ಸಿರಿಭೂವಲಯ: ಕನ್ನಡದ ವಿಶ್ವವಿಸ್ಮಯ

ಕುಮುದೇಂದು ಮುನಿಯು ಈಗಿನ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಯಲವಹಳ್ಳಿಯಲ್ಲಿ ಎಂಟನೆಯ ಶತಮಾನದಲ್ಲಿ ಬದುಕಿದ್ದ ಜೈನ ದಿಗಂಬರ ಮುನಿ.ವೀರಸೇನ, ಜಿನಸೇನರ ಶಿಷ್ಯ. ಅಮೋಘವರ್ಷನ ಗುರು. ರಾಜಾಶ್ರಯ ನಿರಾಕರಿಸಿ ಬಂದು ಅಮೋಘವರ್ಷನ ಸಾಮಂತನಾದ ಗಂಗ ದೊರೆ ಶಿವಮಾರನ ನಂದಿಗಿರಿ ಪ್ರಾಂತದ ಈ ಹಳ್ಳಿಯನ್ನು ತನ್ನ ನೆಲೆಯಾಗಿಸಿಕೊಂಡವರು. – ಕೆ. ರಾಜಕುಮಾರ್, ತಪ್ಪದೆ ಮುಂದೆ ಓದಿ…

ಅಂದಿನ ನಮ್ಮ ಅಖಂಡ ಕೋಲಾರ ಜಿಲ್ಲೆಯಲ್ಲಿ ಘಟಿಸಿದ ವಿಶ್ವದ ಅದ್ಭುತ ಸಾರಸ್ವತ ವಿಸ್ಮಯ. ಇದರ ಕಾಲದ ಬಗ್ಗೆ ಭಿನ್ನ ಅಭಿಪ್ರಾಯಗಳಿವೆ:

9ನೆಯ ಶತಮಾನ ಎನ್ನುತ್ತಾರೆ.15ನೆಯ ಶತಮಾನ ಎನ್ನುವವರೂ ಇದ್ದಾರೆ. ಸಿರಿಭೂವಲಯದ ಸಾಧ್ಯತೆಗಳು ಅಪಾರ. ಕನ್ನಡದ ಬಗೆಗೆ ಬೆರಗುಗೊಳ್ಳಲು, ಕಂನುಡಿಯ ಸಾಧನೆ ಕುರಿತು ಹೆಮ್ಮೆಪಡಲು ಚಿಕ್ಕಬಳ್ಳಾಪುರ ತಾಲ್ಲೂಕಿನ ಯಲವಹಳ್ಳಿ ಗ್ರಾಮದ ಜೈನಮುನಿ ಕುಮುದೇಂದು ವಿರಚಿತ ಸಿರಿಭೂವಲಯ ಎಂಬ ಒಂದು ಕೃತಿ ಸಾಕು. ಇಲ್ಲಿರುವುದು ಕನ್ನಡ ಅಂಕಿಗಳು. ಇದರಲ್ಲಿನ ಅಂಕಾಕ್ಷರದ ಮೂಲಕ ಕನ್ನಡವನ್ನೂ ಒಳಗೊಂಡಂತೆ #64ಭಾಷೆಗಳನ್ನು ಓದಬಹುದು. ಈ ಭಾಷೆಗಳಲ್ಲಿನ ಗ್ರಂಥಗಳನ್ನು ಅಧ್ಯಯನ ಮಾಡಬಹುದು. ವೈದ್ಯಶಾಸ್ತ್ರ, ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ, ಬಾಹ್ಯಾಕಾಶಯಾನ, ಅಂತರ್ಜಲಯಾನ ಹೀಗೆ ಸಮಸ್ತ ವಿಷಯಗಳ ಸಾರ ಇದರಲ್ಲಿ ಅಡಗಿದೆ.

ಇದು ವಿಶ್ವವಾಙ್ಮಯಕ್ಕೆ ಕನ್ನಡದ ಶ್ರೇಷ್ಠ ವಿದ್ವತ್ ಕಾಣಿಕೆ. ಇದೀಗ ಜರ್ಮನಿಯಲ್ಲಿ ನಿರ್ಮಾಣದ ಹಂತದಲ್ಲಿರುವ ಸೂಪರ್ ಕಂಪ್ಯೂಟರ್ ಸಿರಿಭೂವಲಯ ಕಾಲದ ಕನ್ನಡ ವರ್ಣಮಾಲೆಯನ್ನೇ ಇಡಿಯಾಗಿ ಬಳಸಿಕೊಳ್ಳುತ್ತಿದೆ ಎಂದು ಕೇಳಿರುವೆ. ಖಚಿತಪಡಿಸಿಕೊಳ್ಳಬೇಕು. (ಈಗ ಗಣಕಗಳ ಬಳಕೆಗೆ ಇರುವ ಕಾರ್ಯವಿಧಾನ 0 ಮತ್ತು 1 ಎಂಬುದು ನಮಗೆ ತಿಳಿದ ವಿಷಯ.)

ಸಿರಿ ಭೂವಲಯದಲ್ಲಿ :

  • ಎಷ್ಟು ಶ್ಲೋಕಗಳಿವೆ?
    6 ಲಕ್ಷ ಶ್ಲೋಕಗಳು.
  • ಯಾವ ಅಂಕಿಗಳು?
    ಕನ್ನಡ ಅಂಕಿಗಳು.
  • ಒಂದು ಕೋಷ್ಟಕದಲ್ಲಿ?
    27×27 ಚೌಕಗಳು.
  • ಎಷ್ಟು ಅಧ್ಯಾಯಗಳು?
    26
  • ಎಷ್ಟು ದೊಡ್ಡದು?
    ಮಹಾಭಾರತಕ್ಕಿಂತ 6ರಷ್ಟು ದೊಡ್ಡದು.
  • ಎಷ್ಟು ಚಕ್ರಬಂಧಗಳು?
    16000
  • ಈಗ ಎಷ್ಟು ಸಿಕ್ಕಿವೆ?
    1270
  • ಎಷ್ಟು ಅಧ್ಯಾಯಗಳನ್ನು ಅರ್ಥೈಸಿಕೊಳ್ಳಲಾಗಿದೆ ?
    ಕೇವಲ ಮೂರು.


ಸಿರಿಭೂವಲಯ ಎಂಬ ಬೆಕ್ಕಸ ಬೆರಗು:

ಯಾವುದೇ ವಿಷಯವನ್ನಾದರೂ ಸುಲಭವಾಗಿ ಕನ್ನಡದಲ್ಲಿ ತಲಪಿಸಬಲ್ಲೆ ಎಂಬ ವಿಶ್ವಾಸ ನನ್ನಲ್ಲಿ ಸ್ವಲ್ಪ ಉಂಟು. ಆದರೆ ನಾನು ಸೋತಿದ್ದೂ, ಶರಣಾಗಿದ್ದೂ, ಅಡ್ಡಬಿದ್ದಿದ್ದೂ, ಸಾಧ್ಯವಾಗದೆ ಗೋಳಾಡಿದ್ದೂ ಇದೇ ಸಿರಿಭೂವಲಯದ ವಿಷಯದಲ್ಲಿ. ಅದು ಬಗೆದಷ್ಟೂ ಆಳ, ಏರಿದಷ್ಟೂ ಎತ್ತರ. ಅದನ್ನು ಇಡಿಯಾಗಿ ಸಮರ್ಪಕವಾಗಿ ಬಿತ್ತರಿಸಲು ಆಗಲಿಲ್ಲವೆಂಬ ಕೊರಗು ಸದಾ ಉಳಿದುಬಿಡುತ್ತದೆ. ಈ ಆನೆ ಎಂಬ ಐರಾವತವನ್ನು ಹಿಡಿದಿಡುವ ಕನ್ನಡಿ ನನ್ನಲ್ಲಿ ಇಲ್ಲವೆಂಬ ಭಾವದಿಂದ ಮುದುಡಿಬಿಡುತ್ತೇನೆ. ಈ ಕೃತಿ ಬರೆದಾತನನ್ನು ಯಾವ ಬೆಳಕು ಕೈಹಿಡಿದು ಮುನ್ನಡೆಸಿತ್ತೋ? ಬರಿಯ ಬೆಳಕೆ? ದಿವ್ಯಪ್ರಭೆ ಎನ್ನಲೇ? ಯಾವ ಶಕ್ತಿಯ ಆವಾಹನೆಯಗಿತ್ತೋ? ನಾ ಅರಿಯೆ. ನಮ್ಮ ಈ ಕನ್ನಡದ ಅಂಕಿಗಳಲ್ಲಿ ಅದೆಂತಹ ಗೂಢಾರ್ಥ ಅಡಕವಾಗಿದೆ! ವಿಶ್ವವೇ ಬೆರಗಾಗುವಷ್ಟು. ಅರ್ಥಮಾಡಿಕೊಳ್ಳಲು ಸಾಧ್ಯವಾಗದೆ ಕೈ ಕೈ ಹಿಸುಕಿಕೊಳ್ಳುವಷ್ಟು! ಇಷ್ಟು ಅಗಾಧವಾದ ಜ್ಞಾನಧಾರೆಯನ್ನು ಹೀಗೆ ಸಂಕೇತಗಳಾಗಿ, ಅಂಕಿಗಳಾಗಿ ಅಡಕಗೊಳಿಸಲು ಅದು ಹೇಗೆ ಸಾಧ್ಯವಾಯಿತೋ? ಯಾವ ನೆಲದ ಗಂಧ ತೀಡಿತ್ತೋ? ಯಾವ ಗಿರಿ-ಕಂದರದ ಗಾಳಿ ಸುಳಿದಾಡಿ ಬರೆಸಿತ್ತೋ ಎಂಬ ಪ್ರಶ್ನೆಗಳು. ಗಂಧ ತೀಡಿದ್ದು ಬೇರೆ ಯಾವುದೋ ಮಣ್ಣಲ್ಲ. ಅದು ನಮ್ಮ ಕೆಮ್ಮಣ್ಣು. ಆ ಗಾಳಿ ಇದೇ ಮಲಯಜದ್ದು. ನಂದಿಯೂ ಸೇರಿದಂತೆ ಇರುವ ಪಂಚಗಿರಿ ಶೃಂಗದ್ದು ಎಂದಾಗ ಪುಲಕಿತ ಭಾವ. ಕಟ್ಟಿದ ಕೈ; ಬಾಯ ಮೇಲೆ ಬೆರಳು; ಬಿರಿದ ಕಣ್ಣು; ಮೇಲೇರಿದ ಹುಬ್ಬು. ಬೆರಗಿನ ಭಾವದಲ್ಲಿ ಘಳಿಗೆ ಲೀನ-ತಲ್ಲೀನ. ಇದು ಆಸಕ್ತರಲ್ಲಿ, ಕುತೂಹಲಿಗರಲ್ಲಿ ಸಿರಿಭೂವಲಯವೆಂಬ ಸೋಜಿಗ ಉಂಟುಮಾಡುವ ಪರಿಣಾಮ!

ನಾನು ಮೂರು ದಶಕಗಳ ಹಿಂದೆ ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ಇದರ ಪ್ರಾತ್ಯಕ್ಷಿಕೆ ನೋಡಿದ್ದೆ. ಆದರೆ ಈ ಮಂದಮತಿಯ ಮಂಡೆಗೆ ಅದರ ತಲೆ ಬುಡ ಅರ್ಥವಾಗಲಿಲ್ಲ. ಕೋಷ್ಟಕದಲ್ಲಿ ಅಂಕಿಗಳನ್ನು ಉದ್ದುದ್ದಕ್ಕೆ ಓದಿದರೆ ಒಂದು ವಿಷಯದ ಅನಾವರಣ. ಅಡ್ಡಡ್ಡ ಓದಿದರೆ ಮತ್ತೊಂದು ವಿಷಯದ ಬಯಲು. ಈಗ ಲಭ್ಯವಿರುವ ತಂತ್ರಜ್ಞಾನ #AI #ಮೂಲಕ ಎಂದರೆ ಕೃತಕ ಬುದ್ಧಿಮತ್ತೆ ಬಳಸಿ ಇದನ್ನು ಬಯಲು ಮಾಡಲು ಸಾಧ್ಯವೇ ಎಂಬುದನ್ನು ಪರಿಶೀಲಿಸಬೇಕು. ಇದಕ್ಕೆ ಬೇಕಾದ ಸಂಪನ್ಮೂಲ ಒದಗಿಸಲು ಹೃದಯವಂತ ಕನ್ನಡಾಭಿಮಾನಿ ಚಂದನ್ ಅವರು ಉತ್ಸುಕರಾಗಿದ್ದಾರೆ.

ದಶಕಗಳ ಹಿಂದೆ ಸಾಹಿತಿ ಕರ್ಲಮಂಗಲಂ ಶ್ರೀಕಂಠಯ್ಯನವರು ಈ ಕೃತಿಯ ಕುರಿತು ಸಂಶೋಧನೆ ನಡೆಸಿ ಉಪನ್ಯಾಸ ನೀಡುತ್ತಿದ್ದರು. ಇದನ್ನು ಅರ್ಥೈಸಿಕೊಳ್ಳುವುದು ಹೇಗೆ, ಅಂಕಿಗಳನ್ನು ಶ್ಲೋಕಗಳನ್ನಾಗಿ ಪರಿವರ್ತಿಸುವುದು ಹೇಗೆಂದು ಪ್ರಾತ್ಯಕ್ಷಿಕೆಯ ಮೂಲಕ ಸಾದರಪಡಿಸುತ್ತಿದ್ದರು. ಹಾಸನದ ಸುಧಾರ್ಥಿ ಅವರ ಜೀವಿತಾಶಯವೇ ಈ ಕೃತಿಯ ಪ್ರಚಾರ ಮತ್ತು ಪ್ರಸಾರ. ಈ ಮಹತ್ತರ ಕಾರ್ಯಕ್ಕೆ ಅವರು ತಮ್ಮನ್ನು ಇಡಿಯಾಗಿ ಸಮರ್ಪಿಸಿಕೊಂಡಿದ್ದಾರೆ.

ಸಿರಿಭೂವಲಯ ಎಂಬುದೊಂದು ಕಗ್ಗತ್ತಲ ಕಾಂತಾರ. ಅಲ್ಲಿ ಬೆಳಕಿಗಾಗಿ ತವಕಿಸಿದರೆ ಸೋಲು ಖಚಿತ. ಅದೊಂದು ಕಬ್ಬಿಣದ ಕಡಲೆ. ಅದು ಬಿಡಿಸಲಾಗದ ಒಗಟು. ಅದು ಆಸಕ್ತರನ್ನು ತನ್ನ ಒಳಗೆ ಸೆಳೆದೊಯ್ಯುವ ಅಲೆಯ ಬಲೆ. ಪಾತಾಳ ಗರಡಿ ಹಾಕಿ ಎಳೆದರೂ ಮೇಲೆ ಬರಲಾಗದು. ಅದರದು ಅಕ್ಟೋಪಸ್ ಹಿಡಿತ. ಉಡದ ಪಟ್ಟು. ಅದು ಚಕ್ರವ್ಯೂಹ. ಈ ಜಗದ ಸೋಜಿಗ. ಅದು ಶತಮಾನಗಳ ಹಿಂದಿನ ಸಾಧನೆ. ಸಿರಿಭೂವಲಯ ಎಂಬುದು ತನ್ನ ಗೂಢಾರ್ಥವನ್ನು ಬಿಡಿಸಿ ತೋರೆಂದು ಇಂದಿನ ಮನುಕುಲಕ್ಕೆ ಎಸೆದ ಸವಾಲು. ಅದು ‘ಹೀಗೂ ಉಂಟೆ’ ಎಂಬ ನಿತ್ಯ ನಿರಂತರ ಅಚ್ಚರಿ.

ಲೇಖಕ ವಿ.ವಿ. ಗೋಪಾಲ್ ಅವರು ಈ ಕೃತಿಯ ಸಂಕೀರ್ಣತೆ ಕುರಿತು ಆಡಿರುವ ನುಡಿ ಇಂತಿದೆ:

‘ಸಿರಿಭೂವಲಯ’ವೊಂದು ಚಕ್ರವ್ಯೂಹವಿದ್ದಂತೆ. ಧೈರ್ಯಮಾಡಿ ಎಲ್ಲಾದರೊಂದು ಎಳೆ ಹಿಡಿದು ಏನೋ ಸಿಕ್ಕಿತೆಂದು ತಡಕಾಡುತ್ತಿರುವಾಗ ಅಲ್ಲೆಲ್ಲೋ ಇನ್ನೊಂದು ಬಾಗಿಲು ತೆರೆದುಕೊಂಡು ದಾರಿ ತಪ್ಪಿಸುತ್ತದೆ. ಹೊಸತನ್ನು ಹುಡುಕುವ ಮಾತು ಹಾಗಿರಲಿ, ಈಗಾಗಲೇ ಪ್ರಾಜ್ಞರು ಬಿಡಿಸಿಟ್ಟಿರುವ ಎಳೆಗಳನ್ನೋ, ತೊಳೆಗಳನ್ನೋ ಚಪ್ಪರಿಸೋಣವೆಂದರೂ ಆ ಪುಟ್ಟ ಭಾಗವೇ ಬೆಟ್ಟವಾಗಿ ನಮ್ಮ ಬಾಯಿ ಕಟ್ಟಿಹೋಗುತ್ತದೆ. ನೋಡುವ ಯಾರಾದರೂ ಸಾಹಸಿಗಳು ಸೇರಿ ಸಿರಿಭೂವಲಯವೆಂಬ ಬಂಗಾರದೆಳೆಗಳ ಸಿಕ್ಕನ್ನು ಬಿಡಿಸಿ ವಸ್ತ್ರವನ್ನಾಗಿಸಿ ಕೊಡುತ್ತಾರೇನೋ.”

ಹೌದಲ್ಲವೆ? ಸಿರಿಭೂವಲಯ ಎಂಬುದನ್ನು ಆಡಿಸಲು ಹೋದರೆ ಶ್ರೀಕೃಷ್ಣನೆಂಬ ಜಗದೋದ್ಧಾರಕ ತಾಯಿಗೆ ಬಾಯಲ್ಲಿ ಜಗವನ್ನೇ ತೋರಿದಂತಹ ಅನುಭವ ನೋಡುಗರದಾಗುತ್ತದೆ. ಈ ಸತ್ಕೃತಿ ಬಾಯಲ್ಲೇ ಬ್ರಹ್ಮಾಂಡವನ್ನು ತೋರಿಸುತ್ತದೆ. ಅದೊಂದು ಬಹುರೂಪದರ್ಶಕ (ಕಲೈಡೋಸ್ಕೋಪ್). ಅದು ತೆರೆತೆರೆಯಾಗಿ, ಪರಿಪರಿಯಾಗಿ ಸಾಕ್ಷಾತ್ಕರಿಸುತ್ತದೆ.
ನನ್ನ ಮೊಗಮಿತ್ರ(fb ಗೆಳೆಯ)ರೂ, ಶಾಸನ ಸಂಶೋಧಕರೂ ಆದ #ಡಿ #ಎನ್ #ಸುದರ್ಶನರೆಡ್ಡಿ ಅವರು ಕುಮುದೇಂದು ಮುನಿಯನ್ನು ಕುರಿತಂತೆ ನೀಡಿರುವ ಮಾಹಿತಿಯನ್ನು ಇಲ್ಲಿ ಹಂಚಿಕೊಂಡಿರುವೆ:

ಸಿರಿಭೂವಲಯ ಮತ್ತು #ಕುಮುದೇಂದುಮುನಿ

ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಗ್ರಾಮದ ಸಮೀಪ ಇರುವ ಗೋಪಿನಾಥ ಗುಟ್ಟದ ಜೈನ ಶಾಸನದಲ್ಲಿ (EC volume 9 – CBP 29 = ಎಪಿಗ್ರಾಫಿಯ ಕರ್ನಾಟಕ ಸಂಪುಟ 9 – ಚಿಕ್ಕಬಳ್ಳಾಪುರ 29) ಯಾವುದೇ ಕಾಲಮಾನದ ಉಲ್ಲೇಖ ಇಲ್ಲದಿದ್ದರೂ ಸಹ ನಂದಿಗಿರಿಯು ಅಂದಿನ ಜೈನಮತಾವಲಂಬೀ ಗಂಗದೊರೆ ಸೈಗೊಟ್ಟ ಶಿವಮಾರನ ಆಡಳಿತದಲ್ಲೇ ಇತ್ತು ಎಂಬ ತೀರ್ಮಾನಕ್ಕೆ ಬರಲು ಕುಮುದೇಂದು ಮುನಿಯೇ ಕಾರಣ.

ಈ ಗುಟ್ಟಕ್ಕೆ ಹೊಂದಿಕೊಂಡಹಾಗೇ ಇರುವ ಯಲವಹಳ್ಳಿಯೇ ಕುಮುದೇಂದು ಮುನಿಯ ಕಾರ್ಯಕ್ಷೇತ್ರ ಎಂಬುದಕ್ಕೆ , ತಾಳೆಗರಿಗಳಲ್ಲಿ ವಾಙ್ಮಯ ಲೋಕಕ್ಕೇ ವಿಶಿಷ್ಟವೆನಿಸಿದ ಹಾಗೆ ಶ್ಲೋಕಗಳನ್ನು ಕನ್ನಡದ ಅಂಕಿಗಳಿಗೆ ಪರಿವರ್ತಿಸಿ ಕೋಷ್ಟಕಗಳಾಗಿ ಬರೆದಿರುವ ಗ್ರಂಥ ‘ಸಿರಿಭೂವಲಯ’ವೇ ಆಧಾರ (ಸಿರಿಭೂವಲಯ ತಿರುಗಿಸಿ ಓದಿದರೆ ‘ಯಲವಭೂರಿಸಿ’/ಯಲವಭೂರಿಷಿ i.e.ಕುಮುದೇಂದು ಮುನಿ!)

ಚಿಕ್ಕಬಳ್ಳಾಪುರದ ಯಲ್ಲಪ್ಪ ಶಾಸ್ತ್ರಿಗಳೆಂಬ ಪಂಡಿತರು ತಮ್ಮ ಪತ್ನಿಯ ಬಂಗಾರದ ಬಳೆಗಳನ್ನು ಮಾರಿ ಬಂದ ಹಣದಿಂದ ಕೊಂಡು, ‘ಡೀ ಕೋಡ್’ ಮಾಡಿ ಪರಿಚಯಿಸಿದ ಈ ತಾಳೆಗರಿ ಗ್ರಂಥದ ಅಳಿದುಳಿದ ಭಾಗದ ಓದುವಿಕೆ ಈಗ ಕಂಪ್ಯೂಟರ್ ಸಹಾಯದಿಂದ ನಡೆಯುತ್ತಿದೆ.

ಕುಮುದೇಂದು ಮುನಿಯು ಈಗಿನ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಯಲವಹಳ್ಳಿಯಲ್ಲಿ ಎಂಟನೆಯ ಶತಮಾನದಲ್ಲಿ ಬದುಕಿದ್ದ ಜೈನ ದಿಗಂಬರ ಮುನಿ. ವೀರಸೇನ, ಜಿನಸೇನರ ಶಿಷ್ಯ. ಅಮೋಘವರ್ಷನ ಗುರು. ರಾಜಾಶ್ರಯ ನಿರಾಕರಿಸಿ ಬಂದು ಅಮೋಘವರ್ಷನ ಸಾಮಂತನಾದ ಗಂಗ ದೊರೆ ಶಿವಮಾರನ ನಂದಿಗಿರಿ ಪ್ರಾಂತದ ಈ ಹಳ್ಳಿಯನ್ನು ತನ್ನ ನೆಲೆಯಾಗಿಸಿಕೊಂಡವರು.

ಕುಮುದೇಂದು ಮುನಿ ಗೋಪಿನಾಥ ಗುಟ್ಟದ ಗುಹೆಗಳಲ್ಲಿ ಸಿರಿಭೂವಲಯ ಕೃತಿ ರಚಿಸಿದ್ದಾರೆ ಎಂದು ಕೆಲವರು ಹೇಳುತ್ತಾರೆ, ಆ ಗುಹೆಯಿಂದ ಕಾಣುವ ಈ ಸುಂದರ ದೃಶ್ಯವು ಅವರ ಕೃತಿಗೆ #ಸಿರಿಭೂವಲಯ ಎಂಬ ಹೆಸರಿಡಲು ಪ್ರೇರೇಪಣೆ ಆಗಿರಲೂ ಸಾಕು: (ಡಿ.ಎನ್. ಸುದರ್ಶನ ರೆಡ್ಡಿ)


  • ಕೆ. ರಾಜಕುಮಾರ್ – ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವ ಕಾರ್ಯದರ್ಶಿಗಳು, ಬೆಂಗಳೂರು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading