ಶಿಲ್ಪ ಮ್ಯಾಗೇರಿಯವರ ಕೃತಿ ಪರಿಚಯ

ಶಿಲ್ಪಾ ಮ್ಯಾಗೇರಿಯವರ ‘ಚೈತ್ರದ ಚರಮಗೀತೆ ಮತ್ತು ಮಾತು ಮೌನದ ನಡುವೆ’ ಕವನ ಸಂಕಲನದ ಕುರಿತು ಹಿರಿಯ ಸಾಹಿತಿಗಳಾದ ಡಾ. ಲಕ್ಷ್ಮಣ ಕೌಂಟೆ ಅವರು ತಮ್ಮ ಅಭಿಪ್ರಾಯವನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಆರಂಭಿಕ ಬರಹಗಾರರು ಕವಿತೆಯ ಮೂಲಕವೇ ತಮ್ಮ ಸಾಹಿತ್ಯಯಾತ್ರೆಯನ್ನು ಆರಂಭಿಸುತ್ತಾರೆ. ಬಹಳಷ್ಟು ಜನರ ಕವಿತೆಗಳು ವಾಚ್ಯವಾಗಿದ್ದು ಗದ್ಯದ ಉದ್ದನೆಯ ಸಾಲನ್ನು ತುಂಡುಗಡಿದು ಒಂದರ ಕೆಳಗೊಂದು ಇಟ್ಟು ಅದಕ್ಕೊಂದು ಶೀರ್ಷಿಕೆ ಇತ್ತರಾಯಿತು, ಅದೊಂದು ಕವಿತೆಯಾಗುತ್ತದೆ. ಈ ತರಹ ಬರೆದ ಹಲವಾರು ಕವಿತೆಗಳನ್ನು ಒಂದೆಡೆ ಸಂಕಲಿಸಿ ಕವನ ಸಂಕಲನ ಹೊರತರುವವರು ಇಂದು ಹೆಚ್ಚಾಗಿದ್ದಾರೆ. ನಿರಂತರ ಓದು ಮತ್ತು ಜೀವನಾನುಭವ ಓರ್ವ ಸಶಕ್ತ ಬರಹಗಾರ/ಬರಹಗಾರ್ತಿಯನ್ನು ಸೃಷ್ಟಿಸುತ್ತದೆ. ಬರೆದು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದೆಲ್ಲ ಒಂದು ಪುಸ್ತಕ ಅನ್ನಿಸಿಕೊಳ್ಳಬಹುದೇ ಹೊರತು ಉತ್ತಮ ಸಾಹಿತ್ಯಕೃತಿ ಅನ್ನಿಸಿಕೊಳ್ಳಲಾರದು. ಬರಹಗಾರರು ಸತತ ಅಧ್ಯಯನ ಮತ್ತು ಚಿಂತನೆಯಲ್ಲಿ ತೊಡಗಿಕೊಂಡಾಗಲೇ ಅವರು ರಚಿಸಿದ ಸಾಹಿತ್ಯದಲ್ಲಿ ಸತ್ವ ಇರುತ್ತದೆ. ‘ನಾನ್ ಋಷಿಃ ಕುರಿತೇ ಕಾವ್ಯಂ’ ಎನ್ನುವ ಮಾತೊಂದು ಸಂಸ್ಕೃತ ಸಾಹಿತ್ಯಶಾಸ್ತ್ರದಲ್ಲಿದೆ. ಅಂದರೆ ಋಷಿಯ (ತಪಸ್ಸಿನಂತಹ ಶ್ರಮ) ಅಂಶ ಹೊಂದಿದವರು ಕಾವ್ಯಗಳನ್ನು ಬರೆಯುತ್ತಾರೆ ಎಂದು ಆ ಶ್ಲೋಕದ ಅರ್ಥ. ಋಷಿ ಸದೃಶ್ಯವಾಗಿ ಸಾಧನೆಯಲ್ಲಿ ತೊಡಗಿರುವವರು ಉತ್ತಮ ಸಾಹಿತ್ಯವನ್ನು ರಚಿಸಬಲ್ಲರು. ಇಲ್ಲದಿದ್ದರೆ ಪ್ರಕಟವಾದ ಅಂತಹ ಸಾಹಿತ್ಯಕೃತಿ ಯಾವ ಯಾವುದೋ ಕಾರಣಕ್ಕಾಗಿ, ಭಿಡೆಗಾಗಿ, ಸ್ನೇಹಕ್ಕಾಗಿ ಓದುಗರ ಕೈ ಸೇರಿದರೂ ಅದು ಅವರಿಂದ ಓದಿಸಿಕೊಳ್ಳುವುದು ಅಷ್ಟಕಷ್ಟೇ. ಮಾರುಕಟ್ಟೆಯಲ್ಲಿ ಆ ಪುಸ್ತಕ ಮಾರಾಟವಾಗುವುದಿಲ್ಲ. ಬರೆದವರೇನೋ ಬೇರೆಯವರ ಕೈಗಿತ್ತು ಓದಲು ಕೋರಬಹುದು. ತೀರ ಬೇಕಾದವರು ಆ ಕೃತಿಯ ಕುರಿತು ಹೊಗಳುತ್ತಾರೆ, ಕೃತಿಯ ಕುರಿತು ಬರೆದು ಸಾಮಾಜಿಕ ಜಾಲ ತಾಣದಲ್ಲಿ ಹರಿಯ ಬಿಡುತ್ತಾರೆ. ಕೆಲವೊಮ್ಮೆ ಪತ್ರಿಕೆಗಳಲ್ಲಿ ಪ್ರಕಟವೂ ಆಗುತ್ತವೆ. ಆದರೆ ಅವೆಲ್ಲ ನಿಜವಾದ ಓದುಗರಿಂದ ದೂರವೇ ಉಳಿಯುತ್ತವೆ. ಪ್ರಕಟಗೊಂಡ ಆ ತರಹದ ಪುಸ್ತಕಗಳು ಕೊಂಡುಕೊಳ್ಳುವ ವಸ್ತುವಲ್ಲ, ಪುಕ್ಕಟೆಯಾಗಿ ಕೊಡಲ್ಪಡುವವು ಎನ್ನುವ ತೀರ್ಮಾನಕ್ಕೆ ಬರುವುದಕ್ಕೂ ಇವುಗಳು ಕಾರಣವಾಗಿವೆ. ಆದರೆ ಈ ಮಾತು ಸತ್ವಪೂರ್ಣವಾಗಿ ಬರೆಯುವವರಿಗೆ ಅನ್ವಯವಾಗುವುದಿಲ್ಲ.

ಶಿಲ್ಪ ಮ್ಯಾಗೇರಿಯವರು ಈಚೆಗೆ (ದಿ. ೧೪-೧೦-೨೦೨೪) ನಾನು ಗದಗಿಗೆ ಹೋದಾಗ ನನ್ನ ಕೈಗೆ ಎರಡು ಕವನ ಸಂಕಲಗಳನ್ನು ಇತ್ತರು. ಒಂದು ‘ಮಾತು ಮೌನದ ನಡುವೆ’, ಇನ್ನೊಂದು ‘ಚೈತ್ರದ ಚರಮಗೀತೆ’. ಎರಡೂ ಕವನ ಸಂಕಲನದಲ್ಲಿರುವ ಎಲ್ಲ ಕವಿತೆಗಳನ್ನು ನಾನು ಓದಿರುವೆ. ಆ ಎರಡೂ ಸಂಕಲನಗಳಲ್ಲಿರುವ ಕವಿತೆಗಳಲ್ಲಿ ಕೆಲವು ಕವಿತೆಗಳು ನನ್ನ ಮನಸನ್ನು ಆಕರ್ಷಿಸಿವೆ. ಅವುಗಳಲ್ಲಿ ಒಂದೆರಡರ ವಿಶೇಷತೆಗಳನ್ನು ಇಲ್ಲಿ ಪ್ರಕಟಿಸುವ ಮೂಲಕ ನಿಮ್ಮ ಗಮನ ಸೆಳೆಯುವ ಪ್ರಯತ್ನ ಮಾಡುವೆ.

ಸಾಮಾಜಿಕ ರೀತಿ ನೀತಿ ನಡೆ ನುಡಿಗಳು, ಕೌಟುಂಬಿಕ ಸಂಸ್ಕಾರಗಳು ಬರೆಯುವವರ ಲೇಖನಿಯ ಮೂಲಕ ಅವರ ರಚನೆಗಳಲ್ಲಿ ಪ್ರಕಟವಾಗುತ್ತವೆ. ಯಾವ ಕವಿತೆ ನಿಜವಾಗಿಯೂ ಬರೆದವರಿಗೆ ಆಪ್ತವಾಗಿ ತೋರುವುದೋ ಅದು ಇತರರನ್ನೂ ಆಕರ್ಷಿಸುತ್ತದೆ. ಶಿಲ್ಪಾ ಮ್ಯಾಗೇರಿಯವರ ಹೆಚ್ಚಿನ ಕವಿತೆಗಳಲ್ಲಿ ಆ ಭಾವ ಕಂಡು ಬರುತ್ತದೆ.

ಅವರ ಕವನ ಸಂಕಲನ ‘ಮಾತು ಮೌನದ ನಡುವೆ’ಯಲ್ಲಿನ ಒಂದೆರಡು ಕವಿತೆಗಳನ್ನು ಇಲ್ಲಿ ಅವಲೋಕಿಸಬಹುದು :

ಅಪ್ಪ ಅವ್ವ ಎಲ್ಲರ ಮನೆಯಲ್ಲೂ ಮನದಲ್ಲೂ ಇರುತ್ತಾರೆ. ಉಳಿಕೆಯ ಸಂಬಂಧಗಳು ಆಮೇಲೆ ಬರುತ್ತವೆ. ಈ ಕವನ ಸಂಕಲನದ ಮೊದಲ ಕವಿತೆ ‘ಅಪ್ಪ’.
ಎರಡನೆಯ ಕವಿತೆ ‘ನನ್ನವ್ವ’.

‘ಅಪ್ಪ’ ಕವಿತೆಯ ಸಾಲುಗಳಿವು :

‘ನೋವೋ ನಲಿವೋ ಭೇದವೆಣಿಸಲಿಲ್ಲ
ಮಕ್ಕಳ ಹೊರತಾದ ವ್ಯಸನವೆಂದೂ
ಅವನಿಗಿರಲಿಲ್ಲ
ಕಾಯಕವೇ ಕೈಲಾಸವೆಂದು
ಎಂದೂ ಹೇಳದೆ
ಆಚರಣೆಗೆ ತಂದವ
ಸತ್ಯ ಮಾತು ಶುದ್ಧ ನಡತೆ
ನ್ಯಾಯ ನಿಷ್ಠೆಯ ಪ್ರತೀಕ ನನ್ನಪ್ಪ’
‘ಅಪ್ಪ’ ಕವಿತೆಯ ಈ ಸಾಲುಗಳಿಗೆ ವಿವರಣೆ ಬೇಕಿಲ್ಲ. ‘ನನ್ನವ್ವ’ ಕವಿತೆಯಲ್ಲೂ ಅಷ್ಟೇ :
‘ನನ್ನವ್ವ
ದೇವರ ದೀಪಕೆ
ತಾನೇ ಎಣ್ಣೆಯಾದವಳು
ನನ್ನ ಲೇಖನಿಯ ಮೊನೆಗೆ
ಮಸಿಯಾದವಳು’
ಏಕೆಂದರೆ..
‘ನನ್ನ ಮನೆಯ ಹೊಸಿಲಿಗೆ
ರಂಗೋಲಿಯಾದವಳು
ತೋರಣದ ಹಸಿರಾಗಿ ನಿತ್ಯ
ನಗುವ ಚೆಲ್ಲುವಳು
…
ಸಿರಿಗೆ ಬೀಗದಾಕೆ
ಬರಕೆ (ಬಡತನಕೆ) ಕೊರಗದಾಕೆ
ಒಲವ ಹಾರಕೆ ಕಣ್ಣೀರ ಹನಿಗಳನ್ನು
ಪೋಣಿಸಿ ಮಾಲೆ ಮಾಡಿದಾಕೆ
…
ಸಿಟ್ಟು ಸೆಡವು ಅರಿಯದಾಕೆ
ಒಮ್ಮೊಮ್ಮೆ ಸ್ಫೋಟಗೊಂಡು
ತಣ್ಣಗಾಗುವಾಕೆ
ಬರಿಗೈ ದಾಸನ ಸಿರಿಯೂರಿಗೆ
ಕೈ ಹಿಡಿದು ನಡೆಸಿದಾಕೆ…’
ಈ ಕವಿತೆಗೂ ವಿವರಣೆ ಅನಗತ್ಯ.

ಶಿಲ್ಪಾ ಮ್ಯಾಗೇರಿಯವರು ಕೈಗಿತ್ತ ಎರಡು ಕವನ ಸಂಕಲನಗಳಲ್ಲಿ ನನ್ನನ್ನು ಹೆಚ್ಚು ಆಕರ್ಷಿಸಿದ್ದು ‘ಚೈತ್ರದ ಚರಮಗೀತೆ”. ಈ ಸಂಕಲನದಲ್ಲಿ ಸ್ತ್ರೀಯರ ಕುರಿತು ಬರೆದ ‘ಅಮೃತಮತಿ’, ‘ಕದಳಿಯ ವನದಲ್ಲಿ ಕೊನರಿದ ಪುಷ್ಪ’, ‘ಈ ಯುಗದ ಗಾಂಧಾರಿ’, ‘ಊರ್ಮಿಳೆ’, ಅವಳ ಸುತ್ತಲೆ ಇವೆ ಎಲ್ಲ ಕಥೆಗಳು’ ಮೊದಲಾದವುಗಳು ಉತ್ಕೃಷ್ಟ ಚಿಂತನೆಗೆ ಹಚ್ಚುವ ಭಾವವನ್ನು ಹೊಂದಿವೆ.

ಈ ಸಂಕಲನದ ‘ಅಮೃತಮತಿ’ ಕವಿತೆಯಲ್ಲಿ ‘ಕೇಳುವ’ ಈ ಸಾಲುಗಳಿವೆ :

‘ಹದಿನಾರು ಸಾವಿರ ಮಡದಿಯರ ರಮಣ
ಕೃಷ್ಣನ ಕುರಿತು ತಕರಾರಿಲ್ಲ ನಮ್ಮಲ್ಲಿ
ಐವರ ಗಂಡಂದಿಯರ ಒಡತಿ
ಪಾಂಚಾಲಿ ನಾರಿರತ್ನ ಜಗದಲ್ಲಿ
ನೂರಾರು ಸಖಿಯರರಸರು
ರಾಜ ಪುಂಗವರೆಲ್ಲ ಮಾನ್ಯರೇ ಮನದಲ್ಲಿ
ಅಮೃತಮತಿ ಯಾಕೋ
ಅಸ್ಪೃಶ್ಯಳಾದಂತಿದೆ ಮೌಲ್ಯದ ಕಣ್ಣಿಗೆ

…..

ಪರಮೋಚ್ಛ ರಾಜನ ತುಚ್ಛವಾಗಿ ಕಂಡಿದ್ದು ಯಾಕೋ
ಕೊಳಕ ಕುಲಹೀನ ಚೆಲುವಾಗಿ ಸೆಳೆದನೋ
ಸೌಂದರ್ಯ ನೋಡುಗರ ಕಣ್ಣಲ್ಲಿದೆ ಎಂದು ಹೇಳಬೇಕಿತ್ತೋ
ಪ್ರೀತಿ ಕುರುಡು ಎಂದು ಜಗಕ್ಕೆ ಸಾರಬೇಕಿತ್ತೋ,
ಇಲ್ಲ
ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ಉಳಿಯಬೇಕಿತ್ತೋ
….

ಹೇಳೊಮ್ಮೆ ಅಮೃತಮತಿ
ಜಗತ್ತು ನಿನ್ನ ವಿಷಮತಿ ಮಾಡುವ ಮೊದಲು
ತಿಳಿಸೊಮ್ಮೆ ಮಹಾಸತಿ
ಜನ್ನ ಕವಿಯ ಆಶಯಕೆ ಭಂಗ ಬರುವ ಮೊದಲು..’

ಮಹಾಕವಿ ಜನ್ನನ ‘ಯಶೋಧರ ಚರಿತೆ’ ಯಲ್ಲಿ ಅಮೃತಮತಿಯ ಪಾತ್ರ ಬರುತ್ತದೆ. ಅವಳು ಹೇಗೆ ಸುಂದರಳೋ, ಆಕೆಯ ಪತಿ ದೊರೆ ಯಶೋಧರನಾದರೂ ಅಪ್ರತಿಮ ಸುಂದರನೇ. ಆದರೆ ಆತ ಅರಸಿಕ. ಸಂಗಮದ ಗಂಧ ಅರಿಯದ ಅವನ ಮೇಲೆ ಆಕೆಗೆ ನಿರ್ಮೋಹ. ಒಂದಿರುಳು ಜಗತ್ತು ನಿದ್ದೆಯಲ್ಲಿದ್ದಾಗ ಆಕೆಯ ಕಿವಿಗೆ ಇಂಪಾದ ಹಾಡೊಂದು ಕೇಳಿಬರುತ್ತದೆ. ತಟ್ಟನೆ ಎಚ್ಚರಗೊಂಡು ಅತ್ತ ಲಕ್ಷ್ಯ ಕೊಡುತ್ತಾಳೆ. ಆ ಕ್ಷಣವೇ ಆ ಮೋಹಕ ರಾಗಕ್ಕೆ ಮನವನ್ನೂ ಕೊಟ್ಟುಬಿಡುತ್ತಾಳೆ. ಹಾಡಿನ ಜಾಡು ಹಿಡಿದು ಹೋಗಿ ದೈಹಿಕವಾಗಿ ಕುರೂಪಿಯಾದ ಅಸಹ್ಯ ಕೊಳಕ ಅಷ್ಟಾವಂಕ ಮಾವುತನ ಮೋಹದ ಪ್ರತಾಪಕ್ಕೆ ಬಿಳುತ್ತಾಳೆ. ಜನ ಆಕೆಯ ಮನಸನ್ನು ಅರ್ಥ ಮಾಡಿಕೊಳ್ಳುವುದೇ ಇಲ್ಲ. ಕೇವಲ ದೊರೆಯ ಎಡೆಗೆ ಪಕ್ಷಪಾತವನ್ನು ಮಾಡಿ ಅವಳನ್ನು ನಿಂದಿಸುತ್ತದೆ. ಈ ಆಶಯ ಆ ಕವಿತೆಯ ಆಂತರ್ಯದಲ್ಲಿ ಹರಿಯುವುದು ಅರಿವಿಗೆ ಮೂಡುತ್ತದೆ.

“ಈ ಯುಗದ ಗಾಂಧಾರಿ” ಕವಿತೆಯ ಸಾಲುಗಳು :

‘ಕುರುಡ ಗಂಡನಿಗಾಗಿ ಕಣ್ಣಿಗೆ ಮಾತ್ರವಲ್ಲ
ತಾಯ್ತನಕ್ಕೂ ಮೋಹದ ಪಟ್ಟಿ ಕಟ್ಟಿಕೊಂಡವಳು
ಆ ಗಾಂಧಾರಿ
ಅಖಂಡ ರಾಜ್ಯ ವೈಭೋಗಲ್ಲಿ..
ಕುಡುಕ ಗಂಡನ ನಿತ್ಯ ನರಕ ದರ್ಶನ ಕಂಡಳು
ಈ ಯುಗದ ತಾಯವ್ವ
ಬಾಳುವ ಕಾಲಕ್ಕೆ ಬವಣೆ ಹಾಸಿ ಹೊದ್ದು
ಹಸಿದ ಹೊಟ್ಟೆಗೆ ನಿಟ್ಟುಸಿರು ಬಿಕ್ಕಳಿಕೆಗಳನ್ನೇ ಎಡೆಯಿಕ್ಕಿ
ಮುಳುಗಿ ಈಜಿದಳು ಸಂಸಾರ ಸಾಗರದಲ್ಲಿ
ಅಂಜದೆ ನಡೆದಳು ಹುಳುಕಿನ ಮನಸ್ಸುಗಳ ಮುಂದೆ
ಕಣ್ಣೀರಿಲ್ಲದ ಕಣ್ಣುಗಳ ಕನ್ನಡಿಯಲ್ಲಿ
ಮುಂದೊಂದು ದಿನ ಕಾಣುವ ಬಯಕೆಯಿಂದ
ಮಕ್ಕಳ ಹೆಜ್ಜೆಗೊಂದು ದೀಪ ಹಚ್ಚಿದಳು
ಅಶ್ರುಧಾರೆಯ ತೈಲವಾಗಿಸಿ…’

ಇಂದಿನ ದಾಂಪತ್ಯಗಳಲ್ಲಿ ಹೊಂದಾಣಿಕೆಯೇ ಬಹಳ. ಮಾಡಿದ ತಪ್ಪುಗಳನ್ನು ಎಣಿಸುತ್ತ ಕುಳಿತರೆ ಒಂದೊಮ್ಮೆ ಆ ಬಂಧನದಿಂದ ಸಿಡಿದು ಹೊರಹೋಗಬೇಕಾಗುತ್ತದೆ. ಅದರಲ್ಲೂ ಗ್ರಾಮೀಣ ದುಡಿಯುವ ವರ್ಗದ ಮಹಿಳೆಯರ ಗಂಡಂದಿಯರಲ್ಲಿ ಬಹುಪ್ರಮಾಣ ಕುಡುಕರು ಮತ್ತು ದುಡಿಯದೇ ಮೈ ಉಳಿಸಿಕೊಂಡು ಹೆಂಡತಿಯರ ದುಡಿತದ ಫಲದಲ್ಲಿಯೇ ಕಿತ್ತುಕೊಂಡು ಮೆರೆಯುವವರು ಹೆಚ್ಚು. ಆದರೂ ಸಹನಶೀಲೆಯರಾದ ಮಹಿಳೆಯರು ಗಂಡಂದಿಯರ ವರ್ತನೆಯಿಂದ ನೊಂದುಕೊಂಡರೂ ಗಂಡನನ್ನು ಮಕ್ಕಳನ್ನು ನೋಡಿಕೊಳ್ಳುತ್ತ ತಾವು ಮಾತ್ರ ನೋವುಣ್ಣುತ್ತಲೇ ಸಂಸಾರ ಮಾಡಿಕೊಂಡಿರುತ್ತಾರೆ. ಇವರು ಪ್ರಮಾದಗಳೆಡೆ ನೋಡದೆ ಸಂಸಾರಕ್ಕಾಗಿ ಶ್ರಮಿಸುವವರಾದ್ದರಿಂದ ಇವರೂ ಗಾಂಧಾರಿಯಂತೆ ಕಣ್ಣುಗಳ ಮೇಲೆ ಕಾಣದ ಪಟ್ಟಿಯನ್ನು ಕಟ್ಟಿಕೊಂಡವರೇ.

ಈ ಕವನ ಸಂಕಲನದ ಇನ್ನೊಂದು ಕವಿತೆ “ಊರ್ಮಿಳೆ”ಯ ಸಾಲುಗಳು :

‘ಸಮೃದ್ಧ ಹೊಳೆಯಲಿ
ಕ್ಷಾಮ ಕಂಡವಳು ನಾನು..

…

ದಾಂಪತ್ಯಗೀತೆ ಹಾಡಬೇಕಾದ ಸುಮಿತ್ರಾನಂದನ
ತನ್ನ ಧರ್ಮದಲ್ಲಿ ಲೀನನಾದ
ವಿದೇಹ ನಂದಿನಿಯೂ ಪತಿ ಪಾರಾಯಣೆಯಾದಳು

….

ಎದೆಯಲ್ಲಿ ಅಗ್ನಿಕುಂಡ ಇತ್ತು
ಮುಖದಲ್ಲಿ ನಿರ್ಲಿಪ್ತಭಾವ
ಮನದಲ್ಲಿ ಭೋರ್ಗರೆವ ಕಡಲು
ಕಣ್ಣಲ್ಲಿ ಸತ್ತ ಹೆಣಗಳ ರಾಶಿ
ಪ್ರಖರ ಜ್ಯೋತಿಯಡಿಯ ಅಂಧಃಕಾರ
ಮಹಾಚರಿತೆಯ ಕಳೆದುಹೋದ ಪುಟ
ಆದರ್ಶಪುರುಷನ ಅನಾದರತೆಯ ಕೂಸು ನಾನು
ಊರ್ಮಿಳೆ ನನ್ನ ಹೆಸರು..’

ರಾಮಾಯಣದಲ್ಲಿ ಲಕ್ಷ್ಮಣನ ಪತ್ನಿಯಾದ ಊರ್ಮಿಳೆ ದಿವ್ಯನಿರ್ಲಕ್ಷ್ಯಕ್ಕೆ ಒಳಗಾದವಳು. ರಾಮ ಹದಿನಾಲ್ಕು ವರ್ಷ ವನವಾಸಕ್ಕೆ ಹೋದರೂ ಅವನ ಜೊತೆಗೆ ಪ್ರಿಯಪತ್ನಿ ಸೀತೆಯಿದ್ದಳು. ಜೊತೆಗೆ ಸಹೋದರ ಲಕ್ಷ್ಮಣನೂ ಇದ್ದ. ಆದರೆ ಅರಮನೆಯಲ್ಲಿದ್ದರೂ ಊರ್ಮಿಳೆ ಹದಿನಾಲ್ಕು ವರ್ಷಗಳಷ್ಟು ಸುದೀರ್ಘ ಕಾಲ ಪತಿ ಲಕ್ಷ್ಮಣನ ಸಾಹಚರ್ಯದಿಂದ ವಂಚಿತಳಾದವಳು. ಅವಳ ಸುದೀರ್ಘ ಏಕಾಂಗಿತನದ ಇರುವಿಕೆ ಯಾವ ತಪಸ್ಸಿಗಿಂತಲೂ ಕಡಿಮೆಯಾದುದಲ್ಲ. ಹೀಗೆ ಈ ಸಂಕಲನದಲ್ಲಿ ಅರ್ಥಪೂರ್ಣವಾದ ಕವಿತೆಗಳು ಹೆಚ್ಚಿವೆ.

ಕವಿತೆಯ ರಚನೆಯಲ್ಲಿ ಶಬ್ದಗಳ ದುಂದುವ್ಯಯ ಸಲ್ಲದು. ಕಿರಿದರಲ್ಲಿ ಹಿರಿದರ್ಥ ಹೇಳುವ ಪದ ಅಥವಾ ಪದಪುಂಜಗಳ ಮೂಲಕ ಕವಿತೆಯ ಬಂಧವನ್ನು ಬಿಗಿಯಾಗಿಯೂ ಮಧುರವಾಗಿಯೂ ಕಟ್ಟಿಕೊಡುವುದು ಸಾಧ್ಯವಿದೆ. ಈಚಿನ ಕವಿಗಳು ಈ ನೀತಿಯನ್ನು ಮೀರಿದ ಪ್ರಯುಕ್ತವೇ, ಇಲ್ಲವೇ ಅರಿವಿನ ಅಭಾವದ ಕಾರಣ ಅಂಥವರ ಕವಿತೆಗಳು ಜಾಳುಜಾಳಾಗಿ ತೋರುತ್ತಿವೆ. ಹಾಗಾಗಬಾರದು ಎಂದರೆ ಸಾಹಿತಿಗಳು ಅಧ್ಯಯನಮುಖಿಗಳು, ಚಿಂತಕರು, ಹೊಸಹೊಸದನ್ನು ಯೋಚಿಸುವವರೂ ಆಗಬೇಕಾಗುತ್ತದೆ.


  • ಡಾ. ಲಕ್ಷ್ಮಣ ಕೌಂಟೆ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading