ಗಿಡಮೂಲಿಕೆ ಮದ್ದುಗಳು ಸುರಕ್ಷಿತವಲ್ಲ…

ಯಾವುದಕ್ಕೆ “ಪರಿಣಾಮ” ಇರುತ್ತದೆಯೋ ಅದಕ್ಕೆ ಅಡ್ಡಪರಿಣಾಮ ಇದ್ದೇ ಇರುತ್ತದೆ. ಅಡ್ಡಪರಿಣಾಮವಿರದಿದ್ದರೆ ಅದು ಔಷಧಿಯೇ ಅಲ್ಲ. ಗಿಡಮೂಲಿಕೆ ಔಷಧಿಗಳು ಅಡ್ಡ ಪರಿಣಾಮ ಹೊಂದಿಲ್ಲ ಎಂಬುದು ದೊಡ್ದ ತಪ್ಪು ನಂಬಿಕೆ.ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಆಗಿರುವ ಡಾ. ಎನ್.ಬಿ.ಶ್ರೀಧರ ಅವರ ಚಿಂತನ ಮಂಥನ ಲೇಖನವನ್ನು ತಪ್ಪದೆ ಮುಂದೆ ಓದಿ…

ಪತಂಜಲಿಯ ಬಾಬಾ ರಾಮದೇವ ಮತ್ತು ಆಚಾರ್ಯ ಬಾಲಕೃಷ್ಣ ಇವರನ್ನು ಸುಪ್ರೀಮ್ ಕೋರ್ಟು ಹೆಡೆಮುರಿ ಕಟ್ಟಿ “ಕ್ಷಮೆ ಕೋರು” ಎಂದು ಆಜ್ಞಾಪಿಸಿದ ಮೇಲೆ ಎಲ್ಲರ ಗಮನ ಗಿಡಮೂಲಿಕೆ ಔಷಧಿಗಳತ್ತ ನೆಟ್ಟಿದೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರಪಂಚದ ಶೇ 70-80 ರಷ್ಟು ಜನ ತಮ್ಮ ಪ್ರಾಥಮಿಕ ಆರೋಗ್ಯ ರಕ್ಷಣೆಗೆ ಗಿಡಮೂಲಿಕೆ ಮೂಲದ ಔಷಧಗಳನ್ನೇ ಅವಲಂಭಿಸಿದ್ದಾರೆ. ಅನೇಕ ಗಿಡಮೂಲಿಕೆ ಔಷಧಗಳು ಆರೋಗ್ಯಪೂರಕವೆಂದು ಯಾವುದೇ ವೈದ್ಯರ ಚೀಟಿ ಇಲ್ಲದೆ ಔಷಧ ಅಂಗಡಿಯಲ್ಲೇ ದೊರೆಯುತ್ತಿವೆ. ಆದರೆ ಇತ್ತೀಚಿನ ವರದಿಯ ಪ್ರಕಾರ ಇವುಗಳನ್ನು ಸೇವಿಸಿದ ಜನ ಇವುಗಳ ಅಗೋಚರ, ಅಘೋಷಿತ ವಿಷಬಾಧೆಗಳಿಂದ ಬಳಲಿ ಸಾವನ್ನಪ್ಪುತ್ತಿದ್ದಾರೆ. ಅನೇಕ ಸಲ ಈ ರೀತಿಯ ಅಡ್ಡಪರಿಣಾಮಗಳ ಬಗ್ಗೆ ಯಾವುದೇ ವರದಿಯಾಗುವುದಿಲ್ಲ. ಮತ್ತು ಇವುಗಳನ್ನು ದಾಖಲಿಸುವ ಯಾವುದೇ ವ್ಯವಸ್ಥೆಯೂ ಸಹ ಇಲ್ಲ. ಅನೇಕ ಗಿಡಮೂಲಿಕೆಗಳ ಔಷಧಿ ಮಿಶ್ರಣಗಳಲ್ಲಿ ಅತ್ಯಂತ ಗರಿಷ್ಟ ಮಟ್ಟದ ನಿಷೇದಿತ ಕೀಟನಾಶಕಗಳು, ಜೀವನಿರೋಧಕಗಳು, ಭಾರಲೋಹವಿಷಗಳು,ರಾಸಾಯನಿಕಗಳು, ಶಿಲೀಂದ್ರವಿಷಗಳು ಅವುಗಳನ್ನು ಬೆಳೆಯುವ, ಔಷಧ ಮಾಡುವಾಗ ಅಗತ್ಯಕ್ಕಿಂತ ಹೆಚ್ಚಿಗೇ ಇರುತ್ತವೆ ಎಂಬುದು ವರದಿಯಾಗಿದೆ. ಈ ಔಷಧಿಗಳನ್ನು ತಯಾರಿಸುವಾಗ ಉತ್ತಮ ಬೆಳೆಯುವ ವಿಧಾನ, ಉತ್ತಮ ಪ್ರಯೋಗಾಲಯ ಪರಿಸರ, ಉತ್ತಮ ತಯಾರಿಕಾ ವಿಧಾನ,ಉತ್ತಮ ಸರಬರಾಜು ವಿಧಾನ, ಉತ್ತಮ ಸಂಗ್ರಹ ವಿಧಾನ ಇವು ಯಾವುದೂ ಸಹ ಪಾಲನೆಯಾಗುವುದಿಲ್ಲ (ಚಾನ್, 2003).

ಇವುಗಳನ್ನು ಆಧುನಿಕ ವಿಧಾನದಲ್ಲಿ ತಪಾಸಣೆ ಮಾಡಲು ಒಂದು ವ್ಯವಸ್ಥೆ ಇಲ್ಲದಿರುವುದೇ ಇದಕ್ಕೆಲ್ಲಾ ಕಾರಣವಾಗಿದೆ. ಪಾರಂಪರಿಕ ವಿಧಾನದಲ್ಲಿ ತಯಾರಿಸಿ ನೀಡಲಾಗುತ್ತಿದ್ದ ಔಷಧಿಗಳು ವಾಣಿಜ್ಯೀಕರಣಗೊಂಡು ಅವುಗಳಿಗೆ ಯಾವುದೇ ದಿಕ್ಕುದೆಸೆಯಿಲ್ಲದೆ ಮನುಷ್ಯರ ಜೀವಕ್ಕೆ ಮಾರಕವಾಗಿವೆ ಎನ್ನುತ್ತದೆ ವರದಿಯೊಂದು. ಆಧುನಿಕ ವೈದ್ಯಕೀಯ ಪದ್ಧತಿಯ ಔಷಧಿಗಳನ್ನು ಅವುಗಳ ಅಡ್ಡಪರಿಣಾಮ ಪರಿಶೀಲಿಸಿಯೇ ಮಾರುಕಟ್ಟೆಗೆ ಬಿಡಲಾಗುತ್ತಿದೆ. ಆದರೆ ಗಿಡಮೂಲಿಕೆ ವಿಧಾನದ ಔಷಧಗಳು ಯಾವುದೇ ಪರಿಕ್ಷೆ, ನಿಯಂತ್ರಣವಿಲ್ಲದೇ ಮಾರುಕಟ್ಟೆಗೆ ಆರೋಗ್ಯವರ್ಧಕದ ಹೆಸರಿನಲ್ಲಿ ನುಗ್ಗುವುದರಿಂದ ಮತ್ತು ಇವುಗಳನ್ನು ನಿಯಂತ್ರಿಸಲು ಉತ್ತಮ ಕಾನೂನುಗಳೇ ಇಲ್ಲದಿರುವುದರಿಂದ ಆಧುನಿಕ ಔಷಧಿಗಳಿಗಿಂತ ಇವೇ ಬಹಳ ಅಪಾಯಕಾರಿ ಎನ್ನುತ್ತದೆ ಸಂಶೋಧನೆ (ಟೌಟಿ ಮತ್ತಿತರು, 2021). ಭಾರಲೋಹಗಳಂತೂ ಗಿಡಮೂಲಿಕೆ ಔಷಧಗಳಲ್ಲಿ ಮನುಷ್ಯರು ಪ್ರತಿದಿನ ಸೇವಿಸಿ ತಡೆದುಕೊಳ್ಳುವ ಸಾಮರ್ಥ್ಯಕ್ಕಿಂತ ಜಾಸ್ತಿಯೇ ಎಂಬುದು ವಿಜ್ಞಾನಿಗಳ ಅಂಬೋಣ (ಲೋಕಟೆಲ್ಲಿ ಮತ್ತಿತರು, 2014).

ಫೋಟೋ ಕೃಪೆ : google

ಆದರೆ ಸಾಮಾನ್ಯ ಜನರ ಪರಿಕಲ್ಪನೆಯೇ ಬೇರೆ. ನೈಸರ್ಗಿಕವಾಗಿ ದೊರಕುವ ಗಿಡಮೂಲಿಕೆಯ ಮೂಲದ ಎಲ್ಲಾ ಔಷಧಗಳು ಅತ್ಯಂತ ಸುರಕ್ಷಿತ ಎಂಬುದು ಅಕ್ಷರಸ್ಥರನ್ನು ಸೇರಿಸಿಕೊಂಡೇ ಶೇ 95 ರಷ್ಟು ಜನರ ಅಭಿಪ್ರಾಯ. ಆಧುನಿಕ ವೈದ್ಯಕೀಯ ಪದ್ಧತಿಯ ಸಂಶ್ಲೇಷಿತ ಔಷಧಿಗಳಿಗಿಂತ ಈ ಗಿಡಮೂಲಿಕೆ ಉತ್ಪನ್ನಗಳ ಮೇಲೆ ವಿವಿಧ ಅತ್ಯಂತ ಕಠಿಣ ನಿಯಂತ್ರಕ ಮಾನದಂಡಗಳನ್ನು ಹೇರುವದನ್ನು ಕಡ್ಡಾಯ ಮಾಡಬೇಕೆಂಬ ಅಭಿಪ್ರಾಯಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಸಹ ಸಹಮತ ಹೊಂದಿದೆ. ವಿಶ್ವ ಆರೋಗ್ಯ ಸಂಸ್ಥೆಯು ಇವುಗಳ ಸುರಕ್ಷತೆಯ ಬಗ್ಗೆ ಮಾರ್ಗದರ್ಶಿ ಸೂತ್ರಗಳನ್ನು 2004 ರಲ್ಲಿಯೇ ಬಿಡುಗಡೆ ಮಾಡಿದರೂ ಸಹ ಇದರ ಪಾಲನೆಯಾಗುತ್ತಿರುವುದು ಅಷ್ಟಕ್ಕಷ್ಟೇ (ವಿಆಸಂ, 2004).

ಭಾರತದಲ್ಲಿಯೂ ಸಹ ಇವುಗಳ ನಿಯಂತ್ರಣ ಆಯುಶ್ ಇಲಾಖೆಯ ಹತೋಟಿಯಲ್ಲಿದ್ದು ಇದೂ ಸಹ ಅನೇಕ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಿದ್ದರೂ ಸಹ ಇವು ಅಷ್ಟು ಕಠಿಣವಾಗಿಲ್ಲ ಮತ್ತು ಇವುಗಳನ್ನು ತಯಾರಿಸಲು ರಹದಾರಿ ಪಡೆಯುವುದು ಮತ್ತು ಮಾರಾಟ ಮಾಡಲು ಅತ್ಯಂತ ಕಠಿಣ ಮಾರ್ಗದರ್ಶಿ ಸೂತ್ರಗಳಿಲ್ಲ (ಸಿಸಿಆರ್‌ಎಎಸ್, 2018). ಇವು “ಪಾರಂಪರಿಕ ಔಷಧ”ಗಳೆಂದು ಇವುಗಳ ಬಗ್ಗೆ ಬಹಳ ಜನರ ಅಭಿಮಾನ ಮತ್ತು ಸಹಾನುಭೂತಿ ಮತ್ತು ಒಂದಿಷ್ಟು ಮೃದು ದೋರಣೆಯೂ ಸಹ ಕಾರಣವಿರಬಹುದು.

ಫೋಟೋ ಕೃಪೆ : google

ಯಾವುದಕ್ಕೆ “ಪರಿಣಾಮ” ಇರುತ್ತದೆಯೋ ಅದಕ್ಕೆ ಅಡ್ಡಪರಿಣಾಮ ಇದ್ದೇ ಇರುತ್ತದೆ. ಅಡ್ಡಪರಿಣಾಮವಿರದಿದ್ದರೆ ಅದು ಔಷಧಿಯೇ ಅಲ್ಲ. ಅಡ್ಡ ಪರಿಣಾಮದ ಹಂತಗಳು ಬೇರೆಯಿರಬಹುದು. ಗಿಡಮೂಲಿಕೆ ಔಷಧಿಗಳು ಅಡ್ಡ ಪರಿಣಾಮ ಹೊಂದಿಲ್ಲ ಎಂಬುದು ದೊಡ್ದ ತಪ್ಪು ನಂಬಿಕೆ. ಈವರೆಗೂ ಸಹ ಶೂನ್ಯ ಅಡ್ಡ ಪರಿಣಾಮವಿಲ್ಲದ ಯಾವುದೇ ಔಷಧಿಯನ್ನು ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಅವುಗಳ ಅಡ್ದ ಪರಿಣಾಮವನ್ನು ಅತ್ಯಂತ ಸೂಕ್ತ ರೀತಿಯಲ್ಲಿ ಆಧುನಿಕ ಔಷಧಿಗಳ ವಿಧಾನದಲ್ಲಿ ಪರೀಕ್ಷೆ ಮಾಡಿಲ್ಲ ಅಷ್ಟೇ. ಅದರಲ್ಲಿಯೂ ಗಿಡಮೂಲಿಕೆ ಪಶು ಔಷಧಿಗಳನ್ನು ತಯಾರಿಸಲು, ಮಾರಾಟ ಮಾಡಲು, ನಿಯಂತ್ರಣ ಮಾಡಲು ಯಾವುದೇ ಸೂಕ್ತ ವಿಧಾನಗಳಿಲ್ಲ.

ಆದರೆ ಇವುಗಳಿಂದ ಜನರ ಜೀವಕ್ಕೆ ಹಾನಿಯಾದಾಗ ಯಾರು ಹೊಣೆ ಎಂಬುದು ಸಹಜವಾದ ಪ್ರಶ್ನೆಗೆ ಉತ್ತರವೇ ಇಲ್ಲ. ಗಿಡಮೂಲಿಕೆ ಔಷಧಗಳು ಸುರಕ್ಷಿತವಾಗಿ ಉಪಯೋಗವಾಗಬೇಕಾದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಮತ್ತು ಭಾರತ ಸರ್ಕಾರದ ಮಾರ್ಗದರ್ಶಿ ಸೂತ್ರಗಳು ಅತ್ಯಂತ ಕಟ್ಟು ನಿಟ್ಟಾಗಿ ಮತ್ತು ನಿಖರವಾಗಿ ಅನುಷ್ಠಾನವಾಗುವ ಅವಶ್ಯಕತೆ ಇದೆ.


  • ಡಾ. ಎನ್.ಬಿ.ಶ್ರೀಧರ – ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಪಶುವೈದ್ಯಕೀಯ ಔಷಧಶಾಸ್ತ್ರ ಮತ್ತು ವಿಷಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading