‘ಹೋಳಿ ಹುಣ್ಣಿಮೆ’ ಕವನ : ಶಿವದೇವಿ ಅವನೀಶಚಂದ್ರ

ಚಿಮ್ಮಿದೆ ಪಿಚಕಾರಿಯಲಿ, ಹಲವು ಬಣ್ಣದ ಓಕುಳಿ… ಕಾಮದಹನದ ಮುದವ ನೀಡುತ, ಇರುವ ಬಣ್ಣವ ಮರೆಸಿದೆ…ಕವಿಯತ್ರಿ ಶಿವದೇವಿ ಅವನೀಶಚಂದ್ರ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…

ಹೋಳಿ ಹುಣ್ಣಿಮೆ ಮತ್ತೆ ಬಂದಿದೆ
ರಕ್ತಗ್ರಹಣವ ತಂದಿದೆ
ಜಗದ ನೇತಾರರ ಮನದಲಿ
ರಕ್ತದಾಹವ ತುಂಬಿದೆ

ಯುದ್ಧೋನ್ಮಾದದ ಸುಳಿಯಲಿ
ಜಗವೇ ಕಂಪಿಸಿ ತಪಿಸಿದೆ.
ಲೇಸ ಬಯಸುವ ಮನಗಳೆಲ್ಲ
ಎಲ್ಲೋ ಅಡಗಿ ಕುಳಿತಿವೆ

ಸೃಷ್ಠಿ ತಾ ಅಗಣಿತ ಸಮಸ್ಯೆಗಳ
ಹೊತ್ತು ನಲುಗಿ ನಿಂತಿದೆ
ನರನ ಮನದಲಿ ವಿವೇಕವೇಕೋ
ಶೂನ್ಯವಾಗಿ ಹೋಗಿದೆ

ಏನೂ ಅರಿಯದಂತೆ ಮತ್ತೆ ಇಳೆ
ಹೋಳಿ ರಂಗಲಿ ನಲಿದಿದೆ
ಗಿಡಮರಗಳ ನೆತ್ತಿಯಲ್ಲಿ ಬಣ್ಣಬಣ್ಣದ ಹೂವ ಚಾಮರ ಬೀಸಿದೆ

ಕೋಗಿಲೆ ಕುಕಿಲುತಿದೆ ಮಾಮರದಲಿ
ದುಂಬಿಗಡಣವು ಮೊರೆದಿದೆ
ಮಕರಂದವೀಂಟಿದ ಮೋದದಲಿ
ಉಲ್ಲಾಸದಲಿ ಉಡ್ಡಯನ ಸಾಗಿದೆ

ಗಂಧ ತಂದಿದೆ ಮಾರುತ
ಆಹ್ಲಾದವ ಸಾರುತ
ಪ್ರಕೃತಿಯ ಪ್ರತಿಕೃತಿಯಂತೆ
ನರರಿಗೂ ಬಣ್ಣವ ಪೂಸುತ

ಚಿಮ್ಮಿದೆ ಪಿಚಕಾರಿಯಲಿ
ಹಲವು ಬಣ್ಣದ ಓಕುಳಿ
ಕಾಮದಹನದ ಮುದವ ನೀಡುತ
ಇರುವ ಬಣ್ಣವ ಮರೆಸಿದೆ

ದುಷ್ಟಟತನವ ಸುಟ್ಟು ಹಾಕುತ
ಹೋಳಿ ವಿಜಯದ ನಗೆ ನಕ್ಕಿದೆ
ಶಿಷ್ಟ ಪಾಲನೆಯನ್ನು ಮಾಡುತ
ದುರುಳರಿಗೆ ಚರಮಗೀತೆಯ ಹಾಡಿದೆ

ತನ್ನಿ ಪಿಚಕಾರಿಯನು ನೀವು
ರಂಗಿನೋಕುಳಿಯಾಡುವ
ತರತಮಗಳನೆಲ್ಲ ನೀಗುತ
ಕೃಷ್ಣನೊಡನಾಟದಿ ಸುಖಿಸುವ


  • ಶಿವದೇವಿ ಅವನೀಶಚಂದ್ರ – ಕವಿಯತ್ರಿ, ಅಂಕಣಕಾರ್ತಿ, ಕೊಡಗು.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading