ಗಿಡಮೂಲಿಕೆ ಔಷಧಿಗಳ ಹೆಸರಿನಲ್ಲಿ ಮತ್ತು ಲಾಭದ ಆಸೆಗೆ ಹೆಚ್ಚುತ್ತಿರುವ ಹೊಸ ಹೊಸ ಕಂಪನಿಗಳು ರೋಗಿಯ ಆರೋಗ್ಯದ ಬಗ್ಗೆ ಕಾಳಜಿವಹಿಸುತ್ತದೆಯೇ?…ಡಾ.ಎನ್.ಬಿ. ಶ್ರೀಧರ ಅವರು ಚಿಂತನಕಾರಿ ವಿಷಯದ ಕುರಿತು ತಮ್ಮ ವಿಚಾರವನ್ನು ಮಂಡಿಸಿದ್ದಾರೆ ಮುಂದೆ ಓದಿ…
“ಈ ಇಂಗ್ಲಿಷ್ ಔಷಧಿಗಳಿಗೆಲ್ಲಾ ಸೈಡ್ ಇಫೆಕ್ಟ್ ಜಾಸ್ತಿ. ನಾನು ತಗೋಳ್ತಾ ಇರೋದು ಗಿಡಮೂಲಿಕೆ ಔಷಧಿ. ನಮ್ಮನೇ ದನಗಳಿಗೂ ನಾನು ನಾಟಿ ಔಷಧೀನೇ ಮಾಡಿಸೋದು. ಇವಕ್ಕೆ ಏನೇನು ಅಡ್ಡ ಪರಿಣಾಮಗಳೇ ಇಲ್ಲ ಎಂದು ಹೇಳ್ತಾರೆ.” ಇದು ಬಹುತೇಕ ಸಾಮಾನ್ಯ ರೈತರ ಅಭಿಪ್ರಾಯ. ಆಧುನಿಕ (ಪಶು)ವೈದ್ಯಕೀಯ ಪದ್ಧತಿಯ ಪ್ರಕಾರ “ಔಷಧಿ ” ಎಂದು ಕರೆಸಿಕೊಳ್ಳುವ ವಸ್ತುವಿಗೆ ಪರಿಣಾಮವಿದೆ ಎಂದಾದರೆ ಅಡ್ಡಪರಿಣಾಮ ಇದ್ದೇ ಇರುತ್ತದೆ. ಯಾವುದೇ ಔಷಧಿಯ ಪರಿಣಾಮ, ಅಡ್ಡ ಪರಿಣಾಮ, ದೇಹದಲ್ಲಿಅದು ಕೆಲಸ ಮಾಡುವ ರೀತಿ, ಇತರ ಔಷಧಗಳೊಡನೇ ಅದರ ವರ್ತನೆ, ಇತ್ಯಾದಿಗಳೆಲ್ಲ ರೋಗಿ ಕೇಳಿದರೆ ತಿಳಿಸುವ ರೂಪದಲ್ಲಿ ಅಧಿಕೃತವಾಗಿ ಲಭ್ಯವಿರಬೇಕು. ಅದನ್ನು ಬರೆದು ಕೊಡುವ ವೈದ್ಯನಿಗಾದರು ಈ ಬಗ್ಗೆ ತಿಳಿದರಬೇಕು. ಅಡ್ಡಪರಿಣಾಮಗಳಿಲ್ಲ ಅಂದರೆ ಅದಕ್ಕೆ ಪರಿಣಾಮವೂ ಇಲ್ಲ. ಅದು ಸ್ವಲ್ಪವೇ ಇರಬಹುದು ಅಥವಾ ಜಾಸ್ತಿಯಿರಬಹುದು. ಇದು ಔಷಧಿಗಳಿಗೆಲ್ಲ ಇರುವ ಮಾತೃ ವೇದವಾಕ್ಯ!!. “ಔಷಧಿ ಎರಡೂ ಕರೆ ಕುಯ್ಯುವ ಗರಗಸ ಇದ್ದ ಹಾಗೇ. ಅದು ರೋಗವನ್ನು ವಾಸಿ ಮಾಡಬಲ್ಲದು.

ಫೋಟೋ ಕೃಪೆ : thefederal
ಹಾಗೆಯೇ ಮನುಜನ ಶರೀರಕ್ಕೆ ಹಾನಿಯನ್ನೂ ಉಂಟು ಮಾಡಬಲ್ಲದು” ಎಂದು ಗಾದೆಯಲ್ಲಿ ಹೇಳಲಾಗಿದೆ. ಇದು ಆಧುನಿಕ ವೈದ್ಯಕೀಯ ಎಲ್ಲಾ ಔಷಧಿಗಳಿಗೆಲ್ಲಾ ಅನ್ವಯಿಸುತ್ತದೆ. ಹಾಗಿದ್ದರೆ ಈ ಗಿಡಮೂಲಿಕೆಗಳೆಲ್ಲವೂ ಸುರಕ್ಷಿತವೇ? ಇವುಗಳ ಸಾಧಕ ಬಾಧಕಗಳೇನು? ಸುರಕ್ಷಿತವೆಂಬ ನಂಬಿಕೆ ಮಾತ್ರ ಸಾಕೆ ಅಥವಾ ಅದು ಸಿದ್ಧವಾಗಬೇಕೇ? ಎಂಬುದು ಮುಖ್ಯವಲ್ಲವೇ? ಬಹುತೇಕ ಪಶು ಔಷಧಿಗಳ ಮೂಲ ಮಾನವ ಔಷಧಿಯೇ .. ಕಾರಣ ಮಾನವ ಚಿಕಿತ್ಸೆಗೆ ಬಳಸುವ ಮೂಲಿಕೆಗಳ ಬಗ್ಗೆ ಮಾಹಿತಿ ಮೂಲ ಇದಕ್ಕೂ ಅನ್ವಯ.
ಗಿಡಮೂಲಿಕೆ ಔಷಧ ಉದ್ಯಮದ ವ್ಯಾಪಕತೆಯು ಕಣ್ಣಿಗೆ ಕಾಣದಂತೇನೂ ಇಲ್ಲ; ಇವುಗಳ ಜಾಹಿರಾತುಗಳಂತೂ ದಿನಬೆಳಗಾದರೆ ಪತ್ರಿಕೆಗಳು, ನಿಯತಕಾಲಿಕೆಗಳು,ಹಲವಾರು ದೃಶ್ಯ ಮಾಧ್ಯಮಗಳಲ್ಲಿ ಕಂಡು ಬರುತ್ತಿದ್ದು, ಕಳೆದ ಕೆಲವು ವರ್ಷಗಳಿಂದ ಈ ಮಾರುಕಟ್ಟೆಯು ಗಣನೀಯ ವೇಗವನ್ನು ಗಳಿಸಿದೆ. ಇದರ ಜೊತೆಗಿರುವ ಪ್ರಮುಖ ಅಪಾಯವೆಂದರೆ, ಗ್ರಾಹಕರು ತಮಗರಿವಿಲ್ಲದೇ ಪರಿಶೀಲಿಸದ ಅಥವಾ ಅಧಿಕೃತವಲ್ಲದ ಪೂರಕ ಆಹಾರ ಪದಾರ್ಥಗಳು ಮತ್ತು ಔಷಧಿಗಳನ್ನು ಸೇವಿಸುವ ಸಾಧ್ಯತೆ ಹೆಚ್ಚಾಗಿದೆ. “ಮೂಲಿಕೆ ಮದ್ದುಗಳೆಲ್ಲಾ ಸುರಕ್ಷಿತ”ಎಂಬ ಭ್ರಮೆ ಬೇಡವೇ ಬೇಡ. ಪರಿಣಾಮವಿರುವ ಯಾವುದೇ ಔಷಧಿಗೆ ಯಾವುದಾದರೊಂದು ಅಡ್ಡಪರಿಣಾಮ ಇದ್ದೇ ಇರುತ್ತದೆ ಎನ್ನುವುದು ಕಟು ಸತ್ಯ. ಗಿಡಮೂಲಿಕೆ ಔಷಧಿಗಳ ಹೆಸರಿನಲ್ಲಿ ಕೇವಲ ಲಾಭದ ಆಸೆಗೆ ಒಳಗಾಗಿ ನಾಯಿ ಕೊಡೆಗಳಂತೆ ತಲೆಯೆತ್ತುತ್ತಿರುವ ಹೊಸ ಹೊಸ ಕಂಪನಿಗಳಿಗೆ ರೋಗಿಯ ಆರೋಗ್ಯದ ಬಗ್ಗೆ ಕಾಳಜಿ ಇದೆಯೇ?.
ನಮ್ಮ ದೇಶದಲ್ಲಿ, ಇತರ ದೇಶಗಳಲ್ಲಿ ಇದರ ಬಗ್ಗೆ ಕಾನೂನು ಏನು ಹೇಳುತ್ತದೆ? ಇವುಗಳ ಗುಣಮಟ್ಟದ ಬಗ್ಗೆ ಸಂಶಯವಿದ್ದರೆ ಯಾರಿಗೆ ಅರುಹಬೇಕು? ಇವುಗಳ ಬೆಲೆ ಗ್ರಾಹಕರಿಗೆ ಎಟುಕುವ ಹಾಗಿದೆಯೇ? ಈ ವಾಣಿಜ್ಯ ಪ್ರಪಂಚದಲ್ಲಿ ಈ ಔಷಧಿ ತಯಾರಕರಷ್ಟು ನಂಬಬೇಕು? ಇವುಗಳ ರಹದಾರಿ, ಮಾರಾಟ, ಗುಣಮಟ್ಟ, ಬೆಲೆ ಇವುಗಳ ಮೇಲೆ ಯಾರು ನಿಗಾ ವಹಿಸಿದ್ದಾರೆ ಎಂಬ ಬಗ್ಗೆ ತಿಳಿಯಬೇಕೇ?…
ಆರೋಗ್ಯ ಪೂರ್ಣ, ಮಾಹಿತಿ ಭರಿತ, ತೆರೆದ ಮನಸ್ಸಿನ ಚರ್ಚೆಗೆ ಸದಾ ಸಿದ್ಧ.
- ಡಾ.ಎನ್.ಬಿ. ಶ್ರೀಧರ (ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ ಪಶುವೈದ್ಯಕೀಯ ಮಹಾವಿದ್ಯಾಲಯ) ಶಿವಮೊಗ್ಗ.
