ವಿಜಯಭಾಸ್ಕರ್ ಅವರ ಜೀವನ-ಸಾಧನೆ ಕುರಿತ ನನ್ನ ‘ಎಲ್ಲೆಲ್ಲೂ ಸಂಗೀತವೇ’ ಕೃತಿ ಸಿದ್ದವಿದ್ದು, ಇದೇ ಭಾನುವಾರ ಎಂದರೆ ಅಕ್ಟೋಬರ್ 20ರಂದು ಬೆಂಗಳೂರಿನ ಇಂದಿರಾನಗರ ಸಂಗೀತ ಸಭಾದಲ್ಲಿ ನಡೆಯುವ ‘ವಿಜಯಭಾಸ್ಕರ್ ಶತಮಾನೋತ್ಸವ’ ಕಾರ್ಯಕ್ರಮದಲ್ಲಿ ಬಿಡುಗಡೆಗೊಳ್ಳಲಿದೆ. ಸರ್ವರಿಗೂ ಸ್ವಾಗತ…
ಪುಸ್ತಕ : ಎಲ್ಲೆಲ್ಲೂ ಸಂಗೀತವೇ
ಲೇಖಕರು : ಶ್ರೀಧರ ಮೂರ್ತಿ
ಪ್ರಕಾಶನ : ವೀರಲೋಕ ಪ್ರಕಾಶನ
ಗೀತರಚನೆಕಾರರ ಕುರಿತಾದರೂ ಚರ್ಚೆಗಳಾಗುತ್ತವೆ, ಸಂಗೀತ ನಿರ್ದೇಶಕರ ಪ್ರಯೋಗಗಳ ಬಗ್ಗೆ ಎಲ್ಲಿಯೂ ಚರ್ಚೆಯಾಗುವುದಿಲ್ಲವೆಂದು ವಿಜಯಭಾಸ್ಕರ್ ಮತ್ತೆ ಮತ್ತೆ ಹೇಳುತ್ತಿದ್ದರು. ಅದಕ್ಕೆ ನಾನು ‘ಸರ್.. ನಿಮ್ಮ ಸಂಗೀತ ಪ್ರಯೋಗಗಳನ್ನು ದಾಖಲೆ ಮಾಡಿ, ಆಗಲಾದರೂ ಈ ಕುರಿತು ಅರಿವು ಹುಟ್ಟ ಬಹುದು’ ಎಂದು ಹೇಳಿದ್ದೆ. ‘ಅದನ್ನು ಹೇಳುತ್ತೇನೆ, ನೀನೇ ಬರೆದುಕೊ’ ಎಂದು ಅವರು ಹೇಳಿದ್ದರಿಂದ ದಾಖಲಾತಿ ಆರಂಭವಾಯಿತು. ಅದು 1994, ವಿಜಯಭಾಸ್ಕರ್ ಅಕಾಡಮಿಕ್ ಆಗಿ ಸಂಗೀತವನ್ನು ಚೆನ್ನಾಗಿ ಬಲ್ಲವರಾಗಿದ್ದರಿಂದ ಬಹಳ ಸೂಕ್ಷ್ಮ ಸಂಗತಿಗಳನ್ನು ಹೇಳುತ್ತಿದ್ದರು. ಅದೊಂದು ರೀತಿಯ ಹೊಸ ಪ್ರಯೋಗ ಕೂಡ ಆಗಿತ್ತು. ಅವರ ಬದುಕಿನ ಏರಿಳಿತಗಳಲ್ಲಿ ಈ ಕಾರ್ಯ ಪೂರ್ಣವಾಗಲಿಲ್ಲ. ಬರೆದು ಕೊಂಡಿದ್ದ ಪುಟಗಳು ನನ್ನ ಬಳಿಯೇ ಉಳಿದು ಕೊಂಡಿದ್ದವು.

ಈ ವರ್ಷ ವಿಜಯಭಾಸ್ಕರ್ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಈ ವಿಷಯವನ್ನು ಹೇಳಿದಾಗ ವಿಜಯಭಾಸ್ಕರ್ ಮಕ್ಕಳಾದ ಶಂಕರಿ ಅನಂತ್ ಮತ್ತು ಮಂಗಳಗೌರಿ ಅದನ್ನು ಪುಸ್ತಕ ರೂಪದಲ್ಲಿ ತನ್ನಿ ಎಂದು ಒತ್ತಾಯಿಸಿದರು. ಮೂವತ್ತು ವರ್ಷಗಳಲ್ಲಿ ನಾವು ಇಷ್ಟೊಂದು ಮನೆ ಬದಲಾಯಿಸಿದ್ದರೂ ಈ ಪುಟಗಳು ನನ್ನ ಬಳಿ ಉಳಿದು ಕೊಂಡಿದ್ದವು ಎನ್ನುವುದು ಅಚ್ಚರಿಯ ಜೊತೆಗೆ ಅದರ ಹಿಂದೆ ವಿಧಿಯ ಸಂಕಲ್ಪವೂ ಇರಬಹುದೇನೋ. ವೀರಕಪುತ್ರ ಶ್ರೀನಿವಾಸ್ ‘ವೀರಲೋಕ ಬುಕ್ಸ್’ ಆರಂಭಿಸುವ ಮೊದಲು ವಿಷ್ಣುವರ್ಧನ್ ಅವರ ಚಿತ್ರಗಳ ಅವಲೋಕನ ನನ್ನ ‘ಸಿಂಹಾವಲೋಕನ’ ಕೃತಿಯನ್ನು ಪ್ರಕಟಿಸಿದ್ದರು. ಅವರು ಪೂರ್ಣಪ್ರಮಾಣದಲ್ಲಿ ಪ್ರಕಾಶಕರಾದ ನಂತರ ನಿಮ್ಮ ಒಂದು ಕೃತಿಯನ್ನು ಕೊಡಿ ಎಂದು ಕೇಳುತ್ತಲೇ ಇದ್ದರು. ವಿಜಯಭಾಸ್ಕರ್ ಕುರಿತ ಕೃತಿಯನ್ನು ಪ್ರಕಟಿಸುತ್ತೀರಾ ಎಂದು ಕೇಳಿದ ಕೂಡಲೇ ಪ್ರೀತಿಯಿಂದ ಒಪ್ಪಿ ಪ್ರಕಟಿಸಿದ್ದಾರೆ ಅವರಿಗೂ ಮತ್ತು ಅವರ ತಂಡಕ್ಕೂ ವಂದನೆಗಳು. ವಿಜಯಭಾಸ್ಕರ್ ಅವರ ಕುರಿತ ಅನೇಕ ಮಾಹಿತಿ, ಅಪರೂಪದ ಛಾಯಾಚಿತ್ರಗಳನ್ನು ನೀಡಿ ಸಹಕರಿಸಿದ ವಿಜಯಭಾಸ್ಕರ್ ಅವರ ಕುಟುಂಬ ವರ್ಗದವರಿಗೆ ವಂದನೆಗಳು.
ಕೃತಿ ಈಗ ನಿಮ್ಮ ಕೈ ಸೇರಲಿದೆ… ನಿಮ್ಮ ಅನಿಸಿಕೆಗಳಿಗೆ ಕಾತರದಿಂದದ್ದೇನೆ.

ಅಕ್ಟೋಬರ್ 20ರ ಕಾರ್ಯಕ್ರಮದಲ್ಲಿ ವಿಜಯಭಾಸ್ಕರ್ ಅವರ ಮೇಲಿನ ಪ್ರೀತಿಯಿಂದ ನಾಡೋಜ ಡಾ.ಮಹೇಶ ಜೋಶಿ, ಡಾ.ಹಂಸಲೇಖ, ಡಾ.ಟಿ.ಎಸ್.ನಾಗಾಭರಣ, ಸಾಧು ಕೋಕಿಲ, ನಾಗಲಕ್ಷ್ಮಿ ಪುಟ್ಟಣ್ಣ ಕಣಗಾಲ್, ಗಾಯಕರಾದ ಡಾ.ಬಿ.ಕೆ.ಸುಮಿತ್ರ, ಕಸ್ತೂರಿ ಶಂಕರ್, ಕಲಾವಿದರಾದ ಶ್ರೀನಾಥ್, ರಾಮಕೃಷ್ಣ, ಶ್ರೀಧರ್, ಡಾ.ದೊಡ್ಡರಂಗೇಗೌಡ, ಎಸ್.ಆರ್.ರಾಮಕೃಷ್ಣ, ಪ್ರೊ.ಮನು ಚಕ್ರವರ್ತಿ, ಚಿದಂಬರ ಕಾಕತ್ಕರ್, ಎಚ್.ಎಂ.ಎಂ.ಪ್ರಕಾಶ್ ಭಾಗವಹಿಸಲಿದ್ದಾರೆ. ಕಲಾನಮನ ತಂಡದಿಂದ ವಿಜಯಭಾಸ್ಕರ್ ಸ್ವರ ಸಂಯೋಜನೆ ಮಾಡಿದ ಗೀತೆಗಳ ಗಾಯನ ಕಾರ್ಯಕ್ರಮವಿದ್ದು ನಾಗಚಂದ್ರಿಕಾ ಭಟ್, ಭಾಗ್ಯಶ್ರೀಗೌಡ, ಎಚ್.ಕೆ.ರಘು, ರಾಜೀವ್ ಮೊದಲಾದ ಗಾಯಕರು ಹಾಡುತ್ತಾರೆ. ವಿಜಯಭಾಸ್ಕರ್ ಮೊಮ್ಮಗಳಾದ ಡಾ.ಪದ್ಮಪ್ರಶಾಂತಿನಿ ವಿಜಯಭಾಸ್ಕರ್ ಗೀತೆಗಳಿಗೆ ನೃತ್ಯ ಪ್ರದರ್ಶನ ನೀಡುತ್ತಾರೆ.
ಮಧ್ಯಾಹ್ನ 2.00ರಿಂದ ರಾತ್ರಿ 9.00ರವರೆಗೆ ನಡೆಯುವ ಕಾರ್ಯಕ್ರಮದಲ್ಲಿ ನೀವೂ ಭಾಗಿಯಾದರೆ ಸಂತೋಷ.
- ಆಕೃತಿ ಕನ್ನಡ ನ್ಯೂಸ್
