ತಪ್ಪು ಚಿಕ್ಕದು ಮಾಡು- ತಿಪ್ಪೆ ದೊಡ್ಡದು ಮಾಡು



ಹಸಿರೆಲೆಗಳು ಬಲಿತು ಹಣ್ಣಾಗಿ ಒಣಗಿ ತರಗೆಲೆಗಳು ಗಾಳಿಗೆ ತೂರಿಕೊಂಡು ಬಂದು ನೆಲದ ಮೇಲೆ ತರಗಿನ ಹಾಸಿಗೆಯಂತಾಗಿತ್ತು , ಅದೇ ನಮ್ಮ ತಿಪ್ಪೆಗುಂಡಿಯಲ್ಲಿ ಸೆಗಣಿ ಗಂಜಳದೊಂದಿಗೆ ಕೊಳೆತು ನುಣ್ಣಗೆ ಗೊಬ್ಬರವಾಗುತ್ತಿತ್ತು ಎನ್ನುತ್ತಾರೆ ಖ್ಯಾತ ಚಿಂತಕ ಡಾ.ವಡ್ಡಗೆರೆ ನಾಗರಾಜಯ್ಯ ಅವರು ಮುಂದೆ ಓದಿ…

ಹೊಂಗೆ, ಬೇವು, ಮಾವು ಮುಂತಾದ ಮರಗಳೀಗ ಜಂಪೆಜಂಪೆ ಹೂಕಾಯ್ದು ಘಮ್ಮನೆ ಪರಿಮಳ ಸೂಸುತ್ತಿವೆ. ಸುಡು ಬೇಸಿಗೆಯ ಬಿಸಿಲು ಧಗೆ ಉಮರದಿಂದ ಬಳಲಿರುವಾಗ ಹೊಂಗೆಮರದ ಅಥವಾ ಬೇವಿನ ಮರದ ನೆರಳಿಗೆ ಬಂದು ನಿಂತುಕೊಂಡರೆ ಸಾಕು, ಮೈ ಮನಸ್ಸಿಗೆ ತಂಪುತಂಪು ಕೂಲ್ ಕೂಲ್! ಈ ಬೇಸಿಗೆಯಲ್ಲಿ ನಾನು ದಾರಿ ನಡೆಯುವಾಗ ರಸ್ತೆಯ ಮೇಲೆ ಬಿದ್ದಿರುವ ಹೊಂಗೆ ಹೂಗಳ ಹಾಸಿನ ಮೇಲೆ ಬರಿಗಾಲು ಹೆಜ್ಜೆಯೂರಿ ಉರಿಪಾದಗಳನ್ನು ತಂಪಾಗಿಸಿಕೊಳ್ಳುತ್ತೇನೆ. ನನ್ನ ಬಾಲ್ಯದ ದಿನಗಳಲ್ಲಿ ಹೊಂಗೆ ಹೂವನ್ನು ಗುಡಿಸಿ ಹೊತ್ತೊಯ್ಯುತ್ತಿದ್ದ ದೃಶ್ಯಗಳನ್ನು ನೋಡುತ್ತಿದ್ದ ರೀತಿಯಲ್ಲಿ ಈಗ ಹೊಂಗೆ ಹೂವನ್ನು ಯಾರೂ ಗುಡಿಸಿಕೊಂಡು ಹೊತ್ತೊಯ್ಯುತ್ತಿರುವುದು ಕಾಣಿಸುತ್ತಿಲ್ಲ. ಇವತ್ತು ಮಧ್ಯಾಹ್ನ ನಾನು ರಸ್ತೆಯಲ್ಲಿ ಬಿದ್ದಿದ್ದ ಹೊಂಗೆ ಹೂವಿನ ಹಾಸಿನ ಮೇಲೆ ನಿಂತುಕೊಂಡಾಗ ನನ್ನ ಮನಸ್ಸು ನನ್ನ ಬಾಲ್ಯಕಾಲದ ನೆನಪುಗಳಿಗೆ ಹೊರಳಿಕೊಂಡಿತು.

 

ಗಿಡಗೆಂಟೆ ಮರಮಂಡಿಗೆಗಳ ಹಸಿರೆಲೆಗಳು ಬಲಿತು ಹಣ್ಣಾಗಿ ಒಣಗಿ ತರಗೆಲೆಗಳು ಗಾಳಿಗೆ ತೂರಿಕೊಂಡು ಬಂದು ನೆಲದ ಮೇಲೆ ತರಗಿನ ಹಾಸಿಗೆಯಾಗಿ ಹಾಸಿಬಿದ್ದಿರುತ್ತಿದ್ದವು. ನಮ್ಮೂರಿನ ಹೊಂಗೆ ತೋಪುಗಳಲ್ಲಿ ಹಾಸಿ ಬಿದ್ದಿರುತ್ತಿದ್ದ ತರಗೆಲೆಗಳನ್ನು ಕವೆಕಡ್ಡಿಯಿಂದಲೋ ಅಥವಾ ಕಡ್ಡಿಪೊರಕೆಯಿಂದಲೋ ಗುಡಿಸಿ, ಗೋಣಿಚೀಲದಲ್ಲಿ ತುಂಬಿಕೊಂಡು ತಂದು ನಮ್ಮ ಕೊಟ್ಟಿಗೆಯಲ್ಲಿ ದನಗಳು ಮಲಗಲು ತರಗಿನ ಹಾಸಿಗೆ ಹಾಸುವುದು ನಾನು ಮತ್ತು ನನ್ನ ಒಡಹುಟ್ಟಿದ ತಮ್ಮಂದಿರು ನಿರ್ವಹಿಸುತ್ತಿದ್ದ ಪವಿತ್ರ ಕಾಯಕವಾಗಿತ್ತು. ರೈತಾಪಿ ಕುಟುಂಬದ ನಾವು, ನಮ್ಮ ಮನೆಯ ಒಂದೇ ಚಾವಣಿಯ ಕೆಳಗೆ ದನಕರುಗಳೊಂದಿಗೆ ಮಲಗುತ್ತಿದ್ದೆವು. ರಾತ್ರಿ ಹೊತ್ತು ನಡುಮನೆಯಲ್ಲಿ ಈಚಲು ಗರಿಯ ಚಾಪೆ ಹಾಸಿಕೊಂಡು ಮಲಗುವಾಗಲೆಲ್ಲಾ ನಮ್ಮ ಅಪ್ಪ , “ನಾವು ಮಾತ್ರ ಚಾಪೆ ಹಾಸ್ಕಂಡು ಮಲಗಿದ್ರೆ ಸಾಲದು ಕಣ್ರೋ. ದನಗಳ ಕೆಳಕ್ಕೂ ಮಗ್ಗುಲು ಸೊಪ್ಪನ್ನೋ ತರಗನ್ನೋ ತಂದು ಹಾಸಬೇಕು. ಅವು ಮೂಗದನಗಳು ಬಾಯಿಬಿಟ್ಟು ಏನನ್ನೂ ಕೇಳಲಾರವು” ಎಂದು ನಮ್ಮ ಪಾಲಿನ ಕೆಲಸವನ್ನು ತಾಕೀತುಮಾಡಿ ಸೂಚಿಸುತ್ತಿದ್ದ.

ಭರಣಿ ಮಳೆ ನಕ್ಷತ್ರದ ಮುಂಗಾರು ಮಳೆಗಾಲದಿಂದ ಹಿಡಿದು ಹೊಲದ ಕುಯ್ಲಿನ ಕಾರ್ತಿಕ ಮಾಸದವರೆಗೂ ನಾವು, ಕೊಟ್ಟಿಗೆಯಲ್ಲಿ ದನಗಳು ಮಲಗಲು ಅನುಕೂಲವಾಗುವಂತೆ ಮುಳ್ಳುಗಳಿರದ ಗಿಡಗೆಂಟೆಗಳಿಂದ ತರಾವರಿ ಸೊಪ್ಪುಗಳನ್ನು ಕೊಯ್ದು ತಂದು ಹಾಸಿಗೆ ಹಾಸುತ್ತಿದ್ದೆವು. ಇದನ್ನು ನಾವು ಮಗ್ಗುಲು ಸೊಪ್ಪು ಹಾಸುವುದು ಎನ್ನುತ್ತಿದ್ದೆವು.

This slideshow requires JavaScript.

 

ಕಾರ್ತೀಕ ಮಾಸದ ನಂತರದಲ್ಲಿ ಚಳಿಗಾಳಿ ಇಬ್ಬನಿಗೆ ಮರಗಿಡಗಳು ತಲೆಕೊಡವಿ ತರಗೆಲೆ ಉದುರಿಸುತ್ತಿದ್ದವು. ನಮಗಾಗ ದನಗಳ ಕೆಳಕ್ಕೆ ಹಾಸಲು ಮಗ್ಗುಲು ಸೊಪ್ಪಿನ ಬದಲು ತರಗು ಆಸರೆಯಾಗುತ್ತಿತ್ತು. ದಟ್ಟ ಹಸಿರೆಲೆಗಳು ಬಲಿತು ಬಂಗಾರದ ಹಳದಿ ಬಣ್ಣಕ್ಕೆ ತಿರುಗಿದ ಎಲೆಗಳು, ಬಿಸಿಲಿಗೆ ಒಣಗಿ ಕಂದು ಬಣ್ಣಕ್ಕೆ ತಿರುಗಿ ನೆಲಕ್ಕುದುರಿ ತರಗಿನ ಹಾಸಿಗೆಯಾಗುತ್ತಿದ್ದವು. ಮಳೆಗಾಲದಲ್ಲಿ ಹಸಿರು ರಸ ಕಕ್ಕುವ ಮರಗಿಡಗಳ ಕಮ್ಮನೆಯ ತೊಪ್ಪಲಿನ ಪರಿಮಳ ಒಣಗಿದ ತರಗೆಲೆಗಳಲ್ಲಿರುವುದಿಲ್ಲ. ಗರಿಗರಿ ಒಣಗಿದ ಎಲೆಗಳ ತರಗು ಮುಟ್ಟಿದರೂ ಸಾಕು ಘಲ್ ಘಲ್ ಸಂಗೀತ ಹೊರಡಿಸುತ್ತದೆ. ಮರಗಳ ನೆರಳಿನಲ್ಲಿ ಬಿದ್ದ ತರಗನ್ನು ಕೈಯಲ್ಲಿ ಹಿಡಿವಾಗ ತಂಪೆನ್ನಿಸುತ್ತದೆ. ಮೃದುವಾದ ತರಗನ್ನು ಬೆರಳುಗಳಲ್ಲಿ ಗೋಣಿ ಚೀಲಕ್ಕೆ ಅಮುಕಿ ಅದುಮದುಮಿ ತುಂಬುವಾಗ ನಮಗೆ ಹಿತಾನುಭವವಾದಷ್ಟೂ ತರಗಿನ ಹಾಸಿಗೆ ಮೇಲೆ ಮಲಗುವ ದನಗಳಿಗೂ ಹಿತದಾಯಕವಾಗಿರುತ್ತದೆ. ಇಂತಹ ಮೃದುವಾದ ಮಗ್ಗುಲು ಸೊಪ್ಪುಗಳು ‌ಮತ್ತು ತರಗು ಮುಗಿದ್ಹೋಯ್ತುಎನ್ನುತ್ತಿರುವಾಗಲೇ ಹೊಂಗೆ ಮರಗಳು ಜಗಿಹಿಡಿದು ಹೂಕಾಯ್ದು ನೆಲದ ಮೇಲೆ ನಮ್ಮ ದನಗಳಿಗಾಗಿ ನಾವು ಗುಡಿಸಿಕೊಂಡು ತರಲೆಂದೇ ಹೂವಿನ ಹಾಸಿಗೆಯನ್ನು ಘಮ್ಮನೆ ಹಾಸಿಬಿಡುತ್ತಿದ್ದವು.



ಇವೆಲ್ಲವೂ ನಮ್ಮ ತಿಪ್ಪೆಗುಂಡಿಯಲ್ಲಿ ಸೆಗಣಿ ಗಂಜಳದೊಂದಿಗೆ ಕೊಳೆತು ನುಣ್ಣಗೆ ಗೊಬ್ಬರವಾಗುತ್ತಿತ್ತು. ತಿಪ್ಪೆಯ ಮೇಲೆ ಒಂದು ಪದರ ಕೆಬ್ಬೆ ಕೆಮ್ಮಣ್ಣು, ಗೋಡು ಅಥವಾ ಜೇಡಿಮಣ್ಣು ಬಿದ್ದು ಹೊಲಕ್ಕೆ ಚೆಲ್ಲಿದ ಹುಡಿ ಹುಡಿಯಾದ ಗೊಬ್ಬರದಲ್ಲಿ ಮೊಳೆತ ಪೈರಿನ ಬೇರುಗಳು ನೆಲದ ಬನಿ ಹೀರಿಕೊಂಡು ದಟ್ಟ ಹಸಿರು ಹೊಲ ನಗೆ ಬೀರುತ್ತಿತ್ತು. ರೈತಾಪಿಗಳಾಗಿ ನಾವು ಸೆಗಣಿ ಗಂಜಳ, ಮಗ್ಗುಲು ಸೊಪ್ಪು, ತರಗು, ಗೋಡು ಅಥವಾ ಜೇಡಿ ಮಣ್ಣನ್ನು ಹೊಲಕ್ಕೆ ಹೇರಿ ಬೆವರು ಬಸಿದು ನೇಗಿಲ ಕುಳದಿಂದ ಬರೆಯುತ್ತಿದ್ದ ಹಸಿರು ಕಾವ್ಯವಿದು.


  • ಡಾ.ವಡ್ಡಗೆರೆ ನಾಗರಾಜಯ್ಯ  (ಸರ್ಕಾರಿ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕರು,ಚಿಂತಕರು, ಲೇಖಕರು)

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading