ವೃತ್ತಿಯಲ್ಲಿ ಇಂಜಿನೀಯರ್ ಆದ ಶ್ರೀನಿವಾಸ್, ಮೂಲತಃ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನವರು. ದಂಪತಿಗಳಿಬ್ಬರಿಗೂ ಕಾರಿನಲ್ಲಿ ‘ಲಾಂಗ್ ಡ್ರೈವ್’ ಹೋಗಿದ್ದು ಲಂಡನ್ ಗೆ. ಅವರ ರೋಚಕ ಪ್ರವಾಸ ಕಥನವೇ ‘ಸ್ವಂತ ಕಾರಿನಲ್ಲಿ ಬೆಂಗಳೂರಿನಿಂದ ಲಂಡನ್ ಗೆ’. ಈ ಕೃತಿಯ ಕುರಿತು ಲೇಖಕರಾದ ಎನ್.ವಿ.ರಘುರಾಂ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ: ಸ್ವಂತ ಕಾರಿನಲ್ಲಿ ಬೆಂಗಳೂರಿನಿಂದ ಲಂಡನ್ ಗೆ – ಒಂದು ರೋಚಕ ಪ್ರವಾಸ ಕಥನ.
ಲೇಖಕ: ಶ್ರೀನಿವಾಸ ಎಂ.ಜಿ.ಪಾಣಿಭಾತೆ.
ಪ್ರಕಾಶನ: ಪಾಣಿಭಾತೆ ಪ್ಲಬ್ಲಿಕೇಶನ್.
ಬೆಲೆ:ರೂ.380.
ಪುಟಗಳು:332
ವೃತ್ತಿಗೂ ಮತ್ತು ವೈಯಕ್ತಿಕ ಜೀವನಕ್ಕೂ ಸಮಾನವಾಗಿ ಆದ್ಯತೆ ಕೊಟ್ಟು ಜೀವನ ನಡೆಸುವ ಸಣ್ಣ ಗುಂಪಿಗೆ ಸೇರಿರುವವರು ಶ್ರೀಯುತ ಶ್ರೀನಿವಾಸ ಎಂ.ಜಿ.ಪಾಣಿಭಾತೆಯವರು. ಇವರ ಸಹಧರ್ಮಿಣಿ ಶ್ರೀಮತಿ ಸವಿತಾ ಶ್ರೀನಿವಾಸ ಗೃಹಿಣಿ. ದಂಪತಿಗಳಿಬ್ಬರಿಗೂ ಕಾರಿನಲ್ಲಿ ‘ಲಾಂಗ್ ಡ್ರೈವ್’ ಹೋಗಲು ಇಷ್ಟಪಡುವವರು. ಇವರು ಭಾರತದ ಉದ್ದಗಲವನ್ನು ಕಾರಿನಲ್ಲಿ ಸಂಚರಿಸಿದ್ದಾರೆ. ಆದರೆ ವಿದೇಶ ಪ್ರವಾಸದ ಯೋಚನೆ ಬಂದಾಗ ಕಾರಿನಲ್ಲಿ ಪ್ರಯಾಣ ಮಾಡುವ ಯೋಚನೆ ಮಾಡುವವರು ಬೆರಳೆಣಿಕೆಯಷ್ಟು ಜನರು ಮಾತ್ರ. ಆ ವಿಶೇಷ ಗುಂಪಿನಲ್ಲಿ ಇವರು ಸೇರಿದ್ದಾರೆ. ವೃತ್ತಿಯಲ್ಲಿ ಇಂಜಿನೀಯರ್ ಆದ ಶ್ರೀನಿವಾಸ್, ಮೂಲತಃ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನವರಾಗಿದ್ದು, ಕಳೆದ 25 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
“ಅಡ್ವೆಂಚರ್ಸ ಓವರ್ಲ್ಯಾಂಡ್” ಎಂಬ ಟ್ರಾವಲ್ ಕಂಪನಿಯವರು ಆಯೋಜಿದ ಅಂತಾರಾಷ್ಟ್ರೀಯ ಪ್ರವಾಸದಲ್ಲಿ ಶ್ರೀನಿವಾಸ ದಂಪತಿಗಳು ಭಾಗವಹಿಸಿ ತಮ್ಮ VW Tiguan ಕಾರಿನಲ್ಲಿ ಎಪ್ರಿಲ್ 13, 2024ರಿಂದ ಜೂನ್ 27, 2024ರವರೆಗೆ 20 ದೇಶಗಳ ಮೂಲಕ ಹಾಯ್ದು ಹೋಗುತ್ತಾ ಲಂಡನ್ ಸೇರಿದ ರೋಚಕ ಪ್ರವಾಸ ಕಥನ ಪುಸ್ತಕ ರೂಪದಲ್ಲಿ ನಮ್ಮ ಮುಂದೆ ಬಂದಿದೆ.

ಹಾಗೆ ನೋಡಿದರೆ “ರಸ್ತೆ” ಎನ್ನುವುದು ಭೂಮಿಯ ಮೇಲೆ ಎಳೆದ ಒಂದಿಷ್ಟು ರೇಖೆಗಳು ಮಾತ್ರ. ರಸ್ತೆಯ ಮೂಲಕ ಬೆಂಗಳೂರಿನಿಂದ ಹೊರಟು 20 ದೇಶಗಳನ್ನು ದಾಟಿ, 19,354 ಕಿಲೋಮೀಟರ್‌ಗಳನ್ನು ಕ್ರಮಿಸಿ, 75 ದಿನಗಳ ಕಾಲ ಸ್ವಂತ ಕಾರಿನಲ್ಲಿ ಡ್ರೈವ್ ಮಾಡಿಕೊಂಡು ಹೋದ ಈ ಸಾಹಸಯಾತ್ರೆ ಕೇವಲ ರೇಖೆಗಳ ಮೇಲೆ ಮಾಡಿದ ಭೌಗೋಳಿಕ ಸಂಚಾರ ಮಾತ್ರವಲ್ಲದೇ, ಅನ್ವೇಷಣೆಯ ಪಥವೇ ಆಗಿದೆ.
ಬೆಂಗಳೂರಿನಿಂದ ಹೊರಟು ಹೈದರಾಬಾದಿನ ಸಮೀಪದಲ್ಲಿರುವ “ಸ್ಟ್ಯಾಚು ಆಫ್ ಈಕ್ವಾಲಿಟಿ” ಶ್ರೀ ರಾಮಾನುಜಾಚಾರ್ಯರ ದೇವಸ್ಥಾನವನ್ನು ತಲುಪುವ ಮೂಲಕ ಪ್ರಾರಂಭವಾದ ಪ್ರವಾಸ ಅನೇಕ ಪ್ರಸಿದ್ಧ ಪ್ರವಾಸಿ ಕ್ಷೇತ್ರಗಳ ಮೂಲಕ ಹಾಯ್ದು ಹೋಗುತ್ತದೆ. ಕಠ್ಮಂಡುವಿನ ಪಶುಪತಿನಾಥ ದೇವಾಲಯ, ವಿಶ್ವದ ಅತಿ ಎತ್ತರದ ‘ರೋಂಗ್ಬುಕ್ ಮೊನಾಸ್ಟರಿ’, ಚೀನಾದ “ಮಿಂಗ್ಯಾ ಶಾನ್” ಮರಳು ದಿಬ್ಬಗಳು, ನಮ್ಮ ಪ್ರಧಾನಿ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿಯವರು ನಿಧನರಾದ ತಾಷ್ಕೆಂಟಿನ ಲೊಟ್ಟೆ ಸಿಟಿ ಹೋಟೆಲ್, ಬಟುಮಿಯಲ್ಲಿನ ‘ಅಲಿ ಮತ್ತು ನಿನೋ’ ಪ್ರತಿಮೆ,…. ಹೀಗೆ ಹತ್ತು ಹಲವು ಸ್ಥಳಗಳ ಮೂಲಕ ಹಾಯ್ದು ಹೋಗುವ ಈ ಪ್ರವಾಸ ಕೆಲವೊಮ್ಮೆ ಸಮುದ್ರ ಮಟ್ಟದಿಂದ 66 ಅಡಿ ಕಡಿಮೆ ಎತ್ತರದಲ್ಲಿದ್ದರೆ, ಕೆಲವೊಮ್ಮೆ ಸಮುದ್ರ ಮಟ್ಟದಿಂದ 15,500 ಆಡಿಯ ಎತ್ತರದ ಜೊತೆಗೆ ಮೈನೆಸ್ 8 ಡಿಗ್ರಿಯ ಪ್ರದೇಶದಲ್ಲಿ ಸಾಗುತ್ತದೆ.
ಪ್ರತಿದಿನ ಮಾಡಿದ ಪ್ರಯಾಣದ ವಿವರಗಳನ್ನು ತಿಳಿಸುತ್ತಾ ಸಾಗುವ ಕಥನ ದಾರಿಯಲ್ಲಿ ಬರುವ ಸ್ಥಳಗಳ ಸಂಕ್ಷಿಪ್ತ ಚರಿತ್ರೆ, ಎದುರಿಸಿದ ಅನೀರಿಕ್ಷಿತ ಸವಾಲುಗಳು, ಗಡಿಗಳನ್ನು ದಾಟುವಾಗ ಆದ ಚಿತ್ರ, ವಿಚಿತ್ರ ತಪಾಸಣೆಗಳು, ತವರೂರನ್ನು ನೆನಪಿಸಿದ ಕ್ಷಣಗಳು, ಅನೀರಿಕ್ಷಿತವಾಗಿ ದೊರತ ಇಡ್ಲಿ ಮತ್ತು ಸಾಂಬಾರ್ ತಂದ ಸಂತೋಷ, ಇತ್ಯಾದಿಗಳನ್ನು ನವಿರಾದ ಅನುಭವಗಳಾಗಿ ಚಿತ್ರಿಸುತ್ತಾ ಓದುಗರನ್ನು ಅವರ ಜೊತೆ ಕರೆದೊಯ್ಯುತ್ತದೆ.

ಅವರು ಪ್ರವಾಸಕ್ಕೆ ಮಾಡಿಕೊಂಡ ತಯಾರಿಯ ಜೊತೆಗೆ ಈ ಪ್ರವಾಸಕ್ಕೆ ಬೇಕಾದ ಸುಮಾರು 63ಲಕ್ಷ ರೂಪಾಯಿಗಳನ್ನು ಹೊಂದಿಸಿಕೊಂಡ ಬಗೆಯನ್ನು ತಿಳಿಸುತ್ತಾರೆ. ಅವರ ಜೊತೆ ಹನ್ನೊಂದು ಕಾರುಗಳಲ್ಲಿ ಹೊರಟ ಸಹಪ್ರಯಾಣಿಕರು ಯಾರು? ಕಾರುಗಳಲ್ಲಿ ಪ್ರಯಾಣಿಸುವಾಗ ಹೇಗೆ ಇವರೆಲ್ಲಾ ಸಂಪರ್ಕದಲ್ಲಿದ್ದರು? ದಾರಿಯಲ್ಲಿ ಸಿಕ್ಕ ಹಳ್ಳ ಕೊಳ್ಳಗಳನ್ನು ಹೇಗೆ ದಾಟಿದರು? “ಡ್ಯಾನ್ಸಿಂಗ್ ಹೌಸ್” ವಿಶೇಷವೇನು? “ಮನ್ನೆಕನ್ ಪಿಸ್” ಸ್ಮಾರಕ ಮತ್ತು “ಡ್ಯಾನ್ಯೂಬ್ ದಂಡೆಯ ಮೇಲಿನ ಶೂಗಳು” ಏನನ್ನು ಪ್ರತಿನಿಧಿಸುತ್ತದೆ? “ಭೂತಯ್ಯನ ಮಗ ಅಯ್ಯು” ಸಿನಿಮಾದಲ್ಲಿ ಎರಡು ರೂಪಾಯಿಗೆ ನಾಲ್ಕು ಜನ ಫುಲ್ ಮೀಲ್ಸ್ ಊಟ ಮಾಡಿದ ಪ್ರಸಂಗಕ್ಕೆ ಹೋಲುವ ಪ್ರಸಂಗ ಯಾವುದು? ಇವೆಲ್ಲವನ್ನು ಪುಸ್ತಕದಲ್ಲಿ ಓದಿ ತಿಳಿದರೆ ಚೆನ್ನ.
ಈ ಪ್ರವಾಸ ಕಥನ ಓದುಗರಿಗೆ ಧೈರ್ಯ, ಯೋಜನೆ, ಸಂಕಲ್ಪ ಮತ್ತು ಕುತೂಹಲದ ಸಂಗಮವನ್ನು ಪರಿಚಯಿಸುತ್ತದೆ. “ಇಂಥ ಸಾಹಸ ಸಾಧ್ಯವೇ?” ಎಂಬ ಪ್ರಶ್ನೆಗೆ “ಸಾಧ್ಯ!” ಎಂಬ ಉತ್ತರವನ್ನು ತಮ್ಮ ಕಾರಿನ ಚಕ್ರಗಳ ಮೇಲೆ ಕೂತು ಬರೆದಿರುವ ಸಾಹಸಿ ದಂಪತಿಗಳ ಜೀವನದ ಅಕ್ಷರಗಳು ಇವು.
ಈ ಪುಸ್ತಕವು ಭೌಗೋಳಿಕ ನಕ್ಷೆಗಿಂತಲೂ ದೊಡ್ಡದಾದ ಮಾನಸಿಕ ನಕ್ಷೆಯನ್ನು ಓದುಗರ ಮುಂದೆ ತೆರೆದು ಇಡುತ್ತದೆ. ಪ್ರಯಾಣವನ್ನು ಪ್ರೀತಿಸುವ ಪ್ರತಿಯೊಬ್ಬರಿಗೂ, ಕನಸನ್ನು ದಾರಿ ಮಾಡಿಕೊಂಡು ನಡೆಯುವ ಪ್ರತಿಯೊಬ್ಬರಿಗೂ ಈ ಪುಸ್ತಕ ಪ್ರೇರಣೆಯ ದೀಪವೇ ಸರಿ.

ಬೆಂಗಳೂರಿನಿಂದ ಹೊರಟ ಚಕ್ರಗಳು ದಾರಿಯಲ್ಲಿ ಬದಲಾದ ಗಾಳಿಯ ದಿಕ್ಕು, ಭಾಷೆ ಮತ್ತು ಬಣ್ಣಗಳು, ಸಂಸ್ಕೃತಿ ಮತ್ತು ಸ್ವರಗಳನ್ನು ನೋಡುತ್ತಾ ಮುಂದುವರೆದು ಕೊನೆಯಲ್ಲಿ ಲಂಡನ್ ತಲುಪಿದಾಗ, ಒಂದು ಸುಂದರ ಕನಸು ಸಾಕ್ಷಾತ್ಕಾರವಾದ ಕ್ಷಣಕ್ಕೆ ನಾವು ಸಾಕ್ಷಿಯಾದಂತೆ ಭಾಸವಾಗುತ್ತದೆ. ಆ ಕ್ಷಣದಲ್ಲಿ ಓದುಗರು ಕುಳಿತಲ್ಲಿಯೇ ಎದ್ದು ನಿಂತು ಚಪ್ಪಾಳೆ ತಟ್ಟಿ, ಅವರನ್ನು ಬಿಗಿದಪ್ಪಿಕೊಂಡು ಅಭಿನಂದಿಸಿದಂತೆ ಮನದಲ್ಲಿ ಭಾವನೆ ಮೂಡಿದರೆ ಆಶ್ಚರ್ಯವಿಲ್ಲ.
ಯಶಸ್ವಿಯಾಗಿ ರಸ್ತೆಯ ಮೂಲಕ ಲಂಡನ್ ವರೆಗೆ ಪ್ರಯಾಣ ಮಾಡಿದ ಶ್ರೀನಿವಾಸ ದಂಪತಿಗಳಿಗೆ ಹಾರ್ದಿಕ ಅಭಿನಂದನೆಗಳು ಮತ್ತು ತಮ್ಮ ರೋಚಕ ಪ್ರವಾಸ ಕಥನವನ್ನು ಹಂಚಿಕೊಂಡಿರುವುದಕ್ಕೆ ಧನ್ಯವಾದಗಳು.
- ಎನ್.ವಿ.ರಘುರಾಂ – ನಿವೃತ್ತ ಅಧೀಕ್ಷಕ ಅಭಿಯಂತರ (ವಿದ್ಯುತ್), ಕ.ವಿ.ನಿ.ನಿ.
