ಪ್ರಖ್ಯಾತ ಚಲನಚಿತ್ರನಟರಿಗೆ, ಕ್ರಿಕೇಟ್ ತಾರೆಯರಿಗೆ, ಪ್ರಮುಖ ರಾಜಕಾರಣಿಗಳಿಗೆ ಇರುವಂತಹ ಅಭಿಮಾನಿಗಳು… ಫ್ಯಾನ್ ಫಾಲೋವಿಂಗ್, ಜೀವನದಲ್ಲಿ ಪ್ರಥಮ ಬಾರಿಗೆ ವೈದ್ಯರೊಬ್ಬರಿಗೆ ಅಷ್ಟೊಂದು ಸಂಖ್ಯೆಯಲ್ಲಿ ಅಭಿಮಾನಿಗಳು ಇರುತ್ತಾರೆ ಎಂದು ತಿಳಿದದ್ದು ಡಾ.ಎಂ.ಎಸ್ ಬಿರಾದಾರ ಅವರ ನಿಧನದಿಂದ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಡಾ.ಎಂ.ಎಸ್ ಬಿರಾದಾರ ಅವರಂತಹ ಇನ್ನಷ್ಟು ವೈದ್ಯರು ಹುಟ್ಟಿ ಬರಲಿ…
ಪ್ರಖ್ಯಾತ ಚಲನಚಿತ್ರನಟರಿಗೆ, ಕ್ರಿಕೇಟ್ ತಾರೆಯರಿಗೆ, ಪ್ರಮುಖ ರಾಜಕಾರಣಿಗಳಿಗೆ ಇರುವಂತಹ ಅಭಿಮಾನಿಗಳು… ಫ್ಯಾನ್ ಫಾಲೋವಿಂಗ್, ಜೀವನದಲ್ಲಿ ಪ್ರಥಮ ಬಾರಿಗೆ ವೈದ್ಯರೊಬ್ಬರಿಗೆ ಅಷ್ಟೊಂದು ಸಂಖ್ಯೆಯಲ್ಲಿ ಅಭಿಮಾನಿಗಳು ಇದ್ದಾರೆಂಬುದು ಇದೀಗ ತಾನೆ ತಿಳಿಯಿತು ಬುದ್ಧಿಜೀವಿ ಎಂದು ನಿನ್ನೆ ರಾತ್ರಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸುತ್ತೂರು ಮಠದ ಡಾ.ಶಿವರಾತ್ರಿ ದೇಶೀಕೇಂದ್ರ ಮಹಾ ಸ್ವಾಮೀಜಿಯವರು ಕರೆಮಾಡಿ ಡಾ.ಎಂ.ಎಸ್ ಬಿರಾದಾರ ಅವರ ನಿಧನಕ್ಕೆ ತೀವ್ರ ಆಘಾತ ವ್ಯಕ್ತ ಪಡಿಸಿದಾಗ ನಾನು ಹೇಳಿದ ಮಾತು.. ಏಕೆಂದರೆ ವಿಜಯಪುರದ ಹೆಸರಾಂತ ವೈದ್ಯ ಮತ್ತು ನಮ್ಮ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಂ. ಎಸ್.ಬಿರಾದಾರ ಅನಾರೋಗ್ಯಕ್ಕೀಡಾದಾಗ ನಾಡಿನ ವಿವಿಧೆಡೆಯಿಂದ ವೈದ್ಯರು, ಅವರ ಕೈಯಲ್ಲಿ ಕಲಿತು ಇದೀಗ ಎಲ್ಲೆಡೆ ಸೇವೆ ಸಲ್ಲಿಸುತ್ತಿರುವ ವೈದ್ಯರು,ಅವರಿಂದ ಗುಣಮುಖರಾದ ರೋಗಿಗಳು ಮತ್ತು ಅವರ ಬಹುದೊಡ್ಡ ಸ್ನೇಹಿತ ವಲಯ ಆಘಾತಕ್ಕೀಡಾಗಿದೆ.

ಮಂಗಳವಾರ ಮಧ್ಯಾಹ್ನ ಬಿ.ಎಲ್.ಡಿ.ಇ ವಿಶ್ವವಿದ್ಯಾಲಯದಲ್ಲಿ ಆಕ್ಸಿಜನ್ ಬೆಡ್ ಹೆಚ್ಚಳ ಕುರಿತ ಸಭೆ ನಂತರದ ಪತ್ರಿಕಾಗೋಷ್ಠಿ ಮುಗಿಸುತ್ತಿದ್ದಾಗ ಡಾ.ಎಂ.ಎಸ್. ಬಿರಾದಾರ ಅವರನ್ನು ಚಿಕಿತ್ಸೆಗಾಗಿ ಕರೆದುಕೊಂಡು ಹೋಗುತ್ತಿರುವ ವಿಶೇಷ ವಿಮಾನವು ಸೊಲ್ಲಾಪುರದಿಂದ ಬೆಂಗಳೂರು ತಲುಪಿತು. ಅವರನ್ನು ಆಂಬುಲೆನ್ಸ್ ನಲ್ಲಿ ಬನ್ನೇರುಘಟ್ಟ ರಸ್ತೆಯ ಅಪೋಲೊ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತದೆ ಎಂಬ ಸಂದೇಶ ಬಂತು ಆಯ್ತು..ಮುಗಿಸಿದಾಗ ಆಸ್ಪತ್ರೆ ಸೇರುತ್ತಾರೆ.ಚಿಕಿತ್ಸೆ ಆರಂಭವಾಗುತ್ತದೆ ಎಲ್ಲರೂ ಹೊರಡಿ.. ಎಂದು ನಮ್ಮ ಎಂ.ಬಿ.ಪಾಟೀಲರು ಎಲ್ಲರನ್ನೂ ಮನೆಗೆ ಕಳುಹಿಸಿದರು.ಮನೆಗೆ ಬಂದು ಫ್ರೆಶ್ ಆಗಿ ಊಟ ಮುಗಿಸುವಷ್ಟರಲ್ಲಿ, ಮತ್ತೆ ಫೋನ್ ಮಾಡಿದ ನಮ್ಮ ಎಂ.ಬಿ.ಪಾಟೀಲರು ಆ ಕಡೆ ಫೋನ್ ನಲ್ಲಿ ತೀವ್ರ ಉದ್ವೇಗಕ್ಕೆ ಒಳಗಾಗಿದ್ದರು ಮತ್ತು ಒಂದೇ ಸವನೆ ದುಃಖಿಸುತ್ತಿದ್ದರು.

ನಾನು ಬಹು ದಿನಗಳ ನಂತರ ನಮ್ಮ ಎಂ.ಬಿ ಪಾಟೀಲರು ಮಗುವಿನಂತೆ ಗೋಳೋ ಎಂದು ದುಃಖಿಸುತ್ತಿರುವದನು ನೋಡಿ ಕರುಳು ಕಿತ್ತು ಬಂದಂತಾಯಿತು. ಅರ್ಧ ಗಂಟೆಯಲ್ಲಿ ಎಲ್ಲರೂ ಸೇರಿ ಗೊತ್ತಿರುವ ಎಲ್ಲ ಮೂಲಗಳಿಂದ ಪ್ರಯತ್ನಗಳನ್ನು ಆರಂಭಿಸಲಾಯಿತು. ಅಷ್ಟರಲ್ಲಿ ಆಸ್ಪತ್ರೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಜನಸಾಗರ…
ಅದನ್ನು ಕಂಡು ಆಸ್ಪತ್ರೆಯ ಮುಖ್ಯಸ್ಥರಿಗೆ ಗಾಬರಿ ಅವರೇ ಇದನ್ನು ನಮ್ಮ ಎಂಬಿಪಾಟೀಲರಿಗೆ ತಿಳಿಸಿದರು. ಏಕೆಂದರೆ ಬಿಎಲ್ ಡಿಇ ಬಿಎಂ ಪಾಟೀಲ್ ವೈದ್ಯಕೀಯ ಕಾಲೇಜಿನಲ್ಲಿ ಕಲಿತ ನೂರಾರು ವಿದ್ಯಾರ್ಥಿಗಳು ಇಂದು ಬೆಂಗಳೂರಿನಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಂಗಳವಾರ ಮಧ್ಯಾಹ್ನ ಆರಂಭವಾದ ಅವರ ಚಿಕಿತ್ಸೆ ಇಡೀ ರಾತ್ರಿ ಮುಂದುವರೆದು ಬುಧವಾರ ಮಧ್ಯಾಹ್ನ ಎಲ್ಲ ಪ್ರಯತ್ನಗಳು ವಿಫಲವಾದಾಗ ಕೈಚೆಲ್ಲಿದರು.

ಅವರ ಕುಟುಂಬದವರಿಗೆ ಮಗಳು ಡಾ.ಅರುಣಾ ಅವರಿಗೆ ಅಲ್ಲಿನ ವೈದ್ಯರು ಎಲ್ಲವನ್ನೂ ತಿಳಿಸಿ, ಹೊರಡಲು ಹೇಳಿದರು. ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುವ ಪೊಲೀಸ್ ಅಧಿಕಾರಿ ಮಿತ್ರ ರಾಮಚಂದ್ರ ಚೌಧರಿ ಕರೆಮಾಡಿ ಅನಾರೋಗ್ಯದ ವಿಷಯ ತಿಳಿದಿದೆ ನಾನು ಆಸ್ಪತ್ರೆಗೆ ಹೋಗುತ್ತೇನೆ ಏನಾದ್ರೂ ಸಹಾಯ ಬೇಕಾ ಎಂದರು ಇಲ್ಲ ಈಗಾಗಲೇ ಎಲ್ಲ ಮುಗಿದಿದೆ ಅವರ ಪಾರ್ಥಿವ ಶರೀರ ವಿಜಯಪುರಕ್ಕೆ ತರಬೇಕು. ಕೂಲಿಂಗ್ ವ್ಯವಸ್ಥೆ ಇರುವ ಅಂಬ್ಯುಲೆನ್ಸ್ ವಾಹನ ಬೇಕಾಗಿತ್ತು ಎಂದೆ. ತಕ್ಷಣ ಅರ್ಧಗಂಟೆಯಲ್ಲಿ ಇಂಥ ಸಂಕಷ್ಟದ ಕಾಲದಲ್ಲಿಯೂ ವ್ಯವಸ್ಥೆ ಮಾಡಿ ಕಳುಹಿಸಿಕೊಟ್ಟು ಫೋನ್ ಮಾಡಿದರು.
ಬಹಳ ಉಪಕಾರವಾಯಿತು ಎಂದಾಗ.. ಅವರು.. “ಸರ್ ನಾನು ಎಂಟನೇ ತರಗತಿ ತೀಕೋಟಾ ಹೈಸ್ಕೂಲ್ ನಲ್ಲಿ ಓದುತ್ತಿದ್ದಾಗ ಯಾವುದೋ ಔಷಧ ರಿಯಾಕ್ಷನ್ ಒಳಗಾಗಿ ನನ್ನ ಪ್ರಾಣವೇ ಹೋಗುತ್ತಿದ್ದಾಗ ಹದಿನೈದು ದಿನಗಳ ಕಾಲ ಬಿಎಲ್ ಡಿಇ ಆಸ್ಪತ್ರೆಯಲ್ಲಿ ನನ್ನನ್ನು ಆರೈಕೆ ಮಾಡಿ ಮರುಜೀವ ಕೊಟ್ಟವರು..ಆ ಪುಣ್ಯಾತ್ಮ ಅವರ ಉಪಕಾರ ಜೀವನದಲ್ಲಿ ತೀರಿಸಲು ಸಾಧ್ಯವಿಲ್ಲ ಎಂದರು.

ಮನೆಗೆ ಬಂದು ಅಪೋಲೋ ಆಸ್ಪತ್ರೆಯಲ್ಲಿ 24ಗಂಟೆಗಳ ಕಾಲ ಡಾ.ಎಂ.ಎಸ್. ಬಿರಾದಾರ ಅವರನ್ನು ಬದುಕಿಸಲು ಹೋರಾಟವನ್ನೇ ನಡೆಸಿದ ಗಿರೀಶ್ ನವಶುಂಡಿ ಅವರ ತಂಡದ ಡಾ.ದರ್ಶನ ಬಿರಾದಾರಗೆ ಕರೆ ಮಾಡಿ ನಿಮ್ಮ ಪ್ರಯತ್ನ ಸಫಲವಾಗಲಿಲ್ಲ. ಆದರೂ ತಾವು ಬಹಳ ಕಷ್ಟಪಟ್ಟರಿ ಎಂದೆ. ವೈದ್ಯಕೀಯ ಕ್ಷೇತ್ರದಲ್ಲಿ ಇಂತಹ ಶಿಕ್ಷಕರು ಸಿಗಲು ಸಾಧ್ಯವೇ ಇಲ್ಲ. ಅವರಿಂದ ಕಲಿತ ನಾವೆಲ್ಲ ಧನ್ಯರು. ಅವರ ಅಂತಿಮ ಸಮಯದಲ್ಲಿ ಸೇವೆ ಮಾಡಲು ಸಿಕ್ಕ ಅವಕಾಶ ನನ್ನ ಜೀವನದ ಬಹುದೊಡ್ಡ ಭಾಗ್ಯ ಎಂದ.
ಮುಧೋಳದ ನಮ್ಮ ಸಹೋದರ ಡಾ.ಮೋಹನ ಬಿರಾದಾರ ಪುತ್ರ ದರ್ಶನ ಅಳಿಕೆಯ ಸತ್ಯಸಾಯಿ ಶಾಲೆಯಲ್ಲಿ ಓದುತ್ತಲೇ ಶಿಸ್ತು ಸೇವೆ ಮತ್ತು ಅಧ್ಯಾತ್ಮದ ಕಡೆ ಒಲವಿರುವ ಪ್ರತಿಭಾನ್ವಿತ ವಿದ್ಯಾರ್ಥಿ.ನಮ್ಮ ಬಿ.ಎಲ್.ಡಿ.ಇ.ಎ ಆಸ್ಪತ್ರೆ ಯಲ್ಲಿಯೇ ಡಾ.ಎಂ ಎಸ್.ಬಿರಾದಾರ ಅವರ ಕೆಳಗೆ 3 ವರ್ಷಗಳ ಕಾಲ ಕೆಲಸ ಮಾಡಿದ್ದ. ಚಿನ್ನದ ಪದಕದೊಂದಿಗೆ ಎಂ.ಡಿ ಪದವಿ ಮುಗಿಸಿ ಇದೀಗ ಬೆಂಗಳೂರಿನಲ್ಲಿ ಹೃದಯ ರೋಗದ ಉನ್ನತ ವ್ಯಾಸಂಗಕ್ಕೆ ಇದ್ದಾನೆ.

ಕಳೆದ ಗುರುವಾರ ಖ್ಯಾತ ಚರ್ಮರೋಗ ತಜ್ಞ ಡಾ. ಅರುಣ ಇನಾಮದಾರ ಅವರಿಗೆ ಡಾ.ಎಂ.ಎಸ್. ಬಿರಾದಾರ ವಾಟ್ಸಪ್ ಸಂದೇಶವನ್ನು ಕಳುಹಿಸಿದ್ದು,ನಿನ್ನೆ ತೋರಿಸಿದರು… ಅದರಲ್ಲಿ ದ.ರಾ.ಬೇಂದ್ರೆಯವರ ಚಿತ್ರದೊಂದಿಗೆ ಪ್ರಕಟವಾದ ನುಡಿ… “ಸಾವಿಗೆ ನಾ ಹೆದರುವುದಿಲ್ಲ” “ಯಾಕೆಂದರೆ” “ನಾ..ಇರೋ ತನಕ ಅದು ಬರುವುದಿಲ್ಲ” “ಅದು ಬಂದಾಗ ನಾ ಇರುವದಿಲ್ಲ”
ಡಾ.ಎಂ.ಎಸ್. ಬಿರಾದಾರ ಕಿರು ಪರಿಚಯ :
ಡಾ.ಮಲ್ಲನಗೌಡ ಶಿವನಗೌಡ ಬಿರಾದಾರ ಇವರು ಮೂಲತಃ ಬಸವನಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದವರು. ಗ್ರಾಮೀಣ ರೈತಾಪಿ ಕುಟುಂಬದಿಂದ ಬಂದ ಇವರು ಉಕ್ಕಲಿಯ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು, ಬಿ.ಎಲ್.ಡಿ.ಇ ನ್ಯೂ ಇಂಗ್ಲಿಷ ಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಪಡೆದು, ನಂತರ ವಿಜಯಪುರದ ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಪಿಯು ವ್ಯಾಸಂಗ ಮಾಡಿ, ಸರ್ಕಾರಿ ಕೋಟಾದಲ್ಲಿ ಹುಬ್ಬಳ್ಳಿಯ ಕರ್ನಾಟಕ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಚಿನ್ನದ ಪದಕದೊಂದಿಗೆ ಎಂ.ಬಿ.ಬಿ.ಎಸ್ ಪದವಿಯನ್ನು ಪೂರ್ಣಗೊಳಿಸಿದರು.
ನಂತರ ಬಳ್ಳಾರಿಯಲ್ಲಿ ಎಂ.ಡಿ ಪದವಿಯನ್ನು ಗಳಿಸಿ, ಅದೇ ಜಿಲ್ಲೆಯಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದರು.೧೯೮೪ ರಿಂದ ೧೯೯೧ ರವರೆಗೆ ವಿಜಯಪುರ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಾ, ಈ ಭಾಗದಲ್ಲಿ ಜನಾನುರಾಗಿಯಾದರು.
೧೯೯೧ ರಿಂದ ಬಿ.ಎಂ.ಪಾಟೀಲ್ ವೈದ್ಯಕೀಯ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಆರಂಭಿಸಿದ ಇವರು ಸುಧೀರ್ಘ ೩೦ ವರ್ಷಗಳ ಕಾಲ ಕಾಲೇಜಿನ,ಬಿ.ಎಲ್.ಡಿ.ಇ ಸಂಸ್ಥೆಯ ಏಳಿಗೆಗಾಗಿ ಶ್ರಮಿಸಿದ್ದಾರೆ. ವೈದ್ಯಕೀಯ ಕಾಲೇಜು ೭ ವರ್ಷಗಳ ಕಾಲ ಉಪಪ್ರಾಚಾರ್ಯರಾಗಿ, ೪ ವರ್ಷಗಳ ಕಾಲ ಪ್ರಾಚಾರ್ಯರಾಗಿ ನಂತರ ೨೦೧೬ ರಿಂದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಉಪಕುಲಪತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಇವರ ಅವಧಿ ಬರುವ ಅಗಷ್ಟ ೩೧ ಕ್ಕೆ ೬೫ ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಮುಕ್ತಾಯಗೊಳ್ಳುತ್ತಿತ್ತು.
ಮೃತರು ಪತ್ನಿ ಗೋಧಾವರಿ, ಪುತ್ರಿ ಡಾ.ಅರುಣಾ ಹಾಗೂ ಅಶ್ವಿನಿ,ಅಳಿಯಂದಿರು,ಇಬ್ಬರು ಸಹೋದರರು ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
- ಡಾ. ಮಹಾಂತೇಶ ಬಿರಾದಾರ
