ಮಲೆನಾಡಿನ ಕಾಡು, ಗುಡ್ಡ, ಬಯಲು ಎಲ್ಲೆಡೆ ತಾನಾಗಿಯೇ ಬೆಳೆಯುವ ಕೊಡಸ ಪೊದೆ ಗಿಡದ ಕುರಿತು ಮಂಜುನಾಥ್ ಪ್ರಸಾದ್ ಅವರು ಓದುಗರೊಂದಿಗೆ ಅದರ ಮಹತ್ವದ ಕುರಿತು ಹಂಚಿಕೊಂಡಿದ್ದಾರೆ…
ಇದು, Holarrhena antidysenterica – Apocynaceae ಕುಟುಂಬಕ್ಕೆ ಸೇರಿದ ಪೊದೆ ಗಿಡ. ಮಲೆನಾಡಿನ ಕಾಡು, ಗುಡ್ಡ, ಬಯಲು ಎಲ್ಲೆಡೆ ತಾನಾಗಿಯೇ ಬೆಳೆಯುವ ಇದು ಹೂ ಬಿಡುವುದು ಏಪ್ರಿಲ್ – ಮೇ ತಿಂಗಳಲ್ಲಿ ಸಾಮಾನ್ಯವಾಗಿ ಬೆಳೆಯುತ್ತದೆ.
ಇದಕ್ಕೆ ಕೊಡಸ, ಕೊಡಸಿಗ, ಕೂಟಜ, ಗಿರಿಮಲ್ಲಿಕಾ ಇತ್ಯಾದಿ ಹೆಸರುಗಳಿವೆ. ಗಿಡದ ಹೆಸರೇ ಹೇಳುವಂತೆ ಈ ಸಸ್ಯ dysentery ಅಂದರೆ ಆಮಶಂಕೆಗೆ ದಿವ್ಯವಾದ ಔಷಧ. ಭೇದಿ, ರಕ್ತ ಭೇದಿ, ಆಮಶಂಕೆ ಹಾಗೂ ಇತರ ಜೀರ್ಣ ಕ್ರಿಯೆಗೆ ಸಂಬಂದಿಸಿದ ಯಾವುದೇ ತೊಂದರೆಗಳಿಗೆ ಇದರ ಬೇರನ್ನು ತೈದು ಮಾಡಿದ ಚೂರ್ಣ ಕೊಡುವ ಪದ್ದತಿ ಈಗಲೂ ಇದೆ.
ಗಿಡದ ಬೇರನ್ನು ಚೆನ್ನಾಗಿ ಕುದಿಸಿ ತಯಾರಿಸಿದ ಕಷಾಯದಿಂದ, ಯಾವುದೇ ಗಾಯ, ಕಜ್ಜಿ, ಕುರ ಮೊದಲಾದ ಚರ್ಮದ ತೊಂದರೆಗಳನ್ನು ತೊಳೆಯುತ್ತಿದ್ದರೆ, ಅವು ಬೇಗನೆ ಗುಣವಾಗುವುದು. ಗಿಡದ ಹೂವು, ಎಳೆ ಕಾಯಿಗಳಿಂದ ಪಲ್ಯ, ಚಟ್ನಿ, ತಂಬುಳಿ ಮುಂತಾದವುಗಳನ್ನು ಮಾಡುತ್ತಾರೆ. ವರ್ಷಕ್ಕೆ ಒಮ್ಮೆಯಾದರೂ ಇದನ್ನು ಸೇವಿಸುವ ಪದ್ದತಿ ಇದೆ.
ಪರಿಮಳಯುಕ್ತ ಶುಭ್ರ ಬಿಳಿ ಹೂವಿನ ಗೊಂಚಲು ತುಂಬಾ ಆಕರ್ಷಕ. ಇತ್ತೀಚೆಗೆ ಕಾಡುಗಳು ನಾಶವಾಗುತ್ತಿರುವುದರಿಂದ ಈ ಉಪಯುಕ್ತ ಗಿಡವನ್ನು ಮನೆಗಳಲ್ಲಿ ಬೆಳೆಸಿ ಉಳಿಸಬೇಕಿದೆ.
ಗಮನಿಸಿ :
ಈ ಲೇಖನ ಸದಸ್ಯರ ಮಾಹಿತಿಗಾಗಿ ಮಾತ್ರ. ಔಷಧಿಯಾಗಿ ಉಪಯೋಗಿಸುವುದಾದಲ್ಲಿ ಹೆಚ್ಚಿನ ಮಾಹಿತಿಗಾಗಿ ವಿಚಾರಿಸಿ.
- ಮಂಜುನಾಥ್ ಪ್ರಸಾದ್
