ಗಜಲ್ ಮಾಂತ್ರಿಕ : ಪಂಕಜ್ ಉದಾಸ್

ಪಂಕಜ್ ಉದಾಸ್ ಅವರು ಅಂತರರಾಷ್ಟ್ರೀಯ ಗಜಲ್ ಗಾಯಕರಷ್ಟೇ ಅಲ್ಲ, ಸಂಗೀತ ಮಾಂತ್ರಿಕರಾಗಿದ್ದರು. ನಮ್ಮನ್ನು ರಂಜಿಸಿದ ಪಂಕಜ್ ಉದಾಸ್ ಅವರಿಗೆ ಕೋಟಿ ಕೋಟಿ ನಮನಗಳು.

ಪ್ರೀತಿಯ ದೊಡ್ಡಪ್ಪನ ಸಾವಿನ ನಡುವೆಯೂ ಕಾರ್ಯಕ್ರಮ ತೂಗಿಸಿದ ಸುಂದರ ಸ್ವರ ಮಾಂತ್ರಿಕ ಪಂಕಜ್ ಉದಾಸ್.  ಗಾಯಕರುಗಳೆಲ್ಲ ಸುಂದರರಲ್ಲ, ಅವರ ಗಾಯನ ಪ್ರತಿಭೆ ಅವರ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಅಗಲಿದ ಖ್ಯಾತ ಗಜಲ್ ಗಾಯಕ ಪಂಕಜ್ ಉದಾಸ್ ಒಬ್ಬ ಸುಂದರ ಸ್ವರ ಮಾಂತ್ರಿಕ.

ಎಷ್ಟೋ ಹಾಡುಗಾರರಿಗೆ ವಾದ್ಯಗಳನ್ನು ನುಡಿಸುವ ಶೈಲಿ ಬರುವುದಿಲ್ಲ. ಅವರ ಪಾಡಿಗೆ ಹಾಡುತ್ತಿರುತ್ತಾರೆ. ಸಾಮಾನ್ಯ ವಾದನ ಹಾರ್ಮೋನಿಯಂ. ನಮ್ಮ ಮೈಸೂರು ಅನಂತಸ್ವಾಮಿ, ರಾಜು ಅನಂತಸ್ವಾಮಿ ಮುಂದೆ ಹಾರ್ಮೋನಿಯಂ ಇದ್ದೇ ಇರುತ್ತಿತ್ತು. ಅದರ ತಿದಿ ಒತ್ತದೇ ಅವರಿಗೆ ಸ್ವರ ಹೊಮ್ಮುತ್ತಿರಲಿಲ್ಲ.

ಪಂಕಜ್ ಉದಾಸ್ ಓರ್ವ ಅಂತರರಾಷ್ಟ್ರೀಯ ಗಜಲ್ ಗಾಯಕ ಅಷ್ಟೇ ಅಲ್ಲ ಸಂಗೀತ ಮಾಂತ್ರಿಕ. ಸಾಮಾನ್ಯವಾಗಿ ಇಳೆಯರಾಜ ಅವರನ್ನು ಸಂಗೀತ ಮಾಂತ್ರಿಕ ಎನ್ನುತ್ತೇವೆ.ಅವರು ಸ್ವರ ಸಂಯೋಜಕ, ಗಾಯಕ, ಅವರ ಬೆರಳುಗಳು ಕೂಡ ಹಾರ್ಮೋನಿಯಂ ಪೆಟ್ಟಿಗೆ ಮೇಲೆ ಇರುತ್ತದೆ. ವಿದೇಶದ ಎಂತಹ ದೊಡ್ಡ ಕಾರ್ಯಕ್ರಮವೇ ಇರಲಿ ಅವರ ಹಿಂದೆ ಹಾರ್ಮೋನಿಯಂ ಗೊಂದು ಸ್ಥಾನ ಇದ್ದೇ ಇರುತ್ತದೆ. ಹಾಗೆಯೇ ಪಂಕಜ್ ಉದಾಸ್ ಕೂಡ.

ಈ ಶತಮಾನಕ್ಕೂ ಹಳ್ಳಿ ಮೇಷ್ಟ್ರುಗಳು ನಾಟಕ ಕಲಿಸುವ ಹಾರ್ಮೋನಿಯಂನ ಜೀವಂತವಾಗಿಟ್ಟಿದ್ದಾರೆ. ಇಂತಹ ಮೇರು ಗಾಯಕ ಪಂಕಜ್ ಉದಾಸ್ ನಮ್ಮಕನ್ನಡ ಹಾಡಿಗೂ ಪರಿಚಿತರು. ಹಂಸಲೇಖ “ಚೆಂದಕಿಂತ ಚೆಂದ ನೀನೇ ಸುಂದರ” ಗಜಲ್ ಗೀತೆಯನ್ನು ಸ್ಪರ್ಶ ಚಿತ್ರಕ್ಕಾಗಿ ಹಾಡಿಸಿದ್ದರು. ಆ ಗೀತೆ ಈಗಲೂ ಪ್ರಸಿದ್ದ ಗೀತೆಗಳ ಆಯ್ಕೆಯಲ್ಲೊಂದಾಗಿ ಚಾಲ್ತಿಯಲ್ಲಿದೆ.

ಫೋಟೋ ಕೃಪೆ : ಗೂಗಲ್

ಇಂತಹ ಗಜಲ್ ಗಾಯಕನನ್ನು‌ ನಾವು ಪ್ರೆಸ್ ಕ್ಲಬ್ ಸಂಗೀತ ಸಂಜೆಗೆ ಕರೆಸಿದ್ದೆವು ಎನ್ನವುದಕ್ಕಿಂತ ಅವರಿಗೂ ಬೆಂಗಳೂರಿಗೆ ಬಂದು ಹಾಡಬೇಕು ಎಂಬ ಖಯ್ಯಾಲಿತ್ತು.
2005 ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದರು.

ನಮ್ಮ ಪ್ರೆಸ್ ಕ್ಲಬ್ ರಿನೋವೇಶನ್ ಬಹುತೇಕ ಕೆಲಸಗಳನ್ನು ಅವರು ಲೋಕೋಪಯೋಗಿ ಸಚಿವರಾದಾಗಿನಿಂದ ಮಾಡಿ ಕೊಡುತ್ತಲೇ ಇದ್ದರು. ನಾನು ಪ್ರೆಸ್ ಕ್ಲಬ್ ಉಪಾಧ್ಯಕ್ಷ, ಸಾಂಸ್ಕೃತಿಕ ಸಮಿತಿ ಸಂಚಾಲಕ ಕೂಡಾ. ಲಂಕೇಶ್ ಪತ್ರಿಕೆಯ ಸದಾಶಿವ ಶೆಣೈ ಕಾರ್ಯದರ್ಶಿ, ಹಿಂದೂ ಪತ್ರಿಕೆಯ ಅರಕೆರೆ ಜಯರಾಮ್ ಅಧ್ಯಕ್ಷರು.

ಹಾಗಾಗಿ ಪ್ರತಿ ಎರಡನೇ ಶನಿವಾರ ಪ್ರೆಸ್ ಕ್ಲಬ್ ನಲ್ಲಿ ಏನಾದರೊಂದು ಸಂಗೀತ ಸಾಹಿತ್ಯ ಕಾರ್ಯಕ್ರಮ ಏರ್ಪಡಾಗುತ್ತಿತ್ತು.ಎಷ್ಟರ ಮಟ್ಟಿಗೆ ಅಂದರೆ ನಮ್ಮ ಪ್ರೆಸ್ ಕ್ಲಬ್ ಕುಟುಂಬವರ್ಗ ಯಾವ ಆಹ್ವಾನ ಇಲ್ಲದಿದ್ದರೂ ಎರಡನೇ ಶನಿವಾರ ಪ್ರೆಸ್ ಕ್ಲಬ್ ಗೆ ಫ್ಯಾಮಿಲಿ ಸಮೇತರಾಗಿ ಹಾಜರಾಗುತ್ತಿದ್ದರು.

ಆ ದಿನಗಳು ಸುವರ್ಣ ದಿನಗಳು ಸರಿ. ಹೀಗೆ ಪ್ರೆಸ್ ಕ್ಲಬ್ ಆರೋಗ್ಯ ನಿಧಿ ಸ್ಥಾಪಿಸಿ ಕಾರ್ಯಕ್ರಮಗಳ ಮೂಲಕ ಫಂಡ್ ಕಲೆಕ್ಟ್ ಮಾಡುವ ಯೋಜನೆ ರೂಪಿಸಿದೆವು. ಸದಾಶಿವ ಶೆಣೈಗೆ ಪ್ರಸಿದ್ಧ ಕನ್ನಡಕಗಳ ಮಾರಾಟಗಾರರಾದ ಮುಲಾನಿ ಆಪ್ಟಿಕಲ್ಸ್ ಪರಿಚಿತರು. ಪ್ರೆಸ್ ಕ್ಲಬ್ ಐ ಕ್ಯಾಂಪ್ ಗೆ ಉಚಿತವಾಗಿ ಕನ್ನಡಕಗಳನ್ನು ಒದಗಿಸುತ್ತಿದ್ದರು. ಮುಲಾನಿ ಆಪ್ಟಿಕಲ್ಸ್ ಗೆಳೆತನ – ಸಂಬಂಧ ಪಂಕಜ್ ಉದಾಸ್ ಅವರೊಂದಿಗಿತ್ತು.

ಅವರ ಮೂಲಕ ಆ ಸುಂದರ ಗಜಲ್ ಗಾಯಕನ ಕಾರ್ಯಕ್ರಮವನ್ನು ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಏರ್ಪಡಿಸಿದೆವು. ಸ್ವತಃ ಸಂಗೀತ ಪ್ರಿಯ, ಶಾಹಿರಿ ಹೇಳುತ್ತಿದ್ದ ಮುಖ್ಯಮಂತ್ರಿ ಧರ್ಮಸಿಂಗ್ ಸಂಸಾರ ಸಮೇತರಾಗಿ ಗಜಲ್ ಕೇಳಲು ಬಂದರು. ಆಪ್ ಕಿ ಫರ್ಮಾಯಿಷ್ ಎಂದು ಪಂಕಜ್ ಉದಾಸ್ ಕೇಳಿದಾಗ ಮುಖ್ಯಮಂತ್ರಿಗಳು ತಮಗೆ ಇಷ್ಟವಾದ ಗಜಲ್ ಗಳ ಬೇಡಿಕೆ ಇಟ್ಟು ಹಾಡಿಸಿ ನಮಗೂ ಕೇಳಿಸಿದರು. ಸುಮಾರು ಎರಡೂವರೆ ಗಂಟೆಗಳ ನಿರಂತರ ಸಂಗೀತ ಸುಧೆ ನಮ್ಮೆಲ್ಲರನ್ನೂ ತಣಿಸಿ ಮಣಿಸಿತ್ತು.ಅಂತಹ ಗಾಯಕನನ್ನ ನೋಡಲು ಅವರ ಸಂಗೀತ ಸವಿಯಲು ನಮ್ಮ ಕನ್ನಡದ ಗಾಯಕರನೇಕರು ಉತ್ಸಾಹ ತೋರಿದರು.

ಪಂಕಜ್ ಉದಾಸ್ ಅವರು ಗಾಯನ ಮುಗಿಸಿದ ಮೇಲೆ ಬೆಂಗಳೂರು ಮತ್ತು ಕರ್ನಾಟಕದ ಸಂಗೀತ ಸಾರ್ವಭೌಮತೆ ಕುರಿತು ಮನ ತುಂಬಿ ವರ್ಣಿಸಿದರು. ನಿಜಕ್ಕೂ ಅವರು ಅಂದು ಹಾಡುವ ಸ್ಥಿತಿಯಲ್ಲೇ ಇರಲಿಲ್ಲ. ಯಾಕೆಂದರೆ ಗಾಯನ ಕಾರ್ಯಕ್ರಮಕ್ಕೆ ಒಂದು ಗಂಟೆ ಮೊದಲು ಅವರ ಪ್ರೀತಿಯ ದೊಡ್ಡಪ್ಪ ತೀರಿಕೊಂಡ ಸುದ್ದಿ ಬಂದಿತ್ತು.ಆದರೆ ಕಾರ್ಯಕ್ರಮ ಸಂಯೋಜಕರಾದ ನಮಗೆ ಏನನ್ನೂ ಹೇಳದೇ ನಿರಂತರವಾಗಿ ಹಾಡಿದರು.ಚಪ್ಪಾಳೆ ತಟ್ಟುತ್ತಾ ವೇದಿಕೆಗೆ ಆಗಮಿಸಿದ ಮುಖ್ಯಮಂತ್ರಿ ಧರ್ಮಸಿಂಗ್ ಹೀಗೆ ಹೇಳಿದರು.
“ನಿಜವಾದ ಗಾಯಕನ ಕೀರ್ತಿ ಹಾಡಿನಲ್ಲಿರುವುದಿಲ್ಲ ಆತನ ನಡವಳಿಕೆಯಲ್ಲಿರುತ್ತದೆ ” ಪಂಕಜ್ ಈ ಸಂಗೀತ ಇರುವವರೆಗೂ ನೀವು ನಿಮ್ಮ ಗಜಲ್ ಧ್ವನಿ ಚಿರಸ್ಥಾಯಿಯಾಗಿರುತ್ತದೆ.
ನಮ್ಮ ಮನಸಿನಲಿ ನಿಮ್ಮ ಬಿಂಬ, ಹಸನ್ಮುಖ, ಧ್ವನಿ ಸದಾ ಗುನುಗುನಿಸಿ ಧ್ವನಿಸುತ್ತಿರುತ್ತದೆ.


  • ವೈ ಜಿ ಅಶೋಕ್ ಕುಮಾರ್ – ಪತ್ರಕರ್ತರು, ಬೆಂಗಳೂರು

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW