಎಂದು ಹೆಸರುಪಡೆಯಿತು. ಹೀಗೆ ಒಮ್ಮೆ ಆರಂಭವಾಗಿದ್ದ ಯಾಗವೊಂದು ಅರ್ಧಕ್ಕೆ ನಿಂತ ಪರಿಣಾಮ ದೇವರಾಜ ಇಂದ್ರನು ಕೋಪಿಷ್ಟನಾಗಿ ಪ್ರಳಯಾಂತಕ ಮಳೆ ಬರಿಸುತ್ತಾನೆ. ಆ ಮಳೆಯಿಂದ ರಕ್ಷಣೆ ಕೊಡಲು ಭಗವಾನ್ ಬಾಲ ಶ್ರೀಕೃಷ್ಣನು ತನ್ನ ಬೆರಳಲ್ಲಿ ಗೋವರ್ಧನ ಗಿರಿಯನ್ನು ಎತ್ತಿ ಹಿಡಿದು ಗೋಕುಲದ ಗೋವುಗಳನ್ನು ಗೋಪಿಕೆಯರನ್ನು ಹಾಗು ಜನಸಾಮಾನ್ಯರನ್ನು ಕಾಪಾಡಿರುತ್ತಾನೆ. ನಂತರ ಆ ಮಹಾ ಮಳೆಗೆ ಭೂಮಿಯ ಮೇಲ್ಪದರ ಕೊಚ್ಚಿ ಹೋಗಿ ‘ಇಳೆ ಮಳೆಯಿಂದ’ ತನ್ನ ಸತ್ವವನ್ನು ಕಳೆದುಕೊಂಡಿರುತ್ತದೆ.

ಫೋಟೋ ಕೃಪೆ : google
ಆಗ ನಂದನ ಬಳಿ ಜನರು ತಮ್ಮ ದುಃಖವನ್ನು ತೋಡಿಕೊಂಡಾಗ ಶ್ರೀಕೃಷ್ಣ ಪರಮಾತ್ಮರು ಮಧ್ಯೆ ಬಂದು ಗೋವರ್ಧನ ಗಿರಿಯ ಸಗಣಿ ಗೊಬ್ಬರವನ್ನು ಭೂಮಿಗೆ ಉಣಿಸುವಂತೆ ಹೇಳುತ್ತಾರೆ. ಅಲ್ಲಿಂದ ಇಲ್ಲಿಯವರೆಗೂ “ಭೂತಾಯಿಯ ಹಸಿವಿಗೆ ಗೋ ತಾಯಿಯ ಸಗಣಿ ಗೊಬ್ಬರವನ್ನು ಉಣಿಸುವ ಪದ್ದತಿ” ಜಾರಿಯಲ್ಲಿದೆ. ಒಂದು ಕಿಲೊ ಸಗಣಿಯಲ್ಲಿ ಒಂದು ಕೋಟಿಗೂ ಅಧಿಕ ಜೀವಪೋಷಕ ಅಣುಗಳಿವೆ ಎಂದು ಕೃಷಿತಜ್ಞ ಸುಭಾಷ್ ಪಾಳೇಕರ್ ರವರು ಸಾಕ್ಷಿ ಸಮೇತ ರುಜುವಾತು ಮಾಡಿದ್ದಾರೆ.
ಸರ್ವ ದೇವಃ ಸ್ಥಿತದೇಹೆ
ಸರ್ವದೇವಮಯಿ ಹೀಃ ಗೌಃ.
ಯಾವ ಗೋವುಗಳಲ್ಲಿ ಸರ್ವ ದೇವರುಗಳು ನೆಲೆಸಿರುತ್ತಾರೋ ಅಂತಹ ಗೋವುಗಳ ಅನುಗ್ರಹದಿಂದ ಮನುಷ್ಯನಿಗೆ ಧರ್ಮ ಅರ್ಥ ಕಾಮ ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳು ಲಭಿಸುತ್ತವೆ.
ಒಂದು ಪ್ರದೇಶಕ್ಕೆ ತನ್ನದೆ ಆದ ಒಂದು ಪ್ರಾಣಿ ವರ್ಗ ಇದ್ದೆ ಇರುತ್ತದೆ.ಅದು ಪ್ರಕೃತಿಯ ಸೃಷ್ಟಿಯೂ ಹೌದು. ಅದೇ ರೀತಿ ನಮ್ಮ ಈ ಭವ್ಯ ಭಾರತಕ್ಕೆ ಗೋ ಸಂತತಿಯೇ ಮುಖ್ಯವಾಗಿದ್ದು ಇಲ್ಲಿ ನಮ್ಮ ದೇಶೀಯ ಹಸುಗಳು ಅಂದರೆ ಸುಲಭವಾಗಿ ಗುರುತಿಸಲು ಹಸು ಅಥವಾ ಎತ್ತುಗಳಿಗೆ ಡುಬ್ಬ(ಭುಜ) ಗೊರಸು ಉದ್ದನೆಯ ಬಾಲ ಕೊಂಬುಗಳ ಶೈಲಿ ಗೋರೋಚನ ಸೂರ್ಯಕೇತು ನಾಡಿ ಹೀಗೆ ಬಹಳ ಲಕ್ಷಣಗಳು ಇರುತ್ತವೆ.
ಏನದು ಸೂರ್ಯಕೇತು ನಾಡಿಯ ಕಾರ್ಯ ?
ಸೂರ್ಯನಿಂದ ಬರುವ ಹಲವು ಕಿರಣಗಳಲ್ಲಿ ಒಂದು ಗೋ ಕಿರಣವಿದೆ ಈ ಕಿರಣವನ್ನು ನಾಟಿ ಹಸುವಿನ ಡುಬ್ಬದ ಒಳಗೆ ಇರುವ ಸೂರ್ಯಕೇತು ನಾಡಿ ಹೀರಿಕೊಂಡು ಗೋ ಮೂತ್ರ ಹಾಗು ಗೋಕ್ಷೀರ(ಹಾಲು)ಕ್ಕೆ ರವಾನಿಸುತ್ತದೆ. ಈ ಕಾರಣದಿಂದಲೆ ಗೋಮೂತ್ರ “ಭೂಮಿಗೆ ಬಿದ್ದರೆ ಭೂಮಿ ಶುದ್ದ ದೇಹಕ್ಕೆ ಬಿದ್ದರೆ ದೇಹ ಶುದ್ದ” ಯಾವ ಸಮಾರಂಭವನ್ನು ಪ್ರಾರಂಭಿಸುವ ಮೊದಲು ಗೋಮೂತ್ರವನ್ನು ಪ್ರೋಕ್ಷಿಸಿಯೇ ಪ್ರಾರಂಭಿಸುವುದು.
ಏನಿದು ಗೋರೋಚನ?
ನಾಟಿ ಹಸುವಿನ ಕೊಂಬುಗಳ ಮಧ್ಯ ಒಂದು ದ್ರವ್ಯವಿದೆ ಇದನ್ನು ಸ್ವರ್ಗದ ಸುಗಂಧ ದ್ರವ್ಯ ಗೋರೋಚನ ಎನ್ನುತ್ತಾರೆ. ಉಸಿರಾಟ ಪ್ರಕ್ರಿಯೆಯಲ್ಲಿ ಗೋವು ಉಚ್ವಾಸ ಕ್ರಿಯೆಯಲ್ಲಿ ಆಮ್ಲಜನಕ ತೆಗೆದುಕೊಂಡು ನಿಶ್ವಾಸ ಕ್ರಿಯೆಯಲ್ಲಿ ಇಂಗಾಲದ ಡೈಆಕ್ಸೈಡ್ ಬಿಡುವಾಗ ಅದು ಗೋ ರೋಚನವನ್ನು ಮುಟ್ಟಿ ಮತ್ತೆ ಅದು ಶುದ್ದ ಗಾಳಿಯಾಗಿಯೇ ಹೊರಬರುತ್ತದೆ, ಹೀಗಾಗಿ ಉಸಿರಾಟ ಪ್ರಕ್ರಿಯೆಯಲ್ಲಿ ಗೋವು ಆಮ್ಲಜನಕವನ್ನೆ ತೆಗೆದುಕೊಂಡು ಆಮ್ಲಜನಕವನ್ನೆ ಬಿಡುತ್ತದೆ ಎನ್ನುತ್ತಾರೆ.
ಮನುಜ ಒಂದು ಕಾಲದಲ್ಲಿ ಇಷ್ಟು ಪ್ರಮಾಣದ ರೋಗಗಳಿಗೆ ತುತ್ತಾಗದೆ ಗತ್ತಿನಲಿ ನಿರೋಗಿಯಾಗಿ ಜೀವಿಸುತ್ತಿದ್ದ ಪ್ರಮುಖ ಕಾರಣವೆ ಗೋವಿನ ಸಗಣಿ ಹಾಗು ನೈಸರ್ಗಿಕ ಗೊಬ್ಬರವನ್ನು ಬಳಸಿ ಬೆಳೆದ ಆಹಾರ ಪದಾರ್ಥಗಳು. ಆದರೆ ಇಂದು ರೈತ ಕೃಷಿಯನ್ನು ಯಾಂತ್ರಿಕರಣ ಗೊಳಿಸಿ ರಾಸಾಯನಿಕ ಗೊಬ್ಬರ ಹಾಗು ಕ್ರಿಮಿನಾಶಕಗಳನ್ನು ಬಳಸಿ ಅಹಾರ ಧಾನ್ಯಗಳನ್ನು ಬೆಳೆದು ಭೂ ತಾಯಿಯನ್ನು ಬಂಜರಾಗಿಸಿದ್ದಾನೆ. ಅದರ ಪರಿಣಾಮವೇ ಮನುಜ ರೋಗಿಷ್ಟನಾಗಿ ತನ್ನ ಆಯಸ್ಸನ್ನು ಕಳೆದುಕೊಳ್ಳುತ್ತಿದ್ದಾನೆ.
“ಪಂಚಗವ್ಯ ಜೀವನ ಭವ್ಯ”
ಏನಿದು ಪಂಚಗವ್ಯ?
ಗೋವು ಅಮೃತಕ್ಕೆ ಸಮಾನವಾದ ಗವ್ಯಗಳನ್ನು ಕೊಡುವ ದಿವ್ಯ ಶಕ್ತಿಯಾಗಿರುವುದರಿಂದಲೆ ಧರ್ಮರಾಯ ಯಕ್ಷನಿಗೆ ಭೂ ಲೋಕದಲ್ಲಿ ಅಮೃತ ಗೋ ಗವ್ಯಗಳಲ್ಲಿ ಅಡಗಿದೆ ಎಂದು ಹೇಳುವನು, ಇದು ಸತ್ಯವಾದ ಮಾತು ಕೂಡ, ಗೋವಿನ ಗವ್ಯಗಳಿಗೆ ಸರ್ವ ರೋಗವನ್ನು ಹತ್ತಿಕ್ಕುವ ಶಕ್ತಿ ಅಡಗಿದೆ. ಮಾಹಿತಿಯ ಅಭಾವದಿಂದ ಇತ್ತಲ ಗಿಡ ಮದ್ದಲ್ಲ ಎಂಬ ಗಾದೆ ಇಲ್ಲಿಯು ಅನ್ವಯವಾದಂತಿದೆ. ಲಕ್ಷಾಂತರ ಜನರು ಗೋವುಗಳ ಪಂಚಗವ್ಯ ಸೇವಿಸಿ ಮರಣವನ್ನೆ ಗೆದ್ದು ಬಂದಂತಹ ನಿದರ್ಶನಗಳಿವೆ.

ಬಹಳ ಜನರಿಗೆ ಪಂಚಗವ್ಯದ ಮಾಹಿತಿ ಇಲ್ಲ, ಪಂಚಗವ್ಯವೆಂದರೆ ದೇಶೀಯ ಹಸುವಿನ #ಹಾಲು_ಮೊಸರು_ತುಪ್ಪ ಗೋಮೂತ್ರ(ಗಂಜಳ) ಹಾಗು ಗೋಮಯ (ಸಗಣಿ ರಸ) ಇವುಗಳ ಮಿಶ್ರಣವೆ ಪಂಚಗವ್ಯ. ಒಂದೇ ಹಸುವಿನ ಐದು ಗವ್ಯಗಳನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ ಬೆಳಗ್ಗೆ ಹಾಗು ಸಂಜೆ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಎಂಥಹ ವ್ಯಾಧಿಯಿದ್ದರೂ ಕೂಡ ಶಮನವಾಗುವುದು, ಕ್ಯಾನ್ಸರ್ ಹಾಗು ಎಚ್ ಐ ವಿ ಯಂತಹ ಮಾರಕ ರೋಗಗಳೆ ನಿಯಂತ್ರಣಕ್ಕೆ ಬಂದಿವೆ.

ಫೋಟೋ ಕೃಪೆ : save indian cows
ಈ ಒಂದೊಂದು ಗವ್ಯಗಳು ತನ್ನದೆ ಆದ ಔಷಧಿಯ ಗುಣಗಳನ್ನು ಹೊಂದಿವೆ. ಪ್ರತಿಯೊಂದು ಗವ್ಯಗಳು ಕೂಡ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ದೇಹಕ್ಕೆ ಬಲ ತುಂಬಿ ಬದುಕಿನ ಚೈತನ್ಯವನ್ನು ಹೆಚ್ಚಿಸುತ್ತವೆ. ಆಯುರ್ವೇದದ ಬಹಳಷ್ಟು ಔಷಧಿಗೆ ಗೋ ಗವ್ಯಗಳು ಉಪಯೋಗಿಸುತ್ತಾರೆ. ಗವ್ಯಗಳಲ್ಲಿ ಒಂದಾದ ಹಾಲನ್ನು ಬಹಳಷ್ಟು ಜನ ಬೆಳಗಿನ ವೇಳೆ ಕುಡಿಯುತ್ತಾರೆ. ಆದರೆ ರಾತ್ರಿ ಮಲಗುವ ಮುಂಚೆ ಕುಡಿದರೆ ತಾರುಣ್ಯ ಹೆಚ್ಚುವುದು. ಪ್ರಾಯದಲ್ಲೇ ಮುಖದಲ್ಲಿನ ಸುಕ್ಕುಗಳಿದ್ದರೆ ಗಣನೀಯವಾಗಿ ಕಡಿಮೆಯಾಗುವುದು. ಮುಖದ ಕಾಂತಿ ಹೆಚ್ಚುವುದು. ಶರೀರ ನಿತ್ರಾಣಗೊಂಡಾಗ ದೇಶೀಯ ಹಸುವಿನ ಹಾಲಿಗೆ ಬೆಲ್ಲ ಸೇರಿಸಿ ಸೇವಿಸುವುದರಿಂದ ದಣಿವು ಮಾಯವಾಗುವುದು. ಗರ್ಭಿಣಿಯರು ಒಂಬತ್ತು ತಿಂಗಳವರೆಗೆ ದೇಶೀಯ ಹಸುವಿನ ಹಾಲು ಕುಡಿಯುವುದರಿಂದ ಹೆರಿಗೆ ಸಮಯದ ಕಷ್ಟ ಕಡಿಮೆಯಾಗುವುದು.

ಫೋಟೋ ಕೃಪೆ : waywewere
ಎರಡನೆ ಗವ್ಯವಾದ ಮೊಸರು ವಾತನಾಶಕ. ಜಠರಾಗ್ನಿಯನ್ನು ಜಾಗೃತಗೊಳಿಸುತ್ತದೆ. ಸರಾಗವಾಗಿ ಮಲಮೂತ್ರ ವಿಸರ್ಜನೆಗೆ ಸಹಕಾರಿಯಾಗಿದೆ. ಮೊಸರಿಗೆ ಬೆಲ್ಲ ಮಿಶ್ರಣ ಮಾಡಿ ಸೇವಿಸುವುದರಿಂದ ಶರೀರದ ಅತಿ ಉಷ್ಣ ಕಡಿಮೆಯಾಗುವುದು(ವಿಶೇಷ ಸೂಚನೆ: ರಾತ್ರಿ ವೇಳೆ ಮೊಸರು ಸೇವನೆ ಆರೋಗ್ಯಕ್ಕೆ ಹಾನಿಕರ ಕೊಲೆಸ್ಟರಾಲ್ ಪ್ರಮಾಣ ಅಧಿಕವಾಗಿ ದೇಹಕ್ಕೆ ಅಜೀರ್ಣವಾಗುವುದು) ಹೆಪ್ಪು ಹಾಕಿದ 6ಗಂಟೆಗಳೊಳಗೆ ಮೊಸರು ಸೇವಿಸಿದರೆ ಅಧಿಕ ಸಿಹಿ ಹಾಗು ರುಚಿಯಾಗಿರುವುದು. ಮೊಸರನ್ನು ಮಂಥಿನಿಂದ ಕಡೆದಾಗ ಸಿಗುವ ಮತ್ತೊಂದು ದ್ರವ ರೂಪದ ಪದಾರ್ಥವೇ ಮಜ್ಜಿಗೆ, ಮಜ್ಜಿಗೆಯಿಂದ ಬೆಣ್ಣೆಯನ್ನು ಬೇರ್ಪಡಿಸಿ ಮಜ್ಜಿಗೆಗೆ ನೀರು ಹಾಗು ಸೈಂದವ ಲವಣ ಅಥವಾ ಕಪ್ಪುಪ್ಪು ಮಿಶ್ರಣ ಮಾಡಿ ಸೇವಿಸುವುದರಿಂದ ಕೂಡ ಬಹಳ ಪ್ರಯೋಜನಗಳಿವೆ. ದೇಹದಲ್ಲಿನ ಉಷ್ಣತೆ ತಗ್ಗುವುದು. ರಕ್ತದೊತ್ತಡ ನಿಯಂತ್ರಣಕ್ಕೆ ಬರುವುದು. ವಾತ ಪಿತ್ತ ಕಫ ಮೂರು ಗುಣಗಳನ್ನು ಸಮತೋಲನವಾಗಿಡುವಲ್ಲಿ ಮಜ್ಜಿಗೆ ಪ್ರಮುಖ ಪಾತ್ರ ವಹಿಸುತ್ತದೆ. ಆಯುರ್ವೇದದಲ್ಲಿ ಮಜ್ಜಿಗೆಯನ್ನು ಅಮೃತವೆಂದೇ ಕರೆಯುವರು. ಊಟದ ನಂತರ ಮಜ್ಜಿಗೆಗೆ ಸೈದುಪ್ಪು ಮಿಶ್ರಣ ಮಾಡಿ ಕುಡಿಯುವುದರಿಂದ ಜೀರ್ಣಕ್ರಿಯೆ ಸರಿಯಾಗಿ ನಡೆಯುವುದು ಜೊತೆಗೆ ಬಿಪಿಯೂ ಕೂಡ ಹತೋಟಿಯಲ್ಲಿ ಇರುವುದು.

ಫೋಟೋ ಕೃಪೆ : medicalnewstoday
ಗವ್ಯಗಳಲ್ಲಿ ಮೂರನೇ ಮುಖ್ಯವಾದ ಗವ್ಯ ತುಪ್ಪ ಬೆಣ್ಣೆಯನ್ನು ಕಾಯಿಸಿದಾಗ ಸಿಗುವ ದ್ರವ್ಯವೇ ತುಪ್ಪ. ದೇಶೀಯ ಹಸುವಿನ ತುಪ್ಪವು ಬುದ್ದಿ ಹಾಗು ನೆನಪಿನ ಶಕ್ತಿಯನ್ನು ವರ್ಧಿಸುತ್ತದೆ. ದೇಹಬಲವನ್ನು ಹೆಚ್ಚಿಸುತ್ತದೆ. ವೀರ್ಯವರ್ಧಕವಾಗಿರುತ್ತದೆ. ಕಣ್ಣಿನ ಕಾಂತಿಯನ್ನು ಹೆಚ್ಚಿಸುತ್ತದೆ. ತ್ರಿದೋಷವನ್ನು ಶಮನ ಮಾಡುತ್ತದೆ. ತುಪ್ಪ ಹಳೆಯದಾದಷ್ಟು ಔಷಧೀಯ ಗುಣ ಹೆಚ್ವುವುದು. ಮನೋ ವಿಕಾರ, ತಲೆನೋವು, ಕಿವಿನೋವು, ಮುಂತಾದ ತೊಂದರೆಗಳಿಗೆ ರಾಮಬಾಣವಾಗಿದೆ.

ಫೋಟೋ ಕೃಪೆ : telegraphindia
ನಾಲ್ಕನೆಯ ಗವ್ಯ ಗೋಮಯ(ಸಗಣಿ) ತನ್ನ ಅದ್ಭತ ಶಕ್ತಿಯಿಂದ ಇಡೀ ಭೂ ವಲಯಕ್ಕೆ ಹಚ್ಚ ಹಸಿರು ಹೊದ್ದಿಸಿ. ಭೂ ಮಂಡಲ ವಾಸಿಗಳಿಗೆ ಪೋಷಕಾಂಶಗಳು ಇನ್ನಿತರ ಜೀವ ಪೋಷಕ ಖನಿಜಾಂಶಗಳನ್ನು ಕೊಡುವಲ್ಲಿ ನಿರ್ಣಾಯಕ ಪಾತ್ರ ವಹಿಸುವುದು. ಎಲ್ಲಿಯವರೆಗೆ ಮಾನವ ಗೋ ಆಧಾರಿತ ಕೃಷಿಗೆ ಮೊರೆ ಹೋಗಿದ್ದನ್ನು ಅಲ್ಲಿಯ ವರೆಗೆ ನಿರೋಗಿಯಾಗಿ ೧೦೦ರಿಂದ ೧೨೦ ವರ್ಷ ಜೀವಿಸಿದ್ದ. ಇಂದು ಹಲವು ಬಗೆಯ ವಿದೇಶಿ ರಾಸಾಯನಿಕ ಗೊಬ್ಬರಗಳ ಬಳಕೆಗೆ ಮಾರು ಹೋಗಿ ತಾನು ಕೂಡ ನಿಧಾನವಾಗಿ ವಿಷವಾಗುತ್ತಿದ್ದಾನೆ, ಜೊತೆಗೆ ಪ್ರತಿ ದಿನ ತನ್ನ ಆಯಸ್ಸು, ನೆನಪಿನ ಶಕ್ತಿ, ಪ್ರಾಮಾಣಿಕತೆ, ಮಾನವೀಯತೆ ಎಲ್ಲವನ್ನು ಕಳೆದುಕೊಳ್ಳುತ್ತಾನೆ.

ಫೋಟೋ ಕೃಪೆ : dailyexcelsior
ಐದನೆ ಗವ್ಯ ದೇಶೀಯ ಹಸುವಿನ ಗೋಮೂತ್ರ ಈ ಗವ್ಯಕ್ಕೆ ಗಂಗಾಜಲ ಎಂದೂ ಕೂಡ ಕರೆಯುವರು. ಗಂಗೆಯ ಅಂಶ ಗೋಮೂತ್ರದಲ್ಲಿ ಅಡಗಿದೆ. ಈ ಕಾರಣದಿಂದಲೆ ಯಾವ ಶುಭ ಸಮಾರಂಭ ನಡೆದರು ಅಲ್ಲಿ ಗೋಮೂತ್ರವನ್ನು ಮೊದಲಿಗೆ ಪ್ರೋಕ್ಷಿಸಿ ನಂತರ ಕಾರ್ಯಕ್ರಮವನ್ನು ಶುರು ಮಾಡುವರು. ಹೀಗೆ ಮಾಡುವುದರಿಂದ ದುಷ್ಟ ಶಕ್ತಿಗಳು ದೂರವಾಗುತ್ತವೆ. ಗೃಹ ಪ್ರವೇಶದ ಸಂದರ್ಭದಲ್ಲಿ ಗೋತೀರ್ಥ ಇರಲೇಬೇಕು, ಕಾರಣವಿಷ್ಟೆ ಈ ಪವಿತ್ರ ತೀರ್ಥಕ್ಕೆ ನಕಾರಾತ್ಮಕ ಶಕ್ತಿಗಳನ್ನು ನಿಷ್ಕ್ರಿಯ ಗೊಳಿಸುವ ಗುಣವಿದೆ. ಯಾರು ತಮ್ಮ ಜೀವನದಲ್ಲಿ ಗೋಮೂತ್ರವನ್ನು ಸೇವಿಸುವರೊ ಅವರಿಗೆ ಯಾವುದೇ ರೀತಿಯ ವ್ಯಾದಿಗಳು ಅಕಾಲಿಕ ಮರಣ, ದುಷ್ಟಶಕ್ತಿಗಳ ಹಾವಳಿ ಸಂಭವಿಸುವುದೆಲ್ಲ. ಇದೆಲ್ಲಕ್ಕಿಂತ ಹೆಚ್ಚಿನದು ಪಂಚಗವ್ಯ ದಲ್ಲಿ ಪ್ರಮುಖ ಸ್ಥಾನ ಪಡೆದಿರುವ ಈ ತೀರ್ಥ ಸರ್ವ ರೋಗವನ್ನು ನಿಗ್ರಹಿಸುವ ಗುಣ ಹೊಂದಿದೆ,ಗೋಮೂತ್ರ ಕ್ಕೆ ತ್ರಿದೋಷಗಳಾದ ವಾತ,ಪಿತ್ತ, ಕಫ ವನ್ನು ಸಮ ಸ್ಥಿತಿಯಲ್ಲಿಡುವ ಗುಣವಿದೆ. ಯಾವುದೇ ರೀತಿಯ ಸುಟ್ಟಗಾಯ, ಬಿದ್ದಗಾಯ ,ಚರ್ಮದ ವ್ಯಾದಿಗಳಿದ್ದರು ಇದನ್ನು ಲೇಪಿಸಿದರೆ ಗಾಯ ಮಾಯ. ಕ್ಯಾನ್ಸರ್, ಎಚ್ಐವಿಯಂತ ಮಾರಕ ರೋಗಗಳು ಹತೋಟಿಗೆ ಬಂದ ನಿದರ್ಶನಗಳಿವೆ.
ದೇಶೀಯ ಹಸುಗಳಿಗೆ ನಕಾರಾತ್ಮಕ ಶಕ್ತಿಯನ್ನು ಸೆಳೆವ ಶಕ್ತಿಯಿದೆ. ಗೋವುಗಳಿದ್ದ ಜಾಗದಲ್ಲಿ ಯಾವುದೆ ದುಷ್ಟಶಕ್ತಿ ಬಂದರೂ ಅದರ ಪರಿಣಾಮ ಮೊದಲು ಗೋವಿಗೆ ತಾಗುತ್ತದೆ. ಇದಕ್ಕೆ ಪೂರಕವಾಗಿ ಒಂದು ನೈಜ ಘಟನೆ ನಿಮಗಾಗಿ.

ಫೋಟೋ ಕೃಪೆ : kreately
ಹಾಸನ ಜಿಲ್ಲೆಯ ಹಳ್ಳಿಯೊಂದರ ಕಥೆ ಒಂದು ಆರೋಗ್ಯದಾಯಕ ಕುಟುಂಬ. ಅವರ ಮನೆಯಲ್ಲಿ ಸುಮಾರು ೧೦ ದೇಶೀಯ ಹಸುಗಳು. ಹಾಲು ಮೊಸರು ತುಪ್ಪ ಮಜ್ಜಿಗೆ ವರ್ಷವಿಡಿ ತುಂಬಿ ತುಳುಕುತ್ತಿತ್ತು. ಮನೆಯಲ್ಲಿ ಶಾಂತಿ ನೆಮ್ಮದಿಗೆ ಭಂಗವಿಲ್ಲ. ದಿನಗಳು ಉರುಳಿದವು ಮನೆಯಲ್ಲಿ ಇದಕ್ಕಿದಂತೆ ಅಶಾಂತಿ ವಾತವರಣ ವಾರಕ್ಕೊಂದು ಹಸು ಸಾವನ್ನಪ್ಪುತ್ತಿತು. ಹಸುಗಳು ದಷ್ಟಪುಷ್ಟವಾಗಿಯೇ ಇದ್ದರೂ, ಬೆಳಗ್ಗೆ ಮನೆಯಿಂದ ಹೊರಟು ಚೆನ್ನಾಗಿಯೇ ಮೇವು ತಿಂದು, ರಾತ್ರಿ ಕೊಟ್ಟಿಗೆಯಲ್ಲಿ ಮಲಗಿದ ಹಸುಗಳು ಬೆಳಗ್ಗೆ ಏಳುವ ಹೊತ್ತಿಗೆ ಸಾವನ್ನಪಿರುತ್ತಿದ್ದವು. ಸುಮಾರು ೫ ಹಸುಗಳು ಇಹಲೋಕ ತ್ಯೆಜಿಸಿದ್ದವು. ಇಡಿ ಕುಟುಂಬಸ್ಥರ ನೆಮ್ಮದಿಗೆ ಭಂಗ ಬಂದಿತ್ತು. ಊರಿನ ಹಿರಿಯರ ಸಲಹೆಯಂತೆ ಮನೆಯ ಒಡೆಯ ಜ್ಯೋತಿಷ್ಯಿಗಳ ಮೊರೆ ಹೋಗುತ್ತಾರೆ. ಕೂಲಂಕಷವಾಗಿ ಪರೀಕ್ಷಿಸಿದ ಜ್ಯೋತಿಷಿ ಹತ್ತಿರದ ಸಂಬಂಧಿಕರು ಇವರ ಸದಸ್ಯರ ಮೇಲೆ ವಾಮಾಚಾರ ಮಾಡಿಸಿರುವುದು ಗೊತ್ತಾಗುತ್ತದೆ. ತನ್ನ ಒಡೆಯ ಕುಟುಂಬಸ್ಥರ ಪ್ರಾಣ ಉಳಿಸಲು ತನ್ನ ಪ್ರಾಣವನ್ನೆ ಧಾರೆಯರೆದಿರುತ್ತವೆ.
ಇಲ್ಲಿ ನಾವು ಗಮನಿಸ ಬೇಕಾದದ್ದು ಯಾರ ಮನೆಯಲ್ಲಿ ದೇಶಿಯ ಹಸುಗಳ ವಾಸಸ್ಥಾನ ವಾಗಿರುತ್ತೊ, ಆ ಮನೆಯವರನ್ನು ಯಾವ ದುಷ್ಟಶಕ್ತಿ ಗಳು ನೇರವಾಗಿ ಏನು ಮಾಡಲಾಗುವುದಿಲ್ಲಾ, ಕಾರಣವಿಷ್ಟೆ ಮೊದಲು ವಾಮಾಚಾರದ ಪ್ರಭಾವ ದುಷ್ಟಶಕ್ತಿ ಗಳು ಗೋವಿನ ಪ್ರಭಾವಲಯಕ್ಕೆ ಬಂದು ಗೋವು ಅದನ್ನು ನಿಷ್ಕ್ರಿಯ ಗೊಳಿಸುತ್ತದೆ ಇಂತಹ ದೈವೀಶಕ್ತಿ ಇರುವ ದೇಶಿಯ ಹಸುಗಳ ಪಾಲನೆ ಪೋಷಣೆ ಮಾಡಿದ್ದೆ ಆದರೆ ಸ್ವರ್ಗ ಪ್ರಾಪ್ತಿ ಯಾಗುವುದು ಖಂಡಿತ.
ಇಂತಹ ಅದ್ಭುತ ಶಕ್ತಿಯನ್ನು ಹೊಂದಿರುವ ಗೋವುಗಳು “ಉಳಿಯದ ಹೊರತು ಮನುಜನಿಗೂ ಉಳಿಗಾಲವಿಲ್ಲ”.
ಗೋ ಆಧಾರಿತ ಕೃಷಿ
ಮನುಕುಲವು ಖುಷಿ” ಎಂದು ಹೇಳಲು ಇಚ್ಚಿಸುತ್ತೇನೆ.
ಬಳ್ಳ ಹಾಲನ್ನು ಕರೆದು
ಮೊಸರು ಮಜ್ಜಿಗೆ ಕುಡಿದು
ಬೆಣ್ಣೆ ತುಪ್ಪವ ತಿಂದು
ಮುದಿಯೆಂದು ಕಟುಕನಿಗೆ ಕೊಟ್ಟರದು
ಹೆತ್ತ ತಾಯಿಯನ್ನೇ ಕೊಂದಂತದು.
ಶಾಪ ಕಟ್ಟಿಟ್ಟ ಬುತ್ತಿ ಎನ್ನುವ ಮಾತನ್ನು ನಾವು ಸಾರಿ ಸಾರಿ ಜಗತ್ತಿಗೆ ತಿಳಿಸಬೇಕಿದೆ.

ಫೋಟೋ ಕೃಪೆ :tv9hindi
ಗೋಹತ್ಯೆಗೆ ಮೂಲ ಕಾರಣ ಬ್ರಿಟೀಷರು ನಮ್ಮನ್ನು ಆಳುವ ಸಂದರ್ಭದಲ್ಲಿ ಭಾರತದಲ್ಲಿ ಸಂಪತ್ತು ಬಗೆದಷ್ಟು ಅಕ್ಷಯವಾಗಿತ್ತು. ಬ್ರೀಟಿಷರ ಮೂಲ ಉದ್ದೇಶ ತಮ್ಮ ಸಂಸ್ಕೃತಿಯನ್ನು ಪಸರಿಸುವುದೆ ಆಗಿತ್ತು. ಆದರೆ ಭಾರತೀಯರು ತಮ್ಮ ಮೂಲ ಸಂಸ್ಕೃತಿಯನ್ನು ಬಿಟ್ಟು ಎಲ್ಲಿಯೂ ಹೋಗುವುದಿಲ್ಲ. ಎಲ್ಲರಿಗೂ ತಿನ್ನುವಷ್ಟು ಅನ್ನವಿದೆ. ರೆಟ್ಟೆ ತುಂಬ ದುಡಿಯಲು ಶಕ್ತಿ ಇದೆ. ಋಷಿ-ಕೃಷಿ ಪದ್ದತಿ, ಗೋ ಆಧಾರಿತ ಕೃಷಿಯಿಂದ ವೇದ ಮಂತ್ರಗಳಿಂದ ಕಾಲಕಾಲಕ್ಕೆ ಮಳೆ ಬೆಳೆ ಎಲ್ಲವೂ ಚೆನ್ನಾಗಿತ್ತು. ಈ ಎಲ್ಲಾ ವಿಷಯಗಳನ್ನು ಲಂಡನ್ ರಾಣಿ ತನ್ನವರಿಂದ ಮಾಹಿತಿ ಕಲೆ ಹಾಕಿಕೊಂಡು ಭಾರತದಲ್ಲಿ ಶಾಂತಿ ನೆಮ್ಮದಿ ಸಮೃದ್ಧಿಯ ಮೂಲವೇ ಗೋವುಗಳು ಎನ್ನುವ ವಿಷಯ ಖಾತ್ರಿಪಡಿಸಿಕೊಂಡು, ಗೋಹತ್ಯೆ ಮಾಡಿಸಲು ಫಾರ್ಮಾನು ಹೊರಡಿಸುತ್ತಾಳೆ ಹಾಗು ಕಸಾಯಿ ಖಾನೆಯ ನಿರ್ವಹಣೆಗೆ ಮುಸಲ್ಮಾನ ಬಂದುಗಳನ್ನೇ ನೇಮಕ ಮಾಡುತ್ತಾರೆ. ಪ್ರಾರಂಭದಲ್ಲಿ ಯಾರು ಒಪ್ಪುವುದಿಲ್ಲ ಆದರೆ ಅವರಿಗೆ ಹೊಡೆದು ಬಡಿದು ಕ್ರೂರವಾಗಿ ಶಿಕ್ಷಿಸಿ ಅವರನ್ನೆ ನೇಮಕ ಮಾಡುತ್ತಾರೆ ಹಾಗು ಭಾರತೀಯರಿಗೆ ನೋಡಿ ಗೋವುಗಳನ್ನು ವಧಿಸುತ್ತಿರುವುದು ನಾವಲ್ಲ ಮುಸ್ಲಿಮರು ಎಂದು ಇಬ್ಬರ ನಡುವೆ ಶತೃತ್ವ ತಂದು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ.
ಇನ್ನಾದರು ಹಳ್ಳಿ ಹಳ್ಳಿಯ ಪ್ರತಿಯೊಂದು ಮನೆಯಲ್ಲೂ ಒಂದೊಂದು ಗೋವು ಉಳಿಸಲೇ ಬೇಕು.
ಗೋವು ದುಡಿಯುವ ಶಕ್ತಿ ಕಳೆದುಕೊಂಡಾಗ ಅಥವಾ ಹಾಲು ಕೊಡುವ ಸಾಮರ್ಥ್ಯವಿಲ್ಲದೆ ಹೋದಾಗ ಅವುಗಳನ್ನು ಕಸಾಯಿ ಖಾನೆಗೆ ಕೊಡದೆ ಸರ್ಕಾರವೇ ಅವುಗಳಿಗೆ ಗೋಶಾಲೆಯನ್ನು ತೆರೆದು ಸಾಕಬೇಕು ಹಾಗು ಅವುಗಳ ಸಗಣಿ ಗೊಬ್ಬರವನ್ನು ರೈತರಿಗೆ ಮಾರಿ ಭೂಮಿಯ ಸತ್ವ ಹೆಚ್ಚುವಂತೆ ನೋಡಿಕೊಳ್ಳಬೇಕು. ಆಗ ಒಂದಿಷ್ಟು ನಿರುದ್ಯೋಗ ಸಮಸ್ಯೆಯೂ ಕಡಿಮೆಯಾಗಿ ಒಂದಿಷ್ಟು ಜನರಿಗೆ ಉದ್ಯೋಗವು ದೊರೆಯುವುದು.
ಗೋವಿನ ಉಗಮ
ಬ್ರಹ್ಮದೇವರೆ ಒಮ್ಮೆ ಗೋವಿನ ಬಗ್ಗೆ ಓದಿದರಂತೆ. ಮನುಕುಲದ ಉದ್ದಾರಕ್ಕೋಸ್ಕರವೇ ಅವತರಿಸಿ ಬಂದಂತಹ ದೈವವೇ ಗೋಮಾತೆ.
ಸಮುದ್ರ ಮಂಥನದ ಸಂಧರ್ಭದಲ್ಲಿ ಸುರರು ಮತ್ತು ಅಸುರರು ವಾಸುಕಿಯನ್ನು ಹಗ್ಗವನ್ನಾಗಿಯೂ, ಮಂಥರಾ ಪರ್ವತವನ್ನು ಮಂಥನಾಗಿಯು ಬಳಸಿ ಕ್ಷೀರಸಾಗರವನ್ನು ಕಡೆದಾಗ ಅಮೃತಕ್ಕಿಂತಲೂ ಮೊದಲು ಉದ್ಭವಿಸಿದ ದಿವ್ಯ ಶಕ್ತಿಯೇ ಕಾಮಧೇನು (ಗೋಮಾತೆ). ಈ ಮಾತೆಯು ಭೂಲೋಕದಲ್ಲಿ ಮನುಕುಲ ಅಳಿವಿನಂಚಿನಲ್ಲಿದ್ದಾಗ ತನ್ನ ಮಗಳನ್ನು ದೇವಲೋಕದಲ್ಲಿ ಬಿಟ್ಟು ಭೂಮಿಗೆ ಬಂದು ಮನುಕುಲವನ್ನು ಸಲಹಿದಂತ ಪ್ರತ್ಯೇಕ್ಷ ದೈವ ಮಾತೆ ನಮ್ಮ ಕಾಮಧೇನು (ಗೋಮಾತೆ).
ಮನುಕುಲವನ್ನು ಕಾಪಾಡಲು ಬಂದಂತಹ ಈ ಮಾತೆ ಈಗ ಕಸಾಯಿ ಖಾನೆಯ ಪಾಲಾಗುತ್ತಿರುವುದು ವಿಪರ್ಯಾಸವೇ ಸರಿ ಇದು ಎಲ್ಲಾ ಧರ್ಮದವರೂ ಯೋಚಿಸಿ ಗೋಹತ್ಯೆ ನಿಲ್ಲಿಸಬೇಕೆಂದು ಎಲ್ಲಾ ಗೋರಕ್ಷಕರ ಪರವಾಗಿ ಮನವಿ ಮಾಡಿಕೊಳ್ಳುತ್ತ ಗೋವಿನ ಬಗ್ಗೆ ಬರೆಯಲು ಬಹಳಷ್ಟಿದೆ ಬರೆದದ್ದು ಎಳಷ್ಟು ಮಾತ್ರ “ಗೋವು ರಾಷ್ಟ್ರೀಯ ಪ್ರಾಣಿಯಾಗಬೇಕು” ಎಂದು ತಿಳಿಸುತ್ತ ಮುಂದೆ ಸಮಯ ಸಿಕ್ಕಾಗ ಮತ್ತೆ ಮುಂದುವರೆಸುತ್ತೇನೆ.
(ಚನ್ನಕೇಶವ ಜಿ ಲಾಳನಕಟ್ಟೆ ಅವರು ಚಿಕ್ಕಂದಿನಿಂದಲೂ ಗೋವುಗಳ ಮೇಲೆ ಅಗಾಧ ಪ್ರೇಮ. ಇಂದು ಗೋವುಗಳ ಮಾನವನ ವಿಚಿತ್ರ ಹಸಿವಿನಾಸೆಗೆ ಕಸಾಯಿಖಾನೆಯ ಪಾಲಗಿರುವುದು ದೇಶದ ಅತ್ಯಂತ ದೊಡ್ಡ ಹೊಡೆತವಾಗಿದೆ. ಎಲ್ಲಿ ಗೋವುಗಳು ಪೋಜಿಸಲ್ಪಡುತ್ತದೊ ಅಲ್ಲಿ ದೇಶ ಸುಭಿಕ್ಷೆಯಾಗಿರುತ್ತದೆ. ಎಲ್ಲಿ ಗೋವು ವಧಿಸಲ್ಪಡುತ್ತದೊ ಅಲ್ಲಿ ಭಿಕ್ಷೆ ಎತ್ತುವ ಸ್ಥಿತಿ ನಿರ್ಮಾಣಮಾಗುತ್ತದೆ. ಇಂತಹ ಪರಿಸ್ಥಿತಿಯನ್ನು ಅರ್ಥಮಾಡಿಸುವ ಪುಟ್ಟ ಪ್ರಯತ್ನ ಈ ಲೇಖನದ ಮುಖ್ಯ ಉದ್ದೇಶ. ಮರೆಯದೆ ಓದಿ ಶೇರ್ ಮಾಡಿ ಗೋವು ಉಳಿವಿಗೆ ಕೈ ಜೋಡಿಸಿ.)
- ಚನ್ನಕೇಶವ ಜಿ ಲಾಳನಕಟ್ಟೆ ( ತುರುವೇಕೆರೆ ತಾಲ್ಲೂಕಿನ ಲಾಳನಕಟ್ಟೆ ಗ್ರಾಮದರಾದ ಇವರು ಸಾಕಷ್ಟು ಕವಿತೆಗಳನ್ನು, ಲೇಖನಗಳನ್ನು ಬರೆದಿದ್ದಾರೆ.ಈಗ ಪ್ರಸ್ತುತ ಬೆಂಗಳೂರಿನ ವಾಸಿಯಾಗಿದ್ದಾರೆ)
