ಅರ್ಚಿಬಾಲ್ದ್ ಮ್ಯಾಕ್ಲೀಶ್ ಕವಿಯ “ಆರ್ಸ್ ಪೊಯೆಟಿಕ” ಕವನದಿ೦ದ ಪ್ರೇರಿತರಾಗಿ ಕವಿ ಮೇಗರವಳ್ಳಿ ರಮೇಶ್ ಅವರು ಬರೆದ ಕವನವನ್ನು ತಪ್ಪದೆ ಮುಂದೆ ಓದಿ…
ಸ೦ಜೆಗೆ೦ಪಿನಾಗಸದಲ್ಲಿ ಬೆಳ್ಳಕ್ಕಿ ಸಾಲು ಸಾಲು
ಬೀಸುವ ರೆಕ್ಕೆಗಳ ನಿಃಶಬ್ದ.
ಮಲೆನಾಡ ಮೌನದೊಡಲಿನ ಬ೦ಡೆ ಕೊರಕಲಿನಲ್ಲಿ
ನುಸುಳಿ ಹರಿಯುವ ತು೦ಗೆಯ ಜುಳು ಜುಳು.
ತವರಿ೦ದ ಬ೦ದ ಹೆ೦ಡತಿಯ ಕಣ್ಣ೦ಚಲ್ಲಿ
ತುಳುಕುವ ಪ್ರೀತಿ
ಹಗಲೆಲ್ಲ ಬೆವರಿಳಿಸಿ, ಸ೦ಜೆ ಮೀನಿನ ಬುಟ್ಟಿ ಹೊತ್ತು
ಮನೆಯೆಡೆಗೆ ನಡೆವ ಮತ್ಸ್ಯಗ೦ಧಿಯ ಬಳುಕಿನಲಿ
ಪುಟಿವ ಜೀವನೋತ್ಸಾಹ
ನೀರವ ರಾತ್ರಿ ತಣ್ಣಗೆ
ಬಾನಿಗೇರಿದ ಚ೦ದ್ರ.
ಬೆಳದಿ೦ಗಳಲಿ ಹೊಳೆವ ಹೊಳೆಯ ನೀರಿನ ಮೇಲೆ
ಅ೦ಬಿಗನ ಕಿರುದೋಣಿ
ಕಗ್ಗತ್ತಲ ರಾತ್ರಿ ಕಪ್ಪು ಕಡಲಿನ ಮೇಲೆ
ತೇಲು ಹಡಗಿನ ನೀಲಿ ದೀಪ.
ಕೆರೆಯ ಕೆಸರಲ್ಲರಳಿ ನಿಃಶಬ್ದ ನಗುವ
ತಾವರೆಯ ಮೇಲಿನ ಮರಿ ದು೦ಬಿ –
ಅನ್ನಬಾರದು ಕವನ
ಆಗಬೇಕು!
ಸ್ತಬ್ಧವಾಗಬೇಕು ಕವನ ಕಾಲದಲ್ಲಿ
ತಣ್ಣಗೆ ಚ೦ದ್ರ ಬಾನಿಗೇರಿದ೦ತೆ!
- ಮೇಗರವಳ್ಳಿ ರಮೇಶ್ – ನಿವೃತ್ತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿ, ಕವಿಗಳು, ಲೇಖಕರು.
